ಕಲ್ಯಾಣ ಕರ್ನಾಟಕದ ಕಲ್ಯಾಣವೆಂದು?

Update: 2024-12-17 05:05 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸಂಪಾದಕೀಯ | ಕಲ್ಯಾಣ ಕರ್ನಾಟಕದ ಕಲ್ಯಾಣವೆಂದು?

Full View

ಕಲ್ಯಾಣ ಕರ್ನಾಟಕವೂ ಸೇರಿದಂತೆ ಉತ್ತರ ಕರ್ನಾಟಕ ತೀವ್ರ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ. ಅಭಿವೃದ್ಧ್ದಿ ಬೆಂಗಳೂರು ಕೇಂದ್ರಿತವಾಗಿದೆ ಎನ್ನುವ ಆಕ್ರೋಶಗಳು ಭುಗಿಲೆದ್ದಾಗ, ಈ ಉತ್ತರ-ದಕ್ಷಿಣದ ನಡುವಿನ ಕಂದರವನ್ನು ಮುಚ್ಚುವ ಭಾಗವಾಗಿ ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸುವ ಮಹತ್ತರ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಬೆಳಗಾವಿಯ ಮೇಲೆ ಮಹಾರಾಷ್ಟ್ರ ಹಕ್ಕು ಸಾಧಿಸಿದಾಗ ಅದಕ್ಕೂ ಬೆಳಗಾವಿ ಅಧಿವೇಶನದ ಮೂಲಕ ಸರಕಾರ ಉತ್ತರ ನೀಡಿತು. ಉತ್ತರ ಕರ್ನಾಟಕ ನೆಲದಲ್ಲೇ ಆ ಭಾಗದ ಸಮಸ್ಯೆಗಳಿಗೆ ಕಿವಿಯಾಗುವುದು ಈ ಅಧಿವೇಶನದ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ಇದೀಗ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಆ ಭಾಗದ ಸಮಸ್ಯೆಗಳು ಮುನ್ನೆಲೆಗೆ ಬಂದು ಚರ್ಚೆಯಾಗಬೇಕಾಗಿತ್ತು. ಆದರೆ, ನಮ್ಮ ಶಾಸಕರು ಈ ಭಾಗದ ಸಮಸ್ಯೆಗೆ ಅಸಡ್ಡೆ ತೋರಿಸುತ್ತಿರುವುದು ಕರ್ನಾಟಕದ ಜನರಿಗೆ ನಿರಾಶೆಯನ್ನು ತಂದಿದೆ.

ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿದ್ದ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಬಹಳ ಹಿಂದುಳಿದಿರುವ ಕಾರಣ ಸಂವಿಧಾನದ ವಿಧಿ ೩೭೧ -ಜೆ ಮುಖಾಂತರ ಅದಕ್ಕೊಂದು ವಿಶೇಷ ಸ್ಥಾನಮಾನ ಕಲ್ಪಿಸಿ ಅಭಿವೃದ್ಧಿಪಥಕ್ಕೊಂದು ದಿಕ್ಕು ದೆಸೆ ನೀಡಲಾಯಿತು. ಕಳೆದ ಹತ್ತು ವರ್ಷಗಳಲ್ಲಿ ಈ ಸಾಂವಿಧಾನಿಕ ವಿಶೇಷ ಸ್ಥಾನಮಾನವನ್ನು ಅನುಲಕ್ಷಿಸಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಸ್ಥಾಪಿತವಾಗಿದೆ. ಕಳೆದೊಂದು ದಶಕದಲ್ಲಿ ಸಾವಿರಾರು ಕೋಟಿ ರೂ.ಗಳ ಅನುದಾನ ಈ ಪ್ರದೇಶಕ್ಕೆ ಹರಿದು ಹೋಗಿದೆ. ವಿಶೇಷ ನೇಮಕಾತಿಯ ಸೌಲಭ್ಯವನ್ನೂ ಸೃಷ್ಟಿಸಲಾಗಿದೆ. ಆದರೆ ಈ ಪ್ರದೇಶ ಈಗಲೂ ಅದೇ ದಾರಿದ್ರ್ಯ, ಅನಭಿವೃದ್ಧಿ ಸುಳಿಯಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದರೆ ಖೇದವಾಗುತ್ತದೆ.

