ಉರಿಯುತ್ತಿರುವ ಮಣಿಪುರ

Update: 2024-11-19 07:29 GMT

PC: x.com/TheMooknayakEng

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಒಂದೂವರೆ ವರ್ಷದಿಂದ ಈಶಾನ್ಯ ಭಾರತದ ಪುಟ್ಟ ರಾಜ್ಯ ಮಣಿಪುರ ಜನಾಂಗ ದ್ವೇಷದ ಬೆಂಕಿಯಲ್ಲಿ ಬೆಂದು ಹೋಗುತ್ತಿದೆ. ಈಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಈ ಬೆಂಕಿಯನ್ನು ನಂದಿಸಬೇಕಾದವರು ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಲ್ಲಿ ಸುಳ್ಳಿನ ಸುರಿಮಳೆ ಸುರಿಸುತ್ತ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡುತ್ತ ಓಡಾಡುತ್ತಿದ್ದಾರೆ. ಏತನ್ಮಧ್ಯೆ ರವಿವಾರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಐದು ಜಿಲ್ಲೆಗಳಲ್ಲಿ ಹಿಂಸಾಚಾರ ತೀವ್ರಗೊಂಡಿದೆ. ಉದ್ರಿಕ್ತ ಜನರ ಗುಂಪು ಬಿಜೆಪಿಯ ಮೂವರು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿದೆ. ಒಬ್ಬ ಮಂತ್ರಿಯ ಮನೆಯ ಮೇಲೂ ದಾಳಿಮಾಡಿದೆ. ಅಷ್ಟೇ ಅಲ್ಲ ಮಣಿಪುರದ ಬಿಜೆಪಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಸಂಬಂಧಿಕರ ಮನೆಗಳಿಗೆ ನುಗ್ಗಿದೆ.

ಅಲ್ಲಿನ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಅಂದರೆ ಜಿರಿಬಾಮ ಜಿಲ್ಲೆಯಲ್ಲಿ ಶಂಕಿತ ಕುಕಿ ಬಂಡುಕೋರರು ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳ ಹತ್ಯೆ ಮಾಡಿರುವುದರಿಂದ ಹಿಂಸಾಚಾರ ತೀವ್ರಗೊಂಡಿದೆ. ಆದರೆ ಅಲ್ಲಿ ಹೋಗಿ ಎಲ್ಲ ಜನರನ್ನು ವಿಶ್ವಾಸಕ್ಕೆ ತಗೆದುಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈವರೆಗೆ ಅಲ್ಲಿಗೆ ಕಾಲಿಟ್ಟಿಲ್ಲ. ಅಲ್ಲಿ ಒಂದು ಜನಾಂಗದ ಮೇಲೆ ಇನ್ನೊಂದು ಜನಾಂಗವನ್ನು ಎತ್ತಿ ಕಟ್ಟಿ ಪರಿಸ್ಥಿತಿ ಹದಗೆಡಲು ಕಾರಣರಾದವರು ಬೇರೆ ರಾಜ್ಯಗಳಿಗೆ ಹೋಗಿ ಅಲ್ಲಿನ ಬಿಜೆಪಿಯೇತರ ಸರಕಾರಗಳನ್ನು ಉರುಳಿಸಲು ಹುನ್ನಾರ ನಡೆಸುತ್ತಿದ್ದಾರೆ.

ಮಣಿಪುರದಲ್ಲಿನ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಬಿಜೆಪಿಯ ಈ ಮುಖ್ಯಮಂತ್ರಿಯು ಜನಾಂಗೀಯ ಪಕ್ಷಪಾತ ಮಾಡುತ್ತಾ ಪರಿಸ್ಥಿತಿ ಉಲ್ಬಣಗೊಳ್ಳಲು ಕಾರಣ ಎಂದು ಕುಕಿ ಸಮುದಾಯದ ನಾಯಕರ ಆರೋಪವಾಗಿದೆ. ಆದರೆ ಕರ್ನಾಟಕದ ಚುನಾಯಿತ ಸರಕಾರವನ್ನು ಉರುಳಿಸಲು ಮಸಲತ್ತು ನಡೆಸಿರುವ ಆರೋಪವಿರುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಜಾಣ ಮೌನ ತಾಳಿದ್ದಾರೆ. ಚುನಾಯಿತ ಸರಕಾರಗಳನ್ನು ಉರುಳಿಸಲು ಸಿಬಿಐ, ಐಟಿ, ಈ.ಡಿ.ಯಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವ ಕೇಂದ್ರದ ಬಿಜೆಪಿ ಸರಕಾರ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯಲು ಕುತಂತ್ರ ನಡೆಸಿದೆ.

