ಗ್ಯಾರಂಟಿ ಯೋಜನೆಗಳಿಗೆ ಹೆದರುತ್ತಿರುವ ಬಿಜೆಪಿ ಮತ್ತು ಪ್ರಧಾನಿ ಮೋದಿ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಗ್ಯಾರಂಟಿ ಯೋಜನೆಗಳು ಮತ್ತೆ ಸುದ್ದಿಯಲ್ಲಿವೆೆ. ಆದರೆ ಸುದ್ದಿ ಮಾಡುತ್ತಿರುವುದು ಆಡಳಿತ ಪಕ್ಷವಲ್ಲ, ವಿರೋಧ ಪಕ್ಷ. ಸಕಾರಾತ್ಮಕ ಸುದ್ದಿಯಾಗಿಸುವ ಮೂಲಕ ಗ್ಯಾರಂಟಿ ಯೋಜನೆಗಳ ಫಲಾನುಭವಿಯಾಗಬೇಕಾಗಿದ್ದ ಕಾಂಗ್ರೆಸ್ ಪಕ್ಷವೂ, ಗ್ಯಾರಂಟಿ ಯೋಜನೆಗಳ ನಕರಾತ್ಮಕ ಸುದ್ದಿ ಪ್ರಸಾರಕ್ಕೆ ಪರೋಕ್ಷ ಕಾರಣವಾಗುತ್ತಿದೆ. ಇದೊಂದು ರೀತಿಯಲ್ಲಿ ಮಾಡದ ತಪ್ಪಿಗೆ ಅಮಾಯಕನೊಬ್ಬ ಸೆಗಣಿಯ ಜೊತೆಗೆ ಚಾಟಿ ಏಟಿನ ಶಿಕ್ಷೆಯನ್ನೂ ತಿಂದ ಕತೆಯಂತಾಗಿದೆ. ಒಂದೆಡೆ ಗ್ಯಾರಂಟಿಯೋಜನೆಗಳನ್ನು ಕೊಟ್ಟು, ಮಗದೊಂದೆಡೆ ಅದರ ಕುರಿತಂತೆ ಕೀಳರಿಮೆ ಪಡುತ್ತಿದ್ದರೆ ಅದನ್ನು ಇನ್ನೇನೆಂದು ಕರೆಯಬಹುದು? ಈ ಮೂಲಕ ಗ್ಯಾರಂಟಿ ಎನ್ನುವ ಹುಲಿ ಸವಾರಿ ಸರಕಾರವನ್ನು ಯಾವತ್ತು ಬೇಕಾದರೂ ಬಲಿತೆಗೆದುಕೊಳ್ಳಬಹುದು ಎನ್ನುವಂತಹ ಅನುಮಾನವನ್ನು ಸ್ವತಃ ಕಾಂಗ್ರೆಸ್‌ನೊಳಗಿರುವ ನಾಯಕರೇ ತಮ್ಮ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಜನರೊಳಗೆ ಬಿತ್ತುತ್ತಿದ್ದಾರೆ. ಇತ್ತೀಚೆಗೆ ಶಕ್ತಿ ಯೋಜನೆಯ ಕುರಿತಂತೆ ಡಿಕೆಶಿಯವರು ನುಡಿದಿದ್ದಾರೆ ಎನ್ನುವ ಮಾತುಗಳು ಮಾಧ್ಯಮಗಳ ಮೂಲಕ ಸಾಕಷ್ಟು ಚರ್ಚೆಗಳಿಗೆ ಕಾರಣವಾಯಿತು. ‘ಶಕ್ತಿ ಯೋಜನೆ’ಯ ಪರಿಷ್ಕರಣೆಯ ಬಗ್ಗೆ ಡಿ.ಕೆ. ಶಿವಕುಮಾರ್ ಒಲವು ವ್ಯಕ್ತಪಡಿಸಿದ್ದಾರೆ ಎಂಬ ಅರ್ಥದಲ್ಲಿ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗಿದ್ದವು. