ಅಂಬೇಡ್ಕರ್‌ಗೆ ಅವಮಾನ: ಅಮಿತ್ ಶಾ ಕ್ಷಮೆಯಾಚಿಸುತ್ತಾರೆಯೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈವರೆಗೆ ಅಂಬೇಡ್ಕರ್ ಬೆನ್ನಿಗೆ ಇರಿಯುತ್ತಾ ಬಂದಿರುವ ಅಮಿತ್ ಶಾ ತಂಡ, ಇದೀಗ ಸಂಸತ್‌ನಲ್ಲಿ ಎದೆಗೇ ಇರಿಯಲು ಮುಂದಾಗಿದೆ. ಅಂಬೇಡ್ಕರ್ ಕುರಿತಂತೆ ತಮ್ಮ ಎದೆಯೊಳಗೆ ಬಚ್ಚಿಟ್ಟ ಅಸಹನೆ ಅವರಿಗೇ ಅರಿವಿಲ್ಲದೆ ಸಂಸತ್‌ನಲ್ಲಿ ಸ್ಫೋಟಿಸಿದೆ. ‘‘ಯಾವಾಗ ನೋಡಿದರೂ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವುದು ಒಂದು ಶೋಕಿಯಾಗಿ ಬಿಟ್ಟಿದೆ. ಅಂಬೇಡ್ಕರ್ ಬದಲಿಗೆ ದೇವರ ಹೆಸರನ್ನು ಜಪಿಸಿದ್ದರೆ ಇಷ್ಟು ಹೊತ್ತಿಗೆ ಸ್ವರ್ಗವಾದರೂ ಪ್ರಾಪ್ತಿಯಾಗಿ ಬಿಡುತ್ತಿತ್ತು’’ ಎಂಬ ಹೇಳಿಕೆಯ ಮೂಲಕ ಅವರು ಹರಿಹಾಯ್ದಿರುವುದು ಅಂಬೇಡ್ಕರ್‌ವಾದಿಗಳ ವಿರುದ್ಧ ಮಾತ್ರವಲ್ಲ, ಸ್ವತಃ ಅಂಬೇಡ್ಕರ್ ವಿರುದ್ಧ. ಗೋಳ್ವಾಲ್ಕರ್,ಸಾವರ್ಕರ್‌ರನ್ನು ಪ್ರಾತಃಸ್ಮರಣೀಯರಾಗಿ ಸ್ವೀಕರಿಸಿದವರಿಗೆ ಅಂಬೇಡ್ಕರ್ ಸ್ಮರಣೆ ಇರುಸುಮುರುಸನ್ನುಂಟು ಮಾಡುವುದು ಸಹಜವೇ ಆಗಿದೆ. ಗೋಳ್ವಾಲ್ಕರ್ ಕಲ್ಪನೆಯ ಬ್ರಾಹ್ಮಣ್ಯ ಭಾರತವನ್ನು ಕಟ್ಟುವ ಅವರ ಕನಸಿಗ್ಕೆ ಅತಿ ದೊಡ್ಡ ತಡೆಯಾಗಿರುವುದು ಅಂಬೇಡ್ಕರ್. ಈಗಾಗಲೇ ಅಂಬೇಡ್ಕರ್‌ನ್ನು ಮುಸ್ಲಿಮ್ ದ್ವೇಷಕ್ಕೆ ಬಳಸಲು ಸಾಕಷ್ಟು ತಿಣುಕಿ ಅದರಲ್ಲಿ ವಿಫಲವಾಗಿರುವ ಆರೆಸ್ಸೆಸ್ ಮತ್ತು ಬಿಜೆಪಿ, ತಮ್ಮ ಅಜೆಂಡಾಗಳಿಗೆ ಪೂರಕವಾಗಿ ಅಂಬೇಡ್ಕರ್ ವಿಚಾರಗಳನ್ನು ತಿರುಚುವುದಕ್ಕೂ ಪ್ರಯತ್ನಿಸಿ ಸೋತಿದ್ದಾರೆ. ಆದರೆ ಭಾರತದ ಜಾತಿ ವ್ಯವಸ್ಥೆ, ಅಸ್ಪಶ್ಯತೆ, ಬ್ರಾಹ್ಮಣ್ಯದ ವಿರುದ್ಧ ಅಂಬೇಡ್ಕರ್ ವಿಚಾರಧಾರೆಗಳು ಕನ್ನಡಿಯಂತೆ ಸ್ಪಷ್ಟವಾಗಿರುವ ಕಾರಣ, ಅದನ್ನು ತಿರುಚುವುದು ಸುಲಭವಿಲ್ಲ. ‘ಹಿಂದೂ ಆಗಿ ನಾನು ಸಾಯುವುದಿಲ್ಲ’ ಎಂದು ಅಂಬೇಡ್ಕರ್ ಘೋಷಿಸಿದ್ದು ಮಾತ್ರವಲ್ಲ, ಅದರಂತೆಯೇ ನಡೆದುಕೊಂಡರು. ತನ್ನ ಸಹಸ್ರಾರು ಹಿಂಬಾಲಕರ ಜೊತೆಗೆ ಅವರು ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಹಿಂದೂ ಧರ್ಮವನ್ನೇ ಸಾರಾಸಗಟಾಗಿ ತಿರಸ್ಕರಿಸಿದರು. ತಮ್ಮ ಹಿಂದುತ್ವವಾದಿ ರಾಜಕಾರಣಕ್ಕೆ ಅಂಬೇಡ್ಕರ್‌ರನ್ನು ಯಾವ ರೀತಿಯಲ್ಲೂ ಬಳಸಲಾಗುವುದಿಲ್ಲ, ಬಳಸಿದರೆ ಅದು ತಿರುಗುಬಾಣವಾಗುತ್ತದೆ ಎನ್ನುವುದು ಸ್ಪಷ್ಟವಾದ ಕಾರಣಕ್ಕೇ, ಇದೀಗ ಅಂಬೇಡ್ಕರ್‌ರವರನ್ನು ಬಹಿರಂಗವಾಗಿ ತಿರಸ್ಕರಿಸುವ ಹಂತಕ್ಕೆ ಹಿಂದುತ್ವವಾದಿಗಳು ಬಂದು ನಿಂತಿದ್ದಾರೆ. ಅದರ ಭಾಗವಾಗಿಯೇ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತಂತೆ ಸಂಸತ್‌ನಲ್ಲಿ ಅಸಹನೆಯ ಮಾತುಗಳನ್ನಾಡಿದ್ದಾರೆ.
ಭಾರತದಲ್ಲಿ ದಲಿತರು ಮತ್ತು ಶೂದ್ರರು ಅದೆಷ್ಟು ಬಾರಿ ದೇವರ ಹೆಸರನ್ನು ಜಪಿಸಿದರೂ ಅವರಿಗೆ ಬಿಡುಗಡೆಯಿಲ್ಲ ಎನ್ನುವುದನ್ನು ಮನಗಂಡೇ ಅಂಬೇಡ್ಕರ್ ಹಿಂದೂಧರ್ಮವನ್ನು ತ್ಯಜಿಸಿದರು. ಇಲ್ಲಿ ದೇವರುಗಳ ಹೆಸರನ್ನು ಬಳಸಿಕೊಂಡೇ ಶೂದ್ರರು ಮತ್ತು ದಲಿತರನ್ನು ಶೋಷಣೆ ಮಾಡಲಾಯಿತು. ಅಂಬೇಡ್ಕರ್ ಹುಟ್ಟುವ ಮೊದಲು ಈ ದೇಶದಲ್ಲಿ ದಲಿತರು, ಶೂದ್ರರಿಗೆ ದೇವಾಲಯ ಪ್ರವೇಶ ಸಿಗುವುದು ಇರಲಿ, ಕೆರೆ, ನದಿ, ಬಾವಿಯ ನೀರನ್ನು ಮುಟ್ಟುವ ಅವಕಾಶವೂ ಇರಲಿಲ್ಲ. ಈ ಕಾರಣಕ್ಕೆ ದೇಶದ ದೇವರು, ದಿಂಡರುಗಳ ವಿರುದ್ಧವೇ ಅಂಬೇಡ್ಕರ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಸ್ಥಿತಿ ನಿಮಾರ್ಣವಾಯಿತು. ಸಾವಿರಾರು ದಲಿತರನ್ನು ಜೊತೆ ಸೇರಿಸಿ ಮಹಾಡ್ ಕೆರೆಯ ನೀರನ್ನು ಕುಡಿಯುವ ಆಂದೋಲನವನ್ನು ನಡೆಸಿ ಅದರಲ್ಲಿ ಯಶಸ್ವಿಯಾದರು. ಆದರೆ ಮೇಲ್‌ಜಾತಿಯ ಜನರು ಕೆರೆಯ ನೀರನ್ನು ಕುಡಿದ ಕಾರಣಕ್ಕಾಗಿ ದಲಿತರ ಮೇಲೆ ಹಲ್ಲೆ ನಡೆಸಿದರು ಮಾತ್ರವಲ್ಲ, ಕೆರೆಯನ್ನೇ ಶುದ್ಧೀಕರಿಸಿದರು. ಈ ಸಂದರ್ಭದಲ್ಲಿ ಈ ದೇಶದ ಶೂದ್ರರು ಮತ್ತು ದಲಿತರಿಗೆ ಯಾವ ದೇವರ ಹೆಸರೂ ನೆರವಿಗೆ ಬರಲಿಲ್ಲ. ಅವರು ಈ ದೇಶದಲ್ಲಿ ಕೆರೆ ನೀರನ್ನು ಮುಟ್ಟುವಂತಾದದ್ದು, ಶಿಕ್ಷಣವನ್ನು ಕಲಿಯುವಂತಾದದ್ದು ಅಂಬೇಡ್ಕರ್ ನಡೆಸಿದ ಹೋರಾಟಗಳಿಂದಾಗಿ. