ಅಭಿವೃದ್ಧಿ ‘ಸರ್ವೋದಯ’ವಾಗಲಿ : ಡಾ. ಯು.ಆರ್. ಅನಂತಮೂರ್ತಿ
ದೇಶದ ಖ್ಯಾತ ಚಿಂತಕ ಜ್ಞಾನಪೀಠ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿಯವರು ವಾರ್ತಾಭಾರತಿಯ 11ನೇ ವರ್ಷದ (2013)ಸಂದರ್ಭದಲ್ಲಿ ಪತ್ರಿಕೆಯ ವಿಶೇಷಾಂಕಕ್ಕೆ ಬರೆದ ವಿಶೇಷ ಲೇಖನ ಇಂದಿಗೂ ಪ್ರಸ್ತುತವಾಗುವ ಹಿನ್ನೆಲೆಯಲ್ಲಿ ಇಲ್ಲಿ ನೀಡಲಾಗಿದೆ.
ಸದ್ಯದ ಸ್ಥಿತಿಯಲ್ಲಿ ಈ ಅಭಿವೃದ್ಧಿ ಅನ್ನುವ ಶಬ್ದದಿಂದಾಗಿಯೇ ಹುಟ್ಟಿರುವ ರಾಜಕೀಯ ಪರಿಣಾಮಗಳ ಬಗ್ಗೆ ನಾನು ತುಂಬಾ ಚಿಂತೆಗೀಡಾಗಿದ್ದೇನೆ. ಆ ಶಬ್ದವೇ ಇವತ್ತು ಅಪಾಯಕಾರಿ ಅನ್ನಿಸ್ತಾಯಿದೆ. ಅದಕ್ಕೇ, ಅಭಿವೃದ್ಧಿಗೆ ಪರ್ಯಾಯವಾಗಿ ಸರ್ವೋದಯ ಹುಟ್ಟಿಕೊಳ್ಳಬೇಕು ಎಂದು ನಾನು ಬಯಸ್ತಾ ಇದ್ದೇನೆ. ಆದರೆ ದುರದೃಷ್ಟವಶಾತ್ ಯಾರಿಗೂ ಈ ಸರ್ವೋದಯದ ಮಹತ್ವ ಗೊತ್ತಾಗಿಲ್ಲ. ‘ಅನ್ ಟು ದಿ ಲಾಸ್ಟ್’ ಕೊನೆಯ ಮನುಷ್ಯನವರೆಗೆ ಎನ್ನುವ ಧ್ವನಿಯನ್ನು ಇದು ಸೂಚಿಸುತ್ತದೆ. ಗಾಂಧೀಜಿ ಈ ಶಬ್ದವನ್ನು ತೆಗೆದುಕೊಂಡಿರುವುದು ಬೈಬಲ್‌ನಿಂದ. ಆದುದರಿಂದ ಸರ್ವೋದಯ ಕೇವಲ ಭಾರತಕ್ಕಷ್ಟೇ ಅಲ್ಲ, ಪಾಶ್ಚಿಮಾತ್ಯರಿಗೂ ಅನ್ವಯವಾಗಬೇಕಾದ ಶಬ್ದ, ಸರ್ವೋದಯದಿಂದಷ್ಟೇ ಈ ಸಂದರ್ಭದ ರಾಜಕೀಯ ಪರಿಣಾಮಗಳಿಗೆ ಪರಿಹಾರ.
ರಾಜಕೀಯ ಪಕ್ಷದ ನಾಯಕರಲ್ಲಿ ಮುಖ್ಯವಾಗಿ ಎರಡು ವಿಧದ ಜನರು ಇರುತ್ತಾರೆ. ಮೊದಲನೆಯ ವಿಧ, ನೆಹರೂ ಅವರದು. ನೆಹರೂ ಸ್ವಂತವಾಗಿ ತನ್ನದೇ ಆದ ಅಭಿಪ್ರಾಯಗಳನ್ನು ಇಟ್ಟುಕೊಂಡವರಾಗಿದ್ದರು ಮತ್ತು ಆ ಅಭಿಪ್ರಾಯಗಳನ್ನು ಉಳಿದವರು ಒಪ್ಪಿಕೊಳ್ಳಬೇಕು ಎನ್ನುವ ಆಸೆಯನ್ನೂ ಹೊಂದಿದವರಾಗಿದ್ದರು. ಅವರ ಅನೇಕ ವಿಚಾರಗಳು ಇಂಗ್ಲೆಂಡಿನಲ್ಲಿದ್ದ ಸಮಾಜವಾದಿಗಳ ಪ್ರಭಾವದಿಂದ ರೂಪುಗೊಂಡವುಗಳು. ಜೊತೆಗೆ ಗಾಂಧಿಯ ಪ್ರಭಾವವೂ ಅವುಗಳ ಮೇಲಿತ್ತು. ಹೀಗಾಗಿ ನೆಹರೂ ಅವರಿಗೊಂದು ಕಲ್ಪನೆಯಿತ್ತು. ಅದನ್ನು ಜನರು ಒಪ್ಪಿಕೊಳ್ಳಬೇಕು ಎಂದೂ ಬಯಸುತ್ತಾ ಇದ್ದರು. ಅದಕ್ಕೆ ಬೇಕಾದ ಕೆಲಸವನ್ನೂ ಮಾಡ್ತಾ ಇದ್ದರು. ಆದರೆ, ಆ ಒಪ್ಪಿಗೆಯಿಲ್ಲದವರ ಜೊತೆಗೆ ಅವರು ಚರ್ಚಿಸೋದಕ್ಕೆ ಸಿದ್ಧರಾಗಿದ್ದರು.
