ವಿಟಿಯು ಉಪಕುಲಪತಿ ಡಾ.ಮಹೇಶಪ್ಪ ಅಮಾನತು

Update: 2016-03-15 17:33 GMT

ರಾಜ್ಯಪಾಲರ ಆದೇಶ
ಬೆಂಗಳೂರು, ಮಾ.15: ಭ್ರಷ್ಟಾಚಾರ ಹಾಗೂ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ(ವಿಟಿಯು)ದ ಉಪಕುಲಪತಿ ಡಾ.ಮಹೇಶಪ್ಪರನ್ನು ಅಮಾನತು ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ.
 ವಿಟಿಯುವಿನಲ್ಲಿ ನಡೆದ ಅವ್ಯವಹಾರ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನ್ಯಾ.ಕೇಶವ ನಾರಾಯಣ ನೇತೃತ್ವದ ಸಮಿತಿ ನೀಡಿದ ವರದಿಯನ್ನಾಧರಿಸಿ ರಾಜ್ಯಪಾಲರು, ಡಾ.ಮಹೇಶಪ್ಪರನ್ನು ಅಮಾನತು ಮಾಡಿದ್ದಾರೆ. ಅಲ್ಲದೆ, ವಿಟಿಯು ಕುಲಸಚಿವ ಶೇಖರಪ್ಪರಿಗೆ ಹಂಗಾಮಿ ಉಪಕುಲಪತಿಯಾಗಿ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.
ನ್ಯಾ.ಕೇಶವನಾರಾಯಣ ಸಮಿತಿಯು ಶಿಫಾರಸಿನಂತೆ ರಾಜ್ಯಪಾಲರು ಡಾ.ಮಹೇಶಪ್ಪಗೆ ಜ.29ರಂದು ಸ್ಪಷ್ಟೀಕರಣ ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು. ಒಂದು ತಿಂಗಳ ನಂತರ ಮಹೇಶಪ್ಪ ನೀಡಿದ ಉತ್ತರ ಸಮಾಧಾನಕರವಾಗಿಲ್ಲ ಎಂದು ರಾಜ್ಯಪಾಲರು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದರು.
ಮಹೇಶಪ್ಪ ವಿಶ್ವವಿದ್ಯಾನಿಲಯದ ನೇಮಕಾತಿಗಳು, ಕಟ್ಟಡ ನಿರ್ಮಾಣ ಮತ್ತು ಠೇವಣಿಗಳಲ್ಲಿ ಅಧಿಕಾರ ದುರುಪಯೋಗ ಮಾಡಿ ಅಕ್ರಮವೆಸಗಿರುವ ಕುರಿತು ಸತ್ಯಾಂಶ ಪತ್ತೆ ಸಮಿತಿಯು ಅವರ ವಿರುದ್ಧ ಆರೋಪಗಳನ್ನು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News