ಆರೋಗ್ಯ ವ್ಯವಸ್ಥೆಗೆ ಬಡಿದ ಬಾಣಂತಿ ಸನ್ನಿ

Update: 2024-12-13 06:33 GMT

ಸಾಂದರ್ಭಿಕ ಚಿತ್ರ 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಬಾಣಂತಿಯರ ಸರಣಿ ಸಾವು ರಾಜ್ಯದ ಆರೋಗ್ಯವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನೆತ್ತಿದೆ. ಸರಕಾರ ಈ ಬಗ್ಗೆ ಪ್ರಾಂಜಲ ರೀತಿಯಲ್ಲಿ ತನಿಖೆ ನಡೆಸುವ ಭರವಸೆ ನೀಡಿದೆ. ಈ ಬಗ್ಗೆ ತನಿಖಾ ತಂಡವನ್ನೂ ಸ್ಥಾಪಿಸಲಾಗಿದೆ. ಔಷಧ ಖರೀದಿಯ ಬಗ್ಗೆಯೂ ತನಿಖೆ ನಡೆಸಲು ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಇದೇ ವೇಳೆಗೆ ರಾಜ್ಯದ ಮುಖ್ಯಮಂತ್ರಿಯವರು ಕಳೆದ ಐದು ವರ್ಷಗಳಲ್ಲಿ ಒಟ್ಟು 3,364 ಬಾಣಂತಿಯರು ಮೃತಪಟ್ಟಿದ್ದಾರೆ ಎಂಬ ಅಂಕಿ-ಅಂಶಗಳನ್ನು ಮುಂದಿಟ್ಟು ಬಿಜೆಪಿ ಸರಕಾರದ ಅವಧಿಯಲ್ಲೂ ಇಂಥಾ ಮರಣಗಳು ಸಂಭವಿಸಿವೆ ಎಂದು ಸೂಚಿಸಿ ಬಳ್ಳಾರಿ ದುರಂತದ ಗಂಭೀರತೆಯನ್ನು ತಿಳಿ ಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಈ ಸಾವುಗಳನ್ನು ಆಕಸ್ಮಿಕವೆಂದೂ, ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಅದನ್ನು ತಡೆಯಲು ಸಾಧ್ಯವಿಲ್ಲ ಎಂದೂ ಅವರು ಪರೋಕ್ಷವಾಗಿ ವ್ಯಾಖ್ಯಾನಿಸಿದಂತಾಗಿದೆ.

ಈ ಸಾವು ವ್ಯವಸ್ಥೆಯ ವೈಫಲ್ಯ ಎನ್ನುವುದನ್ನು ಮೊದಲು ಸರಕಾರ ಒಪ್ಪಿಕೊಳ್ಳಬೇಕಾಗಿದೆ. ಭಾರತದಲ್ಲಿ ಗರ್ಭಿಣಿಯರ ಸಾವು ನೋವುಗಳು ಅತ್ಯಂತ ಆತಂಕಕಾರಿಯಾಗಿದೆ. ಅಪೌಷ್ಟಿಕತೆ, ಸೂಕ್ತ ವೈದ್ಯಕೀಯ ಸವಲತ್ತುಗಳ ಕೊರತೆಯ ಕಾರಣಗಳಿಂದ ಭಾರತವು ಗರ್ಭಿಣಿಯರ ಸಾವಿಗಾಗಿ ವಿಶ್ವಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ಭಾರತದಲ್ಲಿ ಗರ್ಭಿಣಿಯರಲ್ಲಿ ಅರ್ಧದಷ್ಟು ಮಹಿಳೆಯರು ರಕ್ತಹೀನತೆಯನ್ನು ಎದುರಿಸುತ್ತಿದ್ದಾರೆ ಮತ್ತು ಇದೇ ಕಾರಣಕ್ಕೆ ಹೆರಿಗೆಯ ಸಮಯದಲ್ಲಿ ಅಪಾಯಕ್ಕೆ ಸಿಲುಕಿಕೊಳ್ಳುತ್ತಾರೆ. ಸುಗಮವಾಗಿ ಹೆರಿಗೆಯಾದರೂ, ಅಪೌಷ್ಟಿಕತೆಯ ಕಾರಣದಿಂದ ಜೀವನ ಪೂರ್ತಿ ಬೇರೆ ಬೇರೆ ಕಾಯಿಲೆಗಳಿಂದ ನರಳಬೇಕಾಗುತ್ತದೆ. ಹುಟ್ಟಿದ ಮಗುವಿನ ಮೇಲೂ ಇದು ಭಾರೀ ಪರಿಣಾಮವನ್ನು ಬೀರುತ್ತದೆ. ಐದು ವರ್ಷಗಳ ಕೆಳಗಿನ ಮಕ್ಕಳ ಸಾವಿನ ಹಿಂದೆ ಬಾಣಂತಿಯರು ಎದುರಿಸುತ್ತಿರುವ ರಕ್ತ ಹೀನತೆಯ ಪಾತ್ರ ನೇರವಾಗಿದೆ. ಹೀಗಿರುವಾಗ, ಇದರ ಜೊತೆ ಜೊತೆಗೇ ಆಸ್ಪತ್ರೆಗಳ ವೈಫಲ್ಯಗಳೂ ಮಹಿಳೆಯರ ಸಾವಿಗೆ ಕಾರಣವಾಗುತ್ತವೆ ಎನ್ನುವುದನ್ನು ಸರಕಾರ ಹಗುರವಾಗಿ ಸ್ವೀಕರಿಸಬಾರದು.

