ವಿದ್ಯಾರ್ಥಿ ಹೇಳಿದ ಸತ್ಯ

Update: 2016-03-09 18:36 GMT

ನಾಲ್ಕಾರು ವರ್ಷಗಳ ಹಿಂದಿನ ಘಟನೆ: ಕರ್ನಾಟಕದ ಒಂದು ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆ ಕ್ಷೇತ್ರದ ಶಾಸಕರು ಬಂದಿದ್ದರು. ಅವರು ಅದಕ್ಕೂ ಹಿಂದೆ ಅನೇಕ ಬಾರಿ ಬೇರೆ ಬೇರೆ ಸಂದರ್ಭದಲ್ಲಿ ಬಂದಿದ್ದರಂತೆ. ಭಾಷಣದುದ್ದಕ್ಕೂ ವಿದ್ಯಾರ್ಥಿಗಳಿಗೆ ಜ್ಞಾನ, ನೈತಿಕತೆ, ರಾಷ್ಟ್ರಪ್ರೇಮ, ಸಾಮಾಜಿಕ ಕಳಕಳಿ ಹೀಗೆ ಸವೆದ ಮಾತುಗಳನ್ನು ಹೇಳಿದರು. ಕೊನೆಗೆ ಪ್ರಶ್ನೆಗಳೇನಾದರೂ ಇದ್ದರೆ ಕೇಳಿ ಎಂದರು. ಆಗ ಒಬ್ಬ ವಿದ್ಯಾರ್ಥಿ ಸರ್, ನೀವು ಇದನ್ನೆಲ್ಲ ಕಳೆದ ಹಲವಾರು ವರ್ಷಗಳಿಂದ ನಮಗೆ ಹೇಳುತ್ತಿದ್ದೀರಿ, ಆದರೆ ನೀವು ರಾಜಕಾರಣಿಗಳು ಶಾಸನಸಭೆಯಲ್ಲಿ ಮತ್ತು ಹೊರಗೆ ಹೇಗೆ ನಡೆದುಕೊಳ್ಳುತ್ತೀರಿ? ಪತ್ರಿಕೆಗಳಲ್ಲಿ ಬರುವ ವರದಿಯನ್ನು ನೋಡಿದರೆ ನಾಚಿಕೆಯಾಗಬೇಕು. ಮೊಬೈಲಿನಲ್ಲಿ ಅಶ್ಲೀಲತೆಯನ್ನು ನೋಡುತ್ತೀರಿ, ಹೊಡೆದಾಡುತ್ತೀರಿ, ಚುನಾವಣೆಯಲ್ಲಿ ಜಾತಿ, ಮತದ ಆಧಾರದಲ್ಲಿ ವೋಟು ಕೇಳುತ್ತೀರಿ, ಹಣ-ಹೆಂಡ ಹಂಚುತ್ತೀರಿ, ಯಾವ ಕಛೇರಿಯಲ್ಲೂ ಲಂಚ ಕೊಡದೆ ಕೆಲಸವಾಗುವುದಿಲ್ಲವೆಂದೂ, ಸರಕಾರಿ ನೌಕರರ ಆಯ್ಕೆ, ವರ್ಗಾವಣೆ ಎಲ್ಲವೂ ಲಂಚದ ಆಧಾರದಲ್ಲೇ ನಡೆಯುತ್ತದೆಯೆಂದೂ ನಮ್ಮ ಮನೆಯಲ್ಲಿ ದೊಡ್ಡವರು ಹೇಳುತ್ತಿರುತ್ತಾರೆ, ಅದನ್ನೇ ಸರಿಪಡಿಸಿಕೊಳ್ಳಲು