ನಕಲಿ ವೈದ್ಯರ ವಿರುದ್ಧ ಆಯುರ್ವೇದ, ಯುನಾನಿ ಮಂಡಳಿ ದಾಳಿ

Update: 2016-03-30 08:39 GMT

ಸಾಗರ, ಮಾ.29: ಕ್ಯಾನ್ಸರ್, ಕಿಡ್ನಿ ವೈಫಲ್ಯ, ಮಧುಮೇಹ ದಂತಹ ವಾಸಿಯಾಗದ ರೋಗಗಳ ವಾಸಿಮಾಡುವ ವಂಶಪರಂಪರಾಗತ ವೈದ್ಯನೆಂದು ಹೇಳಿ ಕೊಂಡು ಸಾವಿರಾರು ಸಾರ್ವಜನಿಕರಿಗೆ ಗಿಡಮೂಲಿಕೆ ಬೇರು,ಪುಡಿ ಮಿಶ್ರಣ ನೀಡಿ ಹಣ ಪಡೆಯುತ್ತಿದ್ದ ಇಲ್ಲಿನ ನರಸೀಪುರದ ನಾರಾಯಣಮೂರ್ತಿ ಮನೆ ಮೇಲೆ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಕುರಿತು ವರದಿಯಾಗಿದೆ.

 ಮಾ.27 ರಂದು ರವಿವಾರ ಮಧ್ಯಾಹ್ನ 3:45ಕ್ಕೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಗೌತಮಪುರ ಗ್ರಾಪಂ ವ್ಯಾಪ್ತಿಯ ನರಸೀಪುರ ಎನ್.ಎಸ್.ನಾರಾಯಣಮೂರ್ತಿ ಯವರ ಮನೆಗೆ ತಂಡದ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.

ಕಾಯ್ದೆಯ ಸೆಕ್ಷನ್ 40(2) ರಂತೆ ಈ ಕುರಿತು ದೂರು ನೀಡಲು ಅಧಿಕಾರ ಹೊಂದಿರುವ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ನೋಂದಣಾಧಿಕಾರಿ ಡಾ. ತಿಮ್ಮಪ್ಪ ಶೆಟ್ಟಿ ಅವರು, ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ಕಾಯ್ದೆಯ ಅನುಸಾರ ಸಾಗರದ ಪ್ರಥಮದರ್ಜೆ ನ್ಯಾಯಾಧೀಶರಿಗೆ ಔಷಧಗಳ ಸ್ಯಾಂಪಲ್‌ಗಳ ಸಹಿತ ಮಹಜರು ವರದಿಗಳೊಂದಿಗೆ ದೂರು ನೀಡಿ ಸೂಕ್ತ ಕಾನೂನು ಕ್ರಮಕ್ಕೆ ಪ್ರಕರಣ ಒಪ್ಪಿಸಿರುತ್ತಾರೆ. ಉನ್ನತ ಅಧಿಕಾರಿಗಳ ತಂಡ ತಪಾಸಣೆ ನಡೆಸುವ ಸಂದರ್ಭ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಕ್ಯಾನ್ಸರ್,ಕಿಡ್ನಿವೈಫಲ್ಯ, ಮಧು ಮೇಹದಿಂದ ಬಳಲುತ್ತಿರುವ ಸುಮಾರು 500 ರೋಗಿಗಳು ಪಾರಂಪರಿಕ ವೈದ್ಯ ನಾರಾಯಣಮೂರ್ತಿಯ ಮನೆಮುಂದೆ ಬಿಸಿಲಿನಲ್ಲಿ ನಿಂತು ಔಷಧಿಗಾಗಿ ಸರದಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಅಧಿಕಾರಿಗಳ ಗಮನಕ್ಕೆ ಬಂದಿದೆ.

