ಫುಲೆ ಸಿನೆಮಾ: ಕತ್ತರಿ ಹಾಕಬೇಕಾಗಿರುವುದು ಯಾರಿಗೆ?

Image Source : IMDB
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ದೇಶದ ಜಾತೀಯತೆ, ಅಸ್ಪಶ್ಯತೆಯ ವಿರುದ್ಧದ ಹೋರಾಟಗಳ ಚರಿತ್ರೆಯನ್ನು ನಾವು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆಯನ್ನು ಹೊರಗಿಟ್ಟು ನೋಡಲು ಸಾಧ್ಯವಿಲ್ಲ. ಈ ದೇಶದ ದಲಿತರು, ಅಸ್ಪಶ್ಯರೆಂದು ಕರೆಸಿಕೊಂಡವರು ತಮ್ಮ ಅಸ್ಮಿತೆಗಳನ್ನು ಗುರುತಿಸಿಕೊಳ್ಳತೊಡಗಿದ್ದು ಜ್ಯೋತಿಬಾ ಫುಲೆಯ ಮೂಲಕ. ಫುಲೆ ಶೂದ್ರರು ಮತ್ತು ದಲಿತರ ಪ್ರತಿರೋಧಗಳ ಚರಿತ್ರೆಯನ್ನು ಮುನ್ನೆಲೆಗೆ ತಂದರು. ಶಿವಾಜಿಯನ್ನು ‘ರೈತನ ಮಗ’ ಎಂದು ಕರೆದವರು ಫುಲೆ. ಬ್ರಾಹ್ಮಣ್ಯವಾದಿಗಳ ಸುಳ್ಳು ಶಿವಾಜಿಯನ್ನು ಹೊಡೆದು ಹಾಕಿ, ಅಲ್ಲಿ ನಮ್ಮ ನೆಲದ ಶಿವಾಜಿಯ ಚರಿತ್ರೆಯನ್ನು ಬರೆದರು. ಅಂಬೇಡ್ಕರ್ ಎನ್ನುವ ಕ್ರಾಂತಿಕಾರಿಯ ಹುಟ್ಟಿಗೆ ಪರೋಕ್ಷವಾಗಿ ಫುಲೆ ಕಾರಣರಾದರು. ಸಾವಿತ್ರಿ ಫುಲೆ ಈ ದೇಶದ ಮೊದಲ ಶಿಕ್ಷಕಿಯಾಗಿ ಗುರುತಿಸಿಕೊಂಡವರು. ಅಸ್ಪಶ್ಯತೆಯ ವಿರುದ್ಧದ ತಮ್ಮ ಹೋರಾಟದ ಹಾದಿಯಲ್ಲಿ ಮೇಲ್‌ಜಾತಿಯ ಜನರು ಎಸೆದ ಕಲ್ಲು ಮುಳ್ಳುಗಳನ್ನು ತುಳಿಯುತ್ತಲೇ ಹೆಜ್ಜೆಗಳನ್ನು ಮುಂದಿಟ್ಟರು. ಇಂತಹ ಜ್ಯೋತಿಬಾ ಫುಲೆಯ ಚರಿತ್ರೆಯನ್ನು ಇಂದಿನ ಜನಕ್ಕೆ ಬೇರೆ ಬೇರೆ ಮಾಧ್ಯಮಗಳ ಮೂಲಕ ತಲುಪಿಸುವುದು ಪ್ರಜ್ಞಾವಂತರ ಹೊಣೆಗಾರಿಕೆಯಾಗಿದೆ. ಫುಲೆಯವರು ಶೂದ್ರರು, ದಲಿತರ ಸ್ವಾತಂತ್ರ್ಯಕ್ಕಾಗಿ, ಅವರ ಘನತೆಯ ಬದುಕಿಗಾಗಿ ನಮ್ಮದೇ ನೆಲದ ಮೇಲ್‌ಜಾತಿಯ ಜನರ ವಿರುದ್ಧ ನಡೆಸಿದ ಹೋರಾಟ ಈ ದೇಶದ ನಿಜವಾದ ಸ್ವಾತಂತ್ರ್ಯ ಹೋರಾಟದ ಕಥನವಾಗಿದೆ. ಆದರೆ ಆ ಕಥನವನ್ನು ಮುಚ್ಚಿ ಹಾಕುವ, ಇತಿಹಾಸದ ಪುಟಗಳಿಂದ ಅಳಿಸಿ ಹಾಕುವ ಪ್ರಯತ್ನಗಳು ನಡೆಯುತಿರುವುದು ವಿಪರ್ಯಾಸವಾಗಿದೆ.