ಸಾಧ್ಯವಾಗದವರು ನಮಗೆ ಇದನ್ನೆಲ್ಲ ಹೇಳುತ್ತೀರಿ ಯಾಕೆ? ಮೊದಲು ನಿಮ್ಮನ್ನು ನೀವು ತಿದ್ದಿಕೊಳ್ಳಿ, ಮತ್ತೆ ನಮಗೆ ಪಾಠ ಹೇಳಿ ಎಂದ. ಅವನನ್ನು ನಮ್ಮ ಅತ್ಯಂತ ವಿಧೇಯರಾದ ಶಿಸ್ತು ಪಾಲಕ ಪೊಲೀಸರು ಅಲ್ಲಿಂದ ಹೊರಗೆ ಹಾಕಿದರು. ಶಾಸಕರು ಮುಖ ಸಿಂಡರಿಸಿ ದುಡುದುಡು ದುಮ್ಮಾನ, ಅವಮಾನದೊಂದಿಗೆ ತೆರಳಿದರು. ಆ ವಿದ್ಯಾರ್ಥಿಯ ಮತ್ತು ಆತನ ಶಾಲೆಯ ಗತಿ, ಏನಾಯಿತೋ ಗೊತ್ತಿಲ್ಲ. ನಮ್ಮ ಮಾಧ್ಯಮದವರು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಯಾವುದೇ ಪ್ರಕರಣದ ಹುಟ್ಟು ಮಾತ್ರ ಸಾರ್ವಭೌಮ. ನಂತರ ಏನಾಯಿತೋ ಯಾರಿಗೆ ಬೇಕು? ಆದರೂ ಹೀಗೆ ಪ್ರಶ್ನಿಸಿದ ವಿದ್ಯಾರ್ಥಿಗೆ ಅಭಿನಂದನೆಗಳು. ಆತ ಶಾಸಕರನ್ನು ಪ್ರಶ್ನಿಸಿದ್ದರಿಂದ ಅಲ್ಲಿ ಶಾಸನಸಭೆಯ ಪ್ರಸ್ತಾಪ; ಅದನ್ನೇ ಸಂಸತ್ತಿಗೆ ವರ್ಗಾಯಿಸಿದರೆ ಪರಿಸ್ಥಿತಿ ಅದೇ.ಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುತ್ತೇವೆ. ಹಾಗೆಯೇ ಭವ್ಯ ಭಾರತದ ಭವಿಷ್ಯ ನಮ್ಮ ಯುವಜನರಲ್ಲಿ ಇದೆ ಎನ್ನುತ್ತೇವೆ. ದೇಶಭಕ್ತರಾಗಬೇಕಾದ ಈ ಮಕ್ಕಳೆದುರು ನಮ್ಮ ಹಿರಿವಯಸ್ಸಿನ ಜನ ಪ್ರತಿನಿಧಿಗಳು ಮತ್ತಿತರ ರಾಜಕಾರಣಿಗಳು ಮಾದರಿಗಾಗಿಟ್ಟ ದೇಶ (-ರಾಜ್ಯ) ಹೇಗಿದೆೆ? ಈ ವಿದ್ಯಾರ್ಥಿಗಳು ಮತ್ತು ಯುವಜನರು ಯಾರನ್ನು ಮತ್ತು ಯಾವುದನ್ನು ಯಾಕಾಗಿ ಅನುಸರಿಸಬೇಕು?