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಬಲದಿಂದ ಈ ದೇಶದ ಶೋಷಿತ ಸಮುದಾಯ ತಲೆಯೆತ್ತಿ ನಿಂತಿದೆ. ಈ ದೇಶ ದೇವರ ಹೆಸರುಗಳಿಗಿಂತ ಅಂಬೇಡ್ಕರ್ ಹೆಸರನ್ನು ಹೆಚ್ಚು ಜಪಿಸುವುದು ಇದೇ ಕಾರಣಕ್ಕೆ.
ಸ್ವಾತಂತ್ರ್ಯ ಹೋರಾಟದ ಬಗ್ಗೆಯೇ ಅಂಬೇಡ್ಕರ್ ಅವರಿಗೆ ಕೆಲವು ಭಿನ್ನಮತಗಳಿದ್ದವು. ಯಾಕೆಂದರೆ, ಈ ದೇಶಕ್ಕೆ ಮೊಗಲರು, ಬ್ರಿಟಿಷರು ಕಾಲಿಡುವ ಮೊದಲೇ ದಲಿತರಿಗೆ ಮತ್ತು ಶೂದ್ರರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ಶಿಕ್ಷಣದ, ದೇವಸ್ಥಾನ ಪ್ರವೇಶಿಸುವ, ನೀರನ್ನು ಮುಟ್ಟುವ ಹಕ್ಕು, ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ಹಕ್ಕು ... ಈ ಎಲ್ಲ ಹಕ್ಕುಗಳನ್ನು ಕಳೆದುಕೊಂಡು ಅವರು ಬದುಕುತ್ತಿದ್ದರು. ಈ ಹಕ್ಕನ್ನು ಕಿತ್ತುಕೊಂಡಿರುವುದು ಹೊರಗಿನಿಂದ ಬಂದವರಲ್ಲ, ಈ ದೇಶದೊಳಗಿರುವ ಹಿಂದೂ ಎಂದು ಕರೆಸಿಕೊಳ್ಳುವ ಮೇಲ್‌ಜಾತಿಯ ಜನರು ಎನ್ನುವುದು ಅಂಬೇಡ್ಕರ್‌ಗೆ ಸ್ಪಷ್ಟವಿತ್ತು. ಬ್ರಿಟಿಷರು ಕಾಲಿಟ್ಟ ಕಾರಣದಿಂದ ಶೋಷಿತ ಸಮುದಾಯದ ಕೆಲವರಾದರೂ ಕೆಲವು ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಾಯಿತು. ದಲಿತ ಸಮುದಾಯದಿಂದ ಅಂಬೇಡ್ಕರ್‌ರಂತಹ ವಿದ್ಯಾವಂತ ನಾಯಕರು ಹುಟ್ಟಲು ಕಾರಣವಾದದ್ದು ಯಾವುದೇ ದೇವರ ಹೆಸರಲ್ಲ, ಬದಲಿಗೆ ಬ್ರಿಟಿಷರು ನೀಡಿದ ಶಿಕ್ಷಣ. ಸ್ವಾತಂತ್ರ್ಯ ಹೋರಾಟದಿಂದಾಗಿ ಬ್ರಿಟಿಷರು ಭಾರತ ಬಿಟ್ಟು ತೊಲಗಬಹುದು. ಆದರೆ ಅಧಿಕಾರವನ್ನು ಯಾರ ಕೈಗೆ ಹಸ್ತಾಂತರಿಸಿ ಹೋಗುತ್ತಾರೆ ಎನ್ನುವುದರ ಬಗ್ಗೆ ಅವರಿಗೆ ಆತಂಕವಿತ್ತು. ಒಂದು ವೇಳೆ ಬ್ರಿಟಿಷರು ಹಿಂದೂ ಮಹಾಸಭಾದ ನಾಯಕರ ಕೈಗೆ ಅಧಿಕಾರವನ್ನೇನಾದರೂ ಬಿಟ್ಟು ಹೋಗಿದ್ದರೆ, ದಲಿತರು ಮತ್ತು ಶೂದ್ರರ ಸ್ಥಿತಿ ಇನ್ನಷ್ಟು ದೈನೇಸಿಯಾಗಿ ಬಿಡುತ್ತಿತ್ತು. ಅವರು ಮತ್ತೆ ಮನುಸ್ಮತಿಯ ಆದೇಶಗಳಿಗೆ ತಲೆಬಾಗಬೇಕಾಗಿತ್ತು. ಬ್ರಿಟಿಷರಿಂದ ಸಿಕ್ಕಿದ ಅಲ್ಪಸ್ವಲ್ಪ ಅವಕಾಶಗಳನ್ನೂ ಕಳೆದುಕೊಳ್ಳಬೇಕಾಗಿತ್ತು. ಬ್ರಿಟಿಷರಿಗೂ ಈ ಬಗ್ಗೆ ಅರಿವಿತ್ತು. ಆದುದರಿಂದಲೇ ಅವರು ಇರುವುದರಲ್ಲಿ ಕಡಿಮೆ ಅಪಾಯಕಾರಿಗಳ ಕೈಗೆ ದೇಶದ ಚುಕ್ಕಾಣಿಯನ್ನು ಕೊಟ್ಟು ಹೋದರು. ಮುಂದೆ ಅಂಬೇಡ್ಕರ್ ಈ ದೇಶದ ಜನತೆಯನ್ನು ಸಮಾನವಾಗಿ ನೋಡುವಂತಹ ಸಂವಿಧಾನವೊಂದಕ್ಕೆ ಕಾರಣಕರ್ತರಾದರು. ಅಂಬೇಡ್ಕರ್ ಬರೆದ ಈ ಸಂವಿಧಾನವನ್ನು ಕಿತ್ತು, ಅಂಬೇಡ್ಕರ್ ಸುಟ್ಟು ಹಾಕಿದ ಮನುಸ್ಮತಿಯನ್ನು ಮತ್ತೆ ಜಾರಿಗೊಳಿಸುವ ಪ್ರಯತ್ನ ಸಂಘಪರಿವಾರ ನಾಯಕರಿಂದ ನಡೆಯುತ್ತಲೇ ಇದೆ. ಹಿಂದೂರಾಷ್ಟ್ರ ಎನ್ನುವ ಕಲ್ಪನೆಯೇ ಈ ದೇಶವನ್ನು ಮನುಸ್ಮತಿಯ ಕಾಯ್ದೆಗೆ ಅನುಗುಣವಾಗಿ ಮರು ನಿರ್ಮಿಸುವುದು.
ಅಂಬೇಡ್ಕರ್ ಸಂವಿಧಾನ ದುರ್ಬಲರಿಗೆ ನೀಡಿರುವ ಮೀಸಲಾತಿಯನ್ನು ಮೋದಿ ನೇತೃತ್ವದ ಸರಕಾರ ಹಂತ ಹಂತವಾಗಿ ದುರ್ಬಲಗೊಳಿಸುತ್ತಾ ಬಂದಿದೆ. ಇಂದು ಪ್ರಬಲ ಜಾತಿಯವರೇ ಬೀದಿಗಿಳಿದು ಮೀಸಲಾತಿಗಾಗಿ ಒತ್ತಾಯಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆ ಜೊತೆಗೇ ಬಲಾಢ್ಯ ಜಾತಿಗಳ ಬಡವರಿಗೆ ಶೇ. 10 ಮೀಸಲಾತಿಯನ್ನು ಜಾರಿಗೊಳಿಸಿ ಮೀಸಲಾತಿಯ ಮೂಲ ಉದ್ದೇಶವನ್ನು ವಿಫಲಗೊಳಿಸಲಾಯಿತು. ಇದೀಗ ಅಂಬೇಡ್ಕರ್ ಸಂವಿಧಾನವನ್ನೂ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಜೊತೆಗೆ, ಅಂಬೇಡ್ಕರ್ ಹೆಸರನ್ನು ಅಳಿಸುವ ಕೆಲಸ ಕೂಡ. ಈ ಕಾರಣದಿಂದ ಅಮಿತ್ ಶಾ ಅವರು ದೇಶಕ್ಕೆ, ಅಂಬೇಡ್ಕರ್ ಹೆಸರನ್ನು ಜಪಿಸಬೇಡಿ, ದೇವರ ಹೆಸರನ್ನು ಜಪಿಸಿ ಎಂದು ಕರೆ ನೀಡಿದ್ದಾರೆ.
