ಇದೆಂತಹ ನ್ಯಾಯ? ಇದೆಂತಹ ಪರಿಹಾರ?

Update: 2024-12-12 06:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಂತ್ರಸ್ತ ಮಹಿಳೆಯರಿಗೆ ನ್ಯಾಯ ನೀಡಲೆಂದು ಜಾರಿಗೊಂಡ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನು ಮಹಿಳೆಯರಿಂದಲೇ ದುರುಪಯೋಗಗೊಂಡರೆ ಅದರ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ಬೆಂಗಳೂರಿನ ಐಟಿ ಕಂಪೆನಿ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಒಂದು ಹೃದಯವಿದ್ರಾವಕ ಉದಾಹರಣೆಯಾಗಿದೆ. ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ, ಕಳೆದ ರವಿವಾರ ತಡರಾತ್ರಿ 40 ಪುಟಗಳ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ಅತುಲ್ ತನ್ನದೇ ಊರಿನ ಯುವತಿಯನ್ನು ಮದುವೆಯಾಗಿದ್ದು ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಅಷ್ಟರಲ್ಲಿ ಅವರ ವೈವಾಹಿಕ ಬದುಕಿನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅದು ವಿಚ್ಛೇದನವರೆಗೂ ತಲುಪಿದೆ. ವೈಮನಸ್ಯ ಉಲ್ಬಣಿಸಿದಾಗ, ಪತ್ನಿ ನಿಕಿತಾ ಸಿಂಘಾನಿಯಾ ತನ್ನ ಊರಿಗೆ ಮರಳಿದ್ದು ಅಲ್ಲಿ ಅತುಲ್ ಮತ್ತು ಆತನ ಕುಟುಂಬ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ, ದೌರ್ಜನ್ಯ, ಹಿಂಸೆ ಸೇರಿದಂತೆ 10ಕ್ಕೂ ಅಧಿಕ ದೂರು ದಾಖಲಿಸಿದ್ದಾಳೆ. ವಿಚ್ಛೇದನ ಕೋರಿ ಅರ್ಜಿಯನ್ನು ಸಲ್ಲಿಸಿದ್ದ ನಿಕಿತಾ ಒಂದು ಕೋಟಿ ರೂಪಾಯಿಯನ್ನು ಪತಿಯಿಂದ ಪರಿಹಾರವಾಗಿ ಕೋರಿದ್ದಳು. ಈ ನಡುವೆ ನ್ಯಾಯಾಲಯ ಪ್ರತೀ ತಿಂಗಳು 2.50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸುವುದಲ್ಲಿತ್ತು ಎನ್ನಲಾಗಿದೆ. ಇದಿಷ್ಟೇ ಆಗಿದ್ದರೆ ಅತುಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲವೇನೋ? ಪತ್ನಿ ನಿಕಿತಾರ ಉದ್ದೇಶ ತನಗೆ ಆದ ನಷ್ಟಕ್ಕೆ ಪರಿಹಾರ ಬೇಡುವುದು ಆಗಿರಲೇ ಇಲ್ಲ ಎನ್ನುವುದು ಆಕೆಯ ಕೃತ್ಯದಿಂದ ಬೆಳಕಿಗೆ ಬರುತ್ತಿದೆ. ಪತಿಯ ಜೊತೆಗಿರುವ ವೈಮನಸ್ಯವನ್ನು ತೀರಿಸಲು ಆಕೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಳು. ಆಕೆಯ ಗುರಿ ಪತಿಯನ್ನು ಮಾನಸಿಕ ಚಿತ್ರಹಿಂಸೆಗೆ ಈಡು ಮಾಡಿ ಆತನನ್ನು ಆತ್ಮಹತ್ಯೆಯೆಡೆಗೆ ತಳ್ಳುವುದೇ ಆಗಿತ್ತು. ಪತಿಯ ಮೇಲೆ ಮತ್ತು ಪತಿಯ ಕುಟುಂಬದವರ ಮೇಲೆ ಸಲ್ಲಿಸಿರುವ ದೂರಿನ ಪರಿಣಾಮ ಆತ ಕನಿಷ್ಠ ತಿಂಗಳಿಗೆ ಎರಡು ಬಾರಿ ಬೆಂಗಳೂರಿನಿಂದ ಉತ್ತರ ಪ್ರದೇಶದ ನ್ಯಾಯಾಲಯಕ್ಕೆ ಅಲೆಯುವ ಸ್ಥಿತಿ ನಿರ್ಮಾಣವಾಗಿತ್ತು.