ಒಂದು ಸಲ, ಆರೆಸ್ಸೆಸ್‌ನ ದೊಡ್ಡ ನಾಯಕರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿಯ ಜೊತೆಗೆ ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಬಿರುಸಿನ ಚರ್ಚೆ, ಮಾತುಕತೆ ನಡೆಯಿತು. ಒಂದು ಹಂತದಲ್ಲಿ ನೆಹರೂ ಅವರು ಸ್ವಲ್ಪ ಔದಾರ್ಯ ಬಿಟ್ಟು ಮುಖರ್ಜಿಯ ಜೊತೆಗೆ ದೊಡ್ಡ ದನಿಯಲ್ಲಿ ಮಾತನಾಡಿದರು. ಆದರೆ ಮಾರನೆಯ ದಿನ ಪಾರ್ಲಿಮೆಂಟಿಗೆ ಬಂದ ನೆಹರೂ, ಎಲ್ಲರೂ ಏಳುವುದಕ್ಕೆ ಮುಂಚೆ ಎದ್ದು ನಿಂತು ಶ್ಯಾಮ್ ಪ್ರಸಾದ್ ಮುಖರ್ಜಿಯ ಜೊತೆಗೆ, ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡರು. ಅಂತಹ ಒಂದು ಶಕ್ತಿಯನ್ನು ನೆಹರೂ ಯಾವಾಗಲೂ ತನ್ನೊಳಗೆ ಇಟ್ಟುಕೊಂಡಿದ್ದರು. ನೆಹರೂ ಅವರ ಈ ಆತ್ಮವಿಮರ್ಶೆಗೆ ಇನ್ನೊಂದು ಉದಾಹರಣೆಯನ್ನು ನೀಡಬಹುದು. ಅವರು ಯುವಕರಿದ್ದಾಗ, ತಮ್ಮ ಪತ್ರಿಕೆಯಲ್ಲೊಂದು ಲೇಖನವನ್ನು ಪ್ರಕಟಿಸಿದ್ದರು. ‘‘ಈ ನೆಹರೂವನ್ನು ನಂಬಬೇಡಿ, ಯಾಕೆಂದರೆ ಇವನು ಒಳಗೊಳಗೇ ತುಂಬ ಆ್ಯಂಬಿಷನ್ ಇರೋ ಯುವಕ. ಸರ್ವಾಧಿಕಾರಿಯಾಗಬಹುದಾದ ಗುಣಗಳೆಲ್ಲಾ ಇವನಲ್ಲಿವೆ. ಆದುದರಿಂದ ಇವನನ್ನು ನೀವು ಒಂದು ಹದ್ದಿನಲ್ಲಿಡಬೇಕು’’ ಎನ್ನುವ ಭಾವವನ್ನು ಆ ಲೇಖನ ಹೊಂದಿದೆ. ತಮ್ಮ ಹೆಸರನ್ನು ಪ್ರಕಟಿಸದೆಯೇ ಆ ಲೇಖನವನ್ನು ಅವರು ಬರೆದಿದ್ದರು. ಬಹಳ ಪ್ರಸಿದ್ಧವಾದ ಲೇಖನ ಅದು. ನೆಹರೂ ಅವರನ್ನು ಚರ್ಚೆ ಮಾಡುವವರೆಲ್ಲ ಆ ಲೇಖನದ ಕಡೆಗೊಮ್ಮೆ ಕಣ್ಣಾಯಿಸುವುದಿದೆ. ಅಂದರೆ, ನೆಹರೂ ಅವರಿಗೆ ಅಷ್ಟರ ಮಟ್ಟಿಗೆ ತನ್ನನ್ನೇ ತಾನು ನೋಡಿಕೊಳ್ಳಬಲ್ಲ ಶಕ್ತಿಯಿತ್ತು. ನೆಹರೂ ಅವರ ಆನಂತರದ ದಿನಗಳಲ್ಲಿ, ಎಲ್ಲ ಪ್ರಧಾನಿಗಳೂ ನೆಹರೂವಿನ ಒಂದು ಅಂಶವನ್ನು ತಮ್ಮಲ್ಲಿ ಇಟ್ಟುಕೊಂಡೇ ದೇಶವನ್ನು ಆಳಿಕೊಂಡು ಬಂದಿದ್ದಾರೆ. ಆ ಮೂಲಕ ನಮ್ಮ ಸಂವಿಧಾನದ ಒಳಗಿನ ಹಾರೈಕೆಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಎನ್‌ಡಿಎ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಾಗ ಪ್ರಧಾನಿ ವಾಜಪೇಯಿ ಕೂಡ ಇದನ್ನು ಪಾಲಿಸಿ ಕೊಂಡು ಬಂದರು. ಈ ಕಾರಣದಿಂದಲೇ ವಾಜಪೇಯಿಗೆ ಕಾಂಗ್ರೆಸ್‌ನೋರು ಮಾಡುವುದಕ್ಕೆ ಆಗದೇ ಇರುವುದು ಮಾಡುವುದಕ್ಕೆ ಸಾಧ್ಯವಾಯಿತು. ಪಾಕಿಸ್ತಾನಕ್ಕೆ ಬಸ್ ತಗೊಂಡು ಹೋದರು. ಬಾಂಗ್ಲಾ ದೇಶದ ಜೊತೆಗೂ ಸಂಬಂಧವನ್ನು ಅಭಿವೃದ್ಧಿಪಡಿಸಿದರು.
ಬಾಂಗ್ಲಾ ದೇಶಕ್ಕೆ ಬಸ್ ಕೊಂಡು ಹೋದಾಗ, ಆ ಪ್ರವಾಸದಲ್ಲಿ ನಾನೂ ಭಾಗಿಯಾಗಿದ್ದೆ. ಮೂರು-ನಾಲ್ಕು ದಿವಸ ಆ ಸಂದರ್ಭದಲ್ಲಿ ನಾನು ಬಾಂಗ್ಲಾದಲ್ಲಿ ತಂಗಿದ್ದೆ ಅಲ್ಲಿನ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದೆ. ಅವರೆಲ್ಲಾ ಏನು ಹೇಳುತ್ತಿದ್ದರೆಂದರೆ, ‘‘ಈ ಮನುಷ್ಯನನ್ನು ನಾವು ನಂಬುತ್ತೇವೆ’’ ಎನ್ನುತ್ತಿದ್ದರು. ‘‘ವಾಜಪೇಯಿಯವರನ್ನು ನಾವು ಯಾಕೆ ನಂಬುತ್ತೇವೆಂದರೆ, ಅವರು ಮನಸ್ಸಿನಲ್ಲಿ ಮತೀಯವಾದಿಗಳಲ್ಲ’’ ಎಂದು ಹಲವರು ನನ್ನೊಡನೆ ಹಂಚಿಕೊಂಡರು. ವಾಜಪೇಯಿ ಕುರಿತಂತೆ ನನಗಾದ ಇನ್ನೊಂದು ಅನುಭವವನ್ನು ಹೇಳುತ್ತೇನೆ. ನಾನು ಒಂದು ಸಾರಿ ದೂರದರ್ಶನಕ್ಕೆ ಸಂಬಂಧಪಟ್ಟ ಚರ್ಚೆಯಲ್ಲಿ ಭಾಗವಹಿಸಿದ್ದೆ. ಆಗ ವಾಜಪೇಯಿಯವರು ವಿರೋಧಪಕ್ಷದ ನಾಯಕರಾಗಿದ್ದ ಕಾಲ. ಅವರೂ ಬಂದಿದ್ದರು ಚರ್ಚೆಗೆ. ಚರ್ಚೆಯಲ್ಲಿ ನಾನೂ ಕೆಲವು ಮಾತುಗಳನ್ನಾಡಿದ್ದೆ. ಚರ್ಚೆ ಮುಗಿದ ಬಳಿಕ, ಮುಖಕ್ಕೆ ಹಾಕಿದ ಮೇಕಪ್ ತೊಳೆಯೋದಕ್ಕೆಂದು ಹೋದಾಗ, ಅಲ್ಲಿ ವಾಜಪೇಯಿ ನನ್ನೊಂದಿಗೆ ಕೆಲವು ಮಾತುಗಳನ್ನಾಡಿದರು. ‘‘ನಿಮ್ಮನ್ನು ನಾನು ಮೊದಲನೆ ಸಾರಿ ಭೇಟಿ ಮಾಡುತ್ತಾ ಇದ್ದೇನೆ. ನೀವೇನೋ ಒಂದು ವಿಷಯವನ್ನು ಇವತ್ತು ಹೇಳಿದ್ರಿ. ಅದನ್ನು ನನಗೂ ಹೇಳೋದಕ್ಕೆ ಆಗ್ತಿರಲಿಲ್ಲ. ನೀವು ಅದನ್ನು ಹೇಳಿದ್ದು ಕೇಳಿ ಸಂತೋಷವಾಯಿತು’’ ಎಂದರು.
ನಾನು ಅಲ್ಲಿ ಹಿಂದಿಯ ಕುರಿತಂತೆ ಮಾತನಾಡಿದ್ದೆ. ‘ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಹೇರಲಿಕ್ಕೆ ಬಹಳ ಜನ ಪ್ರಯತ್ನ ಪಡ್ತಾರೆ. ಆದರೆ ರಾಷ್ಟ್ರೀಯ ಭಾಷೆಯಾಗಿ ಹೇರಲು ರಾಜಕೀಯವಾಗಿ ಪ್ರಯತ್ನಪಟ್ಟಷ್ಟು ಅದಕ್ಕೆ ವಿರೋಧ ಬರುತ್ತೆ. ನಮ್ಮ ಹಳ್ಳಿಯಲ್ಲಿ ಒಬ್ಬ ಹೆಂಗಸು ತುಳಸೀದಾಸ ರಾಮಾಯಣ ಓದೋಕಾಗಿಯೇ ಹಿಂದಿಯನ್ನು ಕಲಿತಿದ್ದಳು. ಆಕೆಗೆ ಅದು ರಾಷ್ಟ್ರೀಯ ಭಾಷೆ ಎನ್ನುವ ಪರಿಜ್ಞಾನ ಇರಲಿಲ್ಲ. ನಮ್ಮಲ್ಲಿ ಹಲವು ಭಾಷೆಗಳನ್ನು ಹೀಗೆ ಧಾರ್ಮಿಕ, ಸಾಂಸ್ಕೃತಿಕ ಕಾರಣಗಳಿಗಾಗಿ ಜನ ಸದ್ದು ಮಾಡದೇನೇ ಕಲಿತು ಬಿಟ್ಟಿರುತ್ತಾರೆ. ಆದುದರಿಂದ ಈ ದೇಶದಲ್ಲಿ ಜನರು ಹೆಚ್ಚು ಭಾಷೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದಕ್ಕೆ ಧಾರ್ಮಿಕ ಅಥವಾ ಸಾಂಸ್ಕೃತಿಕವಾದ ಏನೇನೋ ಕಾರಣಗಳಿರುತ್ತವೆ. ಇದು ಸರಕಾರದ ನಿಯಮಗಳಿಂದ ಆಗುವಂಥದ್ದಲ್ಲ’ ಎಂದು ನಾನು ಆ ಚರ್ಚೆಯಲ್ಲಿ ಅಭಿಪ್ರಾಯಪಟ್ಟಿದ್ದೆ. ವಾಜಪೇಯಿಗೆ ಈ ಮಾತಿನಿಂದ ಬಹಳ ಸಂತೋಷವಾಗಿ, ಅದನ್ನು ನನ್ನಲ್ಲಿ ತೋಡಿಕೊಂಡಿದ್ದರು. ಅಷ್ಟೇ ಅಲ್ಲ ಇದರ ಜೊತೆಗೇ, ‘ರಾಜಕಾರಣದಲ್ಲಿ ಮತೀಯತೆಯನ್ನು ಉಪಯೋಗಿಸುವುದು ನನಗಿಷ್ಟವಿಲ್ಲ’ ಎಂದು ಬಿಟ್ಟರು. ‘‘ನಿಮಗೆ ಇಷ್ಟ ಇಲ್ಲ ಅನ್ನೋದು, ನಮ್ಮ ಪುಣ್ಯ’’ ಎಂದು ಉತ್ತರಿಸಿದೆ.