ಭಾರತದ ‘ಉತ್ತರ- ದಕ್ಷಿಣ’ದ ಅಸಮಾನತೆ ಬಗ್ಗೆ ನಾವು ಮಾತಾಡುತ್ತಿದ್ದೇವೆ. ಸತತ ಅನುದಾನ ಮತ್ತಿತರ ಅನುಕೂಲಗಳ ಹೊರತಾಗಿಯೂ ಉತ್ತರ ರಾಜ್ಯಗಳು ಇನ್ನೂ ಹಿಂದುಳಿದಿರುವುದನ್ನು ಚರ್ಚಿಸುವಾಗ ನಾವು ಕರ್ನಾಟಕದಲ್ಲೇ ಇರುವ ದಕ್ಷಿಣ -ಉತ್ತರ ಸ್ಥಿತಿ ಬಗ್ಗೆಯೂ ಮಾತಾಡಬೇಕಿದೆ. ದೇಶ ಮಟ್ಟದಲ್ಲಿ ಸಂಪನ್ಮೂಲ ಹಂಚಿಕೆಯ ಬಲು ದೊಡ್ಡ ತಾರತಮ್ಯ ಚರ್ಚೆಯಲ್ಲಿದೆ.

ಕರ್ನಾಟಕದ ಒಳಗೇ ಈ ಪ್ರಶ್ನೆ ಮುಖ್ಯವಲ್ಲ. ಆದರೆ ಒಟ್ಟಾರೆ ಅಭಿವೃದ್ಧಿಯ ಹೆಜ್ಜೆ-ಗತಿಯಲ್ಲಾಗಿರುವ ಲೋಪಗಳೇನು ಎಂಬುದನ್ನು ಚರ್ಚಿಸಬೇಕಾಗಿದೆ. ಕಳೆದ ವರ್ಷ ಮಹಾಲೇಖಪಾಲರು ಕಲ್ಯಾಣ ಕರ್ನಾಟಕ ಅಭಿವೃದ್ಧಿಮಂಡಳಿಯ ಕಾರ್ಯವೈಖರಿ ಬಗ್ಗೆ ನೀಡಿರುವ ವರದಿ ಯ ಈ ಪ್ರದೇಶದ ಅಭಿವೃದ್ಧಿ ಕುರಿತ ಯೋಜನಾ ದಾರಿದ್ರ್ಯ, ಹಾಗೂ ಇಚ್ಛಾ ಶಕ್ತಿಯ ಕೊರತೆಗಳ ಸಹಿತ ಇಡೀ ದುರಂತವನ್ನು ಅನಾವರಣಗೊಳಿಸಿದೆ. ಪ್ರಾದೇಶಿಕ ಅಸಮಾನತೆಯನ್ನು ನೀಗಿಸಲು ಸಾಂವಿಧಾನಿಕವಾಗಿ ದತ್ತವಾಗಿರುವ ಯಾವ ಕರ್ತವ್ಯ ಕೆಲಸಗಳನ್ನು ಈ ಮಂಡಳಿ ಮಾಡಲಿಲ್ಲ್ಲ ಎಂದು ಮಹಾಲೇಖಪಾಲರ ವರದಿ ಕಟುವಾಗಿ ಹೇಳುತ್ತದೆ.

ಸಂವಿಧಾನದ ೩೭೧-ಜೆ ಅನ್ವಯ ಪ್ರಾದೇಶಿಕ ಅಸಮಾನತೆಯನ್ನು ನೀಗಿಸುವ ಹೊಣೆ ಈ ಮಂಡಳಿಗಿದೆ. ಆದರೆ ಪ್ರಾದೇಶಿಕ ಅಸಮಾನತೆ ನೀಗಿಸುವ ಯಾವ ದೂರಗಾಮಿ ಹಾದಿಯ ನೀಲ ನಕ್ಷೆಯನ್ನೂ ಈ ಮಂಡಳಿ ದಾಖಲಿಸಿಲ್ಲ. ಪ್ರತಿವರ್ಷದ ಕ್ರಿಯಾಯೋಜನೆಗಳು ನಿರಂತರವಾಗಿ ತಡವಾಗಿ ಪ್ರಸ್ತುತವಾಗಿದೆ. ಅದೂ ರಾಜ್ಯ ಆಯವ್ಯಯ ಮಂಡನೆ ಆದ ಮೇಲೆ ತಿಂಗಳಾನುಗಟ್ಟಲೆ ತಡವಾಗಿ ವಾರ್ಷಿಕ ಕ್ರಿಯಾಯೋಜನೆಗಳು ಮಂಡನೆಯಾಗಿವೆ. ಈ ಕ್ರಿಯಾಯೋಜನೆಗಳೂ ಸಾಮಾಜಿಕ, ಆರ್ಥಿಕ ಸೂಚಿಗಳನ್ನಾಧರಿಸಿದ ಗುರಿಗಳನ್ನೂ ಹೊಂದಿರಲಿಲ್ಲ. ಕಾಲಮಿತಿಯನ್ನೂ ಹೊಂದಿಲ್ಲ. ರಸ್ತೆ ಸಂಪರ್ಕದ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದು ಬಿಟ್ಟರೆ, ಆರೋಗ್ಯ, ಶಿಕ್ಷಣ, ಕೃಷಿ, ಕೌಶಲ್ಯಾಭಿವೃದ್ಧಿ ಇತ್ಯಾದಿ ಕ್ಷೇತ್ರಗಳ ಬಗ್ಗೆ ಬೇಕಾದಷ್ಟು ಗಮನವೇ ಹರಿಸಿಲ್ಲ.

ಮಹಾಲೇಖಪಾಲರು ಈ ಮಂಡಳಿಯ ನಿಷ್ಕ್ರಿಯ ಸ್ಥಿತಿ ಬಗ್ಗೆ ಆಧಾರ ಸಹಿತ ಕಟುವಾದ ಟೀಕೆ ಮಾಡಿ ಉದಾಹರಣೆಗಳನ್ನೂ ಯಥೇಚ್ಛವಾಗಿ ನೀಡಿ ನಿರ್ದಿಷ್ಟ ಶಿಫಾರಸುಗಳನ್ನೂ ಮಾಡಿದ್ದಾರೆ.

ಈ ಶಿಫಾರಸುಗಳು ಈ ಮಂಡಳಿ ಇಷ್ಟು ದಿನ ಮರೆತಿರುವ ಸಾಂವಿಧಾನಿಕ ಕರ್ತವ್ಯಗಳನ್ನು ನೆನಪಿಸುವ ಮೂಲ ಪಠ್ಯದಂತಿವೆ.

ಮಹಾಲೇಖಪಾಲರ ವರದಿಯು ಐದಾರು ಪ್ರಮುಖ ಸೂಚಿಗಳನ್ನು ಬಳಸಿ ಈ ಪ್ರದೇಶದ ಹಿಂದುಳಿದಿರುವಿಕೆಯನ್ನು ವಿಶ್ಲೇಷಿಸುತ್ತದೆ.ನೀತಿ ಆಯೋಗದ ಸೂಚಿಗಳ ಪ್ರಕಾರವೇ ಈ ಪ್ರದೇಶದ ನಾಲ್ಕು ಜಿಲ್ಲೆಗಳ( ಕಲಬುರಗಿ ,ರಾಯಚೂರು, ಬೀದರ್ ಮತ್ತು ಯಾದಗಿರಿ) ರಾಜ್ಯದ ಅಭಿವೃದ್ಧಿ ಸೂಚಿಗಿಂತ ಕೆಳಗಿವೆ. ಹಿಂದುಳಿದಿರುವ ೭೫ ತಾಲೂಕುಗಳಲ್ಲಿ ೨೯ ತಾಲೂಕುಗಳು ಈ ಪ್ರದೇಶದಲ್ಲೇ ಇವೆ. ಕಲಬುರಗಿಯ ಎಲ್ಲಾ ತಾಲೂಕುಗಳೂ ಈ ಪಟ್ಟಿಯಲ್ಲಿವೆ!.

