ಮಕ್ಕಳಿವರೇನಮ್ಮ?

Update: 2016-03-16 17:58 GMT

ನಮ್ಮ ಕಾಲದ ಈ ಭಾರತವೆಂಬ ದೇಶವು ಹರಿಹಂಚಾಗಿದ್ದ ಭೂಭಾಗಗಳನ್ನು ಜೋಡಿಸಿ ರಚಿಸಿದ ಒಂದು ಸಾಂಸ್ಕೃತಿಕ ಭೂಸರಹದ್ದು. ಭಾಷಾಧಾರಿತ ಅಥವಾ ಭಾಷಾವಾರು ರಾಜ್ಯಗಳ ರಚನೆಯಲ್ಲೂ ಇದೇ ಪರಿಪಾಠವನ್ನು ಅನುಸರಿಸಲಾಗಿದೆ. ಕರ್ನಾಟಕ ಅಂದರೆ ಅದು ಹಲವು ಪ್ರಾಂತಗಳನ್ನು ಹಲವು ಅರಸೊತ್ತಿಗೆಗಳನ್ನು ಒಟ್ಟು ಮಾಡಿ ಉಂಟಾದ ಒಂದು ಸೃಷ್ಟಿ. ಈ ಸೃಷ್ಟಿಗೆ ನಾವು ಒಂದು ಭಾವನಾತ್ಮಕ, ವೈಚಾರಿಕ ಒತ್ತನ್ನು ಕೊಟ್ಟು ಅದು ನಮ್ಮದು ಎಂಬ ವ್ಯಾಖ್ಯಾನವನ್ನು ನೀಡುತ್ತೇವೆ. ದೇವರನ್ನು ಸೃಷ್ಟಿಸಿ ಅದನ್ನು ನಾವು ಪೂಜಿಸುವುದಿಲ್ಲವೇ- ಹಾಗೆ. ಅದಲ್ಲದಿದ್ದರೆ ಒಂದಷ್ಟು ವರ್ಷ ಆಯುಷ್ಯದಲ್ಲಿ ಬದುಕಿದ್ದು ಸಾಯುವ ನಶ್ವರ ಮನುಷ್ಯನು ಇದು ತನ್ನದು, ತಾನು ಈ ದೇಶದವನು ಎಂದು ಹೇಳಬೇಕಾಗಿರಲಿಲ್ಲ.

ಭಾರತೀಯತೆ ಹೇಗಿತ್ತೆಂದು ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: ನಾವೀಗ ಮೃಗಗಳಿಗಿಂತ ಹೆಚ್ಚು ನೀತಿವಂತರಾಗಿಲ್ಲ. ಸವಾಜದ ಚಾವಟಿಯ ಏಟಿಗೆ ಮಾತ್ರ ನಾವು ಅಂಜುತ್ತಿರುವೆವು. ಸಮಾಜವು ನೀವು ಕದ್ದರೆ ನಿಮ್ಮನ್ನು ಶಿಕ್ಷಿಸುವುದಿಲ್ಲ ಎಂದರೆ ಇತರರ ಆಸ್ತಿಯನ್ನು ದೋಚಲು ಒಡನೆಯೇ ಧಾವಿಸುವೆವು. ನಮ್ಮನ್ನು ನೀತಿವಂತರನ್ನಾಗಿ ಮಾಡಿರುವವನು ಪೊಲೀಸಿನವನು. ಸಾಮಾಜಿಕ ಅಭಿಪ್ರಾಯವೇ ನಮ್ಮ ನೀತಿಗೆ ಕಾರಣವಾಗಿದೆ. ಹಾಗೆ ನೋಡಿದರೆ ಪ್ರಾಣಿಗಳಿಗಿಂತ ನಾವೇನೂ ಬಹಳ ಮೇಲಿಲ್ಲ. ನೆನಪಿಡಿ: ಅದು, ಸ್ವಾತಂತ್ರ್ಯಪೂರ್ವ ಕಾಲ.

ಪ್ರಾಯಃ ನಾವು ಬ್ರಿಟಿಷರಿಗೆ ಧನ್ಯವಾದ ಹೇಳಬೇಕು. ಇಲ್ಲವಾದರೆ ಈಗಲೂ ಭಾರತದ ವಿವಿಧ ರಾಜ್ಯಗಳ ರಾಜರುಗಳ ಪರಸ್ಪರ ಕೈಮೇಲಾಟದಲ್ಲಿ ಪ್ರಜೆಗಳು ಬಲಿಯಾಗಬೇಕಾಗಿತ್ತು. ಭಾರತವೆಂಬ ಈ ಭೂಭಾಗದ ರಕ್ತಸಿಕ್ತ ಚರಿತ್ರೆಯನ್ನು ಗಮನಿಸಿದರೆ ಅಲ್ಲಿ ಯಾವ ಧರ್ಮನಿಷ್ಠೆಯಾಗಲೀ, ಪ್ರಜಾಪರಿಪಾಲನೆಯಾಗಲೀ ಲೋಕಹಿತವಾಗಲೀ ಹೆಚ್ಚು ಕಾಣಿಸದೆ ವೈಯಕ್ತಿಕ ಪ್ರತಿಷ್ಠೆಯೇ ಮುಖ್ಯವಾಗಿತ್ತೆಂಬುದು ಗೋಚರಿಸುತ್ತದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲು ಇಲಿಗಳು ಒಂದಾದಂತೆ ಎಲ್ಲರೂ ಸ್ವಾತಂತ್ರ್ಯ ಹೋರಾಟದ ಮುಖ್ಯ ವಾಹಿನಿಗೆ ಸೇರಿದರು. ಸ್ವಾತಂತ್ರ್ಯ ಸಿಕ್ಕಾಗ ಮತ್ತೆ ಬೇರೆಯಾಗಬೇಕೆಂಬ ಆಸೆ ಅನೇಕರಿಗಿತ್ತೋ ಏನೋ- ಆದರೆ ರಾಜತಂತ್ರದ ಜಾಗವನ್ನು ಪ್ರಜಾತಂತ್ರವು ಆಕ್ರಮಿಸಿದ್ದರಿಂದ ಯೂನಿಯನ್ ಜಾಕ್ ಧ್ವಜವು ಇಳಿದಾಗ ಕಿರೀಟಗಳೂ ಇಳಿದವು ಮತ್ತು ಅಳಿದವು. ಹೊಸದೊಂದು ಶಕೆಯು ಆರಂಭವಾಯಿತೆಂದು ಹೇಳಲು ಅವಕಾಶವಾಯಿತು. ಆನಂತರದ ಈ ಆರು ಚಿಲ್ಲರೆ ದಶಕಗಳಲ್ಲಿ ಸ್ವಾತಂತ್ರ್ಯದ ಉದ್ದೇಶವು ಎಷ್ಟು ಸಲವಾಯಿತೋ ಹೇಳಲಾಗದು. ಪರಿಸ್ಥಿತಿಯು ವಿವೇಕಾನಂದರು ಹೇಳಿದ್ದಕ್ಕಿಂತ ಹೆಚ್ಚು ಭಿನ್ನವಾಗಿಲ್ಲ; ಬದಲಾಗಿಲ್ಲ. ಇಡೀ ವಿಶ್ವವು ಮುನ್ನಡೆಯುವಾಗ ಭಾರತವೂ ಮುನ್ನಡೆಯಿತು. ಜನಸಂಖ್ಯೆ ಹೆಚ್ಚಾಯಿತೆಂದು ಹೆಮ್ಮೆ ಪಡುವ ದೇಶ ನಾವು ಮಾತ್ರವೆಂದು