ವಾಜಪೇಯಿ ಕುರಿತಂತೆ ಇನ್ನೊಂದು ಉದಾಹರಣೆ ಹೇಳುತ್ತೇನೆ. ಆವಾಗ ಸಾಹಿತ್ಯ ಅಕಾಡಮಿ ಒಂದು ಸರಣಿ ಕಾರ್ಯಕ್ರಮ ಮಾಡ್ತಾ ಇತ್ತು. ‘ಯಾವ್ಯಾವ ಪುಸ್ತಕಗಳು ನನ್ನ ಮೇಲೆ ಪರಿಣಾಮ ಬೀರಿವೆ’ ಅನ್ನೋದನ್ನು ಅಲ್ಲಿ ಹಂಚ್ಕೋಬೇಕಿತ್ತು. ವಿ.ಪಿ. ಸಿಂಗ್, ಎ.ಎನ್. ಎಸ್. ನಂಬೂದರಿ ಪಾಡ್ ಅವರೂ ಆ ಸರಣಿಯಲ್ಲಿ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ನಾನು ವಾಜಪೇಯಿಯವರನ್ನೂ ಕರೆದಿದ್ದೆ. ಅವರೂ ಬಂದರು. ಅವರು ಬಂದಾಗ ಸಭೆಯಲ್ಲಿ ಖ್ಯಾತ ಹಿಂದಿ ಲೇಖಕ ಭೀಷ್ಮ ಸಾಹನಿಯವರಿದ್ದರು. ಮೊದಲನೇ ಸಾಲಿನಲ್ಲಿ ಅವರು ಕುಳಿತಿದ್ದರು. ವಾಜಪೇಯಿಯವರು ಮಾತನಾಡುವುದಕ್ಕೆ ಎದ್ದು ನಿಂತರು. ಮಾತನಾಡುತ್ತಾ ‘‘ಎರಡು ಪುಸ್ತಕಗಳು ನನ್ನ ಮೇಲೆ ಬಹಳ ಪರಿಣಾಮ ಬೀರಿವೆ. ಒಂದು ಪಂಚತಂತ್ರ, ಇನ್ನೊಂದು ರಾಮಾಯಣ’’ ಅಂತಂದು ‘‘ಭೀಷ್ಮ ಸಾಹಿನ್‌ಜಿ, ವೈ ಐ ಸೇ ರಾಮಾಯಣ, ಐ ಡೋಂಟ್ ಮೀನ್ ಓನ್ಲೀ ಅಯೋಧ್ಯೆ ಕಾಂಡ’’ ಎಂದು ತಮಾಷೆ ಮಾಡಿದರು. ಇಂತಹ ಲವಲವಿಕೆ ವಾಜಪೇಯಿಯವರ ಬಳಿ ಇತ್ತು. ತನ್ನ ರಾಮಾಯಣ ದುರುದ್ದೇಶದಿಂದ ಕೂಡಿದ್ದಲ್ಲ ಎನ್ನುವುದು ಅವರಿಗೆ ಸ್ಪಷ್ಟವಿತ್ತು. ತನ್ನ ಬಳಿ ಸ್ವಲ್ಪ ನೆಹರೂ ಅಂಶ ಮೈಗೂಡಿಸಿದ್ದರಿಂದಲೇ ವಾಜಪೇಯಿ ಅವರಿಗೆ ಯಶಸ್ವಿಯಾಗಿ ದೇಶವನ್ನಾಳಲು ಸಾಧ್ಯವಾಯಿತು. ಮೊದಲನೇ ಬಾರಿ ಅಧಿಕಾರಕ್ಕೆ ಬಂದಾಗ ಬಿಜೆಪಿಗೂ ಇದು ಬಹಳ ಅಗತ್ಯವಾಗಿತ್ತು.
ಈಗ ನನ್ನ ಮನಸ್ಸಿಗೆ ಬಹಳ ಕಷ್ಟ ಯಾಕೆ ಆಗ್ತಾ ಇದೆ ಅಂದರೆ, ಈ ಅಂಶದಲ್ಲಿ ತುಸುವೂ ಇಲ್ಲದಿರುವ ಒಬ್ಬ ಮನುಷ್ಯನನ್ನು ಬಿಜೆಪಿಯವರು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲು ಹೊರಟಿದ್ದಾರೆ ಅಥವಾ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೋದಿ ಎಂಬ ನಾಯಕ ಸುಶಿಕ್ಷಿತರು ಎಂದು ನನಗೆ ಅನ್ನಿಸಲ್ಲ. ಯಾಕೆಂದರೆ ಅವರ ಭಾಷಣವನ್ನೇ ಕೇಳಿ. ಅಲ್ಲಿ ಅವರು ಉಪಯೋಗಿಸುವ ಭಾಷೆ ಜನರನ್ನು ಎಬ್ಬಿಸುವಂಥಾ ಭಾಷೆ. ಸಿಟ್ಟಿಗೆಬ್ಬಿಸುವಂಥಾ ಭಾಷೆ. ಪ್ರಚೋದಿಸುವಂಥ ಭಾಷೆ. ಸಾಮಾನ್ಯವಾಗಿ ಕೂಲಿ ಕಾರ್ಮಿಕ ನಾಯಕರು ಹಿಂದೆ ಇದನ್ನು ಬಹಳ ಬಳಸ್ತಾ ಇದ್ದರು. ಅದು ಸದ್ಯಕ್ಕೆ ಪ್ರಯೋಜನ ಆಗುತ್ತೆ ಅಂತ ಅನ್ನಿಸಬಹುದು. ಆದರೆ ಅದು ನಾಲ್ಕು ದಿನಕ್ಕಿಂತ ಹೆಚ್ಚು ಬಾಳಿಕೆ ಬರುವುದಿಲ್ಲ. ಪ್ರಯೋಜನವೂ ಆಗುವುದಿಲ್ಲ. ಮೋದಿ ಒಬ್ಬ ಮುಖವಾಡದ ಮನುಷ್ಯ, ಎಂಥ ಮುಖವಾಡವನ್ನು ಹಾಕುವುದಕ್ಕೂ ಅವರು ಸಿದ್ಧರು. ಸದ್ಯಕ್ಕೆ ಅವರ ಮುಖವೇ ಅವರಿಗೆ ಮುಖವಾಡ ಆಗಿ ಬಿಟ್ಟಿದೆ. ತನ್ನ ಮುಖವನ್ನೇ ಮುಖವಾಡ ಮಾಡುವಂಥ ಒಬ್ಬ ಮನುಷ್ಯ ಈ ದೇಶದಲ್ಲಿ ಅಧಿಕಾರಕ್ಕೆ ಬಂದರೆ, ಮುಸ್ಲಿಮರಿಗೆ ಬಹಳ ಅನ್ಯಾಯ ಆಗುತ್ತೆ ಅಂತ ನನ್ನ ಭಯ ಅಲ್ಲ, ಯಾಕೆಂದರೆ ರಾಜಕೀಯವಾಗಿ, ಆಳ್ವಿಕೆ ಮಾಡೋ ಉದ್ದೇಶದಿಂದ ಅದನ್ನು ಅತಿಗೆ ಹೋಗದೇ ಇದ್ದ ಹಾಗೆ ಮೋದಿ ನೋಡಿಕೊಂಡಾನು. ನೋಡಿಕೊಳ್ಳೋ ಜಾಣ್ಮೆ ಅವನಲ್ಲಿರುತ್ತೆ. ಆದರೆ ಅಲ್ಪಸಂಖ್ಯಾತ ಜನರು ಅವನನ್ನು ಮೆಚ್ಚಿಸೋಕ್ಕೋಸ್ಕರ ಭಯದಲ್ಲೇ ಬದುಕ್ತಾ ಇರಬೇಕಾಗುತ್ತೆ. ಅವನನ್ನು ಮೆಚ್ಚಿಸೋದೆ ಅವರಿಗೆ ಬಹಳ ಮುಖ್ಯವಾಗುತ್ತೆ. ಮೋದಿಗೆ ಬೇಕಾದ ಹಾಗೆ ಮಾತನಾಡೋದಕ್ಕೆ, ವರ್ತಿಸೋದಕ್ಕೆ ಶುರು ಮಾಡುತ್ತಾರೆ. ರಾಜಕೀಯದಲ್ಲಿ ಹೇಗೆ ಅಂದರೆ, ಒಬ್ಬ ನಾಯಕ ಬುಲ್ಲಿ ಆದರೆ, ಉಳಿದವರು ಕವರ್ಡ್ಸ್ ಆಗ್ತಾರೆ. ಆ ಬುಲ್ಲಿಯ ಗುಣ ಮೋದಿಗಿದೆ. ಎರಡೂ ಉದ್ದೇಶಕ್ಕೂ ಸಾರ್ಥಕ ಆಗುವ ಹಾಗೆ ಅವರು ಮಾತನಾಡ್ತಾ ಇದ್ದಾರೆ. ನಾನು ರಾಷ್ಟ್ರೀಯವಾದಿ, ಆದರೆ ಹಿಂದೂ ರಾಷ್ಟ್ರೀಯವಾದಿ ಅಂತಾರೆ. ಅಲ್ಲಿ ನಾನು ಹಿಂದೂ, ನಾನು ರಾಷ್ಟ್ರೀಯವಾದಿ ಅಂದ ಅಮೇಲೆ ಹೇಳಿದ್ರು. ಮೊದಲು ಹಿಂದೂ ರಾಷ್ಟ್ರೀಯವಾದಿ ಅನ್ನುವ ಶಬ್ದವನ್ನು ಬಳಸಿದರು. ಅಂದರೆ, ಹಿಂದೂ ಅಲ್ಲದೆ ಇದ್ದರೆ ಅವನು ಬೇರೆ ತರಹದ ರಾಷ್ಟ್ರೀಯವಾದಿಯೆ? ಪ್ರತೀ ಮಾತಿನಲ್ಲೂ ನಾಳೆಗೆ ಒಂದು ಅವಕಾಶವನ್ನು ಇಟ್ಟು ಕೊಂಡೇ ಮಾತನ್ನಾಡುತ್ತಾರೆ.
ಈ ಕಾರಣದಿಂದಲೇ, ನಮ್ಮ ರಾಜಕೀಯ ಪಕ್ಷಗಳು ಒಂದು ಗುರಿಯನ್ನು ಇಟ್ಟುಕೋಬೇಕು. ಇವತ್ತು ಅಭಿವೃದ್ಧಿಯ ಹೆಸರಿನಲ್ಲಿ ಬಹಳಷ್ಟು ತಪ್ಪುಗಳು ಆಗುತ್ತಾ ಇವೆ. ಈ ಅಭಿವೃದ್ಧಿ ಎನ್ನುವುದು ಎಷ್ಟರಮಟ್ಟಿಗೆ ಕಣ್ಣು ತಪ್ಪಿಸುವ ದಾರಿ ಎಂದರೆ, ಬಂಗಾಳದಲ್ಲಿ ಕಮ್ಯುನಿಷ್ಟರು ಈ ಕಾರಣಕ್ಕೆ ತಮ್ಮ ಅಧಿಕಾರವನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಯಿತು. ಕಮ್ಯುನಿಷ್ಟರು ಬಂಗಾಳಕ್ಕೆ ತುಂಬಾ ಒಳ್ಳೆಯದನ್ನು ಮಾಡಿದ್ದರು. ಬಂಗಾಳದ ಹಳ್ಳಿ ಹಳ್ಳಿಗಳಲ್ಲಿ ಜನ ಒಂದು ರೀತಿ ಡೆಮಾಕ್ರಟಿಕ್ ಆಗಿದ್ದರು.
ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ಅಬ್ದುಲ್ ನಝೀರ್ ಸಾಬ್ ನನ್ನನ್ನು ಬಂಗಾಳಕ್ಕೆ ಸ್ನೇಹಿತರ ಜೊತೆಗೆ ಕಳುಹಿಸಿ ಕೊಟ್ಟರು. ಒಂದು ವರದಿ ತರೋದಕ್ಕೆ ನಾನು ಹೋಗಿದ್ದೆ. ಅಲ್ಲಿನ ಹಳ್ಳಿಹಳ್ಳಿಯಲ್ಲಿ ತಿರುಗಾಡಿದೆ. ಹಳ್ಳಿಗಳಲ್ಲಿ ಅಲ್ಲಿನ ಸರಕಾರ ಮಾಡಿದ ಅತ್ಯಂತ ದೊಡ್ಡ ಕೆಲಸವೆಂದರೆ ಗ್ರಾಮ ಸ್ವರಾಜ್. ಒಂದು ಉದಾಹರಣೆ ಹೇಳುವೆ. ಒಂದು ಹಳ್ಳಿಯಲ್ಲಿ ಚಳಿಗಾಲದಲ್ಲಿ ನೂರಾರು ಜನರಿಗೆ ಚಳಿಗೆ ಕಂಬಳಿ ಬೇಕಾಗಿತ್ತು. ಆದರೆ ಅಲ್ಲಿಗೆ ಕಳುಹಿಸಲು ಐವತ್ತು ಕಂಬಳಿಯಷ್ಟೇ ಉಳಿದಿತ್ತು. ಐವತ್ತು ಕಂಬಳಿ ಗ್ರಾಮಪಂಚಾಯತ್‌ಗೆ ಕಳುಹಿಸಿದರೆ, ಎಲ್ಲರೂ ನನಗೆ ಬೇಕು, ನನಗೆ ಬೇಕು ಅನ್ನೋದಕ್ಕೆ ಶುರು ಮಾಡಿದ್ರಂತೆ. ಕಂಬಳಿ ಇರೋದು ಬರೇ ಐವತ್ತು. ನೀವೇ ಹಂಚಿಕೊಳ್ಳಿ ಎಂದು ಗ್ರಾಮದ ಜನರಿಗೆ ಅದರ ಜವಾಬ್ದಾರಿ ವಹಿಸಿದರಂತೆ. ಅಲ್ಲಿನ ಜನರು ಚರ್ಚಿಸಿ ಕೊನೆಯಲ್ಲಿ, ಎಲ್ಲವನ್ನು ಗ್ರಾಮದ ಮುದುಕರು ಮತ್ತು ಮುದುಕಿಯರಿಗೆ ಕೊಡಿ ಎಂದು ತೀರ್ಮಾನಕ್ಕೆ ಬಂದರಂತೆ. ‘ನಮಗೆ ಬೇಕು, ನಮಗೆ ಬೇಕು’ ಅಂದ ಜನರೇ ‘ನೀವೇ ಹಂಚಿಕೊಳ್ಳಿ’ ಎಂದಾಗ ಇಂತಹದೊಂದು ತೀರ್ಮಾನಕ್ಕೆ ಬಂದರು.
ಜನರನ್ನೇ ತೀರ್ಮಾನಕ್ಕೆ ಬಿಟ್ಟಾಗ ಇಂತಹದೊಂದು ನಿರ್ಣಯ ಮಾಡಲು ಅವರಿಗೆ ಸಾಧ್ಯವಾಗುತ್ತೆ. ಮುದುಕರು ಇರುವಾಗ, ಯುವಕರಿಗೆ ಕಂಬಳಿ ತೆಗೆದುಕೊಳ್ಳಲು ನಾಚಿಕೆಯಾಗುತ್ತೆ. ಬಂಗಾಳದಲ್ಲಿ ಇಂತಹ ಕೆಲಸ ಗ್ರಾಮ ಸ್ವರಾಜ್ ಮೂಲಕ ನಡೆಯುತ್ತಾ ಇತ್ತು. ಆ ಮೂಲಕ ಅದ್ಭುತ ಕೆಲಸವನ್ನು ಅಲ್ಲಿನ ಸರಕಾರ ಮಾಡಿತು.ಎಷ್ಟು ಎಂದರೆ, ಹಿಂದೆಲ್ಲ ಬಂಗಾಳದಲ್ಲಿ ಬರ ಬಂದಾಗ ಹಳ್ಳಿಯ ಜನರು ಸಾಮಾನ್ಯವಾಗಿ ಕೋಲ್ಕತಾ ನಗರಕ್ಕೆ ಬಂದು ಬಿಡೋರು. ಆದರೆ ಗ್ರಾಮಸ್ವರಾಜ್‌ನಿಂದಾಗಿ ಈ ನಗರ ವಲಸೆಯ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಯಿತು.
ಜನರಿಗೆ ಅಷ್ಟೆಲ್ಲ ಮಾಡಿದ ಸರಕಾರ, ಅಭಿವೃದ್ಧಿಯ ಬೆನ್ನು ಬಿದ್ದು, ರೈತರ ಅಷ್ಟೂ ಭೂಮಿಯನ್ನು ಅದು ಯಾವುದೋ ಕಾರ್ ಫ್ಯಾಕ್ಟ್ರಿಗೆ ಕೊಡೋಕೆ ಅಂತ ಹೋಗಿ ಜನದ್ರೋಹಿ ಆಗಿ ಬಿಟ್ಟಿತು. ಇವತ್ತು ಅಭಿವೃದ್ಧಿ ಅನ್ನೋದು ಬಹಳ ಜನರನ್ನು ಸಾಮಾನ್ಯ ಜನರ ಕಣ್ಣಿಗೆ ಕಾಣದಿದ್ದ ಹಂಗೆ ಮಾಡುವಂತಹ ವಿಧಾನವಾಗಿ ಹೋಗಿಬಿಟ್ಟಿದೆ. ಈ ಕಾರಣಕ್ಕಾಗಿಯೇ, ಇನ್ನು ಮುಂದೆ ಯಾರೂ ಅಭಿವೃದ್ಧಿ ಅನ್ನೋ ಶಬ್ದವನ್ನು ಬಳಸಬಾರದು. ‘ಸರ್ವೋದಯ’ ಅನ್ನೋ ಶಬ್ದ ಉಪಯೋಗಿಸಿ. ಅದು ಸರ್ವರ ಉದಯ. ಆಗ ಮಾತ್ರ ಉಳಿದವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಹೊಣೆಗಾರಿಕೆ ನಮ್ಮದಾಗುತ್ತದೆ. ಅಷ್ಟೇ ಅಲ್ಲದೆ, ಮನಮೋಹನ್ ಸಿಂಗ್ ಅವರು ಅಮೆರಿಕಕ್ಕೆ ಹೋದಾಗಲೂ ಹೇಳಬಹುದಾದ ಮಾತಿದು. ಅಮೆರಿಕದಲ್ಲೂ, ಯುರೋಪ್‌ನಲ್ಲೂ ಈ ಅಭಿವೃದ್ಧಿಯ ರೋಗ ಉಲ್ಬಣಿಸಿದೆ. ಕಣ್ಣಿಗೆ ಕಾಣುವಂತಹದ್ದಷ್ಟನ್ನೇ ಮಾಡೋದು. ಅನುಕೂಲಸ್ಥರು ಮತ್ತಷ್ಟು ಅನುಕೂಲಸ್ಥರಾಗ್ತಾ ಹೋಗೋದು. ಈ ಕಾರಣಕ್ಕಾಗಿಯೇ ಅಭಿವೃದ್ಧಿ ಎಂದರೆ ಗುಜರಾತ್ ಅಲ್ಲ. ಈಗ ಅಭಿವೃದ್ಧಿಯ ಕಡೆಗೆ ಕಣ್ಣು ಬಿಡುತ್ತಿರುವ ಬಿಹಾರ ನಮಗೆ ಮಾದರಿಯಾಗಬೇಕು. ಬಿಹಾರದಲ್ಲಿ ನಿತೀಶ್ ಮಾಡುವ ಕೆಲಸ, ಗುಜರಾತ್‌ನಲ್ಲಿ ಮೋದಿ ಮಾಡುವ ಕೆಲಸಕ್ಕಿಂತ ಬೆಲೆಯುಳ್ಳದ್ದು ಎಂದನ್ನಿಸುತ್ತದೆ ನನಗೆ. ಯಾಕೆಂದರೆ ಬಿಹಾರದ ಜನರು ತುಂಬಾ ಹಿಂದುಳಿದಿದ್ದಾರೆ. ಅವರ ಅಭ್ಯುದಯ ನಮ್ಮ ಗುರಿಯಾಗಬೇಕು. ಎದ್ದು ಕಾಣುವ ಹಾಗೆ ಸುಂದರವಾದ ರಸ್ತೆ ನಿರ್ಮಾಣ ಮಾಡಿದರೆ ಅದು ಅಭಿವೃದ್ಧಿ ಅಲ್ಲ. ಈ ಗುಜರಾತ್‌ನ ಜನರು ಶ್ರಮ ಜೀವಿಗಳು. ಗುಜರಾತಿನ ಜನ ಇಂಗ್ಲೆಂಡಿನಲ್ಲಿ ಒಂದು ಹೊಟೇಲ್ ನಿರ್ಮಾಣ ಮಾಡುತ್ತಾರೆ ಅಂತ ಇಡ್ಕೊಳ್ಳಿ. ಅಲ್ಲಿ ಅವರು ಕೂಲಿಗಳನ್ನು ತೆಗೆದುಕೊಳ್ಳುವುದಿಲ್ಲ. ಅವರು, ಅವರ ಹೆಂಡಿರು, ಮಕ್ಕಳು, ಅಳಿಯ, ಸೋದರಮಾವ ಎಲ್ಲರೂ ಬಂದುಬಿಟ್ಟು ಅದನ್ನು ನಡೆಸುತ್ತಾರೆ. ಒಂದು ಅಂಗಡಿಯಾದರೂ ಅಷ್ಟೆ. ಅವನು ಅಥವಾ ಅವನ ಹೆಂಡತಿ ಗಲ್ಲಾದಲ್ಲಿ ಕೂತಿರುತ್ತಾರೆ. ಭಾಷೆಯನ್ನು ಗುಜರಾತಿ ಬಿಟ್ಟು ಕೊಡೋದಿಲ್ಲ. ಹಂಗೆ ಅವರು ಮೇಲೆ ಮೇಲೆ ಬರ್ತಾರೆ. ಈ ಗುಜರಾತಿಗಳ ಶ್ರಮದ ಬೆಲೆಯನ್ನು ಮೋದಿಗೆ ಬಿಟ್ಟು ಕೊಡೋದಿದೆಯಲ್ಲ, ಅದಕ್ಕೆ ಯಾವ ಅರ್ಥವೂ ಇಲ್ಲ. ಇಂದು ಮೋದಿಯನ್ನು ಮೀಡಿಯಾಗಳು ಅನಗತ್ಯವಾಗಿ ಎತ್ತಿ ಜನ ಹಿಡಿಯುವ ಕೆಲಸವನ್ನು ಮಾಡುತ್ತಾ ಇವೆ. ಟಿವಿಗಳಲ್ಲಿ ನೋಡ್ತಾ ಇದ್ದೇನೆ. ಅವರು ಏನಾದರೂ ಒಂದು ನೆಪದಲ್ಲಿ ಮೋದಿಯ ಹೆಸರನ್ನು ತರುತ್ತಾರೆ. ಯಾರಾರನೆಲ್ಲ ಪ್ರಗತಿಶೀಲರು ಎಂದು ನಾನು ತಿಳಿದು ಕೊಂಡಿದ್ದೆನೋ ಅವರೆಲ್ಲ ಇಂದು ಮೋದಿ ಪರ ಮಾತನಾಡುವುದನ್ನು ನಾನು ನೋಡಿದ್ದೇನೆ. ಬಹುಶಃ ಈ ಕಾರ್ಪೊರೇಟ್ ಕುಳದ ಪ್ರಭಾವ ಅವರನ್ನು ಹೀಗೆ ರೂಪಿಸಿರಬೇಕು ಅಂತನಿಸುತ್ತೆ. ಇನ್ನು ಮುಂದೆ ಎಲ್ಲ ಹುದ್ದೆಗಳೂ ಈ ದೇಶದಲ್ಲಿ ಕಾರ್ಪೊರೇಟ್ ಮೂಗಿನ ನೇರಕ್ಕೆ ನಡೆಯೋದಕ್ಕೆ ಶುರುವಾಗಬಹುದು.
ನಾನು ನೋಡಿದ ಹಾಗೆ ಹಿಂದೆ ಹೀಗಿರಲಿಲ್ಲ. ಒಂದು ಸ್ಥಳೀಯ ನ್ಯೂಸ್ ಪೇಪರ್‌ನೋರಿಗೂ ಮರ್ಯಾದೆಯಿತ್ತು. ಆತ್ಮಾಭಿಮಾನವಿತ್ತು. ಶಿವಮೊಗ್ಗದಿಂದ ಬರುವ ಸುದ್ದಿ ಪತ್ರಿಕೆಯನ್ನು ಶಿವಮೊಗ್ಗದ ಜನರು ಬಿಡದೇ ಓದುತ್ತಾ ಇದ್ದರು. ಆವಾಗ ಸ್ಥಳೀಯತೆ ಅನ್ನೋದು ಬಹಳ ಮುಖ್ಯವಾಗಿರ್ತಾ ಇತ್ತು. ಈ ಸ್ಥಳೀಯತೆಯನ್ನು ನಾವು ಕಳೆದುಕೊಳ್ಳುತ್ತಾ ಇದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲ ಜಗತ್ತಿನ ಯಾವ ದೇಶಕ್ಕಾದ್ರೂ ಹೋಗಬಹುದು. ಯಾವ ಕೆಲಸವನ್ನಾದರೂ ಮಾಡಬಹುದು. ಇದುವೇ ಮುಖ್ಯ ಕನಸಾಗಿ ‘ಇಂಡಿಯಾದ ಮೇಲೆ ಯಾರು ಗಮನಕೊಡಬೇಕು’ ಅನ್ನೋದು ಹೊರಟು ಹೋಗುತ್ತೆ. ಬಹುಶಃ ಗುಜರಾತ್ ಮಾದರಿ ಅಭಿವೃದ್ಧಿ ಆ ತರಹದ್ದು, ಅದನ್ನು ಎಲ್ಲರೂ ಎತ್ತಿ ಹಿಡಿಯುತ್ತಿದ್ದಾರೆ. ಆದುದರಿಂದಲೇ ಮಾರಣ ಹೋಮ, ಹತ್ಯಾಕಾಂಡ ಆಗಿದ್ದನ್ನು ಸುಲಭವಾಗಿ ಮರೀತಾರೆ. ಇದು ನನಗೆ ಭಯವನ್ನುಂಟು ಮಾಡುತ್ತಿದೆ. ಗುಜರಾತ್ ಹತ್ಯಾಕಾಂಡವನ್ನು ಪ್ರಸ್ತಾಪಿಸಿದಾಗ ಸಿಖ್ ಹತ್ಯಾಕಾಂಡದ ಕಡೆಗೆ ಬೆರಳು