ನ್ಯಾಯ ವ್ಯವಸ್ಥೆಯೇ ಅತಿಕ್ರಮಿಸಿದರೆ?

Update: 2024-12-14 06:30 GMT

ಸಾಂದರ್ಭಿಕ ಚಿತ್ರ (freepik)

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯವೊಂದರ ಅವಸರದ ತೀರ್ಪಿನ ಪರಿಣಾಮವಾಗಿ ಇತ್ತೀಚೆಗೆ ಉತ್ತರ ಪ್ರದೇಶದ ಸಂಭಲ್‌ನಲ್ಲಿ 7 ಮಂದಿ ನಾಗರಿಕರು ಹಿಂಸಾಚಾರಕ್ಕೆ ಬಲಿಯಾದರು. ಸಂಭಲ್‌ನಲ್ಲಿರುವ ಸುಮಾರು 500 ವರ್ಷಗಳ ಹಿಂದಿನ ಮಸೀದಿಯೊಂದನ್ನು , ದೇವಸ್ಥಾನ ಕೆಡವಿ ಕಟ್ಟಿರಬೇಕು ಎಂದು ಯಾರೋ ಒಬ್ಬನಿಗೆ ಅನುಮಾನ ಬಂದಿದ್ದೇ ತಡ ಆತ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿದ. ನ್ಯಾಯಾಲಯಕ್ಕೆ ಅಷ್ಟೇ ಸಾಕಿತ್ತು, ಸರ್ವೇ ನಡೆಸಲು ಆದೇಶ ನೀಡಿಯೇ ಬಿಟ್ಟಿತ್ತು. ಧಾರ್ಮಿಕ ಸ್ಥಳಗಳ ಕಾಯ್ದೆಯ ಬಗ್ಗೆ ಪ್ರಾಥಮಿಕ ಅರಿವಿರುವ ಯಾರೂ ಈ ತೀರ್ಪನ್ನು ಒಪ್ಪಿಕೊಳ್ಳಲಾರರು. 1991ರ ಧಾರ್ಮಿಕ ಆರಾಧನಾ ಸ್ಥಳಗಳ ಕಾಯ್ದೆಯನ್ನು ಉಲ್ಲಂಘಿಸಿ ಈ ತೀರ್ಪನ್ನು ಸ್ಥಳೀಯ ನ್ಯಾಯಾಲಯ ಅವಸರವಸರವಾಗಿ ನೀಡಿತ್ತು. ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ಅಪೇಕ್ಷಿಸುವವರ ಉದ್ದೇಶ ಏನು ಮತ್ತು ಅದಕ್ಕೆ ಅನುಮತಿ ನೀಡಿದರೆ ಪರಿಣಾಮ ಏನಾಗುತ್ತದೆ ಎನ್ನುವುದನ್ನು ತಿಳಿಯದಷ್ಟು ನ್ಯಾಯಾಧೀಶರು ಅಜ್ಞಾನಿಯೇನೂ ಆಗಿರಲಿಲ್ಲ. ಪರಿಣಾಮಗಳನ್ನು ಅರಿತು ಉದ್ದೇಶಪೂರ್ವಕವಾಗಿ ಅಂದರೆ ರಾಜಕೀಯ ಪ್ರೇರಿತವಾಗಿ ಈ ತೀರ್ಪನ್ನು ನ್ಯಾಯಾಧೀಶರು ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಮೀಕ್ಷೆಯ ದಿನ ಸಂಘಪರಿವಾರ ಕಾರ್ಯಕರ್ತರು ಜೈ ಶ್ರೀರಾಂ ಎನ್ನುತ್ತಾ ಮಸೀದಿಯ ಆವರಣಕ್ಕೆ ನುಗ್ಗಿದರು. ಅಧಿಕಾರಿಗಳು ಇದನ್ನು ನೋಡಿಯೂ ನೋಡದಂತೆ ಸುಮ್ಮನಿದ್ದರು. ಸ್ಥಳೀಯರನ್ನು ಪ್ರಚೋದಿಸುವುದು ಅವರ ಗುರಿಯಾಗಿತ್ತು