ಭೂಸ್ವಾಧೀನ ಎಂಬ ಹಗರಣ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಂಜಾಬ್‌ನ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ನಾವು ದಿನ ನಿತ್ಯ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಅಲ್ಲಿ ನಡೆಯುತ್ತಿರುವ ಕೇಂದ್ರ ಸರಕಾರದ ದೌರ್ಜನ್ಯಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಆದರೆ ಅಂತಹದೇ ಒಂದು ಹೋರಾಟ ಕರ್ನಾಟಕದಲ್ಲಿ ಕಳೆದ ಒಂದು ಸಾವಿರ ದಿನಗಳಿಂದ ನಡೆಯುತ್ತಿದೆ. ದಿಲ್ಲಿಯ ರೈತ ಹೋರಾಟಗಳಿಗೆ ಸ್ಪಂದಿಸುತ್ತಿರುವ ರಾಜ್ಯದ ಜನತೆ, ನಮ್ಮದೇ ರೈತರ ಹೋರಾಟಕ್ಕೆ ಮೌನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿರುವುದು ಖೇದನೀಯ. ಪಂಜಾಬ್‌ನ ಪ್ರತಿಭಟನಾ ನಿರತ ರೈತರ ಬಗ್ಗೆ ಅನುಕಂಪವನ್ನು ಸೂಚಿಸುತ್ತಿರುವ ರಾಜ್ಯದ ಕಾಂಗ್ರೆಸ್ ನಾಯಕರು, ರಾಜ್ಯದ ರೈತರ ಹೋರಾಟವನ್ನು ನಿರ್ಲಕ್ಷಿಸುತ್ತಾ ಬಂದಿರುವುದು ವಿಪರ್ಯಾಸವಾಗಿದೆ.
ಕೆಐಎಡಿಬಿ ಭೂಸ್ವಾಧೀನವನ್ನು ವಿರೋಧಿಸಿ, ತಮ್ಮ ಫಲವತ್ತಾದ ಕೃಷಿ ಭೂಮಿ ಉಳಿವಿಗಾಗಿ, ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು 4 ಎಪ್ರಿಲ್ 2022ರಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ 1,000 ದಿನಗಳಾಗುತ್ತಿವೆ. ಧರಣಿ ಪ್ರಾರಂಭವಾದಾಗ ರಾಜ್ಯವನ್ನು ಆಳುತ್ತಿದ್ದುದು ಬಿಜೆಪಿ ನೇತೃತ್ವದ ಸರಕಾರ. ಬಿಜೆಪಿ ಅಂದು ರೈತರ ಈ ಪ್ರತಿಭಟನೆಯನ್ನು ಸಂಪೂರ್ಣ ನಿರ್ಲಕ್ಷಿಸಿತ್ತು ಮಾತ್ರವಲ್ಲ, ಹೋರಾಟ ನಡೆಸುತ್ತಿರುವವರು ರೈತರೇ ಅಲ್ಲ ಎಂದು ಹೇಳಿಕೆ ನೀಡಿತ್ತು. ಆಗ ಕಾಂಗ್ರೆಸ್‌ನ ಹಲವು ನಾಯಕರು ರೈತರ ಪರವಾಗಿ ಹೇಳಿಕೆಗಳನ್ನು ನೀಡಿದ್ದರು. ಇದೀಗ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದಿದೆ. ಆದರೆ, ರೈತರ ಬೇಡಿಕೆಗಳು ಮಾತ್ರ ಈವರೆಗೆ ಈಡೇರಿಲ್ಲ. ಇದೀಗ ಪ್ರತಿಭಟನಾ ನಿರತ ರೈತರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಮಾತುಕತೆ ನಡೆಸಿದ್ದಾರೆ. ಅವರ ಬೇಡಿಕೆಗಳಿಗೆ ಸ್ಪಂದಿಸುವ ಭಾಗಶಃ ಭರವಸೆಯನ್ನೂ ನೀಡಿದ್ದಾರೆ.
