ನಮ್ಮ ಕ್ರಿಕೆಟ್ ಹುಚ್ಚು

Update: 2016-03-31 18:22 GMT

ಮೊನ್ನೆ ಆಸ್ಟ್ರೇಲಿಯಾದೊಂದಿಗಿನ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ ಒಕ್ಕೈಯಾಗಿ ಭಾರತಕ್ಕೆ ಗೆಲುವು ತಂದದ್ದೇ ತಡ, ಭಾರತ ಒಂದು ಕ್ಷಣ ರೋಮಾಂಚ ಸ್ತಬ್ಧವಾಯಿತು. ಆತನನ್ನು ಅತಿಮಾನುಷನೆಂಬಂತೆ ರಂಜಿಸಿ ಹೊಗಳಲಾಯಿತು. ಮಾಧ್ಯಮಗಳು ಅತ್ಯಂತ ರೋಚಕವಾದ ರೀತಿಯಲ್ಲಿ ಆತನನ್ನು ವರ್ಣಿಸತೊಡಗಿದವು. ಕ್ರಿಕೆಟಿನ ಭಾರತ ರತ್ನ ಸಚಿನ್ ತೆಂಡುಲ್ಕರ್‌ಗೆ ಸರಿಮಿಗಿಲಾದ ಆಟಗಾರನೆಂಬಂತೆ ಆತನನ್ನು ಬಿಂಬಿಸಲಾಯಿತು. ಕ್ರಿಕೆಟ್ ಒಂದು ತಂಡದ ಆಟ ಎಂಬುದನ್ನು, ಮತ್ತು ಒಬ್ಬನ ಕುರಿತಾದ ಅತಿಶಯವಾದ ಹೊಗಳಿಕೆ ಇನ್ನುಳಿದ ಆಟಗಾರರ ಮೇಲೆ ಎಂತಹ ಪರಿಣಾಮವನ್ನು ಬೀರಬಹುದು ಎಂಬ ತಿಳಿವಳಿಕೆಯೇ ಇಲ್ಲದವರಂತೆ ವರದಿಗಳು ಎಲ್ಲೆಡೆ ತುಂಬಿದವು. 

ವಿರಾಟ್ ಕೊಹ್ಲಿ ಚೆನ್ನಾಗಿಯೇ ಆಡಿದ. ಆದರೆ ಟೆಸ್ಟ್ ಕ್ರಿಕೆಟಿನ ವ್ಯಾಪ್ತಿಯನ್ನು, ಮತ್ತು 20 ಓವರ್‌ಗಳ ಕ್ರಿಕೆಟಿನ ಮಿತಿಯನ್ನು ಅರಿತವರು ಅದನ್ನು ಯಾರೊಬ್ಬ ಕ್ರಿಕೆಟ್ ಆಟಗಾರನ ಮಾನದಂಡದ ಅಳತೆಗೋಲಾಗಿ ಬಳಸುವುದಿಲ್ಲ. ಒಂದೇ ಒಂದು ರಣಜಿ ಮ್ಯಾಚ್ ಆಡದವರೂ 20 ಓವರಿನ ಪಂದ್ಯಗಳಲ್ಲಿ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗರೆಯುವುದನ್ನು, ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಟೆಸ್ಟ್ ಆಟಗಾರರು 20 ಓವರಿನ ತಂಡಕ್ಕೆ ಅಯ್ಕೆಯಾಗದಿರುವುದನ್ನು, ಅಫ್ಘಾನಿಸ್ತಾನವು ವಿಂಡೀಸರನ್ನು ಸೋಲಿಸುವುದನ್ನು ಕಾಣುತ್ತೇವೆ. ಕ್ರಿಕೆಟ್ ಕ್ರೀಡೆಯಲ್ಲಿ ನಿಜವಾದ ಖ್ಯಾತಿ ಸಿಗಬೇಕಾದ್ದು 50 ಓವರಿನ ಕ್ರಿಕೆಟ್‌ಗೂ ಅಲ್ಲ; ಟೆಸ್ಟ್ ಕ್ರಿಕೆಟ್‌ಗೆ. ಅಲ್ಲಿ ತಾಳ್ಮೆ, ದಕ್ಷತೆ, ಗಟ್ಟಿತನ ಇವೆಲ್ಲವೂ ಅನಾವರಣಗೊಳ್ಳುತ್ತವೆ. ವಿವಿಎಸ್ ಲಕ್ಷ್ಮಣ್ ಕಳೆದ 50 ವರ್ಷಗಳಲ್ಲಿ ವಿಶ್ವದಲ್ಲೇ ಅತ್ಯುತ್ತಮ ಟೆಸ್ಟ್ ಇನ್ನಿಂಗ್ಸ್ ಕಟ್ಟಿದ ಹೆಗ್ಗಳಿಕೆಗೆ ಪಾತ್ರರಾದರೂ 20 ಓವರಿನ ಕ್ರಿಕೆಟ್‌ನಲ್ಲಿ ವಿಫಲರಾದರು. ಗವಾಸ್ಕರ್, ರಾಹುಲ್ ದ್ರಾವಿಡ್ ಮಾತ್ರವಲ್ಲ, ಸಚಿನ್ ತೆಂಡುಲ್ಕರ್ ಕೂಡಾ ಅಷ್ಟೇ. 

