ರಾಜ್ಯ ಬಿಜೆಪಿ ಭಿನ್ನಮತ: ಅತ್ತ ಧರಿ, ಇತ್ತ ಪುಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕಾಗಿ ಕೊನೆಗೂ ಒಲ್ಲದ ಮನಸ್ಸಿನಿಂದ ವರಿಷ್ಠರು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ರವಾನಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ತಮ್ಮ ಹೇಳಿಕೆಗಳ ಮೂಲಕ ರಾಜ್ಯ ಬಿಜೆಪಿಗೆ ಮಾಡಿರುವ ಹಾನಿಗೆ ಹೋಲಿಸಿದರೆ, ಅವರನ್ನು ಯಾವತ್ತೋ ವರಿಷ್ಠರು ಪಕ್ಷದಿಂದ ಅಮಾನತು ಮಾಡಬೇಕಾಗಿತ್ತು. ಆದರೆ ಬಿಜೆಪಿ ನಾಯಕರು ಮೌನವಾಗಿ ಯತ್ನಾಳ್ ಬಂಡಾಯಕ್ಕೆ ಕುಮ್ಮಕ್ಕು ನೀಡುತ್ತಲೇ ಬಂದಿದ್ದರು. ಯತ್ನಾಳ್ ಟೀಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದರ ಅರ್ಥ, ಪರೋಕ್ಷವಾಗಿ ಆ ಟೀಕೆಗಳಿಗೆ ಸಮ್ಮತಿ ವ್ಯಕ್ತಪಡಿಸಿದಂತೆ. ಇದೀಗ ಯತ್ನಾಳ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮದೇ ಪರ್ಯಾಯ ಸಮಾವೇಶಗಳನ್ನು ಹಮ್ಮಿಕೊಂಡಿದ್ದಾರೆ. ಬೆಳಗಾವಿಯಲ್ಲಿ ‘ವಕ್ಫ್’ನ್ನು ವಿರೋಧಿಸುವ ನೆಪದಲ್ಲಿ ಯತ್ನಾಳ್ ಹಮ್ಮಿಕೊಂಡಿರುವುದು ಯಡಿಯೂರಪ್ಪ ವಿರೋಧಿ ಸಮಾವೇಶಗಳನ್ನು. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವವನ್ನು ಯಾವುದೇ ರೀತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಈ ಸಮಾವೇಶದ ಮೂಲಕ ಅವರು ವರಿಷ್ಠರಿಗೆ ಸ್ಪಷ್ಟಪಡಿಸಿದ್ದಾರೆ. ನಿಜಕ್ಕೂ ವರಿಷ್ಠರಿಗೆ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಉದ್ದೇಶವಿದ್ದರೆ, ಅವರು ಸಮಾವೇಶವನ್ನೇ ನಡೆಸದಂತೆ ನೋಡಿಕೊಳ್ಳಬೇಕಾಗಿತ್ತು. ‘ಪರ್ಯಾಯ ಸಮಾವೇಶವನ್ನೇನಾದರೂ ಹಮ್ಮಿಕೊಂಡರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎನ್ನುವ ಎಚ್ಚರಿಕೆಯನ್ನು ಆರಂಭದಲ್ಲೇ ನೀಡಬೇಕಾಗಿತ್ತು. ಮಾತ್ರವಲ್ಲ, ಎಚ್ಚರಿಕೆಯನ್ನು