ದೇವನಹಳ್ಳಿ ಭೂಸ್ವಾಧೀನಕ್ಕೆ ಸರಕಾರ ಬೆಂಗಳೂರಿನ ಅಭಿವೃದ್ಧಿಯನ್ನು ಮುಂದಿಟ್ಟಿದೆ. ಇದೇ ಸಂದರ್ಭದಲ್ಲಿ ಸರಕಾರದ ಕ್ರಮವನ್ನು ವಿರೋಧಿಸುವುದಕ್ಕೆ ರೈತರೂ ಸಕಾರಣಗಳನ್ನು ನೀಡಿದ್ದಾರೆ. ಈ ಭೂಸ್ವಾಧೀನದಿಂದ ರೈತರ ಮೇಲೆ ಮಾತ್ರವಲ್ಲ, ಒಟ್ಟು ಕೃಷಿ ಮತ್ತು ಅದಕ್ಕೆ ಪೂರಕವಾದ ಆರ್ಥಿಕ ವ್ಯವಹಾರಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ಅವರು ಮುಂದಿಟ್ಟಿದ್ದಾರೆ. ಅಧಿಸೂಚನೆಯ ಪ್ರಕಾರ ದೇವನಹಳ್ಳಿ ತಾಲೂಕಿನ, ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮಟ್ಟಬಾರ್ಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ಶ್ರೋತ್ರಿಯ ತೆಲ್ಲೋಹಳ್ಳಿ ಮತ್ತು ಹ್ಯಾಡಾಳ ಈ 13 ಗ್ರಾಮಗಳ, 1,777 ಎಕರೆ ಕೃಷಿಭೂಮಿ ಸ್ವಾಧೀನಕ್ಕೆ ನೋಟಿಸ್ ನೀಡಲಾಗಿದೆ. ಈ ಭೂಮಿಯಲ್ಲಿ ಸುಮಾರು 900ರಿಂದ 1,000 ಟನ್ ರಾಗಿ ಮತ್ತಿತರ ಆಹಾರ ಧಾನ್ಯಗಳು, 2,000 ಟನ್ ದ್ರಾಕ್ಷಿ, 100ರಿಂದ 150 ಟನ್ ಮಾವು ಮುಂತಾದ ಹಣ್ಣಿನ ಬೆಳೆಗಳು, ಹೂವು, ತರಕಾರಿಗಳನ್ನು ರೈತರು ಬೆಳೆಯುತ್ತಿದ್ದಾರೆ. ಇವು ಇಲ್ಲಿನ ಜನಕ್ಕೆ ಆಹಾರ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಿವೆ. ಇದೇ ಹಳ್ಳಿಗಳಲ್ಲಿ ಪ್ರತಿದಿನ 6,000ದಿಂದ 8,000 ಲೀಟರ್ ಹಾಲಿನ ಉತ್ಪಾದನೆಯಾಗುತ್ತಿದೆ ಮತ್ತು ಉತ್ತಮ ಗುಣಮಟ್ಟದ ರೇಷ್ಮೆಗೂಡು ಮತ್ತು ಬೆಂಗಳೂರು ಬ್ಲೂ ದ್ರಾಕ್ಷಿ ಉತ್ಪಾದನೆ ಕೂಡ ಇಲ್ಲಿನ ವಿಶೇಷವಾಗಿದೆ. ಕೃಷಿ ಕೌಶಲ್ಯಗಳು ಸಮಾರು 6,000 ಜನರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿವೆ. ಇದರಲ್ಲಿ ಬಡ ರೈತರು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಹಲವು ಕೃಷಿ ಪೂರಕ ಕೌಶಲ್ಯ ಹೊಂದಿರುವ ಅನಕ್ಷರಸ್ಥರು, ಅತಿ ಕಡಿಮೆ ಓದಿಕೊಂಡವರೇ ಹೆಚ್ಚಾಗಿದ್ದಾರೆ. ಈ ಸ್ವಾಧೀನ ಪ್ರಕ್ರಿಯೆಯಲ್ಲಿ 387 ಕುಟುಂಬಗಳು ಸಂಪೂರ್ಣ ಭೂ ರಹಿತರಾಗಲಿದ್ದು, ಈ ಕು ಟುಂಬಗಳಿಗೆ ಸೇರಿದ 2,989 ಜನರು ಭೂ ರಹಿತರಾಗಲಿದ್ದಾರೆ. ಇಲ್ಲಿನ ಸ್ಥಳೀಯ ರೈತರ ಭರವಸೆ ಮತ್ತು ಸಾಮರ್ಥ್ಯ ಕೃಷಿಯೇ ಆಗಿದ್ದು,ಇಂದಿಗೂ ಕೂಡ ಇದೇ ಕೃಷಿಯನ್ನು ನಂಬಿಕೊಂಡು ಕನಿಷ್ಠ 6,000 ಜನ ಬದುಕುತ್ತಿದ್ದು, ಕೃಷಿ ಮಾತ್ರವೇ ಎಲ್ಲರಿಗೆ ಉದ್ಯೋಗ ಒದಗಿಸುವ ಏಕಮಾತ್ರ ಭರವಸೆಯಾಗಿದೆ.
ಕೈಗಾರಿಕಾ ಉದ್ದೇಶಕ್ಕೆ ರೈತರ ಭೂಸ್ವಾಧೀನ ಎನ್ನುವ ನೀತಿ ಬಹುತೇಕ ಭ್ರಷ್ಟಾಚಾರ ಮತ್ತು ಕಾರ್ಪೊರೇಟ್ ಓಲೈಕೆಗಾಗಿ ಕುಖ್ಯಾತಿಯನ್ನು ಪಡೆದಿದೆ. ಕೈಗಾರಿಕೀಕರಣ ಅಂದರೆ ದೊಡ್ಡ ಕಂಪೆನಿಗಳಿಗೆ ಹೂಡಿಕೆಗೆ ಅವಕಾಶ ನೀಡುವುದು, ಅವರಿಗೆ ಬೇಕಾದ ಜಮೀನು, ಮತ್ತಿತರ ಸೌಲಭ್ಯಗಳನ್ನು ನಾಮಕಾವಾಸ್ತೆ ಬೆಲೆಗೆ, ಎಷ್ಟೋ ಬಾರಿ ಉಚಿತ.. ನೀಡುವ ನೀತಿ ಅಷ್ಟೆ. ಚಾರಿತ್ರಿಕವಾಗಿ ತಮಿಳುನಾಡಿನಲ್ಲಿ ಸಣ್ಣ ಪುಟ್ಟ ನಗರಗಳಲ್ಲಿ ಪುಟ್ಟ ಕೈಗಾರಿಕಾ ವಲಯಗಳನ್ನು ಸೃಷ್ಟಿಸಿ ಅಲ್ಲಿ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಟ್ಟ ಮಾದರಿಯನ್ನೇ ದೇವರಾಜ ಅರಸು ಕಾಲದಲ್ಲಿ ಅನುಸರಿಸಿ ಕೈಗಾರಿಕಾ ವಸಾಹತುಗಳನ್ನು ಸೃಷ್ಟಿಸಲಾಯಿತು. ಇವೆಲ್ಲಾ ಕೆಲವೇ ಸಾವಿರ ಚದರಡಿಗಳ ನಿರ್ಮಿತಿಗಳು. ಇವು ಸ್ಥಳೀಯ ಉದ್ಯಮಶೀಲತೆಯನ್ನು ಬೆಳೆಸಿದ ಉದಾಹರಣೆ ರಾಜ್ಯದುದ್ದಕ್ಕೂ ಸಿಗುತ್ತದೆ. ಆದರೆ ಜಾಗತೀಕರಣದ ಬಳಿಕ ದೊಡ್ಡ ಕಾರ್ಪೋರೇಟ್ ಉದ್ಯಮಪತಿಗಳು ನೂರಾರು ಕೋಟಿ ಹೂಡಿಕೆ ಮಾಡುವಂತೆ ಸ್ವಾಗತಿಸಿ ಅವರಿಗೆ ನೂರಾರು ಎಕರೆ ಜಮೀನು ನೀಡುವ ಹೊಸ ನೀತಿ ಜಾರಿಗೆ ಬಂತು. ಒಪ್ಪಂದ ಪತ್ರದಲ್ಲಿ ಸ್ಥಳೀಯರಿಗೆ ಉದ್ಯೋಗ, ನೂರಾರು ಉದ್ಯೋಗ ಸೃಷ್ಟಿ ಎಂದೆಲ್ಲಾ ದಾಖಲೆಯಲ್ಲಿದ್ದರೂ ಅಧಿಕೃತವಾಗಿ ಜಾರಿಗೆ ಬರುವಾಗ ಸ್ಥಳೀಯರು