ವಿದ್ಯುತ್ ಸಮಸ್ಯೆ: ರಾಜೀನಾಮೆಗೆ ಮುಂದಾದ ಶಾಸಕ ದತ್ತ
ಬೆಂಗಳೂರು, ಮಾ.24: ಚಿಕ್ಕಮಗಳೂರು ಜಿಲ್ಲೆ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಅಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಹಿನ್ನೆಲೆಯಲ್ಲಿ ಸರಕಾರದ ನಿರ್ಲಕ್ಷ ಧೋರಣೆ ಖಂಡಿಸಿ ಶಾಸಕ ವೈಎಸ್‌ವಿ ದತ್ತ, ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಅಪರೂಪದ ಪ್ರಸಂಗಕ್ಕೆ ವಿಧಾನಸಭೆ ಸಾಕ್ಷಿಯಾಯಿತು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯದಲ್ಲಿ ಬರ ಮತ್ತು ವಿದ್ಯುತ್ ಅಭಾವ ಸಂಬಂಧ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಡೂರು ಕ್ಷೇತ್ರಕ್ಕೆ ಅಸಮರ್ಪಕ ವಿದ್ಯುತ್ ಪೂರೈಕೆ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಗೆ ತಾನು ಉತ್ತರ ನೀಡಲು ಆಗುತ್ತಿಲ್ಲ. ಹೀಗಾಗಿ ರಾಜೀನಾಮೆ ಪತ್ರ ಸಿದ್ಧಪಡಿಸಿ ತಂದಿದ್ದೇನೆ ಅದನ್ನು ಓದುತ್ತೇನೆ ಎಂದು ಭಾವುಕರಾದರು.
ಕೂಡಲೇ ಮಧ್ಯೆ ಪ್ರವೇಶಿಸಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ನಿಮ್ಮ ರಾಜೀನಾಮೆ ಪತ್ರವನ್ನು ಓದುವುದು ಸರಿಯಲ್ಲ. ನಿಮ್ಮ ಸಮಸ್ಯೆ ಏನೆಂದು ಬಿಡಿಸಿ ಹೇಳಿ ಸರಕಾರದಿಂದ ಪರಿಹಾರ ಕಲ್ಪಿಸುವ ಕ್ರಮದ ಬಗ್ಗೆ ಮುಂದಿನ ಆಲೋಚನೆ ಮಾಡೋಣ ಎಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ದತ್ತ, ‘ಕಡೂರು ಕ್ಷೇತ್ರ ವ್ಯಾಪ್ತಿ ಮಂಚೇನಹಳ್ಳಿಗೆ ಚಿತ್ರದುರ್ಗ ಜಿಲ್ಲೆ ಗಡಿಭಾಗದಲ್ಲಿದ್ದು, ಆ ಗ್ರಾಮದ ಸುತ್ತಮುತ್ತಲಿನಹಳ್ಳಿಗಳಿಗೆ ಹಿರಿಯೂರಿನಿಂದ ಬರಬೇಕಿದ್ದ ವಿದ್ಯುತ್ತನ್ನು ಹೊಸದುರ್ಗಕ್ಕೆ ಮಾರ್ಗ ಬದಲಾವಣೆ ಹಿನ್ನೆಲೆಯಲ್ಲಿ ಸಮಸ್ಯೆ ಆಗಿದ್ದು ಕೂಡಲೇ ಅದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು. ತೀವ್ರ ಸ್ವರೂಪದ ವಿದ್ಯುತ್ ಸಮಸ್ಯೆಯಿಂದ ಕಂಗೆಟ್ಟಿರುವ ಕ್ಷೇತ್ರದ ಜನತೆ ತನ್ನ ಮೊಬೈಲ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಹೀಗಾಗಿ ಅತ್ಯಂತ ಸಂವೇದನಾಶೀಲ ವ್ಯಕ್ತಿಯಾಗಿರುವ ತಾನು ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಮುಂದಾಗಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ನನ್ನ ಕ್ಷೇತ್ರಕ್ಕೆ ಬೆಸ್ಕಾಂ, ಮೆಸ್ಕಾಂ ಹಾಗೂ ಚೆಸ್ಕಾಂ ಸೇರಿ ಮೂರು ನಿಗಮಗಳಿಂದ ವಿದ್ಯುತ್ ಪೂರೈಕೆ ಆಗುತ್ತಿದ್ದು, ಕ್ಷೇತ್ರದಲ್ಲಿನ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವೈಎಸ್‌ವಿ ದತ್ತ ರಾಜ್ಯ ಸರಕಾರವನ್ನು ಆಗ್ರಹಿಸಿದರು.