ಸಂಭಲ್ ಹಿಂಸಾಚಾರ: ಜಿಲ್ಲಾಡಳಿತ ಮುಚ್ಚಿಡುತ್ತಿರುವುದೇನು?

Update: 2024-12-05 05:23 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ಬಾರಿ ಸಂಸತ್‌ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕಾಗಿದ್ದುದು ಅದಾನಿ ಸಂಸ್ಥೆಗಳ ಮೇಲೆ ಅಮೆರಿಕ ಮಾಡಿರುವ ದೋಷಾರೋಪಗಳು. ಅದಾನಿ ಅವರು ಸೋಲಾರ್ ಗುತ್ತಿಗೆಗಳನ್ನು ತನ್ನದಾಗಿಸಿಕೊಳ್ಳಲು ನೀಡಿದ್ದಾರೆನ್ನಲಾಗಿರುವ ಲಂಚ ಮತ್ತು ಹೂಡಿಕೆದಾರರಿಗೆ ನೀಡಿರುವ ಸುಳ್ಳುಮಾಹಿತಿಗಳು ಅಮೆರಿಕ ನಡೆಸಿರುವ ತನಿಖೆಯಿಂದ ಬೆಳಕಿಗೆ ಬಂದಿವೆ ಮತ್ತು ಈ ಸಂಬಂಧ ಅದಾನಿಗೆ ಅಲ್ಲಿನ ಆಡಳಿತ ಬಂಧನ ವಾರಂಟ್ ಜಾರಿಗೊಳಿಸಿದೆ. ಅದಾನಿಗೂ ಪ್ರಧಾನಿ ಮೋದಿಗೂ ಇರುವ ಸಂಬಂಧ ಜಗಜ್ಜಾಹೀರು. ಅದಾನಿಯ ಕಾರ್ಪೊರೇಟ್ ಅಕ್ರಮಗಳಲ್ಲಿ ಪ್ರಧಾನಿ ಮೋದಿ ಶಾಮೀಲಾಗಿದ್ದಾರೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಈ ಬಗ್ಗೆ ತನಿಖೆಗೆ ಆಗ್ರಹಿಸಿದಾಗಲೆಲ್ಲ ಅದಾನಿ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ. ತನ್ನ ಪ್ರಭಾವವನ್ನು ಬಳಸಿ, ತನಿಖೆಯನ್ನು ವಿಫಲಗೊಳಿಸಿದೆ. ಇದೀಗ ಮತ್ತೆ ಅದಾನಿ ಅಕ್ರಮಗಳು ಮೇಲೆದ್ದು ಬಂದಿವೆ. ವಿರೋಧ ಪಕ್ಷಗಳೆಲ್ಲ ಅದಾನಿ ಪ್ರಕರಣವನ್ನು ಮುಂದಿಟ್ಟುಕೊಂಡು ಒಂದಾಗಿ ಸಂಸತ್‌ನಲ್ಲಿ ಗದ್ದಲ ಎಬ್ಬಿಸಲು ಸಿದ್ಧತೆ ನಡೆಸಿದ್ದವು. ಆದರೆ ವಿರೋಧ ಪಕ್ಷಗಳ ಗಮನವನ್ನು ಬೇರೆಡೆಗೆ ತಿರುಗಿಸುವಲ್ಲಿ ಕೇಂದ್ರ ಸರಕಾರ ಕೊನೆಗೂ ಯಶಸ್ವಿಯಾಗಿದೆ. ಅದಾನಿಯ ವಿರುದ್ಧ ಒಂದಾಗಿ ಪ್ರತಿಭಟಿಸಬೇಕಾಗಿದ್ದ ವಿರೋಧ ಪಕ್ಷಗಳ ನಾಯಕರು, ಅನಿವಾರ್ಯವಾಗಿ ಸಂಭಲ್ ಹಿಂಸಾಚಾರದ ವಿರುದ್ಧ ಧ್ವನಿಯೆತ್ತಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ದೇಶದ ಗಮನವನ್ನು ಅದಾನಿಯಿಂದ ಬೇರೆಡೆಗೆ ತಿರುಗಿಸಲು ಸಂಭಲ್ ಹಿಂಸಾಚಾರವನ್ನು ಸರಕಾರವೇ ಪ್ರಾಯೋಜಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಜೊತೆಗೆ ಇತ್ತೀಚೆಗೆ ನಡೆದಿರುವ ವಿಧಾನಸಭಾ ಚುನಾವಣೆಯ ಅಕ್ರಮಗಳ ವಿರುದ್ಧವೂ ರಾಜಕೀಯ ಪಕ್ಷಗಳು ಸಂಘಟಿತವಾಗುತ್ತಿದ್ದವು. ಈ ಹೊತ್ತಿಗೆ ಸಂಭಲ್ ಹಿಂಸಾಚಾರ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಚಲಾವಣೆಗೊಂಡಿರುವ ಮತಗಳಲ್ಲಿ ವಿರೋಧಾಭಾಸಗಳು ಕಾಣಿಸಿಕೊಂಡಿದ್ದು, ಇವಿಎಂನ್ನು ತಿರುಚಲಾಗಿದೆ ಎಂದು ವಿರೋಧ ಪಕ್ಷಗಳು ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿವೆ. ಉದ್ಧವ್ ಠಾಕ್ರೆಯ ಶಿವಸೇನೆ ಮತ್ತು ಕಾಂಗ್ರೆಸ್ ‘ನಮಗೆ ಇವಿಎಂ ಬೇಡ. ಮತ ಪತ್ರಗಳ ಮೂಲಕ ಚುನಾವಣೆಯಾಗಲಿ’ ಎಂದು ಪ್ರತಿಭಟನೆಗಳನ್ನು ಆರಂಭಿಸಿವೆ. ಉತ್ತರ ಪ್ರದೇಶದಲ್ಲಿ ನಡೆದಿರುವ ಉಪಚುನಾವಣೆಗಳಲ್ಲೂ ಅಕ್ರಮಗಳು ನಡೆದಿರುವುದಾಗಿ ವಿರೋಧ ಪಕ್ಷಗಳು ಆರೋಪಿಸುತ್ತಿವೆ ಮತ್ತು ಇದರ ವಿರುದ್ಧ ಸಂಘಟಿತ ಹೋರಾಟಗಳನ್ನು ಶುರು ಮಾಡಿವೆ. ಇದರ ಜೊತೆ ಜೊತೆಗೇ ಅದಾನಿ-ಮೋದಿ ಸಂಬಂಧವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಸಂಸತ್‌ನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದರು. ಅದಾನಿಯನ್ನು ಬಂಧಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯ ಮಾಡುತ್ತಿದ್ದರು. ಇವೆಲ್ಲವುಗಳಿಂದ ಪಾರಾಗುವುದಕ್ಕಾಗಿಯೇ ಸಂಭಲ್ ಹಿಂಸಾಚಾರವನ್ನು ಸೃಷ್ಟಿಸಲಾಗಿದೆ ಎಂದು ಅನುಮಾನಿಸಲಾಗುತ್ತಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಸಂಸತ್‌ನಲ್ಲಿ ಸಂಭಲ್ ಹಿಂಸಾಚಾರವನ್ನು ಪ್ರಸ್ತಾಪಿಸುತ್ತಾ ‘‘ಇದೊಂದು ಯೋಜಿತ ಪಿತೂರಿ’’ ಎಂದು ಆರೋಪಿಸಿದ್ದಾರೆ ಮತ್ತು ಈ ಪಿತೂರಿಯ ಜೊತೆಗೆ ನಮ್ಮ ನ್ಯಾಯ ವ್ಯವಸ್ಥೆಯೂ ಕೈ ಜೋಡಿಸಿದೆ ಎನ್ನುವುದೇ ಸದ್ಯದ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

