ವಕ್ಫ್ ಭೂಮಿ ಒತ್ತುವರಿ: ದ್ವಂದ್ವ ಬೇಡ

Update: 2024-12-16 10:51 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ಸಂಸತ್‌ನಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರು ‘‘ದೇಶದಲ್ಲಿ 994 ವಕ್ಫ್ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ’’ ಎಂದು ಸ್ಪಷ್ಟಪಡಿಸಿದರು. ತಮಿಳುನಾಡು ಒಂದರಲ್ಲೇ 734 ವಕ್ಫ್ ಆಸ್ತಿಗಳು ಅಕ್ರಮವಾಗಿ ಒತ್ತುವರಿಯಾಗಿರುವ ಅಂಶವನ್ನು ಕೇಂದ್ರ ಸಚಿವರು ಬಹಿರಂಗ ಪಡಿಸಿದ್ದಾರೆ. ಈ ದೇಶದಲ್ಲಿ ವಕ್ಫ್ ಆಸ್ತಿಗೆ ಒದಗಿರುವ ದಯನೀಯ ಸ್ಥಿತಿಯ ಒಂದು ಸಣ್ಣ ಝಲಕ್‌ನ್ನು ಮಾತ್ರ ಕೇಂದ್ರ ಸಚಿವರು ದೇಶದ ಮುಂದೆ ಬಹಿರಂಗ ಪಡಿಸಿದರು.. ರೈಲ್ವೆ ಇಲಾಖೆ, ರಕ್ಷಣಾ ಇಲಾಖೆ ಹೊರತು ಪಡಿಸಿದರೆ ದೇಶದಲ್ಲಿ ಆತಿ ಹೆಚ್ಚು ಆಸ್ತಿಯನ್ನು ವಕ್ಫ್ ಹೊಂದಿದೆ ಎನ್ನುವುದು ವಕ್ಫ್‌ನ ಒಂದು ಹುಸಿ ಹೆಗ್ಗಳಿಕೆಯಾಗಿದೆ. ಕಾಗದದಲ್ಲಷ್ಟೇ ಅದು ವಕ್ಫ್ ಭೂಮಿ. ಆದರೆ ಅನುಭವಿಸುತ್ತಿರುವುದು ಇನ್ಯಾರೋ ಆಗಿದ್ದಾರೆ. ದೇಶಾದ್ಯಂತ ಸಾವಿರಾರು ಎಕರೆ ವಕ್ಫ್ ಭೂಮಿಗಳು ಅಕ್ರಮವಾಗಿ ಒತ್ತು ವರಿಯಾಗಿರುವುದು ಪ್ರಶ್ನೆಗೊಳಗಾಗುತ್ತಲೇ ಬಂದಿದೆ. ಒತ್ತುವರಿಯಾಗಿರುವ ವಕ್ಫ್ ಭೂಮಿಯನ್ನು ವಶಪಡಿಸಿ ಅವುಗಳನ್ನು ಮತ್ತೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎನ್ನುವ ಹೋರಾಟ ಇಂದು ನಿನ್ನೆಯದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಈ ಹೋರಾಟಗಳನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ.

ವಕ್ಫ್ ಭೂಮಿ ಒತ್ತುವರಿಯಾಗಿರುವುದು ನಿಜ ಎನ್ನುವುದನ್ನು ಕೇಂದ್ರ ಸರಕಾರ ಸಂಸತ್‌ನಲ್ಲಿ ಒಪ್ಪಿಕೊಳ್ಳುತ್ತದೆ. ಇದೇ ಸಂದರ್ಭದಲ್ಲಿ ಬೀದಿಯಲ್ಲಿ ಮಾತ್ರ, ಬೇರೆಯೇ ಮಾತನ್ನಾಡುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ ಇದೇ ಕು-ತಂತ್ರವನ್ನು ಅನುಸರಿಸುತ್ತಿದೆ. ಅಕ್ರಮ ಒತ್ತುವರಿಗೆ ಸಂಬಂಧಿಸಿ ವಕ್ಫ್ ಮಂಡಳಿಯಿಂದ ಕೆಲವರಿಗೆ ನೋಟಿಸ್ ಜಾರಿಯಾದುದನ್ನೇ ಮುಂದಿಟ್ಟುಕೊಂಡು, ಕೃಷಿ ಭೂಮಿಯನ್ನು ವಕ್ಫ್ ಮಂಡಳಿ ತನ್ನ ಖಾತೆಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಬೀದಿ ರಂಪ ನಡೆಸತೊಡಗಿದೆ. ನಿಜಕ್ಕೂ ಬೀದಿ ಹೋರಾಟ, ಆಂದೋಲನಗಳು ನಡೆಯಬೇಕಾಗಿರುವುದು ನರಿ, ನಾಯಿ ಪಾಲಾಗಿರುವ ವಕ್ಫ್ ಭೂಮಿಯನ್ನು ಮತ್ತೆ ಅರ್ಹರಿಗೆ ತಲುಪಿಸುವುದಕ್ಕಾಗಿ. ಆದರೆ ಇದಕ್ಕೆ ವಿರುದ್ಧವಾಗಿ ಬಿಜೆಪಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದೆ.

