ಕಲಬೆರಕೆ ಆಹಾರ : ಕಠಿಣ ಕ್ರಮ ಅಗತ್ಯ

Update: 2025-04-15 07:09 IST
ಕಲಬೆರಕೆ ಆಹಾರ : ಕಠಿಣ ಕ್ರಮ ಅಗತ್ಯ

ಸಾಂದರ್ಭಿಕ ಚಿತ್ರ

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನಾವು ಪ್ರತಿನಿತ್ಯ ಸೇವಿಸುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ, ಹೀಗೆ ಎಲ್ಲವೂ ಕಲಬೆರಕೆಯಾಗಿ ವಿಷಮಯವಾದಾಗ ಬದುಕುವುದಾದರೂ ಹೇಗೆ? ಅದರಲ್ಲೂ ಬಹುತೇಕ ದುಡಿಯುವ ಜನರ ಹಸಿವು ಇಂಗಿಸುವ ಹೋಟೆಲ್, ರೆಸ್ಟೋರೆಂಟ್ ಸೇರಿ ಆಹಾರೋದ್ಯಮವೇ ಅಸುರಕ್ಷಿತವಾಗಿರುವಾಗ ಆರೋಗ್ಯಕರವಾಗಿ ಬದುಕುವುದು ಸಾಧ್ಯವೇ? ಹಾಗಾಗಿಯೇ ಇಂತಹವುಗಳ ವಿರುದ್ಧ ರಾಜ್ಯ ಸರಕಾರ ಯುದ್ಧವನ್ನು ಘೋಷಿಸಿದೆ. ಸರಕಾರದ ಈ ದಿಟ್ಟ ಕ್ರಮವನ್ನು ಎಲ್ಲರೂ ಸ್ವಾಗತಿಸಬೇಕಾಗಿದೆ.

ಆಹಾರದ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳು ಇತ್ತೀಚೆಗೆ ಎರಡು ದಿನಗಳ ಕಾಲ ರಾಜ್ಯದ ಏಳು ಜಿಲ್ಲೆಗಳ 479 ಹೋಟೆಲ್‌ಗಳ ತಪಾಸಣೆ ಮಾಡಿದಾಗ ಇವುಗಳಲ್ಲಿ 174 ಹೋಟೆಲ್‌ಗಳಲ್ಲಿ ಶುಚಿತ್ವ ಎಲ್ಲೂ ಕಾಣಲಿಲ್ಲ. ರಾಜ್ಯದೆಲ್ಲೆಡೆ ನಾವು ಸೇವಿಸುವ ಆಹಾರದಲ್ಲಿ ಶೇ.20ಕ್ಕಿಂತ ಅಧಿಕ ಪ್ರಮಾಣದಲ್ಲಿ ಕಲಬೆರಕೆ ಇರುತ್ತದೆ ಎಂಬುದು ಸಂಶೋಧನೆಯಿಂದ ಖಚಿತ ಪಟ್ಟಿದೆ ಎಂದು ಆಹಾರ ತಜ್ಞರು ಹೇಳಿದ್ದಾರೆ. ಆಹಾರದ ಹೆಸರಿನಲ್ಲಿ ಜನಸಾಮಾನ್ಯರಿಗೆ ವಿಷಪ್ರಾಶನ ಮಾಡಿಸುತ್ತಿರುವುದು ಅತ್ಯಂತ ಕೆಟ್ಟ ಅಪರಾಧವಾಗಿದೆ. ಹೋಟೆಲ್‌ಗಳಲ್ಲಿ ಸೇವಿಸುತ್ತಿರುವ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ಮುಂತಾದವುಗಳನ್ನು ಸರಕಾರ ತಡ ಮಾಡಿ ನಿಷೇಧಿಸಿದ್ದರೂ, ಇವುಗಳಲ್ಲದೆ ನಾವು ತಿನ್ನುವ ಇತರ ಆಹಾರ ಪದಾರ್ಥಗಳು ಹಾಗೂ ಕುಡಿಯುವ ಪಾನೀಯಗಳು ಕೂಡ ಅತ್ಯಂತ ಅಪಾಯಕಾರಿಯಾಗಿವೆ.

ನಾವು ದಿನವೂ ಬಳಸುವ ಅಕ್ಕಿ, ಬೇಳೆಯಂಥ ಪದಾರ್ಥದಿಂದ ಹಿಡಿದು ಬಾಯಿಗೆ ರುಚಿಯಾಗಿರುವ ಹಲವಾರು ವಿಧದ ತಿಂಡಿ ಪದಾರ್ಥಗಳಲ್ಲಿ ಅತ್ಯಂತ ಕೆಟ್ಟ ವಿಷಕಾರಕ ರಾಸಾಯನಿಕಗಳು ಕಲಬೆರಕೆಯಾಗಿ ಅಡುಗೆ ಮನೆಯನ್ನು ಸೇರುತ್ತಿವೆ. ಹೀಗಾಗಿ ಹೋಟೆಲ್ ಮಾತ್ರವಲ್ಲ ನಾವು ಮನೆಯಲ್ಲಿ ಊಟಕ್ಕೆ ಬಳಸುವ ಆಹಾರ ಪದಾರ್ಥಗಳು ಕೂಡಾ ಸುರಕ್ಷಿತವಲ್ಲ ಎಂಬುದು ಕಳವಳಕಾರಿ ಸಂಗತಿಯಾಗಿದೆ. ಹೋಟೆಲ್‌ಗಳಲ್ಲಂತೂ ತಿಂಡಿ ಪದಾರ್ಥಗಳ ರುಚಿಯನ್ನು ಹೆಚ್ಚಿಸಲು ನಿಷೇಧಿತ ರಾಸಾಯನಿಕಗಳನ್ನು ಬೆರೆಸಿ ಮಾರಾಟ ಮಾಡಲಾಗುತ್ತಿದೆ. ತಿಂಡಿ ಪದಾರ್ಥಗಳಿಗೆ ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಬಣ್ಣಗಳನ್ನು ಬೆರೆಸುವುದು ಸಾಮಾನ್ಯವಾಗಿದೆ. ಹಾಲು, ಮಾಂಸ ಹಾಗೂ ಕೋಳಿಗಳಿಗೆ ಆ್ಯಂಟಿ ಬಯೋಟಿಕ್ಸ್ ಬಳಕೆ ಮಾಡಲಾಗುತ್ತಿದೆ. ಅಕ್ಕಿ, ಬೇಳೆಗಳಲ್ಲಿ ಕಲಬೆರಕೆ ಮಸಾಲೆ ಪದಾರ್ಥಗಳನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ. ಕಾಳ ಸಂತೆಯಲ್ಲಿ ಪಡಿತರ ಅಕ್ಕಿಯನ್ನು ಖರೀದಿ ಮಾಡಿ ಪಾಲಿ ಶ್ ಮಾಡಲಾಗುತ್ತಿದೆ.

ಈಗಂತೂ ನಮ್ಮ ದೇಶದಲ್ಲಿ ಕಲಬೆರಕೆ ಇಲ್ಲದ ಒಂದು ಪದಾರ್ಥವೂ ಸಿಗಲಾರದು. ಹಾಲಿಗೆ ನೀರು ಮಾತ್ರವಲ್ಲ, ಅಪಾಯಕಾರಿ ರಾಸಾಯನಿಕಗಳನ್ನು ಬೆರೆಸುವುದು, ಮದ್ಯಕ್ಕೆ ಕೈಗಾರಿಕಾ ಸ್ಪಿರಿಟ್ ಬೆರೆಸುವುದಲ್ಲದೆ ನೂರಾರು ವರ್ಷಗಳಿಂದ ನಾವು ಉಪಯೋಗಿಸುತ್ತಿದ್ದ ಗಾಣದ ಎಣ್ಣೆಯ ಜಾಗವನ್ನೂ ಕಲಬೆರಕೆಗೊಂಡರೂ ಜಾಹೀರಾತುಗಳ ಮೂಲಕ ಪ್ರಚಾರ ಪಡೆಯುವ ಅಪಾಯಕಾರಿ ಅಡುಗೆ ಎಣ್ಣೆಗಳು ಮಾರುಕಟ್ಟೆಯಲ್ಲಿ ಆಕ್ರಮಿಸುತ್ತಿವೆ. ಇತ್ತೀಚೆಗೆ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಸುರಕ್ಷಿತವೆಂದು ಹೇಳಲಾಗುವ ಇಡ್ಲಿ ಬೇಯಿಸಲು ಕೂಡಾ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದು ಕಂಡುಬಂದಿದ್ದು ಇದು ಅತ್ಯಂತ ಅಪಾಯಕಾರಿ ಎಂದು ತಡವಾಗಿಯಾದರೂ ಸರಕಾರ ನಿರ್ಬಂಧಿಸಿರುವುದು ಶ್ಲಾಘನೀಯ ಕ್ರಮವಾಗಿದೆ. ದೇಶದಲ್ಲಿ ಕ್ಯಾನ್ಸರ್ ವ್ಯಾಪಿಸಿರುವುದಕ್ಕೆ ಈ ಕಲಬೆರಕೆ ಆಹಾರ ಮುಖ್ಯ ಕಾರಣ ಎಂದು ಆರೋಗ್ಯ ಇಲಾಖೆ ಒಪ್ಪಿಕೊಂಡಿದೆ.

ನಮ್ಮ ದಿನನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಎಂಬುದು ಅವಿಭಾಜ್ಯ ಅಂಗ ಎನ್ನುವಂತಾಗಿದೆ. ನಮ್ಮ ಅವಶ್ಯಕತೆಗೆ ಪ್ಲಾಸ್ಟಿಕ್ ಬಳಕೆ ವ್ಯಾಪಕವಾಗಿರುವುದರಿಂದ ಅದರ ಅಪಾಯಕಾರಿ ಅಂಶಗಳ ಕಡೆಗೆ ಗ್ರಾಹಕರು ಗಮನಿಸುವುದಿಲ್ಲ. ಯಾವುದೇ ಬಿಸಿ ಆಹಾರ ಪದಾರ್ಥಗಳಿಗೆ ಪ್ಲಾಸ್ಟಿಕ್ ಉಪಯೋಗಿಸುವುದರಿಂದ ಅದರ ವಿಷಕಾರಿ ಅಂಶಗಳು ಆಹಾರದಲ್ಲಿ ಸೇರ್ಪಡೆಯಾಗುತ್ತವೆ. ಪ್ಲಾಸ್ಟಿಕ್ ಬಳಕೆಯ ಕಾರಣದಿಂದ ಅದರ ವಿಷಕಾರಿ ಧಾತುಗಳು, ಸೂಕ್ಷ್ಮ ಕಣಗಳು ಆಹಾರ ಪದಾರ್ಥಗಳೊಂದಿಗೆ ಕೂಡಿಕೊಳ್ಳುತ್ತವೆ. ಹೀಗೆ ಕಲುಷಿತಗೊಂಡ ಆಹಾರವನ್ನು ಸೇವಿಸಿದವರ ದೇಹದಲ್ಲಿ ಕ್ಯಾನ್ಸರ್ ನಿಧಾನವಾಗಿ ಬೆಳೆಯುತ್ತಾ ಹೋಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೂ ಅದರತ್ತ ಯಾರೂ ಗಮನಿಸುವುದಿಲ್ಲ.

ಬಹುತೇಕ ದಕ್ಷಿಣ ಭಾರತದ ಜನಸಾಮಾನ್ಯರ ನಿತ್ಯದ ತಿಂಡಿ ಪದಾರ್ಥವಾದ ಈಗ ಉತ್ತರ ಭಾರತದಲ್ಲೂ ಬೇಡಿಕೆಯಿರುವ ಇಡ್ಲಿಯನ್ನು ಸಾಮಾನ್ಯವಾಗಿ ಮುಂಚಿನಿಂದಲೂ ಹೋಟೆಲ್‌ಗಳಲ್ಲಿ ಬಟ್ಟೆ ಉಪಯೋಗಿಸಿ ಬೇಯಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಹಾಳೆಯನ್ನು ಉಪಯೋಗಿಸಿ ಬೇಯಿಸಲಾಗುತ್ತದೆ. ಅಲ್ಲದೆ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಳೆಯ ಮೇಲೆಯೇ ತಿಂಡಿಗಳನ್ನು ಹಾಕಿ ಕೊಡಲಾಗುತ್ತದೆ. ಆಹಾರ ತಜ್ಞರ ಪ್ರಕಾರ ಪ್ಲಾಸ್ಟಿಕ್ ಹಾಳೆಯಲ್ಲಿ ತಿಂಡಿ ಪದಾರ್ಥಗಳ ಸೇವನೆಯಿಂದ ದೇಹಕ್ಕೆ ಕಾರ್ಸಿನೋಜೆನಿಕ್ (ಕ್ಯಾನ್ಸರ್ ಕಾರಕ) ಅಂಶಗಳು ಸೇರ್ಪಡೆಯಾಗುತ್ತವೆ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿರುವ ಎಚ್ಚರಿಕೆ ಸೂಕ್ತವಾಗಿದೆ.