ನೆರೆಹೊರೆಯ ರಾಜ್ಯಗಳ ಅಂಕಿ ಅಂಶಗಳನ್ನು ಪರಿಗಣಿಸಿದರೆ ಕರ್ನಾಟಕ ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ಅಸಮತೋಲನದ ಸೇವೆಯನ್ನು ನೀಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಹಿಂದೆ ಅಂದರೆ ಬಿಜೆಪಿ ಸರಕಾರದ ಆಳ್ವಿಕೆಯ ಸಮಯದಲ್ಲಿ ಕೋವಿಡ್ ಮಹಾಮಾರಿಯೂ ವಕ್ಕರಿಸಿ ಇಡೀ ಆರೋಗ್ಯ ವ್ಯವಸ್ಥೆಯೇ ಏರುಪೇರಾಗಿತ್ತು. ಅದನ್ನು ನಿಭಾಯಿಸಲು ಬೇಕಾದ ತಾಂತ್ರಿಕ ಜ್ಞಾನ , ಕೌಶಲ್ಯ ಸಮಯಾವಧಾನತೆಗಳಿಲ್ಲದೆ ಇಡೀ ವ್ಯವಸ್ಥೆಯೇ ಭಯ ಮತ್ತು ಭ್ರಷ್ಟತೆಯ ಗೂಡಾಗಿ ಪರಿವರ್ತನೆಗೊಂಡಿರುವುದನ್ನು ಮರೆಯಲಾಗದು. ಸಾವಿರಾರು ಸಾವುಗಳು ಆ ಅವಧಿಯಲ್ಲಿ ಸಂಭವಿಸಿವೆ. ಅನ್ಯಾಯದ ಸಾವುಗಳವು.

ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಬಳ್ಳಾರಿಯಲ್ಲಿ ಸಂಭವಿಸಿದ ಸಾವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನ್ನು ಟೀಕಿಸುವ ಯಾವ ನೈತಿಕತೆಯೂ ಇಲ್ಲ. ಆದರೆ ಕಾಂಗ್ರೆಸ್ ಸರಕಾರ ಬಿಜೆಪಿಯನ್ನು ತೋರಿಸಿ ತನ್ನಿಂದಾಗಿರುವ ಲೋಪದಿಂದ ನುಣುಚಿಕೊಳ್ಳುವಂತೆಯೂ ಇಲ್ಲ. ಬಿಜೆಪಿಯ ಆಡಳಿತದ ಲೋಪದೋಷಗಳ ಕಾರಣದಿಂದಲೇ ಜನರು ಆ ಸರಕಾರವನ್ನು ಕೆಳಗಿಳಿಸಿ ಕಾಂಗ್ರೆಸನ್ನು ಅಧಿಕಾರಕ್ಕೆ ತಂದರು. ತಾನು ಕೂಡ ಅದಕ್ಕಿಂತ ಭಿನ್ನವಿಲ್ಲ ಎನ್ನುವುದನ್ನು ಸಾಬೀತು ಪಡಿಸುವುದಿದ್ದರೆ, ಕಾಂಗ್ರೆಸನ್ನು ಗೆಲ್ಲಿಸುವ ಅಗತ್ಯವೇ ಜನರಿಗಿರಲಿಲ್ಲ. ಆದುದರಿಂದ ‘‘ತೂ ತೂ ಮೈ ಮೈ’’ ಧೋರಣೆ ಒಟ್ಟಾರೆ ಆಡಳಿತದ ಲಕ್ಷಣವಾಗಬಾರದು.

