ಮುಂಬೆಯಲ್ಲೀಗ ನಕಲಿ ಪೊಲೀಸ್ ಅಧಿಕಾರಿಗಳ ಕಾಟ

Update: 2016-04-04 18:10 GMT

ಮುಂಬೈ ಮಹಾನಗರದಲ್ಲಿ ಈ ಸಮಯ ಹಲವಾರು ಪ್ರಮುಖ ಅಪರಾಧ ಘಟನೆಗಳ ತನಿಖೆಯಲ್ಲಿ ಒಂದು ವಿಶೇಷ ಸಂಗತಿ ಕಂಡು ಬಂದಿದೆ. ಒಬ್ಬ ಉದ್ಯಮಿಯನ್ನು 2 ಕೋಟಿ ರೂಪಾಯಿ ಹಫ್ತಾಕ್ಕಾಗಿ ಅಪಹರಿಸಿದ ಘಟನೆ, ಆನ್‌ಲೈನ್ ಸೆಕ್ಸ್ ರ್ಯಾಕೆಟ್‌ನಲ್ಲಿ ಲೂಟಿ, ಕಾರ್ಖಾನೆ ಮಾಲಕನ ಲೂಟಿ, ವಜ್ರ ವ್ಯಾಪಾರಿಯ ಅಪಹರಣ ಕಾಂಡ.... ಇತ್ಯಾದಿ ಇತ್ಯಾದಿ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಆರೋಪಿಗಳು ಮುಂಬೈ ಪೊಲೀಸ್, ಸಿಐಡಿ, ಐ.ಬಿ, ರಾ, ಬಿ.ಎಂ.ಸಿ. ಅಥವಾ ಮುಂಬೈ ಕ್ರೈಂ ಬ್ರಾಂಚ್‌ನ ಅಧಿಕಾರಿಗಳೆಂದು ಸುಳ್ಳು ಹೇಳಿ ಇಂತಹ ಘಟನೆಗಳನ್ನು ನಡೆಸಿರುವ ಅಂಶ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದರೆ ಲೂಟಿ ಅಥವಾ ಅಪಹರಣಕ್ಕಾಗಿ ಅಪರಾಧಿಗಳು ಈ ದಿನಗಳಲ್ಲಿ ಹೊಸ ತಂತ್ರ ಅಳವಡಿಸಿದಂತಿದೆ.

 ಸೈಬರ್ ಕ್ರೈಂನ ನಂತರ ಈ ಅಪರಾಧಿಗಳು ಇದೀಗ ಸುರಕ್ಷಾ ಏಜನ್ಸಿಗಳ ಡ್ರೆಸ್ಸನ್ನು ಧರಿಸಿ ಅಪರಾಧ ಘಟನೆಗಳನ್ನು ನಡೆಸುತ್ತಿದ್ದಾರೆ. ಆದರೆ ಇವರಿಗೆಲ್ಲ ಪೊಲೀಸರಂತೆ ಸರಿಯಾದ ತರಬೇತಿ ಇಲ್ಲದ್ದರಿಂದ ಸಿಕ್ಕಿ ಬೀಳುತ್ತಿದ್ದಾರೆ.

ಈ ನಕಲಿ ಪೊಲೀಸ್ ಅಧಿಕಾರಿಗಳು ರೇಶನ್, ದಿನಸಿ ಅಂಗಡಿಗಳಿಂದ ಹಫ್ತಾ ವಸೂಲಿ, ಬಿಯರ್‌ಬಾರ್ ಹೊಟೇಲ್‌ಗಳಿಗೆ ದಾಳಿ ನಡೆಸಿ ಹಫ್ತಾ ವಸೂಲಿ, ಅಸಲಿ ಪೊಲೀಸರ ಪರಿಚಯ ಮಾಡಿಕೊಂಡು ಅದರ ಲಾಭ ಪಡೆಯುತ್ತಿರುವುದು, ದಾಖಲೆ ಪತ್ರಗಳ ತನಿಖೆಯ ನೆಪದಲ್ಲಿ ಚಿಕ್ಕ ಚಿಕ್ಕ ಕಂಪೆನಿಗಳಿಂದ ಹಫ್ತಾ ವಸೂಲಿಗಳು, ಹಣವಂತರನ್ನು ಅಪಹರಣ ಮಾಡುವುದು..... ಇವೆಲ್ಲ ಕುಕೃತ್ಯಗಳನ್ನು ಮಾಡುತ್ತಿರುತ್ತಾರೆ.

