ಕನ್ನಡ ನಾಡಿನಲ್ಲಿ ಇಂಗ್ಲಿಷ್ ವ್ಯಾಮೋಹ ಬೇಡ: ಸಾಹಿತಿ ವೈದೇಹಿ
ಮಡಿಕೇರಿ ಮಾ.14: ಆಧುನೀಕತೆಯ ಯುಗದಲ್ಲಿ ಅತ್ಯಂತ ಸರಳವಾದ ಕನ್ನಡ ಪದಗಳನ್ನು ಇಂಗ್ಲಿಷ್‌ನಲ್ಲಿ ಬಳಸುವ ಪರಿಪಾಠ ಬೆಳೆೆಸಿಕೊಳ್ಳುವ ಮೂಲಕ ಇಂಗ್ಲಿಷ್‌ಗೆ ನಾವು ಮಾರಾಟವಾಗಿದ್ದೇವೆ ಎಂದು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ವೈದೇಹಿ ವಿಷಾದ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಕಾಡಮಿ ಪ್ರಕಟಿಸಿರುವ ದಶ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರ ವಿಶ್ವಾತ್ಮಕ ಭಾಷೆಯಲ್ಲಿ ಸುತ್ತಮುತ್ತಲ ಪರಿಸರ, ಪ್ರಾಣಿ ಪಕ್ಷಿಗಳೆಲ್ಲವೂ ಒಳಗೊಂಡಿದೆ. ಇದು ಇಂದಿನ ಅಗತ್ಯವಾಗಿದೆಯಾದರೂ, ನಾವು ಮಾತನಾಡುತ್ತಿರುವುದು ಕಾರ್ಪೊರೇಟ್ ಭಾಷೆಯಲ್ಲಿ ಎಂದು ವೈದೇಹಿ ಅಭಿಪ್ರಾಯಪಟ್ಟರು.
ನೆಲದ ಭಾಷೆ, ಸಂಸ್ಕೃತಿಯೊಂದಿಗೆ ಮಿಳಿತವಾಗಿರುವ ಗದ್ದೆ ಬಯಲುಗಳು, ಸುತ್ತಮುತ್ತಲ ಪರಿಸರ ಜನನಾಡಿಯೊಂದಿಗೆ ಬೆರೆತಿದೆ. ಇವುಗಳನ್ನು ಸಂರಕ್ಷಿಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅರೆಭಾಷಾ ಅಕಾಡಮಿಯ ಸ್ಥಾಪನೆಯ ಬಳಿಕ ಹತ್ತು ಹಲವು ಕಾರ್ಯಕ್ರಮಗಳನ್ನು ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ಆಯೋಜಿಸುವ ಮೂಲಕ ಅರೆಭಾಷಾ ಸಂಸ್ಕೃತಿಯನ್ನು ಹೊರಭಾಗಗಳಿಗೂ ಪರಿಚಯಿಸುವ ಕೆಲಸವಾಗಿದೆ ಎಂದ ಅವರು, ಅಕಾಡಮಿಯಿಂದ ಹೊರತರಲಾದ ಪುಸ್ತಕಗಳನ್ನು ಖರೀದಿಸುವ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡುವಂತಾಗಬೇಕು. ಯಾವುದೇ ಕಾರಣಕ್ಕೂ ಪುಸ್ತಕಗಳು ಅಕಾಡಮಿಯಲ್ಲಿ ಉಳಿಯುವಂತೆ ಆಗಬಾರದೆಂದು ಬೋಪಯ್ಯ ಹೇಳಿದರು. ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಆಧುನೀಕತೆಯ ಟಿವಿ, ಇಂಟರ್ನೆಟ್‌ಗಳ ಪ್ರಭಾವದಿಂದ ಮಕ್ಕಳು ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಕಾಡಮಿ ಭಾಷಾ ಸಂಸ್ಕೃತಿಯ ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡಮಿ ಅಧ್ಯಕ್ಷ ಕೊಲ್ಯದ ಗಿರೀಶ್ ವಹಿಸಿದ್ದರು. ಅತಿಥಿಗಳಾಗಿ ಕವಿ ನಾಗಪ್ಪಗೌಡ ಕುತ್ಯಾಳ, ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ವೀರಾಜಪೇಟೆ ಕಾವೇರಿ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಸುಶೀಲಾ ಪಿ.ಎ., ಫೀ.ಮಾ. ಕಾರ್ಯಪ್ಪ ಕಾಲೇಜಿನ ಡಾ. ಕರುಣಾಕರ ನಿಡಿಂಜಿ, ಅಕಾಡಮಿ ರಿಜಿಸ್ಟ್ರಾರ್ ಉಮರಬ್ಬ ಕಡ್ಲೇರ ಪ್ರಮುಖರಾದ ತುಳಸಿ, ಡಾ. ಕೋರನ ಸರಸ್ವತಿ ಪ್ರಕಾಶ್, ಸಂಗೀತ ರವಿರಾಜ್ ಉಪಸ್ಥಿತರಿದ್ದರು. ಗೌರವ ಪ್ರಶಸ್ತಿ ಪ್ರದಾನ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ 2013-14ನೆ ಸಾಲಿನ ಗೌರವ ಪ್ರಶಸ್ತಿಯನ್ನು ಹೊದ್ದೆಟ್ಟಿ ಭವಾನಿಶಂಕರ್ ಮತ್ತು ಬಾರಿಯಂಡ ಜೋಯಪ್ಪ ಅವರಿಗೆ ಪ್ರದಾನ ಮಾಡಲಾಯಿತು.
ಇದೇ ಸಂದರ್ಭ ದಶ ಕೃತಿಗಳನ್ನು ರಚಿಸಿದ ಎಂ.ಜಿ. ಕಾವೇರಮ್ಮ, ಬೈತಡ್ಕ ಜಾನಕಿ ಬೆಳ್ಯಪ್ಪ, ಪೂಜಾರಿರ ಜಿ. ಮಾದಪ್ಪ, ನಿಡ್ಯಮಲೆ ವೇದಾವತಿ ಅನಂತ ಬಡ್ಡಡ್ಕ, ಕಟ್ರತನ ಕೆ. ಬೆಳ್ಯಪ್ಪ, ಟಿ.ಜಿ. ಮುಡೂರು, ಕಟ್ರತನ ಲಲಿತಾ ಅಯ್ಯಣ್ಣ, ಲೋಕೇಶ್ ಕುಂಚಡ್ಕ, ಬಾರಿಯಂಡ ಜೋಯಪ್ಪ ಅವರನ್ನು ಸನ್ಮಾನಿಸಲಾಯಿತು.