ಕಾಣುತ್ತದೆ! ವಿಶ್ವದ ಆರನೆ ಒಂದು ಭಾಗದಷ್ಟು ಜನಸಂಖ್ಯೆಯಿರುವ ಪ್ರಜಾಪ್ರಭುತ್ವ ಎಂದು ಭಾರತದ ಕುರಿತ ದೇಶೀಯರ, ವಿದೇಶೀಯರ ಭಾಷಣಗಳಲ್ಲಿ ಉಲ್ಲೇಖವಾಗುವುದನ್ನು ನೋಡಿದರೆ ನಗು ಬರಬೇಕು! ಜನಸಂಖ್ಯೆಗೂ ನಮ್ಮ ಸಿದ್ಧಾಂತಗಳಿಗೂ ಏನು ಸಂಬಂಧ? ಜನಸಂಖ್ಯಾ ಸ್ಫೋಟವು ಪ್ರಗತಿಗೆ ಮಾರಕ ಮತ್ತು ಬಡತನದ ಪೋಷಕ ಎಂಬುದನ್ನು ಮರೆತು ಅವರವರ ಜಾತಿ-ಮತ-ಧರ್ಮಗಳ ವೇದಿಕೆಗಳಿಂದ ಹೆಚ್ಚು ಮಕ್ಕಳನ್ನು ಹಡೆಯಿರಿ ಎಂದು ಕರೆಕೊಡುವುದನ್ನು ನೋಡುವಾಗ ಈ ದೇಶಕ್ಕೆ ಭವಿಷ್ಯವಿದೆ ಎಂದು ಅನ್ನಿಸುವುದಿಲ್ಲ. ನಾವೆಲ್ಲ ಒಂದು ಎಂಬ ಭಾವವು ತೆಳುವಾಗಿ, ಪೇಲವವಾಗಿ, ಅಲ್ಲಿ ಕನ್ನಡಿಗರು, ತಮಿಳರು, ತೆಲುಗರು, ಮಲೆಯಾಳಿಗಳು, ಇಲ್ಲವೇ ಹಿಂದೂ, ಕ್ರೆಸ್ತ, ಮುಸ್ಲಿಮ್, ಸಿಖ್, (ಇಡೀ ದೇಶದ ಎಲ್ಲ ಭೂಭಾಗಗಳ, ರಾಜ್ಯಗಳ ಪಟ್ಟಿಯನ್ನು ಭಾಷಾವಾರು, ಜಾತಿವಾರು ಹಿಗ್ಗಿಸಬಹುದು!) ಹೀಗೆ ನಮ್ಮನ್ನು ಒಂದೊಂದು ಪಂಗಡಗಳಿಗೆ ಮೀಸಲಾಗಿಸಿದೆವು. ಧರ್ಮನಿರಪೇಕ್ಷತೆಯನ್ನು ಯರ್ರಾಬಿರ್ರಿ ವಿಶ್ಲೇಷಿಸಿದೆವು. ದೇಶವೆಂಬ ಭವ್ಯ ಕಲ್ಪನೆಯನ್ನು ಅಡ್ಡಾದಿಡ್ಡಿ ವಿಭಜಿಸುವುದಕ್ಕೆ ವಿವಿಧ ಸಿದ್ಧಾಂತಗಳೂ ನೆರವಿಗೆ ಬಂದವು. ದೇಶಕ್ಕೆ ಸಂಬಂಸಿದ ರೀತಿನೀತಿಗಳನ್ನು ಅವರವರ ಮೂಗಿಗೆ ನೇರವಾಗಿ ಅರ್ಥೈಸಿದ್ದರ ಪರಿಣಾಮವಾಗಿ ನಮ್ಮಲ್ಲಿ ಎಲ್ಲರೂ ಇದ್ದಾರೆ- ಆದರೆ ಮನುಷ್ಯರೂ ಭಾರತೀಯರೂ ಕಾಣದಾಗಿದ್ದಾರೆ.

