ಸುಪ್ರೀಂಕೋರ್ಟ್ ತಪರಾಕಿ : ಕೆನ್ನೆ ಮುಟ್ಟಿಕೊಂಡ ಧನ್ಕರ್

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜನರ ಮೂಲಕ ಆಯ್ಕೆಯಾದ ಸರಕಾರವೊಂದು ಅಂಗೀಕರಿಸುವ ಮಸೂದೆಗಳನ್ನು ಅನಿರ್ದಿಷ್ಟ ಕಾಲ ತಡೆ ಹಿಡಿದು ಪರೋಕ್ಷವಾಗಿ ಪ್ರಜಾಸತ್ತೆಯನ್ನೇ ಅಮಾನತಿನಲ್ಲಿಡುವ ರಾಜ್ಯಪಾಲರ ಪ್ರಯತ್ನಗಳಿಗೆ ಸುಪ್ರೀಂಕೋರ್ಟ್ ತಪರಾಕಿಯನ್ನು ನೀಡಿದೆ. ಏಟು ಬಿದ್ದದ್ದು ರಾಜ್ಯಪಾಲರ ಉದ್ಧಟತನಕ್ಕೇ ಆಗಿದ್ದರೂ, ಅದರ ಸದ್ದಿಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಕೆನ್ನೆ ಮುಟ್ಟಿಕೊಂಡಿದ್ದಾರೆ. ತಮಿಳು ನಾಡು ವಿಧಾನಸಭೆಯು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿದ್ದ ೧೦ ಮಸೂದೆಗಳನ್ನು ರಾಜ್ಯಪಾಲ ಆರ್. ಎನ್. ರವಿ ಮರುಪರಿಶೀಲನೆಗಾಗಿ ಹಿಂದಿರುಗಿಸಿದ್ದರು. ವಿಧಾನಸಭೆಯು ಮತ್ತೆ ಅದನ್ನು ರಾಜ್ಯಪಾಲರಿಗೆ ಕಳುಹಿಸಿದಾಗ, ರಾಷ್ಟ್ರಪತಿಯವರ ಪರಿಶೀಲನೆಗೆ ಕಳುಹಿಸುವುದಾಗಿ ಹೇಳಿ ವರ್ಷಗಳಿಂದ ತನ್ನ ಬಳಿಯಲ್ಲೇ ಉಳಿಸಿಕೊಂಡಿದ್ದರು. ಈ ಮೂಲಕ ಸರಕಾರ ಮಸೂದೆಯನ್ನು ಜಾರಿಗೆ ತರಲಾಗದೆ ಇಕ್ಕಟ್ಟಿನಲ್ಲಿ ಸಿಲುಕಿತ್ತು. ಒಂದು ರೀತಿಯಲ್ಲಿ ಆಡಳಿತ ನಡೆಸದಂತೆ ತಮಿಳು ನಾಡು ಸರಕಾರದ ಕೈಗಳನ್ನು ರಾಜ್ಯಪಾಲರು ಕಟ್ಟಿ ಹಾಕಿದ್ದರು. ಆದರೆ ಸುಪ್ರೀಂಕೋರ್ಟ್ ರಾಜ್ಯಪಾಲರ ಈ ಕ್ರಮವನ್ನು ಅಸಾಂವಿಧಾನಿಕ ಎಂದು ಹೇಳಿದ್ದು ಮಾತ್ರವಲ್ಲದೆ, ಮಸೂದೆಗಳ ಬಗ್ಗೆ ನಿರ್ಧರಿಸಲು ಗಡುವನ್ನು ವಿಧಿಸಿದೆ. ಸುಪ್ರೀಂಕೋರ್ಟ್ನ ತೀರ್ಪಿನ ಬಲದ ಮೇಲೆ, ತಮಿಳುನಾಡು ಸರಕಾರ ತಕ್ಷಣವೇ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿತು. ರಾಜ್ಯಪಾಲರ ಅಂಕಿತವಿಲ್ಲದೆಯೇ ಅಧಿಸೂಚನೆಯನ್ನು ಜಾರಿಗೊಳಿಸಿತು. ರಾಜ್ಯಪಾಲರು ತಡೆಹಿಡಿದಿರುವ ಮಸೂದೆಗಳು ರಾಜ್ಯಪಾಲರು ಎನ್ನುವ ದೊಣ್ಣೆನಾಯಕರ ಅಪ್ಪಣೆಯಿಲ್ಲದೆಯೇ ಕಾನೂನಾಯಿತು. ಇದು ರಾಜ್ಯಪಾಲರಿಗೆ ಮತ್ತು ಅವರನ್ನು ಬಳಸಿಕೊಂಡು ಬಿಜೆಪಿಯೇತರ ರಾಜ್ಯ ಸರಕಾರಗಳನ್ನು ನಿಯಂತ್ರಿಸಲು ಹೊರಟ ಕೇಂದ್ರ ಸರಕಾರಕ್ಕೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಈ ಮುಖಭಂಗದಿಂದ ಮುಖ ಉಳಿಸಿಕೊಳ್ಳುವ ಭಾಗವಾಗಿ ಉಪರಾಷ್ಟ್ರಪತಿ ಧನ್ಕರ್ ಅವರು ತನ್ನ ಸ್ಥಾನದ ಘನತೆಯನ್ನು ಮರೆತು ಸುಪ್ರೀಂಕೋರ್ಟ್ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಸುಪ್ರೀಂಕೋರ್ಟ್ಗೇ ಸಂವಿಧಾನವನ್ನು ಬೋಧಿಸಲು ಮುಂದಾಗಿದ್ದಾರೆ.