ತಮಿಳುನಾಡಿನಂಥ ರಾಜ್ಯದಲ್ಲಿ ಕೋವಿಡ್ ಅವಧಿಯಲ್ಲಿ ಮೇರೆ ಮೀರಿದ ಸಾವುಗಳು ಸಂಭವಿಸಿದರೂ ತದನಂತರ ಇಡೀ ಆರೋಗ್ಯವ್ಯವಸ್ಥೆಯನ್ನು ಆ ರಾಜ್ಯ ದಕ್ಷಗೊಳಿಸಿತು. ಆದ್ದರಿಂದಲೇ ಕೋವಿಡ್ ಬಳಿಕದ ವರ್ಷಗಳಲ್ಲಿ ಅಲ್ಲಿನ ಬಾಣಂತಿ ಸಾವಿನ ಸಂಖ್ಯೆ ಇಳಿಕೆಯಾಗಿದೆ. ತಮಿಳುನಾಡು ಹೇಗೆ ಇದನ್ನು ನಿರ್ವಹಿಸಿತು ಎಂಬುದನ್ನು ನಮ್ಮ ಸರಕಾರವೂ ಅಧ್ಯಯನ ಮಾಡಬಹುದು.ಆದರೆ ಈ ಹಿಂದಿನ ಹಾದಿ ಗಮನಿಸಿದರೆ ತಮಿಳುನಾಡು, ಕೇರಳಗಳಂಥ ರಾಜ್ಯಗಳು ಮೂಲಕಾರಣದತ್ತ ಗಮನ ಹರಿಸಿವೆ. ನಮ್ಮ ಮಹಿಳೆಯರ ಅದರಲ್ಲೂ ಗ್ರಾಮೀಣ ಮಹಿಳೆಯರ ಆರೋಗ್ಯಸೂಕ್ಷ್ಮವಾಗಿದೆ. ಅರ್ಧಕ್ಕರ್ಧ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಪೌಷ್ಟಿಕಾಂಶ ಭರಿತ ಆಹಾರದ ಕೊರತೆ ಅವರನ್ನು ಬಾಧಿಸುತ್ತಿದೆ. ಅಷ್ಟೇ ಅಲ್ಲ ಇವರೆಲ್ಲಾ ಕುಟುಂಬ ನಿಭಾಯಿಸಲು ದಿನಗೂಲಿಗಳಾಗಿ ದುಡಿಯುತ್ತಿದ್ದಾರೆ. ತಿಂದದ್ದೆಲ್ಲಾ ದುಡಿಮೆಗೆ ಹೋಗಿ ಗರ್ಭಸ್ತ ಶಿಶುವಿಗೆ ಬೇಕಾದ ಪೋಷಣೆ ಮಾಯವಾದರೆ ಆ ಗರ್ಭಿಣಿ ಏನು ಮಾಡಬೇಕು? ಮಹಿಳೆಯರಿಗೆ ಕಬ್ಬಿಣದ ಅಂಶವಿರುವ ಮಾತ್ರೆ ಇತ್ಯಾದಿ ಸರಬರಾಜಿನ ವ್ಯವಸ್ಥೆ ಇದೆ ನಿಜ. ಆದರೆ ಒಟ್ಟಾರೆಯಾಗಿ ಆರೋಗ್ಯಪೂರ್ಣ ಗರ್ಭಿಣಿಗೆ ಬೇಕಾದ ಆಹಾರ ಪೌಷ್ಟಿಕಾಂಶ, ವಿಶ್ರಾಂತಿ ಲಭ್ಯವಿದೆಯೇ ಎಂಬುದನ್ನು ಸರಕಾರ ಗಮನಿಸಬೇಕು. ಅಂದರೆ ಈಗಿರುವ ಸೇವಾ ವ್ಯವಸ್ಥೆಯನ್ನು ಪ್ರಾದೇಶಿಕವಾಗಿಯೂ, ಋತುಮಾನಕ್ಕನುಗುಣವಾಗಿಯೂ ಕಾಲಕಾಲಕ್ಕೆ ಪರಾಮರ್ಶೆ ಮಾಡಿ ತಕ್ಕ ಬದಲಾವಣೆಗಳನ್ನು ತರಬೇಕು. ಆರೋಗ್ಯ ವ್ಯವಸ್ಥೆ ಇಷ್ಟರ ಮಟ್ಟಿಗೆ ಸ್ಥಳೀಯವಾಗಿ ಗಮನಿಸಿ ಸ್ಪಂದಿಸುವಂತಿರಬೇಕು.

