ಮರದ ನೆರಳಲ್ಲಿ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

Update: 2016-03-21 18:18 GMT

ಯಳಂದೂರು, ಮಾ.21: ತಾಲೂಕಿನ ಮದ್ದೂರು ಗ್ರಾಮದ ಸರಕಾರಿ ಪ್ರೌಢಶಾಲೆಗೆ ನಿವೇಶನ ಮಂಜೂರಾಗಿದ್ದರೂ ಕೂಡ ಜನ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕೊಠಡಿ ನಿರ್ಮಾಣಕ್ಕೆ ಅನುದಾನದ ಕೊರತೆ ಎದುರಾಗಿದ್ದು, ಅಪೂರ್ಣ ಕಾಮಗಾರಿ ನಡೆದಿರುವುದರಿಂದ ಶಾಲಾ ಮಕ್ಕಳು ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಪಡಶಾಲೆ ಮತ್ತು ಆವರಣದಲ್ಲಿ ಬೆಳೆದಿರುವ ಮರದ ನೆರಳಿನಲ್ಲಿ ಪಾಠ ಕೇಳುವ ದುಸ್ಥಿತಿ ಬಂದೊದಗಿದೆ. ಮದ್ದೂರು ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದರಿಂದ 7 ನೆ ತರಗತಿಯ ವರೆಗೆ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಗ್ರಾಮದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯಲು ಅಲ್ಲಿನ ಮಕ್ಕಳು ಪಕ್ಕದ ಯಳಂದೂರು ಅಥವಾ ಅಗರ-ಮಾಂಬಳ್ಳಿ ಗ್ರಾಮವನ್ನು ಅವಲಂಬಿಸಬೇಕಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಂದಿನ ಶಾಸಕರಾಗಿದ್ದ ಮದ್ದೂರಿನ ಸ್ವಗ್ರಾಮದವರೇ ಆದ ಎಸ್. ಬಾಲರಾಜು ತಮ್ಮೂರಿಗೆ ಪ್ರೌಢಶಾಲೆಯನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಪ್ರೌಢಶಾಲೆಗೆ ನಿವೇಶನದ ಕೊರತೆ ಎದುರಾದಾಗ ಅದನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ನಂತರ ಆಯ್ಕೆಯಾದ ಶಾಸಕರಾದ ದ್ರುವನಾರಾಯಣ, ಜಿ.ಎನ್.ನಂಜುಂಡಸ್ವಾಮಿ, ಎಸ್.ಜಯಣ,್ಣ ರವರ ಇಚ್ಛಾಶಕ್ತಿಯ ಕೊರತೆಯಿಂದ ಪ್ರೌಢಶಾಲಾ ಮಕ್ಕಳು ಹೇಳಲು ಸಾಧ್ಯವಾಗದ ಪಡಿಪಾಟಲು ಅನುಭವಿಸುವಂತಾಗಿದೆ. ಪ್ರಾರಂಭದಲ್ಲಿ 1 ರಿಂದ 7ನೆ ತರಗತಿವರೆಗೆ ಒಟ್ಟು 270 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ನಂತರ 2006 ರಲ್ಲಿ 8 ರಿಂದ 10ನೆ ತರಗತಿವರೆಗೆ ಮೇಲ್ದರ್ಜೆಗೆ ಶಾಲೆಯನ್ನು ಏರಿಸಲಾಯಿತು. ಆದ್ದರಿಂದ ಪ್ರೌಢ ಶಾಲಾ ಕೊಠಡಿ ನಿರ್ಮಾಣಕ್ಕೆ ಹೊಸದಾಗಿ ಸರಕಾರಿ ನಿವೇಶನ ಗುರುತಿಸಿ ನಂತರ 2008 ರಲ್ಲಿ 22 ಲಕ್ಷ ರೂ.ವೆಚ್ಚದಲ್ಲಿ ಗ್ರಾಮೀಣ ಮೂಲಸೌಕರ್ಯ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿ 22 ಲಕ್ಷ ರೂ. ವೆಚ್ಚದಲ್ಲಿ ಹಣ ಬಿಡುಗಡೆ ಮಾಡಲಾಗಿತ್ತು. ಕಟ್ಟಡ ನಿರ್ಮಿಸಲು ಸರಕಾರಿ ಜಾಗ ಶಾಲೆಯ ಹೆಸರಿಗೆ ನೋಂದಾಯಿಸಲು 3 ವರ್ಷಗಳ ಕಾಲ ವಿಳಂಬವಾಯಿತು. ಟ್ಟಡ ಕಾಮಗಾ ರಿಯನ್ನು 2011ರಲ್ಲಿ ಪ್ರಾರಂಭಿಸಲಾಗಿದ್ದು, ಆದರೆ ತಯಾರಿಸಿದ ಕ್ರಿಯಾ ಯೋಜನೆಗಿಂತ ವೆಚ್ಚ ಹೆಚ್ಚಾದ ಕಾರಣ ಕಟ್ಟಡದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ಸ್ಥಗಿತಗೊಂಡಿದೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟದಲ್ಲೇ ಸರಕಾರಿ ಹಿರಿಯ ಪ್ರೌಢ ಶಾಲೆಯ ಒಟ್ಟು 120 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಜಾಗದ ಕೊರತೆಯಿಂದ ಒಂದೇ ಕಟ್ಟಡದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವಂತಾಗಿದೆ. ಶಾಲಾ ಮಕ್ಕಳು ಆಟೋಟವಾಡಲು ಜಾಗದ ಕೊರತೆ ಇರುವುದರಿಂದ ಪ್ರಾಥಮಿಕ ಶಾಲಾ ಮಕ್ಕಳನ್ನು ಆಟ ಆಡಲು ಹೊರಗೆ ಬಿಟ್ಟಾಗ ಪ್ರೌಢ ಶಾಲಾ ಮಕ್ಕಳಿಗೆ ಪಾಠ ಮಾಡವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ವಂತ ಕಟ್ಟಡವಿಲ್ಲದ ಕಾರಣ 10 ವರ್ಷಗಳಿಂದಲೂ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಪಾಠ ಪ್ರವಚನ ಕೇಳುವಂತಾಗಿದೆ. ವಾಚನಾಲಯ, ರೀಡಿಂಗ್ ರೂಂ, ಸ್ಟಾಪ್ ರೂಂ, ಇದರ ಜತೆಗೆ ಪ್ರತ್ಯೇಕವಾಗಿ ಮುಖ್ಯ ಶಿಕ್ಷಕರಿಗೆ ಕೊಠಡಿ ಲಭ್ಯವಿಲ್ಲದೆ ಅದನ್ನೂ ಇರುವ ಜಾಗದಲ್ಲೇ ನಿರ್ವಹಣೆ ಮಾಡಲಾಗುತ್ತಿದೆ. ಟ್ಟಡ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಶಾಸಕ ಮತ್ತು ಸಂಸದರನ್ನು ಭೇಟಿ ಮಾಡಿ ಕಾಮಗಾರಿ ಸ್ಥಗಿತಗೊಂಡಿರುವ ಹಿರಿಯ ಪ್ರೌಢ ಶಾಲಾ ಕಟ್ಟಡದ ಬಗ್ಗೆ ಹಲವು ಬಾರಿ ತಿಳಿಸಲಾಗಿದೆ. ಆದರೆ ಹೊಸದಾಗಿ ಕ್ರಿಯಾ ಯೋಜನೆ ತಯಾರಿಸಿ ಮುಂದುವರಿದ ಕಾಮಗಾರಿ ಪಟ್ಟಿಗೆ ಸೇರಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ್ಛಾಶಕ್ತಿ ವಹಿಸಲು ಮನವಿ: ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ವಂತ ಕಟ್ಟಡ ಇಲ್ಲದೆ 10 ವರ್ಷಗಳಿಂದ ಕಿರಿಯ ಪ್ರಾಥಮಿಕ ಶಾಲೆ ಕೊಠಡಿಯಲ್ಲಿ ಪಾಠ ಕೇಳುವಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಕೊಠಡಿಯ ಹೊರಗೆ ಆಟೋಟ ಹಾಗೂ ಪಾಠ ಪ್ರವಚನ ಕೇಳಲು ವಿದ್ಯಾರ್ಥಿಗಳಿಗೆ ತುಂಬ ತೊಂದರೆ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿವಹಿಸಿ ಸಮಸ್ಯೆ ನಿವಾರಣೆಗೆ ಮುಂದಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಪೋಷಕರು ಮನವಿ ಮಾಡಿದ್ದಾರೆ.

