ನಕ್ಸಲ್ ಮುಕ್ತವಾದಂತೆಯೇ, ಭಯಮುಕ್ತವಾಗಲಿ ಕರ್ನಾಟಕ

Update: 2025-01-09 06:15 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊನೆಗೂ ರಾಜ್ಯದ ನಾಲ್ವರು, ಹೊರ ರಾಜ್ಯದ ಇಬ್ಬರು ನಕ್ಸಲರು ಮುಖ್ಯಮಂತ್ರಿಯ ಸಮ್ಮುಖದಲ್ಲಿ ಶಸ್ತ್ರ ತ್ಯಜಿಸಿದ್ದು, ಮುಖ್ಯವಾಹಿನಿಗೆ ಮರಳಿದ್ದಾರೆ. ಈ ಮೂಲಕ ಕರ್ನಾಟಕ ರಾಜ್ಯ ನಕ್ಸಲ್ ಮುಕ್ತ ರಾಜ್ಯವಾಗಿ ಗುರುತಿಸಲ್ಪಟ್ಟಿದೆ. ನೆರೆಯ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ನಕ್ಸಲ್ ಚಳವಳಿ ಆಳವಾಗಿ ಬೇರಿಳಿಸುವಲ್ಲಿ ವಿಫಲವಾಗಿದೆ. ಅದಕ್ಕೆ ಬೇರೆ ಬೇರೆ ಸಾಮಾಜಿಕ, ರಾಜಕೀಯ ಕಾರಣಗಳಿವೆ. ಆಂಧ್ರದ ಪ್ರಭಾವವಿರುವ ಕೆಲವು ಭಾಗಗಳು ಮಾತ್ರ ನಕ್ಸಲ್ ಚಳವಳಿಗಾಗಿ ಗುರುತಿಸಲ್ಪಟ್ಟಿತ್ತು. ಜಮೀನ್ದಾರರ ತೀವ್ರ ಶೋಷಣೆ, ಜಾತೀಯತೆ ಇತ್ಯಾದಿಗಳಿಂದ ಬಳಲಿ ಬೆಂಡಾಗಿರುವ ಜನರಲ್ಲಿ ಕೆಲವೇ ಕೆಲವರು ಅನಿವಾರ್ಯ ಎನ್ನುವ ಸ್ಥಿತಿಯಲ್ಲಿ ಈ ಹಿಂಸಾತ್ಮಕ ಚಳವಳಿಗೆ ಜಾರಿದರು. ಅಂತಹ ಅನಿವಾರ್ಯ ಸ್ಥಿತಿಯನ್ನು ನಿರ್ಮಾಣ ಮಾಡಿರುವುದು ನಮ್ಮದೇ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಎನ್ನುವ ಎಚ್ಚರ ನಮ್ಮಲ್ಲೂ ಇರಬೇಕು. ನಕ್ಸಲ್ ಚಳವಳಿಯ ಪ್ರಭಾವಕ್ಕೆ ಸಿಲುಕಿ ಭೂಗತರಾದವರಲ್ಲಿ ತಳಸ್ತರದ ಬಡ ಹುಡುಗರೇ ಹೆಚ್ಚಿನವರು. ಇವರಲ್ಲಿ ದೊಡ್ಡ ಸಂಖ್ಯೆಯ ಹುಡುಗರು ವಿಶೇಷ ವಿದ್ಯಾಭ್ಯಾಸವನ್ನು ಕೂಡ ಹೊಂದಿರಲಿಲ್ಲ. ಕುದುರೆ ಮುಖ ಉದ್ಯಾನವನದಿಂದ ಎತ್ತಂಗಡಿ ಕಾರ್ಯಕ್ರಮ ಪಶ್ಚಿಮಘಟ್ಟದಲ್ಲಿ ನಕ್ಸಲ್ ಹೋರಾಟಕ್ಕೆ ಕುಮ್ಮಕ್ಕು ನೀಡಿತು. ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಸರಕಾರ ತೋರಿಸಿದ ಬೇಜವಾಬ್ದಾರಿತನ , ಅರಣ್ಯ ಭಾಗದಲ್ಲಿ ಬದುಕುತ್ತಿದ್ದ ಗಿರಿಜನರ ಮೇಲೆ ಅರಣ್ಯ ಸಿಬ್ಬಂದಿಯ ದೌರ್ಜನ್ಯ ಇವೆಲ್ಲವು ಹಿಂಸಾತ್ಮಕ ಹೋರಾಟಕ್ಕೆ ಮುನ್ನುಡಿ ಬರೆಯಿತು.