ಮೀರಿ ಸಮಾವೇಶ ನಡೆಸಿದ ಕಾರಣಕ್ಕೆ ಪಕ್ಷದಿಂದ ವಜಾ ಗೊಳಿಸಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ನೈತಿಕ ಧೈರ್ಯ ನೀಡಬೇಕಾಗಿತ್ತು. ವಿಪರ್ಯಾಸವೆಂದರೆ ಸಮಾವೇಶ ಆರಂಭಗೊಂಡು ಹಲವು ದಿನಗಳು ಕಳೆದಿವೆೆಯಾದರೂ, ಈ ಪ್ರತಿಭಟನಾ ಸಮಾವೇಶಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ಸ್ಪಷ್ಟೀಕರಣವನ್ನು ವರಿಷ್ಠರು ಈವರೆಗೆ ನೀಡಿಲ್ಲ. ಪಕ್ಷವನ್ನು ಉಲ್ಲಂಘಿಸಿ ಸಮಾವೇಶ ನಡೆಸಿದ್ದಕ್ಕಾಗಿ ಅವರ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳದೆ ಶೋಕಾಸ್ ನೋಟಿಸ್‌ನ್ನು ರವಾನಿಸಿ ಕೈ ತೊಳೆದುಕೊಂಡಿದ್ದಾರೆ.
ಸಮಯ ಸಂದರ್ಭ ಸಿಕ್ಕಿದಾಗಲೆಲ್ಲ ಬಿಜೆಪಿ ವರಿಷ್ಠರು ಯಡಿಯೂರಪ್ಪರನ್ನು ಬಗ್ಗು ಬಡಿಯಲು ಪ್ರಯತ್ನಿಸಿದ್ದರು. ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿ ಪಕ್ಷವನ್ನು ಮುನ್ನಡೆಸಲು ಸಾಧ್ಯವಿಲ್ಲ ಎನ್ನುವ ಅನಿವಾರ್ಯ ಸ್ಥಿತಿಯಲ್ಲಿ, ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಲಾಯಿತು. ತನ್ನ ಬೆನ್ನಿಗಿರುವ ಲಿಂಗಾಯತ ಶಕ್ತಿಯನ್ನು ತೋರಿಸಿ, ವರಿಷ್ಠರಿಂದ ರಾಜ್ಯಾಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ಕಿತ್ತುಕೊಂಡಿದ್ದರು. ಒಂದೆಡೆ ಯಡಿಯೂರಪ್ಪ ಬಣಕ್ಕೆ ಪಕ್ಷದ ನಾಯಕತ್ವವನ್ನು ನೀಡುತ್ತಲೇ, ಮಗದೊಂದೆಡೆ ಯಡಿಯೂರಪ್ಪ ವಿರೋಧಿ ಶಕ್ತಿಗಳನ್ನು ವರಿಷ್ಠರೇ ಸಾಕಿ ಬೆಳೆಸಿದ್ದಾರೆ. ಮೂರನೇ ದರ್ಜೆಯಲ್ಲಿ ದ್ವೇಷ ಭಾಷಣ ಮಾಡುತ್ತಾ, ಸಮಾಜದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಮಾಡುವಲ್ಲಿ ಕುಖ್ಯಾತನಾಗಿರುವ, ಅದನ್ನೇ ತನ್ನ ರಾಜಕೀಯ ಹೆಗ್ಗಳಿಕೆಯಾಗಿಸಿಕೊಂಡಿರುವ ಬಸನಗೌಡ ಪಾಟೀಲ್‌ಯತ್ನಾಳ್ ಅವರ ಹಿಂದೆ ಆರೆಸ್ಸೆಸ್‌ನ ನಾಯಕರಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕನಾಗಿದ್ದರೂ ಯಡಿಯೂರಪ್ಪರಿಗಿಂತ ಪರಿಣಾಮಕಾರಿಯಾಗಿ ಆರೆಸ್ಸೆಸ್ ಕಚೇರಿಯ ಗೇಟ್ ಕೀಪರ್ ಕೆಲಸ ಮಾಡಬಲ್ಲೆ ಎನ್ನುವುದನ್ನು ಯತ್ನಾಳ್ ಈಗಾಗಲೇ ಆರೆಸ್ಸೆಸ್ ನಾಯಕರ ಮುಂದೆ ಸಾಬೀತು ಪಡಿಸಿದ್ದಾರೆ. ಆದುದರಿಂದಲೇ, ಯಡಿಯೂರಪ್ಪ ಬಣವನ್ನು ಬಗ್ಗು ಬಡಿಯಲು ಯತ್ನಾಳ್‌ರನ್ನು ಬಿಜೆಪಿಯೊಳಗಿನ ಗುಂಪೇ ಬಳಸಿಕೊಳ್ಳುತ್ತಿದೆ. ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಅದೇ ಗುಂಪು ಅಡ್ಡಿಯಾಗಿದೆ. ಯಡಿಯೂರಪ್ಪ ಅವರ ಸುತ್ತಮುತ್ತ ಇರುವ ನಾಯಕರೇ ಪರೋಕ್ಷವಾಗಿ ಯತ್ನಾಳ್‌ಗೆ ಕುಮ್ಮಕ್ಕು ನೀಡುತ್ತಾ ಬರುತ್ತಿರುವುದರಿಂದ, ಶೋಕಾಸ್ ನೋಟಿಸ್ ವಿಶೇಷ ಪರಿಣಾಮವನ್ನು ಬೀರಲಾರದು. ನೋಟಿಸ್ ಸ್ವೀಕರಿಸಿದ ಬಳಿಕವೂ ಯತ್ನಾಳ್ ಅವರು ತಮ್ಮ ಪರ್ಯಾಯ ಸಮಾವೇಶದಿಂದ ಹಿಂದೆ ಸರಿದಿಲ್ಲ. ಬದಲಿಗೆ ನೋಟಿಸ್‌ಗೆ ಸವಾಲು ಹಾಕುವಂತೆ ‘ಭ್ರಷ್ಟಾಚಾರ, ಕುಟುಂಬ ರಾಜಕಾರಣದ ವಿರುದ್ಧ ತನ್ನ ಹೋರಾಟ ಮುಂದುವರಿಯುತ್ತದೆ’ ಎಂದು ಹೇಳಿಕೆ ನೀಡಿದ್ದಾರೆ. ಅಂದರೆ ಯಡಿಯೂರಪ್ವ ವಿರುದ್ಧ ಮುಂದೆಯೂ ಹೇಳಿಕೆ ನೀಡಲಿದ್ದೇನೆ ಎನ್ನುವುದು ಇದರ ಅರ್ಥವಾಗಿದೆ.
ಕೊನೆಗೂ ಯತ್ನಾಳ್ ಅವರಿಗೆ ವರಿಷ್ಠರು ಶೋಕಾಸ್ ನೀಡಲು ಕಾರಣವೇನು? ಯತ್ನಾಳ್ ವಿರುದ್ಧ ಯಡಿಯೂರಪ್ಪ ವರಿಷ್ಠರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಹೀಗೆ ಆದಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ವರಿಷ್ಠರಿಗೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ ಎಂದು ಒಂದು ಮೂಲ ಹೇಳುತ್ತದೆ. ಇದೇ ಸಂದರ್ಭದಲ್ಲಿ, ಯತ್ನಾಳ್‌ನ ಬೀಸು ಹೇಳಿಕೆಗಳು ಇತ್ತೀಚೆಗೆ ಆರೆಸ್ಸೆಸ್‌ಗೇ ಗಾಯಗಳನ್ನುಂಟು ಮಾಡುತ್ತಿವೆ. ಮುಖ್ಯವಾಗಿ ಬಸವಣ್ಣ ಕುರಿತಂತೆ ಯತ್ನಾಳ್ ಆಡಿರುವ ಮಾತು, ಲಿಂಗಾಯತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ‘‘ಬಸವಣ್ಣ ಅವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು’’ ಎಂದು ಧ್ವನಿಸುವ ಹೇಳಿಕೆಯನ್ನು ಮಾತಿನ ಮಧ್ಯೆ ನೀಡಿರುವುದು ಲಿಂಗಾಯತ ಸಮುದಾಯವನ್ನು ಕೆರಳಿಸಿದೆ. ಯಡಿಯೂರಪ್ಪ ಬಣ ಕೂಡ ಯತ್ನಾಳ್ ವಿರುದ್ಧ ಈ ಹೇಳಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಈಗಾಗಲೇ ಲಿಂಗಾಯತ ಧರ್ಮದ ಹಲವು ಮುಖಂಡರು, ಸ್ವಾಮೀಜಿಗಳು ಯತ್ನಾಳ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಸಾರ್ವಜನಿಕ ಕ್ಷಮಾಯಾಚನೆಗೆ ಒತ್ತಾಯಿಸಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಯತ್ನಾಳ್ ಅವರು ಆರೆಸ್ಸೆಸ್‌ನ್ನು ಮೆಚ್ಚಿಸಲು ಹೊರಟಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಯತ್ನಾಳ್ ವಿರುದ್ಧದ ಆಕ್ರೋಶ ನಿಧಾನಕ್ಕೆ ಬಿಜೆಪಿ ವಿರೋಧಿ ಆಕ್ರೋಶವಾಗಿ ಪರಿವರ್ತನೆಯಾಗುವ ಭಯದಿಂದ ಯತ್ನಾಳ್ ಜೊತೆಗೆ ಅಂತರ ಕಾಯುವುದು ಆರೆಸ್ಸೆಸ್ ಮತ್ತು ಬಿಜೆಪಿಯೊಳಗಿರುವ ಬ್ರಾಹ್ಮಣ ಲಾಬಿಗೆ ಅನಿವಾರ್ಯವಾಗಿದೆ. ಆದುದರಿಂದಲೇ, ಕೊನೆಗೂ ಯತ್ನಾಳ್ ವಿರುದ್ಧ ಶೋಕಾಸ್ ಎನ್ನುವ ಕಾಗದದ ಬಾಣವನ್ನು ಬಿಡಲಾಗಿದೆ. ಆದರೆ ಯತ್ನಾಳ್‌ರನ್ನು ಪಕ್ಷದಿಂದ ವಜಾ ಮಾಡಲು ಪಕ್ಷದೊಳಗಿರುವ ರಾಜ್ಯ ನಾಯಕರೇ ಅವಕಾಶ ನೀಡುವುದಿಲ್ಲ. ಆರೆಸ್ಸೆಸ್‌ನ ಒಡೆದು ಆಳುವ ರಾಜಕೀಯಕ್ಕೆ ಮೂರನೇ ದರ್ಜೆಯ ದ್ವೇಷ ಭಾಷಣದ ಮೂಲಕ, ಯತ್ನಾಳ್‌ನಂತೆ ನೆರವಾಗುವ ಇನ್ನೊಬ್ಬ ನಾಯಕ ಲಿಂಗಾಯತರಲ್ಲಿ ಇಲ್ಲ ಎನ್ನುವುದು ಅದಕ್ಕೆ ಮುಖ್ಯ ಕಾರಣ. ಆರೆಸ್ಸೆಸನ್ನು ಓಲೈಸಲು ಬಸವ ತತ್ವವನ್ನು ಬಲಿಕೊಡಲು ಸಿದ್ಧ ಎನ್ನುವುದನ್ನು ಯತ್ನಾಳ್ ಪದೇ ಪದೇ ಸಾಬೀತು ಮಾಡುತ್ತಾ ಬಂದಿದ್ದಾರೆ. ಇದಕ್ಕೆ ಬಸವಣ್ಣನ ಬಗ್ಗೆಯೇ ಅವರು ಕೀಳಾಗಿ ಮಾತನಾಡಿರುವುದು ಸಾಕ್ಷಿ. ಇಷ್ಟೆಲ್ಲ ಯೋಗ್ಯತೆ ಇರುವ ಯತ್ನಾಳ್‌ರನ್ನು ಆರೆಸ್ಸೆಸ್ ವರಿಷ್ಠರು ಕೈ ಬಿಡುವ ಸಾಧ್ಯತೆಗಳಿಲ್ಲ. ಸೌಹಾರ್ದದ ಬೀಡಾಗಿರುವ ಉತ್ತರ ಕರ್ನಾಟಕಕ್ಕೆ ಕೋಮು ಬೆಂಕಿ ಹಚ್ಚಲು ಅವರಿಗೆ ಯತ್ನಾಳ್ ಅಗತ್ಯವಾಗಿ ಬೇಕಾಗಿದ್ದಾರೆ.