‘‘ನ್ಯಾಯಾಲಯಗಳು ರಾಷ್ಟ್ರಪತಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ’’ ಎಂದು ಹೇಳಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ನ್ಯಾಯಾಂಗದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ. ನ್ಯಾಯ ವ್ಯವಸ್ಥೆಯನ್ನೇ ‘ಸರ್ವಾಧಿಕಾರಿ’ ಎಂಬಂತೆ ಬಿಂಬಿಸಲು ಹೊರಟ ಅವರು, ನ್ಯಾಯಾಲಯವು ರಾಷ್ಟ್ರಪತಿಯ ವಿರುದ್ಧ ತೀರ್ಪು ನೀಡಿರುವುದಲ್ಲ, ರಾಜ್ಯ ಸರಕಾರದ ಪ್ರಜಾಸತ್ತಾತ್ಮಕ ಅಧಿಕಾರವನ್ನು ಎತ್ತಿ ಹಿಡಿದಿರುವುದು ಎನ್ನುವ ಅಂಶವನ್ನು ಮುಚ್ಚಿಟ್ಟಿದ್ದಾರೆ. ‘‘ಸುಪ್ರೀಂಕೋರ್ಟ್ಗೆ ಸಂವಿಧಾನದ ೧೪೨ನೇ ವಿಧಿಯಡಿ ನೀಡಲಾಗಿರುವ ವಿಶೇಷಾಧಿಕಾರವು, ನ್ಯಾಯಾಂಗದ ಪಾಲಿಗೆ ಪ್ರಜಾಸತ್ತಾತ್ಮಕ ಶಕ್ತಿಗಳ ವಿರುದ್ಧ ಪರಮಾಣು ಕ್ಷಿಪಣಿಯಾಗಿ ಬದಲಾಗಿದೆ’’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರವು, ರಾಷ್ಟ್ರಪತಿ ಸ್ಥಾನವನ್ನು ಹೇಗೆ ರಬ್ಬರ್ ಸ್ಟ್ಯಾಂಪ್ ಹುದ್ದೆಯಾಗಿ ಬದಲಾಯಿಸಿದೆ ಎನ್ನುವುದನ್ನು ಮರೆತಿದ್ದಾರೆ. ರಾಜ್ಯಪಾಲರ ಅಧಿಕಾರಕ್ಕೆ ಮಿತಿಗಳಿವೆ. ಅದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರದೊಳಗೆ ಮೂಗು ತೂರಿಸುವಂತಿಲ್ಲ. ಆದರೆ ತಮಿಳುನಾಡಿನಲ್ಲಿ ರಾಜ್ಯಪಾಲರು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಹಾನಿ ಮಾಧ್ಯಮಗಳಲ್ಲಿ ತೀವ್ರ ಚರ್ಚೆಯಲ್ಲಿದೆ. ಇಂತಹ ಸಂದರ್ಭದಲ್ಲಿ ತನ್ನ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳುವುದು ಉಪರಾಷ್ಟ್ರಪತಿ ಧನ್ಕರ್ ಅವರ ಕೆಲಸವೂ ಕೂಡ. ಕೇಂದ್ರ ಸರಕಾರದ ಜೀತ ಮಾಡದೆ, ಯಾವುದೇ ರಾಜಕೀಯ ಶಕ್ತಿಗಳ ದುರುದ್ದೇಶಗಳಿಗೆ ಬಲಿಯಾಗದೆ ತನ್ನ ಸ್ಥಾನವನ್ನು ನಿಭಾಯಿಸುವ ಮಹತ್ತರ ಹೊಣೆಗಾರಿಕೆ ರಾಜ್ಯಪಾಲರಿಗೆ ಮಾತ್ರವಲ್ಲ, ಉಪರಾಷ್ಟ್ರಪತಿಗೂ ಇದೆ. ಈ ಹೊಣೆಗಾರಿಕೆಯನ್ನು ನಿಭಾಯಿಸಲು ವಿಫಲವಾದಾಗ ನ್ಯಾಯಾಂಗವು ಅವರನ್ನು ಎಚ್ಚರಿಸುವುದು ಸಹಜವಾಗಿದೆ.
