ಮಣಿಪುರ: ಕ್ಷಮೆ ಯಾಚನೆಯಿಂದ ಶಾಂತಿ ಸ್ಥಾಪನೆ ಸಾಧ್ಯವೆ?

Update: 2025-01-03 06:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View


ಹೊಸ ವರ್ಷದ ಹಿನ್ನೆಲೆಯಲ್ಲಿ ಮಣಿಪುರಕ್ಕೆ ಬಿರೇನ್ ಸಿಂಗ್ ‘ಕ್ಷಮೆಯಾಚನೆಯ ಉಡುಗೊರೆ’ಯೊಂದನ್ನು ನೀಡಿದ್ದಾರೆ. ಆ ಮೂಲಕ ಮಣಿಪುರ ಹಿಂಸಾಚಾರದಲ್ಲಿ ಸರಕಾರದ ವೈಫಲ್ಯವನ್ನು ಬಿಜೆಪಿ ನೇತೃತ್ವದ ಸರಕಾರ ಮೊದಲ ಬಾರಿಗೆ ಒಪ್ಪಿಕೊಂಡಂತಾಗಿದೆ. ‘‘ಇಡೀ ವರ್ಷವು ಅತ್ಯಂತ ದುರದೃಷ್ಟಕರವಾಗಿತ್ತು. ಕಳೆದ ವರ್ಷದ ಮೇ 3ರಿಂದ ಹಿಡಿದು ಈದಿನದ ವರೆಗೆ ಹಲವಾರು ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಮನೆಮಾರು ತೊರೆದುಹೋಗಿದ್ದಾರೆ. ಇದಕ್ಕೆ ನನಗೆ ವಿಷಾದವಾಗಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ’’ ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ. ಆದರೆ ಮಣಿಪುರದ ಬುಡಕಟ್ಟು ಜನರಿಗಾದ ಅನ್ಯಾಯವನ್ನು ಒಂದು ಕ್ಷಮೆಯಿಂದ ಸರಿಪಡಿಸುವುದಕ್ಕಾಗುವುದಿಲ್ಲ. ಸಂತ್ರಸ್ತರಿಗೆ ನ್ಯಾಯ ಸಿಗದೇ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಕ್ಷಮೆಗೆ ಯಾವ ಅರ್ಥವೂ ಇಲ್ಲ. ತನ್ನ ಕ್ಷಮೆಯಾಚನೆಯ ಸಂದರ್ಭದಲ್ಲಿ ಅನ್ಯಾಯಗಳ ಹಿಂದಿರುವ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸುವ, ಸಂತ್ರಸ್ತರಿಗೆ ಪರಿಹಾರಗಳನ್ನು ನೀಡುವ, ಬುಡಕಟ್ಟು ಸಮುದಾಯಗಳ ಅಭದ್ರತೆಯನ್ನು ನೀಗಿಸುವ ಯಾವ ಭರವಸೆಯನ್ನೂ ಅವರು ನೀಡಿಲ್ಲ. ಅಂದರೆ ಹೊಸ ವರ್ಷದ ಬಗ್ಗೆ ಮಣಿಪುರ ವಿಶೇಷ ನಿರೀಕ್ಷೆಯನ್ನೇನೂ ಇಟ್ಟುಕೊಳ್ಳುವಂತಿಲ್ಲ.