ಒಟ್ಟಿನಲ್ಲಿ 20 ಓವರಿನ ಕ್ರಿಕೆಟ್ ನೀಡುವ ಮನರಂಜನೆಯು ಇನ್ಯಾವ ಪಂದ್ಯದಲ್ಲೂ ಸಿಕ್ಕುವುದಿಲ್ಲವೆಂಬಂತೆ ಈ ದೇಶದ ಜನರು ಮುಗಿಬಿದ್ದು ನೋಡುವುದರಿಂದ ಕ್ರಿಕೆಟ್ ಆಟಕ್ಕೆ ಲಾಭವಾಗದಿದ್ದರೂ ಐಸಿಸಿ, ಬಿಸಿಸಿಐ ಇವು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳುವುದಂತೂ ಖಂಡಿತ. 

ಇದಕ್ಕೊಂದು ನಿದರ್ಶನವೆಂದರೆ ಯಾವುದೇ ವಿಶ್ವ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಮತ್ತು ಫೈನಲ್ ಪ್ರವೇಶಿಸದಿದ್ದರೆ, ಕ್ರೀಡಾಂಗಣದಲ್ಲಿ ಜನರಿರುವುದಿಲ್ಲ. ಭಾರತವಿದ್ದರೆ ಮಾತ್ರ ಪ್ರೇಕ್ಷಕರು ಮತ್ತು ಗಳಿಕೆ. ಆದ್ದರಿಂದ ಕ್ರೀಡಾ ಕಾರಣಕ್ಕಿಂತ ಇಂತಹ ಹುಚ್ಚು ದೇಶಭಕ್ತಿಯ ಇತರ ಕಾರಣಗಳಿಗಾಗಿ ಭಾರತವು ಜಯಿಸುವುದು ಅಗತ್ಯ. ಆಸ್ಟ್ರೇಲಿಯಾದೊಂದಿಗಿನ ಪಂದ್ಯಕ್ಕಿಂತ ಮುನ್ನ ನಡೆದ ಬಾಂಗ್ಲಾದೇಶದೊಂದಿಗಿನ ಪಂದ್ಯವನ್ನು ನೆನಪಿಸಿಕೊಳ್ಳಿ. ಬಾಂಗ್ಲಾದೇಶ ಅನನುಭವಿಗಳಾದರೂ ಪ್ರತಿಭಾವಂತ ತಂಡ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪ್ರತಿಭೆಯಿದ್ದರೂ ಅನುಭವದ ಕೊರತೆ ಬಾಂಗ್ಲಾ ತಂಡವನ್ನು ಕಾಡುತ್ತಲೇ ಇದೆ. ಅವರೆದುರು ಭಾರತ ಜಯಿಸುವುದು ಪೂರ್ವನಿರ್ಧರಿತವಾದಂತಿತ್ತು. ಆದರೆ ಪಂದ್ಯದ ಗತಿಯೇ ಬದಲಾಯಿತು. ಭಾರತ ಇನ್ನೇನು ಸೋತು ಟೂರ್ನಿಯಿಂದಲೇ ನಿರ್ಗಮಿಸುತ್ತದೆನ್ನುವ ಕ್ಷಣದಲ್ಲಿ ಕೊನೆಯ ಓವರಿನ ಕೊನೆಯ ಮೂರು ಎಸೆತಗಳು ಭಾರತವನ್ನು ಗೆಲ್ಲಿಸಿದವು. ಒಂದು ಓಟ ಗಳಿಸಿದರೆ ಸರಿಸಮವಾಗುತ್ತಿದ್ದ ಹೊತ್ತಿನಲ್ಲಿ ಬಾಂಗ್ಲಾದೇಶದ ಆಟಗಾರರು ಭಾರೀ ದಾಂಡಿಗತನಕ್ಕೆ ಹೊರಟು ಸುಲಭ ಕ್ಯಾಚುಗಳನ್ನಿತ್ತು ಕೊನೆಯ ಎಸೆತದಲ್ಲೂ ಒಂದು ರನ್ ಮಾಡಲಾರದೆ ಸೋತರು. 