ಸದ್ಯ ಕೆಲವು ಸಮಯದಿಂದ ಹೈದರಾಬಾದಿನ ಕೇಂದ್ರ ವಿಶ್ವವಿದ್ಯಾಲಯ ಮತ್ತು ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಗಳು ಒಂದೇ ವಿನ್ಯಾಸಕ್ಕೆ ಹೊಂದಬಹುದಾದರೂ ಭಿನ್ನ ಕಾರಣಗಳಿಗೆ ಸಾಕಷ್ಟು ಸುದ್ದಿ ಮಾಡಿದವು. ವಿದ್ಯಾರ್ಥಿಗಳು ರಾಷ್ಟ್ರವನ್ನು, ಸಮಾಜವನ್ನು ನೋಡುವ ಕ್ರಮದಲ್ಲಿ ಒಂದು ತಾತ್ವಿಕತೆಯಿದ್ದರೆ ರಾಜಕಾರಣಿಗಳು ಎಲ್ಲವನ್ನೂ ತಮ್ಮ ರಾಜಕೀಯ ಲಾಭದ ದೃಷ್ಟಿಯಿಂದಲೇ ನೋಡುತ್ತಾರೆಂಬುದು ಸ್ಪಷ್ಟವಾಯಿತು. ಸತ್ತ ರೋಹಿತ್ ವೇಮುಲಾನಿಗೆ ಸಂತಾಪ ಹೇಳಬೇಕಾದರೆ ಆತ ಯಾವ ಜಾತಿಗೆ ಸೇರಿದವನು, ಆತನಿಗೆ ಸಂತಾಪ ಸೂಚಿಸಿದರೆ ಲಾಭವೋ ನಷ್ಟವೋ ಇತ್ಯಾದಿ ನಿಲುವುಗಳನ್ನು ವಿಶ್ಲೇಷಿಸಿ ನಮ್ಮ ನಾಯಕ ಮಣಿಗಳು ಪರ-ವಿರೋಧವಾಗಿ ಮಾತನಾಡಿದರು. ಇದು ಇನ್ನೂ ಮೊನಚನ್ನು ಕಂಡದ್ದು ಜೆಎನ್‌ಯು ಹಗರಣದಲ್ಲಿ. ಇದರಲ್ಲಿ ರಾಜಕಾರಣಿಗಳಂತೆ ಮಾಧ್ಯಮಗಳೂ ವರ್ತಿಸಿದ್ದು ಇನ್ನೂ ದುರಂತ. ಮುಖ್ಯವಾಗಿ ಕನ್ಹಯ್ಯಾ ಕುಮಾರ್ ಎಂಬ ವಿದ್ಯಾರ್ಥಿ ನಾಯಕನನ್ನು ಬಂಧಿಸಲು, ದೇಶದ್ರೋಹಿಯೆಂದು ಬಿಂಬಿಸಲು ಪೊಲೀಸರನ್ನು ಬಳಸಿಕೊಂಡು ಕಾನೂನನ್ನು ಬೇಕಾದಂತೆ ತಿರುಚಲಾಯಿತು. ದೇಶಭಕ್ತಿಯ ಹೆಸರಿನಲ್ಲಿ ಭಿನ್ನಧ್ವನಿಗಳನ್ನು ಅಡಗಿಸಲು ಯೋಜಿತ ತಂತ್ರವನ್ನು ಹೂಡಲಾಯಿತು. ಯಾವುದು ದೇಶದ್ರೋಹ ಎಂಬುದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಅದರ ಪರ್ಯಾಯ ಅಂಶವಾಗಿ ಯಾವುದು ದೇಶಭಕ್ತಿ ಎಂಬುದನ್ನು ಚರ್ಚಿಸಬಹುದು. ರೈತ, ನಾಗರಿಕ, ಸೈನಿಕ, ವಿದ್ಯಾರ್ಥಿ ಹೀಗೆ ಈ ದೇಶದ ಪ್ರತಿಯೊಬ್ಬ ಪ್ರಾಮಾಣಿಕ ಪ್ರಜೆಯೂ ಆತ್ಮಸಾಕ್ಷಿಯಾಗಿ ಹೇಳಬಹುದಾದ ಒಂದೇ ಅಂಶವೆಂದರೆ ಈ ದೇಶದಲ್ಲಿ ಭ್ರಷ್ಟಾಚಾರವೆಂಬುದು ಒಂದು ಅಳಿಸಲಾಗದ ಪಿಡುಗು. ದೇಶಭಕ್ತಿಯ ಕುರಿತು ಪುಂಖಾನುಪುಂಖವಾಗಿ ಭಾಷಣಮಾಡುವವರು ಮತ್ತು ಭಾರತೀಯತೆಯನ್ನು ಗುತ್ತಿಗೆಗೆ ಪಡೆದಂತೆ ಮಾತನಾಡುವವರು ಚುನಾಯಿತರಾಗುವ ಬಗೆಯನ್ನು ಹೇಳಬಾರದು-ಅಷ್ಟೂ ಅಸಹ್ಯ. ಈ ಲೇಖನದ ಆರಂಭದಲ್ಲಿ ವಿದ್ಯಾರ್ಥಿ ಹೇಳಿದ ಸತ್ಯವನ್ನು ನೆನಪಿಸಿಕೊಳ್ಳಬೇಕು. ನ್ಹಯ್ಯಾ ಕುಮಾರ್‌ಗೆ ಜಾಮೀನು ಮಂಜೂರಾಗಿದೆ. ಆದರೆ ಜಾಮೀನು ನೀಡಿದ ನ್ಯಾಯಮೂರ್ತಿಗಳು ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತೆ ಪ್ರಕರಣದ ಕುರಿತು ಹೇಳುವುದಕ್ಕಿಂತ ಹೆಚ್ಚು ಮಾತುಗಳನ್ನು ದೇಶಭಕ್ತಿಯ ಕುರಿತು ಮೀಸಲಾಗಿರಿಸಿದರು. ನ್ಯಾಯಾಲಯದ ತೀರ್ಪೊಂದರಲ್ಲಿ ಬಾಲಿವುಡ್ ಸಿನೆಮಾದ ಸಾಲುಗಳು ಮೊಳಗಿದವು. ಮುಂದೆ ಬಜರಂಗಿ ಭಾಯಿಜಾನ್‌ನ ಸಂಭಾಷಣೆಗಳೂ ಬಂದಾವು. ಪ್ರಕರಣಕ್ಕೆ ನೇರ ಸಂಬಂಧವಿಲ್ಲದ, ಜೈಜವಾನ್ ಸಿದ್ಧಾಂತಗಳು ದಾಖಲೆಗೆ ಸೇರಿಕೊಂಡವು. ಸಂಕ್ಷಿಪ್ತಗೊಳಿಸುವುದಕ್ಕೆ ಯಾವುದಾದರೂ ಬರಹದ ಭಾಗವನ್ನು ನೀಡಬೇಕಾದರೆ ಅದಕ್ಕೆ ಈ ತೀರ್ಪಿಗಿಂತ ಒಳ್ಳೆಯ ಬರಹ ಬೇರೊಂದಿಲ್ಲ. ವಿಷಾದವೆಂದರೆ ಕನ್ಹಯ್ಯೆ ಕುಮಾರ್‌ನನ್ನು ಮೋದಿಯ ಪ್ರತಿಸ್ಪರ್ಧಿ ಎಂದು ಭಾವಿಸಿದಂತೆ ಭಾಜಪ ನಾಯಕರು ಮಾತನಾಡಿದರು. ವೆಂಕಯ್ಯನಾಯ್ಡು ಎಂಬ ಕೇಂದ್ರ ಮಂತ್ರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆತನಿಗೆ ಓದು, ರಾಜಕೀಯ ಮಾಡಬೇಡ ಎಂಬ ಹಿತೋಪದೇಶವನ್ನೂ ಮಾಡಿದರು. ಆವರು ಹೀಗೆ ಹೇಳಬಹುದಿತ್ತು: ಇದು ನಮ್ಮಂತಹ ಅಯೋಗ್ಯರಿಗಿರುವ ಕ್ಷೇತ್ರ, ನೀನು ಇಲ್ಲಿ ಬಂದು ಕೆಡಬೇಡ. ನಿಜಕ್ಕೂ ಮೋದಿಗೆ ಪ್ರತಿಸ್ಪರ್ಧಿಯಾಗಿರುವುದು ಸ್ಮತಿ ಇರಾನಿ ಎಂಬ ನಟಿ. ರ ದಶಕದಲ್ಲಿ ಎಲ್.