ಸುಪ್ರೀಂಕೋರ್ಟ್ನ ತೀರ್ಪು ರಾಜ್ಯಪಾಲರ ಅಧಿಕಾರ ಮತ್ತು ಕರ್ತವ್ಯಗಳನ್ನು ಸ್ಪಷ್ಟಪಡಿಸಿದೆ. ಜೊತೆಗೆ, ರಾಜ್ಯ ಶಾಸಕಾಂಗಗಳು ಅಂಗೀಕರಿಸಿರುವ ಮಸೂದೆಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಮಾರ್ಗಸೂತ್ರಗಳನ್ನೂ ವಿಧಿಸಿದೆ. ಮಸೂದೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿಯುವ ರಾಜ್ಯಪಾಲರ ಸಾಮರ್ಥ್ಯವನ್ನೂ ಕಡಿತಗೊಳಿಸಿದೆ. ಈ ಮೂಲಕ ಚುನಾಯಿತ ಶಾಸಕಾಂಗಗಳು ಅಂಗೀಕರಿಸುವ ಮಸೂದೆಗಳನ್ನು ಚುನಾಯಿತರಲ್ಲದ ರಾಜ್ಯಪಾಲರು ವಿಳಂಬಿಸುವ ಅಥವಾ ತಡೆಹಿಡಿಯುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಕಡಿವಾಣ ಹಾಕಿದೆ. ಸಂವಿಧಾನದ ೨೦೦ನೇ ವಿಧಿಯು, ರಾಜ್ಯ ಶಾಸಕಾಂಗವೊಂದು ಮಸೂದೆಯೊಂದನ್ನು ಅಂಗೀಕರಿಸುವ ಮತ್ತು ರಾಜ್ಯಪಾಲರಿಗೆ ಕಳುಹಿಸುವ ಪ್ರಕ್ರಿಯೆಯನ್ನು ಒಳಗೊಂಡಿದೆ. ಇಲ್ಲಿ ರಾಜ್ಯಪಾಲರಿಗೆ ಮೂರು ಮುಖ್ಯ ಆಯ್ಕೆಗಳಿವೆ: ಅಂಕಿತ ಹಾಕುವ ಮೂಲಕ ಮಸೂದೆಯನ್ನು ಕಾನೂನಾಗಿ ಪರಿವರ್ತಿಸುವುದು, ಅಂಕಿತ ಹಾಕುವುದನ್ನು ತಡೆಹಿಡಿಯುವುದು ಅಥವಾ ರಾಷ್ಟ್ರಪತಿಯವರ ಪರಿಶೀಲನೆಗೆ ಮಸೂದೆಯನ್ನು ಕಳುಹಿಸುವುದು.
ರಾಜ್ಯ ಸರಕಾರಗಳು ಮತ್ತು ರಾಜ್ಯಪಾಲರ ನಡುವೆ ವಿವಾದಗಳು ಏಳುವುದು ಎರಡನೇ ಆಯ್ಕೆಗೆ ಸಂಬಂಧಿಸಿ, ಅಂದರೆ ಅಂಕಿತ ಹಾಕುವುದನ್ನು ತಡೆಹಿಡಿಯುವುದಕ್ಕೆ ಸಂಬಂಧಿಸಿ. ಈ ವಿಷಯದಲ್ಲಿ ವಿಧಿ ೨೦೦ ನಿರ್ದಿಷ್ಟ ವಿಧಾನವನ್ನು ಒಳಗೊಂಡಿದೆ. ಮಸೂದೆಯೊಂದಕ್ಕೆ ಅಂಕಿತ ಹಾಕುವುದನ್ನು ರಾಜ್ಯಪಾಲರು ತಡೆಹಿಡಿದರೆ, ಅವರು ಅದನ್ನು ‘‘ಎಷ್ಟು ಸಾಧ್ಯವೋ ಅಷ್ಟು ಬೇಗ’’ ಕಾರಣಗಳನ್ನು ವಿವರಿಸಿ ಅಥವಾ ಬದಲಾವಣೆಗಳನ್ನು ಸೂಚಿಸಿ ಶಾಸಕಾಂಗಕ್ಕೆ ವಾಪಸ್ಕಳುಹಿಸಬಹುದು. ಸಲಹೆಗಳನ್ನು ಸ್ವೀಕರಿಸಿ ಅಥವಾ ಸ್ವೀಕರಿಸದೆ ವಿಧಾನಸಭೆಯು ಮಸೂದೆಯನ್ನು ಮತ್ತೊಮ್ಮೆ ಅಂಗೀಕರಿಸಿದರೆ, ಎರಡನೇ ಬಾರಿ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕುವುದನ್ನು ತಡೆಹಿಡಿಯಬಾರದು ಎಂದು ಸಂವಿಧಾನ ಹೇಳುತ್ತದೆ.