ಮುಂಬೈ ಪೊಲೀಸರಿಂದ ದೊರೆತ ಮಾಹಿತಿಯಂತೆ ಈ ವರ್ಷ ಜನವರಿಯಿಂದ ಈ ತನಕ ಸುಮಾರು ಐದಾರು ಇಂತಹ ಪ್ರಮುಖ ಘಟನೆಗಳು ನಡೆದಿವೆ. ಇವರೆಲ್ಲ ನಕಲಿ ಪೊಲೀಸರಾಗಿ ಅಪರಾಧ ಕೃತ್ಯ ನಡೆಸಿದ್ದಾರೆ. ಕಳೆದ ವರ್ಷವೂ ಇಂತಹ ಡಜನ್ನಿಗೂ ಹೆಚ್ಚಿನ ಘಟನೆಗಳು ನಡೆದಿತ್ತು. ಇಂತಹ ಘಟನೆಗಳು ನಡೆದರೆ ತಕ್ಷಣ ಆ ಅಧಿಕಾರಿಗಳ ಐಡೆಂಟಿಕಾರ್ಡ್ ಸರಿಯಾಗಿ ತನಿಖೆ ನಡೆಸಬೇಕು. ಹಾಗೂ ಸಂಬಂಧಪಟ್ಟ ಠಾಣೆಗಳನ್ನು ಸಂಪರ್ಕಿಸಬೇಕು. ಸೀನಿಯರ್ ಪಿ.ಐ ಮತ್ತು ಸೀನಿಯರ್ ಅಧಿಕಾರಿಗಳು ಈ ಬಗ್ಗೆ ಹೆಚ್ಚು ನಿಗಾ ಇರಿಸಬೇಕು ಎಂದು ಮುಂಬೈ ಪೊಲೀಸ್ (ಲಾ ಆಯಂಡ್ ಆರ್ಡರ್) ಜಾಯಿಂಟ್ ಸಿ.ಪಿ ದೇವೆನ್ ಭಾರತಿ ಹೇಳಿದ್ದಾರೆ.

 * * * 

ಉರ್ದು ಪ್ರೇಮಿ ಐ.ಪಿ.ಎಸ್. ಅಧಿಕಾರಿಯ ಭಾಷಣ ಯುಟ್ಯೂಬ್‌ನಲ್ಲಿ ಕೇಳಿದರು 14 ಲಕ್ಷಕ್ಕೂ ಹೆಚ್ಚು ಜನ