ಒಂದಾನೊಂದು ಕಾಲದಲ್ಲಿ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಲಾಗಿದೆ ಎಂದು ಆರೋಪಿಸಿ ಯಾವನೋ ಒಬ್ಬ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾನೆ ಎನ್ನುವ ಕಾರಣಕ್ಕೆ ಏಕಾಏಕಿ ೫೦೦ ವರ್ಷಗಳಷ್ಟು ಹಿಂದಿನ ಮಸೀದಿಯ ಸಮೀಕ್ಷೆ ನಡೆಸಲು ಆತುರಾತುರವಾಗಿ ನ್ಯಾಯಾಲಯ ಆದೇಶಿಸುವುದೇ ನ್ಯಾಯ ವ್ಯವಸ್ಥೆಯ ಅತಿ ದೊಡ್ಡ ಅಣಕವಾಗಿದೆ. ಬಳಿಕ ಇದರ ವಿಚಾರಣಾ ಕಲಾಪಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆಯನ್ನು ನೀಡಿತು ಎನ್ನುವುದು ಬೇರೆ ವಿಷಯ. ಆದರೆ ಅಷ್ಟರಲ್ಲಿ ಉತ್ತರ ಪ್ರದೇಶ ಸರಕಾರಕ್ಕೆ ಏನು ನಡೆಯಬೇಕಾಗಿತ್ತೋ ಅದು ನಡೆದು ಹೋಗಿತ್ತು. ಸ್ಥಳೀಯ ಅಮಾಯಕ ಏಳು ಮಂದಿ ಮುಸ್ಲಿಮರನ್ನು ಪೊಲೀಸರ ಗುಂಡುಗಳು ಬರ್ಬರವಾಗಿ ಕೊಂದು ಹಾಕಿದ್ದವು. ಇದೀಗ ಈ ಹಿಂಸೆ ಹೇಗೆ ನಡೆಯಿತು, ಯಾಕೆ ನಡೆಯಿತು ಎನ್ನುವುದು ತನಿಖೆಗೊಳಗಾಗಬೇಕಾಗಿದೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಜಿಲ್ಲಾಡಳಿತ ಕೂಡ ಆರೋಪಿ ಸ್ಥಾನದಲ್ಲಿ ನಿಂತಿರುವುದರಿಂದ, ಸಂತ್ರಸ್ತರು ಏನು ಹೇಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಜಿಲ್ಲಾಡಳಿತದ ಪ್ರಕಾರ, ದುಷ್ಕರ್ಮಿಗಳು ಪೊಲೀಸರ ವಿರುದ್ಧ ಶಸ್ತ್ರಾಸ್ತ್ರಗಳ ಜೊತೆಗೆ ದಾಳಿ ನಡೆಸಿದರು. ಕಲ್ಲು ತೂರಾಟ ನಡೆಸಿದರು ಮತ್ತು ಅಕ್ರಮ ಬಂದೂಕುಗಳನ್ನು ಪ್ರಯೋಗಿಸಿದರು ಎನ್ನುವುದಾಗಿದೆ. ಆದರೆ ಸ್ಥಳೀಯರು ಬೇರೆಯೇ ಆರೋಪಗಳನ್ನು ಮಾಡುತ್ತಿದ್ದಾರೆ. ಮುಖ್ಯವಾಗಿ ಸಮೀಕ್ಷೆಗೆ ಆಗಮಿಸಿದ ಅಧಿಕಾರಿಗಳ ಜೊತೆಗೆ ಸಂಘಪರಿವಾರ ಮುಖಂಡರು, ಕಾರ್ಯಕರ್ತರೂ ಸೇರಿಕೊಂಡಿದ್ದರು ಎನ್ನುವುದು ಅವುಗಳಲ್ಲಿ ಒಂದು. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಅಧಿಕಾರಿಗಳ ಜೊತೆಗಿದ್ದ ಗುಂಪು ‘ಜೈ ಶ್ರೀರಾಮ್’ ಎನ್ನುವ ಘೋಷಣೆಗಳನ್ನು ಕೂಗುತ್ತಿತ್ತು. ಅಂದರೆ, ಸಮೀಕ್ಷೆ ನಡೆಸುವ ಮಂದಿ ಒಂದು ನಿರ್ದಿಷ್ಟ ಅಜೆಂಡಾವನ್ನು ಇಟ್ಟುಕೊಂಡೇ ಅಲ್ಲಿಗೆ ಬಂದಿದ್ದರು. ಅವರು ಸಮೀಕ್ಷೆಯ ನೆಪದಲ್ಲಿ ಸ್ಥಳೀಯ ಮುಸ್ಲಿಮರನ್ನು ಪ್ರಚೋದಿಸಲು ಗರಿಷ್ಠ ಪ್ರಯತ್ನ ನಡೆಸಿದ್ದಾರೆ.