ಕೆ.ಅಡ್ವ್ವಾನಿಯವರು ಢೋಂಗಿ ಜಾತ್ಯತೀತತೆ ಎಂಬ ಪದವನ್ನು ಹುಟ್ಟುಹಾಕಿದರು. ಅದರ ಪರ-ವಿರೋಧ ಚರ್ಚೆಯಾಯಿತು. ಈಗ ಢೋಂಗಿ ದೇಶಭಕ್ತಿಯ ಕುರಿತು ಚರ್ಚೆಯಾಗಬೇಕಾಗಿದೆ. (ಈ ದೇಶದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರವಾದ ಈ ಪದಗಳ, ಇವುಗಳ ನಡುವೆ ಇರುವ ವ್ಯತ್ಯಾಸದ ಕುರಿತು ಚರ್ಚೆ ನಡೆದಿಲ್ಲ.) ಈಗಾಗಲೇ ಪ್ರಚಾರಗೊಂಡಿರುವ ಕೆಲವು ಉದಾಹರಣೆಗಳನ್ನು ನೆನಪಿಸುವುದಾದರೆ- ಹುರಿಯತ್‌ನೊಂದಿಗೆ ಮಾತುಕತೆಗೆ ಸಿದ್ಧವಿದ್ದೇವೆಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಆಳಿದ ಭಾಜಪ-ಪಿಡಿಪಿ ಸರಕಾರ ಹೇಳಿದ್ದು, ಅಫ್ಝಲ್ ಗುರುವಿನ ಮರಣ ನ್ಯಾಯಾಂಗದ ಅಪ್ರಾಮಾಣಿಕತೆಯೆಂದು ಪಿಡಿಪಿ ನಾಯಕ ಮುಫ್ತಿ ಮುಹಮ್ಮದ್ ಸಯೀದ್ ಹೇಳಿದ್ದು, ಆಜೀವ ಶಿಕ್ಷೆಗೊಳಗಾದ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸಲು ಜಯಲಲಿತಾ ಆದೇಶಿಸಿದ್ದು, ಗಲ್ಲುಶಿಕ್ಷೆಗೊಳಗಾಗಬೇಕಾಗಿದ್ದ ಭಯೋತ್ಪಾದಕರನ್ನು ಕಂದಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಮುಫ್ತಿ ಸಯೀದ್ ಅವರ ಮಗಳು ಮೆಹಬೂಬ ಮುಫ್ತಿಯವರ ರಕ್ಷಣೆಯ ಒಂದೇ ಕಾರಣದಿಂದ ಬಿಡುಗಡೆಗೊಳಿಸಿದ್ದು, ಗಾಂಧಿ ಹತ್ಯೆಯ ಆರೋಪಿಯೆಂದು ಸಾಬೀತಾದ ಗೋಡ್ಸೆಯ ಪರವಾಗಿ ಮಾತನಾಡಿದ್ದು ದೇಶದ್ರೋಹವಲ್ಲ; ದೇಶಭಕ್ತಿ. ಂತಹ ಢೋಂಗಿ ದೇಶಭಕ್ತಿಗೆ ರೈತರಾಗಲಿ, ಸೈನಿಕರಾಗಲಿ ಯುವಜನತೆಯಾಗಲಿ ಹೊರತಾಗಿಲ್ಲ. ಒಂದು ಕಡೆ ಸಾಲದ ಶೂಲಕ್ಕೆ ಸಿಕ್ಕಿ ಆತ್ಮಹತ್ಯೆಗೆ ಶರಣಾಗುವ ರೈತರಿದ್ದರೆ, ಇನ್ನೊಂದೆಡೆ ಗ್ರಾಮೀಣ ಹಂತದ ಸರಕಾರಿ ನೌಕರರ, ಜನಪ್ರತಿನಿಧಿಗಳ ನೆರವಿನಿಂದ ಕಳ್ಳದಾಖಲೆಗಳನ್ನು, ಸುಳ್ಳು