ಮುಖ್ಯವಾಗಿ ಪತ್ನಿ ಅದಾಗಲೇ ಒಂದು ಕಂಪೆನಿಯಲ್ಲಿ ದುಡಿಯುತ್ತಿದ್ದಳು. ಆಕೆಗೆ ಮಾಸಿಕವಾಗಿ ಒಳ್ಳೆಯ ವರಮಾನವಿತ್ತು. ಇದರ ಜೊತೆಜೊತೆಗೇ ಸುಮಾರು 40,000 ರೂಪಾಯಿಯನ್ನು ಜೀವನ ನಿರ್ವಹಣೆಯಾಗಿ ಪತಿಯಿಂದ ಪಡೆಯುತ್ತಿದ್ದಳು. ಇನ್ನೂ ಮಾಸಿಕ ಎರಡು ಲಕ್ಷ ರೂಪಾಯಿಗೆ ಆಕೆ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದಳು. ಅತುಲ್ ಆತ್ಮಹತ್ಯೆಗೆ ಮುನ್ನ ಬರೆದ ಪತ್ರದಲ್ಲಿ, ಕುಟುಂಬ ನ್ಯಾಯಾಲಯದ ನ್ಯಾಯಾಧೀಶೆ ಪ್ರಕರಣ ಇತ್ಯರ್ಥಕ್ಕಾಗಿ ಐದು ಲಕ್ಷ ರೂಪಾಯಿ ಬೇಡಿಕೆಯನ್ನಿಟ್ಟಿದ್ದನ್ನು ಉಲ್ಲೇಖಿಸಿದ್ದಾರೆ. ದುಡ್ಡು ನೀಡಿಲ್ಲ ಎನ್ನುವ ಕಾರಣಕ್ಕೆ 40,000 ರೂಪಾಯಿ ಪರಿಹಾರವನ್ನು ಮಾಸಿಕವಾಗಿ ನೀಡುವ ಆದೇಶವನ್ನು ನೀಡಿದ್ದರು ಎನ್ನುವುದು ಆತನ ಮರಣ ಪತ್ರದಲ್ಲಿರುವ ಆರೋಪವಾಗಿದೆ. ಎರಡು ವರ್ಷದ ಮಗುವನ್ನು ಹೊಂದಿರುವ ಪತ್ನಿಗೆ ಪ್ರತೀ ತಿಂಗಳು 40,000 ರೂಪಾಯಿ ಪರಿಹಾರ ನೀಡುತ್ತಿದ್ದಾಗಲೂ ಅದು ಸಾಕಾಗುವುದಿಲ್ಲ, ಮಾಸಿಕ ಎರಡು ಲಕ್ಷ ರೂಪಾಯಿಯನ್ನು ನೀಡಬೇಕು ಎಂದು ನ್ಯಾಯಾಲಯ ಅತುಲ್‌ಗೆ ತಿಳಿಸಿತ್ತಂತೆ. ಇದೇ ಸಂದರ್ಭದಲ್ಲಿ ತನ್ನ ಮಗುವಿನ ಭೇಟಿಗೂ ಅತುಲ್‌ಗೆ ಅವಕಾಶವಿರಲಿಲ್ಲ. ಇಷ್ಟೇ ಅಲ್ಲ, ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿ ಆತನನ್ನು ನ್ಯಾಯಾಲಯ ಅದೆಷ್ಟು ಕಾಡಿಸುತ್ತಿತ್ತು ಎಂದರೆ, ಎರಡು ವರ್ಷಗಳಲ್ಲಿ ಈತ 120 ಬಾರಿ ನ್ಯಾಯಾಲಯಕ್ಕೆ ಹಾಜರಾಗುವ ಸ್ಥಿತಿ ನಿರ್ಮಾಣವಾಗಿತ್ತು. ಮದುವೆಗೆ ಮುನ್ನ ನಿಖಿತಾಳ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರೂ ಅದಕ್ಕೆ ಕಾರಣ ತನ್ನ ಪತಿ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆಯಿಟ್ಟಿರುವುದು ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಳು. ಎಲ್ಲಕ್ಕಿಂತ ವಿಪರ್ಯಾಸವೆಂದರೆ, ನ್ಯಾಯಾಲಯದಲ್ಲೇ ನ್ಯಾಯಾಧೀಶೆಯ ಮುಂದೆಯೇ ಅತುಲ್‌ನಿಗೆ ಆತನ ಪತ್ನಿ ‘‘ನೀನಿನ್ನೂ ಬದುಕಿದ್ದೀಯಾ? ಸತ್ತಿಲ್ವ? ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವ?’’ ಎಂದು ವ್ಯಂಗ್ಯವಾಡಿದ್ದರು ಮತ್ತು ಅದನ್ನು ಕೇಳಿ ನ್ಯಾಯಾಧೀಶೆ ನಕ್ಕಿದ್ದರು. ಒಂದು ರೀತಿಯಲ್ಲಿ ಪತ್ನಿ ಮತ್ತು ನ್ಯಾಯ ವ್ಯವಸ್ಥೆ ಜೊತೆ ಸೇರಿ ಆತನನ್ನು ಆತ್ಮಹತ್ಯೆಯಂತಹ ಸನ್ನಿವೇಶಕ್ಕೆ ತಳ್ಳಿದ್ದರು.

