ನದಿಗಳನ್ನು ಕಾಪಾಡುವವರು ಯಾರು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶದಲ್ಲಿ ಮಾತ್ರವಲ್ಲ ರಾಜ್ಯಗಳು ಅಭಿವೃದ್ಧಿಯ ಅಬ್ಬರದಲ್ಲಿ ಸಂಭ್ರಮಿಸುತ್ತಿರುವಾಗಲೇ ಅದರ ಪರಿಣಾಮವಾಗಿ ಕೋಟಿ, ಕೋಟಿ ಜನರ ಮಾತ್ರವಲ್ಲ ಎಲ್ಲ ಜೀವರಾಶಿಗಳ ಬಾಯಾರಿಕೆಯನ್ನು ಇಂಗಿಸುವ ನದಿಗಳು ನಿಧಾನವಾಗಿ ವಿನಾಶದ ಅಂಚಿಗೆ ತಲುಪುತ್ತಿವೆ. ಆದರೆ ಸರಕಾರಗಳ ಆದ್ಯತೆ ಮಾತ್ರ ಔದ್ಯಮೀಕರಣ ಮತ್ತು ಅಭಿವೃದ್ಧಿಯ ಅಟ್ಟಹಾಸವಾಗಿದೆ. ನದಿಗಳು, ಕೆರೆಗಳು, ಕಾಡುಗಳನ್ನು ನಾಶ ಮಾಡಿ ಅಭಿವೃದ್ಧಿಯ ಗುರಿ ಸಾಧಿಸುವುದು ಯಾರಿಗಾಗಿ? ಇವೆಲ್ಲವೂ ಮುಂದಿನ ಪೀಳಿಗೆಗಳಿಗೆ ಬೇಡವೇ?
ಜೀವ ನದಿಗಳು ಮಲಿನಗೊಳ್ಳುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗುತ್ತಲೇ ಇದೆ. ರಾಜ್ಯದ ಹನ್ನೆರಡು ನದಿಗಳು ಮಲಿನಗೊಂಡಿವೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆಯವರು ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ಹೇಳಿರುವುದು ಆತಂಕದ ಸಂಗತಿಯಾಗಿದೆ. ಈ ನದಿಗಳನ್ನು ಕಾಪಾಡಲು ಸರಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ನಾಡಿನ ಪ್ರಮುಖ ನದಿಗಳಾದ ತುಂಗಭದ್ರಾ, ಲಕ್ಷ್ಮಣ ತೀರ್ಥ, ಅರ್ಕಾವತಿ, ಕಾವೇರಿ, ಕಬಿನಿ, ಕೃಷ್ಣಾ, ಶಿಂಷಾ, ಭೀಮಾ, ನೇತ್ರಾವತಿ ಮತ್ತು ದಕ್ಷಿಣ ಪಿನಾಕಿನಿ ಮುಂತಾದವು ಮಲಿನಗೊಂಡ ನದಿಗಳ ಪಟ್ಟಿಯಲ್ಲಿವೆ. ಇದು ನಿಜಕ್ಕೂ ತುಂಬಾ ಕಳವಳಕಾರಿ ಸಂಗತಿಯಾಗಿದೆ. ಇತರ ರಾಜ್ಯಗಳು ಎಚ್ಚೆತ್ತು ಜಲಮೂಲಗಳನ್ನು ಕಾಪಾಡಿಕೊಳ್ಳಲು ವಿಶೇಷ ಕಾರ್ಯ ಯೋಜನೆಯನ್ನು ರೂಪಿಸಿ ಅದನ್ನು ಕಾರ್ಯ ರೂಪಕ್ಕೆ ತರಲು ಮುಂದಾಗಿವೆ. ನದಿಗಳು ಮತ್ತು ತೀರಪ್ರದೇಶಗಳಲ್ಲಿ ಪ್ಲಾಸ್ಟಿಕ್ ಹಾವಳಿ ತೀವ್ರವಾಗಿದೆ. ಮೊದಲು ಇವುಗಳನ್ನು ಪ್ಲಾಸ್ಟಿಕ್ ಹಾಗೂ ಇತರ ಪ್ರವಾಸಿಗರು ಬಿಸಾಡುವ ವಸ್ತುಗಳಿಂದ ಮುಕ್ತಗೊಳಿಸಬೇಕು. ಇದಕ್ಕಿಂತ ಮುಖ್ಯವಾಗಿ ನದಿಗಳಲ್ಲಿನ ಹೂಳು ತೆಗೆಯಬೇಕು.