ನಿರಾಶ್ರಿತರಾಗಿ ಬಿಡುತ್ತಿದ್ದರು. ಹೆಚ್ಚೆಂದರೆ ಡ್ರೈವರು, ಕಸ ಗುಡಿಸೋದು, ಜವಾನ ಇತ್ಯಾದಿ ಉದ್ಯೋಗಗಳಷ್ಟೇ ಸ್ಥಳೀಯರಿಗೆ ದಕ್ಕಿದ್ದು. ಇನ್ನೊಂದೆಡೆ ಹೀಗೆ ಜಮೀನು ಪಡೆದು ವರ್ಷಗಟ್ಟಲೆ ಆದರೂ ಏನನ್ನೂ ಆರಂಭಿಸದೆ ಜಮೀನು ಅಡವಿಟ್ಟು ಕಾಸು ತಿರುಗಿಸಿದ ಉದಾಹರಣೆಗಳು ಇವೆ.
ಇದರ ಇನ್ನೊಂದು ಮುಖವಾಗಿ ಇದಕ್ಕೆಂದೇ ಇರುವ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮವು ಭೂ ಬ್ಯಾಂಕ್ ಸೃಷ್ಟಿ ಮಾಡುತ್ತಾ ಹೋಗಿದೆ. ಭವಿಷ್ಯದಲ್ಲಿ ಉದ್ಯಮಿಗಳಿಗೆ ಬೇಕಾದ ಭೂಮಿಯನ್ನು ಈಗಾಗಲೇ ವಶಪಡಿಸಿ ದಾಸ್ತಾನು ಮಾಡಿ ಇಡುವ ಯೋಜನೆ! ಈ ಪ್ರಕಾರ ವಶಪಡಿಸಿಕೊಂಡ ಜಮೀನಿನ ಅರ್ಧಕ್ಕರ್ಧ ಪ್ರದೇಶಕ್ಕೆ ಇಂದಿಗೂ ಬೇಡಿಕೆ ಇಲ್ಲ. ಜಮೀನು ಪಡಕೊಂಡ ಉದ್ಯಮಪತಿಗಳು ಉದ್ಯಮ ಆರಂಭಿಸಿಲ್ಲ ಎಂದು ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನೋಟಿಸ್ ನೀಡಲಾಗಿತ್ತು. ಅಷ್ಟೇಕೆ ಇದುವರೆಗೆ ಈ ಬೋರ್ಡು ತಾನು ವಶಪಡಿಸಿಕೊಂಡ ಜಮೀನಿನಲ್ಲಿ ಸಾವಿರಾರು ಎಕರೆಗಳನ್ನು ಭೂಸ್ವಾಧೀನದಿಂದ ಕೈಬಿಟ್ಟಿದೆ.( ಅಂದಾಜು 25 ಸಾವಿರ ಎಕರೆ!) ಜಿಲ್ಲಾ ಕೇಂದ್ರಗಳಲ್ಲಿ ಈ ರೀತಿಯ ಭೂಸ್ವಾಧೀನ ಮೂಲಕ ಕೈಗಾರಿಕಾಭಿವೃದ್ಧಿ ಎಂದು ಘೋಷಿತವಾದರೂ ಬಹುತೇಕ ಜಿಲ್ಲೆಗಳಲ್ಲಿ ಯಾವುದೇ ಗಮನಾರ್ಹ ಹೂಡಿಕೆಯಾಗಿಯೇ ಇಲ್ಲ.
