ಚುನಾವಣಾ ಆಯೋಗ ಎಂಬ ಹಲ್ಲು ಕಿತ್ತ ಹಾವು

Update: 2024-12-27 07:04 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹತ್ತು ವರ್ಷಗಳ ಹಿಂದೆ ಕೇಂದ್ರದ ಅಧಿಕಾರ ಸೂತ್ರ ಹಿಡಿದ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಒಂದೆಡೆ ಜನರಿಗೆ ಸುಳ್ಳು ಹೇಳುತ್ತ ಹಾಗೂ ಜಾತಿ, ಮತದ ಹೆಸರಿನಲ್ಲಿ ದ್ವೇಷ ಮತ್ತು ವಿಭಜನೆಯ ವಿಷ ಬೀಜ ಬಿತ್ತುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿದೆ. ಅದರ ಜೊತೆ ಜೊತೆಗೆ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತ ಏಕ ಚಕ್ರಾಧಿಪತ್ಯದ ಗುರಿ ಸಾಧಿಸಲು ಹೊರಟಿದೆ. ಚುನಾವಣಾ ಆಯೋಗವಂತೂ ಸರಕಾರದ ಕಣ್ಸನ್ನೆಯಂತೆ ಕಾರ್ಯನಿರ್ವಹಿಸುತ್ತಿದೆ. ಈಗ ಇದು ಸಾಲದೆಂಬಂತೆ ಚುನಾವಣೆಗೆ ಸಂಬಂಧಿಸಿದ ಕೆಲವು ನಿಯಮಾವಳಿಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆ. ಪ್ರತಿಪಕ್ಷಗಳ ಜೊತೆಗೆ ಸಮಾಲೋಚನೆ ಮಾಡದೆ,ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಂದೇಹಾಸ್ಪದ ಬದಲಾವಣೆಗಳನ್ನು ಮಾಡಿದೆ.

ನರೇಂದ್ರ ಮೋದಿಯವರ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಚುನಾವಣಾ ಆಯೋಗದಲ್ಲಿ ಕೈಯಾಡಿಸುತ್ತಲೇ ಇದೆ. ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆ ಮೇಲೆ ಸರಕಾರ ಸಂಪೂರ್ಣ ಹಿಡಿತ ಸಾಧಿಸಿದೆ. ಈವರೆಗೆ ಮುಖ್ಯ ಚುನಾವಣಾ ಆಯುಕ್ತರ ನೇಮಕದಲ್ಲಿ ಸರಕಾರ ನೇರವಾಗಿ ಹಸ್ತಕ್ಷೇಪ ಮಾಡುವಂತಿರಲಿಲ್ಲ. ಪ್ರಧಾನಿ ನೇತೃತ್ವದಲ್ಲಿ ಮೂವರನ್ನು ಒಳಗೊಂಡ ಒಂದು ಆಯ್ಕೆ ಸಮಿತಿಯನ್ನು ರಚಿಸಲಾಗುತ್ತಿತ್ತು. ಈ ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ, ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಇರಬೇಕೆಂದು ಹೇಳಲಾಗಿತ್ತು. ಹೀಗಾಗಿ ಸದರಿ ಆಯ್ಕೆಯ ಪಾರದರ್ಶಕತೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಕಾರ್ಯಾಂಗ ಮತ್ತು ಶಾಸಕಾಂಗ ದಾರಿ ತಪ್ಪಿದಾಗ ಮಾರ್ಗದರ್ಶಿಯಾಗಿ ಕೆಲಸ ಮಾಡುವ ನ್ಯಾಯಾಂಗದ ಅತ್ಯುತ್ತಮ ವ್ಯಕ್ತಿಯೊಬ್ಬರು ಈ ಸಮಿತಿಯಲ್ಲಿ ಇರುವುದರಿಂದ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ನೇಮಕದ ಪಾರದರ್ಶಕತೆ ಬಗ್ಗೆ ಯಾರೂ ಸಂದೇಹ ಪಡುತ್ತಿರಲಿಲ್ಲ. ಆದರೆ ಮೋದಿ ಸರಕಾರ ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನು ಹೊರಗಿಟ್ಟು ಅವರ ಬದಲಿಗೆ ಪ್ರಧಾನಿ ನೇಮಕ ಮಾಡುವ ಸಂಪುಟ ದರ್ಜೆಯ ಸಚಿವರೊಬ್ಬರನ್ನು ಸೇರ್ಪಡೆ ಮಾಡಿದೆ. ಹೀಗಾಗಿ ಚುನಾವಣಾ ಆಯೋಗದ ಆಯುಕ್ತರನ್ನು ನೇಮಕ ಮಾಡುವ ಅಧಿಕಾರ ಶಾಸಕಾಂಗ ತನ್ನಲ್ಲೇ ಉಳಿಸಿಕೊಂಡಂತಾಗಿದೆ.