ಈ ವಿಷಯಕ್ಕೆ ಸಂಬಂಧಿಸಿದ ಹಲವು ಮಹತ್ವದ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಸಮರ್ಥವಾಗಿ ನಿಭಾಯಿಸಿದೆ. ಅಂಕಿತ ಹಾಕುವುದನ್ನು ತಡೆಹಿಡಿದ ಬಳಿಕ ರಾಜ್ಯಪಾಲರು ಮಸೂದೆಯನ್ನು ಹಿಂದಿರುಗಿಸುವುದು ಕಡ್ಡಾಯವೇ ಅಥವಾ ಐಚ್ಛಿಕವೇ? ‘ಪಾಕೆಟ್ ವಿಟೋ’ ಚಲಾಯಿಸುವ ಮೂಲಕ ಇದನ್ನು ರಾಜ್ಯಪಾಲರು ಅನಿರ್ದಿಷ್ಟಾವಧಿಗೆ ವಿಳಂಬಿಸಬಹುದೇ? ಯಾವುದೇ ವಿವರಣೆ ನೀಡದೆ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕುವುದನ್ನು ತಡೆಹಿಡಿಯಬಬಹುದೇ, ಆ ಮೂಲಕ ಮಸೂದೆಯನ್ನು ರದ್ದುಗೊಳಿಸಬಹುದೇ? ಮಸೂದೆಯೊಂದನ್ನು ಶಾಸಕಾಂಗವು ಎರಡನೇ ಬಾರಿಗೆ ಅಂಗೀಕರಿಸಿದ ಬಳಿಕ ರಾಜ್ಯಪಾಲರು ಅದನ್ನು ರಾಷ್ಟ್ರಪತಿಯವರ ಮರುಪರಿಶೀಲನೆಗಾಗಿ ತಡೆಹಿಡಿಯಬಹುದೇ? ಮೊದಲಾದ ಎಲ್ಲ ಪ್ರಶ್ನೆಗಳಿಗೆ ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟ ಉತ್ತರಗಳನ್ನು ನೀಡಿದೆ ಮತ್ತು ಸಾಂವಿಧಾನಿಕ ವಿಧಿವಿಧಾನಗಳಿಗೆ ಅನುಸಾರವಾಗಿ ರಾಜ್ಯಪಾಲರ ಸರ್ವಾಧಿಕಾರಕ್ಕೆ ಕಡಿವಾಣ ಹಾಕಿದೆ. ರಾಜ್ಯಪಾಲರ ಸ್ವಾತಂತ್ರ್ಯದ ಬಗ್ಗೆ ಮಾತನಾಡಿರುವ ನ್ಯಾಯಾಲಯವು, ಅವರು ಸಾಮಾನ್ಯವಾಗಿ ರಾಜ್ಯ ಸಚಿವ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ. ರಾಜ್ಯದ ಹೈಕೋರ್ಟನ್ನು ದುರ್ಬಲಗೊಳಿಸಬಲ್ಲ ಮಸೂದೆಗಳನ್ನು ಮಾತ್ರ ರಾಷ್ಟ್ರಪತಿಯವರ ಪರಿಶೀಲನೆಗೆ ಕಾದಿರಿಸುವ ವಿವೇಚನಾಧಿಕಾರ ರಾಜ್ಯಪಾಲರಿಗಿದೆ ಎನ್ನುವುದನ್ನು ೨೦೦ನೇ ವಿಧಿ ಸ್ಪಷ್ಟವಾಗಿ ಹೇಳುತ್ತದೆ. ಇತರ ಸಂದರ್ಭಗಳು ತುಂಬಾ ಅಪರೂಪ ಎಂದು ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪು ರಾಜ್ಯಪಾಲರುಗಳ ಸಂಭಾವ್ಯ ಅಧಿಕಾರ ದುರುಪಯೋಗಕ್ಕೆ ಗಮನಾರ್ಹ ನ್ಯಾಯಾಂಗ ತಡೆಯೊಂದನ್ನು ಒಡ್ಡಿದೆ. ರಾಜ್ಯಪಾಲರಿಗೆ ತಮ್ಮ ಶಾಸಕಾಂಗೀಯ ಪಾತ್ರದ ಮಿತಿಗಳನ್ನು