ಜನಸಂಖ್ಯೆಯಲ್ಲಿ ಅಗ್ರಸ್ಥಾನ; ಭಾರತದ ಪಾಲಿನ ದೌರ್ಬಲ್ಯವಲ್ಲ

Update: 2025-01-02 05:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

2025ಕ್ಕೆ ಕಾಲಿಡುತ್ತಿರುವ ಹೊತ್ತಿಗೆ ಈ ವಿಶ್ವದ ಜನಸಂಖ್ಯೆ 809 ಕೋಟಿಗೆ ತಲುಪಿದೆ ಎನ್ನುವ ವರದಿಯೊಂದು ಹೊರ ಬಿದ್ದಿದೆ. ಯುಎಸ್ ಸೆನ್ಸಸ್ ಬ್ಯೂರೋದ ಅಂದಾಜಿನ ಪ್ರಕಾರ 2024ರಲ್ಲಿ 7.1 ಕೋಟಿಗೂ ಅಧಿಕ ಜನರ ಏರಿಕೆಯಾಗಿದೆ. ಅಷ್ಟೇ ಅಲ್ಲ, ಭಾರತ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. 2024ರಲ್ಲಿ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಅಗ್ರ ಸ್ಥಾನಕ್ಕೆ ತಲುಪಿತ್ತು. ಜನಸಂಖ್ಯೆಯಲ್ಲಿ ಉಳಿಸಿಕೊಂಡಿರುವ ಈ ಅಗ್ರ ಸ್ಥಾನವನ್ನು ಹೇಗೆ ಸ್ವೀಕರಿಸಬೇಕು ಎನ್ನುವುದು ಅರಿಯದೇ ಭಾರತದ ರಾಜಕೀಯ ನಾಯಕರು ಗೊಂದಲದಲ್ಲಿದ್ದಾರೆ. ಯಾಕೆಂದರೆ, ಈ ದೇಶ ಜನಸಂಖ್ಯೆಯ ಕುರಿತಂತೆ ದ್ವಂದ್ವ ನೀತಿ ಅನುಸರಿಸುತ್ತಿದೆ. ಮುಖ್ಯವಾಗಿ, ಚೀನಾದೇಶವು ಜನಸಂಖ್ಯಾ ನೀತಿಯನ್ನು ಜನರ ಮೇಲೆ ಬಲವಂತವಾಗಿ ಹೇರಿ, ಕೈ ಸುಟ್ಟುಕೊಂಡ ಬಳಿಕ ವಿಶ್ವ ವು ಜನಸಂಖ್ಯೆಯ ನಿಯಂತ್ರಣದ ಬಗ್ಗೆ ಗೊಂದಲದಲ್ಲಿದೆ. ‘ಮಕ್ಕಳ ಮೇಲೆ ಪ್ರೀತಿ, ಅಕ್ಕಿಯ ಮೇಲೆ ಆಸೆ’ ಎಂಬಂತಾಗಿದೆ ಅದರ ಸ್ಥಿತಿ. ವಿಶ್ವಕ್ಕೆ ಯುವ ಜನರು ಬೇಕು. ಆದರೆ ವೃದ್ಧರು ಬೇಡ. ಜನಸಂಖ್ಯೆಯ ನೀತಿಯನ್ನು ನಿಯಂತ್ರಿಸಿದಂತೆಯೇ ಅದು ಒಟ್ಟು ಸಮಾಜದ ವಿವಿಧ ಘಟಕಗಳ ಸಮತೋಲನವನ್ನು ಏರುಪೇರು ಮಾಡುತ್ತವೆ. ಚೀನಾದಲ್ಲಿ ಏಕಾಏಕಿ ವೃದ್ಧರ ಸಂಖ್ಯೆ ಹೆಚ್ಚಾಗಿ, ಯುವಕರ ಸಂಖ್ಯೆ ತೀವ್ರ ಇಳಿಕೆಯಾದುದರಿಂದಾಗಿ ಅದು ತನ್ನ ಜನಸಂಖ್ಯೆ ನಿಯಂತ್ರಣಕ್ಕೆ ಜಾರಿಗೊಳಿಸಿದ್ದ ಕಠಿಣ ಕಾಯ್ದೆಯನ್ನು