ನದಿ ಜೋಡಣೆ: ಅವಸರವೇಕೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ (ಎನ್‌ಡಿಎ)ಸರಕಾರದ ಮಹತ್ವಾಕಾಂಕ್ಷೆಯ ನದಿ ಜೋಡಣೆಯ ಯೋಜನೆಗೆ ದಕ್ಷಿಣ ಭಾರತದ ಐದು ರಾಜ್ಯಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ಈ ಕುರಿತು ಅಂದರೆ ನದಿ ಜೋಡಣೆಯ ಕರಡು ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿವೆ. ಇದರಿಂದಾಗಿ ಸಂಬಂಧಿಸಿದ ರಾಜ್ಯಗಳ ಜೊತೆಗೆ ಇನ್ನೊಂದು ಸುತ್ತಿನ ಮಾತುಕತೆಯನ್ನು ನಡೆಸಿ ಮನವೊಲಿಸಲು ಕೇಂದ್ರದ ಜಲಶಕ್ತಿ ಸಚಿವಾಲಯ ತೀರ್ಮಾನಿಸಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ದಿಲ್ಲಿಯಲ್ಲಿ ನದಿ ಜೋಡಣಾ ಸಮಿತಿಯ ಸಭೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.
ನದಿ ಜೋಡಣೆಯ ಉದ್ದೇಶ ಎರಡು ನದಿಗಳನ್ನು ಜೋಡಿಸುವ ಮೂಲಕ ನೀರಿನ ಕೊರತೆಯಿರುವ ನದಿಗಳಿಗೆ ಸಾಕಷ್ಟು ನೀರಿನ ಸಂಗ್ರಹವಿರುವ ನದಿಗಳಿಂದ ನೀರು ಹರಿಸುವುದಾಗಿದೆ. ಈ ನದಿ ಜೋಡಣೆಯ ಮೂಲಕ ದೇಶದ ಎಲ್ಲ ರಾಜ್ಯಗಳಲ್ಲಿ ಸಾಕಷ್ಟು ನೀರು ಲಭ್ಯವಾಗುವಂತೆ ಮಾಡುವುದಾಗಿದೆ. ಇದೊಂದೇ ಅಲ್ಲದೆ ನೆರೆ ಹಾಗೂ ಬರಗಾಲದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದಾಗಿದೆ. ಈ ಬಗ್ಗೆ ಜಲ ತಜ್ಞರ ಜೊತೆ ಸಮಾಲೋಚನೆ ಮಾಡದೆ ಸರಕಾರ ಕ್ರಮ ಕೈಗೊಳ್ಳಲು ಅವಸರ ಮಾಡಬಾರದು.
ವಾಸ್ತವವಾಗಿ ನದಿ ಜೋಡಣೆಯ ಕಾರ್ಯ ಹಣ ದೋಚುವ ದಂಧೆಯಾಗಿದೆ. ಕೆಲವು ರಾಜ್ಯಗಳಲ್ಲಿ ನೀರಿನ ಕೊರತೆಗೆ ನೀರಿನ ಅಸಮರ್ಪಕ ನಿರ್ವಹಣೆ ಕಾರಣವಾಗಿದೆ. ಇಂತಹ ರಾಜ್ಯಗಳಲ್ಲಿ ಗಿಡ-ಮರಗಳು ಕಡಿಮೆಯಾಗುತ್ತಿವೆ. ಈ ರಾಜ್ಯಗಳು ಚಾರಿತ್ರಿಕವಾಗಿ ಬರ ಪೀಡಿತವಲ್ಲ. ಈ ರಾಜ್ಯಗಳಲ್ಲಿ ಪರಿಸರ ಸಮತೋಲನ ತಪ್ಪಿ ಮಳೆಯ ಪ್ರಮಾಣವು ಕಡಿಮೆಯಾಗಿದೆ. ಹೀಗಾಗಿ ಕೃಷಿ ಚಟುವಟಿಕೆಗಳು ತೊಂದರೆಯಲ್ಲಿವೆ ಎಂಬುದು ವಾಸ್ತವ ಸಂಗತಿಯಾಗಿದೆ.
ಗೋದಾವರಿ ಹಾಗೂ ಕೃಷ್ಣಾ ಕಣಿವೆಗಳಿಗೆ ಸಂಬಂಧಿಸಿದ ನ್ಯಾಯ ಮಂಡಳಿಯ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು ಗೋದಾವರಿ ನದಿಯ ಹೆಚ್ಚುವರಿ ನೀರಿನ ಹಂಚಿಕೆಯನ್ನು ತೀರ್ಮಾನಿಸುವುದಾಗಿ 2015ರಲ್ಲಿ ಕೇಂದ್ರ ಸರಕಾರ ಕರ್ನಾಟಕ ಸರಕಾರಕ್ಕೆ ತಿಳಿಸಿತ್ತು. ಆದರೆ ಈಗ ರಾಜ್ಯಕ್ಕೆ ಅತ್ಯಂತ ಕಡಿಮೆ ನೀರನ್ನು ಹಂಚಿಕೆ ಮಾಡಿರುವುದರಿಂದ ಈ ಅನ್ಯಾಯವನ್ನು ಸರಿಪಡಿಸದೆ ಈ ಒಪ್ಪಂದಕ್ಕೆ ಸಹಿ ಹಾಕಲು ಹೇಗೆ ಸಾಧ್ಯ? ಎಂದು ರಾಜ್ಯ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಮತ್ತೊಂದೆಡೆ ಒಡಿಶಾ ಹಾಗೂ ಛತ್ತೀಸ್‌ಗಡ ಸರಕಾರಗಳು ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಬೇರೆ ರಾಜ್ಯಗಳಿಗೆ ಬಿಟ್ಟು ಕೊಡಲು ನಿರಾಕರಿಸಿವೆ. ಆದ್ದರಿಂದ ಯಾವುದೇ ಒಪ್ಪಂದಕ್ಕೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿವೆ.
