ಹಿಂದಿ ಹೇರಿಕೆ: ಒಕ್ಕೂಟ ವ್ಯವಸ್ಥೆಗೆ ಅಪಚಾರ
ಏಕ ಧರ್ಮ, ಏಕ ಸಂಸ್ಕೃತಿ ಎಂಬ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರಲು ಹೊರಟಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕಳೆದ ಹತ್ತು ವರ್ಷಗಳಿಂದ ಅಂದರೆ, ಕೇಂದ್ರದ ಅಧಿಕಾರ ಹಿಡಿದಾಗಿನಿಂದ ಬಹುತ್ವ ಭಾರತದ ಸ್ವರೂಪವನ್ನೇ ಬದಲಿಸಲು ಹೊರಟಿದೆ. ದಕ್ಷಿಣದ ತಮಿಳುನಾಡು, ಕರ್ನಾಟಕ, ಕೇರಳ ಸೇರಿದಂತೆ ಬಹುತೇಕ ರಾಜ್ಯಗಳ ಆಕ್ಷೇಪವನ್ನು ಕಡೆಗಣಿಸಿ ಬಲವಂತವಾಗಿ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಎಂದು ಕರೆದು ಎಲ್ಲ ರಾಜ್ಯಗಳ ಮೇಲೂ ಹೇರಲು ಹೊರಟಿದೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಮತದಾರರು ನಿಚ್ಚಳ ಬಹುಮತವನ್ನು ನೀಡದಿದ್ದರೂ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಹಾಗೂ ಬಿಹಾರದ ನಿತೀಶ್ ಕುಮಾರ್ ಅವರ ಬೆಂಬಲದಿಂದ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿಗೆ ತಮ್ಮ ಕೋಮುವಾದಿ ಕಾರ್ಯಸೂಚಿಯನ್ನು ಜಾರಿಗೆ ತರುವುದೇ ಮೊದಲ ಆದ್ಯತೆಯಾಗಿದೆ. ಬಹುತೇಕ ರಾಜ್ಯಗಳ ವಿರೋಧವಿದ್ದರೂ ಸರಕಾರದ ದೈನಂದಿನ ವ್ಯವಹಾರದಲ್ಲಿ ಹಿಂದಿ ಭಾಷೆಯನ್ನು ಬಳಸಲು ಮುಂದಾಗಿದೆ. ಕೇಂದ್ರ ಸರಕಾರದ ಎಲ್ಲಾ ಕಚೇರಿ ಮತ್ತು ಸಂಸ್ಥೆಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯ ಮಾಡಲು ಹೊರಟಿದೆ. ಅಷ್ಟೇ ಅಲ್ಲದೆ ರಾಜ್ಯ ಸರಕಾರಗಳು ಕೂಡ ಹಿಂದಿಯ ಬಳಕೆಯನ್ನು ವಿಸ್ತರಿಸಬೇಕೆಂದು ಸೂಚನೆಯನ್ನು ನೀಡಿದೆ. ಸಂಸತ್ತಿನ ರಾಜ್ಯಸಭೆಯಲ್ಲಿ ಕೇರಳದ ಜಾನ್ ಬ್ರಿಟ್ಟಾಸ್ ಅವರು ಇಂಗ್ಲಿಷ್ ಭಾಷೆಯಲ್ಲಿ ಕೇಳಿದ ಪ್ರಶ್ನೆಗೆ ಮಂತ್ರಿಯೊಬ್ಬರು ಹಿಂದಿಯಲ್ಲಿ ಉತ್ತರ ನೀಡಿರುವ ಬಗ್ಗೆ ವಿವಾದ ಉಂಟಾಗಿದೆ. ಇದಲ್ಲದೆ ಸಂಸತ್ತಿನ ಟಿವಿಯಲ್ಲಿ ರಾಜ್ಯಸಭೆಯ ಕಲಾಪಗಳನ್ನು ಇನ್ನು ಮುಂದೆ ಹಿಂದಿ ಭಾಷೆಯಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಇನ್ನು ಮುಂದೆ ರಾಜ್ಯಸಭೆಯ ಸದಸ್ಯರು ಇಂಗ್ಲಿಷ್ ಅಥವಾ ತಮ್ಮ ರಾಜ್ಯದ ಭಾಷೆಯಲ್ಲಿ ಮಾತಾಡಿದರೂ ಅದನ್ನು ಅವರ ಧ್ವನಿಗೆ ಬದಲಾಗಿ ಹಿಂದಿ ಭಾಷೆಯಲ್ಲಿ ಅನುವಾದಿಸಿ ಪ್ರಸಾರ ಮಾಡಲಾಗುವುದೆಂದು ತಿಳಿಸಲಾಗಿದೆ. ಇತ್ತೀಚಿನ ಹೊಸ ಶಾಸನಗಳು ಕೂಡ ಹಿಂದಿ ಇಲ್ಲವೇ ಸಂಸ್ಕೃತ ಭಾಷೆಯಲ್ಲಿ ಇವೆ. ಇದು ನಿಜಕ್ಕೂ ಅತ್ಯಂತ ಆಘಾತಕಾರಿ ಸಂಗತಿಯಾಗಿದೆ.
