ಭಾರತದಲ್ಲಿ ಮದುವೆಯೊಂದರ ಸರಾಸರಿ ವೆಚ್ಚ 14 ಲಕ್ಷ ರೂ.ಗಳು..!

ಭಾರತದಲ್ಲಿ ಹೆಚ್ಚುತ್ತಿರುವ ಮದುವೆಯ ವೆಚ್ಚವು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳ ಮಿಶ್ರಣಕ್ಕೆ ಕಾರಣವಾಗಿದೆ. ಭಾರತದಲ್ಲಿ ಮದುವೆಗಳನ್ನು ಸಾಮಾನ್ಯವಾಗಿ ಕೌಟುಂಬಿಕ ಸ್ಥಾನಮಾನದ ಸಂಕೇತವಾಗಿ ನೋಡಲಾಗುತ್ತದೆ. ಕುಟುಂಬಗಳು ತಮ್ಮ ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನವನ್ನು ಪ್ರದರ್ಶಿಸಲು ಭವ್ಯವಾದ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ಪರ್ಧಿಸುತ್ತವೆ.

Update: 2024-12-24 04:59 GMT

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮದುವೆಗಳ ವೆಚ್ಚವು ಗಣನೀಯವಾಗಿ ಹೆಚ್ಚಾಗುತ್ತಿದ್ದು, 2024ರಲ್ಲಿ ಮದುವೆಯೊಂದರ ಸರಾಸರಿ ಬಜೆಟ್ ರೂ. 36.5 ಲಕ್ಷಕ್ಕೆ ಏರಿಕೆಯಾಗಿದೆ ಎನ್ನುವ ತಾಜಾ ವರದಿಗಳು ಬಂದಿವೆ. ಭಾರತದಲ್ಲಿ ಪ್ರಾಥಮಿಕದಿಂದ ಪದವಿವರೆಗೆ ವಧು ಅಥವಾ ವರನ ಶಿಕ್ಷಣಕ್ಕೆ ಪೋಷಕರು ವ್ಯಯಿಸುವ ಖರ್ಚಿಗಿಂತಲೂ ವಿವಾಹದ ವೆಚ್ಚವು ಎರಡು ಪಟ್ಟು ಹೆಚ್ಚಿದೆ ಎಂದು ಜಾಗತಿಕ ಟ್ರೋಕರೇಜ್ ಸಂಸ್ಥೆ ಜಿಫರಿಸ್ ವರದಿ ತಿಳಿಸಿದೆ. ದೇಶದಲ್ಲಿ ಮದುವೆಯೊಂದರ ಸರಾಸರಿ ವೆಚ್ಚ 14 ಲಕ್ಷ ರೂ. ಆಗಿದೆ ಎಂದು ಅದು ಹೇಳುತ್ತದೆ. ಭಾರತದಲ್ಲಿ ವಿವಾಹ ಮಾರುಕಟ್ಟೆ ಮೌಲ್ಯವು ಅಂದಾಜು ರೂ. 10 ಲಕ್ಷ ಕೋಟಿಯಷ್ಟಿದೆ ಎಂದು ಈ ವರದಿ ಹೇಳಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 7 ಹೆಚ್ಚಾಗಿದೆ ಮತ್ತು ವಿಶೇಷವಾಗಿ ಕೇಟರಿಂಗ್ ಮತ್ತು ಆತಿಥ್ಯ ವೆಚ್ಚಗಳ ಏರಿಕೆ ಇದಕ್ಕೆ ಮುಖ್ಯ ಕಾರಣ. ಇನ್ನೊಂದು ಸಮೀಕ್ಷೆಯ ಪ್ರಕಾರ 2023ರಲ್ಲಿ ಭಾರತದಲ್ಲಿ ಮದುವೆ ಸಮಾರಂಭಗಳನ್ನು ನಡೆಸಲು ಸರಾಸರಿ ವೆಚ್ಚ 28 ಲಕ್ಷ ರೂ. ಇತ್ತು. ಇದು 2022ರ ರೂ. 25 ಲಕ್ಷದಿಂದ ಪ್ರಮುಖ ಏರಿಕೆಯಾಗಿತ್ತು. ಇತ್ತೀಚಿನ ಒಂದು ಆನ್‌ಲೈನ್ ಸಮೀಕ್ಷೆಯಲ್ಲಿ ಭಾಗವಹಿಸಿದ 3,500 ಜೋಡಿಗಳಲ್ಲಿ ಶೇ. 9 ಜನರು ತಮ್ಮ ‘ಮದುವೆ ಹಬ್ಬ’ಗಳಿಗೆ ರೂ. 1 ಕೋಟಿಗಿಂತ ಹೆಚ್ಚು ಖರ್ಚುಮಾಡಿದ್ದಾರೆ ಮತ್ತು ಶೇ. 9 ಜೋಡಿ ರೂ. 50 ಲಕ್ಷ-1 ಕೋಟಿ ನಡುವೆ ಖರ್ಚುಮಾಡಿದ್ದಾರೆ ಎಂದಿದ್ದಾರೆ. ಶೇ. 40 ಜೋಡಿಗಳ ಬಜೆಟ್ ರೂ. 15 ಲಕ್ಷಕ್ಕಿಂತ ಕಡಿಮೆಯಾಗಿತ್ತು.

ರೂ. 25 ಲಕ್ಷ-50 ಲಕ್ಷ ವ್ಯಾಪ್ತಿಯಲ್ಲಿ ಶೇ. 23 ಜನರ ಬಜೆಟ್ ಇತ್ತು ಮತ್ತು ರೂ. 15 ಲಕ್ಷ-25 ಲಕ್ಷ ನಡುವೆ ಶೇ. 19 ಜನರ ಬಜೆಟ್ ಇತ್ತು ಎನ್ನುವ ಅಂಶ ಅದೇ ಸರ್ವೇಯಿಂದ ತಿಳಿದುಬಂದಿದೆ (ಆಧಾರ: ವಿವಿಧ ಮೂಲಗಳು).

ಇತ್ತೀಚಿನ ಸಮೀಕ್ಷೆ ಪ್ರಕಾರ ನವೆಂಬರ್ 12ರಿಂದ ಡಿಸೆಂಬರ್ 16ರವರೆಗೆ ದೇಶಾದ್ಯಂತ 4.8 ಮಿಲಿಯನ್ ಮದುವೆ ಸಮಾರಂಭಗಳು ನಡೆದಿವೆ. ಇದರಿಂದ ರೂ. 6 ಲಕ್ಷ ಕೋಟಿ ವ್ಯವಹಾರ ನಡೆದಿದೆ ಎಂದು ಆಲ್ ಇಂಡಿಯಾ ಟ್ರೇಡರ್ಸ್ ಕಾನ್ಫೆಡರೇಶನ್ ಉಲ್ಲೇಖಿಸಿರುವ ವರದಿ ಹೇಳುತ್ತದೆ. ಈ ವರ್ಷದ ಮದುವೆಗಳ ಸಂಖ್ಯೆ ಕಳೆದ ವರ್ಷದ 3.8 ಮಿಲಿಯನ್ ಸಮಾರಂಭಗಳಿಂದ ಪ್ರಮುಖ ಏರಿಕೆಯನ್ನು ಕಂಡಿತ್ತು. ಇದರಿಂದ ರೂ. 4.74 ಲಕ್ಷ ಕೋಟಿ ವ್ಯಾಪಾರವಾಗಿದೆ ಎಂದು ‘ದಿ ಫೈನಾನ್ಷಿಯಲ್ ಎಕ್ಸ್‌ಪ್ರೆಸ್’ ವರದಿ ತಿಳಿಸಿದೆ. ದಿಲ್ಲಿ ನಗರದಲ್ಲಿಯೇ 4.5 ಲಕ್ಷ ಮದುವೆಗಳು ನಡೆದಿದ್ದು ಸ್ಥಳೀಯ ಆರ್ಥಿಕತೆಗೆ ರೂ. 1.5 ಲಕ್ಷ ಕೋಟಿ ಕೊಡುಗೆಯನ್ನು ನೀಡಿದೆ. ಹಿಂದೂ ಪಂಚಾಂಗದ ಪ್ರಕಾರ ಶುಭ ದಿನಗಳ ಸಂಖ್ಯೆ ಏರಿಕೆಯಾಗಿರುವುದರಿಂದ ಎಲ್ಲಾ ಕುಟುಂಬಗಳು