 ಮಹಾರಾಷ್ಟ್ರ ಕೇಡರ್‌ನ ಐ.ಪಿ.ಎಸ್. ಅಧಿಕಾರಿ ಡಾ.ಭೂಷಣ್ ಉಪಾಧ್ಯಾಯ ಅವರು ಉರ್ದುನಲ್ಲಿ 2009ರಲ್ಲಿ ಮಾಡಿದ್ದ ಒಂದು ಭಾಷಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಈ ಭಾಷಣವನ್ನು ಈ ತನಕ 14 ಲಕ್ಷಕ್ಕೂ ಹೆಚ್ಚು ಜನರು ಯುಟ್ಯೂಬ್‌ನಲ್ಲಿ ನೋಡಿದ್ದಾರೆ ಕೇಳಿದ್ದಾರೆ. ಇದೇ ಮಾರ್ಚ್ 4ನೆ ವಾರದಲ್ಲಿ ಮಹಾರಾಷ್ಟ್ರ ರಾಜ್ಯ ಉರ್ದು ಸಾಹಿತ್ಯ ಅಕಾಡಮಿ ಇವರನ್ನು ಮುಂಬೈಯಲ್ಲಿ ಮಂತ್ರಿ ಏಕನಾಥ ಖಡ್ಸೆ ಅವರ ಹಸ್ತದಿಂದ ವಿಶೇಷ ಸನ್ಮಾನ ಮಾಡಿರುತ್ತದೆ. ಉರ್ದು ಬಹಳ ಸಿಹಿಯಾದ ಸುಂದರವಾದ ಭಾಷೆ. ಹಾಗಾಗಿ ನಾನು ಅದನ್ನು ಕಲಿತೆ. ಈ ಭಾಷೆಯ ಮೂಲಕ ಮುಸ್ಲಿಂ ಸಮುದಾಯವನ್ನು ಬಹಳ ಉತ್ತಮ ರೀತಿಯಲ್ಲಿ ತಲುಪಬಹುದು ಎಂದು ನಾನು ತಿಳಿದುಕೊಂಡೆ. ಹೀಗಾಗಿ 1994 ರಲ್ಲಿ ಅಕೋಲಾದ ಹೆಚ್ಚುವರಿ ಸಿಪಿ ಆಗಿದ್ದಾಗ ಉರ್ದು ಭಾಷೆ ಕಲಿಯಲು ಶುರುಮಾಡಿದರು. ಆರು ತಿಂಗಳ ಕಾಲ ಕಲಿತ ನಂತರ ಹಿಡಿತ ಸಾಧಿಸಿದರು. ನಾನು ಸಾಂಪ್ರದಾಯಿಕ ಸೌಹಾರ್ದಕ್ಕಾಗಿ ಜನರ ನಡುವೆ ಈ ಭಾಷೆಯನ್ನು ಚೆನ್ನಾಗಿ ಉಪಯೋಗಿಸಿಕೊಂಡ ತೃಪ್ತಿ ಇದೆ. ಜೊತೆಗೆ ಕವಿ ಸಮ್ಮೇಳನದಲ್ಲೂ ಪಾಲ್ಗೊಂಡೆ. ಉರ್ದು ಕವಿಗಳನ್ನು ಆಹ್ವಾನಿಸಿದೆ. ನಂತರ ಅನೇಕ ಕಡೆ ನಾನು ವರ್ಗಾವಣೆಗೊಂಡೆ. 2009ರಲ್ಲಿ ಇಸ್ಲಾಂ ಧರ್ಮದ ಮೇಲೆ ಭಾಷಣ ಮಾಡಿದ್ದೆ. ಯಾರೋ ಅನಂತರ ಈ ಭಾಷಣವನ್ನು ಯೂಟ್ಯೂಬ್‌ನಲ್ಲಿ ಹಾಕಿದ್ದರು. ಅಲ್ಲಿಂದ ಇಲ್ಲಿ ತನಕ 14 ಲಕ್ಷ ಜನ ಈ ಭಾಷಣ ನೋಡಿದ್ದಾರೆ ಕೇಳಿದ್ದಾರೆ ಎನ್ನುತ್ತಾರೆ ಡಾ.ಭೂಷಣ್. ಸಂಸ್ಕೃತ ಭಾಷೆಯಲ್ಲೂ ಹಿಡಿತವಿರುವ ಡಾ.ಭೂಷಣ್ ಉಪಾಧ್ಯಾಯ ಅವರು ಅಪರಾಧಿಗಳನ್ನು ಸುಧಾರಿಸುವ ಪ್ರಯತ್ನದಲ್ಲೂ ಬಹಳಷ್ಟು ಕೆಲಸ ಮಾಡಿದ್ದಾರೆ.