ಇದರೊಂದಿಗೆ ನಮ್ಮ ಸರಕಾರಿ ಆಸ್ಪತ್ರೆಗಳ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದರ ಬಗ್ಗೆ ಪ್ರತ್ಯೇಕ ಹೇಳಬೇಕಿಲ್ಲ. ಶುಶ್ರೂಷಕಿಯರಿಂದ ಹಿಡಿದು ವೈದ್ಯರವರೆಗೆ ಅಭಾವ ಇದೆ. ಇನ್ನು ಔಷಧಿಗಳ ಖರೀದಿ ಪ್ರಕ್ರಿಯೆ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿದೆ ಎಂಬುದು ಸಾರ್ವಜನಿಕವಾಗಿ ಚರ್ಚಿತವಾಗುತ್ತಿರುವ ಸಂಗತಿ. ಆದ್ದರಿಂದಲೇ ಈ ಸಾವು ಕೇವಲ ಸಾವಲ್ಲ. ಇದು ಆರೋಗ್ಯ ವ್ಯವಸ್ಥೆಯ ವೈಫಲ್ಯ ಎಂದು ಬಗೆದು ಸರಕಾರ ನೀತಿ ಮತ್ತು ಅನುಷ್ಠಾನಗಳಲ್ಲಿ ತೀವ್ರ ಪರಾಮರ್ಶೆ ನಡೆಸಬೇಕಿದೆ. ಈ ತನಿಖೆಗಳೆಲ್ಲಾ ಬಹುತೇಕ ಗುಡ್ಡ ಅಗೆದು ಇಲಿ ಹಿಡಿದ ಹಾಗೆ ಆಗಿರುವ ನೂರಾರು ನಿದರ್ಶನಗಳಿರುವ ಕಾರಣ ಅಪರಾಧಿಗಳನ್ನು ಹಿಡಿದು ಶಿಕ್ಷಿಸುವ ಬಗ್ಗೆ ವಿಶ್ವಾಸಾರ್ಹತೆಯೇ ಶೂನ್ಯವಾಗಿದೆ. ಇತ್ತ ಬಿಜೆಪಿಯಂಥ ಪಕ್ಷ ಉತ್ತರ ಪ್ರದೇಶದಲ್ಲಿ ನೂರಾರು ನವಜಾತ ಮಕ್ಕಳು ಆಮ್ಲಜನಕ ಇಲ್ಲದೇ ಅಸು ನೀಗಿದಾಗ ಆಪದ್ಭಾವನಂತೆ ಕೆಲಸಮಾಡಿದ ವೈದ್ಯರನ್ನೇ ಬಂಧಿಸಿ ಕೋಮು ಕನ್ನಡಕದ ಮೂಲಕ ಅವರ ತೇಜೋವಧೆ ಮಾಡಿದ ಉದಾಹರಣೆಯ ಬಗ್ಗೆ ಚಕಾರ ಎತ್ತಿದ್ದಿಲ್ಲ. ಆದುದರಿಂದಲೇ, ರಾಜ್ಯದಲ್ಲಿ ಬಾಣಂತಿಯರ ಸಾವಿನ ಬಗ್ಗೆ ಬಿಜೆಪಿ ಸುರಿಸುತ್ತಿರುವ ಕಣ್ಣೀರನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ವಿಪರ್ಯಾಸವೆಂದರೆ, ಬಾಣಂತಿಯರ ಸಾವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ಕೆಲವು ನಾಯಕರು ‘ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ’ಗಳನ್ನು ವ್ಯಂಗ್ಯ ಮಾಡುತ್ತಿದ್ದಾರೆ. ನಿಜಕ್ಕೂ ಮಹಿಳೆಯರ ಕುರಿತಂತೆ ಇವರ ಕಾಳಜಿಯೆಷ್ಟು ಎನ್ನುವುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ. ಆದರೆ ಕಾಂಗ್ರೆಸ್ ಬಿಜೆಪಿಗೆ ‘ತಿರುಗೇಟು’ ಕೊಡುವ ತಂತ್ರಗಾರಿಕೆಯಿಂದಾಚೆ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಸ್ಪಂದನಶೀಲವಾಗಿಸುವ ಸಮಗ್ರ ಬದಲಾವಣೆಗೆ ಯತ್ನಿಸಬೇಕು. ಶಕ್ತಿ ಯೋಜನೆಯ ಮೂಲಕ ಮಹಿಳೆಗೆ ಸ್ವಾಭೀಮಾನದ ಬದುಕನ್ನು ಕಲ್ಪಿಸಿಕೊಡಲು ಮುಂದಾಗಿರುವ ಸರಕಾರ, ಬಾಣಂತಿಯರಿಗೆ ಶಕ್ತಿ ತುಂಬುವ ಕಡೆಗೆ ತನ್ನ ಗ್ಯಾರಂಟಿ ಯೋಜನೆಗಳನ್ನು ತಿರುಗಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News