ಮೇಲಿನದು ನದಿ ನೀರಿನ ಹಂಚಿಕೆಯ ಪ್ರಶ್ನೆಯಾದರೆ ನದಿ ಜೋಡಣೆ ಎಂಬುದೇ ಪರಿಸರಕ್ಕೆ ಅತ್ಯಂತ ಮಾರಕವಾದ ಯೋಜನೆಯಾಗಿದೆ ಎಂದು ಪರಿಸರವಾದಿಗಳ ಆಕ್ಷೇಪವಾಗಿದೆ. ರಸ್ತೆಗಳನ್ನು ಜೋಡಿಸಿದಂತೆ ನದಿಗಳನ್ನು ಜೋಡಿಸುವುದು ಅವೈಜ್ಞಾನಿಕವಾಗಿದೆ ಎಂಬುದು ಅವರ ನಿಲುವಾಗಿದೆ. ನದಿ ಜೋಡಣೆಯಿಂದಾಗಿ ನದಿ, ಪರಿಸರಕ್ಕೆ ಸಂಬಂಧಿಸಿದ ಸಹಜ ವ್ಯವಸ್ಥೆಗೆ ಮಾರಕವಾಗಲಿದೆ. ಶತಮಾನಗಳಿಂದ ನದಿಗಳು ಸಹಜವಾಗಿ ಹರಿಯುತ್ತ ಪರಿಸರ ವಿಜ್ಞಾನ ವ್ಯವಸ್ಥೆಯನ್ನು ಕಾಯ್ದುಕೊಂಡು ಬಂದಿವೆ. ಇದನ್ನು ಗಮನಿಸದೆ ಅವಸರದಲ್ಲಿ ನದಿ ಜೋಡಣೆಗೆ ಮುಂದಾದರೆ ಪ್ರಾಕೃತಿಕ ಪರಿಸರ ವ್ಯವಸ್ಥೆ ಸಂಪೂರ್ಣವಾಗಿ ನಾಶವಾಗುತ್ತದೆ ಎಂಬುದು ಪರಿಸರವಾದಿಗಳ ವಾದವಾಗಿದೆ. ವಾಸ್ತವವಾಗಿ ಸಟ್ಲೇಜ್ ಮತ್ತು ಯಮುನಾ ನದಿಗಳನ್ನು ಜೋಡಿಸಲು ಈ ಹಿಂದೆ ನಡೆಸಿದ ಯತ್ನಗಳು ವಿಫಲವಾಗಿವೆ. ಇದು ಕೇಂದ್ರ ಸರಕಾರಕ್ಕೆ ಗೊತ್ತಿದ್ದರೂ ವಿಪರೀತ ಹಣ ಖರ್ಚು ಮಾಡಲು ಮುಂದಾಗಿದೆ. ಈ ನದಿ ಜೋಡಣೆಯಿಂದಾಗಿ ಆಗುವ ಅನಾಹುತಗಳ ಕುರಿತು ಕೇಂದ್ರ ಸರಕಾರ ಅರಿತುಕೊಳ್ಳಲಿ ಎಂಬುದು ಪರಿಸರ ವಾದಿಗಳ ಅಭಿಪ್ರಾಯವಾಗಿದೆ.
ನೀರಿನ ಸಮಸ್ಯೆಯನ್ನು ನಿವಾರಿಸಲು ನದಿ ಜೋಡಿಸುವ ಪರಿಸರ ವಿರೋಧಿ ಯೋಜನೆಯ ಬದಲಾಗಿ ಅಂತರ್ಜಲವನ್ನು ಬರಿದಾಗಿಸುವ ಯತ್ನಗಳನ್ನು ಸರಕಾರಗಳು ತಡೆಯಬೇಕಾಗಿದೆ ಎಂಬುದು ಜಲ ಜಾಗೃತಿ ಸಂಘಟನೆಯ ನಾಯಕ ರಾಜೇಂದ್ರ ಸಿಂಗ್ ಅವರ ನಿಲುವಾಗಿದೆ. ಇದಕ್ಕಾಗಿ ಅವರು ದೊಡ್ಡ ಅಭಿಯಾನವನ್ನೇ ಹಮ್ಮಿಕೊಂಡಿದ್ದಾರೆ.
