ರೋಗ ಪೀಡಿತ ಆಯುಷ್ಮಾನ್ ಭಾರತ್

Update: 2024-12-23 04:47 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದೆ ಎಂದು ಕೇಂದ್ರ ಸರಕಾರ ಪದೇ ಪದೇ ನಂಬಿಸುತ್ತಿರುವ ‘ಆಯುಷ್ಮಾನ್ ಭಾರತ್ ಯೋಜನೆ’ ಹೇಗೆ ಸ್ವತಃ ರೋಗ ಪೀಡಿತವಾಗಿದೆ ಎನ್ನುವುದು ಇತ್ತೀಚೆಗೆ ಸರಕಾರ ನೀಡಿರುವ ಅಂಕಿಅಂಶಗಳಿಂದಲೇ ಬಹಿರಂಗವಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಅನಗತ್ಯ ಶಸ್ತ್ರ ಚಿಕಿತ್ಸೆಗಳು ಸೇರಿದಂತೆ ಸುಮಾರು ೩.೪೨ ಲಕ್ಷ ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎನ್ನುವುದನ್ನು ಕಳೆದ ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯವು ಬಹಿರಂಗಪಡಿಸಿದೆ. ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವಾಲಯ, ೨೦೧೮ರಲ್ಲಿ ಆರಂಭಗೊಂಡ ಈ ಯೋಜನೆಯಡಿ ಡಿ. ೧೧ಕ್ಕೆ ಇರುವಂತೆ ಒಟ್ಟು ೩,೪೨,೯೮೮ ವಂಚನೆ ಪ್ರಕರಣಗಳನ್ನು ಗುರುತಿಸಲಾಗಿದೆ. ಕಳೆದ ತಿಂಗಳು ಅಹ್ಮದಾಬಾದ್‌ನ ಖ್ಯಾತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಈ ಯೋಜನೆಯಡಿ ಇಬ್ಬರು ರೋಗಿಗಳು ದಾಖಲಾಗಿದ್ದರು. ಆ್ಯಂಟಿಯೋಪ್ಲಾಸ್ಟಿಯ ಬಳಿಕ ಇವರಿಬ್ಬರು ಮೃತಪಟ್ಟಿದ್ದರು. ತನಿಖೆ ನಡೆಸಿದಾಗ ಇವರಿಬ್ಬರಿಗೆ ಈ ಚಿಕಿತ್ಸೆಯೇ ಅನಗತ್ಯವಾಗಿತ್ತು ಎನ್ನುವುದು ಬಹಿರಂಗವಾಯಿತು. ಆಯುಷ್ಮಾನ್ ಯೋಜನೆಯಡಿಯಲ್ಲಿ ಸರಕಾರದ ದುಡ್ಡನ್ನು ಲೂಟಿ ಮಾಡಲು ಅವರನ್ನು ಬಲವಂತವಾಗಿ ಈ ಚಿಕಿತ್ಸೆಗೆ ಒಳಪಡಿಸಲು ಆಸ್ಪತ್ರೆ ಮುಂದಾಗಿತ್ತು. ಈ ಯೋಜನೆಯ ಲೆಕ್ಕಪರಿಶೋಧನೆಯ ಬಳಿಕ ಇಂತಹ ಅಕ್ರಮಗಳಿಗಾಗಿ ಸುಮಾರು ಐದು ಖಾಸಗಿ ಆಸ್ಪತ್ರೆಗಳನ್ನು ತಾನು ನಿಷೇಧಿಸಿದ್ದೇನೆ ಎಂದು ಗುಜರಾತ್ ಇಲಾಖೆಯು ಕಳೆದ ವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಯೋಜನೆಯನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಸುಮಾರು ೧೨ ಆಸ್ಪತ್ರೆಗಳನ್ನು ೨೦೨೪ರಲ್ಲಿ ಯೋಜನೆಯಿಂದ ಹೊರಹಾಕಲಾಗಿದೆ ಎಂದು ಇಲಾಖೆ ತಿಳಿಸಿದೆ. ಪ್ರಸ್ತುತ ದೇಶದಲ್ಲಿ ೧೩,೨೨೨ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು ೨೯,೯೨೯ ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಾವಣೆಗೊಂಡಿವೆ.

೨೦೧೮ರಲ್ಲಿ ಈ ಯೋಜನೆ ಆರಂಭಗೊಂಡಾಗಲೇ ಇದರ ವಿರುದ್ಧ ವೈದ್ಯರೂ ಸೇರಿದಂತೆ ಹಲವು ತಜ್ಞರು ಆಕ್ಷೇಪಗಳನ್ನು ಎತ್ತಿದ್ದರು. ಯೋಜನೆಗಾಗಿ ಕೇಂದ್ರ ಸರಕಾರ ಶೇ. ೬೦ರಷ್ಟು ಹಣವನ್ನು ಪಾವತಿ ಮಾಡಿದರೆ, ರಾಜ್ಯ ಸರಕಾರ ಶೇ. ೪೦ರಷ್ಟನ್ನು ಪಾವತಿ ಮಾಡುತ್ತಾ ಬರುತ್ತಿದೆ. ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳನ್ನು, ಖಾಸಗಿ ಸಂಸ್ಥೆಗಳನ್ನು ಸಾಕುವುದಕ್ಕಾಗಿಯೇ ಈ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎನ್ನುವುದು ತಜ್ಞರ ಪ್ರಮುಖ ಆಕ್ಷೇಪವಾಗಿದೆ. ಭವಿಷ್ಯದಲ್ಲಿ ಈ ಯೋಜನೆ ಭಾರೀ ಅಕ್ರಮಗಳಿಗೆ ಕಾರಣವಾಗಲಿದ್ದು, ಜನಸಾಮಾನ್ಯರ ಕೋಟಿಗಟ್ಟಲೆ ಹಣವನ್ನು ಖಾಸಗಿ ಆಸ್ಪತ್ರೆಗಳು ಲೂಟಿ ಮಾಡಲಿವೆ ಎನ್ನುವ ಆತಂಕ ಯೋಜನೆ ಜಾರಿಯಾದಾಗಲೇ ವ್ಯಕ್ತವಾಗಿದ್ದವು. ಈ ಯೋಜನೆ ದೇಶದ ಎಲ್ಲ ವರ್ಗದ ಜನಸಮುದಾಯವನ್ನು ಒಳಗೊಂಡಿಲ್ಲ. ಮುಖ್ಯವಾಗಿ ಬಿಪಿಎಲ್ ಕಾರ್ಡುದಾರರು ಯೋಜನೆಯ ಸವಲತ್ತುಗಳನ್ನು ನೇರವಾಗಿ ಪಡೆದುಕೊಳ್ಳಬಹುದು. ಉಳಿದವರು ಶೇ. ೩೦ರಷ್ಟು ನೆರವನ್ನು ತನ್ನದಾಗಿಸಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಈ ಯೋಜನೆಯನ್ನು ೭೦ ವರ್ಷ ದಾಟಿದ ಎಲ್ಲರಿಗೂ ಅನ್ವಯಿಸಲಾಗಿದೆ. ಆಯುಷ್ಮಾನ್ ಯೋಜನೆಯ ಮೂಲಕ ತಳಸ್ತರದ ಜನರಿಗೆ ಲಾಭವಾಗುವುದೇನೋ ನಿಜ. ಆದರೆ, ಇದು ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಸರಕಾರಿ ಆಸ್ಪತ್ರೆಗಳನ್ನು ಸರಕಾರ ಮೂಲೆಗುಂಪು ಮಾಡಿ, ಖಾಸಗಿ ಆಸ್ಪತ್ರೆಗಳನ್ನು ಈ ಮೂಲಕ ಲಾಭದಾಯಕ ಮಾಡಿಸುತ್ತದೆ ಎನ್ನುವುದು ಹಲವರ ಆರೋಪವಾಗಿದೆ. ಕೊರೋನ ಕಾಲದಲ್ಲಿ ಆಯುಷ್ಮಾನ್ ಯೋಜನೆ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಬಡ ಕೊರೋನ ರೋಗಿಗಳು ಈ ಯೋಜನೆಯಡಿಯಲ್ಲಿ ಬರುತ್ತಾರೆಯೇ ಇಲ್ಲವೇ ಎನ್ನುವುದು ಸಾಕಷ್ಟು ಗೊಂದಲಗಳಿಗೆ ಕಾರಣವಾಯಿತು. ಕೊರೋನೋತ್ತರ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಹಿನ್ನಡೆಯನ್ನು ಅನುಭವಿಸಿದ್ದು, ಸರಕಾರದ ಯೋಜನೆಗಳು ನಿರೀಕ್ಷಿತ ಫಲಗಳನ್ನು ನೀಡುತ್ತಿಲ್ಲ ಎನ್ನುವುದು ನಿರ್ಲಕ್ಷಿಸುವಂತಹ ವಿಷಯ ಖಂಡಿತ ಅಲ್ಲ. ಇದೀಗ ಆರೋಗ್ಯ ಕ್ಷೇತ್ರದಲ್ಲಿ ತನ್ನ ಸಾಧನೆಯೆಂದು ಹೇಳಿಕೊಳ್ಳುವ ಆಯುಷ್ಮಾನ್ ಭಾರತ್ ಯೋಜನೆಯಲ್ಲೂ ಕಾಣಿಸಿಕೊಂಡಿರುವ ಭಾರೀ ಅಕ್ರಮಗಳು ಭಾರತದ ಆರೋಗ್ಯ ವ್ಯವಸ್ಥೆ ಎಂತಹ ಭೀಕರ ಅನಾರೋಗ್ಯದ ಹಿಡಿತಕ್ಕೆ ಸಿಲುಕಿಕೊಂಡಿದೆ ಎನ್ನುವ ವಾಸ್ತವವನ್ನು ತೆರೆದಿಟ್ಟಿದೆ.

ಯೋಜನೆಗೆ ಸಂಬಂಧಿಸಿ ೨೦೨೩ರ ಆಗಸ್ಟ್ ತಿಂಗಳಲ್ಲಿ ಮಹಾ ಲೆಕ್ಕಪಾಲಕರ ಮೊತ್ತ ಮೊದಲ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಇದರಲ್ಲೂ ಆಯುಷ್ಮಾನ್ ಭಾರತ್ ಯೋಜನೆಯ ವೈಫಲ್ಯಗಳನ್ನು, ದೌರ್ಬಲ್ಯಗಳನ್ನು ಉಲ್ಲೇಖಿಸಲಾಗಿದೆ. ಅಲ್ಲಿಯವರೆಗೆ ೬೭,೦೦೦ ಕೋಟಿ ರೂಪಾಯಿಯನ್ನು ಯೋಜನೆಗಾಗಿ ವ್ಯಯಿಸಲಾಗಿದೆ ಎಂದು ಹೇಳಲಾಗಿದ್ದರೂ, ಇದು ನಿಜವಾದ ಸಂತ್ರಸ್ತರಿಗೆ ತಲುಪಿದೆಯೇ ಎನ್ನುವುದರ ಬಗ್ಗೆ ಮಾತ್ರ ಅನುಮಾನಗಳಿವೆ. ಸುಮಾರು ೧೦ ಲಕ್ಷ ಫಲಾನುಭವಿಗಳನ್ನು ಒಂದೇ ದೂರವಾಣಿ ಸಂಖ್ಯೆಯಡಿ ನೋಂದಾಯಿಸಿರುವುದು ವರದಿಯಲ್ಲಿ ಬಹಿರಂಗವಾಗಿದೆ. ಆಸ್ಪತ್ರೆಗಳ ಒಟ್ಟು ಸಾಮರ್ಥ್ಯಕ್ಕಿಂತ ೨-೩ ಪಾಲು ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ಕೂಡ ಯೋಜನೆಯ ದುರುಪಯೋಗದ ಬಗ್ಗೆ ಅನುಮಾನಗಳನ್ನು ಹುಟ್ಟಿಸಿವೆ. ಈ ಯೋಜನೆಯನ್ನು ಸುಲಭವಾಗಿ ದುರುಪಯೋಗ ಪಡಿಸಲು ಸಕಲ ಅನುಕೂಲಗಳು ಖಾಸಗಿ ಆಸ್ಪತ್ರೆಗಳಿಗೆ ಇರುವುದರಿಂದ ಯೋಜನೆಯ ನಿಜವಾದ ಫಲಾನುಭವಿಗಳು ಈ ಆಸ್ಪತ್ರೆಗಳೇ ಆಗಿವೆ. ಜನಸಾಮಾನ್ಯರು ಈ ಆಸ್ಪತ್ರೆಗಳ ವಂಚನೆಯ ಬಲಿಪಶುಗಳಾಗಿದ್ದಾರೆ. ಹೆಚ್ಚಿನ ರೋಗಿಗಳಿಗೆ ಈ ಯೋಜನೆಯ ಹೆಸರಿನಲ್ಲಿ ಆಸ್ಪತ್ರೆಗಳು ಲೂಟಿ ಮಾಡುತ್ತಿರುವುದು ಗೊತ್ತೇ ಇರುವುದಿಲ್ಲ.