ಅಕ್ರಮ ಒತ್ತುವರಿಯಾಗಿರುವ ವಕ್ಫ್ ಭೂಮಿಯ ಬಗ್ಗೆ ತನಿಖೆ ನಡೆಸಲು ಒಂದು ಆಯೋಗವನ್ನು ರಚಿಸಿದ ಹೆಗ್ಗಳಿಕೆ ರಾಜ್ಯದ ಇತಿಹಾಸದಲ್ಲೇ ಬಿಜೆಪಿ ಸರಕಾರಕ್ಕೆ ಸೇರಬೇಕು. ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ಮಾಣಿಪ್ಪಾಡಿ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ಅದು ವರದಿಯನ್ನೂ ನೀಡಿತ್ತು. ಆದರೆ ಈ ವರದಿ ಜಾರಿಯಾಗಲಿಲ್ಲ ಎನ್ನುವುದಕ್ಕಿಂತ ಕೆಲವು ಹಿತಾಸಕ್ತಿಗಳು ಜಾರಿ ಮಾಡಲು ಅವಕಾಶ ನೀಡಲಿಲ್ಲ ಎನ್ನುವುದೇ ಹೆಚ್ಚು ಸರಿ. ಅಂದು ಬಿಜೆಪಿಗೆ ಅಕ್ರಮ ಒತ್ತುವರಿ ಮಾಡಿಕೊಂಡವರ ವಿವರಗಳು ರಾಜಕೀಯ ಕಾರಣಕ್ಕಾಗಿ ಅಗತ್ಯವಿತ್ತು. ಅದಾಗಲೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಭ್ರಷ್ಟಾಚಾರಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ, ವಿರೋಧ ಪಕ್ಷಗಳ ತೀವ್ರ ಟೀಕೆಗಳಿಂದ ಜರ್ಜರಿತವಾಗಿತ್ತು. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಮಾಣಿಪ್ಪಾಡಿಯ ವರದಿ ಬಿಜೆಪಿಯ ಪಾಲಿಗೆ ಸಂಜೀವಿನಿಯಾಗಿತ್ತು. ಮಾಣಿಪ್ಪಾಡಿ ವರದಿಯು, ಅಕ್ರಮ ಒತ್ತುವರಿಯಲ್ಲಿ ಕಾಂಗ್ರೆಸ್‌ನ ಹಲವು ರಾಜಕಾರಣಿಗಳು ಭಾಗಿಯಾಗಿರುವುದನ್ನು ಬೆಳಕಿಗೆ ತಂದಿತ್ತು. ಆದರೆ ಬಳಿಕ ಕಾಂಗ್ರೆಸ್ ಸರಕಾರ ಈ ವರದಿಯನ್ನು ಸಾರಸಗಟಾಗಿ ತಿರಸ್ಕರಿಸಿತು. ಬಿಜೆಪಿಯೂ ವಕ್ಫ್ ಅಕ್ರಮ ಒತ್ತುವರಿಯ ಬಗ್ಗೆ ಪ್ರಾಮಾಣಿಕ ನಿಲುವನ್ನು ಹೊಂದಿಲ್ಲ. ಒಂದೆಡೆ ಮಾಣಿಪ್ಪಾಡಿ ವರದಿಯ ಆಧಾರದಲ್ಲಿ ಅಕ್ರಮ ಒತ್ತುವರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಿ ಎನ್ನುವ ಬಿಜೆಪಿಯೇ ಇನ್ನೊಂದೆಡೆ, ವಕ್ಫ್ ಬೋರ್ಡ್ ಒತ್ತುವರಿ ಹೆಸರಿನಲ್ಲಿ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಳ್ಳುತ್ತಿದೆ ಎಂದು ಅಪಪ್ರಚಾರವನ್ನು ಮಾಡುತ್ತಿದೆ. ಮಾಣಿಪ್ಪಾಡಿಯ ವರದಿಯ ಪ್ರಕಾರ ಕ್ರಮ ತೆಗೆದುಕೊಳ್ಳುವ ಮೊದಲು ಬಿಜೆಪಿ ನಾಡಿನ ಜನತೆಗೆ ಎರಡು ವಿಷಯವನ್ನು ಸ್ಪಷ್ಟಪಡಿಸಬೇಕಾಗಿದೆ. ಒಂದು, ವಕ್ಫ್ ಭೂಮಿ ಒತ್ತುವರಿಯಾಗಿದೆ ಎನ್ನುವುದನ್ನು ಬಿಜೆಪಿ ಒಪ್ಪಿಕೊಳ್ಳುತ್ತದೆಯೆ? ಎರಡನೆಯ ಪ್ರಶ್ನೆ, ಈ ಅಕ್ರಮ ಒತ್ತುವರಿ ಕೇವಲ ಕಾಂಗ್ರೆಸ್ ನಾಯಕರಿಗಷ್ಟೇ ಅನ್ವಯವಾಗುತ್ತದೆಯೇ ಅಥವಾ ಇತರರಿಗೂ ಅನ್ವಯವಾಗುವುದೆ? ಎಲ್ಲಕ್ಕಿಂತ ಮುಖ್ಯವಾಗಿ ವಕ್ಫ್ ಭೂಮಿ ಹೆಸರಿನಲ್ಲಿ ಗಲಾಟೆ ಎಬ್ಬಿಸಿರುವ ಬಿಜೆಪಿಯು, ಈ ಹಿಂದೆ ತನ್ನ ಅಧಿಕಾರಾವಧಿಯಲ್ಲಿ ಯಾಕೆ ರೈತರಿಗೆ ನೋಟಿಸ್‌ಗಳನ್ನು ನೀಡಿತ್ತು? ಅಂದು ಬಿಜೆಪಿ ಸರಕಾರ ಮಾಡಿದ್ದು ಸರಿ ಎಂದಾಗಿದ್ದರೆ, ಈಗ ಕಾಂಗ್ರೆಸ್ ಸರಕಾರ ಮಾಡಿರುವುದು ಯಾಕೆ ಸರಿಯಲ್ಲ?

ಒಂದೆಡೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಮಾಣಿಪ್ಪಾಡಿ ವರದಿಯ ಅನುಸಾರ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ ಸರಕಾರಕ್ಕೆ ಒತ್ತಾಯಿಸುತ್ತಿರುವಾಗಲೇ, ವಕ್ಫ್ ಆಸ್ತಿ ಕಬಳಿಕೆ ಕುರಿತು ಮೌನವಹಿಸಲು ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಮಾಣಿಪ್ಪಾಡಿಗೆ 150 ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವನ್ನೂ ಬರೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಎಷ್ಟು ನಿಜ ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕು. ಒಂದೆಡೆ ಬಿಜೆಪಿ ಸರಕಾರವೇ ತನಿಖೆಗೆ ಆದೇಶ ನೀಡುತ್ತದೆ, ಇನ್ನೊಂದೆಡೆ ಬಿಜೆಪಿ ನಾಯಕರೇ ಮೌನ ವಹಿಸಲು ಲಂಚ ಆಮಿಷವನ್ನು ನೀಡುತ್ತಾರೆ. ಒಂದೆಡೆ ಬಿಜೆಪಿ ನಾಯಕರೇ ವಕ್ಫ್ ಭೂಮಿ ಒತ್ತುವರಿಯನ್ನು ಹಿಂದೂಗಳ ವಿರುದ್ಧ ಸಂಚು ಎಂದು ಕರೆಯುತ್ತಾರೆ. ಮಗದೊಂದೆಡೆ ಮಾಣಿಪ್ಪಾಡಿ ವರದಿಯ ಅನುಸಾರ ಕ್ರಮ ತೆಗೆದುಕೊಳ್ಳಿ ಎಂದು ಕಾಂಗ್ರೆಸ್ ಸರಕಾರಕ್ಕೆ ಒತ್ತಾಯಿಸುತ್ತಾರೆ. ಈ ಎಲ್ಲ ಗೊಂದಲಗಳು ವಕ್ಫ್ ಭೂಮಿ ಒತ್ತುವರಿಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಒಂದು ಗಂಭೀರ ತನಿಖೆ ನಡೆಯುವ ಅಗತ್ಯವನ್ನು ಹೇಳುತ್ತದೆ.

