ಶ್ರೀರಾಮಸೇನೆ ಶಸ್ತ್ರಾಸ್ತ್ರ ತರಬೇತಿ : ಸರಕಾರ ಪಾಲಿಸುತ್ತಿರುವ ಅಪಾಯಕಾರಿ ಮೌನ!

Update: 2025-01-06 10:41 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಶ್ರೀರಾಮಸೇನೆ ಎನ್ನುವ ಉಗ್ರವಾದಿ ಸಂಘಟನೆಯು ತನ್ನ ನೂರಕ್ಕೂ ಅಧಿಕ ಕಾರ್ಯಕರ್ತರಿಗೆ ಆರುದಿನಗಳ ಕಾಲ ಶಸ್ತ್ರಾಸ್ತ್ರ ತರಬೇತಿ ನೀಡಿರುವುದು ಕೆಲವು ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ. ಬಾಗಲಕೋಟೆಯ ಜಮಖಂಡಿ ತಾಲೂಕಿನ ತೊಲಬಾಗಿಯಲ್ಲಿ ಈ ತರಬೇತಿ ನೀಡಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದು, ಏರ್‌ಗನ್ ಮೂಲಕ ಗನ್ ಟ್ರೈನಿಂಗ್, ಬಂದೂಕು ಬಳಕೆ ಸೇರಿದಂತೆ ಹಲವು ತರಬೇತಿಗಳನ್ನು ಈ ಸಂದರ್ಭದಲ್ಲಿ ನೀಡಲಾಗಿದೆ ಎನ್ನಲಾಗಿದ್ದು, ಈ ಕುರಿತ ಛಾಯಾಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ತರಬೇತಿಯ ಉದ್ದೇಶ ಏನು ಎನ್ನುವುದನ್ನು ರಾಮಸೇನೆಯ ಮುಖಂಡರು ಈವರೆಗೆ ಬಹಿರಂಗಪಡಿಸಿಲ್ಲ. ಈ ತರಬೇತಿಯನ್ನು ವ್ಯಕ್ತಿತ್ವ ವಿಕಸನವೆಂದು ಸಂಘಟನೆ ಕರೆದುಕೊಂಡಿದೆ. ರಾಮಸೇನೆ ಎನ್ನುವ ಸಂಘಟನೆಯ ಹಿನ್ನೆಲೆ ಬಲ್ಲ ಯಾವನೂ ಈ ವರದಿಯನ್ನು ಹಗುರವಾಗಿ ತೆಗೆದುಕೊಳ್ಳಲಾರ. ಈ ತರಬೇತಿ ಪಡೆದ ದುಷ್ಕರ್ಮಿಗಳು ಕರ್ನಾಟಕದ ಪಾಲಿಗೆ ಭಾರೀ ಅಪಾಯಗಳನ್ನು ತಂದೊಡ್ಡಬಲ್ಲರು ಎನ್ನುವ ಆತಂಕ ರಾಜ್ಯದ ಶ್ರೀಸಾಮಾನ್ಯರದ್ದಾಗಿದೆ. ಸ್ಥಳೀಯರು ಈ ಬಗ್ಗೆ ಈಗಾಗಲೇ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರಾದರೂ, ಪೊಲೀಸ್ ಇಲಾಖೆಗಾಗಲಿ, ಸರಕಾರಕ್ಕಾಗಲಿ ಆ ಕಳವಳ, ಆತಂಕ ತಟ್ಟಿದಂತಿಲ್ಲ.