೨೦೨೩ರವರೆಗೆ ಈ ಯೋಜನೆಯಲ್ಲಿ ೧.೬ ಲಕ್ಷ ಪಾವತಿ ಅರ್ಜಿಗಳಲ್ಲಿ ೨೭೮ ಕೋಟಿ ರೂಪಾಯಿ ಅಕ್ರಮಗಳು ನಡೆದಿರುವ ಬಗ್ಗೆ ಅನುಮಾನಿಸಲಾಗಿದೆ. ಕರ್ನಾಟಕ ರಾಜ್ಯವೊಂದರಲ್ಲೇ ೨೦೨೩ರವರೆಗೆ ೧೨೭ ಆಸ್ಪತ್ರೆಗಳ ವಿರುದ್ಧ ೩೪೯ ದೂರುಗಳು ದಾಖಲಾಗಿವೆ. ಈ ಆಸ್ಪತ್ರೆಗಳು ಸುಮಾರು ಒಂದೂವರೆ ಕೋಟಿ ರೂಪಾಯಿಗಳನ್ನು ರೋಗಿಗಳ ಹೆಸರಿನಲ್ಲಿ ಸರಕಾರದಿಂದ ಲೂಟಿ ಮಾಡಿವೆ ಎಂದು ಆರೋಪಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವೇ ಇರುವುದಿಲ್ಲ. ಆದರೆ ಆಸ್ಪತ್ರೆಗಳು ಶಸ್ತ್ರ ಚಿಕಿತ್ಸೆ ಅನಿವಾರ್ಯ ಎಂದು ಹೇಳಿ ಸುಳ್ಳು ಶಸ್ತ್ರಕ್ರಿಯೆಗಳನ್ನು ಮಾಡುತ್ತವೆ ಅಥವಾ ರೋಗಿಗಳಿಗೆ ಅರಿವೇ ಆಗದಂತೆ ಕೃತಕ ಬಿಲ್‌ಗಳನ್ನು ಸೃಷ್ಟಿಸುತ್ತವೆ. ಜೊತೆಗೆ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ಶುಲ್ಕಗಳನ್ನು ವಿಧಿಸಿದ ಬಿಲ್‌ಗಳನ್ನು ಸಲ್ಲಿಸುತ್ತವೆ. ಚಿಕಿತ್ಸೆ ಪಡೆದು ಬಹಳ ಹಿಂದೆಯೇ ಡಿಸ್ಚಾರ್ಜ್ ಆಗಿರುವ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತವೆ. ಮೂತ್ರಪಿಂಡ ಕಸಿ ಸೌಲಭ್ಯಗಳೇ ಇಲ್ಲದ ಆಸ್ಪತ್ರೆಗಳು ನಕಲಿ ಡಯಾಲಿಸಿಸ್‌ಗೆ ಸಂಬಂಧಿಸಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದಿಂದ ಹಣವನ್ನು ಲೂಟಿ ಹೊಡೆಯುತ್ತವೆ. ಕೆಲವೊಮ್ಮೆ ರೋಗಿಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಆಸ್ಪತ್ರೆಗಳು ಲಾಭ ಪಡೆಯುವುದೂ ಇವೆ. ಸರಕಾರದ ಗಮನಕ್ಕೆ ಬಾರದ ಸಹಸ್ರಾರು ಪ್ರಕರಣಗಳಿವೆ ಎನ್ನುವುದನ್ನು ಇಲ್ಲಿ ಗಮನಿಸಬೇಕಾಗಿದೆ.