ವಕ್ಫ್ ಭೂಮಿ ಈ ದೇಶದ ಆಸ್ತಿಯೇ ಆಗಿದೆ. ಅದರಲ್ಲಿ ನಡೆಯುವ ಅಕ್ರಮಗಳು ದೇಶಕ್ಕೆ ಮಾಡುವ ವಂಚನೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಅಲ್ಲಾಹನ ಹೆಸರಿನಲ್ಲಿ ದಾನಿಗಳು ತಮ್ಮ ಭೂಮಿಯನ್ನು ವಕ್ಫ್‌ಗೆ ಬಿಟ್ಟರೂ, ತಮ್ಮ ಸಮುದಾಯದ ಶೋಷಿತ ವರ್ಗಕ್ಕೆ ಸಹಾಯವಾಗಲಿ ಎನ್ನುವ ಉದ್ದೇಶ ಅದರ ಹಿಂದಿದೆ. ಆ ಭೂಮಿ ಯಾವನೋ ಶ್ರೀಮಂತನ ಕೈವಶವಿದ್ದಿದ್ದರೆ ಅವನ ಕುಟುಂಬವಷ್ಟೇ ಫಲಾನುಭವಿಯಾಗುತ್ತಿತ್ತು. ಆದರೆ ವಕ್ಫ್‌ಗೆ ಬಿಟ್ಟ ಕಾರಣದಿಂದ ಅದು ಇಡೀ ಸಮುದಾಯದ ಸೊತ್ತಾಗಿ ಬಿಟ್ಟಿತು. ಮುಸ್ಲಿಮ್ ಸಮುದಾಯ ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳಷ್ಟು ಹಿಂದಿದೆ. ವಕ್ಫ್ ಭೂಮಿಯ ಸದುಪಯೋಗವಾದರೆ, ಮುಸ್ಲಿಮ್ ಸಮುದಾಯವೂ ಅಭಿವೃದ್ಧಿ ಹೊಂದಿದಂತಾಗುತ್ತದೆ. ಆ ಮೂಲಕ ದೇಶವೂ ಅಭಿವೃದ್ಧಿಯೆಡೆಗೆ ಸಾಗುತ್ತದೆ. ವಕ್ಫ್ ಭೂಮಿ ಯಾವನೋ ರೈತರ ಕೈಯಲ್ಲಿ ಒತ್ತುವರಿಯಾದರೆ ಅದರ ಬಗ್ಗೆ ಸರಕಾರ ತಕ್ಷಣ ಜಾಗೃತವಾಗುತ್ತದೆ. ಆದರೆ ಕೋಟ್ಯಂತರ ಬೆಲೆಬಾಳುವ ಭೂಮಿ ಕಾರ್ಪೊರೇಟ್ ಶಕ್ತಿಗಳ ಕೈಯಲ್ಲಿ ಒತ್ತುವರಿಯಾಗಿವೆ. ರಾಜಕಾರಣಿಗಳೂ ಈ ಒತ್ತುವರಿಯ ಲಾಭಗಳನ್ನು ತನ್ನದಾಗಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಇವರಿಂದ ಭೂಮಿಯನ್ನು ಮತ್ತೆ ತನ್ನದಾಗಿಸಿಕೊಳ್ಳುವ ಬಗ್ಗೆ ವಕ್ಫ್ ಮಂಡಳಿ ಯೋಜನೆಯನ್ನು ರೂಪಿಸಬೇಕು. ಅಷ್ಟೇ ಅಲ್ಲ, ವಕ್ಫ್ ಭೂಮಿಯನ್ನು ಬಡ ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಏಳಿಗೆಗೆ ಹೇಗೆ ಪೂರಕವಾಗಿ ಬಳಸಬಹುದು ಎನ್ನುವುದರ ಬಗ್ಗೆ ಚಿಂತಿಸಬೇಕು. ವಕ್ಫ್ ಭೂಮಿ ಅಲ್ಲಾಹನ ಹೆಸರಲ್ಲಿ ದಾನ ಕೊಟ್ಟಿದ್ದು ನಿಜ. ಅದರ ಜೊತೆಗೆ ಅದು ದೇಶಕ್ಕೆ ಸೇರಿದ್ದು. ಹಾಗೆಯೇ ಈ ದೇಶದ ಬಡಜನತೆಗೆ ಸೇರಿದ್ದು ಕೂಡ. ಇದನ್ನು ರಾಜಕೀಯ ನಾಯಕರು ಮರೆಯಬಾರದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News