ನದಿ ಜೋಡಣೆ ಎಂಬುದು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರೂಪಿಸಿದ ಯೋಜನೆ. ಆದರೆ ಅದು ಕಾರ್ಯಗತವಾಗಿರಲಿಲ್ಲ. ಈಗ ಇದನ್ನು ಹಮ್ಮಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಮುಂದಾಗಿದ್ದಾರೆ. ಮಧ್ಯಪ್ರದೇಶದ ಕೆನ್ ಮತ್ತು ಬೆತ್ವಾ ನದಿಗಳ ಜೋಡಣೆ ಕಾರ್ಯವನ್ನು ಪ್ರಥಮವಾಗಿ ಕೈಗೆತ್ತಿಕೊಳ್ಳಲು ಸರಕಾರ ಮುಂದಾಗಿದೆ. ಸರಕಾರ ಈಗಾಗಲೇ 30 ನದಿಗಳ ಜೋಡಣೆಯ ಕುರಿತು ಯೋಜನೆಯನ್ನು ರೂಪಿಸಿದೆ.
ಭಾರತದ ಜನಸಂಖ್ಯೆ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಜನರಿಗೆ ನೀರನ್ನು ಒದಗಿಸಲು ನದಿ ಜೋಡಣೆಯೊಂದನ್ನೇ ಅವಲಂಬಿಸದೆ ದೇಶವ್ಯಾಪಿಯಾಗಿ ಈಗಾಗಲೇ ಹಾಳಾಗಿರುವ ಬಹುದೊಡ್ಡ ಸಂಖ್ಯೆಯ ಕೆರೆಗಳನ್ನು ಹೂಳೆತ್ತಿ, ಒತ್ತುವರಿಯನ್ನು ತಡೆಗಟ್ಟುವ ಮೂಲಕ ಹಾಗೂ ಕಾರ್ಖಾನೆಗಳು ಬಿಡುವ ತ್ಯಾಜ್ಯವನ್ನು ನಿರ್ಬಂಧಿಸಿ ಕೆರೆಗಳಿಗೆ ಮರು ಜೀವ ನೀಡಬೇಕಾಗಿದೆ. ಕೇಂದ್ರ ಸರಕಾರ ನದಿಗಳ ಜೋಡಣೆ ಎಂಬ ಪರಿಸರ ವಿರೋಧಿ ಯೋಜನೆಯನ್ನು ಕೈ ಬಿಟ್ಟು ಕೆರೆ, ಬಾವಿ ಸೇರಿದಂತೆ ಬೇರೆ ಜಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು ಸೂಕ್ತ.
ಸಹಜವಾಗಿ ತಮ್ಮ ಪಾಡಿಗೆ ಹರಿಯುತ್ತಾ ಕೋಟ್ಯಂತರ ಜನರ ಬಾಯಾರಿಕೆಯನ್ನು ಇಂಗಿಸುವ ನದಿಗಳನ್ನು ಜೋಡಿಸುವ ಮೊದಲು ಅವುಗಳ ಸ್ವಚ್ಛತೆಗೆ ಕಟ್ಟುನಿಟ್ಟಾದ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕಾಗಿದೆ. ಕಾರ್ಖಾನೆಗಳು ಬಿಡುವ ಹೊಲಸು ನೀರಿನ ಕಡೆ ಸರಕಾರ ಮೊದಲು ಗಮನವನ್ನು ಹರಿಸಬೇಕು. ಗಂಗಾರತಿ, ತುಂಗಾರತಿ ಎಂದು ಪೂಜೆ, ಪುರಸ್ಕಾರ ಮಾಡುವುದರಿಂದ ನದಿಗಳು ಸುರಕ್ಷಿತವಾಗಿ ಉಳಿಯುವುದಿಲ್ಲ. ಅವುಗಳನ್ನು ಕಾಪಾಡಲು ಸರಕಾರ ಮುಂದಾಗುವುದು ಅಗತ್ಯವಾಗಿದೆ.
ಯಮುನಾ, ಗಂಗಾ ಮೊದಲಾದ ಪ್ರಮುಖ ನದಿಗಳು ಈಗ ವಿನಾಶದ ಅಂಚಿನಲ್ಲಿವೆ. ಮೊದಲು ಅವುಗಳು ನಾಶವಾಗುವುದನ್ನು ತಡೆಯಬೇಕಾಗಿದೆ. ಈ ನದಿಗಳು ನಾಶವಾಗಲು ಬಿಟ್ಟು ನದಿ ಜೋಡಣೆಯಂಥ ಹೆಚ್ಚು ಪ್ರಯೋಜನಕಾರಿಯಲ್ಲದ ದುಬಾರಿ ಯೋಜನೆಗಳನ್ನು ಕೈಗೊಳ್ಳುವುದರಿಂದ ಏನಾದರೂ ಸಾಧಿಸುವುದಿದೆಯೇ? ಆದ್ದರಿಂದ ಇಂಥ ವಿಷಯಗಳಲ್ಲಿ ಹೆಚ್ಚಿನ ಆತುರ ತೋರಿಸುವುದು ಸರಿಯಲ್ಲ.