ಮಣಿಪುರದಲ್ಲಿ ಸಂಘರ್ಷ ಭುಗಿಲೇಳುವುದಕ್ಕೆ ಮುಖ್ಯ ಕಾರಣವೇ ಸರಕಾರದ ಒಡೆದು ಆಳುವ ನೀತಿ. ಸ್ಥಳೀಯ ಬಲಾಢ್ಯ ಸಮುದಾಯವಾಗಿರುವ ಮೈತೈ ಜನರನ್ನು ಓಲೈಸುವ ನಿಟ್ಟಿನಲ್ಲಿ ಸರಕಾರ ತೆಗೆದುಕೊಂಡ ನಿರ್ಧಾರವೇ ಎಲ್ಲ ಅನಾಹುತಗಳಿಗೆ ಕಾರಣವಾಯಿತು. ಮೈತೈ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡುವ ಸರಕಾರದ ನಿರ್ಧಾರ, ಸ್ಥಳೀಯ ಕುಕಿ ಸಮುದಾಯದ ಜನರಲ್ಲಿ ಅಭದ್ರತೆಯನ್ನು, ಆತಂಕವನ್ನು ಮೂಡಿಸಿತು. ಅದರ ವಿರುದ್ಧ ಒಂದಾಗುತ್ತಿದ್ದಂತೆಯೇ ಮೈತೈ ಸಮುದಾಯವನ್ನು ಕುಕಿಗಳ ವಿರುದ್ಧ ಸರಕಾರವೇ ಪರೋಕ್ಷವಾಗಿ ಎತ್ತಿಕಟ್ಟಿತು. ಮಣಿಪುರ ಹಿಂಸಾಚಾರದ ಹಿಂದೆ ಸಂಘಪರಿವಾರದ ಕೈವಾಡಗಳಿವೆ ಎನ್ನುವ ಆರೋಪ ಹಿಂದಿನಿಂದಲೂ ಇವೆ. ಸರಕಾರದ ಕೈ ಮೀರಿ ಒಂದೆರಡು ವಾರಗಳು ಹಿಂಸಾಚಾರ ನಡೆಯುವುದಿದೆ. ಆದರೆ ಪರಿಸ್ಥಿತಿ ಕೈ ಮೀರಿದಾಗ ಕೇಂದ್ರದ ಸಹಕಾರದೊಂದಿಗೆ ದುಷ್ಕರ್ಮಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಸರಕಾರದ ಕೆಲಸವಾಗಿದೆ. ಸುಮಾರು ಒಂದು ವರ್ಷ ಕಳೆದಿದ್ದರೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದರೆ ಅದರ ಅರ್ಥ, ಸರಕಾರ ಸಂಪೂರ್ಣ ವಿಫಲವಾಗಿದೆ ಎಂದಾಗಿದೆ. ಆದುದರಿಂದ ಮಣಿಪುರದ ಮುಖ್ಯಮಂತ್ರಿ ರಾಜೀನಾಮೆ ನೀಡುವುದು ಇಂದಿನ ಅಗತ್ಯವಾಗಿದೆ. ಅಥವಾ ರಾಷ್ಟ್ರಪತಿಯವರು ಮಧ್ಯ ಪ್ರವೇಶಿಸಿ ಸರಕಾರವನ್ನು ವಜಾಗೊಳಿಸಬೇಕು. ಇದು ಎರಡು ಕೂಡ ಈವರೆಗೆ ನಡೆದಿಲ್ಲ.

ಗಲಭೆಯ ಆರಂಭದಲ್ಲೇ ಸೇನೆಯನ್ನು ತಂದು ದುಷ್ಕರ್ಮಿಗಳನ್ನು ಮಟ್ಟ ಹಾಕುವ ಅವಕಾಶ ಸರಕಾರಕ್ಕಿತ್ತು. ಗಲಭೆ ಭುಗಿಲೇಳುತ್ತಿದ್ದ ಹಾಗೆಯೇ ರಾಜ್ಯದಲ್ಲಿ ಇಂಟರ್‌ನೆಟ್‌ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ಗಲಭೆಗಳು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಸರಕಾರ ಸಮಜಾಯಿಶಿ ನೀಡಿತು. ಆದರೆ, ನಡೆದ ಗಲಭೆಗಳು, ಹಿಂಸಾಚಾರಗಳನ್ನು ಹೊರಗಿನ ಜಗತ್ತಿನಿಂದ ಸಂಪೂರ್ಣ ಮುಚ್ಚಿಡಲು ಸರಕಾರ ಇಂಟರ್‌ನೆಟ್ ಸ್ಥಗಿತವನ್ನು ಬಳಸಿಕೊಂಡಿತು. ಮಹಿಳೆಯರ ಬೆತ್ತಲೆ ಮೆರವಣಿಗೆ, ಅವರ ಮೇಲೆ ನಡೆದ ಸಾಲು ಸಾಲು ಸಾಮೂಹಿಕ ಅತ್ಯಾಚಾರಗಳೆಲ್ಲ ಘಟನೆಗಳು ನಡೆದ ಸುಮಾರು ಎರಡು ತಿಂಗಳ ಬಳಿಕ ಹೊರ ಜಗತ್ತಿಗೆ ಗೊತ್ತಾಯಿತು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬರ್ಬರತೆಯ ಬಗ್ಗೆ ವಿಶ್ವ ಎಚ್ಚೆತ್ತುಕೊಂಡು ಖಂಡಿಸಲು ಶುರುಹಚ್ಚಿದ ಬಳಿಕ, ಸೇನೆ ಚುರುಕಾಯಿತು. ವಿಶ್ವದಲ್ಲಿ ನಡೆಯುವ ಹಿಂಸಾಚಾರದ ಬಗ್ಗೆ ಪದೇ ಪದೇ ಹೇಳಿಕೆಗಳನ್ನು ನೀಡುವ ಪ್ರಧಾನಿ ಮೋದಿಯವರು ಈವರೆಗೆ ಮಣಿಪುರದ ಕುರಿತಂತೆ ಸ್ಪಷ್ಟ ಹೇಳಿಕೆಯನ್ನು ನೀಡಿಲ್ಲ. ಹಿಂಸಾಚಾರ ನಡೆಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸಿಲ್ಲ. ರಶ್ಯ, ಉಕ್ರೇನ್‌ಗೆ ಭೇಟಿ ನೀಡಲು ಸಾಧ್ಯವಾದರೆ, ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿಯವರಿಗೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಯನ್ನು ವಿರೋಧ ಪಕ್ಷಗಳು ಕೇಳುತ್ತಲೇ ಬಂದಿವೆ. ಆದರೆ ಸರಕಾರ ಮೌನವಾಗಿದೆ. ಒಂದು ರೀತಿಯಲ್ಲಿ ಮಣಿಪುರ ಹಿಂಸಾಚಾರವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಪ್ರಾಯೋಜಿಸಿದೆ. ಆದುದರಿಂದ ಮುಖ್ಯಮಂತ್ರಿಯ ಜೊತೆಗೆ ಪ್ರಧಾನ ಮಂತ್ರಿಯೂ ಕ್ಷಮೆಯಾಚಿಸುವುದು ಅತ್ಯಗತ್ಯವಾಗಿದೆ.

ಕ್ಷಮೆಯಾಚನೆಯೊಂದಿಗೆ ಮುಖ್ಯಮಂತ್ರಿ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಅಂತಹ ಒಂದು ಬೀಸು ಹೇಳಿಕೆಯಿಂದ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವುದು ಸಾಧ್ಯವೂ ಇಲ್ಲ. ಮೊತ್ತ ಮೊದಲಾಗಿ, ಸ್ಥಳೀಯ ಬುಡಕಟ್ಟು ಸಮುದಾಯದೊಳಗಿರುವ ಅಭದ್ರತೆ, ಆತಂಕಗಳನ್ನು ಕಿತ್ತೊಗೆಯುವ ಕೆಲಸವನ್ನು ಸರಕಾರ ಮಾಡಬೇಕು. ಮೈತೈ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡುವ ನಿರ್ಧಾರದಿಂದ ಸಂಪೂರ್ಣ ಹಿಂದಕ್ಕೆ ಸರಿಯಬೇಕು ಮಾತ್ರವಲ್ಲ, ಕುಕಿ ಬುಡಕಟ್ಟು ಸಮುದಾಯಕ್ಕೆ ಗರಿಷ್ಠ ಭದ್ರತೆಯನ್ನು ನೀಡುವಲ್ಲಿ ಕ್ರಮ ತೆಗೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಮಣಿಪುರದಲ್ಲಿ ಮೈತೈ ಮತ್ತು ಕುಕಿ ಬುಡಕಟ್ಟುಗಳ ನಡುವಿನ ಸಂಘರ್ಷಕ್ಕೆ ಹಿಂದೂ-ಕ್ರೈಸ್ತರ ನಡುವಿನ ಹಿಂಸಾಚಾರವೆಂದು ವ್ಯಾಖ್ಯಾನ ನೀಡುವುದನ್ನು ನಿಲ್ಲಿಸಬೇಕು. ಈ ನಿಟ್ಟಿನಲ್ಲಿ, ಬುಡಕಟ್ಟು ಸಮುದಾಯಗಳ ನಡುವೆ ಹಿಂದುತ್ವವಾದಿ ಸಂಘಟನೆಗಳ ಹಸ್ತಕ್ಷೇವನ್ನು ತಡೆಯಬೇಕು. ಈಗಾಗಲೇ ಗಲಭೆಗಳಿಂದ ಸಾವಿರಾರು ಜನರು ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿದ್ದಾರೆ. ಅವರಿಗೆ ಭದ್ರತೆಯನ್ನು ನೀಡುವುದು ಮಾತ್ರವಲ್ಲ, ಅವರ ಮೂಲಭೂತ ಅಗತ್ಯಗಳಿಗೆ ಬೇಕಾದ ಕ್ರಮವನ್ನು ತೆಗೆದುಕೊಳ್ಳಬೇಕು. ಅವರು ಮತ್ತೆ ತಮ್ಮ ತಮ್ಮ ನಿವಾಸಗಳಿಗೆ ತೆರಳುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕು. ಇದೇ ಸಂದರ್ಭದಲ್ಲಿ ಸಂಘರ್ಷದಲ್ಲಿ ಗುರುತಿಸಿಕೊಂಡಿರುವ ಉಗ್ರವಾದಿ ಸಂಘಟನೆಗಳ ಮುಖಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ದುಷ್ಕರ್ಮಿಗಳನ್ನು ಬಂಧಿಸುವ ನೆಪದಲ್ಲಿ ದುಷ್ಕರ್ಮಿಗಳ ಜೊತೆ ಸೇರಿ ನಾಗರಿಕರನ್ನು ಹಿಂಸಿಸುವ, ಅವರಿಗೆ ಮಾನಸಿಕ, ದೈಹಿಕ ದೌರ್ಜನ್ಯಗಳನ್ನು ನೀಡುವ ಪೊಲೀಸರ ಕೃತ್ಯಗಳೂ ನಿಲ್ಲಬೇಕು. ಇಂದಿಗೂ ಸ್ಥಳೀಯರಿಗೆ ದುಷ್ಕರ್ಮಿಗಳ ಮೇಲೆ ಇರುವಷ್ಟೇ ಸಿಟ್ಟು, ಪರೋಕ್ಷವಾಗಿ ಗಲಭೆಗಳಿಗೆ ಸಹಕರಿಸಿದ ಪೊಲೀಸರು ಮತ್ತು ಸೇನಾ ಸಿಬ್ಬಂದಿಯ ಮೇಲೂ ಇದೆ. ಸರಕಾರದ ಮೇಲಿರುವ ಅಪನಂಬಿಕೆ ಹೋಗದೇ ಮಣಿಪುರದಲ್ಲಿ ಶಾಂತಿ ನೆಲೆಸುವುದು ಅಸಾಧ್ಯವಾಗಿದೆ.

ಹಾಗೆಯೇ ನಾಶಗೊಂಡ ಮನೆಗಳು, ಚರ್ಚುಗಳನ್ನು ಪುನರ್ ನಿರ್ಮಿಸಿಕೊಡುವ ನಿಟ್ಟಿನಲ್ಲೂ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ, ಮಣಿಪುರದಲ್ಲಿ ಸ್ವಾಯತ್ತ ಆಡಳಿತದ ಬೇಡಿಕೆ ಭುಗಿಲೆದ್ದಿದೆ. ಅಂದರೆ, ಸರಕಾರದ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಳ್ಳುತ್ತಿದ್ದಾರೆ. ಈ ನಂಬಿಕೆಯನ್ನು ಪುನರ್ ಸ್ಥಾಪಿಸುವುದೇ ಶಾಂತಿ ಪ್ರಕ್ರಿಯೆಗೆ ಸರಕಾರ ಇಡುವ ಮೊದಲ ಗಟ್ಟಿ ಹೆಜ್ಜೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News