ಮಣಿಪುರದಲ್ಲಿ ಬಹುಸಂಖ್ಯಾತ ಮೈತೈ ಮತ್ತು ಅಲ್ಪಸಂಖ್ಯಾತ ಕುಕಿ ಮತ್ತಿತರ ಸಮುದಾಯಗಳ ನಡುವೆ ದ್ವೇಷದ ಅಡ್ಡ ಗೋಡೆಯನ್ನು ನಿರ್ಮಿಸಿರುವ ಕೋಮುವಾದಿಗಳು ಪರಿಸ್ಥಿತಿ ಹದಗೆಡಲು ಕಾರಣರಾಗಿದ್ದಾರೆ. ಇದು ಡಬಲ್ ಇಂಜಿನ್ ಸರಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕೇಂದ್ರದ ಇಂಜಿನ್ ಇಲ್ಲಿ ಬರಲು ತಯಾರಿಲ್ಲ.

ಮಣಿಪುರ ರಾಜ್ಯದ ಸಮಸ್ಯೆಗೆ ವಿಶೇಷ ಸಶಸ್ತ್ರ ಪಡೆಗಳಿಂದ, ಸೇನಾಪಡೆಯ ತುಕಡಿಗಳಿಂದ, ಪೊಲೀಸ್ ಪಡೆಗಳಿಂದ ಪರಿಹಾರವನ್ನು ಹುಡುಕಲು ಸಾಧ್ಯವಿಲ್ಲ. ಮೊದಲು ಕೇಂದ್ರ ಸರಕಾರದ ಧೋರಣೆ ಬದಲಾಗಬೇಕು. ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿಕಟ್ಟುವ ವಿಭಜನಕಾರಿ ರಾಜಕೀಯವನ್ನು ಕೈ ಬಿಡಬೇಕು. ಇಂತಹ ಜನಾಂಗೀಯ ಸಮಸ್ಯೆಗಳಿಗೆ ಈಗಿನ ಕೇಂದ್ರ ಸರಕಾರ ಕಾರಣವಾಗಿದೆ. ಈ ಸಮಸ್ಯೆಗೆ ಪರಿಹಾರ ಸಾವರ್ಕರ್, ಗೋಳ್ವಲ್ಕರ್ ಪುಸ್ತಕಗಳಲ್ಲಿ ಸಿಗುವುದಿಲ್ಲ. ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ, ಅಂಬೇಡ್ಕರ್ ಮಾರ್ಗದಲ್ಲಿ ಪರಿಹಾರಗಳನ್ನು ಕಂಡುಹಿಡಿಯಬೇಕು.

ಮಣಿಪುರದದಲ್ಲಿ ಬೆಂಕಿ ನಂದಿಸಬೇಕಾದವರು ಈಗ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಜನರನ್ನು ಜಾತಿ ಮತದ ಆಧಾರದಲ್ಲಿ ವಿಭಜಿಸಿ ಮತ ಕೇಳುತ್ತಿದ್ದಾರೆ. ಅವರ ಉದ್ದೇಶವೇ ಮನುವಾದಿ ಹಿಂದೂ ರಾಷ್ಟ್ರವನ್ನು ಕಟ್ಟುವುದಾಗಿದೆ. ಜನಸಾಮಾನ್ಯರ ಬದುಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಎಂದೂ ಯೋಚಿಸದ ಅವರು ದೇಶದ ಏಕತೆಗೆ ಗಂಡಾಂತರ ತಂದೊಡ್ಡಿದ್ದಾರೆ.