ಮಾತ್ರವಲ್ಲ, ಅದರಲ್ಲಿ ಯಶಸ್ವಿಯೂ ಆದರು. ಸಮೀಕ್ಷೆಯನ್ನು ಕೆಲವರು ಪ್ರತಿಭಟಿಸುತ್ತಿದ್ದಂತೆಯೇ ಪೊಲೀಸರು ಲಾಠಿಯ ಮೂಲಕ ಅವರನ್ನು ದಮನಿಸಲು ಮುಂದಾದರು. ಕೊನೆಯಲ್ಲಿ 7 ಜನರ ಬರ್ಬರ ಹತ್ಯೆಯೊಂದಿಗೆ ನ್ಯಾಯಾಲಯದ ಸಮೀಕ್ಷೆ ಯಶಸ್ವಿಯಾಗಿ ಮುಗಿಯಿತು. ಬಳಿಕ ಸುಪ್ರೀಂಕೋರ್ಟ್ ಈ ಸಮೀಕ್ಷೆ ವಿಚಾರಣೆಗೆ ತಡೆಯನ್ನು ಒಡ್ಡಿತು. ಇದರ ಬೆನ್ನಿಗೇ ಅಜ್ಮೀರ್ ದರ್ಗಾದಲ್ಲೂ ದೇವಸ್ಥಾನವಿತ್ತು ಎನ್ನುವ ಅರ್ಜಿಯೊಂದು ರಾಜಸ್ಥಾನದ ನ್ಯಾಯಾಲಯವೊಂದರಲ್ಲಿ ಸಲ್ಲಿಕೆಯಾಗಿದ್ದು ನ್ಯಾಯಾಧೀಶರು ಅದನ್ನೂ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ವಾರಣಾಸಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಳಿಕ ಇಂತಹ ಅರ್ಜಿಗಳು ಎರ್ರಾಬಿರ್ರಿಯಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಿವೆ. 10ಕ್ಕೂ ಅಧಿಕ ಮಸೀದಿಗಳ ಮೂಲ ಸ್ವರೂಪವನ್ನು ಅರಿಯಲು ಸಮೀಕ್ಷೆ ನಡೆಸಬೇಕು ಎಂದು ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದೆ.

ಸಾಲು ಸಾಲಾಗಿ ನ್ಯಾಯಾಲಯದ ಮುಂದೆ ಬಂದು ಬೀಳುತ್ತಿರುವ ಅರ್ಜಿಗಳನ್ನು ನೋಡಿ ಸುಪ್ರೀಂಕೋರ್ಟಿಗೂ ಸಾಕಾಗಿರಬೇಕು. ಆರಾಧನಾ ಕಾಯ್ದೆಗಳಿಗೆ ಸಂಬಂಧಿಸಿದ ವಿಚಾರಣೆ ಇತ್ಯರ್ಥವಾಗುವವರೆಗೆ ಧಾರ್ಮಿಕ ಸ್ಥಳಗಳನ್ನು ಅದರಲ್ಲೂ ಮುಖ್ಯವಾಗಿ ಮಸೀದಿಗಳು ಹಾಗೂ ದರ್ಗಾಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಕೋರಿಕೆ ಇರುವ ಹೊಸ ಅರ್ಜಿಗಳನ್ನು ದೇಶದ ನ್ಯಾಯಾಲಯಗಳು ಮುಂದಿನ ಸೂಚನೆಯವರೆಗೆ ವಿಚಾರಣೆಗೆ ಕೈಗೊಳ್ಳುವಂತೆ ಇಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ನಿರ್ದೇಶನ ನೀಡಿದೆ. ಅಷ್ಟೇ ಅಲ್ಲ, ಬಾಕಿ ಇರುವ ಅರ್ಜಿಗಳ ವಿಚಾರವಾಗಿ ಮಧ್ಯಂತರ ಅಥವಾ ಅಂತಿಮ ಆದೇಶವನ್ನು ನೀಡುವಂತೆ ಇಲ್ಲ ಎಂದು ಕೂಡ ಸುಪ್ರೀಂಕೋರ್ಟ್ ಸೂಚಿಸಿದೆ. ಪರಿಣಾಮವಾಗಿ ಸುಮಾರು 18 ಅರ್ಜಿಗಳ ವಿಚಾರಣೆಯನ್ನು ತಡೆಹಿಡಿಯಲಾಗಿದೆ. ಬಹುಶಃ ಈ ಹಿಂದೆ ಜ್ಞಾನವಾಪಿ ಮಸೀದಿಯ ಸಂದರ್ಭದಲ್ಲೇ ಇಂತಹದೊಂದು ವಿವೇಕಯುತವಾದ ಆದೇಶವನ್ನು ನ್ಯಾಯಾಲಯ ಹೊರಡಿಸಿದ್ದಿದ್ದರೆ, ಇಂದು ದೇಶಾದ್ಯಂತ ಇಂತಹ ಅರ್ಜಿಗಳನ್ನು ಪರಿಶೀಲಿಸುವ ಸ್ಥಿತಿ ನ್ಯಾಯಾಲಯಕ್ಕೆ ಬರುತ್ತಿರಲಿಲ್ಲ. ಸಂಭಲ್‌ನಲ್ಲಿ ಏಳು ಮಂದಿ ಅಮಾಯಕರು ಪೊಲೀಸರ ಗುಂಡಿನಿಂದ ಸಾಯುವ ಸ್ಥಿತಿಯೂ ನಿರ್ಮಾಣವಾಗುತ್ತಿರಲಿಲ್ಲ.

ಯಾರು ಬೇಕಾದರೂ ಪುರಾತನ ಮಸೀದಿಯ ವಿರುದ್ಧ ಹಕ್ಕು ಸಾಧಿಸಬಹುದು ಎನ್ನುವ ವಾತಾವರಣ ನಿರ್ಮಿಸಿದ್ದು ಸ್ವತಃ ಸುಪ್ರೀಂಕೋರ್ಟೇ ಆಗಿದೆ. ಅಂದಿನ ನ್ಯಾಯಮೂರ್ತಿ ಚಂದ್ರಚೂಡ್ ಅವರು ನೀಡಿರುವ ಆದೇಶ ಮತ್ತು ಆ ಬಳಿಕ ನೀಡಿದ ಹೇಳಿಕೆಗಳು ನ್ಯಾಯಾಲಯವನ್ನು ಜನರು ಹಗುರವಾಗಿ ತೆಗೆದುಕೊಳ್ಳುವಂತೆ ಮಾಡಿತು. 1991ರ ಆರಾಧನಾ ಸ್ಥಳಗಳ ಕಾಯ್ದೆಯು 1947ರ ಮೊದಲು ಇದ್ದ ಧಾರ್ಮಿಕ ಸ್ಥಳಗಳ ಅಸ್ತಿತ್ವಕ್ಕೆ ರಕ್ಷಣೆಯನ್ನು ನೀಡುತ್ತದೆ. ಬಾಬರಿ ಮಸೀದಿ ಪ್ರಕರಣ ಸೇರಿದಂತೆ, ಪ್ರಾಚೀನ ಸ್ಮಾರಕಗಳು, ಈ ಹಿಂದೆ ರಾಜಿಯಲ್ಲಿ ಇತ್ಯರ್ಥವಾದ ಪ್ರಕರಣಗಳು ಈ ಕಾಯ್ದೆಯಿಂದ ವಿನಾಯಿತಿ ಪಡೆಯುತ್ತವೆ. ಇದೀಗ ಈ ಕಾಯ್ದೆಯನ್ನೇ ಪ್ರಶ್ನಿಸಿ ಕೆಲವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಅರ್ಜಿ ಇತ್ಯರ್ಥವಾಗುವ ಮೊದಲೇ ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯಗಳು ಆದೇಶ ಹೊರಡಿಸುವುದೆಂದರೆ ನ್ಯಾಯಾಧೀಶರೇ ನ್ಯಾಯ ವ್ಯವಸ್ಥೆಯನ್ನು ಅತಿಕ್ರಮಿಸಿದಂತೆ. ಇದೀಗ ಸುಪ್ರೀಂಕೋರ್ಟ್ ಈ ಅರ್ಜಿಗಳ ಸ್ವೀಕಾರದಿಂದಾಗುವ ಅನಾಹುತಗಳನ್ನು ಮನಗಂಡು ಅವುಗಳನ್ನು ಸ್ವೀಕರಿಸಬೇಡಿ ಎಂದು ಆದೇಶ ನೀಡಿದೆ.

ಸುಪ್ರೀಂಕೋರ್ಟ್‌ನ ಈ ಮಹತ್ವದ ಆದೇಶದಿಂದಾಗಿ ಅನಗತ್ಯ ಗೊಂದಲ, ಹಿಂಸಾಚಾರಗಳಿಗೆ ತಾತ್ಕಾಲಿಕವಾದ ತಡೆಯೊಂದು ಬಿದ್ದಂತಾಗಿದೆ. ಮುಖ್ಯವಾಗಿ ಅರ್ಜಿ ಸಲ್ಲಿಸುವವರು ನಿಜಕ್ಕೂ ದೇವರ ಮೇಲೋ, ದೇವಸ್ಥಾನಗಳ ಮೇಲೋ ಕಾಳಜಿಯನ್ನು ಹೊಂದಿರುವವರಲ್ಲ. ಇವೆಲ್ಲವೂ ರಾಜಕೀಯ ಪ್ರೇರಿತವಾದ ಅರ್ಜಿಗಳು. ಈ ಮೂಲಕ ಸ್ಥಳೀಯ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣವನ್ನು ನಿರ್ಮಿಸುವುದು, ಹಿಂದೂ-ಮುಸ್ಲಿಮರ ನಡುವಿನ ಸೌಹಾರ್ದವನ್ನು ಕೆಡಿಸಿ ರಾಜಕೀಯ ಬೇಳೆ ಬೇಯಿಸುವುದು ಅವರ ಗುರಿಯಾಗಿದೆ. ಮಸೀದಿ- ಮಂದಿರದ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ರಾಜಕೀಯ ಹಿಂಸಾಚಾರಗಳನ್ನು ಅರಿತ ಬಳಿಕವೂ ನ್ಯಾಯಾಲಯಗಳ ಕೆಲವು ನ್ಯಾಯಾಧೀಶರು ಈ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸುತ್ತಿರುವುದು ಕಾನೂನಿನ ಅಜ್ಞಾನದಿಂದಲ್ಲ. ಈ ರಾಜಕೀಯದಲ್ಲಿ ಅವರೂ ಶಾಮೀಲಾಗಿದ್ದಾರೆ.

ಇಂದು ಈ ದೇಶದ ಸಾವಿರಾರು ಕೆರೆಗಳನ್ನು, ನಾಲೆಗಳನ್ನು, ನದಿಗಳನ್ನು ಅತಿಕ್ರಮಿಸಿ ಅಲ್ಲಿ ಬೃಹತ್ ಕಟ್ಟಡಗಳು ತಲೆಯೆತ್ತಿ ನಿಂತಿವೆ. ಕೇವಲ ಬೆಂಗಳೂರಿನಲ್ಲೇ ಸುಮಾರು 40ರಷ್ಟು ಕೆರೆಗಳಲ್ಲಿ ಶೇ. 95ರಷ್ಟು ಕೆರೆಗಳು ಅತಿಕ್ರಮಣಗೊಂಡಿವೆ ಎಂದು ವರದಿಗಳು ಹೇಳುತ್ತಿವೆ. ಬೆಂಗಳೂರಿನ ನೀರಿನ ಕೊರತೆ ಮತ್ತು ಮಳೆಗಾಲದಲ್ಲಿ ನೆರೆ ಇವೆಲ್ಲಕ್ಕೂ ಈ ಅತಿಕ್ರಮಣವೇ ಕಾರಣ. ದೇವಸ್ಥಾನಗಳನ್ನು ಮಸೀದಿಗಳು ಆಕ್ರಮಿಸಿವೆಯೇ ಎಂದು ಹುಡುಕುವ ಬದಲು ಈ ಅತಿಕ್ರಣಗೊಂಡ ಕೆರೆಗಳ ಬಗ್ಗೆ ನ್ಯಾಯಾಲಯ ತಲೆಕೆಡಿಸಿಕೊಳ್ಳಬೇಕು. ಹಾಗೆಯೇ ಅತಿಕ್ರಮಣಗೊಂಡ ರಸ್ತೆಗಳು, ಅಕ್ರಮ ಕಟ್ಟಡಗಳು, ಅತಿಕ್ರಮಣಗೊಂಡ ಅರಣ್ಯ ಇವೆಲ್ಲದರ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾದರೆ ಅದರಿಂದ ಸಮಾಜಕ್ಕೆ, ಭವಿಷ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ.