ಹಿಂದೆಗೆದುಕೊಳ್ಳಬೇಕಾಯಿತು. ಪಶ್ಚಿಮದ ಹಲವು ದೇಶಗಳು ಹೆಚ್ಚು ಮಕ್ಕಳಿಗಾಗಿ ಹಂಬಲಿಸುತ್ತಿವೆ. ಹೊಸದಾಗಿ ಹುಟ್ಟುವ ಮಕ್ಕಳು ನಮ್ಮ ತಟ್ಟೆಯಲ್ಲಿರುವ ಅನ್ನವನ್ನು ಕಸಿಯಲು ಬಂದ ಕಳ್ಳರು ಖಂಡಿತ ಅಲ್ಲ. ಅವರಿಗೂ ಹಂಚಿ ಉಣ್ಣುವಷ್ಟು ಶ್ರೀಮಂತವಾಗಿದೆ ಈ ಭೂಮಿ. ಆ ಸಂಪತ್ತನ್ನು ಮಕ್ಕಳಿಗೆ ಸಮಾನವಾಗಿ ಹಂಚಿ, ಅವರನ್ನು ಬೆಳೆಸುವುದು ವಿಶ್ವದ ಹೊಣೆಗಾರಿಕೆಯಾಗಿದೆ. ಆದುದರಿಂದ ವಿಶ್ವದ ಜನಸಂಖ್ಯೆ 809 ಕೋಟಿ ತಲುಪಿರುವುದು ತೀರಾ ಆತಂಕದ ಸಂಗತಿಯಾಗಬೇಕಾಗಿಲ್ಲ. ಈ ಜನಸಂಖ್ಯೆಯನ್ನು ವಿಶ್ವಕ್ಕೆ ಪೂರಕವಾಗಿಸುವುದು ಹೇಗೆ ಎನ್ನುವುದರ ಬಗ್ಗೆ ಜಗತ್ತು ಗಮನ ಹರಿಸಬೇಕಾಗಿದೆ.

ಜನಸಂಖ್ಯೆಯ ಕುರಿತಂತೆ ಭಾರತದ ನಿಲುವಂತೂ ಅಸ್ಪಷ್ಟವಾಗಿದೆ. ಒಂದೆಡೆ ಭಾರತ ಸರಕಾರ ಜನಸಂಖ್ಯೆ ನಿಯಂತ್ರಣಕ್ಕೆ ಬೆಂಬಲವನ್ನು ನೀಡುತ್ತದೆ. ಆದರೆ, ಅನಧಿಕೃತವಾಗಿ ಅದೇ ಸರಕಾರದೊಳಗಿರುವ ರಾಜಕೀಯ ನಾಯಕರು ‘ಹೆಚ್ಚು ಮಕ್ಕಳನ್ನು ಹುಟ್ಟಿಸಿ’ ಎಂದು ಕರೆ ನೀಡುತ್ತಿದ್ದಾರೆ. ಒಂದು ಕಾಲದಲ್ಲಿ ಕುಟುಂಬ ಯೋಜನೆಗಳಿಗಾಗಿ ಸರಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಿತ್ತು. ಇಷ್ಟಾದರೂ ಭಾರತ ಇಂದು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿ ನಿಂತಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಲು ಒಂದು ಸಮುದಾಯವೇ ಕಾರಣ ಎಂದು ಕೆಲವು ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಆರೋಪಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಅವಕಾಶ ಸಿಕ್ಕಿದಾಗಲೆಲ್ಲ ತಮ್ಮ ಸಮುದಾಯಕ್ಕೆ ‘ಜನಸಂಖ್ಯೆ ಹೆಚ್ಚಿಸಿ’