ದಾಖಲೆಗಳನ್ನು ನೀಡಿ ಸಬ್ಸಿಡಿದರದಲ್ಲಿ ಕೃಷಿ ಸಾಲ-ಸಾಧನಗಳನ್ನು ಪಡೆಯುವ, ರೈತತಂಡಗಳಲ್ಲಿ ದೇಶ-ವಿದೇಶ ಪ್ರವಾಸ ಕೈಗೊಳ್ಳುವ, ಮಾತ್ರವಲ್ಲ, ಭೂಮಂಜೂರಾತಿ ಪಡೆಯುವ ಅಕ್ರಮಗಳನ್ನು ನಡೆಸುವ ರೈತರಿಗೆ ಕೊರತೆಯಿಲ್ಲ. ನಮ್ಮ ರಕ್ಷಣಾ ಇಲಾಖೆಯ ಅಕ್ರಮಗಳು ಎಲ್ಲಾ ಇಲಾಖೆಗಳಿಂದ ಹೆಚ್ಚು ಎನಿಸಿಕೊಂಡಿದೆ. ಮೀಸಲಾತಿಯನ್ನು ವಿರೋಧಿಸುವ ದೇಶಭಕ್ತರು ಕ್ಯಾಪಿಟೇಷನ್ ನೀಡಿ ವೈದ್ಯಕೀಯ ಮತ್ತಿತರ ಉನ್ನತ ಶಿಕ್ಷಣಕ್ಕೆ, ಸೀಟು ತೆಗೆಸಿಕೊಳ್ಳುವುದನ್ನು ದಿನನಿತ್ಯ ನೋಡುತ್ತೇವೆ. ವಿಷಾದವೆಂದರೆ ವಿದ್ಯಾರ್ಥಿದೆಸೆಯಿಂದ ಹೊಣೆಗಾರಿಕೆಗೆ ಏರುವ ಬಿಸಿರಕ್ತದ ಯುವಜನತೆಯಲ್ಲಿ ಬಹುಪಾಲು ಮಂದಿ ಇಂತಹ ಡೋಂಗೀ ದೇಶಭಕ್ತಿಯ ಸರದಾರರಾಗುತ್ತಾರೆ. ಅವರು ಕನ್ಹಯ್ಯಾ ಕುಮಾರನ್ನು ಮುಗಿಸಿ, ನಾಲಗೆ ಕತ್ತರಿಸಿ ಮುಂತಾಗಿ ಕೂಗೆಬ್ಬಿಸುವ ದೇಶಭಕ್ತ ರಾಜಕಾರಣಿಗಳ ನಿಷ್ಠಾವಂತ ದೇಶಭಕ್ತ ಗೂಂಡಾಗಳಾಗುತ್ತಾರೆ. ಪ್ರಾಮಾಣಿಕ ಚಿಂತನೆಯ ನಡುವೆ ತಮ್ಮ ಬೇಳೆಬೇಯಿಸಿಕೊಳ್ಳುವ ಇನ್ನೊಂದು ಪಂಗಡವೂ ಇದೆ. ಕನ್ಹಯ್ಯೊ ಕುಮಾರ್ ಪ್ರಕರಣದ ನಡುವೆ ಮಾಜಿ ಕೇಂದ್ರ ಸಚಿವ ಚಿದಂಬರಂ ಅಫ್ಝಲ್ ಗುರುವಿನ ಗಲ್ಲುಶಿಕ್ಷೆ ತಪ್ಪೆಂದು ವಾದಿಸತೊಡಗಿದ್ದಾರೆ. ಅವರು ಕೇಂದ್ರ ಮಂತ್ರಿಯಾಗಿದ್ದಾಗಲೇ ಈ ಗಲ್ಲು ನಡೆದಿದೆಯೆಂಬುದನ್ನೂ ಮರೆತು ವರು ಎಬ್ಬಿಸುವ ಈ ಹೊಸಾ ಗುಲ್ಲನ್ನು ಗೌರವಿಸುವ ಮೂರ್ಖರು ಈ ದೇಶದಲ್ಲಿಲ್ಲವೆಂಬುದನ್ನು ಅವರು ಮರೆತಿದ್ದಾರೆ. ಅಫ್ಝಲ್ ಗುರುವಿನ ಪತ್ನಿ ಸಾರ್ವಜನಿಕವಾಗಿಯೇ ಚಿದಂಬರಂ ಮಾತನ್ನು ನಟನೆಯೆಂದು ಖಂಡಿಸಿದರು. ಎಡಪಕ್ಷಗಳು ಕನ್ಹಯ್ಯಿ ಕುಮಾರ್ ಮುಂದಿನ ಚುನಾವಣೆಗಳಲ್ಲಿ ತಮ್ಮ ಪರ ಪ್ರಚಾರಕೈಗೊಳ್ಳಲಿದ್ದಾರೆಂದು