ಭಾರತ ಗೆದ್ದುದು ಸಂತೋಷವೇ. ಆದರೆ ಭಾರತದ ಗೆಲುವನ್ನು ವಿವರಿಸಿದ ರೀತಿ ಅಚ್ಚರಿ ತರುವಂತಿತ್ತು. ಸೋಲಿನ ದವಡೆಯಿಂದ ಪಾರಾದ ಭಾರತಕ್ಕೆ ಟೀಕೆ ಎದುರಾಗಬೇಕಾಗಿತ್ತು. ಹಾಗಾಗಲಿಲ್ಲ. ಭಾರತದ ಗೆಲುವನ್ನು ಎತ್ತರಿಸಲು ಬಾಂಗ್ಲಾದೇಶವನ್ನು ಭಾರೀ ತಂಡವೆಂದೂ ಭಾರತವು ವಿಶ್ವವಿಜೇತ ತಂಡವೆಂದೂ ಬಣ್ಣಿಸಲಾಯಿತು. ಒಂದು ರೀತಿಯಲ್ಲಿ ಹಿಂದೆ ಅರಸರು ಹುಲಿಯನ್ನು ಕೊಂದು ಅದರ ಮೇಲೆ ಕಾಲಿಟ್ಟು ಕೈಯಲ್ಲಿ ಕೋವಿ ಹಿಡಿದು ನಿಲ್ಲುತ್ತಿದ್ದ ಚಿತ್ರದಂತಿತ್ತು. ನಿಜಕ್ಕೂ ಆ ಗೆಲುವು ಅಷ್ಟು ಅಸದಳವೇ? ಅಥವಾ ಭಾರತದ ಕಳಪೆ ಪ್ರದರ್ಶನವನ್ನು ಮುಚ್ಚಲು ಮಾಧ್ಯಮಗಳು ಈ ತಂತ್ರವನ್ನು ಹಿಡಿದವೇ?

 ಆಸ್ಟ್ರೇಲಿಯಾದ ಶೇನ್ ವಾಟ್ಸನ್ ಭಾರತವನ್ನು ಭಾರತದಲ್ಲಿ ಸೋಲಿಸುವುದು ಒಂದು ಸವಾಲು ಎಂದು ಹೇಳಿದ್ದರು. ಇದು ಸದ್ಯಕ್ಕಂತೂ ನಿಜವೇ. ಎಷ್ಟೇ ಒಳ್ಳೆಯ ತಂಡವಾದರೂ ಭಾರತದಲ್ಲಿ ಶರಣಾಗುತ್ತವೆ. ನಮ್ಮ ಕ್ರಿಕೆಟ್ ಪಿಚ್‌ಗಳು ಒಂದೋ ಬ್ಯಾಟಿಂಗ್ ಪಿಚ್‌ಗಳು; ಇಲ್ಲವೆ ಸ್ಪಿನ್ ಬೌಲಿಂಗ್‌ಗೆ ಹೇಳಿ ಮಾಡಿಸಿದ ಪಿಚ್‌ಗಳು. ವಿಶ್ವದ ಎಲ್ಲೆಡೆ ವೇಗದ ಬೌಲಿಂಗ್ ಒಂದು ಅಸ್ತ್ರವಾದರೆ ಭಾರತದಲ್ಲಿ ಸ್ಪಿನ್ ಒಂದು ರಾಮಬಾಣ. ಅದಕ್ಕೇ ನಮ್ಮ ಅಶ್ವಿನ್, ಜಡೇಜ ಇವರುಗಳು ಬಹುಪಾಲು ವಿಕೆಟ್‌ಗಳನ್ನು ಭಾರತದ ನೆಲದಲ್ಲೇ ಪಡೆಯುತ್ತಾರೆ. ಒಂದರ್ಥದಲ್ಲಿ ಇವು ಮೇಕ್ ಇನ್ ಇಂಡಿಯಾ! (ಇದೂ ಮೊನ್ನೆ ನಾಗಪುರದಲ್ಲಿ ಕಿವಿಸ್ ವಿರುದ್ಧ ಕೈಕೊಟ್ಟಿತು ಅಲ್ಲವೇ?)

ಇನ್ನೊಂದೆಡೆ ನಮ್ಮ ವೇಗಿಗಳು ಪಾಪ, ಭಾರತದಲ್ಲಿ ಆಡುವ ಪಂದ್ಯಗಳಿಂದಾಗಿ ತಮ್ಮ ನೆಲೆ-ಬೆಲೆ ಎರಡನ್ನೂ ಕಳೆದುಕೊಳ್ಳುತ್ತಾರೆ. ನಮ್ಮ ತಂಡಗಳ ರಚನೆಯನ್ನು ಗಮನಿಸಿದರೆ ಎಷ್ಟೊಂದು ವೇಗಿಗಳು ತಂಡದಲ್ಲಿ ಅಂದರ್-ಬಾಹರ್ ಆಗಿ ಕಾಲಕಳೆಯುತ್ತಾರೆ ಎಂಬುದು ಗೊತ್ತಾಗುತ್ತದೆ. ಹಿಂದೆ ಪಾಕಿಸ್ತಾನದ ಪಿಚ್‌ಗಳು ಬ್ಯಾಟ್ಸ್‌ಮನ್‌ಗಳ ಸ್ವರ್ಗವಾಗಿ ಅನೇಕ ಬೌಲರ್‌ಗಳ ಕ್ರೀಡಾ ಬದುಕನ್ನೇ ಹಾಳುಮಾಡಿವೆ. ರಘುರಾಮ ಭಟ್ ಸೇರಿದಂತೆ ಅನೇಕ ಉತ್ತಮ ಸ್ಪಿನ್ನರ್‌ಗಳು ರಾಷ್ಟ್ರೀಯ ತಂಡದಿಂದಲೇ ಜಾಗ ಖಾಲಿಮಾಡಿದರು. 

ಸಮತೋಲವಿಲ್ಲದಿದ್ದರೆ ಕ್ರಿಕೆಟ್ ಅಂತಲ್ಲ, ಯಾವುದೇ ಕ್ರೀಡೆ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳಬಹುದು. 20 ಓವರಿನ ಪಂದ್ಯ ಕ್ರಿಕೆಟನ್ನು ಕೊಲ್ಲುತ್ತಿದೆಯೆಂಬ ಅಳಲು ಹಲವು ಪ್ರಾಮಾಣಿಕ ಖ್ಯಾತನಾಮರದ್ದು. ಆದರೆ ಪಟ್ಟಭದ್ರ ಹಿತಾಸಕ್ತಿಯ ಕೆಲವು ಆಟಗಾರರು ಮತ್ತು ವೀಕ್ಷಕ ವಿವರಣಾಕಾರರು ಮಾತ್ರ ಅತಿಶಯೋಕ್ತಿಗಳನ್ನು ಹೇಳುತ್ತ ರಂಜಿಸುತ್ತಿರುತ್ತಾರೆ. ಅವರಿಗೆ ವರ್ತಮಾನದ ಲಾಭ ಮತ್ತು ತಮ್ಮ ಹಿತಾಸಕ್ತಿ ಮಾತ್ರ ಮುಖ್ಯ. ಚಿನ್ನದ ಮೊಟ್ಟೆಯಿಡುವ 20 ಓವರ್ ಕ್ರಿಕೆಟ್‌ಗಾಗಿ ಕ್ರಿಕೆಟ್ ಕ್ರೀಡೆಯನ್ನೇ ಕೊಲ್ಲುವುದಕ್ಕೆ ಅವರು ಹೇಸರು.

  ಕ್ರಿಕೆಟ್ ಒಂದು ಕಾಲದಲ್ಲಿ ಸಭ್ಯರ ಕ್ರೀಡೆಯಾಗಿತ್ತು. ಅದು ಭಾರತದ್ದಲ್ಲ; ಬ್ರಿಟಿಷರ ಬಳುವಳಿ. ಬ್ರಿಟಿಷ್ ವಸಾಹತುಗಳಲ್ಲಿ ಮಾತ್ರವೇ ಅದು ಪ್ರಸಿದ್ಧಿ. ಅಮೆರಿಕ-ಕೆನಡಾ-ಮೆಕ್ಸಿಕೋ ಮತ್ತು ಯುರೋಪಿನ ಬಹುಪಾಲು ದೇಶಗಳಲ್ಲಿ, ರಶ್ಯಾ, ಚೀನಾ, ಜಪಾನ್ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಕ್ರಿಕೆಟ್ ಪ್ರಚಲಿತವಿಲ್ಲ. ಫುಟ್‌ಬಾಲ್ ಅಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ. ಭಾರತವೊಂದೇ ವಿಶ್ವ ಕ್ರಿಕೆಟ್‌ನ ಸುಮಾರು ಶೇ.85 ಗಳಿಕೆಯ ಆಗರವೆಂಬುದನ್ನು ಅರಿತರೆ ಭಾರತವನ್ನು ಈ ಕ್ರೀಡೆಯಲ್ಲಿ ಮಗ್ನವಾಗಿಸುವುದು ಎಷ್ಟು ಅಗತ್ಯವೆಂಬುದರ ಅರಿವಾಗುತ್ತದೆ. ನಮ್ಮ ಕ್ರಿಕೆಟ್ ಆಡಳಿತ ನಮ್ಮ ರಾಜಕೀಯಕ್ಕಿಂತಲೂ ಹೊಲಸೆಂಬುದು ಕಳೆದ ಒಂದೆರಡು ವರ್ಷಗಳ ಇತಿಹಾಸದಲ್ಲಿ ಸ್ಪಷ್ಟವಾಗಿದೆ. ಲಲಿತ್ ಮೋದಿ ಹಗರಣ ಇನ್ನೂ ನಿಗೂಢವಾಗಿದೆ. ಆತನನ್ನು ಬ್ರಿಟನ್‌ನಿಂದ ಭಾರತಕ್ಕೆ ತಂದು ವಿಚಾರಣೆಗೊಳಪಡಿಸುವುದು ಅಗತ್ಯದ ವಿಚಾರ. ಇದು ಸಂಸತ್ತಿನಲ್ಲೂ ಉಲ್ಲೇಖವಾಗಿ ಲಲಿತ ಮೋದಿಗೆ ನೇರವಾಗಿ ನೆರವಾದ ಆರೋಪವನ್ನು ಹೊತ್ತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಮುಜುಗರ ತರಿಸಿತ್ತು. ಆದರೆ ಅನಂತರದ ಅನೇಕ ಬೆಳವಣಿಗೆಗಳಿಂದಾಗಿ ಮತ್ತು ವಿಜಯ ಮಲ್ಯ ಮುಂತಾದ ದೇಶೀಪರದೇಶಿಗಳಿಂದಾಗಿ ಲಲಿತ್ ಮೋದಿಯನ್ನು ಎಲ್ಲರೂ ಮರೆತರು; ಮತ್ತು ಸರಕಾರಕ್ಕೂ ಈ ಮರೆವು ಬೇಕಾಗಿತ್ತು ಎಂಬುದು ಈಗಿನ ಬೆಳವಣಿಗೆಗಳಲ್ಲಿ ಗೊತ್ತಾಗುತ್ತದೆ!
 