ಆದರೆ ಬೆಂಗಳೂರನ್ನು ಮಾತ್ರ ಹೂಡಿಕೆಯ ಕೇಂದ್ರವಾಗಿ ಬೆಳೆಸುವತ್ತ ಸರಕಾರ ಅಪರಿಮಿತ ಆಸಕ್ತಿ ವಹಿಸುತ್ತಲೇ ಬಂದಿದೆ. ಈ ಕಾರಣದಿಂದಲೇ ಬೆಂಗಳೂರು ವಿಕಾರವಾಗಿ ಬೆಳೆಯುತ್ತಾ ನಾಗರಿಕ ಸೌಲಭ್ಯಗಳನ್ನು ಒದಗಿಸಲಾರದೇ ಏದುಸಿರು ಬಿಡುತ್ತಿದೆ. ಸದ್ಯ ಇರುವ ಕಾಂಗ್ರೆಸ್ ಸರಕಾರವೂ ಈ ಹಿತಾಸಕ್ತಿಯನ್ನು ಇನ್ನಷ್ಟು ಪೋಷಿಸುತ್ತಿರುವ ಲಕ್ಷಣ ಕಾಣಿಸುತ್ತಿದೆ. ಹೀಗಿರುವಾಗಲೇ ದೇವನಹಳ್ಳಿಯ ಚನ್ನರಾಯಪಟ್ಟಣ ಪ್ರದೇಶದ ಏಳು ಹಳ್ಳಿಗಳ ಅಂದಾಜು 1,800 ಎಕರೆ ಜಮೀನನ್ನು ವಶಪಡಿಸಿಕೊಳ್ಳುವ ನೋಟಿಸ್ ನೀಡಿದ್ದು ಜಮೀನು ಕಳೆದುಕೊಳ್ಳುವ ಸಂತ್ರಸ್ತ ರೈತರು ಇದರ ವಿರುದ್ಧ ಹೋರಾಡುತ್ತಿದ್ದಾರೆ. ಈ ಹೋರಾಟ ಈಗ ಸಾವಿರ ದಿನ ದಾಟಿದೆ. ಇಷ್ಟು ದಿನವೂ ನಿರ್ಲಕ್ಷ್ಯ, ಉಡಾಫೆ, ರಾಜಕೀಯ ಕುತಂತ್ರಗಳನ್ನೆಲ್ಲಾ ಮೆಟ್ಟಿ ನಿಂತು ಈ ಸಂತ್ರಸ್ತ ರೈತರು ಹೋರಾಟ ಮಾಡುತ್ತ ಬಂದಿದ್ದಾರೆ. ಈ ಪ್ರತಿರೋಧ ದಿಲ್ಲಿಯ ರೈತ ಹೋರಾಟಕ್ಕಿಂತ ಕಡಿಮೆ ಏನಲ್ಲ. ಆದರೆ ಬಹುತೇಕ ನಮ್ಮ ಮಾಧ್ಯಮಗಳು, ಅಭಿವೃದ್ಧಿ ವಿಮರ್ಶಕರು, ಸಂಘಟನೆಗಳು ಈ ಹೋರಾಟವನ್ನು ರಾಜ್ಯವ್ಯಾಪಿ ಮಾಡಿಲ್ಲ ಎನ್ನುವುದು ವಿಷಾದದ ಸಂಗತಿ.