ಅನಂತ ಮಹದೇವನ್ ಅವರು ನಿರ್ದೇಶಿಸಿರುವ ಫುಲೆ ಸಿನೆಮಾ ಇದೀಗ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದೆ. ಆ ಚಿತ್ರವನ್ನು ಸ್ಥಗಿತಗೊಳಿಸಬೇಕು ಎಂದು ಕೆಲವು ಗುಂಪುಗಳು ಒತ್ತಾಯಿಸುತ್ತಿರುವ ಕಾರಣಕ್ಕಾಗಿ ಅದು ಸುದ್ದಿಯಲ್ಲಿದೆ. ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಫುಲೆ ಬದುಕಿನ ಕುರಿತ ಬರೇ ಎರಡು ಗಂಟೆಗಳ ಸಿನೆಮಾವನ್ನೇ ಸಹಿಸಲು ಸಾಧ್ಯವಿಲ್ಲದವರು, ಶತಮಾನದ ಹಿಂದೆ, ಅವರನ್ನು ಹೇಗೆ ನಡೆಸಿಕೊಂಡಿರಬಹುದು ಎಂದು ನಾವು ಈ ಸಂದರ್ಭದಲ್ಲಿ ಕಲ್ಪಿಸಿಕೊಳ್ಳಬೇಕಾಗಿದೆ. ಮೇಲ್‌ಜಾತಿಯ ಕೆಲವು ಸಂಘಟನೆಗಳು ‘ಫುಲೆ’ ಸಿನೆಮಾದ ಬಗ್ಗೆ ತಕರಾರು ತೆಗೆದಿದ್ದು ‘‘ಈ ಸಿನೆಮಾದಲ್ಲಿ ಮೇಲ್‌ಜಾತಿಯ ಜನರನ್ನು ಹೀನಾಯವಾಗಿ ತೋರಿಸಲಾಗಿದೆ’’ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ, ಅಂತಹ ದೃಶ್ಯಗಳಿಗೆ ಸಂಪೂರ್ಣವಾಗಿ ಕತ್ತರಿ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಫುಲೆಯ ಬದುಕು, ಹೋರಾಟಗಳ ಕೇಂದ್ರವೇ ಜಾತೀಯತೆಯ ವಿರುದ್ಧದ ಹೋರಾಟವಾಗಿದೆ. ಅಂದಿನ ಕಾಲದಲ್ಲಿ ಮೇಲ್‌ಜಾತಿಯ ಜನರ ಅಮಾನವೀಯತೆಯ ಪರಮಾವಧಿಗಳನ್ನು ತೋರಿಸದೇ, ಫುಲೆಯ ಹೋರಾಟವನ್ನು ಕಟ್ಟಿಕೊಡುವುದು ಸಾಧ್ಯವೇ ಇಲ್ಲ. ಇದೊಂದು ರೀತಿಯಲ್ಲಿ ‘ವಿಲನ್’ ಪಾತ್ರಕ್ಕೆ ಕತ್ತರಿ ಹಾಕಿ, ಬರೇ ನಾಯಕ ಪಾತ್ರವನ್ನಷ್ಟೇ ತೋರಿಸಬೇಕು ಎಂದು ಒತ್ತಾಯಿಸಿದ ಹಾಗೆ. ಫುಲೆ ಚಿತ್ರದಲ್ಲಿ ನಿಜವಾದ ಖಳನಾಯಕ ಜಾತೀಯತೆ, ಅಸ್ಪಶ್ಯತೆಗಳಾಗಿವೆ. ಈ ಜಾತೀಯತೆ, ಅಸ್ಪಶ್ಯತೆಯ ಹಿಂದೆ ಇದ್ದವರು ಬ್ರಿಟಿಷರೋ, ಮೊಗಲರೋ ಆಗಿರಲಿಲ್ಲ. ಭಾರತೀಯರೇ ಆಗಿದ್ದ ಮೇಲ್‌ಜಾತಿಗೆ ಸೇರಿದ ಜನರಾಗಿದ್ದರು. ಸಿನೆಮಾಗಳಲ್ಲಿ ತಮ್ಮನ್ನು ಕೆಲವು ದೃಶ್ಯಗಳಲ್ಲಿ ಹೀನಾಯವಾಗಿ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಮೇಲ್‌ಜಾತಿಯ ಜನರು ಒಂದನ್ನು ತಿಳಿದು ಕೊಳ್ಳಬೇಕಾಗಿದೆ. ಶತಶತಮಾನಗಳಿಂದ ನಿಜ ಬದುಕಿನಲ್ಲಿ ದಲಿತರನ್ನು ಪ್ರಾಣಿಗಿಂತ ಕಡೆಯಾಗಿ ನಡೆಸಿಕೊಂಡು ಬರಲಾಗಿದೆ. ಈಗಲೂ ಅದನ್ನು ಕೆಲವೆಡೆ ಮುಂದುವರಿಸುತ್ತಿದ್ದಾರೆ. ಇದು ಸಿನೆಮಾ ಅಲ್ಲ, ಜೀವನ. ಹಾಗಾದರೆ ಅದಕ್ಕಾಗಿ ಅವರೆಷ್ಟು ಆಕ್ರೋಶ ವ್ಯಕ್ತಪಡಿಸಬೇಕು? ನಾವಿಂದು ಫುಲೆ ಚಿತ್ರಗಳ ದೃಶ್ಯಗಳಿಗೆ ಕತ್ತರಿ ಹಾಕಬೇಕಾಗಿರುವುದಲ್ಲ, ಜಾತೀಯತೆಯನ್ನು ಇನ್ನೂ ಮುಂದುವರಿಸಲು ಯತ್ನಿಸುತ್ತಿರುವ ಶಕ್ತಿಗಳಿಗೆ ಕತ್ತರಿ ಹಾಕುವುದರ ಬಗ್ಗೆ ಚರ್ಚೆ ನಡೆಸಬೇಕು. ದುರದೃಷ್ಟವಶಾತ್ ಅಂತಹ ಚರ್ಚೆಗಳು ನಡೆಯುತ್ತಿಲ್ಲ. ಇದು ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ಯಾವ ಬರಹಗಳನ್ನೂ ಪ್ರಕಟಿಸದಂತೆ ತಡೆಯುವ ಪ್ರಯತ್ನಗಳು ನಡೆಯಬಹುದು. ಯಾಕೆಂದರೆ, ಅವುಗಳೆಲ್ಲವೂ ಮೇಲ್‌ಜಾತಿಯ ಜನರ ಅಮಾನವೀಯ ಮನಸ್ಥಿತಿಯನ್ನು ತೀವ್ರವಾಗಿ ಖಂಡಿಸುತ್ತಲೆಯ ಹಿಂದೂಧರ್ಮದೊಳಗಿರುವ ಅಸ್ಪಶ್ಯತೆ, ಜಾತೀಯತೆಯನ್ನು ತನ್ನ ಬರಹದುದ್ದಕ್ಕೂ ಕಟು ಪದಗಳಿಂದ ಅಂಬೇಡ್ಕರ್ ಟೀಕಿಸಿದ್ದಾರೆ. ಇವೆಲ್ಲವೂ ‘ಹಿಂದೂ ಧರ್ಮೀಯರ, ಮೇಲ್‌ಜಾತಿಯ ಜನರ ಭಾವನೆಗಳಿಗೆ ಧಕ್ಕೆ ಮಾಡುತ್ತವೆ’ ಎಂದು ಭವಿಷ್ಯದಲ್ಲಿ ಅಂಬೇಡ್ಕರ್ ಬರಹಗಳನ್ನು ನಿಷೇಧಿಸಬಹುದಾಗಿದೆ.