ರಾಷ್ಟ್ರೀಯ ಬಹು ಆಯಾಮ ಬಡತನ ಸೂಚಿಯ ವರದಿ ಉಲ್ಲೇಖಿಸಿ ಈ ಸೂಚಿ ೧೨ ಮಾನದಂಡಗಳನ್ನು ಬಳಸುತ್ತದೆ. ಕಾಲಕಾಲಕ್ಕೆ ಬೇರೆ ಬೇರೆ ಕ್ಷೇತ್ರಗಳ ಸ್ಥಿತಿಗತಿಯನ್ನು ಅಳೆಯಲೂ ಇದು ಸಾಧನ. ನೀತಿ ಆಯೋಗವು ೨೦೨೦-೨೧ರಲ್ಲಿ ತಯಾರಿಸಿದ ಈ ಸೂಚಿಯನ್ವಯ ಕರ್ನಾಟಕದ ಅತ್ಯಂತ ಕಳಪೆ ಸಾಧನೆ ಮಾಡಿದ ನಾಲ್ಕೂ ಜಿಲ್ಲೆಗಳು ಈ ಪ್ರದೇಶಕ್ಕೆ ಸೇರಿದವು. ವಿಪರ್ಯಾಸವೆಂದರೆ ಈ ಮಂಡಳಿ ೨೦೧೩ರಿಂದ ಇಂದಿನವರೆಗೆ ಯಾವುದೇ ಬಗೆಯ ಬಹು ಆಯಾಮದ ಬಡತನ ಸೂಚಿಯ ಸಹಿತ ಯಾವುದೇ ಸೂಚಿಗಳನ್ನು ಬಳಸಿ ವಿವರಗಳನ್ನೇ ಸಂಗ್ರಹಿಸಿಲ್ಲ. ಮಾನವ ಅಭಿವೃದ್ಧಿ ಸೂಚಿ ಮುಖ್ಯವಾಗಿ ಶಿಕ್ಷಣ, ಆರೋಗ್ಯ ಮತ್ತು ತಲಾ ಆದಾಯದ ಅಸಮಾನತೆಗಳನ್ನು ಮುಖ್ಯ ಸೂಚಿಗಳಾಗಿ ಇಟ್ಟುಕೊಂಡಿವೆೆ. ಈ ಸೂಚ್ಯಂಕದಲ್ಲೂ ಕಲ್ಯಾಣ ಕರ್ನಾಟಕದ ಅಷ್ಟೂ ಜಿಲ್ಲೆಗಳು ರಾಜ್ಯದ ಸರಾಸರಿಗಿಂತ ಕೆಳಗಿವೆ.

ನಂಜುಂಡಪ್ಪ ವರದಿ ೨೦೦೨ರಲ್ಲಿ ೧೭೫ ತಾಲೂಕುಗಳನ್ನು ಹಿಂದುಳಿದ ತಾಲೂಕುಗಳೆಂದು ಗುರುತಿಸಿತ್ತು. ಈ ತಾಲೂಕುಗಳಲ್ಲಿ ೩೧ ತಾಲೂಕುಗಳು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿದ್ದವು. ೨೦೨೦ರ ವೇಳೆಗೆ ಅತ್ಯಂತ ಹಿಂದುಳಿದ ತಾಲೂಕುಗಳ ಸಂಖ್ಯೆ ರಾಜ್ಯದಲ್ಲಿ ೩೮. ಈ ಪೈಕಿ ೨೧ ತಾಲೂಕುಗಳು ಈ ಪ್ರದೇಶಕ್ಕೆ ಸೇರಿವೆ. ಇದರೊಂದಿಗೆ ಆರೋಗ್ಯ, ಶಿಕ್ಷಣಗಳ ಮಾನದಂಡಗಳನ್ನೂ ವರದಿ ಬಳಸಿ ಈ ಮಂಡಳಿಯ ನಿಷ್ಕ್ರಿಯತೆಯ ಬಗ್ಗೆ ಟೀಕೆ ಮಾಡಿದೆ. ಈ ಮಂಡಳಿಯ ಕಾರ್ಯವೈಖರಿಗೆ ಮಹಾಲೇಖ ಪಾಲರು ಕೊಡುವ ಹಲವು ಉದಾಹರಣೆಗಳಲ್ಲಿ ಒಂದು ಗಮನಾರ್ಹವಾಗಿದೆ. ಈ ಮಂಡಳಿಯ ಅಧ್ಯಕ್ಷರಿಗೆ ವಿವೇಚನಾ ನಿಧಿ ಅಂತ ಇದೆ. ಈ ವಿವೇಚನೆಯನ್ನು ಬಳಸಿ ಈ ಮಂಡಳಿಯ ಅಧ್ಯಕ್ಷರು ಅನುದಾನ ಬಿಡುಗಡೆ ಮಾಡಿದ್ದರಲ್ಲಿ ಶೇ. ೮೫ರಷ್ಟು ಕಲಬುರಗಿ ಜಿಲ್ಲೆಗೇ ಸಂದಾಯವಾಗಿದೆ!. ಇದನ್ನು ಅಧಿಕಾರದ ದುರುಪಯೋಗ, ಪ್ರಭಾವ- ಏನೆಂದು ಕರೆದರೆ ಸರಿ ಹೋಗುತ್ತೆ. ?