ಮುಂದಿನ ವರ್ಷ ಮದುವೆ ಹಬ್ಬದ ತಯಾರಿಯಲ್ಲಿ ತೊಡಗಿರುವುದರಿಂದ ವ್ಯಾಪಾರದ ಬೆಳವಣಿಗೆ ನಡೆಯಲಿದೆ ಎನ್ನುವ ಅಂದಾಜಿದೆ. ಇದರಿಂದ ಸೇವಾ ಕ್ಷೇತ್ರದ ವೆಚ್ಚ ಬ್ಯಾಂಕ್ವೆಟ್ ಹಾಲ್ ಮತ್ತು ಸ್ಥಳಗಳು -ಶೇ. 5, ಇವೆಂಟ್ ಮ್ಯಾನೇಜ್‌ಮೆಂಟ್ - ಶೇ. 3, ಟೆಂಟ್ ಮತ್ತು ಅಲಂಕಾರ ಸೇವೆಗಳು -ಶೇ.10, ಕೇಟರಿಂಗ್ -ಶೇ. 10, ಹೂ ಅಲಂಕಾರ - ಶೇ. 4, ಫೋಟೊಗ್ರಫಿ ಮತ್ತು ವೀಡಿಯೋಗ್ರಫಿ -ಶೇ. 2, ಮ್ಯೂಸಿಕ್ ಮತ್ತು ಸೌಂಡ್ - ಶೇ. 6 ಹೆಚ್ಚಳವಾಗಿದೆ ಎನ್ನಲಾಗಿದೆ.

ಚಿಲ್ಲರೆ ವ್ಯಾಪಾರಿಗಳು ಮತ್ತು ಸೇವೆ ಒದಗಿಸುವವರು ಮುಂಬರುವ ಮದುವೆ ಸೀಸನ್‌ಗಾಗಿ ಈಗಾಗಲೇ ಸಜ್ಜಾಗಿದ್ದಾರೆ ಎನ್ನುವ ಮಾತು ಸಹ ಇದೆ. ಈ ವರ್ಷದ ಕೊನೆಯ ಅವಧಿಯಲ್ಲಿ ಮದುವೆಗಳಿಂದ ಅಂದಾಜು ರೂ. 4.25 ಲಕ್ಷ ಕೋಟಿ ವೆಚ್ಚ ಉಂಟಾಗುವ ನಿರೀಕ್ಷೆಯಿದ್ದು, ಇದು ಕಳೆದ ವರ್ಷ ನಡೆದ ಶೇ. 3.2 ಮಿಲಿಯನ್ ಮದುವೆಗಳಲ್ಲಿ ತೋರುತ್ತಿದ್ದ ವೆಚ್ಚಕ್ಕಿಂತ ಗಣನೀಯ ಏರಿಕೆಯಾಗುತ್ತದೆಯೆಂದು ತಿಳಿದುಬಂದಿದೆ. ಇನ್ನು ಕೆಲವು ಸಂಶೋಧನೆಗಳು ಭಾರತದ ಮದುವೆ ಉದ್ಯಮವು ವಾರ್ಷಿಕ 7-8 ಶೇ. ದರದಲ್ಲಿ ಏರುಗತಿಯ ಪುನಶ್ಚೇತನವನ್ನು ಪಡೆಯುತ್ತಿದೆ ಎನ್ನುತ್ತಿವೆ. ಭಾರತವು ಪ್ರತಿವರ್ಷ ಸುಮಾರು 10 ಮಿಲಿಯನ್ ಮದುವೆಗಳನ್ನು ಆಯೋಜಿಸುತ್ತಿದ್ದು, ಇದು ಪ್ರತೀ ವರ್ಷ 130 ಬಿಲಿಯನ್ (ರೂ. 10 ಲಕ್ಷ ಕೋಟಿ) ವೆಚ್ಚವನ್ನು ಉಂಟುಮಾಡುತ್ತಿದ್ದು, ಇದು ದೇಶದ ನಾಲ್ಕನೇ ಅತಿ ದೊಡ್ಡ ಉದ್ಯಮವಾಗಿದೆ. ಈ ವರ್ಷ ಜನವರಿ 15ರಿಂದ ಜುಲೈ 15ರ ನಡುವೆ 4.2 ಮಿಲಿಯನ್ ಮದುವೆಗಳು ನಡೆದಿದ್ದು, ರೂ. 5.5 ಲಕ್ಷ ಕೋಟಿ ವೆಚ್ಚವನ್ನು ಉಂಟುಮಾಡಿವೆ. ಅಲ್ಲದೆ ಚಿನ್ನದ ಆಮದು ಸುಂಕವನ್ನು 15 ಶೇ.ದಿಂದ 6 ಶೇ.ಗೆ ಇಳಿಸುವಂತಹ ನೀತಿ ಬದಲಾವಣೆಗಳು ಮದುವೆ ಮಾರುಕಟ್ಟೆಗೆ ಸಹಾಯವಾಗಿವೆ.