ಹಾಗೆಂದು, ಈ ದೇಶದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ಸಿನೆಮಾಗಳು ಬಂದೇ ಇಲ್ಲ ಎಂದೇನಿಲ್ಲ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ‘ಛಾವಾ’ ಸಿನೆಮಾ, ಸಂಭಾಜಿಯ ಬದುಕನ್ನು ಆಧರಿಸಿ ತೆಗೆದ ಚಿತ್ರ ಎನ್ನಲಾಗುತ್ತಿದೆ. ಯಾವ ಇತಿಹಾಸ ಪುಸ್ತಕವನ್ನು ಆಧರಿಸಿ ಈ ಚಿತ್ರಕ್ಕೆ ಕಥೆ ಹೆಣೆಯಲಾಗಿದೆ ಎನ್ನುವ ಪ್ರಶ್ನೆಗೆ ಈವರೆಗೆ ನಿರ್ದೇಶಕರು ಸ್ಪಷ್ಟ ಉತ್ತರವನ್ನು ನೀಡಿಲ್ಲ. ಹಸಿ ಸುಳ್ಳುಗಳನ್ನೇ ಪೋಣಿಸಿ, ಹಿಂದುತ್ವವಾದಿಗಳ ಪ್ರತಿನಿಧಿಯಾಗಿ ಸಂಭಾಜಿಯನ್ನು ಚಿತ್ರಿಸಲಾಗಿದೆ. ಆತನ ಮೇಲೆ ನಡೆದ ಹಿಂಸೆಗಳನ್ನು ವೈಭವೀಕರಿಸಲಾಗಿದೆ. ಹಿಂದೂ-ಮುಸ್ಲಿಮರ ನಡುವೆ ದ್ವೇಷವನ್ನು ಬಿತ್ತುವುದಕ್ಕಾಗಿಯೇ ಈ ಸಿನೆಮಾವನ್ನು ನಿರ್ಮಿಸಲಾಗಿದೆ ಎನ್ನುವುದು ಎಳೆ ಮಕ್ಕಳಿಗೂ ಅರ್ಥವಾಗುತ್ತದೆ. ಆದರೆ ನಮ್ಮ ಸೆನ್ಸರ್ ಬೋರ್ಡ್‌ಗೆ ಮಾತ್ರ ಅರ್ಥವಾಗಲಿಲ್ಲ. ಇತ್ತೀಚೆಗೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಹಿಂಸಾಚಾರಕ್ಕೆ ‘ಛಾವಾ’ ಸಿನೆಮಾ ಕಾರಣ ಎನ್ನುವುದನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಒಪ್ಪಿಕೊಂಡಿದ್ದಾರೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ರಚನೆಯಾದ ದಿನಗಳಿಂದ ರಾಜಕೀಯ ದುರುದ್ದೇಶಕ್ಕಾಗಿಯೇ ಸಾಲು ಸಾಲು ಚಿತ್ರಗಳನ್ನು ನಿರ್ಮಿಸಲಾಗಿದೆ. ಮನಮೋಹನ್ ಸಿಂಗ್, ಇಂದಿರಾಗಾಂಧಿಯನ್ನು ಟೀಕಿಸಿ ಮಾಡಿದ ಚಿತ್ರಗಳ ಬಗ್ಗೆ ಸೆನ್ಸರ್ ಮಂಡಳಿಗೆ ಯಾವುದೇ ಆಕ್ಷೇಪ ಇದ್ದಿರಲಿಲ್ಲ. ವೀರಸಾವರ್ಕರ್, ಎಮರ್ಜೆನ್ಸಿ, ಕೇರಳ ಫೈಲ್ಸ್, ಕಾಶ್ಮೀರ್ ಫೈಲ್ಸ್ ಇವೆಲ್ಲವೂ ನಮ್ಮ ವರ್ತಮಾನದ ಮೇಲೆ ಮಾಡಿದ ಗಾಯಗಳೇನು ಎನ್ನುವುದನ್ನು ನಾವು ಕಂಡಿದ್ದೇವೆ. ಆದರೆ ಸರಕಾರ ಈ ಚಿತ್ರಗಳೆಲ್ಲವನ್ನು ತನ್ನ ಕಾಲದ ಸೃಜನಶೀಲ ಹೆಗ್ಗಳಿಕೆ ಎಂದು ಘೋಷಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ದೃಶ್ಯಗಳಿವೆ ಎನ್ನುವ ಒಂದೇ ಕಾರಣಕ್ಕೆ ಸಂಘಪರಿವಾರ ಮತ್ತು ಬಿಜೆಪಿ ‘ಎಂಬುರಾನ್’ ಎನ್ನುವ ಮಲಯಾಳಂ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿತು. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿಸಿತು. ಸ್ವತಃ ನಟ ಮೋಹನ್‌ಲಾಲ್ ಅವರು ಮಾಡದ ತಪ್ಪುಗಳಿಗೆ ಕ್ಷಮೆಯಾಚಿಸಿದರು. ಹಾಗಾದರೆ ಈ ದೇಶದಲ್ಲಿ ಗುಜರಾತ್ ಹತ್ಯಾಕಾಂಡ ನಡೆದೇ ಇಲ್ಲ ಎಂದು ಸಾಬೀತು ಮಾಡಲು ಇವರು ಹೊರಟಿದ್ದಾರೆಯೇ? ಎಂದು ಪ್ರಜ್ಞಾವಂತರು ಕೇಳುವಂತಾಗಿದೆ. ಅದೇ ರೀತಿ, ಫುಲೆ ಚಿತ್ರದ ಪ್ರದರ್ಶನಕ್ಕೆ ತಡೆ ತರುವ ಮೂಲಕ, ಈ ದೇಶದ ಅಸ್ಪಶ್ಯತೆ, ಜಾತೀಯತೆಯನ್ನು ಮುಚ್ಚಿಡಲು ಹೊರಟಿದ್ದಾರೆ. ನಾವಿಂದು ಈ ದೇಶದಲ್ಲಿ ಆಚರಣೆಯಲ್ಲಿರುವ ಅಸ್ಪಶ್ಯತೆಯನ್ನು ತೊಡೆದು ಹಾಕಲು ಮುಂದಾಗಬೇಕೇ ಹೊರತು, ಅಸ್ಪಶ್ಯತೆಗೆ ಸಂಬಂಧ ಪಟ್ಟ ಸಿನೆಮಾಗಳ ದೃಶ್ಯಗಳಿಗೆ ಕತ್ತರಿ ಹಾಕಿ, ಜಾತೀಯತೆ, ಅಸ್ಪಶ್ಯತೆಯನ್ನು ನಿವಾರಿಸಲು ಸಾಧ್ಯವಿಲ್ಲ. ಫುಲೆ ಚಿತ್ರಕ್ಕೆ ಯಾವುದೇ ಕತ್ತರಿ ಹಾಕದೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟು, ಜಾತೀಯತೆಯಂತಹ ಅಮಾನವೀಯ ಆಚರಣೆಗಳ ವಿರುದ್ಧ ಜನಜಾಗೃತಿಯನ್ನು ಮೂಡಿಸಬೇಕಾಗಿದೆ. ಫುಲೆ ಸಿನೆಮಾ ಯಾವುದೇ ಕತ್ತರಿಯಿಲ್ಲದೆ ದೇಶಾದ್ಯಂತ ಬಿಡುಗಡೆಯಾಗಬೇಕು ಮಾತ್ರವಲ್ಲ, ನೂರು ಶೇಕಡ ತೆರಿಗೆ ವಿನಾಯಿತಿಯನ್ನು ನೀಡಿ ತಳಸ್ತರದ ಜನರಿಗೂ ಸಿನೆಮಾ ತಲುಪುವಂತೆ ಮಾಡಲು ಸರಕಾರ ಮುತುವರ್ಜಿ ವಹಿಸಬೇಕು. ಈ ದೇಶದ ಜಾತೀಯತೆಯಂತಹ ಹೀನ ಕಳಂಕಗಳನ್ನು ತೊಡೆದು ಹಾಕಲು ಫುಲೆಯಂತಹ ಮಹಾತ್ಮರು ಮಾಡಿದ ಬಲಿದಾನಗಳನ್ನು ಹೊಸ ತಲೆಮಾರು ಸ್ಮರಿಸುವುದು ನವ ಭಾರತ ನಿರ್ಮಾಣಕ್ಕೆ ಅತ್ಯಗತ್ಯವಾಗಿದೆ.