* * * 

ಪಾರಂಪರಿಕ ಪದ್ಧತಿಯ ಮರಳು ದಂಧೆ ಸಂಕಷ್ಟದಲ್ಲಿ
ಮುಂಬೈ ಮಹಾನಗರ ಸಹಿತ ಪರಿಸರದ ಹಲವು ನಗರಗಳ ಕಟ್ಟಡಗಳಿಗೆ ಮರಳು ಒದಗಿಸುವುದು ಥಾಣೆ ಜಿಲ್ಲೆ. ಇದೀಗ ಮರಳು ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಪಾರಂಪರಿಕ ಪದ್ಧತಿಯಿಂದ ಖಾಡಿ ತೀರದಲ್ಲಿ ಮುಳುಗು ಹಾಕಿ ಮತ್ತು ಕೈಬಟ್ಟಿಯ ಪದ್ಧತಿಯಲ್ಲಿ ಮರಳು ತೆಗೆಯುವುದನ್ನು ನಿಷೇಧಿಸಲಾಗಿದೆ. ಇದರಿಂದ ಸಾವಿರಾರು ಜನರಿಗೆ ಉದ್ಯೋಗವಿಲ್ಲದಂತಾಗಿ ವರಿಷ್ಠ ನೇತಾ ದಶರಥ ಪಾಟೀಲರ ನೇತೃತ್ವದಲ್ಲಿ ಅವರೆಲ್ಲ ಥಾಣೆ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಪ್ರದರ್ಶನ ನಡೆಸಿದರು. ಎರಡು ವಾರದಲ್ಲಿ ತಮ್ಮ ಬೇಡಿಕೆ ಈಡೇರಿಸದಿದ್ದರೆ ತಮ್ಮ ಆಂದೋಲನ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಥಾಣೆ ಜಿಲ್ಲೆಯ ಡೊಂಬಿವಲಿ, ಮುಂಬ್ರಾ ಪಾರಸಿಕ, ಕೊಲ್ಶೇತ್, ನಾಗ್ಲಾ, ಗಾಯ್‌ಮುಖ್, ಘೋಡ್ ಬಂದರ್, ಖಾರ್‌ಬಾವ್, ಕಶೇಲಿ, ಕಾಲ್ಹೆರ್.... ಇತ್ಯಾದಿ ಕಡೆ ಖಾಡಿ ತೀರದಲ್ಲಿ ಮುಳುಗು ಹಾಕಿ ನೀರಿನಿಂದ ಮರಳು ತೆಗೆಯುವ ಒಂದು ಪಾರಂಪರಿಕ ವ್ಯವಸಾಯ ಬಹಳ ಕಾಲದಿಂದ ನಡೆದುಕೊಂಡು ಬಂದಿದೆ. ಆದರೆ ಈಗ ಇದನ್ನು ನಿಷೇಧಿಸಲಾಗಿದೆ. ಇದರಿಂದ ಇಲ್ಲಿನ ವ್ಯಾಪಾರಿಗಳಿಗೂ ಕಷ್ಟವಾಗುತ್ತಿದ್ದು ತಾವು ಅದಕ್ಕಾಗಿ ಶುಲ್ಕ ಕಟ್ಟಲು ರೆಡಿ ಇದ್ದರೂ ಸರಕಾರ ಅನುಮತಿ ನಿರಾಕರಿಸಿದ್ದಕ್ಕೆ ಬೇಸರಗೊಂಡಿದ್ದಾರೆ.

ಈ ಪಾರಂಪರಿಕ ಪದ್ಧತಿಯನ್ನು ಸರಕಾರ ನಿಷೇಧಿಸಿದ್ದರಿಂದ ಥಾಣೆ ಜಿಲ್ಲೆಯ 60 ಸಾವಿರ ಜನರಿಗೆ ಉದ್ಯೋಗವಿಲ್ಲದಂತಾಗಿದೆ! ಎನ್ನುತ್ತಾರೆ ನೇತಾ ದಶರಥ್ ಪಾಟೀಲ್.

 ಥಾಣೆ ಜಿಲ್ಲಾಧಿಕಾರಿ ಅಶ್ವಿನಿ ಜೋಶಿ ಅವರಿಗೆ ಹದಿನೈದು ದಿನಗಳ ಒಳಗೆ ಅನುಮತಿ ನೀಡುವಂತೆ ಪ್ರತಿನಿಧಿಮಂಡಲ ಆಗ್ರಹಿಸಿದೆ.

* * * 

ಲೈಸನ್ಸಿ ಕುಡುಕರ ಸಂಖ್ಯೆಯಲ್ಲಿ ಹೆಚ್ಚಳ

ಮುಂಬೈಯಲ್ಲಿ ಎಕ್ಸೈಸ್ ಮತ್ತು ಪೊಲೀಸರ ಕಟ್ಟುನಿಟ್ಟುನ ಕ್ರಮಗಳಿಂದಾಗಿ ಲೈಸನ್ಸಿ ಕುಡುಕರ ಸಂಖ್ಯೆ ಹೆಚ್ಚಾಗಿದೆ. ಶರಾಬು ಕುಡಿಯುವುದಕ್ಕಾಗಿ ಪರ್ಮಿಟ್ ಅಗತ್ಯವಿರುತ್ತದೆ. ನಿಯಮದಂತೆ ಯಾರ ಬಳಿ ಪರ್ಮಿಟ್ ಇದೆಯೋ ಅವರಿಗಷ್ಟೇ ಶರಾಬು ಮಾರಾಟಗಾರರು ಮಾರಬಹುದು. ಕಳೆದ ಕೆಲವು ಸಮಯದಿಂದ ಎಕ್ಸೈಸ್ ವಿಭಾಗವು ಶರಾಬು ಮಾರಾಟಗಾರರಲ್ಲಿ ಪರ್ಮಿಟ್‌ಧಾರಕರಿಗೆ ಮಾತ್ರ ಶರಾಬು ಮಾರಲು ಸೂಚಿಸಿದೆ. ಅತ್ತ ಮುಂಬೈ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸರು ನಡೆಸುವ ಡ್ರಂಕ್ ಆಯಂಡ್ ಡ್ರೈವ್ ಅಭಿಯಾನದಲ್ಲಿ ಶರಾಬು ಕುಡಿದು ವಾಹನ ನಡೆಸುವವರಿಗೆ ಭಯವಾಗುತ್ತಿದೆ. ಇದರಿಂದ ಸ್ವಲ್ಪವಾದರೂ ಪಾರಾಗಲು ಲೈಸನ್ಸ್‌ಗಾಗಿ ಎಕ್ಸೆಸ್ ವಿಭಾಗಕ್ಕೆ ಕುಡುಕರು ಓಡಾಡಲು ಶುರುಮಾಡಿದ್ದಾರೆ.