ಭಾರತದಲ್ಲಿ ಹೆಚ್ಚುತ್ತಿರುವ ಮದುವೆಯ ವೆಚ್ಚವು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳ ಮಿಶ್ರಣಕ್ಕೆ ಕಾರಣವಾಗಿದೆ. ಭಾರತದಲ್ಲಿ ಮದುವೆಗಳನ್ನು ಸಾಮಾನ್ಯವಾಗಿ ಕೌಟುಂಬಿಕ ಸ್ಥಾನಮಾನದ ಸಂಕೇತವಾಗಿ ನೋಡಲಾಗುತ್ತದೆ. ಕುಟುಂಬಗಳು ತಮ್ಮ ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನವನ್ನು ಪ್ರದರ್ಶಿಸಲು ಭವ್ಯವಾದ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ಪರ್ಧಿಸುತ್ತವೆ. ಮದುವೆಯ ದಿನಗಳಲ್ಲಿ ಹಲವಾರು ಸಮಾರಂಭಗಳು, ಆಚರಣೆಗಳು ಮತ್ತು ಆಯೋಜನೆಗಳು ವೆಚ್ಚವನ್ನು ಹೆಚ್ಚಿಸುತ್ತವೆ. ವರದಕ್ಷಿಣೆ ಕಾನೂನುಬಾಹಿರವಾಗಿದ್ದರೂ, ವರದಕ್ಷಿಣೆ ವ್ಯವಸ್ಥೆಯು ಗುಟ್ಟಾಗಿ ಇನ್ನೂ ಭಾರತದ ಅನೇಕ ಭಾಗಗಳಲ್ಲಿ ಅಸ್ತಿತ್ವದಲ್ಲಿದೆ. ಇದು ಅಂತಿಮವಾಗಿ ಮದುವೆಯ ವೆಚ್ಚವನ್ನು ಹೆಚ್ಚಿಸುತ್ತಿದೆ. ಮನುಷ್ಯರ ಐಷಾರಾಮಿ ಆಸೆ ಇನ್ನೊಂದು ಕಾರಣ. ಜಾಗತಿಕ ಟ್ರೆಂಡ್‌ಗಳು ಮತ್ತು ಸಾಮಾಜಿಕ ಅಂತಸ್ತಿನ ಹೆಚ್ಚಿನ ಮಾನ್ಯತೆಯೊಂದಿಗೆ, ಡೆಸ್ಟಿನೇಶನ್ ವೆಡ್ಡಿಂಗ್‌ಗಳು, ಡಿಸೈನರ್ ಔಟ್‌ಫಿಟ್‌ಗಳು ಮತ್ತು ಉನ್ನತ-ಮಟ್ಟದ ಸಾಮಾಜಿಕ ಬಯಕೆ ಹೆಚ್ಚುತ್ತಿರುವ ವೆಚ್ಚಕ್ಕೆ ಇನ್ನೊಂದು ಕಾರಣ. ಅನನ್ಯ ಸ್ಥಳಗಳಲ್ಲಿ ಫ್ರೀ ವೆಡ್ಡಿಂಗ್ ಶೂಟಿಂಗ್, ಅದ್ದೂರಿ ಮದುವೆಯ ಪೂರ್ವ ತಯಾರಿ ಮತ್ತು ಆಧುನಿಕ ಮನರಂಜನೆ ಇತ್ಯಾದಿ ಮದುವೆಯ ವೆಚ್ಚವನ್ನು ಹೆಚ್ಚಿಸುತ್ತದೆ.