ವೈದ್ಯ ನಾರಾಯಣಮೂರ್ತಿಯನ್ನು ತೀವ್ರ ವಿಚಾರಣೆ ನಡೆಸಿರುವ ಅಧಿಕಾರಿಗಳಿಗೆ ಸ್ಪಷ್ಟವಾದ ಪ್ರತಿಕ್ರಿಯೆ ದೊರೆತಿದೆ. ಯಾವುದೇ ವೈದ್ಯಕೀಯ ಪದವಿಯಾಗಲಿ, ನೋಂದಣಿಯಾಗಲಿ ಇರುವುದಿಲ್ಲ ಎಂದಿದ್ದಾರೆ. ರೋಗ ನಿವಾರಣೆಗೆ ನೀಡುವ ಔಷಧ ತೆಯಾರಿಕೆಯ ವಿಧಾನಗಳ ಕುರಿತು ಯಾವುದೇ ನಿರ್ದಿಷ್ಟ ನೀತಿ-ನಿಯಮಗಳ ಪಾಲನೆಯಿಲ್ಲ.ಔಷಧ ತಯಾರಿಸುವ ಅನಧಿಕೃತ ಜಾಲವಿರುವ ಕುರಿತು ತನಿಖಾ ತಂಡಕ್ಕೆ ಮಾಹಿತಿ ಲಭ್ಯವಾಗಿದೆ.

ನಾರಾಯಣಮೂರ್ತಿ ಕುಟುಂಬ ಕಳೆದ 400 ವರ್ಷಗಳ ಹಿಂದೆ ತಮಿಳುನಾಡು ರಾಜ್ಯದಿಂದ ವಲಸೆ ಬಂದು ಕರ್ನಾಟಕದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನರಸೀಪುರದಲ್ಲಿ ನೆಲೆನಿಂತು ಸುತ್ತಲಿನ ನಿವಾಸಿಗಳ ಜನರಿಗೆ ಸಾಮಾನ್ಯ ರೋಗಗಳ ನಿವಾರಣೆಗೆ ಸ್ಥಳಿಯವಾಗಿ ದೊರೆಯುವ ಸಿಂದೂಕ, ಕುಟಜ, ಧರಸ, ಕಕ್ಕೆ ಮೊದಲಾದ ಗಿಡಮೂಲಿಕೆಗಳಿಂದ ರೋಗಗಳನ್ನು ವಾಸಿ ಮಾಡುವ ಚಿಕಿತ್ಸೆ ನೀಡುತ್ತಿರುವ ಕುರಿತು ವಿವರಿಸಿದ್ದಾರೆ.

 ನಕಲಿ ವೈದ್ಯರ ಪ್ರಕರಣದ ಗಂಭೀರತೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಗಮನಕ್ಕೆ ಬಂದನಂತರ ಎಸ್ಪಿ ರವಿ ಡಿ.ಚೆನ್ನಣ್ಣನವರ ಸೂಚನೆಯ ಮೇರೆಗೆ ಇದೊಂದು ಅಪರೂಪದ ಪ್ರಕರಣ ಮತ್ತು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ನೋಂದಣಾಧಿಕಾರಿ ಡಾ.ತಿಮ್ಮಪ್ಪ ಶೆಟ್ಟಿ ಅವರಿಗೆ ತನಿಖೆ ಮತ್ತು ಪ್ರಕರಣ ದಾಖಲಿಸುವ ವಿಶೇಷ ಅಧಿಕಾರವಿರುವ ಕಾರಣ ನೇರವಾಗಿ ನ್ಯಾಯಾಧೀಶರಿಗೆ ಪ್ರಕರಣದ ದೂರು ಸಲ್ಲಿಸಿದ್ದಾರೆ ಎಂಬ ಮಾಹಿತಿ ನೀಡಿದ ಪರಿಣಾಮ ಸಾಗರದ ಪೊಲೀಸ್ ಅಧಿಕಾರಿಗಳು ಪ್ರಕರಣದ ಕುರಿತು ಕಾನೂನು ಅಧ್ಯಯನಕ್ಕೆ ಮುಂದಾಗಿದ್ದಾರೆ.

ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಸ್ವಾಯತ್ತ ಸಂಸ್ಥೆಯಾಗಿದ್ದು, ನಕಲಿ ವೈದ್ಯರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಮುಖ್ಯನಾಯ ಮೂರ್ತಿಗಳಿಗೂ ದೂರು ಸಲ್ಲಿಸುವ ಅವಕಾಶವನ್ನು ಹೊಂದಿರುತ್ತಾರೆ. ಸಾಗರದ ನ್ಯಾಯಾಧೀಶರು ಆದೇಶ ಸಿದ್ಧಪಡಿಸಿ ಪೊಲೀಸ್ ಅಧಿಕಾರಿಗಳಾದ ಸಾಗರದ ಎಎಸ್ಪಿ ನಿಶಾಜೇಮ್ಸ್ ಅವರಿಗೆ ಅಥವಾ ಶಿವಮೊಗ್ಗ ಅಡಿಷನಲ್ ಎಸ್ಪಿ ವಿಷ್ಣುವರ್ಧನ ಅವರಿಗೆ ಕಾನೂನು ಕ್ರಮಕ್ಕೆ ಸೂಚಿಸುವ ಸಾಧ್ಯತೆಯಿದೆ.

ಪೊಲೀಸ್ ಅಧಿಕಾರಿಗಳು 24 ಗಂಟೆಯೊಳಗೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರಗಿಸ ಬೇಕಿದೆ. ಒಂದು ವೇಳೆ ಪೊಲೀಸ್ ಅಧಿಕಾರಿಗಳು ಕಾಲಮಿತಿಯಲ್ಲಿ ಸೂಕ್ತ ಕ್ರಮವಹಿಸದೆ ಇದ್ದಲ್ಲಿ ಪ್ರಕರಣದ ಕುರಿತು ನಿರ್ಲಕ್ಷ್ಯ ತನ ಕಂಡುಬಂದಲ್ಲಿ ಅಂತಹ ಅಧಿಕಾರಿಯ ತಲೆದಂಡವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ತಪಾಸಣೆಯಿಂದ ಕಂಡುಬಂದ ಅಂಶಗಳು

► ನರಸೀಪುರದ ನಾರಾಯಣಮೂರ್ತಿಯವರ ಬಳಿ ಯಾವುದೇ ಲೇಬಲ್‌ಗಳಿಲ್ಲದ ಔಷಧ ಪ್ಯಾಕೆಟ್‌ಗಳಿರುವುದು, ಔಷಧಗಳಿಗೆ ಕನಿಷ್ಠ 150 ರೂ.ನಿಂದ 300 ರೂ. ಶುಲ್ಕ ಪಡೆಯುತ್ತಿರುವುದು ಕಂಡು ಬಂದಿದೆ.

 ►ತಯಾರಿಸಿ ಇಟ್ಟುಕೊಂಡಿರುವ 4-5 ವಿವಿಧ ಚೂರ್ಣಗಳನ್ನು ಬಳಸಿ ವಿವಿಧ ರೋಗಿಗಳಿಗೆ ಕ್ಯಾನ್ಸರ್, ಕಿಡ್ನಿ ವೈಫಲ್ಯ, ಮಧುಮೇಹ ರೋಗ ನಿವಾರಣೆಗೆ ನೀಡುತ್ತಿರುವ ಕುರಿತು ವೈದ್ಯ ನಾರಾಯಣಮೂರ್ತಿ ಮತ್ತು ರೋಗಿಗಳು ಒಂದೇ ಮಾದರಿಯ ಉತ್ತರ ನೀಡಿದ್ದಾರೆ.

► ರೋಗಗಳ ನಿವಾರಣೆ ನೆಪದಲ್ಲಿ ಯಾವುದೇ ಪರವಾನಿಗೆಯಿಲ್ಲದೆ ದೊಡ್ಡ ಪ್ರಮಾಣದಲ್ಲಿ ಔಷಧಗಳ ಚೂರ್ಣ ತಯಾರಿಸಿ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಇವರ ಉದ್ದೇಶ ಹೆಚ್ಚಿನ ಹಣ ಗಳಿಸುವ ಏಕೈಕ ಉದ್ದೇಶವಾಗಿದೆ ಎಂಬ ಅಂಶ ಮೇಲ್ನೋಟಕ್ಕೆ ಕಂಡುಬರುತ್ತಿದೆ.

Writer - ಇಮ್ರಾನ್ ಸಾಗರ್

contributor

Editor - ಇಮ್ರಾನ್ ಸಾಗರ್

contributor

Similar News