ಸಂತ್ರಸ್ತ ಅತುಲ್ ಆತ್ಮಹತ್ಯೆಗೆ ಮುನ್ನ ತನ್ನ ಸಾವಿಗೆ ಕಾರಣವಾದದ್ದು ಏನು ಮತ್ತು ಯಾರು ಎನ್ನುವುದನ್ನು ವಿವರಿಸಿ ಸುಮಾರು ಒಂದು ಗಂಟೆಗಳ ಕಾಲದ ವೀಡಿಯೊ ಮಾಡಿದ್ದರು ಮತ್ತು ಸುಮಾರು 40 ಪುಟಗಳ ವಿವರವಾದ ಮರಣ ಪತ್ರವನ್ನು ಬರೆದಿಟ್ಟಿದ್ದರು. ‘‘ಎರಡುವರೆ ಲಕ್ಷ ರೂಪಾಯಿ ಮಾಸಿಕ ಪರಿಹಾರವನ್ನು ನೀಡಲು ನನ್ನಿಂದ ಸಾಧ್ಯವಿಲ್ಲ. ನನ್ನ ಹಣವನ್ನು ಪಡೆದು ನನಗೆ ಮಾನಸಿಕ ಹಿಂಸೆಯನ್ನು ನೀಡಲು ಆಕೆಗೆ ಅವಕಾಶ ಮಾಡಿಕೊಡುವುದಿಲ್ಲ’’ ಎಂದು ಆತ ಸಾಯುವ ಮುನ್ನ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಎದೆಯ ಮೇಲೆ ‘‘ಜಸ್ಟಿಸ್ ಇಸ್ ಡ್ಯೂ’’ ಎಂಬ ಫಲಕವನ್ನೂ ಧರಿಸಿಕೊಂಡಿದ್ದರು. ತನ್ನ ಸಾವಿಗೆ ಕೇವಲ ಪತ್ನಿಯ ಸುಳ್ಳು ಮೊಕದ್ದಮೆಗಳು ಮಾತ್ರ ಕಾರಣವಲ್ಲ, ನ್ಯಾಯ ವ್ಯವಸ್ಥೆಯೂ ಆಕೆಯ ಅಕ್ರಮಗಳ ಜೊತೆಗೆ ಕೈ ಜೋಡಿಸಿದೆ ಎನ್ನುವ ಗಂಭೀರ ಆರೋಪವನ್ನು ಆತ ಸಾಯುವ ಮುನ್ನ ಮಾಡಿದ್ದ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಬೇಕಾದ ಕಾನೂನುಗಳು ನ್ಯಾಯವ್ಯವಸ್ಥೆಯ ದೌರ್ಬಲ್ಯಗಳಿಂದಾಗಿ ಹೇಗೆ ಪುರುಷನ ಮೇಲಿನ ದೌರ್ಜನ್ಯಗಳಿಗೆ ಕಾರಣವಾಗಬಹುದು ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಪತಿಯಿಂದ ವಿಚ್ಛೇದಿತಳಾಗಿರುವ ಮಹಿಳೆಗೆ ನ್ಯಾಯ ನೀಡುವುದೆಂದರೆ, ಆರೋಪಿ ಸ್ಥಾನದಲ್ಲಿ ನಿಂತಿರುವ ಪತಿಗೆ ಪ್ರತಿ ದೌರ್ಜನ್ಯವನ್ನು ಎಸಗಿ ಆತನನ್ನು ಆತ್ಮಹತ್ಯೆಯಂತಹ ಸ್ಥಿತಿಗೆ ತಳ್ಳುವುದಲ್ಲ. ಅದನ್ನು ನ್ಯಾಯವೆಂದೂ, ಮಹಿಳೆಗೆ ನೀಡುವ ಪರಿಹಾರವನ್ನು ಕರೆಯಲು ಸಾಧ್ಯವೇ ಇಲ್ಲ.