ಹಣದುಬ್ಬರ ಸಹ ಇನ್ನೊಂದು ಕಾರಣ. ಆಹಾರ, ಚಿನ್ನ, ರಿಯಲ್ ಎಸ್ಟೇಟ್ ಮತ್ತು ಸೇವೆಗಳ ಹೆಚ್ಚುತ್ತಿರುವ ವೆಚ್ಚವು ಮದುವೆಯ ವೆಚ್ಚಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಮದುವೆಯ ಋತು ಸ್ಥಳಗಳು, ಅಡುಗೆ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ಇತ್ಯಾದಿ ಮದುವೆ ಮಾರುಕಟ್ಟೆ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ಸಮುದಾಯ ನಿರೀಕ್ಷೆಗಳು ಇನ್ನೊಂದು ಸಮಸ್ಯೆ. ಕುಟುಂಬಗಳು ಸಾಮಾನ್ಯವಾಗಿ ಸಾಮಾಜಿಕ ಮಾನದಂಡಗಳನ್ನು ಪೂರೈಸಲು ಮತ್ತು ಟೀಕೆಯನ್ನು ತಪ್ಪಿಸಲು ಹೆಚ್ಚಿನ ಹಣವನ್ನು ಮದುವೆಗೆ ವ್ಯಯಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮದುವೆಗೆ ಅತಿಥಿ ಪಟ್ಟಿಗಳು ದೊಡ್ಡದಾಗುತ್ತಿವೆ. ದೊಡ್ಡ ಮದುವೆ ಕೂಟಗಳು ಸಾಮಾನ್ಯವಾಗಿವೆ, ನೂರಾರು ಅಥವಾ ಸಾವಿರಾರು ಅತಿಥಿಗಳು, ಊಟೋಪಚಾರ ಮತ್ತು ಸ್ಥಳದ ವೆಚ್ಚವು ಮದುವೆಯ ವೆಚ್ಚವನ್ನು ಹೆಚ್ಚಿಸುತ್ತಿದೆ. ಇತ್ತೀಚೆಗೆ ಇವೆಂಟ್ ಮ್ಯಾನೇಜ್‌ಮೆಂಟ್‌ನಂತಹ ವೃತ್ತಿಪರ ವಿವಾಹ ಯೋಜಕರು ಮತ್ತು ಸಂಯೋಜಕರನ್ನು ನೇಮಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹೈ-ಡೆಫಿನಿಷನ್ ಫೋಟೊಗ್ರಫಿ, ವೀಡಿಯೊಗ್ರಫಿ ಮತ್ತು ಲೈವ್ ಸ್ಟ್ರೀಮಿಂಗ್ ಸೇವೆಗಳನ್ನು ಈಗ ಯುವಜನರು ಬಯಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರಗಳಲ್ಲಿನ ಸ್ಥಳಗಳು ಮತ್ತು ಸೇವಾಕ್ಷೇತ್ರದವರು ಮದುವೆ ಕಾರ್ಯಗಳಿಗೆ ಗಣನೀಯವಾಗಿ ಹೆಚ್ಚಿನ ದರವನ್ನು ವಿಧಿಸುತ್ತಾರೆ. ಇತ್ತೀಚೆಗೆ ಅಂತರ್ ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳು ಸಾಮಾನ್ಯವಾಗಿರುವುದರಿಂದ ಎರಡೂ ಜೋಡಿಯ ಜಾತಿ/ಧರ್ಮ ಆಚರಣೆಗಳು ಮತ್ತು ಸಮಾರಂಭಗಳನ್ನು ಪ್ರತ್ಯೇಕವಾಗಿ ಆಯೋಜಿಸಲಾಗುತ್ತಿದೆ. ಇದು ವೆಚ್ಚಗಳನ್ನು ಪರಿಣಾಮಕಾರಿಯಾಗಿ ದ್ವಿಗುಣಗೊಳಿಸುತ್ತವೆ.

ಇನ್ನು ಇಂತಹ ಸಾಮಾಜಿಕ ಪರಿಣಾಮಗಳನ್ನು ಗಮನಿಸಬೇಕು. ಭಾರತದಲ್ಲಿ ಮದುವೆಗಳ ಮೇಲೆ ಹೂಡುತ್ತಿರುವ ವೆಚ್ಚವು ವ್ಯಕ್ತಿಗಳು, ಕುಟುಂಬಗಳು ಮತ್ತು ಒಟ್ಟಾರೆಯಾಗಿ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದ್ದೂರಿ ವಿವಾಹಗಳು ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಒತ್ತಿಹೇಳುತ್ತವೆ. ಏಕೆಂದರೆ ಶ್ರೀಮಂತ ಕುಟುಂಬಗಳು ಭವ್ಯವಾದ ಮದುವೆಗಳನ್ನು ನಿಭಾಯಿಸಬಹುದು ಆದರೆ ಆರ್ಥಿಕವಾಗಿ ದುರ್ಬಲ ವರ್ಗಗಳು ಸಾಮಾಜಿಕ ನಿರೀಕ್ಷೆಗಳನ್ನು ಪೂರೈಸಲು ಹೆಣಗಾಡುತ್ತವೆ. ಇತ್ತೀಚೆಗೆ ವಿವಾಹಗಳು ತಮ್ಮ ಆರ್ಥಿಕ ಸ್ಥಾನಮಾನದ ಪ್ರದರ್ಶನವಾಗುತ್ತಿವೆ ಮತ್ತು ಇದು ಇತರರನ್ನು ಸಹ ಅದ್ದೂರಿ ವಿವಾಹಕ್ಕೆ ಪ್ರಚೋದನೆ ನೀಡುತ್ತದೆ. ಕುಟುಂಬಗಳು,

ವಿಶೇಷವಾಗಿ ಕಡಿಮೆ-ಆದಾಯದ ಗುಂಪುಗಳಲ್ಲಿ, ಮದುವೆಗಳಿಗೆ ಹಣವನ್ನು ನೀಡಲು ಸಾಲಗಳನ್ನು ಮಾಡುತ್ತವೆ. ಇದು ದೀರ್ಘಾವಧಿಯ ಆರ್ಥಿಕ ಒತ್ತಡಕ್ಕೆ ಕಾರಣವಾಗುತ್ತದೆ. ಅತಿಯಾದ ಸಾಲ ಬಡತನದ ಚಕ್ರಗಳನ್ನು ಶಾಶ್ವತಗೊಳಿಸುತ್ತದೆ. ಹೆಚ್ಚಿನ ಬಡಕುಟುಂಬಗಳು ಮದುವೆಯನ್ನು ಆರ್ಥಿಕ ಹೊರೆ ಎಂದು ಭಾವಿಸುತ್ತವೆ. ಭಾರತದಂತಹ ಪಿತೃಪ್ರಭುತ್ವದ ವ್ಯವಸ್ಥೆಗಳಲ್ಲಿ, ವಧುವಿನ ಕುಟುಂಬವು ಹೆಚ್ಚಿನ ವೆಚ್ಚವನ್ನು ಮದುವೆ ಖರ್ಚನ್ನು ಭರಿಸುತ್ತದೆ. ಇದು ಆರ್ಥಿಕ ಮತ್ತು ಭಾವನಾತ್ಮಕ ಒತ್ತಡವನ್ನು ಉಲ್ಬಣಗೊಳಿಸುತ್ತದೆ. ಕೆಲವರು ಅದ್ದೂರಿ ವಿವಾಹಗಳು ಸಾಂಸ್ಕೃತಿಕ ಆಚರಣೆಗಳನ್ನು ಸಂರಕ್ಷಿಸುತ್ತವೆ ಎಂದು ವಾದಿಸಿದರೆ, ಇತರರು ಅವುಗಳನ್ನು ಹಳೆಯದು, ಸಮರ್ಥನೀಯವಲ್ಲದ ಮತ್ತು ಆಧುನಿಕ ಸಂದರ್ಭದಲ್ಲಿ ಅಪ್ರಾಯೋಗಿಕವೆಂದು ಟೀಕಿಸುತ್ತಾರೆ. ಜನರು ಹೆಚ್ಚಾಗಿ ಜಾಗತಿಕ ಪ್ರವೃತ್ತಿಗಳಿಗೆ ಒಡ್ಡಿಕೊಳ್ಳುವುದರಿಂದ ಮದುವೆಗಳ ವ್ಯಾಪಾರೀಕರಣ, ಸಾಂಪ್ರದಾಯಿಕ ಮೌಲ್ಯಗಳನ್ನು ದುರ್ಬಲಗೊಳಿಸುವುದು ಮತ್ತು

ಅದ್ದೂರಿತನಕ್ಕೆ ಒತ್ತು ನೀಡುವಂತಹ ಬೆಳವಣಿಗೆ ನಡೆಯುತ್ತಿದೆ. ಸಂಬಂಧಿಕರ ಮತ್ತು ಸ್ನೇಹಿತರ ಒತ್ತಡವನ್ನು ವರ/ವಧು ಕುಟುಂಬಗಳು ಅನುಭವಿಸುತ್ತಿವೆ. ಇದು ಆರ್ಥಿಕ ಆತಂಕ ಮತ್ತು ಭಾವನಾತ್ಮಕ ಒತ್ತಡಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