ಜಗತ್ತಿನಲ್ಲಿ ಶಿಕ್ಷಣ ಮತ್ತು ಆರೋಗ್ಯದ ಕುರಿತಂತೆ ಕಾಳಜಿ ವಹಿಸುವ ದೇಶಗಳು ಆರೋಗ್ಯ ಸೇವೆಗಳಿಗಾಗಿ ತನ್ನ ಜಿಡಿಪಿಯ ಕನಿಷ್ಠ ಶೇ. ೬-೧೨ರಷ್ಟನ್ನು ವ್ಯಯಿಸುತ್ತಿದೆ. ಭಾರತವು ೨೦೨೫ರ ವೇಳೆಗೆ ಆರೋಗ್ಯ ಕ್ಷೇತ್ರದ ಅನುದಾನವನ್ನು ರಾಷ್ಟ್ರೀಯ ಉತ್ಪನ್ನದ ಶೇ. ೨.೫ಕ್ಕೆ ಏರಿಸುವ ಭರವಸೆಯನ್ನು ಆರೋಗ್ಯ ನೀತಿ ಕರಡಿನಲ್ಲಿ ನೀಡಿತ್ತು. ಸದ್ಯಕ್ಕೆ ಭಾರತವು ಶೇ. ೨.೫ರಷ್ಟು ಕೂಡ ವ್ಯಯಿಸುತ್ತಿಲ್ಲ. ೨೦೨೨ರಲ್ಲಿ ಆರೋಗ್ಯಕ್ಕಾಗಿ ಮೀಸಲಿಟ್ಟ ಅನುದಾನದ ಬಹುಪಾಲನ್ನು ಕೋವಿಡ್ ಲಸಿಕೆಯೇ ನುಂಗಿ ಹಾಕಿತ್ತು. ಆಯುಷ್ಮಾನ್ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸರಕಾರ ಪ್ರತೀ ವರ್ಷ ಸುರಿಯುತ್ತಿರುವ ಕೋಟ್ಯಂತರ ಹಣದಲ್ಲಿ ಈ ದೇಶದ ಸರಕಾರಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಿ ಇಡೀ ಸಾರ್ವಜನಿಕ ಆರೋಗ್ಯ ಕ್ಷೇತ್ರಗಳನ್ನು ಸುಸಜ್ಜಿತಗೊಳಿಸಬಹುದಿತ್ತು ಮತ್ತು ಅದು ಸಾಧ್ಯವಾಗಿದ್ದಿದ್ದರೆ ಕೊರೋನ ಕಾಲದಲ್ಲಿ ಜನತೆ ಇಷ್ಟೊಂದು ನಾಶ ನಷ್ಟವನ್ನು ಅನುಭವಿಸುತ್ತಿರಲಿಲ್ಲ. ಒಂದೆಡೆ ಔಷಧಿಗಳ ಬೆಲೆ ದುಪ್ಪಟ್ಟಾಗುತ್ತಿವೆ. ಆರೋಗ್ಯ ವಿಮೆಯ ಮೇಲೂ ಸರಕಾರ ಶೇ. ೧೮ರಷ್ಟು ಜಿಎಸ್‌ಟಿ ವಿಧಿಸಿ ಕಂತುಗಳನ್ನು ದುಬಾರಿಗೊಳಿಸಿದೆ. ಸರಕಾರಿ ಆಸ್ಪತ್ರೆಗಳನ್ನು ಹಂತಹಂತವಾಗಿ ಖಾಸಗಿ ಸಂಸ್ಥೆಗಳ ಜೊತೆಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೆಡುತ್ತಿರುವ ಆರೋಗ್ಯ ವ್ಯವಸ್ಥೆಗೆ ಭವಿಷ್ಯದಲ್ಲಿ ಭಾರತ ಭಾರೀ ಬೆಲೆ ತೆರಬೇಕಾದ ಸೂಚನೆಗಳು ಕಾಣಿಸುತ್ತಿವೆ. ಅದಕ್ಕೆ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ಆಯುಷ್ಮಾನ್ ಭಾರತದ ಯೋಜನೆಯ ಹೆಸರಿನಲ್ಲಿ ಕಂಡವರ ಪಾಲಾಗುತ್ತಿರುವ ಆರೋಗ್ಯ ಕ್ಷೇತ್ರದ ಹಣವನ್ನು ಅರ್ಹರಿಗೆ ತಲುಪಿಸುವ ಬಗ್ಗೆ ಇನ್ನಾದರೂ ಸರಕಾರ ಕಾರ್ಯಯೋಜನೆಗಳನ್ನು ರೂಪಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News