ರಾಜಕೀಯ ವಿರೋಧಾಭಾಸಗಳು ಹೇಗಿವೆ ಎಂದರೆ ಹಿಂದಿನ ಬಿಜೆಪಿ ಸರಕಾರದ ಈ ಕ್ರಮದ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾಗ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಈ ರೈತರೊಂದಿಗೆ ದನಿಗೂಡಿಸಿದ್ದರು. ಇಂದು ಉಸ್ತುವಾರಿ ಸಚಿವರಾಗಿರುವ ಕೆ.ಎಚ್. ಮುನಿಯಪ್ಪನವರೂ ಅಂದು ರೈತರ ಪರವಾಗಿ ಸದ್ದು ಮಾಡಿದ್ದರು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಮೇಲೂ ಏನೂ ಬದಲಾಗಿಲ್ಲ. ಮತ್ತೆ ಅದೇ ಕಾರ್ಪೊರೇಟ್ ಹೂಡಿಕೆಯ ಹಿತಾಸಕ್ತಿಗೆ ರೈತರ ಬಲಿಕೊಡುವ ಸಂಪ್ರದಾಯ ಮುಂದುವರಿದಿದೆ.
ಸೋಮವಾರ ರೈತರ ನಿಯೋಗದ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ್ದಾರೆ ಮತ್ತು ಈ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಆದರೆ ಕೈಗಾರಿಕೋದ್ಯಮಗಳಿಗೆ ಸಂಬಂಧಿಸಿ ಸರಕಾರ ತನ್ನ ನೀತಿಯನ್ನೇ ಬದಲಿಸಿಕೊಳ್ಳದೆ ಇಂತಹ ಭೂಸ್ವಾಧೀನ ಪ್ರಕ್ರಿಯೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎನ್ನುವುದು ವಾಸ್ತವ. ಇಂದು ದೇವನಹಳ್ಳಿಯ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಇನ್ನಾವುದೋ ಪ್ರದೇಶದ ರೈತರ ಭೂಮಿಯ ಮೇಲೆ ಅದು ಕಣ್ಣು ಹಾಕಬೇಕಾಗುತ್ತದೆ. ಅಲ್ಲಿಯೂ ಇದೇ ಸಮಸ್ಯೆ ಆರಂಭವಾಗುತ್ತದೆ. ಬೆಂಗಳೂರಿನ ಅಭಿವೃದ್ಧಿಯೆಂದರೆ, ಇಲ್ಲಿನ ರೈತರನ್ನು ಒಕ್ಕಲೆಬ್ಬಿಸಿ, ಆ ಭೂಮಿಯ ಮೇಲೆ ಬೃಹತ್ ಕಾರ್ಪೊರೇಟ್‌ಗಳು ಹಕ್ಕು ಸಾಧಿಸುವುದಲ್ಲ. ಇಲ್ಲಿನ ರೈತರು, ಕಾರ್ಮಿಕರು ಕೂಡ ಆ ಅಭಿವೃದ್ಧಿಯ ಭಾಗವಾಗಿ ಬೆಳೆಯಬೇಕು. ಅಂತಹದೊಂದು ದೂರದೃಷ್ಟಿಯುಳ್ಳ ಅಭಿವೃದ್ಧಿಯ ಕಡೆಗೆ ನಾಡನ್ನು ಮುನ್ನಡೆಸುವ ಬಗ್ಗೆ ಸಿದ್ದರಾಮಯ್ಯ ಅವರು ಮುಂದಾಗಬೇಕು. ಈ ನಿಟ್ಟಿನಲ್ಲಿ, ಚನ್ನರಾಯಪಟ್ಟಣದ ರೈತರ ಹೋರಾಟದ ಸ್ಥೈರ್ಯ ಅಭೂತಪೂರ್ವವಾದದ್ದು. ಈ ಹೋರಾಟ ಕೇವಲ ಸ್ಥಳೀಯ ಭೂಸ್ವಾಧೀನದ ಪ್ರಶ್ನೆಯನ್ನಷ್ಟೇ ಅಲ್ಲ, ಈ ನೀತಿಯ ಹತ್ತು ಹಲವು ಆಯಾಮಗಳನ್ನು ಪುನರ್ವಿಮರ್ಶಿಸುವಂತೆ ಒತ್ತಾಯಿಸುತ್ತಿದೆ.