ಈ ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳನ್ನು ಪತಿ ಮತ್ತು ಆತನ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ದುರ್ಬಳಕೆ ಮಾಡುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಕೂಡ ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದೆ. ತೆಲಂಗಾಣದ ವರದಕ್ಷಿಣೆ ಕಿರುಕುಳ ಪ್ರಕರಣವೊಂದಕ್ಕೆ ಸಂಬಂಧಿಸಿ ಪತ್ನಿಯು ಪತಿಯ ಕುಟುಂಬವನ್ನು ಗುರಿ ಮಾಡಿರುವುದನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್ ಈ ಹೇಳಿಕೆಯನ್ನು ನೀಡಿದೆ. ಮುಖ್ಯವಾಗಿ ಇಂತಹ ದುರ್ಬಳಕೆಯಿಂದ ದೇಶದ ನಿಜವಾದ ಸಂತ್ರಸ್ತ ಮಹಿಳೆಯರಿಗೆ ಅನ್ಯಾಯವಾಗುತ್ತದೆ. ಮಹಿಳೆಯರ ಮೇಲೆ ಪುರುಷರು ಎಸಗುತ್ತಾ ಬಂದಿರುವ ಕೌಟುಂಬಿಕ ದೌರ್ಜನ್ಯಗಳಿಗೆ ಹೋಲಿಸಿದರೆ, ಇಂತಹ ಪ್ರಕರಣಗಳು ತೀರಾ ಸಣ್ಣ ಸಂಖ್ಯೆಯಲ್ಲಿವೆ. ಆದರೆ ಮಹಿಳೆಯರ ಮೇಲೆ ನಿಜಕ್ಕೂ ದೌರ್ಜನ್ಯವೆಸಗುವ ಪುರುಷರು ಇಂತಹ ಕಾನೂನು ದುರ್ಬಳಕೆಯನ್ನು ತಮ್ಮ ಗುರಾಣಿಯಾಗಿ ಬಳಸಿಕೊಂಡು ಅನುಕಂಪವನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದುದರಿಂದ ಕೌಟುಂಬಿಕ ದೌರ್ಜನ್ಯ ಕಾನೂನು ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ಮಹಿಳಾ ಸಂಘಟನೆಗಳ ಮತ್ತು ಕುಟುಂಬ ನ್ಯಾಯಾಲಯದ ಕರ್ತವ್ಯವೂ ಹೌದು. ಪತಿ-ಪತ್ನಿ ನಡುವಿನ ವಿಚ್ಛೇದನೆಯ ಸಂದರ್ಭದಲ್ಲಿ ಪರಿಹಾರ ನೀಡುವ ಸಂದರ್ಭದಲ್ಲೂ ನ್ಯಾಯಾಲಯ ತನ್ನ ವಿವೇಕವನ್ನು ಬಳಸಬೇಕು. ಸಂತ್ರಸ್ತೆ ನಿಜಕ್ಕೂ ಪರಿಹಾರವನ್ನು ಕೇಳುತ್ತಿದ್ದಾಳೆೆಯೇ ಅಥವಾ ಪರಿಹಾರದ ಹೆಸರಿನಲ್ಲಿ ಪತಿಯ ವಿರುದ್ಧ ಸೇಡು ತೀರಿಸಲು ಯತ್ನಿಸುತ್ತಿದ್ದಾಳೆೆಯೇ ಎನ್ನುವುದನ್ನು ತಿಳಿದುಕೊಳ್ಳಲಾಗದಷ್ಟು ನ್ಯಾಯಾಧೀಶರು ಅರಿವುಗೇಡಿಗಳಾಗಬಾರದು. ಕೇವಲ ಮಹಿಳಾ ದೌರ್ಜನ್ಯ ತಡೆ ಕಾನೂನುಗಳಿಗೆ ಮಾತ್ರವಲ್ಲ, ಜಾತಿ ನಿಂದನೆ, ಜಾತಿ ದೌರ್ಜನ್ಯ ತಡೆ ಕಾನೂನುಗಳಿಗೂ ಇದು ಅನ್ವಯವಾಗುತ್ತದೆ. ಇಂತಹ ಕಾನೂನುಗಳು ದುರುಪಯೋಗವಾದಷ್ಟ್ಟೂ ಅದರ ಲಾಭವನ್ನು ಸಮಾಜದೊಳಗಿರುವ ನಿಜವಾದ ‘ಅಪರಾಧಿ’ಗಳು ತನ್ನದಾಗಿಸಿಕೊಳ್ಳುತ್ತಾರೆ ಎನ್ನುವ ಅರಿವು ಶೋಷಿತ ಸಮುದಾಯಕ್ಕೆ ಯಾವತ್ತೂ ಇರಬೇಕು. ದೌರ್ಜನ್ಯ ತಡೆ ಕಾನೂನನ್ನು ಸಬಲಗೊಳಿಸುವುದೆಂದರೆ, ಮೊದಲು ಅದನ್ನು ದುರ್ಬಳಕೆಯಾಗದಂತೆ ತಡೆಯುವುದು ಎನ್ನುವ ಅಂಶವನ್ನು ಅರಿತುಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News