ಮದ್ದೂರು ಗ್ರಾಮದ ಸರಕಾರಿ ಪ್ರೌಢ ಶಾಲೆ ಕಟ್ಟಡದ ಕಾಮಗಾರಿ ಹಣದ ಕೊರತೆಯಿಂದ ಅರ್ಧಕ್ಕೆ ಸ್ಥಗಿತಗೊಂಡಿದೆ. ಈಗಾಗಲೇ ಈ ಬಗ್ಗೆ ಸಂಸದ ಆರ್ ಧ್ರುವನಾರಾಯಣ ಹಾಗೂ ಶಾಸಕ ಎಸ್.ಜಯಣ್ಣ ಅವರ ಗಮನಕ್ಕೆ ತಂದಿದ್ದೇವೆ. ಅವರು ತಮ್ಮ ಅನುದಾನಗಳಿಂದ ಹಣ ಬಿಡುಗಡೆಗೊಳಿಸಿ ಶೀಘ್ರದಲ್ಲಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದೆಂದು ಭರವಸೆ ನೀಡಿದ್ದಾರೆ.

-ಮಲ್ಲಿಕಾರ್ಜುನ ಯಳಂದೂರು ಕ್ಷೇತ್ರ ಶಿಕ್ಷಣಾಧಿಕಾರಿ.

Writer - ಗೂಳಿಪುರ ನಂದೀಶ.ಎಂ.

contributor

Editor - ಗೂಳಿಪುರ ನಂದೀಶ.ಎಂ.

contributor

Similar News