ಹಾಗೆಯೇ ಒಂದೇ ಕಾಮಗಾರಿಗೆ ಎರಡೆರಡು ಅನುದಾನ ಬಿಡುಗಡೆ. ಅಂದಾಜು ಪಟ್ಟಿಯೇ ಇಲ್ಲದ ಕಾಮಗಾರಿಗಳು. ಹೀಗೆ ಈ ಮಂಡಳಿಯ ಅಧ್ವಾನಗಳ ಪಟ್ಟಿ ಮುಂದುವರಿಯುತ್ತದೆ. ಇತ್ತೀಚೆಗೆ ಕಾಂಗ್ರೆಸ್ ಸರಕಾರ ಒಂದೆರಡು ಅನುದಾನಗಳ ಬಗ್ಗೆ ತನಿಖೆಗೆ ಹೇಳಿದೆ. ಆದರೆ ಒಟ್ಟಾರೆಯಾಗಿ ಸ್ವತಃ ಕಾಂಗ್ರೆಸ್ ಸರಕಾರಕ್ಕೇ ಈ ಬಗ್ಗೆ ಕಾಮಗಾರಿಗಳಿಂದಾಚೆಯ ಆಸಕ್ತಿಯೂ ಇದ್ದಂತಿಲ್ಲ. ಈ ಮಂಡಳಿ ರಚನೆಯಾದ ಮೇಲೆ ಏನು ಆಗಿದೆ ಎಂಬುದಕ್ಕಿಂತ ಏನು ಆಗಿಲ್ಲ ಎಂಬುದೇ ಎದ್ದು ಕಾಣುತ್ತಿದೆ. ಇತ್ತೀಚಿನ ಪತ್ರಿಕಾ ವರದಿಯ ಪ್ರಕಾರ ರಾಯಚೂರು ಜಿಲ್ಲೆಯೊಂದರಲ್ಲೇ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ೪೦೧. ಇಡೀ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇಂಥ ಶಾಲೆಗಳ ಸಂಖ್ಯೆ ಎಷ್ಟಿರಬಹುದು?

ಕಾಂಗ್ರೆಸ್ ಸರಕಾರ ಡಾ. ಅಜಯ್ ಸಿಂಗ್ ಅವರನ್ನು ಈ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ ಇದಕ್ಕಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕ್ರಿಯಾಶೀಲ ಯುವ ಸಚಿವ ಪ್ರಿಯಾಂಕ್ ಖರ್ಗೆ ಸಹಿತ ಹಲವಾರು ಪ್ರಮುಖ ಸಚಿವರು ಈ ಪ್ರದೇಶಕ್ಕೆ ಸೇರಿದವರು. ಆದರೆ ಅವರ್ಯಾರೂ ಮಂಡಳಿಯ ಮೂಲಕ ದೂರಗಾಮಿ ನೀಲನಕ್ಷೆ, ಸಮಗ್ರ ಅಭಿವೃದ್ಧಿಯ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ಮಂಡಳಿ ಸ್ವಾಯತ್ತವಾಗಿ ಈ ಪ್ರದೇಶದ ಜಿಲ್ಲೆಗಳ ಅಭಿವೃದ್ಧಿ ಪಥವನ್ನು ಯೋಜಿಸುವತ್ತ ಕೆಲಸ ಮಾಡಬೇಕಿದೆ. ಈಗಾಗಲೇ ಹತ್ತು ವರ್ಷ ಸಂದಿದೆ. ಇನ್ನೆಷ್ಟು ಸಮಯ ಈ ಅಭಿವೃದ್ಧಿಯ ರಥ ಚಾಲೂ ಆಗಲು ಜನ ಕಾಯಬೇಕು?

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News