ಎಕ್ಸೈಸ್ ಕಾರ್ಯಾಲಯದಲ್ಲಿ ಲೈಸನ್ಸ್ ವಿಭಾಗದ ಅಧಿಕಾರಿಯೊಬ್ಬರು ಹೇಳುವಂತೆ ವಾರ್ಷಿಕ ಪರ್ಮಿಟ್‌ಗಾಗಿ ದಿನಕ್ಕೆ ಈ ಮೊದಲು 5 ಜನರೂ ಬರುತ್ತಿರಲಿಲ್ಲವಂತೆ. ಆದರೆ ಇತ್ತೀಚಿನ ದಿನಗಳಲ್ಲಿ ದಿನಕ್ಕೆ ನೂರಕ್ಕೂ ಅಧಿಕ ಜನರು ಪರ್ಮಿಟ್‌ಗಾಗಿ ಬರುತ್ತಿದ್ದಾರೆ. ಇವರಲ್ಲಿ 20 ಜನರಂತೂ ಆಜೀವ ಪರ್ಮಿಟ್‌ಗಾಗಿ ಬರುತ್ತಿದ್ದಾರಂತೆ. ಕುಡುಕರಿಗೆ ವಾರ್ಷಿಕ ಪರ್ಮಿಟ್‌ಗಾಗಿ ಎಕ್ಸೈಸ್ ವಿಭಾಗವು 100 ರೂಪಾಯಿ ಫೀಸ್ ಪಡೆದರೆ, ಆಜೀವ ಪರ್ಮಿಟ್‌ಗಾಗಿ ಒಂದು ಸಾವಿರ ರೂಪಾಯಿ ಶುಲ್ಕ ವಸೂಲಿ ಮಾಡಲಾಗುತ್ತದೆ. ಇದಲ್ಲದೆ ಶರಾಬು ಅಂಗಡಿಗಳಲ್ಲಿ 5 ರೂಪಾಯಿ ನೀಡಿ ಒಂದು ದಿನಕ್ಕಾಗಿ ಶರಾಬು ಕುಡಿಯುವ ಪರ್ಮಿಟ್ ಜಾರಿಗೊಳಿಸಲಾಗುತ್ತದೆ. (ಪ್ರತೀ ದಿನ ಸುಮಾರು 150 ರಷ್ಟು ಪರ್ಮಿಟ್‌ಗಳನ್ನು ಅಂಗಡಿಯವರು ಗ್ರಾಹಕರಿಗೆ ಮಾರುತ್ತಾರೆ.) ಇತ್ತ ಎಕ್ಸೈಜ್ ಅಧಿಕಾರಿಗಳ ಕಾರ್ಯಾಚರಣೆಯಿಂದ ಪಾರಾಗಲು ಪ್ರತೀದಿನ ಮಾರಾಟವಾಗುವ ಶರಾಬು ಅನುಸಾರ ದೈನಿಕ ಲೈಸನ್ಸ್‌ನ ಹಣವನ್ನು ಮಾರಾಟಗಾರರು ಅಧಿಕಾರಿಗಳಿಗೆ ನೀಡುತ್ತಾರೆ.

* * * 

ಸ್ಲಮ್ ಕ್ಷೇತ್ರದ ಶಾಲಾ ಮಕ್ಕಳು ಬಿಸಿಲಿಗೆ ಪರದಾಟ

 ಎಸ್.ಎಸ್.ಸಿ. ಪರೀಕ್ಷೆ ಮುಗಿದರೂ ಮುಂಬೈಯಲ್ಲಿ ಒಂದರಿಂದ ಒಂಬತ್ತನೆ ತರಗತಿಯ ಮಕ್ಕಳ ಪರೀಕ್ಷೆ ಮುಗಿಯುವ ಹಂತದಲ್ಲಿದೆ. ಆದರೆ ಬಿಸಿಲಿನ ಬೇಗೆಗೆ ಈ ಶಾಲಾ ಮಕ್ಕಳು ಭಾರೀ ಪರದಾಡುತ್ತಿದ್ದಾರೆ. ಶಾಲಾ ಆಡಳಿತಗಳು ಮಕ್ಕಳ ಜೊತೆ ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಿಲ್ಲ ಎಂದು ಪಾಲಕರ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ಸ್ಲಮ್ ಕ್ಷೇತ್ರದ ಶಾಲೆಗಳ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಮುಂಬೈಯಲ್ಲಿ ಅರುವತ್ತು ಶೇಕಡಾ ಜನರು ಸ್ಲಮ್ ಕ್ಷೇತ್ರಗಳಲ್ಲೇ ವಾಸಿಸುತ್ತಿದ್ದಾರೆ. ಇಲ್ಲಿ 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಧಿಕಾಂಶ ಶಾಲೆಗಳಲ್ಲಿ ಬಿಸಿಲಿನ ತಾಪಕ್ಕೆ ಮಕ್ಕಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ಪ್ಯಾರೆಂಟ್ ಟೀಚರ್ ಅಸೋಸಿಯೇಶನ್ (ಪಿಟಿಎ) ಮೂಲಕ ಸಿಕ್ಕಿದ ಮಾಹಿತಿಯಂತೆ ಅಧಿಕಾಂಶ ಶಾಲೆಗಳು ಕಾನೂನು ಬಾಹಿರವಾಗಿಯೇ ನಡೆಯುತ್ತಿವೆ. ಈ ಶಾಲೆಗಳಲ್ಲಿ ಮಕ್ಕಳಿಗೆ ಮೂಲಭೂತ ಸೌಕರ್ಯಗಳ ಕಡೆಗೆ ಗಮನ ನೀಡುತ್ತಿಲ್ಲ. ಫ್ಯಾನ್ ಸೌಲಭ್ಯವೂ ಇರುವುದಿಲ್ಲ. ಈ ಕಾರಣ ಚಿಕ್ಕ ಮಕ್ಕಳು ಭಾರೀ ತೊಂದರೆ ಅನುಭವಿಸುತ್ತಾರೆ. ಈ ಬಗ್ಗೆ ಶಾಲೆಗಳ ಆಡಳಿತ ಮಂಡಳಿಯಲ್ಲಿ ಕೇಳಿದರೆ ಸ್ಲಮ್ ಕ್ಷೇತ್ರದಲ್ಲಿ ಫಿೀಸ್ ಕಡಿಮೆ ಇರುತ್ತದೆ. ಹಾಗಾಗಿ ಹೆಚ್ಚಿನ ಸೌಲಭ್ಯ ನೀಡಲು ಸಾಧ್ಯವಾಗುವುದಿಲ್ಲ ಎಂಬ ಉತ್ತರ ಬರುತ್ತದೆ. ಮುಂಬೈಯ ಕಾಂದಿವಲಿ, ಬೊರಿವಲಿ, ಮಾಲಾಡ್, ಮಾಲ್ವಾಣಿ, ಗೋರೆಗಾಂವ್, ಧಾರಾವಿ ಕುರ್ಲಾ, ಚುನ್ನಾಭಟ್ಟಿ, ಸಾಕಿನಾಕ, ಮಾನ್‌ಕುರ್ದ್, ಶಿವಾಜಿನಗರ, ಬೆಹ್ರಮ್ ಪಾಡಾ.... ಮೊದಲಾದ ಸ್ಲಮ್ ಕ್ಷೇತ್ರಗಳಲ್ಲಿನ ಅಧಿಕಾಂಶ ಶಾಲೆಗಳು ಮಾನ್ಯತೆ ರಹಿತ ಶಾಲೆಗಳಾಗಿವೆ. ಇವನ್ನೆಲ್ಲ ಶಿಕ್ಷಣ ವಿಭಾಗದಿಂದ ಸೆಟಿಂಗ್ ಮಾಡಿಕೊಂಡು ನಡೆಸುತ್ತಾರೆ. ಕೆಲವೆಡೆ ಶಾಲಾ ಕೋಣೆಗಳು ತಗಡು ಶೀಟು ಗೋಡೆಗಳನ್ನು ಹೊಂದಿದ್ದು ವಿಪರೀತ ಸೆಖೆಯನ್ನು ಮಕ್ಕಳು ಅನುಭವಿಸುತ್ತಿದ್ದಾರೆ.