ಭಾರತದಲ್ಲಿ ಇರುವುದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ವ್ಯವಸ್ಥೆ ಅಂದರೆ ಆಯಾ ರಾಜ್ಯಗಳಿಗೆ ತಮ್ಮ ಗಡಿಯೊಳಗೆ ಸಾರ್ವಭೌಮತ್ವವನ್ನು ಕಲ್ಪಿಸುವುದು ಮಾತ್ರವಲ್ಲ ಅವುಗಳ ಹಕ್ಕುಗಳು ಮತ್ತು ರಾಜ್ಯಗಳ ಪ್ರಾದೇಶಿಕ ಭಾಷೆಯನ್ನು ಮನ್ನಿಸಿ ಗೌರವಿಸುವುದು ಮಾತ್ರವಲ್ಲ, ಸಾಂಸ್ಕೃತಿಕ ಅಂಶವೂ ಇದರಲ್ಲಿ ಅಡಕವಾಗಿದೆ. ಆದರೆ ಕೇಂದ್ರದ ಮೋದಿ ಸರಕಾರ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ಹಿಂದಿಗೆ ವಿಶೇಷ ಪ್ರಾತಿನಿಧ್ಯ ನೀಡಲು ಹೊರಟಿರುವುದು ಸರಿಯಲ್ಲ. ಸಂವಿಧಾನದ 348(1)(ಬಿ) ವಿಧಿಯು ದೇಶದ ಎಲ್ಲ ಶಾಸನಗಳ ಅಧಿಕೃತ ಪಠ್ಯವೂ ಇಂಗ್ಲಿಷ್ ಭಾಷೆಯಲ್ಲಿ ಇರಬೇಕೆಂದು ಹೇಳುತ್ತದೆ. ಅಂದರೆ ವಿಧೇಯಕಗಳು, ತಿದ್ದುಪಡಿಗಳು ಶಾಸನ ಸಭೆಗಳಲ್ಲಿ ಅಂಗೀಕರಿಸಲಾದ ಕಾಯ್ದೆಗಳು ಇಂಗ್ಲಿಷ್ ಭಾಷೆಯಲ್ಲಿ ಇರಬೇಕೆಂದು ಸಂವಿಧಾನ ಹೇಳುತ್ತದೆ. ಸಂವಿಧಾನವು ಯಾವುದನ್ನೂ ಕಡ್ಡಾಯವೆಂದು ಹೇಳಿರುವುದನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪಾಲಿಸಲೇಬೇಕಾಗುತ್ತದೆ.
ಕೇಂದ್ರದ ಮೋದಿ ಸರಕಾರ ಹಿಂದೂ ಹಾಗೂ ಹಿಂದಿ ಭಾಷೆಗಳಿಗೆ ತಳಕು ಹಾಕಿ ಹಿಂದಿಯನ್ನು ಹೇರಲು ಹೊರಟಿದೆ. ಆದರೆ ಹಿಂದಿ ಹಿಂದೂಗಳೆಲ್ಲರ ಭಾಷೆಯಲ್ಲ.ಅದೇ ರೀತಿ ಉರ್ದು ಕೂಡ ಮುಸಲ್ಮಾನರ ಭಾಷೆಯಲ್ಲ. ಯಾವುದೇ ಧರ್ಮಕ್ಕೂ ಭಾಷೆಗೂ ಸಂಬಂಧವಿಲ್ಲ. ಅದೇ ರೀತಿ ಭಾರತ ಎಂಬುದು ಯಾವುದೇ ಒಂದು ಭಾಷೆಯನ್ನು ಆಡುವ ಜನರ ದೇಶವಲ್ಲ. ಭಾರತದ ಬಹುತೇಕ ಜನರು ಹಿಂದೂಗಳೆಂದು ಕರೆಯಲಾಗುತ್ತಿದ್ದರೂ ಅವರೆಲ್ಲರೂ ಮಾತಾಡುವ ಭಾಷೆ ಹಿಂದಿಯಲ್ಲ. ಹಿಂದಿ ಎಂಬುದು 3-4 ರಾಜ್ಯಗಳಿಗೆ ಸೀಮಿತವಾದ ಭಾಷೆ ಮಾತ್ರ. ಹಿಂದಿ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮುಂತಾದ 22 ರಾಜ್ಯಗಳ ಅಧಿಕೃತ ಪ್ರಾದೇಶಿಕ ಭಾಷೆಗಳು ರಾಷ್ಟ್ರ ಭಾಷೆಗಳಾಗಿವೆ. ಇದನ್ನು ಕಡೆಗಣಿಸಿ ಕೆಲವೇ ರಾಜ್ಯಗಳಿಗೆ ಸೀಮಿತವಾದ ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವುದು ಒಕ್ಕೂಟ ವ್ಯವಸ್ಥೆಗೆ ಮಾಡುವ ಅಪಚಾರವಾಗಿದೆ.