ಅಂಬೇಡ್ಕರ್ ವಿರುದ್ಧ ಸ್ವಾತಂತ್ರ್ಯ ಪೂರ್ವದಲ್ಲೇ ಹಿಂದೂ ಮಹಾಸಭಾದ ನಾಯಕರು ದಾಳಿ ನಡೆಸುತ್ತಾ ಬಂದಿದ್ದಾರೆ. ಬಾಲಗಂಗಾಧರ ತಿಲಕ್‌ರಂತಹ ಹಿಂದುತ್ವವಾದಿಗಳಿಗೆ ಅಂಬೇಡ್ಕರ್ ಅವರ ವಿಚಾರಧಾರೆಗಳ ಬಗ್ಗೆ ತೀವ್ರ ಅಸಹನೆಯಿತ್ತು. ತಮ್ಮ ‘ಕೇಸರಿ’ ಪತ್ರಿಕೆಯಲ್ಲಿ ಅಂಬೇಡ್ಕರ್ ವಿರುದ್ಧ ಬಹಳಷ್ಟು ಬಾರಿ ಟೀಕೆಗಳನ್ನು ಮಾಡಿದ್ದಾರೆ. ಗೋಳ್ವಾಲ್ಕರ್, ಸಾವರ್ಕರ್ ಮೊದಲಾದವರು ಅಂಬೇಡ್ಕರ್ ವಿರೋಧಿಸಿದ ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿದಿದ್ದರು. ಜಾತಿ ವ್ಯವಸ್ಥೆಯನ್ನು ಭಾರತದ ಹೆಗ್ಗಳಿಕೆ ಎಂದು ಅವರು ಬಣ್ಣಿಸಿದ್ದರು. ಅಮಿತ್ ಶಾ, ನರೇಂದ್ರ ಮೋದಿ ಅವರು ಸಾವರ್ಕರ್, ಗೋಳ್ವಾಲ್ಕರ್ ಅವರನ್ನು ಪ್ರಾತಃಸ್ಮರಣೀಯರಾಗಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ಭಾರತವನ್ನು ಕಟ್ಟಲು ಹೊರಟಿರುವುದರಿಂದ, ಅಂಬೇಡ್ಕರ್ ಹೆಸರು ಅವರಿಗೆ ಒಂದು ಸಮಸ್ಯೆಯಾಗಿದೆ. ಸಾವರ್ಕರ್ ವಿರುದ್ಧ ಮಾತನಾಡಿದ ರಾಹುಲ್‌ಗಾಂಧಿಯ ವಿರುದ್ಧ ನ್ಯಾಯಾಲಯದಲ್ಲಿ ಬಿಜೆಪಿ ನಾಯಕರು ಮೊಕದ್ದಮೆ ಹೂಡಿದ್ದರು. ಇದೀಗ ಅಮಿತ್ ಶಾ ಸಂಸತ್‌ನೊಳಗೇ ಅಂಬೇಡ್ಕರ್ ವಿರುದ್ಧ ಹೇಳಿಕೆಯನ್ನು ನೀಡುವ ಮೂಲಕ ಸಂವಿಧಾನಕ್ಕೆ ಅವಮಾನಿಸಿದ್ದಾರೆ. ಇದೀಗ ಬಿಜೆಪಿ ಅಮಿತ್ ಶಾ ವಿರುದ್ಧ ದೂರು ದಾಖಲಿಸುತ್ತದೆಯೆ? ಎನ್ನುವ ಪ್ರಶ್ನೆಯೆದ್ದಿದೆ. ಗೃಹ ಸಚಿವರಾಗಿ ಅಮಿತ್ ಶಾ ಹೇಳಿಕೆ ನೀಡಿರುವುದರಿಂದ ಅವರು ದೇಶದ ಕ್ಷಮೆ ಯಾಚಿಸುವುದು ಅತ್ಯಗತ್ಯವಾಗಿದೆ. ಹಿಂದೆ ಕಾಂಗ್ರೆಸ್ ಕೂಡ ಅಂಬೇಡ್ಕರ್‌ರನ್ನು ಅವಮಾನಿಸಿತ್ತು ಎನ್ನುವುದನ್ನು ಮುಂದಿಟ್ಟುಕೊಂಡು ಅಮಿತ್ ಶಾ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಯಾವ ಕಾರಣಕ್ಕೂ ಸಮರ್ಥಿಸಲು ಮುಂದಾಗಬಾರದು.