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಯ ಮೇಲೆ ಆರ್ಥಿಕ ಒತ್ತಡಗಳು ಬೀಳುತ್ತಿವೆ ಎನ್ನುವ ಅರ್ಥ ಬರುವ ಮಾತುಗಳನ್ನು ಕಾಂಗ್ರೆಸ್‌ನ ಇನ್ನೋರ್ವ ಸಚಿವರೂ ಈ ಹಿಂದೆ ಆಡಿದ್ದರು. ಕಾಂಗ್ರೆಸ್ ನಾಯಕರ ಬಾಯಿಯಿಂದ ಇಂತಹ ಮಾತುಗಳು ಉದುರುವುದನ್ನೇ ಕಾಯುತ್ತಿದ್ದ ವಿರೋಧ ಪಕ್ಷ ‘ರಾಜ್ಯ ಸರಕಾರ ದಿವಾಳಿಯಾಗಿದೆ’ ಎಂದು ಗದ್ದಲ ಎಬ್ಬಿಸತೊಡಗಿತ್ತು. ವಿಪರ್ಯಾಸವೆಂದರೆ, ಡಿಕೆಶಿ ಹೇಳಿಕೆಯ ಬೆನ್ನಿಗೇ ‘‘ಗ್ಯಾರಂಟಿ ಯೋಜನೆಗಳನ್ನು ಹಿಂದೆಗೆಯಲಾಗುತ್ತದೆ’’ ಎಂದು ಪ್ರಧಾನಿ ಮೋದಿಯವರೇ ಸಾರ್ವಜನಿಕ ವೇದಿಕೆಯೊಂದರಲ್ಲಿ ಸಂಭ್ರಮಿಸಿದರು.
ಗ್ಯಾರಂಟಿ ಯೋಜನೆ ನಾಡಿನ ಆರ್ಥಿಕತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಮತ್ತು ಭವಿಷ್ಯದಲ್ಲಿ ಅದು ನಾಡಿನ ಅಭಿವೃದ್ಧಿಗೆ ಹೇಗೆ ಸಹಕಾರಿಯಾಗಲಿದೆ ಎನ್ನುವುದರ ಅರಿವು ಮೊದಲು ಕಾಂಗ್ರೆಸ್ ನಾಯಕರಲ್ಲಿ ಮೂಡಿಸಬೇಕಾಗಿದೆ. ‘ನಾವು ಜನರಿಗೆ ನೀಡುತ್ತಿರುವುದು ಭಿಕ್ಷೆಯೂ ಅಲ್ಲ, ಉಚಿತವೂ ಅಲ್ಲ. ಅವರಿಂದ ಕಿತ್ತುಕೊಂಡದ್ದನ್ನು ನಾವು ಅವರಿಗೆ ಮರಳಿಸುತ್ತಿದ್ದೇವೆ’ ಎನ್ನುವ ಸ್ಪಷ್ಟತೆ ಮೊದಲು ಸರಕಾರದೊಳಗಿರುವ ಅಧಿಕಾರಿಗಳು ಮತ್ತು ನಾಯಕರಲ್ಲಿ ಬರಬೇಕಾಗಿದೆ. ಆಗ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಒಂದು ಸಾಧನೆಯ ರೂಪದಲ್ಲಿ ಜನರ ಮುಂದಿಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಬಹುದು. ನೋಟು ನಿಷೇಧ, ಲಾಕ್‌ಡೌನ್ ಹೆಸರಿನಲ್ಲಿ ಈ ನಾಡಿನ ಜನರಿಂದ ಸರಕಾರ ಕಿತ್ತುಕೊಂಡಿರುವುದಕ್ಕೆ ಹೋಲಿಸಿದರೆ ಗ್ಯಾರಂಟಿಯ ಮೂಲಕ ಕೊಡುತ್ತಿರುವುದು ಏನೇನೂ ಅಲ್ಲ. ಬಿಜೆಪಿ ಸರಕಾರ ಜನರಿಗೆ ಕೊಡಬೇಡಿ ಎಂದು ಬೀದಿಯಲ್ಲಿ ನಿಂತು ಹೇಳುವಾಗ, ಬಿಜೆಪಿ ಸರಕಾರಗಳು ಈ ಹಿಂದೆ ಜನರಿಂದ ಕಿತ್ತುಕೊಂಡದ್ದನ್ನು ಕಾಂಗ್ರೆಸ್ ನಾಯಕರು ನೆನಪಿಸಬೇಕಾಗಿದೆ. ನೋಟು ನಿಷೇಧದ ಸಂದರ್ಭದಲ್ಲಿ ಮುಚ್ಚಿದ ಉದ್ಯಮಗಳೆಷ್ಟು, ಜನರು ಕಳೆದುಕೊಂಡ ಉದ್ಯೋಗಗಳೆಷ್ಟು, ಲಾಕ್‌ಡೌನ್‌ನಿಂದ ಆದ ನಾಶ ನಷ್ಟಗಳೆಷ್ಟು? ಇವನ್ನೆಲ್ಲ ಮುಂದಿಡುತ್ತಾ, ಬಿಜೆಪಿ ಮಾಡಿದ ಗಾಯಗಳಿಗೆ ನಾವು ಮುಲಾಮು ಹಚ್ಚುತ್ತಿದ್ದೇವೆ, ಜನರಿಂದ ಬಿಜೆಪಿ ಸರಕಾರ ಕಿತ್ತುಕೊಂಡದ್ದನ್ನು ನಾವು ಮರಳಿಸುತ್ತಿದ್ದೇವೆ ಎಂದು ಎದೆತಟ್ಟಿ ಹೇಳುವಷ್ಟು ಧೈರ್ಯ ಕಾಂಗ್ರೆಸ್ ನಾಯಕರಿಗೆ ಬರಬೇಕಾಗಿದೆ. ‘ಗ್ಯಾರಂಟಿ ಯೋಜನೆಯಿಂದ ಸರಕಾರ ಖಜಾನೆಯನ್ನು ಬರಿದು ಮಾಡಿದೆ’ ಎಂದು ಬಿಜೆಪಿ ನಾಯಕರು ಆರೋಪಿಸುವಾಗ, ಅದಕ್ಕೆ ಸ್ಪಷ್ಟ ಪ್ರತಿಕ್ರಿಯೆಯನ್ನು ನೀಡಲು ಕಾಂಗ್ರೆಸ್ ವಿಫಲವಾದರೆ ಆ ಆರೋಪವನ್ನು ಒಪ್ಪಿಕೊಂಡಂತಾಗುತ್ತದೆ. ರಾಜ್ಯದ ಆರ್ಥಿಕತೆ ಕುಸಿದಿದೆ ಎನ್ನುವ ಆತಂಕ ಜನರಲ್ಲಿ ಹುಟ್ಟಿಸಿ ಹಾಕಲು ಬಿಜೆಪಿ ಯಶಸ್ವಿಯಾದರೆ, ಸರಕಾರ ಕೊಟ್ಟ ಗ್ಯಾರಂಟಿಗಳ ಸತ್ ಪರಿಣಾಮಗಳೆಲ್ಲ ನೀರು ಪಾಲಾಗಬಹುದು.
ಡಿಕೆಶಿಯವರಿಂದ ಹೇಳಿಕೆ ಹೊರ ಬಿದ್ದ ಬೆನ್ನಿಗೇ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭೆಯೊಂದರಲ್ಲಿ ಈ ಬಗ್ಗೆ ನೇರವಾಗಿಯೇ ಡಿಕೆಶಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಾದ ಬಳಿಕ, ಎಲ್ಲ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡು, ಗ್ಯಾರಂಟಿ ಯೋಜನೆಗಳ ಪರವಾಗಿ ಬ್ಯಾಟಿಂಗ್ ನಡೆಸತೊಡಗಿದ್ದಾರೆ. ಶಕ್ತಿ ಯೋಜನೆ ಮುಂದಿನ ಹತ್ತು ವರ್ಷಗಳ ಕಾಲ ಮುಂದುವರಿಯುತ್ತದೆ ಎನ್ನುವ ಭರವಸೆಯನ್ನು ಡಿಕೆಶಿ ವ್ಯಕ್ತಪಡಿಸಿದ್ದಾರೆ. ‘ಗ್ಯಾರಂಟಿ ಯೋಜನೆಗಳು’ ಮತ್ತೆ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೇರಿಸಲಿವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಸರಕಾರದ ಆರ್ಥಿಕ ಹೊರೆಯಾಗಿದೆ ಎನ್ನುವುದರಲ್ಲಿ ಸತ್ಯಾಂಶವಿದೆ. ಸುಮಾರು 54,000 ಕೋಟಿ ರೂಪಾಯಿಯನ್ನು ಬೇಡುತ್ತಿರುವ ಈ ಯೋಜನೆಗಳಿಗಾಗಿ ಹಣವನ್ನು ಹೇಗೆ ಹೊಂದಿಸಬಹುದು ಎನ್ನುವುದರ ಬಗ್ಗೆ ಸರಕಾರಕ್ಕೆ ದೂರದೃಷ್ಟಿಯಿದೆ ಎಂದು ಜನಸಾಮಾನ್ಯರು ತಿಳಿದುಕೊಂಡಿದ್ದಾರೆ. ಆ ದೂರದೃಷ್ಟಿಯಿಲ್ಲದೆ ಇಂತಹದೊಂದು ಯೋಜನೆಗಳನ್ನು ಸರಕಾರ ಜಾರಿಗೊಳಿಸಿದ್ದರೆ ಅದು ಪ್ರಮಾದವೇ ಸರಿ. ಸಿದ್ದರಾಮಯ್ಯ ಅವರ ಪ್ರಕಾರ, ಈ ಯೋಜನೆಯಿಂದ ನಾಡಿನ ಆರ್ಥಿಕತೆಗೆ ಬಲ ಬಂದಿದೆ. ಅಷ್ಟೇ ಅಲ್ಲ, ಮಧ್ಯಮವರ್ಗದ ಜನರೊಳಗೆ ಆತ್ಮವಿಶ್ವಾಸವನ್ನು ಮೂಡಿಸಿದೆ. ನಾಡಿನ ಆರ್ಥಿಕ ಚಟುವಟಿಕೆಗಳು ಕುದುರಿವೆ. ಲಾಕ್‌ಡೌನ್‌ನಿಂದಾಗಿ ಉಂಟಾಗಿರುವ ಗಾಯಗಳಿಗೆ ಇದು ಔಷಧಿಯಾಗಿ ಪರಿಣಮಿಸಿದೆ. ಇದೆಲ್ಲವೂ ನಿಜ ಎಂದಾದರೆ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಅಗತ್ಯವಾದರೂ ಏನು?
ಒಂದನ್ನು ಗಮನಿಸಬೇಕು. ಗ್ಯಾರಂಟಿ ಯೋಜನೆಯ ಪರಿಷ್ಕರಣೆಯ ಮಾತು ಕಾಂಗ್ರೆಸ್ ನಾಯಕರ ಬಾಯಿಯಿಂದ ಬಿದ್ದಾಕ್ಷಣ ಪ್ರಧಾನಿ ಮೋದಿಯೂ ಸೇರಿದಂತೆ ಬಿಜೆಪಿ ನಾಯಕರು ಯಾಕೆ ಸಂಭ್ರಮಿಸಿದ್ದಾರೆ. ಯಾಕೆಂದರೆ ಅವರು ಈ ಗ್ಯಾರಂಟಿ ಯೋಜನೆಗಳಿಗೆ ಹೆದರಿದ್ದಾರೆ. ಐದು ವರ್ಷಗಳ ಕಾಲ ಈ ಯೋಜನೆ ಮುಂದುವರಿದದ್ದೇ ಆದರೆ ಅದು ಬಿಜೆಪಿಯ ಹಿಂದಿನ ಭ್ರಷ್ಟ ಆಡಳಿತಕ್ಕೆ ತಪರಾಕಿಯಾಗಲಿದೆ. ಯಾವುದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸದೆಯೇ ನಾಡನ್ನು ದಿವಾಳಿಯೆಡೆಗೆ ಮುನ್ನಡೆಸಿದ್ದ ಹಿಂದಿನ ಬಿಜೆಪಿ ಸರಕಾರದ ಜೊತೆಗೆ, ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಉಚಿತಗಳನ್ನು ವಿತರಿಸಿ ನಾಡನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ದ ಕಾಂಗ್ರೆಸನ್ನು ಜೊತೆಗಿಟ್ಟು