ತೋರಿಸಿ ಸಮರ್ಥಿಸಿಕೊಳ್ಳಲು ಯತ್ನಿಸುತ್ತಾರೆ. ಸಿಖ್ ಹತ್ಯಾಕಾಂಡವೂ ಅಷ್ಟೇ ದರಿದ್ರವಾದುದು. ಆದರೆ ಅದರ ಬಗ್ಗೆ ನಮ್ಮ ಪ್ರಧಾನಿ ಕ್ಷಮೆ ಕೇಳಿದ್ದಾರೆ. ಸೋನಿಯಾಗಾಂಧಿ ಕ್ಷಮೆ ಕೇಳಿದ್ದಾರೆ. ತಾವು ಮಾಡಿರುವ ತಪ್ಪಿನ ಅರಿವು ಅವರಿಗಾಗಿದೆ. ಆದರೆ ಆ ತಪ್ಪನ್ನು ಸರಿ ಮಾಡಿಕೊಳ್ಳೋದಕ್ಕೆ ಏನೇನು ಮಾಡಬೇಕೋ ಅದನ್ನು ಮಾಡಿಲ್ಲ ಅವರು. ಆಡಳಿತ ಕೊಡುವಂತಹ ಪಕ್ಷವಾಗಿ ಸೋತಿದ್ದಾರೆ. ಆದರೆ ಒಬ್ಬರು ಹೀಗೆ ಮಾಡಿದರು ಅಂತ, ಇನ್ನೊಬ್ಬರು ಹಾಗೆ ಮಾಡೋದು ಸರಿ ಅನ್ನುವಂತಹ ವಾದವೇ ಸರಿಯಲ್ಲ. ಆದೂ ತಪ್ಪು. ಇದೂ ತಪ್ಪು. ಆ ತಪ್ಪು ಕಾಂಗ್ರೆಸ್‌ಗೆ ಎಷ್ಟು ಅರಿವಾಗಿದೆಯೋ, ಬಿಜೆಪಿಗೆ ತಮ್ಮ ತಪ್ಪು ಅರಿವಾಗಿಲ್ಲ. ತಪ್ಪನ್ನು ತಿದ್ದಿ ಕೊಳ್ಳುವ ಪ್ರಯತ್ನವನ್ನೂ ಅವರು ಮಾಡಿಲ್ಲ.
ಮೋದಿಯನ್ನು ಸಮರ್ಥಿಸುವವರು ಮುಸ್ಲಿಮರೂ ಇಷ್ಟ ಪಡುತ್ತಾರೆ ಎಂಬ ಹೇಳಿಕೆಯನ್ನು ಮುಂದಿಟ್ಟು ಮಾತನಾಡುತ್ತಾರೆ. ಆದರೆ ಎಲ್ಲಾ ಧರ್ಮಗಳಲ್ಲೂ, ಜಾತಿಗಳಲ್ಲೂ ಹೀಗೆ ಸ್ವಾರ್ಥಿಗಳಾದವರು ಇದ್ದೇ ಇದ್ದಾರೆ. ಅವರನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸುಲಭ. ಹಿಟ್ಲರ್ ಕೂಡ ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕೆ ಜ್ಯೂಗಳನ್ನು ಬಳಸಿಕೊಂಡದ್ದಿದೆ. ಅನೇಕ ಸಾರಿ ಪ್ರಾಣ ಭಯದಿಂದ ಹೆದರಿ ಅವರನ್ನು ಸಮರ್ಥಿಸುತ್ತಾರೆ. ಆದುದರಿಂದಲೇ ಇವೆಲ್ಲವುಗಳೂ ನಮಗೆ ತಪ್ಪು ಸಂದೇಶಗಳನ್ನು ಕೊಡುತ್ತಾ ಇವೆ.
ಸದ್ಯದ ಸ್ಥಿತಿಯಲ್ಲಿ ಈ ಅಭಿವೃದ್ಧಿ ಅನ್ನುವ ಶಬ್ದದಿಂದಾಗಿಯೇ ಹುಟ್ಟಿರುವ ರಾಜಕೀಯ ಪರಿಣಾಮಗಳ ಬಗ್ಗೆ ನಾನು ತುಂಬಾ ಚಿಂತೆಗೀಡಾಗಿದ್ದೇನೆ. ಆ ಶಬ್ದವೇ ಇವತ್ತು ಅಪಾಯಕಾರಿ ಅನ್ನಿಸ್ತಾಯಿದೆ. ಅದಕ್ಕೇ, ಅಭಿವೃದ್ಧಿಗೆ ಪರ್ಯಾಯವಾಗಿ ಸರ್ವೋದಯ ಹುಟ್ಟಿಕೊಳ್ಳಬೇಕು ಎಂದು ನಾನು ಬಯಸ್ತಾ ಇದ್ದೇನೆ. ಆದರೆ ದುರದೃಷ್ಟವಶಾತ್ ಯಾರಿಗೂ ಈ ಸರ್ವೋದಯದ ಮಹತ್ವ ಗೊತ್ತಾಗಿಲ್ಲ. ‘ಅನ್ ಟು ದಿ ಲಾಸ್ಟ್’ ಕೊನೆಯ ಮನುಷ್ಯನವರೆಗೆ ಎನ್ನುವ ಧ್ವನಿಯನ್ನು ಇದು ಸೂಚಿಸುತ್ತದೆ. ಗಾಂಧೀಜಿ ಈ ಶಬ್ದವನ್ನು ತೆಗೆದುಕೊಂಡಿರುವುದು ಬೈಬಲ್‌ನಿಂದ. ಆದುದರಿಂದ ಸರ್ವೋದಯ ಕೇವಲ ಭಾರತಕ್ಕಷ್ಟೇ ಅಲ್ಲ, ಪಾಶ್ಚಿಮಾತ್ಯರಿಗೂ ಅನ್ವಯವಾಗಬೇಕಾದ ಶಬ್ದ, ಸರ್ವೋದಯದಿಂದಷ್ಟೇ ಈ ಸಂದರ್ಭದ ರಾಜಕೀಯ ಪರಿಣಾಮಗಳಿಗೆ ಪರಿಹಾರ.