ಎಂದು ಕರೆ ನೀಡುತ್ತಿದ್ದಾರೆ. ಉತ್ತರ ಪ್ರದೇಶ ಸರಕಾರ ಕೆಲವು ವರ್ಷಗಳ ಹಿಂದೆ ಜನಸಂಖ್ಯಾ ನಿಯಂತ್ರಣಕ್ಕೆ ಕಠಿಣ ಕಾನೂನೊಂದನ್ನು ಜಾರಿಗೊಳಿಸಲು ಮುಂದಾಯಿತು. ಆದರೆ ಬಳಿಕ ಸ್ವತಃ ಮುಖ್ಯಮಂತ್ರಿಯೇ ಅದರಿಂದ ಹಿಂದೆ ಸರಿದರು. ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಆ ಕಾನೂನನ್ನು ಅನ್ವಯಿಸುವ ಉದ್ದೇಶವಷ್ಟೇ ಅವರಿಗಿದೆ. ದೇಶದ ಸಮಸ್ಯೆಗಳಿಗೆಲ್ಲ ಹೆಚ್ಚುತ್ತಿರುವ ಜನಸಂಖ್ಯೆಯೇ ಕಾರಣ ಎನ್ನುವ ರಾಜಕಾರಣಿಗಳೂ, ತಮ್ಮ ತಮ್ಮ ಜಾತಿ, ಧಾರ್ಮಿಕ ಸಮಾವೇಶಗಳಲ್ಲಿ ‘ಹೆಚ್ಚು ಮಕ್ಕಳನ್ನು ಹುಟ್ಟಿಸಿ’ ಎಂದು ಕರೆ ನೀಡುತ್ತಿರುವುದು ವಿಪರ್ಯಾಸವಾಗಿದೆ. ಈ ಗೊಂದಲಗಳೇ ಭಾರತದಲ್ಲಿ ಜನಸಂಖ್ಯೆಯನ್ನು ಒಂದು ಸಮಸ್ಯೆಯಾಗಿ ಪರಿವರ್ತಿಸಿದೆ.

ಈ ದೇಶದಲ್ಲಿ ತಮ್ಮ ತಮ್ಮ ಜಾತಿ ಬಲವನ್ನು ಹೆಚ್ಚಿಸಲು, ತಮ್ಮ ಧರ್ಮದ ಹೆಸರಿನ ರಾಜಕೀಯವನ್ನು ಬಲಿಷ್ಠಗೊಳಿಸಲು ಕೆಲವರಿಗೆ ಮಕ್ಕಳು ಬೇಕಾಗಿದೆ. ಅದಕ್ಕಾಗಿ ಬೇರೆಯವರು ಮಕ್ಕಳನ್ನು ಹೆತ್ತು ಕೊಡಬೇಕಾಗಿದೆ. ಮದುವೆಯೇ ಆಗದ, ಸಂಸಾರವಿಲ್ಲದ ಆರೆಸ್ಸೆಸ್ ಮುಖಂಡರು, ಸ್ವಾಮೀಜಿಗಳಿಗೆ ಮಕ್ಕಳನ್ನು ಹುಟ್ಟಿಸುವ ಬಗ್ಗೆ ಜನರ ಮೇಲೆ ಯಾವುದೇ ಅಭಿಪ್ರಾಯಗಳನ್ನು ಹೇರುವ ನೈತಿಕ ಹಕ್ಕಿಲ್ಲ. ಒಂದೆಡೆ ಬ್ರಹ್ಮಚರ್ಯವೇ ಶ್ರೇಷ್ಠ ಎಂದು ಪ್ರತಿಪಾದಿಸುತ್ತಾ, ಸನ್ಯಾಸವನ್ನು ಸ್ವೀಕರಿಸಿದವರು ತಮ್ಮ ಜಾತಿ ಸಮಾವೇಶದಲ್ಲಿ ‘‘ಮಕ್ಕಳನ್ನು ಹುಟ್ಟಿಸಿ’’ ಎಂದು ಕರೆ ನೀಡುತ್ತಿರುವುದು ಭಾರತದ ಬಹುದೊಡ್ಡ ದುರಂತವಾಗಿದೆ. ಮಕ್ಕಳು ಇವರ ಪಾಲಿಗೆ ಮಠಗಳ ಊಳಿಗ ನಡೆಸಲು, ರಾಜಕೀಯ ಪಕ್ಷಗಳ ಬ್ಯಾನರ್ ಅಂಟಿಸಲು, ಕೆಲವು ಉಗ್ರವಾದಿ ಸಂಘಟನೆಗಳ ತ್ರಿಶೂಲ, ಖಡ್ಗಗಳನ್ನು ಹಿಡಿದು ಮೆರವಣಿಗೆ ಹೊರಡಲು, ಕೋಮುಗಲಭೆ ನಡೆಸಲಷ್ಟೇ ಬೇಕಾಗಿದೆ. ಆದರೆ ಈ ದೇಶದ ಜನರಿಗೆ ತಮಗೆ ಎಷ್ಟು ಮಕ್ಕಳು ಬೇಕು ಎನ್ನುವುದರ ಸ್ಪಷ್ಟ ಅರಿವಿದೆ. ಹಿಂದೆಲ್ಲ ಎಲ್ಲ ಜಾತಿ, ಧರ್ಮಗಳಲ್ಲೂ ದೊಡ್ಡ ಕುಟುಂಬಗಳು ಅಸ್ತಿತ್ವದಲ್ಲಿದ್ದವು. ದಂಪತಿಗೆ ಐದಾರು ಮಕ್ಕಳು ಇರುವುದು ಸಾಮಾನ್ಯವಾಗಿತ್ತು. ಇಂದು ಆ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಒಟ್ಟಾರೆ ಜನಸಂಖ್ಯೆ ಹೆಚ್ಚಳವಾಗಿದ್ದರೂ, ಹುಟ್ಟುವ ಮಕ್ಕಳ ಪ್ರಮಾಣದಲ್ಲಿ, ಫಲವಂತಿಕೆಯಲ್ಲಿ ಇಳಿಕೆಯಾಗಿರುವುದನ್ನು ಅಂಕಿಅಂಶಗಳು ಬಹಿರಂಗಪಡಿಸಿವೆ. 2008ರಲ್ಲಿ ಪ್ರಕಟವಾದ ವಿಶ್ವ ಬ್ಯಾಂಕ್ ವರದಿಯೊಂದರ ಪ್ರಕಾರ 1970ರಲ್ಲಿ ಭಾರತದ ಫರ್ಟಿಲಿಟಿ ದರ 5.6ರಷ್ಟಿತ್ತು. 2008ರಲ್ಲಿ ಈ ದರವು 2.8ಕ್ಕೆ ಕುಸಿದಿದೆ. 2022ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವೇ ಪ್ರಕಟಿಸಿದ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ 1998-99ರಲ್ಲಿ 3.6ರಷ್ಟಿದ್ದ ಮುಸ್ಲಿಮರ ಫರ್ಟಿಲಿಟಿ ದರವು 2019-21ಕ್ಕೆ 2.36ಕ್ಕೆ ಕುಸಿದಿತ್ತು. 1993ರ ಫರ್ಟಿಲಿಟಿ ಸಂಬಂಧಿತ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಕುಸಿತವು ಶೇ. 50ಕ್ಕಿಂತ ಅಧಿಕ ಎಂದು ಸಮೀಕ್ಷೆ ಹೇಳುತ್ತದೆ. ದೇಶದ ಜನಸಂಖ್ಯೆಯ ಫರ್ಟಿಲಿಟಿ ಇಳಿಕೆ ಹೀಗೆ ಹೆಚ್ಚುತ್ತಾ ಹೋದರೆ ಭವಿಷ್ಯದಲ್ಲಿ ಭಾರತದಲ್ಲೂ ಯುವಕರು ಮತ್ತು ವೃದ್ಧರ ನಡುವಿನ ಸಂಖ್ಯೆಯಲ್ಲಿ ಅಸಮತೋಲನ ಸೃಷ್ಟಿಯಾಗಲಿವೆ ಎನ್ನುವ ಎಚ್ಚರಿಕೆಯನ್ನು ಸಮೀಕ್ಷೆಗಳು ನೀಡಿವೆ. ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ, ವರ್ತಮಾನದ ಆರ್ಥಿಕ, ಸಾಮಾಜಿಕ ಬೆಳವಣಿಗೆಗಳಿಗೆ ಪೂರಕವಾಗಿ ಕುಟುಂಬಗಳು ಮಕ್ಕಳ ವಿಷಯದಲ್ಲಿ ಜಾಗರೂಕವಾಗಿವೆ. ಎಲ್ಲ ಧರ್ಮೀಯರ ಒಳಗೂ ಶೈಕ್ಷಣಿಕ, ಸಾಮಾಜಿಕ ಜಾಗೃತಿಗಳಾಗಿವೆ. ರಾಜಕೀಯ ಮತ್ತು ಧಾರ್ಮಿಕ ನಾಯಕರ ರಾಜಕೀಯ ದುರುದ್ದೇಶಗಳಿಗಾಗಿ ಮಕ್ಕಳನ್ನು ಹೆತ್ತುಕೊಟ್ಟು ಅವರನ್ನು ಬಲಿಪಶುಗಳನ್ನಾಗಿಸಲು ಯಾವ ತಂದೆ ತಾಯಿಯರೂ ಸದ್ಯದ ದಿನಗಳಲ್ಲಿ ಸಿದ್ಧವಿಲ್ಲ. ಆದುದರಿಂದ, ಭಾರತ ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಆಲೋಚಿಸದೆ ಆ ಜನಸಂಖ್ಯೆಯನ್ನು ದೇಶದ ಸಂಪನ್ಮೂಲವಾಗಿ ಪರಿವರ್ತಿಸುವ ದಾರಿಯ ಬಗ್ಗೆ ಯೋಚಿಸಬೇಕು.

ಭಾರತ ಅಪಾರ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ದೇಶ. ಇಲ್ಲಿನ ಬಡತನಕ್ಕೆ ಕಾರಣ ರಾಜಕಾರಣಿಗಳ ಭ್ರಷ್ಟಾಚಾರಗಳೇ ಹೊರತು, ಹುಟ್ಟುವ ಮಕ್ಕಳಲ್ಲ. ಈ ದೇಶದ ಶೇ. 1ರಷ್ಟು ಇರುವ ಶ್ರೀಮಂತರಲ್ಲಿ ದೇಶದ ಸಂಪತ್ತಿನ ಶೇ. 40 ರಷ್ಟು ದಾಸ್ತಾನು ಗೊಂಡಿದೆ. ಅಂದರೆ, ನೂರು ಜನರು ಉಣ್ಣುವ ಅನ್ನವನ್ನು ಒಬ್ಬನೇ ತನ್ನ ತಟ್ಟೆಯಲ್ಲಿ ಇಟ್ಟುಕೊಂಡು, ಖಾಲಿ ತಟ್ಟೆಯ ಜನರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾನೆ. ದೇಶದ ಸಂಪತ್ತಿನ ಸಮಾನ ಹಂಚಿಕೆಯೇ ಈ ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಅದನ್ನು ದೇಶದ ಪಾಲಿನ ಶಕ್ತಿಯನ್ನಾಗಿಸಬಹುದು. ಈ ಹಿನ್ನೆಲೆಯಲ್ಲಿ, ಸರಕಾರ ಜಿಎಸ್ಟಿ ತೆರಿಗೆಯ ಮೂಲಕ ಮಧ್ಯಮ ವರ್ಗದ ಜನರ ರಕ್ತ ಹೀರುವುದನ್ನು ನಿಲ್ಲಿಸಿ, ಶೇ. 1ರಷ್ಟಿರುವ ಬಿಲಿಯಾಧಿಪತಿಗಳ ಮೇಲೆ ತೆರಿಗೆ ಹಾಕಿ ಆ ಸಂಪತ್ತನ್ನು ಸಾಮಾಜಿಕ ವಲಯಗಳಿಗೆ ಹಂಚಬೇಕು. ಈ ಜನಶಕ್ತಿಯೇ ಮುಂದಿನ ದಿನಗಳಲ್ಲಿ ಭಾರತವನ್ನು ವಿಶ್ವದ ಮುಂಚೂಣಿಗೆ ತಂದು ನಿಲ್ಲಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News