ಭಾರತದ ಪುರಾಣಗಳಲ್ಲಿ ಒಂದು ಕಲ್ಪನೆಯಿದೆ: ಅವು ಕಾಲವನ್ನು ನಾಲ್ಕು ಯುಗಗಳಾಗಿ ವಿಂಗಡಿಸಿವೆ ಮತ್ತು ಧರ್ಮವನ್ನು ನಾಲ್ಕು ಕಾಲುಗಳ ಒಂದು ಪ್ರಾಣಿಯಂತೆ ಚಿತ್ರಿಸಿದ್ದಾರೆ. ಕೃತಯುಗದಲ್ಲಿ ಧರ್ಮವು ನಾಲ್ಕು ಕಾಲುಗಳಲ್ಲಿ ನಿಂತರೆ, ತ್ರೇತಾಯುಗದಲ್ಲಿ ಮೂರು ಕಾಲುಗಳಲ್ಲಿಯೂ, ದ್ವಾಪರದಲ್ಲಿ ಎರಡು ಕಾಲುಗಳಲ್ಲಿ ಹಾಗೂ ಕಲಿಯುಗದಲ್ಲಿ ಒಂದು ಕಾಲಿನಲ್ಲಿ ನಿಂತಿದೆಯಂತೆ. ಇದೊಂದು ಅವನತಿಯ ಹಾದಿ! ಯುಗದ ಕಲ್ಪನೆ ಸತ್ಯವಿರಬೇಕಾಗಿಲ್ಲ. ಈ ಉದಾಹರಣೆಯನ್ನು ಒಂದು ರೂಪಕವಾಗಿ ಕಂಡರೂ ಒಟ್ಟಿನಲ್ಲಿ ಮನುಷ್ಯ ಅಧಃಪತನದತ್ತ ಹೋಗುವುದಕ್ಕೇ ಹೆಚ್ಚು ಒಲವುಳ್ಳವನಂತೆ ಕಾಣಿಸುತ್ತಾನೆ.

ಮತ್ತೆ ಸ್ವಾಮಿ ವಿವೇಕಾನಂದರನ್ನು ನೆನಪಿಸುವುದಾದರೆ ಅವರು ಹೇಳಿದ್ದು ಅಕ್ಷರಶಃ ಸಾರ್ವಕಾಲಿಕ ಸತ್ಯವಾಗುತ್ತಿದೆ. ಅವರು ಹೇಳಿದರು: ನಮಗೆ ಬೇಕಾಗಿರುವುದು ಶ್ರದ್ಧೆ. ದುರದೃಷ್ಟವಶಾತ್ ಭರತಖಂಡದಿಂದ ಇದು ಮುಕ್ಕಾಲುಪಾಲು ಕಣ್ಮರೆಯಾಗಿದೆ. ಆದ್ದರಿಂದಲೇ ನಾವು ಇಂತಹ ಅಧೋಗತಿಗೆ ಬಂದಿರುವುದು. ಇಡೀ ಜಗತ್ತು ಆಧುನಿಕತೆಗೆ ಒಗ್ಗಿಹೋಗಿದೆ. ಭವಿಷ್ಯಕ್ಕೆ ಉಳಿಸುವ ಹವ್ಯಾಸ, ಭವಿಷ್ಯದಲ್ಲಿ ಉಳಿಯಬೇಕೆಂಬ ಆದರ್ಶ ಮರೆಯಾಗಿ ದಾಸರು ಹೇಳಿದ ಇಂದಿನ ದಿನ ಸುದಿನ ಎಂಬುದು ನಿಜವಾಗಿದೆ. ಇದು ಕೇಳುವುದಕ್ಕೆ ಇಷ್ಟವಾಗುವ ಹಾಡು. ಆದರೆ ನಾವು ಈ ಬದುಕನ್ನು ತೊರೆದು ಹೋಗುವಾಗ ಇಲ್ಲಿ ಬಿಟ್ಟು ಹೋಗುವುದಾದರೂ ಏನನ್ನು? ಹಿಂದೆಲ್ಲ ಆತ ಹಣವನ್ನು ನೀರಿನಂತೆ ವೆಚ್ಚಮಾಡಿದನು ಎನ್ನುತ್ತಿದ್ದರು. ಅಂದರೆ ಯಥೇಚ್ಛವಾಗಿ, ಬಿಟ್ಟಿಯಾಗಿ ಸಿಗುವ ವಸ್ತುವಾಗಿದ್ದು ದುಡಿಯದೇ ಅನಾಯಾಸವಾಗಿ ದುಂದು