ಶ್ರೀರಾಮಸೇನೆ ರಾಜ್ಯದಲ್ಲಿ ಮಾತ್ರವಲ್ಲ, ಹೊರರಾಜ್ಯದಲ್ಲೂ ಕ್ರಿಮಿನಲ್ ಕೃತ್ಯಗಳಿಗಾಗಿ ಗುರುತಿಸಲ್ಪಟ್ಟಿದೆ. ಶ್ರೀರಾಮಸೇನೆಯ ಮುಖಂಡ ಎಂದು ಗುರುತಿಸಿಕೊಳ್ಳುವ ಪ್ರಮೋದ್ ಮುತಾಲಿಕನಿಗೆ ಗೋವಾದ ಬಿಜೆಪಿ ಸರಕಾರವೇ ನಿಷೇಧವನ್ನು ಹೇರಿದೆ. ನಮ್ಮದೇ ರಾಜ್ಯದ ಕೋರ್ಟ್ ಆವರಣದಲ್ಲಿ ಬಾಂಬ್ ದಾಳಿ ಸೇರಿದಂತೆ ರಾಜ್ಯದ ಹಲವೆಡೆ ಎಸಗಿರುವ ಕ್ರಿಮಿನಲ್ ಪ್ರಕರಣಗಳಿಗಾಗಿ ಹಲವು ರಾಮಸೇನೆ ಕಾರ್ಯಕರ್ತರು ಬಂದಿಸಲ್ಪಟ್ಟಿದ್ದರು. ಅವರಲ್ಲಿ ಜಂಬಗಿ ಎಂಬಾತ ಜೈಲಿನಲ್ಲೇ ತನ್ನ ಸಹವರ್ತಿಯಿಂದ ಭೀಕರವಾಗಿ ಕೊಲೆಗೈಯಲ್ಪಟ್ಟಿದ್ದ. ದೇಶದ್ರೋಹದಂತಹ ಪ್ರಕರಣಗಳಲ್ಲೂ ಈ ಸಂಘಟನೆಯ ಹೆಸರು ಕೇಳಿ ಬಂದಿತ್ತು. ಸಿಂಧಗಿಯಲ್ಲಿ ತಹಶೀಲ್ದಾರ್ ಕಚೇರಿಯ ಮುಂದೆ ಪಾಕಿಸ್ತಾನ ಧ್ವಜ ಹಾರಿಸಿದ ‘ಹೆಗ್ಗಳಿಕೆ’ ರಾಮಸೇನೆ ಕಾರ್ಯಕರ್ತದ್ದು. ಕೋಮುಗಲಭೆಗಳನ್ನು ಹುಟ್ಟಿಸಿ ಹಾಕಲೆಂದು ಪಾಕಿಸ್ತಾನ ಧ್ವಜವನ್ನು ಹಾರಿಸಿ, ಬಳಿಕ ತಾನೇ ಇದರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಸ್ಥಳೀಯ ಮುಸ್ಲಿಮರ ತಲೆಗೆ ಈ ಆರೋಪವನ್ನು ಕಟ್ಟಲು ಮುಂದಾಗಿತ್ತು. ಆದರೆ ತನಿಖೆಯಲ್ಲಿ, ಪಾಕಿಸ್ತಾನ ಧ್ವಜ ಹಾರಾಟದ ಹಿಂದೆ ರಾಮಸೇನೆ ಕಾರ್ಯಕರ್ತರ ಪಾತ್ರವಿರುವುದು ಬೆಳಕಿಗೆ ಬಂತು. ರಾಮಸೇನೆ ಕಾರ್ಯಕರ್ತರಲ್ಲಿ ಬಹುತೇಕರ ಮೇಲೆ ಕ್ರಿಮಿನಲ್ ಆರೋಪಗಳಿವೆ. ಅದು ಇತರ ಯುವಕರನ್ನೂ ತನ್ನ ಕ್ರಿಮಿನಲ್ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಅದರಭಾಗವಾಗಿಯೇ ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಸಂಘಟನೆ ಉಗ್ರಗಾಮಿ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಸ್ಥಳೀಯರು ಶಂಕಿಸುತ್ತಿದ್ದಾರೆ. ಆದರೆ ಪೊಲೀಸ್ ಇಲಾಖೆ ಕಂಡೂ ಕಾಣದಂತೆ ವರ್ತಿಸುತ್ತಿದೆ.

ಹೇಮಂತ್ ಕರ್ಕರೆ ತನಿಖಾ ತಂಡ, ಈ ದೇಶದಲ್ಲಿ ಕೇಸರಿ ಉಗ್ರವಾದಿ ಸಂಘಟನೆ ಅಸ್ತಿತ್ವದಲ್ಲಿರುವುದನ್ನು ಮೊದಲಬಾರಿಗೆ ಬಹಿರಂಗ ಪಡಿಸಿತ್ತು. ವಿದೇಶಿ ಉಗ್ರಗಾಮಿಗಳಿಂದ ನಡೆದಿದೆ ಎಂದು ಭಾವಿಸಿದ ಮಕ್ಕಾ ಮಸೀದಿ ಸ್ಫೋಟ, ಅಜ್ಮೀರ್ ಸ್ಫೋಟ, ಸಂರೆತಾ ರೈಲು ಸ್ಫೋಟಗಳ ಹಿಂದೆ ಕೇಸರಿ ಉಗ್ರವಾದಿ ಸಂಘಟನೆಗಳ ಕೈವಾಡವಿರುವುದು ಅವರಿಂದ ಬೆಳಕಿಗೆ ಬಂತು. ಪ್ರಜ್ಞಾಸಿಂಗ್, ಪುರೋಹಿತ್ , ಅಸೀಮಾನಂದ ಸಹಿತ ಹಲವು ಉಗ್ರವಾದಿಗಳ ಬಂಧನವೂ ನಡೆಯಿತು. ಈ ಉಗ್ರರು ವಿವಿಧ ತರಬೇತಿ ಶಿಬಿರಗಳನ್ನು ನಡೆಸಿರುವುದು ಕೂಡ ತನಿಖೆಯ ಸಂದರ್ಭದಲ್ಲಿ ಬಹಿರಂಗವಾಯಿತು. ತನಿಖೆ ನಿರ್ಣಾಯಕ ಹಂತ ತಲುಪಬೇಕು ಎನ್ನುವಷ್ಟರಲ್ಲಿ ಕರ್ಕರೆ ಮತ್ತು ಅವರ ಎಲ್ಲ ಸಹವರ್ತಿಗಳು ಬರ್ಬರವಾಗಿ ಹತ್ಯೆಗೈಯಲ್ಪಟ್ಟರು. ಮುಂಬೈ ದಾಳಿ ಸಂದರ್ಭದಲ್ಲಿ ಪಾಕಿಸ್ತಾನಿ ಉಗ್ರರು ಈ ದಾಳಿಯನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ತನಿಖಾ ತಂಡದ ಸಾಮೂಹಿಕ ಹತ್ಯೆಯಿಂದ ನಿಜಕ್ಕೂ ಲಾಭವಾದದ್ದು ಸ್ವದೇಶಿ ಕೇಸರಿ ಉಗ್ರರಿಗೆ. ಕರ್ಕರೆ ತಂಡದ ಹತ್ಯೆಯ ಬಳಿಕ ಕೇಸರಿ ಉಗ್ರರ ಕುರಿತ ತನಿಕೆಗೆ ಭಾರೀ ಹಿನ್ನಡೆಯಾಯಿತು. ಇಂದಿಗೂ ಕೇಸರಿ ಉಗ್ರ ಸಂಘಟನೆಗಳು ಅಸ್ತಿತ್ವದಲ್ಲಿದ್ದು, ಆಗಾಗ ತಮ್ಮ ಉಪಸ್ಥಿತಿಯನ್ನು ಬಹಿರಂಗಪಡಿಸುತ್ತಿರುತ್ತವೆ. ಮಹಾತ್ಮಾಗಾಂಧೀಜಿಯ ಹತ್ಯೆಯಾದ ದಿನವನ್ನು ಇವುಗಳು ಸಂಭ್ರಮದಿಂದ ಆಚರಿಸುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತವೆ. ಈ ಹಿನ್ನೆಲೆಯಲ್ಲೇ, ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ನಡೆಸಿರುವ ಶಸ್ತ್ರಾಸ್ತ್ರ ತರಬೇತಿಯನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.

ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಕೋಮು ಉದ್ವಿಗ್ನತೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಲೇ ಬರುತ್ತಿದೆ. ಅಂತಹ ಪ್ರಯತ್ನ ಯಾರೇ ನಡೆಸಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವರೂ ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಈ ರಾಜ್ಯದಲ್ಲಿ ಇಸ್ರೇಲ್ ಹತ್ಯಾಕಾಂಡವನ್ನು ವಿರೋಧಿಸಿ, ಫೆಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸಿದರೆ ಅವರ ವಿರುದ್ಧ ಮೊಕದ್ದಮೆಯನ್ನು ದಾಖಲಿಸಲಾಗುತ್ತದೆ. ಫೆಲೆಸ್ತೀನ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಹಾಕಿದ ಕಾರಣಕ್ಕಾಗಿ ಯುವಕರನ್ನು ಬಂಧಿಸಲಾಗುತ್ತದೆ. ಫೆಲೆಸ್ತೀನ್ ಪರವಾಗಿ ಯಾವುದೇ ಪ್ರತಿಭಟನೆಯನ್ನು ರಾಜ್ಯದಲ್ಲಿ ಸರಕಾರ ಪರೋಕ್ಷವಾಗಿ ನಿಷೇಧಿಸಿದೆ. ಸಾರ್ವಜನಿಕ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ ಕಾರ್ಮಿಕ ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಅಂತಹ ಪ್ರತಿಭಟನೆಲಿಗೆ ಅನುಮತಿಯನ್ನು ನಿಷೇಧಿಸಲಾಗುತ್ತದೆ. ಆದರೆ ಕ್ರಿಮಿನಲ್ ಹಿನ್ನೆಲೆಯಿರುವ ಸಂಘಟನೆಯೊಂದು 180ಕ್ಕೂ ಅಧಿಕ ಮಂದಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವುದಕ್ಕೆ ಕಾಂಗ್ರೆಸ್ ಸರಕಾರದ ಅಡಿಯಲ್ಲಿ ಯಾವುದೇ ಅಡ್ಡಿಯಿರುವುದಿಲ್ಲ. ಪೊಲೀಸರ ಬಳಿ ಈ ಬಗ್ಗೆ ಕೇಳಿದರೆ ಅವರಿಗೆ ಮಾಹಿತಿಯೇ ಇರುವುದಿಲ್ಲ. ಗೃಹ ಸಚಿವರ ಕಡೆಯಿಂದ ಕನಿಷ್ಠ ‘‘ತನಿಖೆ ನಡೆಸುತ್ತೇವೆ’’ ‘‘ಕ್ರಮ ತೆಗೆದುಕೊಳ್ಳುತ್ತೇವೆ’’ ಎನ್ನುವ ಹೇಳಿಕೆಯೂ ಹೊರ ಬೀಳುವುದಿಲ್ಲ. ಯಾವುದೋ ಒಬ್ಬ ಸ್ಥಳೀಯ ಬಿಜೆಪಿ ಕಾರ್ಯಕರ್ತನ ಹತ್ಯೆಯಾದಾಗ ಅದನ್ನು ಎನ್‌ಐಎ ತನಿಖೆ ನಡೆಸುತ್ತದೆ. ಕಂಡಕಂಡವರನ್ನೆಲ್ಲ ತನಿಖೆಯ ಹೆಸರಿನಲ್ಲಿ ಬಂಧಿಸುತ್ತದೆ. ಆರೋಪಿಗಳ ಕುಟುಂಬಕ್ಕೆ ಮಾನಸಿಕ, ದೈಹಿಕ ದೌರ್ಜನ್ಯಗಳನ್ನು ನೀಡಲಾಗುತ್ತದೆ. ಅದೇ ಸಂದರ್ಭದಲ್ಲಿ ಇಡೀ ದೇಶದ ಭದ್ರತೆಗೆ ಸವಾಲೊಡ್ಡಬಲ್ಲ ಈ ತರಬೇತಿ ಶಿಬಿರದ ಬಗ್ಗೆ ಸರಕಾರ ಮೌನವಾಗಿ ಬಿಡುತ್ತದೆ. ಶಸತ್ಸಾಸ್ತ್ರ ತರಬೇತಿಯಷ್ಟೇ ಅಪಾಯಕಾರಿಯಾಗಿದೆ ಮತ್ತು ದುಷ್ಕರ್ಮಿಗಳಿಗೆ ಕುಮ್ಮಕ್ಕು ನೀಡುವಂತಿದೆ ಸರಕಾರದ ಈ ಮೌನ.

ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವವನ್ನು ಉದ್ಘಾಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘‘ಸಮಾಜದಲ್ಲಿ ಶಾಂತಿ ಭಂಗ ಮಾಡುವವರ ಮಾತಿಗೆ ಮರುಳಾಗದೆ ಅವರ ವಿರುದ್ಧ ಧ್ವನಿ ಎತ್ತುವ ಕಾರ್ಯ ಯುವಪಡೆಯಿಂದ ಆಗಬೇಕು’’ ಎಂದು ಕರೆ ನೀಡಿದ್ದಾರೆ. ಆದರೆ ಸರಕಾರಕ್ಕೆ ಸವಾಲು ಹಾಕುವಂತೆ ರಾಮಸೇನೆ ಎನ್ನುವ ಸಂಘಟನೆ ವ್ಯಕ್ತಿತ್ವ ವಿಕಸನದ ಹೆಸರಿನಲ್ಲಿ ಯುವಜನರ ಮನಸ್ಸನ್ನು ಕೆಡಿಸುವುದಷ್ಟೇ ಅಲ್ಲದೆ, ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವಾಗ, ತಮ್ಮ ಗೃಹ ಇಲಾಖೆ ಏನು ಮಾಡುತ್ತಿದೆ ಎನ್ನುವುದರ ವಿವರವನ್ನು ಮುಖ್ಯಮಂತ್ರಿ ಯುವಜನತೆಗೆ ನೀಡಬೇಕಾಗಿದೆ. ಬಾಗಲಕೋಟೆಯಲ್ಲಿ ನಡೆದ ತರಬೇತಿ ಶಿಬಿರದ ಬಗ್ಗೆ ಆಳವಾದ ತನಿಖೆ ನಡೆಸಲು ಸರಕಾರ ಮುಂದಾಗಬೇಕು ಮಾತ್ರವಲ್ಲ, ಇದರ ಹಿಂದಿರುವ ನಾಯಕರನ್ನು ದೇಶದ್ರೋಹದ ಕಾಯ್ದೆಯಡಿ ಬಂಧಿಸಲು ಕ್ರಮ ತೆಗೆದುಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News