ಉಳಿದಂತೆ ಪೊಲೀಸರಿಗೆ ಗೋಲಿಬಾರ್ ನಡೆಸಲು ಅನಿವಾರ್ಯವಾದುದು ಹೇಗೆ? ಗೋಲಿಬಾರ್‌ನಿಂದ ಮೃತಪಟ್ಟವರಲ್ಲಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿರಲೇ ಇಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇಷ್ಟಾದರೂ ಅವರೆಡೆ ಪೊಲೀಸರು ಯಾಕೆ ಗೋಲಿಬಾರ್ ನಡೆಸಿದರು? ಸಮೀಕ್ಷೆ ನಡೆಯುವ ಸಂದರ್ಭದಲ್ಲಿ ಇಂತಹ ಅನಾಹುತಗಳು ಸಂಭವಿಸಬಹುದು ಎನ್ನುವ ಮುನ್ನೆಚ್ಚರಿಕೆ ಪೊಲೀಸರಲ್ಲಿ ಇರಲಿಲ್ಲವೇ? ಮೊದಲಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಸತ್ಯಾನ್ವೇಷಣೆಗಾಗಿ ಮಾನವ ಹಕ್ಕು ಸಂಘಟನೆಗಳಿಗೆ ಅವಕಾಶ ನೀಡಬೇಕು. ಆದರೆ ಹಿಂಸಾಚಾರ ಸಂಭವಿಸಿದ ದಿನದಿಂದ ಸ್ಥಳಕ್ಕೆ ಯಾವುದೇ ಪ್ರಜಾಸತ್ತಾತ್ಮಕವಾದ ಸಂಘಟನೆಗಳನ್ನು ಭೇಟಿ ನೀಡಲು ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ. ಸ್ಥಳೀಯ ರಾಜಕೀಯ ಪಕ್ಷಗಳ ನಾಯಕರು ಭೇಟಿ ನೀಡುವ ಪ್ರಯತ್ನ ನಡೆಸಿದರಾದರೂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜಕೀಯ ಮುಖಂಡರು ಸಂಭಲ್‌ಗೆ ಭೇಟಿ ನೀಡುವ ಪ್ರಯತ್ನ ನಡೆಸಿದರು. ಆದರೆ ಅವರನ್ನೂ ಗಡಿಯಲ್ಲಿ ತಡೆಯಲಾಯಿತು. ರಾಜಕೀಯ ನಾಯಕರನ್ನು, ಪತ್ರಕರ್ತರನ್ನು, ಸಾಮಾಜಿಕ ಹೋರಾಟಗಾರರನ್ನು ಸ್ಥಳಕ್ಕೆ ಭೇಟಿ ಕೊಡಲು ಅವಕಾಶ ನೀಡದೆ ಇರುವ ಮೂಲಕ ಜಿಲ್ಲಾಡಳಿತ ಏನನ್ನು ಮುಚ್ಚಿಡಲು ಯತ್ನಿಸುತ್ತಿದೆ ಎನ್ನುವ ಪ್ರಶ್ನೆ ಎದ್ದಿದೆ. ಜಿಲ್ಲಾಡಳಿತ ಸಂತ್ರಸ್ತ ಪ್ರದೇಶವನ್ನು ಯಾಕೆ ದಿಗ್ಬಂಧನಕ್ಕೊಳಪಡಿಸಿದೆ? ಸಂಭಲ್ ಹಿಂಸಾಚಾರ ಮುಂದಿನ ದಿನಗಳಲ್ಲಿ ದೇಶದ ಬೇರೆ ಬೇರೆ ಕಡೆಗಳಿಗೆ ವಿಸ್ತರಿಸುವ ಎಲ್ಲ ಸಾಧ್ಯತೆಗಳೂ ಇವೆ. ಯಾಕೆಂದರೆ, ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟ ದಿನದಿಂದ, ಕಂಡಕಂಡವರೆಲ್ಲ ಮಸೀದಿ ಅಗೆಯಲು, ಸಮೀಕ್ಷೆ ನಡೆಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಸಂಭಲ್‌ನಲ್ಲಿ ನಡೆದಿರುವುದು ದೇಶದ ಎಲ್ಲಿ ಬೇಕಾದರೂ ನಡೆಯಬಹುದು. ಈ ಹಿನ್ನೆಲೆಯಲ್ಲಿ ಸಂಭಲ್ ಹಿಂಸಾಚಾರದ ಹಿಂದಿರುವ ಕಾಣದ ಅಥವಾ ಕಾಣುವ ಕೈಗಳನ್ನು ಗುರುತಿಸಿ ಅವುಗಳಿಗೆ ಬೇಡಿ ತೊಡಿಸುವುದು ಅತ್ಯಗತ್ಯವಾಗಿದೆ. ಸ್ಥಳೀಯ ಜಿಲ್ಲಾಡಳಿತ ತಕ್ಷಣ ಸಂಭಲ್‌ಗೆ ವಿಧಿಸಿರುವ ದಿಗ್ಬಂಧನವನ್ನು ಹಿಂದೆಗೆಯಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News