ಮಾಡಬಲ್ಲ ಒಂದು ಸೆಲೆಯಾಗಿತ್ತು. ಅದನ್ನು ಇಂದು ಹೇಳಲು ಸಾಧ್ಯವೇ? ಇಂದು ನೀರೇ ಸಿಕ್ಕದ, ನೀರಿಗಾಗಿ ಪ್ರಾಣವನ್ನೂ ತೆಗೆಯಬಲ್ಲ ಸ್ಥಿತಿ ಬಂದಿದೆ. ಮುಂದಿನ ವಿಶ್ವಸಮರ ನಡೆದರೆ ಅದು ನೀರಿಗಾಗಿ ಎಂದು ಹೇಳುವ ಆತಂಕ ಆರಂಭವಾಗಿದೆ. ಹೀಗಾಗಲು ಯಾರು ಕಾರಣ? ನಾವೇ. ನೀರಿನ ಮೂಲವನ್ನು ಅಗೆದೆವು. ನೀರು ನಿಲ್ಲಬೇಕಾದರೆ ಅಗತ್ಯವಿರುವ ಮರಳನೆಲೆಯನ್ನು ಹಳ್ಳಕೊಳ್ಳಗಳಿಂದ, ಹೊಳೆ-ನದಿಗಳಿಂದ, ಜಾರಿಸಿದೆವು. ಬಾವಿ-ಕೆರೆಗಳಿಂದ ತೆಗೆವ ನೀರಿನಲ್ಲಿ ಎಷ್ಟು ಕೃಷಿ ಮಾಡಬಹುದೊ ಅದನ್ನು ಮೀರಿ ಬೋರ್‌ವೆಲ್‌ಗಳನ್ನು ತೆಗೆದು ಭೂಮಿಯ ಅಂತರ್ಜಲವನ್ನೂ ಆರಿಸಿದೆವು. ನೀರು ಉಳಿಯಬೇಕಾದರೆ ನೆರಳು ಅಗತ್ಯವೆಂದು ಬಗೆಯದೆ ಮರಗಳನ್ನು ಮಾತ್ರವಲ್ಲ, ಕಾಡುಗಳನ್ನೇ ನಿರ್ನಾಮಮಾಡಿದೆವು. ಖಾಂಡವವನ ದಹನದ ಆದರ್ಶವನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಿದುದರ ಪರಿಣಾಮವಾಗಿ ಮೃಗಪಕ್ಷಿಗಳೂ ನೆಲೆಯಿಲ್ಲದೆ ಸತ್ತವು. ಪ್ರಾಣಿಸಂರಕ್ಷಣೆಯ ತತ್ವ-ಕಾನೂನನ್ನು ಒಂದು ವ್ಯಂಗ್ಯವಾಗಿ ಬದಲಾಯಿಸಿದೆವು!

ನನ್ನ ಸ್ನೇಹಿತರೊಬ್ಬರು ಆನೆಗಳು ನಾಡಿಗೆ ಬಂದು ನಮ್ಮ ತೋಟಗದ್ದೆಗಳನ್ನು ನಾಶಮಾಡುವ ಬಗ್ಗೆ ಬರೆದಿದ್ದರು. ನಾನಂದೆ: ನಮ್ಮ ಮಕ್ಕಳು ನಗರಗಳಿಗೆ ವಲಸೆ ಹೋಗುವುದನ್ನು ನಾವು ತಪ್ಪಿಸಲಾರೆವು. ಏಕೆಂದರೆ ಕೃಷಿಗೆ ಭವಿಷ್ಯವಿಲ್ಲದಂತಾಗಿದೆ. ಹಳ್ಳಿಗಳಲ್ಲಿ ಉದ್ಯೋಗಾವಕಾಶವಿಲ್ಲ. ಹಾಗೆಯೇ ನಾವು ಕಾಡುಗಳನ್ನು ನಾಶಮಾಡಿ ನದಿಗಳನ್ನು ಬತ್ತಿಸಿ ಆನೆಗಳಿಗೆ ಕಾಡಿನಲ್ಲಿ ಬದುಕಿಲ್ಲದಂತೆ ಮಾಡಿದ್ದೇವೆ. ಅವು ನಾಡೆಂಬ ನಗರಗಳಿಗೆ ಬರದೆ ಇನ್ನೇನು ಮಾಡಬೇಕು?