ಹೇಳಿದರು. (ಹೀಗಾಗದಿರಲಿ ಎಂದು ಹಾರೈಕೆ.) ಏಕೆಂದರೆ ವಿದ್ಯಾರ್ಥಿಗಳನ್ನು ನಾಯಕರಾಗಿಸುವ ಬದಲಿಗೆ ರಾಜಕಾರಣಿಗಳಾಗಿಸಲು ಎಲ್ಲ ತಲೆನರೆತ ರಾಜಕಾರಣಿಗಳು ಸಂಚು ಹೂಡಿದ್ದಾರೆ. ಈ ಸಂಚಿಗೆ ಬಲಿಯಾದ ವಿದ್ಯಾರ್ಥಿಗಳು ತಮ್ಮ ಎಲ್ಲ ವೌಲ್ಯಗಳನ್ನೂ ಕಳೆದುಕೊಳ್ಳುತ್ತಾರೆ. 1974-75ರ ಜೆಪಿ ಚಳವಳಿ ಕಾಲದಲ್ಲಿ ಪಾಟ್ನಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕರಾಗಿ ಜೆಪಿಯ ವಿಶ್ವಾಸವನ್ನು ಗೆದ್ದಿದ್ದ ಲಾಲೂ ಪ್ರಸಾದ್ ಯಾದವ್ ನಂತರ ವೃತ್ತಿಪರ ರಾಜಕಾರಣಿಗಳ ಕೈಯಲ್ಲಿ ತರಬೇತು ಹೊಂದಿ ಹೇಗಾದರು?
ರಾಜಕೀಯ ಅದರಷ್ಟಕ್ಕೆ ಕೆಟ್ಟದ್ದಲ್ಲ. ಕಾಲದಂತೆ ಅದು ಕೆಡುವುದು ಅದರಲ್ಲಿರುವ ಮನುಷ್ಯರಿಂದ. ಈ ಸತ್ಯವನ್ನು ಮನಗಾಣದೆ ರಾಜಕೀಯ ಪ್ರವೇಶಿಸಿದರೆ ಒಂದೋ ಅರ್ಧಬಂರ್ಧ ಕಲಿತು ಚಕ್ರವ್ಯೆಹ ಪ್ರವೇಶಿಸಿದ ಅಭಿಮನ್ಯುವಿನ ಹಾಗೆ ಅದರಿಂದ ಹೊರಬರಲಾಗದೆ ಅಳಿದುಹೋಗಬಹುದು. ವಯಸ್ಸಿನೊಂದಿಗೆ ಅನುಭವ ಪಕ್ವವಾಗಿ ಬದುಕು ಸಮೃದ್ಧವಾಗುತ್ತದೆಂದು ಯಾರು-ಅದರಲ್ಲೂ ವಿದ್ಯಾರ್ಥಿಗಳು ತಿಳಿಯಬಾರದು. ದುಷ್ಟರು-ರಾವಣನಂತೆ ಅದೆಷ್ಟೇ ತಲೆಗಳಿದ್ದರೂ ದುಷ್ಟರೇ. ವಿಷದ ಹಾವು ಎಷ್ಟೇ ವಯಸ್ಸಾದರೂ ವಿಷವನ್ನು ಕಳೆದುಕೊಳ್ಳುವುದಿಲ್ಲ. ವಿಷವಿಲ್ಲದ್ದಕ್ಕೆ ವಿಷ ಹುಟ್ಟುವುದೂ ಇಲ್ಲ. ಈ ಸತ್ಯವನ್ನು ತಿಳಿದು ಅನುಸರಿಸಿದರೆ ಒಳ್ಳೆಯ ನಾಯಕರಾಗಬಹುದು. ಏನಿಲ್ಲವೆಂದರೂ ಅಭಿಮನ್ಯುವಿನ ಹಾಗೆ ಅಳಿದೂ ಉಳಿಯಬಹುದು. ರಾಜಕಾರಣಿಗಳನ್ನು ಪ್ರಶ್ನಿಸುವ ಧೈರ್ಯವನ್ನು (ಅಧ್ಯಾಪಕ ವೃಂದ ತೋರದಿದ್ದರೂ) ವಿದ್ಯಾರ್ಥಿಗಳಾದರೂ ತೋರಬಹುದಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News