ಮಲಿನಗೊಂಡ ಈ ನದಿಗಳ ನೀರು ಕುಡಿಯಲು ಯೋಗ್ಯವಲ್ಲವೆಂದು ಪರೀಕ್ಷೆಯಿಂದ ಗೊತ್ತಾಗಿದೆ. ಸಂಸ್ಕರಿಸದೆ ಈ ನೀರನ್ನು ಕುಡಿಯುವಂತಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಲಿ ಈಗಾಗಲೇ ವರದಿ ನೀಡಿದೆ. ರಾಜ್ಯದ ಜಲಮೂಲಗಳ ತಪಾಸಣಾ ಕೇಂದ್ರಗಳಲ್ಲಿ ನೀರಿನ ಗುಣಮಟ್ಟವನ್ನು ಇತ್ತೀಚೆಗೆ ಪರೀಕ್ಷಿಸಿದಾಗ ನೀರು ಮಲಿನಗೊಂಡ ವಿಷಯ ಗೊತ್ತಾಗಿದೆ. ಹಿಂದಿನ ಬಿಜೆಪಿ ಸರಕಾರವಿದ್ದಾಗಿನಿಂದಲೂ ನದಿಗಳು ಮಲಿನಗೊಳ್ಳುತ್ತಲೇ ಇವೆ. ಇದನ್ನು ನಿಯಂತ್ರಿಸಿ ಸರಿಪಡಿಸುವ ಬದಲು ಹಿಂದಿನ ಸರಕಾರ ಉತ್ತರ ಭಾರತದಲ್ಲಿ ಗಂಗಾರತಿ ಮಾಡಿದಂತೆ ಇಲ್ಲಿ ತುಂಗಾರತಿ ಮಾಡಿತು. ಈಗಿನ ಸರಕಾರದ ಮಂತ್ರಿಗಳು ಬಾಗಿನ ಅರ್ಪಿಸಿ ಸಮಾಧಾನ ಪಟ್ಟುಕೊಂಡಿದ್ದಾರೆ.
ನೂರಾರು ವರ್ಷಗಳಿಂದ ಕೋಟ್ಯಂತರ ಜೀವ ಜಂತುಗಳ ಬಾಯಾರಿಕೆ ನೀಗಿಸುತ್ತ ಹರಿಯುವ ಈ ನದಿಗಳು ಈಗ ಒಮ್ಮಿಂದೊಮ್ಮೆಲೇ ಹೀಗಾಗಲು ಕಾರಣವೇನೆಂದು ಎಲ್ಲರಿಗೂ ಗೊತ್ತು. ಹರಿಹರ ಮುಂತಾದ ಕಡೆ ನದಿ ತೀರದಲ್ಲಿರುವ ಕೈಗಾರಿಕೆಗಳು ಬಿಡುವ ತ್ಯಾಜ್ಯ ಹಾಗೂ ರಾಸಾಯನಿಕಯುಕ್ತ ನೀರಿನಿಂದಾಗಿ ನದಿಗಳು ಹಾಳಾಗುತ್ತಿವೆ. ಈ ತ್ಯಾಜ್ಯ ಮತ್ತು ರಾಸಾಯನಿಕಯುಕ್ತ ನೀರನ್ನು ಕೈಗಾರಿಕೆಗಳು ನದಿಗಳಿಗೆ ಬಿಡಕೂಡದೆಂದು ಸರಕಾರ ನಿಯಮಾವಳಿಗಳನ್ನು ರೂಪಿಸಿದ್ದರೂ ಅದು ಕಟ್ಟುನಿಟ್ಟಾಗಿ, ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ. ಇದಕ್ಕೆ ಯಾರು ಕಾರಣ? ಕಳೆದ ವರ್ಷ ಸರಿಯಾಗಿ ಮಳೆಯಾಗದೆ ರಾಜ್ಯದಲ್ಲಿ ಜಲಕ್ಷಾಮ ಉಂಟಾಗಿತ್ತು.ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು.ರಾಜ್ಯದ ಉಳಿದ ನಗರಗಳ, ಜಿಲ್ಲೆಗಳ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಪರಿಸ್ಥಿತಿ ಗಂಭೀರವಾಗಿತ್ತು. ಜಲಮೂಲಗಳ ರಕ್ಷಣೆಯ ಬಗ್ಗೆ ಸರಕಾರ ಹಾಗೂ ಸ್ಥಳೀಯ ಸಂಸ್ಥೆಗಳು ತೋರಿಸಿದ ಅನಾಸ್ಥೆಯೇ ಇದಕ್ಕೆ ಕಾರಣ ಎಂಬುದು ಗೊತ್ತಿರುವ ಸಂಗತಿಯಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2022ರ ತನ್ನ ವರದಿಯಲ್ಲಿ ಕಾವೇರಿ ಸೇರಿದಂತೆ ರಾಜ್ಯದ ಹದಿನೇಳು ನದಿಗಳ ನೀರು ಬಳಕೆಗೆ ಯೋಗ್ಯವಲ್ಲ ಎಂದು ತಿಳಿಸಿತ್ತು. ಇದಾದ ನಂತರ ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು 2023 ಜನವರಿಯಲ್ಲಿ ಮಲಿನಗೊಂಡ ಹದಿನೇಳು ನದಿಗಳ ನೀರಿನ ಮಾದರಿಯನ್ನು ಸಂಗ್ರಹಿಸಿದ್ದರು. ಆದರೆ ಇದಾದ ನಂತರ ಕೈಗೊಂಡ ಕ್ರಮಗಳೇನು ಎಂಬುದು ತಿಳಿದು ಬಂದಿಲ್ಲ. ಆದರೆ ಕಳೆದ ಐದಾರು ವರ್ಷಗಳಿಂದ ನೀರಿನ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿರುವುದು ಬಹಿರಂಗವಾಗಿದೆ. ಇದರಿಂದ ಜನರಲ್ಲಿ ಸಹಜವಾಗಿ ಆತಂಕ ಉಂಟಾಗಿದೆ ಎಂದು ಜಲ ತಜ್ಞರ ಅಭಿಪ್ರಾಯವಾಗಿದೆ.
ರಾಜ್ಯದ ಕೆರೆಗಳ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ತೀವ್ರ ಒತ್ತುವರಿಯಿಂದ ತತ್ತರಿಸಿ ಹೋಗಿರುವ ಹಾಗೂ ಸಮರ್ಪಕ ನಿರ್ವಹಣೆ ಇಲ್ಲದೆ ಹೂಳು ತುಂಬಿರುವ ಕೆರೆಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಸರಕಾರ ಕೈಗೊಂಡ ಕ್ರಮಗಳು ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ರಿಯಲ್ ಎಸ್ಟೇಟ್ ಮಾಫಿಯಾದ ಪ್ರಭಾವದ ಎದುರು ಯಾವ ಕ್ರಮಗಳೂ ಕೆಲಸಕ್ಕೆ ಬರುತ್ತಿಲ್ಲ. ಹೀಗಾಗಿ ಕೆರೆ ಹಾಗೂ ನದಿಗಳು ಸೇರಿದಂತೆ ಜಲಮೂಲಗಳನ್ನು ಕಾಪಾಡಲು ಇನ್ನಷ್ಟು ಕಟ್ಟುನಿಟ್ಟಾದ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದಲ್ಲದೆ ಉದ್ದಿಮೆಗಳ ಮಲಿನಗೊಂಡ ನೀರು ನದಿಗಳ ಒಡಲಿಗೆ ಸೇರದಂತೆ ಬದಲಿ ಕ್ರಮಗಳನ್ನು ಕೈಗೊಳ್ಳಬೇಕು. ನದಿಗಳ ಜೀವ ಪರಿಸರವನ್ನು ಕಾಪಾಡುವುದು ಮುಖ್ಯವಾಗಿದೆ. ಈ ಬಗ್ಗೆ ಸರಕಾರ ಸ್ಪಷ್ಟವಾದ ನೀತಿಯನ್ನು ಪ್ರಕಟಿಸಬೇಕು ಮಾತ್ರವಲ್ಲ ಜಾರಿಗೆ ತರಬೇಕು. ನದಿಗಳು ಈ ದುರವಸ್ಥೆಗೆ ಏಕೆ ತಲುಪಿವೆ ಎಂಬ ಬಗ್ಗೆ ಸರಕಾರ ಮಾತ್ರವಲ್ಲ ಜನಸಾಮಾನ್ಯರು ಕೂಡ ಯೋಚಿಸಬೇಕಾಗಿದೆ.
ರಾಜ್ಯದ ನದಿಗಳಿಗೆ 106 ಕೋಟಿ ಲೀಟರ್‌ನಷ್ಟು ಕೊಳಚೆ ನೀರು ಸೇರುತ್ತದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎರಡು ವರ್ಷಗಳ ಹಿಂದೆಯೇ ವರದಿ ನೀಡಿದೆ. ಈಗ ಆ ಪ್ರಮಾಣ ಹೆಚ್ಚಾಗಿರಬಹುದು. ಹರಿಹರದ ಬಳಿಯ ತುಂಗಭದ್ರಾ ನದಿ ಸೇರಿದಂತೆ ಬಹುತೇಕ ನದಿಗಳಿಗೆ ಅತ್ಯಂತ ಅಪಾಯಕಾರಿಯಾದ ಕಾರ್ಖಾನೆಗಳ ತ್ಯಾಜ್ಯ ಸೇರ್ಪಡೆಯಾಗುತ್ತದೆ. ನದಿಗಳ ಅಂಚಿನ ನಗರಗಳಲ್ಲಿ ಹಾಗೂ ಊರುಗಳಲ್ಲಿ ಅಗತ್ಯ ಇರುವಷ್ಟು ನದಿಗಳ ನೀರಿನ ಶುದ್ಧೀಕರಣ ಘಟಕಗಳಿಲ್ಲ. ನದಿಗಳ ಶುದ್ಧೀಕರಣಕ್ಕಾಗಿ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಅದು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲಗೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ. ಅಟಲ್ ಮಿಷನ್, ಸ್ಮಾರ್ಟ್ ಸಿಟೀಸ್ ಮಿಷನ್ ಹೆಸರಿನಲ್ಲಿ ಕೇಂದ್ರ ಜಲಶಕ್ತಿ ಇಲಾಖೆ ವ್ಯಯಿಸುವ ಹಣ ವ್ಯರ್ಥವಾಗಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆಗಾಗ ನೀಡುವ ಎಚ್ಚರಿಕೆ ಅರಣ್ಯ ರೋದನವಾಗಿದೆ.
ರಾಜ್ಯದ ಬಹುತೇಕ ನಗರಗಳ ಹಾಗೂ ಪಟ್ಟಣಗಳ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಿಂದಾಗಿ ಚರಂಡಿಯ ಕೊಳಚೆ ನೀರು ಜಲ ಮೂಲಗಳನ್ನು ಸೇರಿ ಕಲುಷಿತಗೊಳಿಸುತ್ತಿದೆ. ಜಲಮೂಲಗಳನ್ನು ಕಾಪಾಡುವಲ್ಲಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ. ಚರಂಡಿ ನೀರನ್ನು ಶುದ್ಧೀಕರಣ ಮಾಡಿ ಮರು ಬಳಕೆ ಮಾಡುವ ಕಾರ್ಯ ಕೂಡ ಚುರುಕಾಗಿ ನಡೆದಿಲ್ಲ ಎಂಬುದು ಪರಿಸರ ತಜ್ಞರ ಅಭಿಪ್ರಾಯ ವಾಗಿದೆ. ಇದನ್ನು ಸರಿಪಡಿಸಿ ಜನರಿಗೆ ಶುದ್ಧ ನೀರನ್ನು ಕೊಡುವವರು ಯಾರು?