ಸರ್ವೇಯಂತೆ ಮುಂಬೈಯ ಸ್ಲಮ್ ಕ್ಷೇತ್ರದಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ನೋಂದಣಿ ಶಾಲೆಗಳಿದ್ದರೆ, 9 ಸಾವಿರಕ್ಕೂ ಅಧಿಕ ನೋಂದಣಿ ರಹಿತ ಶಾಲೆಗಳಿರುವುವು. 45 ರಿಂದ 50 ಶೇಕಡಾ ಶಾಲೆಗಳು ಮಾನ್ಯತೆ ಪಡೆದಿಲ್ಲ. ಸರಕಾರ ಕೋಟಿಗಟ್ಟಲೆ ಫಂಡ್ ಬಿಡುಗಡೆ ಮಾಡುತ್ತದೆ. ಆದರೆ ಶಾಲೆಗಳಲ್ಲಿ ವಿದ್ಯುತ್, ನೀರು, ಶೌಚಾಲಯ ಇಂತಹ ಸಮಸ್ಯೆ ಹಾಗೆಯೇ ಉಳಿದಿದೆ. ಎನ್ನುತ್ತಾರೆ ಪಿಟಿಐ ಚೇರ್‌ಮ್ಯಾನ್ ಜಯಂತ್ ಜೈನ್.

* * * 

ಎರಡು ವರ್ಷಗಳಲ್ಲಿ 12 ಸಾವಿರ ಕಂಪೆನಿಗಳಿಗೆ ಬೀಗ

ಕಳೆದ ಎರಡು ವರ್ಷಗಳಲ್ಲಿ ಸುಮಾರು ಹನ್ನೆರಡು ಸಾವಿರದಷ್ಟು ಕಂಪೆನಿಗಳು ವಿದ್ಯುತ್ ದರ ಏರಿಕೆಯ ಕಾರಣ ಬೀಗ ಹಾಕುವಂತಾಗಿವೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ವಿಪಕ್ಷ ಕೇಳಿದ ಒಂದು ಪ್ರಶ್ನೆಗೆ ಸರಕಾರ ಹೀಗೆಂದು ಉತ್ತರ ನೀಡಿದೆ. ವಿದ್ಯುತ್ ದರದಲ್ಲಿ ವೃದ್ಧಿಯ ನಂತರ ಉದ್ಯಮಗಳ ಸ್ಥಿತಿ ಹೇಗಿದೆ? ಎನ್ನುವ ಪ್ರಶ್ನೆ ವಿಪಕ್ಷ ಕೇಳಿತ್ತು. ಆವಾಗ 12,433 ಕಂಪೆನಿಗಳಿಗೆ ವಿದ್ಯುತ್ ಪೂರೈಕೆ ನಿಲ್ಲಿಸಲಾಗಿದೆ ಎಂಬ ಉತ್ತರ ನೀಡಲಾಯಿತು. ವಿದ್ಯುತ್ ಸಮಸ್ಯೆಯ ಕಾರಣ ಉದ್ಯೋಗಗಳ ಅವಕಾಶ ಕುಂಠಿತಗೊಂಡಿದೆ, 2014-15 ಮತ್ತು 2015 -16 ರ ಅವಧಿಯಲ್ಲಿ ಮಹಾರಾಷ್ಟ್ರದ 12,433 ಗಳಿಗೆ ವಿದ್ಯುತ್ ಪೂರೈಕೆ ನಿಲ್ಲಿಸಿದ್ದರಿಂದ ಅವುಗಳಿಗೆ ಬೀಗ ಬಿದ್ದಿದೆ.

