ರೈತರ ಆತ್ಮಹತ್ಯೆ: ನಿರ್ಲಕ್ಷ್ಯ ಸಲ್ಲ

Update: 2025-01-08 05:14 GMT

ಸಾಂದರ್ಭಿಕಚಿತ್ರ PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದೆಡೆ ಕೇಂದ್ರ ಸರಕಾರ ರೈತರಿಗೆ ಕಾಟಾಚಾರದ ಯೋಜನೆಗಳನ್ನು ಘೋಷಿಸುತ್ತಾ ತನ್ನನ್ನು ರೈತಪರ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸಮಾಜವಾದಿ ಹಿನ್ನೆಲೆಯಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನದು ಜನಪರ, ರೈತಪರ ಸರಕಾರವೆಂದು ಈಗಾಗಲೇ ಸ್ವಯಂ ಘೋಷಿಸಿಕೊಂಡಿದ್ದಾರೆ. ಇಷ್ಟಾದರೂ, ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ರೈತರ ಸಮಸ್ಯೆಗಳು ಮುಗಿದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕವೇ ರಾಜ್ಯದಲ್ಲಿ ಎರಡು ವರ್ಷಗಳಲ್ಲಿ 2,329 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ ರೈತರಿಗಾಗಿ ಪಿಎಂ ಕಿಸಾನ್ ಯೋಜನೆ ಜಾರಿಗೊಂಡಿತ್ತು. ಇದರಂತೆ ಪ್ರತಿ ರೈತನಿಗೆ ಪ್ರತಿ ವರ್ಷ 6,000 ರೂಪಾಯಿಯನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ. ಆದರೆ ಜಾರಿಗೊಂಡ ಅದೇ ವರ್ಷ ದೇಶದಲ್ಲಿ ಸುಮಾರು 6,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯದಲ್ಲಿ 2022-23ರಲ್ಲಿ 922 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2023-24ರಲ್ಲಿ 1,061 ಮಂದಿ 2024-25ರಲ್ಲಿ 346 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗೆ ನೋಡಿದರೆ 2024ರಲ್ಲಿ ರೈತರ ಆತ್ಮಹತ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಎದ್ದು ಕಾಣುತ್ತದೆ. ಈ ಮೂರೂ ವರ್ಷಗಳಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಗಮನಾರ್ಹ. 2022ರಲ್ಲಿ 104 ಮಂದಿ, 2023ರಲ್ಲಿ 104 ಮತ್ತು 2024ರಲ್ಲಿ 46 ಮಂದಿ ರೈತರು ಈ ಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ2019ರಿಂದ 2021ರವರೆಗೆ ಒಟ್ಟು 2,861 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಇವುಗಳಲ್ಲಿ 2,377 ರೈತರ ಆತ್ಮಹತ್ಯೆಗಳನ್ನಷ್ಟೇ ಒಪ್ಪಿಕೊಳ್ಳಲಾಗಿದೆ. ಆತ್ಮಹತ್ಯೆ ಮಾಡಿಕೊಂಡಾಕ್ಷಣ ರೈತರಿಗೆ ಪರಿಹಾರ ಸಿಗುತ್ತದೆ ಎನ್ನುವುದು ಕೂಡ ಸುಳ್ಳು. ಇಲ್ಲಿ, ರೈತರ ಕುಟುಂಬಗಳು ಅದನ್ನು ಕೃಷಿ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿರುವುದು ಎಂದು ಸಾಬೀತು ಪಡಿಸಬೇಕಾಗಿದೆ. ರೈತನಿಗೆ ಕುಡಿಯುವ ಹವ್ಯಾಸವಿದ್ದರೆ ಅದನ್ನೇ ನೆಪ ಮಾಡಿಕೊಂಡು ಪ್ರಕರಣವನ್ನು ತಿರಸ್ಕರಿಸಲಾಗುತ್ತದೆ.