ಗುರುವಾರ, ಮಧ್ಯಪ್ರದೇಶದಲ್ಲಿ ಮಹಿಳಾ ನ್ಯಾಯಾಧೀಶರ ವಜಾಕ್ಕೆ ಸಂಬಂಧಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್, ನ್ಯಾಯಾಧೀಶರಿಗೆ ಕೆಲವು ಮಾರ್ಗದರ್ಶನಗಳನ್ನು ನೀಡಿತು. ‘‘ನ್ಯಾಯಾಧೀಶರು ಸಂತರ ಜೀವನ ಶೈಲಿಯನ್ನು ಹೊಂದಿರಬೇಕು. ತ್ಯಾಗಭಾವ ಅವರಲ್ಲಿರಬೇಕು. ತೀರ್ಪಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು. ಫೇಸ್‌ಬುಕ್‌ನ್ನು ಸಂಪೂರ್ಣ ತ್ಯಜಿಸಬೇಕು...’’ ಎಂಬಿತ್ಯಾದಿ ಸಲಹೆಗಳನ್ನು ನೀಡಿತ್ತು. ಸ್ಥಳೀಯ ನ್ಯಾಯಾಧೀಶರಿಗೆ ಈ ಸಲಹೆಗಳನ್ನು ನೀಡುವ ಸುಪ್ರೀಂಕೋಟ್, ತನ್ನದೇ ಕೆಲವು ಮಾಜಿ ಮತ್ತು ಹಾಲಿ ನ್ಯಾಯಾಧೀಶರ ನಡವಳಿಕೆಗಳ ಕಡೆಗೆ ಗಮನಹರಿಸಬೇಕಾಗಿದೆ. ವಿಶ್ವ ಹಿಂದೂ ಪರಿಷತ್‌ನ ಸಮಾವೇಶದಲ್ಲಿ ಭಾಗವಹಿಸಿ ದ್ವೇಷ ರಾಜರಕಾರಣಕ್ಕೆ ಬಹಿರಂಗವಾಗಿ ಕರೆಕೊಡುವ ನ್ಯಾಯಾಧೀಶರ ಮುಂದೆ ಸುಪ್ರೀಂಕೋರ್ಟ್‌ನ ಈ ಉಪದೇಶ ಎಷ್ಟರಮಟ್ಟಿಗೆ ಫಲಿಸಬಹುದು?. ನ್ಯಾಯಾಧೀಶರು ಸಂತರಾಗದಿದ್ದರೂ ಪರವಾಗಿಲ್ಲ, ಕನಿಷ್ಠ ತೀರ್ಪು ನೀಡುವ ಸಂದರ್ಭದಲ್ಲಿ ಸಂವಿಧಾನಕ್ಕೆ ಬದ್ಧರಾಗಿದ್ದರೆ ಅಷ್ಟೇ ಸಾಕು ಎನ್ನುವಂತಾಗಿದೆ ನಮ್ಮ ನ್ಯಾಯ ವ್ಯವಸ್ಥೆಯ ಇಂದಿನ ಸ್ಥಿತಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News