ಸಂಘ ಪರಿವಾರ ನಿಯಂತ್ರಿತ ಮೋದಿ ಸರಕಾರಕ್ಕೆ ಮಣಿಪುರ ಹಿಂಸಾಚಾರವನ್ನು ನಿಯಂತ್ರಿಸುವ ಮನಸ್ಸಿಲ್ಲ. ಈಗ ಅದು ಹೋಗುತ್ತಿರುವ ದಾರಿ ಅಪಾಯಕಾರಿಯಾಗಿದೆ. ಭಾರತದಲ್ಲಿ ವಿದೇಶಿ ಆಡಳಿತ ನಿರ್ಗಮಿಸಿದ ನಂತರ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಆಗ ಮಹಾತ್ಮಾ ಗಾಂಧಿ ಅವರಂತಹ ನಾಯಕರಿದ್ದರು. ನೌಖಾಲಿಯಲ್ಲಿ ಹಿಂಸಾಚಾರ ಭುಗಿಲೆದ್ದಾಗ ಮಹಾತ್ಮಾ ಗಾಂಧಿಯವರು ಉರಿಯುತ್ತಿದ್ದ ನೌಖಾಲಿಗೆ ಬರಿಗಾಲಲ್ಲಿ ಕೋಲೂರುತ್ತ ಹೋದರು. ಅಲ್ಲಿನ ಅತಿರೇಕವಾದಿಗಳು ಗಾಂಧಿ ಬರಬಾರದೆಂದು ದಾರಿಯುದ್ದಕ್ಕೂ ಕಲ್ಲು, ಮುಳ್ಳು ಮತ್ತು ಗಾಜಿನ ಚೂರುಗಳನ್ನು ಹಾಕಿದರು. ಆದರೆ ಗಾಂಧೀಜಿ ಕಲ್ಲು, ಮುಳ್ಳುಗಳ ಮೇಲೆ ಕಾಲೂರುತ್ತ ನಡೆದು ಅಲ್ಲಿನ ಹಿಂಸಾಚಾರವನ್ನು ತಡೆದು, ಉರಿಯುವ ಬೆಂಕಿಯನ್ನು ನಂದಿಸಿ ಬೆಳಕಿನ ದೀಪವನ್ನು ಹಚ್ಚಿದರು. ಈಗ ಗಾಯಗೊಂಡಿರುವ ಮಣಿಪುರಕ್ಕೆ ಇಂತಹ ಪರಿಹಾರ ಮಾರ್ಗ ಬೇಕಾಗಿದೆ.

ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಮಣಿಪುರವನ್ನು ‘ಭಾರತದ ಆಭರಣ’ ಎಂದು ಕರೆಯುತ್ತಿದ್ದರು.ಮೈತೈ, ನಾಗಾ, ಕುಕಿ, ಜೋಮಿ ಸೇರಿದಂತೆ ಹಲವಾರು ಬುಡಕಟ್ಟು ಸಮುದಾಯಗಳು ಅಲ್ಲಿ ನೆಲೆಸಿವೆ. ವಿಭಿನ್ನ ಸಮುದಾಯಗಳು ಒಂದು ಭೂ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಬದುಕುತ್ತಾ ಬಂದಿವೆೆ. ಈ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸಮಸ್ಯೆಯನ್ನು ಬಗಹರಿಸಬೇಕಾದವರು ಜನ ವಿಭಜನೆಯ ಸಿದ್ಧಾಂತವನ್ನು ಹೊಂದಿದ್ದಾರೆ. ಇಂಥ ಮನಸ್ಸು ಬೆಸೆಯುವ ಕಾರ್ಯದ ಬಗ್ಗೆ ಅವರು ಆಸಕ್ತಿ ತೋರಿಸುತ್ತಿಲ್ಲ

ಬುಡಕಟ್ಟು ಸಮುದಾಯಗಳನ್ನು ತಮ್ಮ ಹಿಂದುತ್ವ ಕಾರ್ಯ ಸೂಚಿಯನ್ನು ಬಳಸಿಕೊಳ್ಳಲು ಹೊರಟವರಿಂದ ಮಣಿಪುರ ಸಮಸ್ಯೆಗೆ ಖಂಡಿತಾ ಪರಿಹಾರ ಸಿಗಲಾರದು. ಭಾರತ ಎಂಬುದು ಯಾವುದೇ ಒಂದು ಜನಾಂಗಕ್ಕೆ, ಧರ್ಮಕ್ಕೆ ಸೇರಿದ್ದಲ್ಲ. ಇದು ಎಲ್ಲ ಸಮುದಾಯಗಳ ಸೌಹಾರ್ದ ತಾಣ ಎಂಬುದನ್ನು ದೇಶವನ್ನಾಳುತ್ತಿರುವವರು ಮರೆಯಬಾರದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News