ಯತ್ನಾಳ್ ಪರವಾಗಿ ಈಗಾಗಲೇ ರಮೇಶ್ ಜಾರಕಿ ಹೊಳಿ ಹೇಳಿಕೆಯನ್ನು ನೀಡಿದ್ದಾರೆ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷರಾಗುವ ಯಾವ ಯೋಗ್ಯತೆಯೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯೊಳಗಿರುವ ಅಶೋಕ್, ಸಿ.ಟಿ. ರವಿ, ಈಶ್ವರಪ್ಪ ಮೊದಲಾದ ನಾಯಕರ ಮನದ ಮಾತು ಕೂಡ ಇದೇ ಆಗಿದೆ. ವಿಜಯೇಂದ್ರ ಅವರನ್ನು ಇಳಿಸಿ ಹಿರಿಯ ನಾಯಕರನ್ನು ಆ ಸ್ಥಾನಕ್ಕೆ ತಂದು ಕೂರಿಸುವವರೆಗೆ ಬಿಜೆಪಿಯೊಳಗಿನ ಭಿನ್ನಮತ ತಣಿಯುವ ಸಾಧ್ಯತೆಗಳು ಕಾಣುವುದಿಲ್ಲ. ಆದರೆ ವಿಜಯೇಂದ್ರ ಅವರನ್ನು ಇಳಿಸಿದರೆ ಯಡಿಯೂರಪ್ಪ ಸುಮ್ಮನಿರುವವರೂ ಅಲ್ಲ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಸ್ಥಿತಿ, ಅತ್ತ ಧರಿ, ಇತ್ತ ಪುಲಿ ಎನ್ನುವಂತಾಗಿದೆ. ಯತ್ನಾಳ್ ಪರವಾಗಿ ಈಗಾಗಲೇ ರಮೇಶ್ ಜಾರಕಿ ಹೊಳಿ ಹೇಳಿಕೆಯನ್ನು ನೀಡಿದ್ದಾರೆ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷರಾಗುವ ಯಾವ ಯೋಗ್ಯತೆಯೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯೊಳಗಿರುವ ಅಶೋಕ್, ಸಿ.ಟಿ. ರವಿ, ಈಶ್ವರಪ್ಪ ಮೊದಲಾದ ನಾಯಕರ ಮನದ ಮಾತು ಕೂಡ ಇದೇ ಆಗಿದೆ. ವಿಜಯೇಂದ್ರ ಅವರನ್ನು ಇಳಿಸಿ ಹಿರಿಯ ನಾಯಕರನ್ನು ಆ ಸ್ಥಾನಕ್ಕೆ ತಂದು ಕೂರಿಸುವವರೆಗೆ ಬಿಜೆಪಿಯೊಳಗಿನ ಭಿನ್ನಮತ ತಣಿಯುವ ಸಾಧ್ಯತೆಗಳು ಕಾಣುವುದಿಲ್ಲ. ಆದರೆ ವಿಜಯೇಂದ್ರ ಅವರನ್ನು ಇಳಿಸಿದರೆ ಯಡಿಯೂರಪ್ಪ ಸುಮ್ಮನಿರುವವರೂ ಅಲ್ಲ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಸ್ಥಿತಿ, ಅತ್ತ ಧರಿ, ಇತ್ತ ಪುಲಿ ಎನ್ನುವಂತಾಗಿದೆ.