ಸಾಮಾನ್ಯವಾಗಿ ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಅನಾರೋಗ್ಯದಿಂದ ನರಳುವವರಿಗೆ ಇಡ್ಲಿ ಅತ್ಯಂತ ಸುರಕ್ಷಿತವಾದ ಪದಾರ್ಥ ಎಂದು ಮುಂಚಿನಿಂದಲೂ ಹೇಳಲಾಗುತ್ತದೆ. ಆದರೆ ಅಂಥ ಸುರಕ್ಷಿತ ಆಹಾರವೂ ಅಸುರಕ್ಷಿತ ಎಂದು ಹೇಳಬೇಕಾಗಿ ಬಂದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಇಡ್ಲಿಯನ್ನು ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿರುವ ಪ್ರಕರಣಗಳ ಕುರಿತು ಸಮಗ್ರವಾದ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದವರ ಮೇಲೆ ಕ್ರಮ ಕೈಗೊಳ್ಳುವಂತೆ, ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಈಗಾಗಲೇ ನಿರ್ದೇಶನವನ್ನು ನೀಡಿದ್ದಾರೆ. ರಾಜ್ಯದ ಆರೋಗ್ಯ ಸಚಿವರು ಕೂಡ ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ಮಂತ್ರಿಗಳು ಮತ್ತು ಅಧಿಕಾರಿಗಳ ಹೇಳಿಕೆ ಬರೀ ಕಾಟಾಚಾರದ ಹೇಳಿಕೆಯಾಗಬಾರದು. ಹೇಳಿಕೆಯ ಜೊತೆಗೆ ಸಂಬಂಧಿಸಿದವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಪ್ಲಾಸ್ಟಿಕ್ ಹಾಳೆಗಳನ್ನು ಉಪಯೋಗಿಸಿ ತಯಾರು ಮಾಡುವ ಇಡ್ಲಿ ಸೇರಿದಂತೆ ಇತರ ತಿಂಡಿ ಪದಾರ್ಥಗಳು ಹೇಗೆ ಆರೋಗ್ಯಕ್ಕೆ ಮಾರಕ ಎಂಬುದರ ಬಗ್ಗೆ ವ್ಯಾಪಕವಾಗಿ ಜನಜಾಗೃತಿಗೆ ಮುಂದಾಗಬೇಕು. ಎಲ್ಲವನ್ನೂ ಸರಕಾರ ಮಾಡಲು ಆಗುವುದಿಲ್ಲ. ಸಾರ್ವಜನಿಕರು ಕೂಡ ಪ್ಲಾಸ್ಟಿಕ್ ಬಳಸುವುದನ್ನು ಕೈ ಬಿಡಬೇಕು.

ಈಗಂತೂ ಪ್ಲಾಸ್ಟಿಕ್ ಬಳಕೆ ವ್ಯಾಪಕವಾಗಿದೆ. ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಬಳಸುವುದು ಈಗ ಸಾಮಾನ್ಯವಾಗಿದೆ. ಇನ್ನು ಮುಂದಾದರೂ ಇವುಗಳ ಬಳಕೆಯನ್ನು ಸ್ಥಗಿತಗೊಳಿಸಬೇಕು. ಹೋಟೆಲ್‌ಗಳಿಂದ ಬಿಸಿಪದಾರ್ಥಗಳನ್ನು ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿಸಿಕೊಂಡು ಬರುವ ಬದಲಾಗಿ ತಿಂಡಿ ಪದಾರ್ಥಗಳನ್ನು ತರಲು ಮನೆಯಿಂದಲೇ ಪಾತ್ರೆಗಳನ್ನು ಕೊಂಡೊಯ್ಯುವುದು ಸೂಕ್ತ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಗತ್ಯವಾಗಿದೆ.

ಮುಂಚೆ ಇಂತಹ ಪ್ರಕರಣಗಳಲ್ಲಿ ಜನಸಾಮಾನ್ಯರು, ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿಯುತ್ತಿದ್ದರು. ಈಗ ಹೋರಾಟಗಳ ಸ್ವರೂಪವೇ ಬದಲಾಗಿದೆ. ಭಾವನಾತ್ಮಕ ವಿಷಯಗಳನ್ನು ಎತ್ತಿಕೊಂಡು ಬೀದಿಗೆ ಇಳಿಯುವ ಪ್ರವೃತ್ತಿ ವ್ಯಾಪಕವಾಗಿದೆ. ಹೀಗಾಗಿ ಇಂತಹ ವಿಷಯಗಳಲ್ಲಿ ಯಾವ ಪ್ರತಿಭಟನೆಗಳೂ ಬರದಿರುವುದರಿಂದ ಕಲಬೆರಕೆ ದಂಧೆ ಮಾಡುವವರನ್ನು ಕೇಳುವವರೇ ಇಲ್ಲದಂತಾಗಿದೆ. ಇಂತಹವರೇ ಹಣ ಚೆಲ್ಲಿ ಕೋಮುವಾದಿ ಸಂಘಟನೆಗಳನ್ನು ಸಾಕುತ್ತಾರೆ. ಹೀಗಾಗಿ ಕಲಬೆರಕೆಯಂಥ ಅಪಾಯಕಾರಿ ದಂಧೆಯಲ್ಲಿ ತೊಡಗಿರುವವರು ಈವರೆಗೆ ಯಾರ ಹೆದರಿಕೆಯೂ ಇಲ್ಲದೇ ತಮ್ಮ ವಂಚನೆಯ ವ್ಯಾಪಾರವನ್ನು ನಡೆಸಿಕೊಂಡು ಬಂದಿದ್ದಾರೆ. ಇದು ಇನ್ನು ಮುಂದಾದರೂ ನಿಲ್ಲಬೇಕು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News