ನವದಂಪತಿಗಳು ಮತ್ತು ಕುಟುಂಬಗಳು ತಮ್ಮ ವಿವಾಹಗಳನ್ನು ‘ತುಂಬಾ ಸರಳ’ ಎಂದು ಸಂಬಂಧಿಕರು ಗ್ರಹಿಸಿದರೆ ಟೀಕೆಗಳನ್ನು ಎದುರಿಸಬಹುದು. ಅಲ್ಲದೆ ಅದ್ದೂರಿ ಮದುವೆಗಳು ಸಾಮಾನ್ಯವಾಗಿ ಆಹಾರ, ನೀರು ಮತ್ತು ಶಕ್ತಿಯ ಗಮನಾರ್ಹ ವ್ಯರ್ಥಕ್ಕೆ ಕಾರಣವಾಗುತ್ತವೆ. ಇದು ಪರಿಸರ ಮತ್ತು ನೈತಿಕ ಪರಿಣಾಮಗಳನ್ನು ಹೊಂದಿದೆ. ಅಗತ್ಯಕ್ಕಿಂತ ಹೆಚ್ಚಿನ ಅನವಶ್ಯಕ ವೆಚ್ಚವು ಸುಸ್ಥಿರ ಜೀವನ ಮೌಲ್ಯಗಳಿಗೆ ವಿರುದ್ಧವಾಗಿದೆ. ಅತಿರಂಜಿತ ವಿವಾಹಗಳಿಗೆ ಒತ್ತು ನೀಡುವುದರಿಂದ ವೈವಾಹಿಕ ಸಂಬಂಧದ ಗುಣಮಟ್ಟದಿಂದ ಸಂಪತ್ತಿನ ಬಾಹ್ಯ ಪ್ರದರ್ಶನಗಳಿಗೆ ಕಾರಣವಾಗುತ್ತಿದೆ. ಕುಟುಂಬಗಳು ಹೆಚ್ಚಿನ ಮದುವೆಯ ವೆಚ್ಚವನ್ನು ಭರಿಸಬಲ್ಲ ತನಕ ಮದುವೆಯನ್ನು ಮುಂದೂಡಬಹುದು. ಇದು ಜನಸಂಖ್ಯಾ ಪ್ರವೃತ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಕುಟುಂಬಗಳ ಅತಿಯಾದ ಖರ್ಚು ಸಮುದಾಯದ ಇತರರಲ್ಲಿ ಅಸಮಾಧಾನವನ್ನು/ಹೊಟ್ಟೆಕಿಚ್ಚನ್ನು ಉಂಟುಮಾಡಬಹುದು. ಇದು ಅಪರಾಧಕ್ಕೂ ದಾರಿ ಮಾಡಿಕೊಡಬಹುದು. ಅಂತಿಮವಾಗಿ ವಿವಾಹಗಳು ಅಂತಸ್ತಿನ ಬದಲಾಗಿ ವೈಯಕ್ತಿಕ ಅಥವಾ ಸಮುದಾಯದ ಬಾಂಧವ್ಯದ ಭಾಗ, ವಿವಾಹ ಸಾಂಸ್ಕೃತಿಕ ಭಾಗವಹಿಸುವಿಕೆಯ ಸಾಮಾಜಿಕ ರಚನೆಯ ಬಹುಮುಖ್ಯ ಅಂಶ ಎಂದು ನಾವು ಗ್ರಹಿಸಬೇಕು. ಸರಕಾರಗಳು ಅದ್ದೂರಿ ನಿರ್ಬಂಧಗಳನ್ನು ಹೇರಲು ಮುಂದಿನ ದಿನಗಳಲ್ಲಿ ಚಿಂತಿಸಬಹುದು ಎನ್ನುವ ಮಾತು ಇದೆ. ಸಮಾಜಶಾಸ್ತ್ರಜ್ಞರು ಅದ್ದೂರಿ ವಿವಾಹಗಳೊಂದಿಗಿನ ಸಾಮಾಜಿಕ ಗೀಳಿನ ಕುರಿತಾಗಿ ಸಮುದಾಯದಲ್ಲಿ ಅರಿವು ಮೂಡಿಸಬೇಕು. ಹೆಚ್ಚು ಅರ್ಥಪೂರ್ಣ ಮತ್ತು ಸಮಾನವಾದ ಆಚರಣೆಗಳತ್ತ ಭವಿಷ್ಯದ ಮದುವೆಗಳು ಸಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಡಿ.ಸಿ. ನಂಜುಂಡ

contributor

Similar News