ನಮ್ಮಲ್ಲಿ ಕ್ರಿಕೆಟ್ ಒಂದು ಹುಚ್ಚು. ದಿನಗಟ್ಟಲೆ ಟಿವಿಯೆದುರು ಕೂರುವುದೇ ಒಂದು ದುಶ್ಚ್ಚಟ. ಅದರಲ್ಲಿಯೂ ಸಾವಿರಾರು ರುಪಾಯಿ ವೆಚ್ಚ ಮಾಡಿ ಪಂದ್ಯವನ್ನು ನೇರ ನೋಡುವುದು ಇನ್ನೂ ಭಾರೀ ಹುಚ್ಚು. (ಇದನ್ನು ಸಿಕ್ಸರ್ ಹುಚ್ಚು ಎಂದೂ ಹೇಳಬಹುದು!) ಪ್ರಾಯಶಃ ಇನ್ನೊಂದೆರಡು ವರ್ಷಗಳಲ್ಲಿ ಅಧಿಕೃತ ಕ್ರಿಕೆಟ್ ಮ್ಯಾಚ್‌ಗಳಲ್ಲೂ ಚೀರ್ ಹುಡುಗಿಯರ ಕುಣಿತವಿರಬಹುದು. ಭಾರತ ಇಂತಹ ವೈರುಧ್ಯಗಳಿಗೆ ಹೆಸರಾದ ದೇಶ. ಒಂದೆಡೆ ಯೋಗವನ್ನು ವಿಶ್ವವಿಸ್ತಾರದೆಡೆಗೆ ಸಾಗಿಸುವ ಪ್ರಯತ್ನ ನಡೆದರೆ ಇನ್ನೊಂದೆಡೆ ಈ ಅಚ್ಚ ವಿದೇಶೀ ಕ್ರೀಡೆ ದಿನದಿಂದ ದಿನಕ್ಕೆ ಬೇರನ್ನು ಆಳಕ್ಕೆ ವಿಸ್ತರಿಸುತ್ತದೆ. ಈ ಅತಿಗೆ ಬಲಿಯಾಗಿರುವುದು ಇತರ ಕ್ರೀಡೆಗಳು. ಟ್ವೆಂಟಿ-20 ಕ್ರಿಕೆಟ್‌ನ ದಾಳಿಗೆ ವಿಜೇಂದರ್ ಒಲಿಂಪಿಕ್‌ಗೆ ಅರ್ಹತೆ ಗಳಿಸಿದ್ದು ಗೊತ್ತಾಗಲೇ ಇಲ್ಲ. ನಮ್ಮ ಕಬಡ್ಡಿ ಪಟುಗಳು ವಿಶ್ವ ಟೂರ್ನಿಯಲ್ಲಿ ಗೆದ್ದಾಗಲೂ ಅವರಿಗೆ ಇಂತಹ ಬಿಡಿ, ಸಾಮಾನ್ಯ ಸ್ವಾಗತವೂ ಸಿಗಲಿಲ್ಲ. ಒಬ್ಬ ಸಾಮಾನ್ಯ ಕ್ರಿಕೆಟ್ ಆಟಗಾರನಿಗೆ ಸಿಗುವ ಮಾನ್ಯತೆ ವಿಶ್ವದ ನಂಬರ್ 1ನೆ ಬ್ಯಾಡ್ ಮಿಂಟನ್ ಆಟಗಾರರಾಗಿದ್ದ ಪ್ರಕಾಶ್ ಪಡುಕೋಣೆಗೂ ಸಿಗುವುದಿಲ್ಲ. ಟಿವಿ ಮತ್ತಿತರ ಜಾಹೀರಾತುಗಳಲ್ಲಿ ಭಾಗವಹಿಸುವವರ ಮತ್ತು ಆ ಮೂಲಕ ಕೋಟಿಗಟ್ಟಲೆ ಸಂಪಾದಿಸುವವರ ಸಾಲಿನಲ್ಲಿ ಕ್ರಿಕೆಟಿಗರೇ ಹೆಚ್ಚು. ಕ್ರಿಕೆಟ್ ಆಟದ ಆಸಕ್ತಿಗೆ ಕ್ರೀಡಾ ಮನೋಭಾವಕ್ಕಿಂತಲೂ ಅದರಿಂದ ಲಭಿಸುವ ಲಾಭದ ಆಸಕ್ತಿಯೇ ಮಿಗಿಲೆಂದು ಕಾಣುತ್ತದೆ. ಮಾಡೆಲ್ ಆಗುವುದಕ್ಕಾಗಿ, ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಕ್ಕಾಗಿ ಕ್ರಿಕೆಟ್ ಕಡೆಗೆ ಮನಸೋತವರೂ ಇದ್ದಾರೆ. ಗವಾಸ್ಕರ್, ಕಪಿಲ್ ದೇವ್ ಅವರಂಥ ಹಿರಿಯರಿರುವಾಗ ಸಚಿನ್ ತೆಂಡುಲ್ಕರ್‌ಗೆ ಭಾರತ ರತ್ನ, ರಾಜ್ಯಸಭಾ ಸ್ಥಾನ ಇವನ್ನೆಲ್ಲ ನೀಡುವಾಗ ಆಧರಿಸಿದ ಮಾನದಂಡವೇನು ಎಂಬುದು ಕೊನೆಗೂ ಗೊತ್ತಾಗುವುದೇ ಇಲ್ಲ. ಸಿನೆಮಾ ತಾರೆಯರಿಗೂ ಕ್ರಿಕೆಟಿಗರಿಗೂ ಒಂದು ಸ್ಪರ್ಧೆ ಮತ್ತು ಒಪ್ಪಂದ ಏರ್ಪಟ್ಟಂತಿದೆ. ಮನ್ಸೂರ್ ಅಲಿ ಖಾನ್ ಪಟೌಡಿ-ಶರ್ಮಿಳಾ ಠಾಗೋರ್‌ರಿಂದ ಆರಂಭವಾದ ಈ ಮೇಳ ಈಗ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮರವರೆಗೂ ವ್ಯಾಪಿಸಿದೆ.