ನೋಟು ನಿಷೇಧ ಮತ್ತು ಲಾಕ್‌ಡೌನ್‌ಗಳ ಬಳಿಕ ರೈತರ ಆತ್ಮಹತ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುವುದು ಭಾಗಶಃ ನಿಂತೇ ಹೋಯಿತು. ಯಾಕೆಂದರೆ, ಈ ಅವಧಿಯಲ್ಲಿ ದೇಶಾದ್ಯಂತ ಬೃಹತ್ ಉದ್ಯಮಿಗಳೇ ಆತ್ಮಹತ್ಯೆಯ ಮೂಲಕ ಸುದ್ದಿಯಾಗ ತೊಡಗಿದರು. ಎಲ್ಲ ವಲಯಗಳಲ್ಲೂ ಆತ್ಮಹತ್ಯೆ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನೋಟು ನಿಷೇಧ ಭಾರತದ ಉದ್ಯಮಗಳ ಮೇಲೆ ಆಳವಾದ ಗಾಯವನ್ನು ಮಾಡಿದ್ದರೆ, ಲಾಕ್‌ಡೌನ್ ಆ ಗಾಯಗಳಿಗೆ ಬರೆಗಳನ್ನು ಎಳೆಯಿತು. ಈ ಸಂದರ್ಭದಲ್ಲಿ ದೇಶದ ನೂರಾರು ಸಣ್ಣ ಉದ್ದಿಮೆಗಳು ಮುಚ್ಚಿದವು. ಇದರಿಂದ ಲಕ್ಷಾಂತರ ಜನರು ಬೀದಿಗೆ ಬಿದ್ದರು. ನೋಟು ನಿಷೇಧದಿಂದಾಗಿ ಹಳ್ಳಿಗಳಿಂದ ವಲಸೆ ಬಂದಂತಹ ಕಾರ್ಮಿಕರು ನಗರಗಳಲ್ಲಿ ಕೆಲಸ ಕಳೆದುಕೊಂಡರು. ಮತ್ತೆ ಹಳ್ಳಿಗೆ ಮರಳಬೇಕಾದ ಸ್ಥಿತಿ ನಿರ್ಮಾಣವಾಗಿ , ಅದರಿಂದ ಅವರ ಸಂಕಷ್ಟಗಳು ಬಿಗಡಾಯಿಸಿತು. ಬಹುತೇಕ ವಲಸೆ ಕಾರ್ಮಿಕರು ಕೃಷಿಯ ನಾಶ, ನಷ್ಟ, ಸಾಲ ಇತ್ಯಾದಿಗಳಿಂದಲೇ ನಗರ ಸೇರಿ, ಅಲ್ಲಿ ಕಟ್ಟಡ ಕಾರ್ಮಿಕರಾಗಿ ಬದುಕನ್ನು ಪುನರ್‌ನಿರ್ಮಿಸಲು ಪ್ರಯತ್ನಿಸುತ್ತಿದ್ದರು. ನೋಟು ನಿಷೇಧ ಬಿಲ್ಡರ್‌ಗಳ ಮೇಲೆ ಭಾರೀ ಪರಿಣಾಮಗಳನ್ನು ಬೀರಿದ್ದರಿಂದ, ಕಟ್ಟಡ ನಿರ್ಮಾಣ ಕೆಲಸಗಳು ಭಾಗಶಃ ಸ್ಥಗಿತಗೊಂಡವು. ಪರಿಸ್ಥಿತಿ ಸುಧಾರಿಸಿದಂತೆಯೇ ಹಳ್ಳಿಯಿಂದ ಕಾರ್ಮಿಕರು ಮರಳಿದರಾದರೂ, ಲಾಕ್‌ಡೌನ್ ಸಂದರ್ಭದಲ್ಲಿ ಮತ್ತೆ ಹಳ್ಳಿಯ ಕಡೆಗೆ ಮರಳ ಬೇಕಾಯಿತು. ಇವೆಲ್ಲವೂ ಕೃಷಿ ಉದ್ದಿಮೆಗಳನ್ನು ಅಸ್ತವ್ಯಸ್ತ ಮಾಡಿತು. ಕೃಷಿಕರ ಮೇಲೂ ಸಹಜವಾಗಿಯೇ ಪರಿಣಾಮ ಬೀರಿತು. 2020-21ರ ಹೊತ್ತಿಗೆ ಎಲ್ಲ ವಲಯಗಳೂ ಆತ್ಮಹತ್ಯೆಗಾಗಿ ಸುದ್ದಿಯಲ್ಲಿದ್ದವು. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗಳ ಜೊತೆ ಜೊತೆಗೇ ಹೃದಯಾಘಾತಗಳು, ಅನಿರೀಕ್ಷಿತ ಸಾವುಗಳು ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿವೆ. ಈ ಕಾರಣದಿಂದಲೇ, ರೈತರ ಆತ್ಮಹತ್ಯೆಗಳು ರಾಜಕೀಯ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೇ ಹೊರತು, ಅದರ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಗಂಭೀರವಾಗಿ ಸರಕಾರವಾಗಲಿ, ವಿರೋಧಪಕ್ಷವಾಗಲಿ ಯೋಚಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ದೇಶಾದ್ಯಂತ ಬೆಂಬಲ ಬೆಲೆಯೂ ಸೇರಿದಂತೆ ಸರಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಭಾರೀ ಆಂದೋಲನಗಳು ನಡೆಯುತ್ತಿವೆ. ಕೇಂದ್ರ ಸರಕಾರ ರೈತರ ಸಮಸ್ಯೆಗಳಿಗೆ ಕಿವಿಯಾಗದೆ, ಅವರ ಪ್ರತಿಭಟನೆಗಳನ್ನು ದಮನಿಸುವುದರ ಬಗ್ಗೆ ಆಸಕ್ತಿಯನ್ನು ವಹಿಸಿತು. ಇಂದಿಗೂ ರೈತರ ಸಮಸ್ಯೆಗಳನ್ನು ‘ಸಮಸ್ಯೆ’ ಎಂದು ಒಪ್ಪಿಕೊಳ್ಳುವುದಕ್ಕೇ ಸರಕಾರ ಸಿದ್ಧವಿಲ್ಲ. ಬದಲಿಗೆ ಅವರ ಪ್ರತಿಭಟನೆಗಳಲ್ಲಿ ರಾಜಕೀಯ ಹುನ್ನಾರಗಳನ್ನು ಹುಡುಕುತ್ತಿದೆ. ‘ಉಗ್ರಗಾಮಿಗಳು’ ಎಂದು ಕರೆದು ಪ್ರತಿಭಟನೆಗಳನ್ನು ಬಗ್ಗು ಬಡಿಯಲು ಹೊರಡುತ್ತದೆ. ಹೀಗಿರುವಾಗ, ರೈತರ ಆತ್ಮಹತ್ಯೆಗಳು ನಿಲ್ಲುವುದಾದರೂ ಹೇಗೆ ಸಾಧ್ಯ?

ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳಲ್ಲಿ ಉತ್ತರ ಭಾರತದ ಬಲಾಢ್ಯ ರೈತರು ಮತ್ತು ಹಿಂದುಳಿದ ವರ್ಗದ ಮೇಲ್‌ಜಾತಿಯ ಜನರು ಶಾಮೀಲಾಗಿದ್ದುದರಿಂದ ಅವುಗಳನ್ನು ದಮನಿಸುವಲ್ಲಿ ಸರಕಾರ ಭಾಗಶಃ ವಿಫಲವಾಯಿತು. ಆದರೆ ದುರ್ಬಲ ಜಾತಿಗಳಿಗೆ ಸೇರಿದ, ಸಣ್ಣ ಪುಟ್ಟ ರೈತರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವ ಶಕ್ತಿಯನ್ನು ಕೂಡ ಹೊಂದಿಲ್ಲ. ಅವರ ಅನಕ್ಷರತೆ, ಸ್ಥಳೀಯ ಬಡ್ಡಿ ವ್ಯಾಪಾರಿಗಳ ಸಾಲದ ಶೂಲ, ಜೊತೆಗೆ ಬರ ಇತ್ಯಾದಿಗಳಿಂದಾಗಿ ಅವರೆಲ್ಲ ಕೃಷಿಯನ್ನು ಜೀವನಾಧಾರವಾಗಿ ನೆಚ್ಚಿಕೊಳ್ಳುವ ಸ್ಥಿತಿಯೇ ಇಲ್ಲ. ಬಹುತೇಕ ರೈತರು ಭೂಮಿಯನ್ನು ಪಾಳು ಬಿಟ್ಟು ಅಥವಾ ಮಾರಿ ಬಿಟ್ಟು ನಗರ ಸೇರುತ್ತಿರುವುದು ಇದೇ ಕಾರಣಕ್ಕೆ. ಇವುಗಳ ನಡುವೆಯೇ, ರೈತರಿಗೆ ನೀಡುವ ಬಡ್ಡಿ ರಹಿತ ಅಲ್ಪಾವಧಿ ಸಾಲಗಳು ನೂರಾರು ರೈತರು ಬಡ್ಡಿ ವ್ಯಾಪಾರಿಗಳ ಬಲೆಗೆ ಬೀಳದಂತೆ ತಡೆದಿದೆ. ಈ ಅಲ್ಪ್ಪಾವಧಿ ಕೃಷಿ ಸಾಲಕ್ಕೆ ಅರ್ಧಕ್ಕಿಂತಲೂ ಹೆಚ್ಚು ಹಣ ನಬಾರ್ಡ್‌ನಿಂದ ಪಾವತಿಯಾಗುತ್ತದೆ. ಆದರೆ 2024-25ರ ಆರ್ಥಿಕ ವರ್ಷದಲ್ಲಿ ಈ ಧನದ ಮೊತ್ತದಲ್ಲಿ ಭಾರೀ ಕಡಿತ ಮಾಡಲಾಗಿದೆ. ಕರ್ನಾಟಕಕ್ಕೆ 2023-24ಕ್ಕೆ ಕೇಂದ್ರ ಸರಕಾರ 5,600 ಕೋಟಿ ರೂಪಾಯಿಯನ್ನು ಕೊಟ್ಟಿತ್ತು. 2024-25ನೇ ವರ್ಷಕ್ಕೆ ಕರ್ನಾಟಕ 13,742 ಕೋಟಿ ರೂಪಾಯಿ ಬೇಡಿಕೆಯನ್ನು ಸಲ್ಲಿಸಿದ್ದರೂ, 2,340 ಕೋಟಿ ರೂಪಾಯಿಯನ್ನು ಮಾತ್ರ ಮಂಜೂರು ಮಾಡಿದೆ. ಅಂದರೆ ಶೇ. 58ರಷ್ಟು ಕಡಿತ ಮಾಡಲಾಗಿದೆ. ಸಹಕಾರ ಸಂಸ್ಥೆಗಳಲ್ಲಿ ಅಲ್ಪಾವಧಿಯ ಕೃಷಿ ಸಾಲ ಪಡೆಯುವ ಸಣ್ಣ ಪುಟ್ಟ ರೈತರ ಮೇಲೆ ಇದು ಭಾರೀ ಪರಿಣಾಮಗಳನ್ನು ಬೀರಲಿದೆ.

ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೇಂದ್ರ ಸರಕಾರ ಅನುಸರಿಸುತ್ತಿರುವ ಕುತಂತ್ರ ನೀತಿಯ ಮುಂದುವರಿದ ಭಾಗವಾಗಿದೆ ಇದು. ಉಚಿತ ಅಕ್ಕಿ ನೀಡುವ ಯೋಜನೆಗೆ ಅಡ್ಡಗಾಲು ಹಾಕಿದಂತೆಯೇ, ಇದೀಗ ರೈತರ ವಿಷಯದಲ್ಲೂ ಕೇಂದ್ರ ಸರಕಾರವು ರಾಜ್ಯ ಸರಕಾರದ ಕೈಕಾಲು ಕಟ್ಟಿ ಹಾಕಲು ಹೊರಟಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ರೈತರು, ಮಹಿಳೆಯರು ಒಂದಿಷ್ಟು ನಿರಾಳ ನಿಟ್ಟುಸಿರನ್ನು ಬಿಡುತ್ತಿದ್ದಾರೆ. ಇದು ಕೇಂದ್ರ ಸರಕಾರಕ್ಕೆ ಸಹನೀಯವಾಗುತ್ತಿಲ್ಲ. ಆದುದರಿಂದ, ರಾಜ್ಯದ ಮೇಲೆ ಆರ್ಥಿಕ ಒತ್ತಡವನ್ನು ಹಾಕಿ, ತನ್ನ ಯೋಜನೆಗಳಿಂದ ಹಿಂದೆ ಸರಿಯುವಂತೆ ಮಾಡುವುದು ಕೇಂದ್ರದ ಹುನ್ನಾರವಾಗಿದೆ. ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಹಮ್ಮಿಕೊಳ್ಳದೇ ಇದ್ದಿದ್ದರೆ, ಈ ಬಾರಿ ಗ್ರಾಮೀಣ ಪ್ರದೇಶದ ರೈತರ ಆತ್ಮಹತ್ಯೆಗಳಲ್ಲಿ ತೀವ್ರ ಹೆಚ್ಚಳವಾಗುತ್ತಿತ್ತು. ಬರೇ ರೈತರೆಂದಲ್ಲ, ಇತರ ವಲಯಗಳಲ್ಲೂ ಆತ್ಮಹತ್ಯೆಗಳು ಅಧಿಕವಾಗುವ ಅಪಾಯವಿತ್ತು. ಈ ನಿಟ್ಟಿನಲ್ಲಿ ನೋಟುನಿಷೇಧ, ಲಾಕ್‌ಡೌನ್‌ನಂತಹ ನಂಜು ಗಾಯಗಳಿಗೆ ಗ್ಯಾರಂಟಿ ಯೋಜನೆ ಮುಲಾಮಿನ ಪಾತ್ರವನ್ನು ವಹಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗೆಯೇ, ಕೇಂದ್ರ ಸರಕಾರ ಯಾವ ಕಾರಣಕ್ಕೂ ನಬಾರ್ಡ್‌ನಿಂದ ನೀಡುವ ಹಣದಲ್ಲಿ ಇಳಿಕೆ ಮಾಡಬಾರದು. ಬದಲಿಗೆ ಅದನ್ನು ಹೆಚ್ಚಿಸಬೇಕು. ಇದು ರೈತರ ಆತ್ಮಹತ್ಯೆಯನ್ನು ತಡೆಯುವಲ್ಲಿ ಭಾರೀ ನೆರವನ್ನು ನೀಡಬಹುದು. ಈ ನಿಟ್ಟಿನಲ್ಲಿ, ರಾಜ್ಯದ ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಿ, ನಾಡಿನ ರೈತರ ಮೇಲಿನ ತಮ್ಮ ಪ್ರೀತಿಯನ್ನು ಪ್ರಕಟ ಪಡಿಸಬೇಕು. ಮಾತುಗಳು ಕೃತಿಗಿಳಿಯಲು ಇದು ಸೂಕ್ತ ಸಮಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News