ಆದರೆ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ಹಾಗೂ ರಾಜ್ಯಗಳ ಪ್ರಾದೇಶಿಕ ಭಾಷೆ ಮತ್ತು ಅಸ್ಮಿತೆಯನ್ನು ಕಡೆಗಣಿಸಿ ಹಿಂದಿಯನ್ನು ಹೇರಲು ಹೊರಟಿರುವುದು ಸರಿಯಲ್ಲ. ಕಳೆದ ವರ್ಷ ಗ್ರಾಮೀಣ ಬ್ಯಾಂಕುಗಳ ಅಧಿಕಾರಿಗಳು ಹಾಗೂ ಕಚೇರಿ ಸಹಾಯಕರ ಹುದ್ದೆಗಳಿಗಾಗಿ ದೇಶವ್ಯಾಪಿ ನಡೆದ ಪ್ರಾಥಮಿಕ ಪರೀಕ್ಷೆಯಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಹೇರಲಾಗಿತ್ತು. ಇದರಿಂದ ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲ ಹಿಂದಿಯೇತರ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ಮತ್ತು ಚಳವಳಿಗಳು ನಡೆದವು. ಹೀಗಾಗಿ ಪೊಲೀಸ್ ರಕ್ಷಣೆಯಲ್ಲಿ ಸದರಿ ಪರೀಕ್ಷೆಗಳು ನಡೆದವು. ಬೆಂಗಳೂರಿನ ಮೆಟ್ರೊದಲ್ಲಿ ಹಿಂದಿ ಹೇರಿಕೆ ಮಾಡಲು ಹೊರಟಾಗ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದಿ ಹೇರಿಕೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಹಿಂದಿ ಹೇರಿಕೆಯನ್ನು ಕೇಂದ್ರ ಸರಕಾರ ಮುಂದುವರಿಸಿದೆ.
ಒಂದೆಡೆ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸಿ, ಮತ್ತೊಂದೆಡೆ ಕನ್ನಡ, ತಮಿಳು, ಮಲಯಾಳಂ, ತೆಲುಗು ಮುಂತಾದ ಪ್ರಾದೇಶಿಕ ಭಾಷೆಗಳನ್ನು ಅಳಿಸಿ ಹಾಕುವುದು ಹಿಂದಿವಾದಿಗಳ ಹುನ್ನಾರವಾಗಿದೆ. ರಾಜಧಾನಿ ಬೆಂಗಳೂರು ಕೂಡ ಈಗ ಉತ್ತರ ಭಾರತದ ಹಿಂದಿ ಭಾಷಿಕರಿಂದ ತುಂಬಿದೆ. ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರಕಾರ ಅಲ್ಲಿನ ಯುವಕರಿಗೆ ಉದ್ಯೋಗ ಕೊಡುತ್ತಿಲ್ಲ. ಅವರೆಲ್ಲ ಬೇರೆ ದಾರಿ ಕಾಣದೆ ಬೆಂಗಳೂರಿಗೆ ಬರುತ್ತಾರೆ. ಹೀಗಾಗಿ ಬೆಂಗಳೂರಿನಲ್ಲಿ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಇರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉತ್ತರ ಭಾರತದ ಹಿಂದಿ ಭಾಷಿಕರನ್ನೇ ವರ್ಗಾವಣೆ ಮಾಡಿರುವುದರಿಂದ ಕನ್ನಡ ಬಾರದ ಅವರಿಂದಾಗಿ ಕನ್ನಡ ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ. ಹಳ್ಳಿಗಾಡಿನಲ್ಲಿ ಇರುವ ಬ್ಯಾಂಕ್ ಶಾಖೆಗಳಲ್ಲೂ ವರ್ಗಾವಣೆಯಾಗಿ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದ ರೈತರಿಗೆ, ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ. ಇದನ್ನು ಸರಿಪಡಿಸುವುದು ತುರ್ತು ಅಗತ್ಯವಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಲೇ ಹಿಂದಿಯನ್ನು ರಾಜ್ಯಗಳ ಮೇಲೆ ಹೇರುವ ಮಸಲತ್ತು ನಡೆದಿತ್ತು. ಆದರೆ ಹಿಂದಿಯೇತರ ರಾಜ್ಯಗಳು ಇದಕ್ಕೆ ಅವಕಾಶ ನೀಡಲಿಲ್ಲ. ರಾಜ್ಯಗಳ ಆಡಳಿತ ನಿರ್ವಹಣೆ ಪ್ರಾದೇಶಿಕ ಭಾಷೆಯಲ್ಲಿ ಇರಬೇಕೆಂದು ಎಲ್ಲೆಡೆ ಕೂಗು ಕೇಳಿ ಬಂತು. ಆಗ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತ್ರಿಭಾಷಾ ಸೂತ್ರವೊಂದನ್ನು ತಂದರು. ಅದರ ಪ್ರಕಾರ ಯಾವುದೇ ರಾಜ್ಯದಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆ ಹಾಗೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಆಡಳಿತ ನಡೆಸಬೇಕೆಂಬ ಸರ್ವ ಸಮ್ಮತ ಸೂತ್ರಕ್ಕೆ ಒಪ್ಪಿಗೆ ದೊರಕಿತು. ಆದರೆ ಈಗಿನ ಕೇಂದ್ರ ಸರಕಾರ, ವಿಶೇಷವಾಗಿ ಗೃಹ ಸಚಿವ ಅಮಿತ್ ಶಾ ಅವರು ತ್ರಿಭಾಷಾ ಸೂತ್ರವನ್ನು ಕಡೆಗಣಿಸಿ ಎಲ್ಲ ರಾಜ್ಯಗಳ ಮೇಲೆ ಹಿಂದಿಯನ್ನು ಹೇರಲು ಹೊರಟಿದ್ದಾರೆ. ಇದಕ್ಕೆ ನಾಗಪುರದ ಸಂವಿಧಾನೇತರ ಶಕ್ತಿಯೂ ಬೆಂಬಲವಾಗಿ ನಿಂತಿದೆ.
ಕೇಂದ್ರ ಸರಕಾರ ರಾಜ್ಯಗಳಲ್ಲಿನ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿ ಎಲ್ಲಾ ರಾಜ್ಯಗಳಲ್ಲೂ ಹಿಂದಿ ಹೇರಲು ಹೊರಟರೆ ಅದು ಒಕ್ಕೂಟ ವ್ಯವಸ್ಥೆಗೆ ಅಪಾಯ ತರುತ್ತದೆ. ಹಿಂದೆ ಹಿಂದಿಯನ್ನು ಹೇರುವ ಮಸಲತ್ತು ನಡೆದಾಗ ತಮಿಳುನಾಡಿನಲ್ಲಿ ಪ್ರತ್ಯೇಕವಾದದ ಧ್ವನಿ ಕೇಳಿ ಬಂದಿತ್ತು. ಈಗ ಮತ್ತೆ ಹಿಂದಿಯನ್ನು ಹೇರಲು ಹೊರಟರೆ ತಮಿಳುನಾಡು ಮಾತ್ರವಲ್ಲ ಬಹುತೇಕ ಎಲ್ಲ ರಾಜ್ಯಗಳಲ್ಲೂ ಮತ್ತೆ ಪ್ರತ್ಯೇಕವಾದ ತಲೆ ಎತ್ತುವ ಗಂಡಾಂತರವಿದೆ. ಆದ್ದರಿಂದ ಕೇಂದ್ರ ಸರಕಾರ ಹಿಂದಿಯನ್ನು ಹೇರುವ ಪ್ರಸ್ತಾವನೆಯನ್ನು ಕೈ ಬಿಡಬೇಕು. ಒಂದು ಭಾಷೆಯಾಗಿ ಹಿಂದಿಯನ್ನಾಗಲೀ ಇನ್ಯಾವ ಭಾಷೆಯನ್ನಾಗಲೀ ಕಲಿಯಲು ಯಾರ ಅಭ್ಯಂತರವೂ ಇಲ್ಲ. ಆದರೆ ಬಲವಂತದ ಹೇರಿಕೆ ಬೇಡ.