ಸ್ಪಷ್ಟಪಡಿಸಿದೆ. ಚುನಾಯಿತ ರಾಜ್ಯ ವಿಧಾನಸಭೆಗಳ ಅಧಿಕಾರವನ್ನು ಬಲಗೊಳಿಸಿದೆ. ರಾಜ್ಯಪಾಲರ ನಿರ್ಧಾರಗಳಿಗೆ ಸಮಯ ಮಿತಿಯನ್ನು ನಿಗದಿಪಡಿಸಿರುವುದು ಮತ್ತು ಸ್ಪಷ್ಟ ವಿಧಿವಿಧಾನಗಳನ್ನು ಸೂಚಿಸಿರುವುದು ಹಾಗೂ ಯಾವುದೇ ಉಲ್ಲಂಘನೆಯನ್ನು ನ್ಯಾಯಾಂಗ ವಿಮರ್ಶೆಗೆ ಒಳಪಡಿಸಿರುವುದು ಉತ್ತರದಾಯಿ ವ್ಯವಸ್ಥೆಯೊಂದರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ. ಈ ಮೂಲಕ ರಾಜ್ಯದ ಆಡಳಿತವನ್ನೇ ಅಸ್ಥಿರಗೊಳಿಸಬಹುದಾದ ರಾಜ್ಯಪಾಲರ ವಿಳಂಬ ತಂತ್ರಗಾರಿಕೆಗಳನ್ನು ಚುನಾಯಿತ ರಾಜ್ಯ ಸರಕಾರಗಳು ಮುಂದಿನ ದಿನಗಳಲ್ಲಿ ಸಮರ್ಥವಾಗಿ ನಿಭಾಯಿಸಬಹುದಾಗಿದೆ.
ಇಂದು ಉಪರಾಷ್ಟ್ರಪತಿ ಧನ್ಕರ್ ಅವರು ರಾಷ್ಟ್ರಪತಿ ಹುದ್ದೆಯನ್ನು ರಾಜಕೀಯ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುವ ಮತ್ತು ಅವರನ್ನು ಸೂತ್ರದ ಗೊಂಬೆಯಾಗಿ ಬಳಸುವ ಪ್ರವೃತ್ತಿಯ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಬೇಕಾಗಿದೆ. ಶಾಸಕಾಂಗ ವ್ಯವಸ್ಥೆ ಹಾದಿ ತಪ್ಪಿದಾಗ, ಅದು ಸಂವಿಧಾನವನ್ನು ಉಲ್ಲಂಘಿಸಿ ಸರ್ವಾಧಿಕಾರಿಯಾಗಲು ಹವಣಿಸಿದಾಗ ಅದನ್ನು ತಿದ್ದಬೇಕಾಗಿರುವ ರಾಷ್ಟ್ರಪತಿ ಹುದ್ದೆಯನ್ನು ಶಾಸಕಾಂಗ ವ್ಯವಸ್ಥೆಯನ್ನು ಬುಡಮೇಲು ಗೊಳಿಸಲು ಬಳಸಿದಾಗ ನ್ಯಾಯಾಂಗ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವುದು ಅತ್ಯಗತ್ಯವಾಗಿದೆ. ಆದುದರಿಂದ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಪ್ರಜಾಸತ್ತೆಯ ಅಳಿದುಳಿದ ಭರವಸೆಯಾಗಿದೆ. ರಾಷ್ಟ್ರಪತಿ ಕೇಂದ್ರ ಸರಕಾರದ ಕೈಗೊಂಬೆಯಲ್ಲ. ಅವರು ಬದ್ಧರಾಗಿರಬೇಕಾಗಿರುವುದು ಸಂವಿಧಾನಕ್ಕೆ. ನ್ಯಾಯಾಂಗವು ಇದನ್ನೇ ಎತ್ತಿ ಹಿಡಿದಿದೆ. ನ್ಯಾಯಾಂಗದ ಕುರಿತ ಧನ್ಕರ್ ಹೇಳಿಕೆಯು ಸಂವಿಧಾನದ ಕುರಿತಂತೆ ಅವರಿಗಿರುವ ಅಸಮಾಧಾನವನ್ನು ಬಹಿರಂಗಪಡಿಸಿದೆ.