ಈ ತರಾತುರಿಯ ತಿದ್ದುಪಡಿಗೆ ಇನ್ನೂ ಒಂದು ಕಾರಣವಿದೆ. ಹರ್ಯಾಣ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ತಕರಾರು ಅರ್ಜಿಯನ್ನು ಸಲ್ಲಿಸಿರುವ ಮುಹಮ್ಮದ್ ಅವರಿಗೆ ನೀಡುವಂತೆ ಪಂಜಾಬ್ ಮತ್ತು ಹರ್ಯಾಣದ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಆ ಆದೇಶದ ನಂತರ ಈ ನಿಯಮಾವಳಿಗಳಿಗೆ ತಿದ್ದುಪಡಿ ತಂದಿರುವುದು ಗಮನಾರ್ಹ ಸಂಗತಿಯಾಗಿದೆ. ತಿದ್ದುಪಡಿಯಾದ ನಿಯಮಾವಳಿಗಳ ಪ್ರಕಾರ ಕೋರ್ಟ್ ಆದೇಶದಂತೆ ಮುಹಮ್ಮದ್ ಅವರಿಗೆ ಸದರಿ ದಾಖಲೆಗಳು ಸಿಗುವುದಿಲ್ಲ. ಹರ್ಯಾಣ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಆಕ್ಷೇಪಗಳು ಬಂದಿದ್ದವು. ಅವುಗಳ ಹಿನ್ನೆಲೆಯಲ್ಲಿ ನಿಯಮಾವಳಿಗೆ ತಿದ್ದುಪಡಿ ತರಲಾಗಿದೆ. ಅದೇನೇ ಇರಲಿ ನಿಯಮಾವಳಿಗಳಿಗೆ ಯಾವುದೇ ತಿದ್ದುಪಡಿ ತರುವ ಮೊದಲು ಪ್ರತಿಪಕ್ಷ ನಾಯಕರೊಂದಿಗೆ ಸಮಾಲೋಚನೆ ಮಾಡಬೇಕಿತ್ತು. ಈ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಚುನಾವಣಾ ಆಯೋಗ ಮತ್ತು ಸರಕಾರಗಳು ವಿಫಲಗೊಂಡಿವೆ. ಆದ್ದರಿಂದ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ

ಇಷ್ಟೆಲ್ಲ ಮಾಡಿಯೂ ಈ ಸರಕಾರಕ್ಕೆ ಸಮಾಧಾನವಿಲ್ಲ. ಇದೀಗ ಚುನಾವಣೆಯ ಕುರಿತ ಕೆಲವು ನಿಯಮಗಳನ್ನು ಬದಲಾಯಿಸಲು ಸರಕಾರ ಮುಂದಾಗಿದೆ. ಸಿಸಿಟಿವಿ ಕ್ಯಾಮರಾ ದೃಶ್ಯಗಳು ಹಾಗೂ ಅಭ್ಯರ್ಥಿಗಳ ವೀಡಿಯೊ ಚಿತ್ರೀಕರಣದ ದೃಶ್ಯಗಳ ಸಾರ್ವಜನಿಕ ಪರಿಶೀಲನೆಗೆ ಇರುವ ಅವಕಾಶಕ್ಕೆ ತಡೆ ಒಡ್ಡುವುದು ಮತ್ತು ವೆಬ್ ಕಾಸ್ಟಿಂಗ್ ದೃಶ್ಯಾವಳಿಗಳನ್ನು ಪಡೆಯಲು ಜನರಿಗೆ ಅವಕಾಶ ನಿರಾಕರಿಸುವುದು ಈ ನಿಯಮಾವಳಿಗಳನ್ನು ಬದಲಾಯಿಸುವ ಉದ್ದೇಶವಾಗಿದೆ. ಆದರೆ ಈ ಬದಲಾವಣೆ ಚುನಾವಣೆ ಪಾರದರ್ಶಕತೆಯ ನಿಯಮಾವಳಿಗೆ ವ್ಯತಿರಿಕ್ತವಾಗಿದೆ. ಈಗ ಚುನಾವಣಾ ಆಯೋಗದ ಸಲಹೆಯ ಮೇರೆಗೆ ಈ ತಿದ್ದುಪಡಿ ಮಾಡಲಾಗಿದೆ ಎಂದು ಸರಕಾರ ಹಾರಿಕೆಯ ಉತ್ತರ ನೀಡುತ್ತಿದೆ. ಮತಗಟ್ಟೆಯಲ್ಲಿ ಕಾಪಾಡಬೇಕಾದ ಗೌಪ್ಯತೆಯನ್ನು ಕೃತಕ ಬುದ್ಧಿಮತ್ತೆಯನ್ನು ಬಳಸಿ ಉಲ್ಲಂಘನೆ ಮಾಡುವ ಸಾಧ್ಯತೆಯನ್ನು ತಡೆಯುವುದಕ್ಕಾಗಿ ಈ ತಿದ್ದುಪಡಿ ಮಾಡಲಾಗಿದೆ ಎಂದು ಸಬೂಬು ಹೇಳಲಾಗುತ್ತದೆ. ಇದರಿಂದಾಗಿ ಚುನಾವಣೆಗೆ ಸಂಬಂಧಿಸಿದ ಕೆಲವು ದಾಖಲೆಗಳು ಮತದಾರರಿಗೆ ಲಭ್ಯವಾಗುವುದಕ್ಕೆ ಅಡ್ಡಿಯಾಗಿದೆ.

ಚುನಾವಣಾ ನಿಯಮಾವಳಿಗೆ ತಂದಿರುವ ಈ ತಿದ್ದುಪಡಿಗಳಿಂದಾಗಿ ಸಂಸದೀಯ ಪ್ರಜಾಪ್ರಭುತ್ವದ ತಳಹದಿಯಾದ ಪಕ್ಷ ವ್ಯವಸ್ಥೆಗೆ ತೀವ್ರ ನಷ್ಟ ಉಂಟಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣಾ ಆಯೋಗದ ಬಗ್ಗೆ ಜನರಲ್ಲಿ ಅಪನಂಬಿಕೆ ಉಂಟಾಗುತ್ತದೆ. ಪ್ರಜಾಪ್ರಭುತ್ವ ಸುರಕ್ಷಿತವಾಗಿ ಇರಬೇಕೆಂದರೆ ಯಾವುದೇ ಪ್ರಕ್ರಿಯೆಗಳು ಪಾರದರ್ಶಕ ವಾಗಿರಬೇಕು. ಒಮ್ಮೆ ಅಪನಂಬಿಕೆ ಉಂಟಾದರೆ ಮುಂದೆ ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ನಂಬಿಕೆ ಹೊರಟು ಹೋಗುತ್ತದೆ ಎಂಬುದನ್ನು ಅಧಿಕಾರದಲ್ಲಿರುವವರು ಅರ್ಥ ಮಾಡಿಕೊಳ್ಳಬೇಕು.

ಸರಕಾರ ಮತ್ತು ಚುನಾವಣಾ ಆಯೋಗಗಳು ನೀಡಿರುವ ಸ್ಪಷ್ಟೀಕರಣ ನಿಜಕ್ಕೂ ಸಮರ್ಪಕವಾಗಿಲ್ಲ. ಸರಕಾರ ಮತ್ತು ಚುನಾವಣಾ ಆಯೋಗದ ಮಾಡಿರುವ ಈ ತಿದ್ದುಪಡಿಯಿಂದಾಗಿ ಇನ್ನಷ್ಟು ಪ್ರಶ್ನೆಗಳು ಉದ್ಭವವಾಗುತ್ತವೆ.