 ಕ್ರಿಕೆಟ್‌ಗೆ ಈ ಪರಿಯ ಖ್ಯಾತಿಯನ್ನು ತರುವುದರಲ್ಲಿ ಆರ್ಥಿಕತೆಯ ವ್ಯವಹಾರ ಬಹಳಷ್ಟು ಕೆಲಸವನ್ನು ಮಾಡುತ್ತಿದೆಯೆಂದನಿಸುತ್ತಿದೆ. ಹಿಂದೆ ಕಾಸ್ಮೆಟಿಕ್ಸ್ ಮಾರಾಟ ವೃದ್ಧಿಗಾಗಿ ಏಷ್ಯಾದ ಸುಂದರಿಯರಿಗೆ ವಿಶ್ವ ಮಾನ್ಯತೆಯ ಪ್ರಶಸ್ತ್ತಿಗಳು ಲಭ್ಯವಾದವೆಂಬ ವದಂತಿಯಿತ್ತು. ಅಮೆರಿಕ ತನ್ನ ಶಸ್ತ್ರಾಸ್ತ್ರಗಳ ಮಾರಾಟಕ್ಕಾಗಿ ವಿಶ್ವದೆಲ್ಲೆಡೆ ದೇಶಗಳ, ಜನಾಂಗಗಳ ನಡುವೆ ವಿವಾದ-ವಿರಸವನ್ನು ಸೃಷ್ಟಿಸುವುದಿಲ್ಲವೇ-ಹಾಗೆ!

ಸಮಯವೇ ಮುಖ್ಯವಾದಲ್ಲಿ ಜನರು ಕ್ರಿಕೆಟಿಗೆ ಅಷ್ಟು ಮಹತ್ವ ನೀಡಲಾರರು. ಆದರೆ ಈ ದೇಶದಲ್ಲಿ ಸುಮಾರು 120 ಕೋಟಿಗೂ ಹೆಚ್ಚು ಜನರಿರುವಾಗ, ಸಮಯ ಮುಖ್ಯವಾದವರನ್ನು ಹೊರತುಪಡಿಸಿದರೂ ಕ್ರಿಕೆಟಿಗೆ ಹಣದ ಹೊಳೆ ಹರಿಸುವಷ್ಟು ನಿರುದ್ಯೋಗಿಗಳೂ ಶ್ರೀಮಂತರೂ ಇರಬಹುದು. ಕ್ರಿಕೆಟ್‌ಗಾಗಿ ಪರೀಕ್ಷೆಗಳನ್ನು ಮುಂದೆ ಹಾಕುವ, ಸಂಸತ್ತಿನ ಕಾರ್ಯ ಕಲಾಪಗಳನ್ನು ಮುಂದೂಡುವ, ಮತ್ತು ಗೆದ್ದರೆ ದೇಶಾದ್ಯಂತ ರಜೆ ಘೋಷಿಸುವ ದಿನಗಳು ದೂರವಿರಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News