ಸುಮಾರು ಶೇ.50 ಜನರು ನಗರವಾಸಿಗಳಾಗಿದ್ದಾರೆ. 2050ರ ಹೊತ್ತಿಗೆ ಈ ಅನುಪಾತ ಶೇ.75ಕ್ಕೆ ಹೆಚ್ಚಾಗಬ ಹುದೆಂದು ಅಂದಾಜಿಸಲಾಗಿದೆ. ಹಳ್ಳಿಗಳಿಗೆ ಹಿಂದಿರುಗಲು ಬೇಕಾದ ಪ್ರೋತ್ಸಾಹವಿಲ್ಲ. ನಮ್ಮ ಚಿಂತಕರು, ಸಾಹಿತಿಗಳು, ಪ್ರಕೃತಿಯ ಆರಾಧಕ ಪರಿಸರವಾದಿಗಳು ಬಹುತೇಕ ಇರುವುದು ನಗರಗಳೆಂಬ ದಂತಗೋಪುರಗಳಲ್ಲಿ. ಇಂತಹ ನಗರವಾಸಿ ಚಿಂತಕರ, ಸಾಹಿತಿಗಳ ಪರಿಸರವಾದಿಗಳ ಬರೆಹಗಳಲ್ಲಿ ಇರುವ, ಬರುವ, ಗ್ರಾಮಾಯಣಗಳನ್ನು ಗಮನಿಸುವಾಗ ಬರಹಕ್ಕೂ ಬದುಕಿಗೂ ಎಷ್ಟೊಂದು ಅಗಾಧ ಅಂತರವೆಂದು ಅನ್ನಿಸುತ್ತದೆ!

ಇನ್ನೊಂದೆಡೆ ಎಲ್ಲರೂ ರಾಜಕೀಯವಾಗಿ ತಮ್ಮತಮ್ಮ ಇಷ್ಟದೇವತೆಗಳನ್ನು ಆರಾಸುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಈ ಇಷ್ಟದೇವತಾರಾಧನೆಯಲ್ಲಿ ಎಲ್ಲ ತರ್ಕ-ಕುತರ್ಕಗಳ ವ್ಯಾಪ್ತಿಯನ್ನು ಮೀರಿದ ವ್ಯಾಖ್ಯಾನಗಳು ಪ್ರಚಲಿತವಾಗಿವೆ. ಜನರು ರಾಜಕೀಯವಾಗಿ ಚಿಂತಿಸಬೇಕು, ನಿಜ: ಆದರೆ ಈ ಚಿಂತನೆಯ ಗುರಿ ಲೋಕಹಿತ, ದೇಶಹಿತವಾಗಿರಬೇಕೇ ಹೊರತು ಸ್ವಹಿತ, ಸ್ವಜನಹಿತವಲ್ಲ. ನಾವೆಲ್ಲ ಒಂದು ಎಂದು ಹೇಳುವ ನಾಯಕಮಣಿಗಳೇ ಆಯಾಯ ಜಾತಿ ಸಮ್ಮೆಳನಗಳಲ್ಲಿ ಅವರವರಿಗೆ ಮೀಸಲು, ವಿಶಿಷ್ಟ ಅನುಕೂಲ-ಅವಕಾಶಗಳು, ಸ್ಥಾನಮಾನಗಳು ಬೇಕು ಎಂದು ಹೇಳಿ ಚಪ್ಪಾಳೆಗಿಟ್ಟಿಸಿಕೊಳ್ಳುತ್ತಾರೆ. ಮೈಸೂರಿನಲ್ಲೊಂದು ವಿಶ್ವಮಾನವ ಒಕ್ಕಲಿಗರ ಸಂಘವಿತ್ತೆಂದು ಕೇಳಿದ್ದೇನೆ. ನನ್ನೂರಲ್ಲಿ ಒಂದು ಹಿಂದೂ ಮಲೆಯಾಳಿ ಸಂಘ ಹುಟ್ಟಿದೆ. ಇವೆಲ್ಲ ದೇಶವನ್ನು ಕಟ್ಟುತ್ತವೆಂದು ತಿಳಿದರೆ ಮೂರ್ಖತನ.