ಮತಗಟ್ಟೆಗಳಲ್ಲಿ ಸ್ಥಾಪಿಸುವ ಸಿಸಿಟಿವಿ ಕ್ಯಾಮರಾಗಳು ಮತಗಟ್ಟೆಗಳ ಅಧಿಕಾರಿಗಳನ್ನು ಮಾತ್ರ ತೋರಿಸುತ್ತವೆ. ಮತದಾರರನ್ನು ತೋರಿಸುವದಿಲ್ಲ. ಮತದಾರರು ಮತದಾನ ಮಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗುವುದಿಲ್ಲ. ಹೀಗಾಗಿ ಗೌಪ್ಯ ಮತದಾನದ ನಿಯಮಗಳು ಉಲ್ಲಂಘನೆಯಾಗಬಹುದು ಎಂಬ ಆತಂಕಕ್ಕೆ ಅರ್ಥವಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಮತಗಟ್ಟೆಗಳ ಹೊರಗಡೆ ಮತದಾರರೇ ಕ್ಯಾಮರಾಗಳನ್ನು ಬಳಸುತ್ತಾರೆ. ಹೊರಗಡೆ ಕ್ಯಾಮರಾ ಬಳಕೆಗೆ ಯಾವುದೇ ನಿರ್ಬಂಧ ಇಲ್ಲ. ಹಾಗೆ ನೋಡಿದರೆ ವೀಡಿಯೊಗಳು ಉಪಯುಕ್ತವಾಗಿವೆ. ಕೆಲವು ತಿಂಗಳ ಹಿಂದೆ ಚಂಡಿಗಡ ಮೇಯರ್ ಹುದ್ದೆಗೆ ನಡೆದ ನಡೆದ ಚುನಾವಣೆಯ ಮತದಾನದಲ್ಲಿ ಚುನಾವಣಾಧಿಕಾರಿಯೇ ಮತಪತ್ರಗಳನ್ನು ತಿರಿಚಿದ ದೃಶ್ಯಗಳು ವೀಡಿಯೊದಲ್ಲಿ ದಾಖಲಾಗಿದ್ದವು. ಜಮ್ಮು-ಕಾಶ್ಮೀರ ಹಾಗೂ ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಸಮಸ್ಯೆ ಇದೆ ಎಂಬ ನೆಪ ಮಾಡಿ ಇತರ ಪ್ರದೇಶಗಳಲ್ಲಿ ಜನಸಾಮಾನ್ಯರ ಹಕ್ಕುಗಳನ್ನು ಹತ್ತಿಕ್ಕುವುದು, ನಿರಾಕರಿಸುವುದು ಸರಿಯಲ್ಲ.

ಈಗಾಗಲೇ ಮೋದಿ ಸರಕಾರ ‘ಒಂದು ದೇಶ, ಒಂದೇ ಚುನಾವಣೆ’ ವಿಧೇಯಕ ತರುವ ಮೂಲಕ ಸಾಕಷ್ಟು ಗೊಂದಲ ಮೂಡಿಸಿದೆ. ಇದಕ್ಕೆ ವ್ಯಾಪಕ ವಿರೋಧ ಬಂದ ನಂತರ ಸಂಸತ್ತಿನ ಜಂಟಿ ಪರಿಶೀಲನಾ ಸಮಿತಿಯ ಪರಿಶೀಲನೆಗೆ ಒಪ್ಪಿಸಲು ತೀರ್ಮಾನಿಸಲಾಗಿದೆ. ಈ ಸಮಿತಿಯಲ್ಲೂ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಲ್ಲಿ ಅಂಗೀಕಾರವಾಗಿ ಸಂಸತ್ತಿಗೆ ಬರಬೇಕು. ಈ ಮಹತ್ವದ ವಿಷಯದಲ್ಲೂ ಪ್ರತಿಪಕ್ಷಗಳನ್ನು ಸರಕಾರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಜನಸಾಮಾನ್ಯರ ಜನತಾಂತ್ರಿಕ ಹಕ್ಕುಗಳ ಮೇಲೆ ದಾಳಿಯಲ್ಲದೆ ಇದು ಬೇರೇನೂ ಅಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News