* * *

 ದೇವನಾರ್ ಡಂಪಿಂಗ್ ಗ್ರೌಂಡ್‌ನ ಬೆಂಕಿ ನಂದಿಸಲು ಪ್ರತೀ ದಿನ 4 ಲಕ್ಷ ಲೀಟರ್ ನೀರು

ದೇವನಾರ್ ಡಂಪಿಂಗ್ ಗ್ರೌಂಡ್‌ನಲ್ಲಿ ಪ್ರತೀ ಎರಡು ದಿನಗಳ ನಂತರ ಬೆಂಕಿ ಕಾಣಿಸಿಕೊಂಡ ಘಟನೆ ನಿರಂತರ ನಡೆಯುತ್ತಿರುವುದು ಯಾಕೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಇದರಿಂದ ಮನಪಾ ಆಡಳಿತ ಮತ್ತು ಅಗ್ನಿ ಶಾಮಕ ದಳ ಬಹಳಷ್ಟು ಚಿಂತೆಗೀಡಾಗಿವೆ. ಹಾಗೂ ಬೆಂಕಿ ನಂದಿಸುವ ನೆಪದಲ್ಲಿ ಪ್ರತೀ ದಿನ 4 ಲಕ್ಷಲೀಟರ್ ನೀರು ವ್ಯರ್ಥವಾಗುತ್ತಿದೆ. ಆದರೂ ಬೆಂಕಿ ನಂದುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ರಾಜಕೀಯ ಪಕ್ಷಗಳಿಗೆ ಇದೊಂದು ಪ್ರಮುಖ ವಿಷಯವಾಗಿದೆ.

ಇಂದು ಕುಡಿಯುವ ನೀರು ವ್ಯರ್ಥವಾಗಬಾರದು ಎಂದು ಗೋವಂಡಿಯ ಆಶೀಷ್ ತಾಲಾಬ್(ಕೆರೆ)ನ ನೀರನ್ನು ಬಳಸಿ ನಂದಿಸಲಾಗುತ್ತಿದೆ. ಪ್ರಮುಖ ಎಲ್ಲಾ ಪಕ್ಷಗಳು ಡಂಪಿಂಗ್ ಗ್ರೌಂಡ್‌ನ ಬೆಂಕಿಯನ್ನು ಎತ್ತಿಕೊಂಡು ಪರಸ್ಪರರಿಗೆ ಕೈತೋರಿಸುತ್ತಿದ್ದಾರೆ. ದೇವನಾರ್ ಡಂಪಿಂಗ್ ಗ್ರೌಂಡ್‌ನಲ್ಲಿ ಮತ್ತೆ ಮತ್ತೆ ಬೆಂಕಿ ಹತ್ತಿಕೊಳ್ಳುತ್ತಿರುವ ಘಟನೆ, ಹಾಗೂ ಈ ಬಗ್ಗೆ ಶಿವಸೇನೆ ಮತ್ತು ಬಿಜೆಪಿ ಎರಡೂ ಪಕ್ಷಗಳು ಪರಸ್ಪರರನ್ನು ಹೊಣೆಗಾರರನ್ನಾಗಿಸುವ ಮಾತಿನ ಚಕಮಕಿಗೆ ಅಸಹ್ಯಪಟ್ಟು ಇದೀಗ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ ನಿರೂಪಮ್ ಅವರು ಬಿಜೆಪಿ ಮತ್ತು ಶಿವಸೇನೆ ಕಳೆದ ಇಪ್ಪತ್ತು ವರ್ಷಗಳಿಂದ ಮುಂಬೈ ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿದಿದೆ. ಇವರಿಬ್ಬರ ಕಾರಣದಿಂದ ಇಂದು ದೇವನಾರ್ ಡಂಪಿಂಗ್ ಗ್ರೌಂಡ್‌ಗೆ ಈ ದುಸ್ಥಿತಿ ಬಂದಿದೆ. ಹೀಗಾಗಿ ಶಿವಸೇನೆ -ಬಿಜೆಪಿ ತಮ್ಮ ಬ್ಲೇಮ್-ಗೇಮ್ ಬಂದ್ ಮಾಡಿ ಮುಂಬೈಯ ಜನತೆಗೆ ಅವರ ಆರೋಗ್ಯ ಮತ್ತು ಪರ್ಯಾವರಣದ ಜೊತೆ ಆಟವಾಡಿ ಸುಳ್ಳು, ಭ್ರಷ್ಟಾಚಾರ ಮತ್ತು ತಾವು ನೀಡಿದ್ದ ಭರವಸೆಗಳನ್ನು ಇನ್ನೂ ಈಡೇರಿಸದೆ ಇದ್ದುದಕ್ಕಾಗಿ ಕ್ಷಮೆ ಬೇಡುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News