ಇಷ್ಟೇ ಅಲ್ಲ; ಸಾಹಿತ್ಯದಲ್ಲೂ ಜಾತಿವಾರು ವಿಂಗಡಣೆ ವಿಸ್ತಾರವಾಗುತ್ತಿದೆ. ಕರ್ನಾಟಕ ಕವಿ ಚರಿತ್ರೆ ಬರೆದ ಆರ್. ನರಸಿಂಹಾಚಾರ್ಯರು “I can only say that the question of faith has no place in the republic of letters..” ಎಂದರು. ಆದರೆ ಬರವಣಿಗೆಗಳು ಜಾತಿ-ಧರ್ಮ-ಸಿದ್ಧಾಂತಗಳ ಆಧಾರದಲ್ಲಿ ವಿಮರ್ಶೆಗೊಳಗಾಗುತ್ತಿವೆ. ಸಾಹಿತ್ಯ ಅಂತಲ್ಲ ಎಲ್ಲ ಬಗೆಯ ಶಿಕ್ಷಣಗಳು ಕಲುಷಿತವಾಗಿವೆ, ಇಲ್ಲವೇ ಆಗುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲೂ ಜಾತಿ, ಧರ್ಮ, ರಾಜಕೀಯ ಪಕ್ಷ ಇವೆಲ್ಲ ಮುಖ್ಯವಾಗುತ್ತಿವೆ. ಇವನ್ನೆಲ್ಲ ಖಂಡಿಸಬೇಕಾದ ಸಾಹಿತಿಗಳು ಒಂದೋ ವೌನಕ್ಕೆ ಶರಣಾಗಿ, ಇಲ್ಲವೇ ಜಾಣ ಕುರುಡು-ಕಿವುಡುಗಳನ್ನು ಪ್ರದರ್ಶಿಸಿ ಹೌದೇ ಎಂಬ ಪೆದ್ದು ಅಚ್ಚರಿಯನ್ನು ತೋರುತ್ತ, ಇಲ್ಲವೇ ಉಷ್ಣಪಕ್ಷಿಗಳಂತೆ (ಅವು ಹಾಗೆ ಮಾಡುತ್ತವೆಯೆಂದು ಕೇಳಿದ್ದೇನೆ-ನೋಡಿಲ್ಲ!) ನೆಲದಲ್ಲಿ ತಲೆಯನ್ನು ಹೂತು ಈ ಜಗತ್ತಿಗೂ ತನಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ.

ನಾವು ಸ್ವಾತಂತ್ರ್ಯ ಪಡೆದಿದ್ದೇವೆ; ಸ್ವತಂತ್ರರಾಗಿದ್ದೇವೆ. ಆದರೆ ಈ ಸ್ವಾತಂತ್ರ್ಯವು ಸ್ವೇಚ್ಛೆಯಾಗಿ ಪರಿಣಮಿಸಿದ್ದರಿಂದ ರಾಜಕೀಯವೂ ಸೇರಿದಂತೆ ಎಲ್ಲಾ ರಂಗಗಳಲ್ಲೂ ದಿನನಿತ್ಯ ನಡೆಯುವ ದುರಂತಗಳನ್ನು ತಮಾಷೆಯಾಗಿ ಸ್ವೀಕರಿಸುವ ಜಾಯಮಾನಕ್ಕೆ ಒಗ್ಗಿಹೋಗಿದ್ದೇವೆ. ಟಿಆರ್‌ಪಿ ರೇಟಿಂಗಿನಲ್ಲೇ ಬದುಕನ್ನು ಈಗ ಅಳೆಯಬೇಕಾಗಿದೆ. ನಮ್ಮ ಹಿಂದಿನವರು ತಮ್ಮ ಕಾಲವೇ ಒಳ್ಳೆಯದಿತ್ತೆಂದು ಹೇಳುತ್ತಿದ್ದರು. ಪ್ರಾಯಃ ಎಲ್ಲ ಕಾಲಗಳಲ್ಲೂ ಹೀಗೇ ಹೇಳುವುದೂ ಒಂದು ನಟನೆಯೇ ಇರಬೇಕು. ಅದನ್ನೀಗ ಕಲೆಯಾಗಿ ಪರಿವರ್ತಿಸಿದ್ದೇವೆ. ಅಷ್ಟರ ಮಟ್ಟಿಗೆ ನಾವು ಧನ್ಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News