ಜನರು ವಿಶ್ಲೇಷಿಸತೊಡಗುತ್ತಾರೆ. ಕಾಂಗ್ರೆಸ್‌ಗೆ ಸಾಧ್ಯವಾದದ್ದು ಹಿಂದಿನ ಬಿಜೆಪಿ ಸರಕಾರಕ್ಕೆ ಯಾಕೆ ಸಾಧ್ಯವಾಗಲಿಲ್ಲ? ಎನ್ನುವ ಪ್ರಶ್ನೆ ತಲೆಯೆತ್ತುತ್ತದೆ. ಜನರಿಗೆ ಸೇರಬೇಕಾಗಿದ್ದ ಈ 54,000 ಕೋಟಿ ರೂಪಾಯಿಯನ್ನು ಏನು ಮಾಡಿದಿರಿ ಎನ್ನುವ ಪ್ರಶ್ನೆಯನ್ನು ಬಿಜೆಪಿಯ ಜೊತೆಗೆ ಕೇಳತೊಡಗುತ್ತಾರೆ. ಒಂದು ವೇಳೆ ಗ್ಯಾರಂಟಿ ಯೋಜನೆ ಐದು ವರ್ಷ ಪೂರೈಸಿದರೆ, ಮುಂದೆ ಯಾವ ಸರಕಾರ ಬರಲಿ, ಅದು ಈ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯಕ್ಕೆ ಸಿಲುಕಿಕೊಳ್ಳುತ್ತದೆ. ಆದುದರಿಂದಲೇ ರಾಜ್ಯ ಬಿಜೆಪಿ ನಾಯಕರಿಗೆ ಗ್ಯಾರಂಟಿ ಯೋಜನೆ ವಿಫಲವಾಗಬೇಕಾಗಿದೆ.
ಪ್ರಧಾನಿ ಮೋದಿಯವರು ಕೂಡ ಈ ಗ್ಯಾರಂಟಿ ಯೋಜನೆಗಳಿಗೆ ಬೆದರಿದ್ದಾರೆ ಎನ್ನುವುದು ಅವರ ಮಾತಿನ ಸಂಭ್ರಮದಿಂದ ಬಹಿರಂಗವಾಗಿದೆ. ‘ಬಡವರಿಗೆ ಉಚಿತವಾಗಿ ಕೊಡುವುದು ಅಪರಾಧ’ ಎನ್ನುತ್ತಾ, ಜನರಿಂದ ಕಿತ್ತುಕೊಂಡು ಬೃಹತ್ ಕಾರ್ಪೊರೇಟ್‌ಗಳಿಗೆ ಉಚಿತವಾಗಿ ನೀಡಿ ಅದನ್ನೇ ಅಭಿವೃದ್ಧಿಯೆಂದು ಘೋಷಣೆ ಮಾಡಿ, ದೇಶವನ್ನು ಹಸಿವು, ಬಡತನ, ಕೊರೋನ, ಲಾಕ್‌ಡೌನ್‌ಗಳಿಗೆ ತಳ್ಳಿದ ಹೆಗ್ಗಳಿಕೆ ಪ್ರಧಾನಿ ಮೋದಿಯವರದು. ಪ್ರಧಾನಿ ಮೋದಿಯವರ ಕಾರ್ಪೊರೇಟ್ ಪರ ನೀತಿಯಿಂದಾಗಿ ದೇಶದಲ್ಲಿ ನಿರುದ್ಯೋಗ, ಬಡತನ, ಹಸಿವು ಹೆಚ್ಚಿದೆ ಎನ್ನುವುದನ್ನು ಈಗಾಗಲೇ ಹಲವು ವರದಿಗಳು ಬಹಿರಂಗಪಡಿಸಿವೆ. ಇದೇ ಸಂದರ್ಭದಲ್ಲಿ ಕೇಜ್ರಿವಾಲ್, ಸಿದ್ದರಾಮಯ್ಯ ಆಡಳಿತದ ಜನಪರ ನೀತಿಗಳು ಪ್ರಧಾನಿ ಮೋದಿಯ ನಿದ್ದೆಗೆಡಿಸುತ್ತಿವೆ. ಗ್ಯಾರಂಟಿ ಯೋಜನೆಗಳು ಕರ್ನಾಟಕದಲ್ಲಿ ಜಾರಿಗೊಂಡ ಬಳಿಕ ಅದನ್ನು ಇತರ ರಾಜ್ಯಗಳೂ ಅನುಸರಿಸಲು ಮುಂದಾಗಿವೆ. ಸ್ವತಃ ಬಿಜೆಪಿ ಕೂಡ ಚುನಾವಣಾ ಪ್ರಣಾಳಿಕೆಗಳಲ್ಲಿ ಗ್ಯಾರಂಟಿಗಳನ್ನು ಸೇರಿಸುವ ಅವಸ್ಥೆಗೆ ತಲುಪಿದೆ. ಇದೀಗ ರಾಜ್ಯದಲ್ಲಿ ಗ್ಯಾರಂಟಿಯ ಪರಿಷ್ಕರಣೆಯ ಮಾತು ಕೇಳಿದ್ದೇ ಪ್ರಧಾನಿಗೆ ಸಂಜೀವಿನಿ ದೊರಕಿದಂತಾಗಿದೆ. ಆ ಮೂಲಕ ತನ್ನ ಜನವಿರೋಧಿ ಆಡಳಿತವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಪ್ರಧಾನಿ ಮೋದಿ ಗ್ಯಾರಂಟಿ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ನಿಲ್ಲಿಸಿ, ಕರ್ನಾಟಕಕ್ಕೆ ಸಲ್ಲಬೇಕಾದ ಬಾಕಿ ಉಳಿಸಿದ ತೆರಿಗೆ ಹಣವನ್ನು ಪಾವತಿಸುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿದೆ.
ಹಾಗೆಂದು, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಅಗತ್ಯವೇ ಇಲ್ಲವೆ? ಎಂದರೆ ಇದೆ. ಅರ್ಹ ಫಲಾನುಭವಿಗಳಿಗೆ ಅದನ್ನು ತಲುಪಿಸುವುದು ಸರಕಾರದ ಕರ್ತವ್ಯ. ಇದೇ ಸಂದರ್ಭದಲ್ಲಿ ಯೋಜನೆಗಳ ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ಕೂಡ ಸರಕಾರದ ಹೊಣೆಗಾರಿಕೆ. ಹಾಗೆಯೇ ಮಹಿಳಾ ಕೇಂದ್ರಿತವಾಗಿರುವ ಯೋಜನೆಗಳನ್ನು ಮುಂದುವರಿಸಿ, ಐದು ಗ್ಯಾರಂಟಿಗಳಲ್ಲಿ ಒಂದೆರಡು ಯೋಜನೆಗಳನ್ನು ಕೈ ಬಿಡುವ ಬಗ್ಗೆಯೂ ಯೋಚಿಸಬಹುದು. ಹಾಗೆಯೇ ಆರ್ಥಿಕ ಕೊರತೆಯನ್ನು ತುಂಬಲು ಅತಿ ಶ್ರೀಮಂತರಿಗೆ ವಿಧಿಸುವ ತೆರಿಗೆಯ ದಾರಿಯ ಬಗ್ಗೆ ಯೋಚಿಸಬಹುದು. ರಾಜ್ಯ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಯ ವಿರುದ್ಧ ಸಂಚು ರೂಪಿಸುವುದನ್ನು ನಿಲ್ಲಿಸಿ, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ನಿಧಿಯನ್ನು ತರಲು ಪ್ರಧಾನಿ ಮೋದಿಗೆ ಒತ್ತಡ ಹೇರಬೇಕಾಗಿದೆ. ಗ್ಯಾರಂಟಿ ಯೋಜನೆಯನ್ನು ಕಿತ್ತುಕೊಳ್ಳುವಯಾವುದೇ ಹುನ್ನಾರ ಭವಿಷ್ಯದಲ್ಲಿ ಬಿಜೆಪಿಗೇ ಮುಳುವಾಗಲಿದೆ ಎನ್ನುವ ಎಚ್ಚರಿಕೆ ಬಿಜೆಪಿ ನಾಯಕರಲ್ಲಿರಬೇಕಾಗಿದೆ.