ಸಾಕೇತ್ ರಾಜನ್ ಅವರ ಹತ್ಯೆಯೊಂದಿಗೆ ಪಶ್ಚಿಮಘಟ್ಟದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಭೀಕರ ರೂಪವನ್ನು ಪಡೆಯಿತು. ಈ ಎನ್ಕೌಂಟರ್ ಬಳಿಕ, ಕರ್ನಾಟಕದ ಗಡಿ ಭಾಗದಲ್ಲಿ ಪೊಲೀಸರ ಮೇಲಿನ ಬರ್ಬರ ದಾಳಿಗೂ ಕಾರಣವಾಯಿತು. ಕರ್ನಾಟಕದ ಮಟ್ಟಿಗೆ, ಒಕ್ಕಲೆಬ್ಬಿಸುವುದರ ವಿರುದ್ಧದ ಹೋರಾಟ ಹಿಂಸೆಯ ರೂಪ ಪಡೆದದ್ದು ವ್ಯವಸ್ಥೆಗೆ ಅನುಕೂಲವನ್ನೇ ಮಾಡಿಕೊಟ್ಟಿತ್ತು. ಎನ್ಕೌಂಟರ್ ಹೆಸರಿನಲ್ಲಿ ಕೋವಿಯಿಂದಲೇ ಹೋರಾಟಗಾರರನ್ನು ಬಗ್ಗು ಬಡಿಯಲು ಸರಕಾರಕ್ಕೆ ಅನುಕೂಲವಾಯಿತು. ನಕ್ಸಲರ ಸಣ್ಣ ಪುಟ್ಟ ಹಿಂಸೆಯನ್ನೂ ಭೂತಗನ್ನಡಿಯಲ್ಲಿ ತೋರಿಸಿ, ತನ್ನ ಕೃತ್ಯಗಳನ್ನು ಪೊಲೀಸ್ ಪಡೆಗಳು ಸಮರ್ಥಿಸತೊಡಗಿದ್ದವು. ಒಕ್ಕಲೆಬ್ಬಿಸುವುದರ ವಿರುದ್ಧ ನಾಡಿನಲ್ಲಿ ಪ್ರಜಾಸತ್ತಾತ್ಮಕವಾಗಿ ಜನರನ್ನು ಒಟ್ಟು ಸೇರಿಸಿ ಆಂದೋಲನವನ್ನು ವಿಸ್ತರಿಸಿದ್ದರೆ ಅದು ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು ಮತ್ತು ಒಕ್ಕಲೆಬ್ಬಿಸುವುದು ಸರಕಾರಕ್ಕೆ ಕಷ್ಟವಾಗುತ್ತಿತ್ತು. ಬೆರಳೆಣಿಕೆಯ ಜನರು ಕೋವಿ ಕೈಗೆತ್ತಿಕೊಂಡಿರುವುದನ್ನೇ ನೆಪ ಮಾಡಿಕೊಂಡು ಕೂಂಬಿಂಗ್ ಹೆಸರಿನಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯಗಳನ್ನು ಮುಂದುವರಿಸಿತು. ಇದೇ ಸಂದರ್ಭದಲ್ಲಿ ‘ನಕ್ಸಲ್ ಪೀಡಿತ’ ಪ್ರದೇಶವೆಂದು ಆ ಭಾಗವನ್ನು ಘೋಷಿಸಿ ಕೆಲವು ಕಾಟಾಚಾರದ ಅಭಿವೃದ್ಧಿ ಕಾರ್ಯವನ್ನೂ ನಡೆಸತೊಡಗಿತ್ತು. ಎನ್ಕೌಂಟರ್ ಹೆಸರಿನಲ್ಲಿ ಸ್ಥಳೀಯ ಗಿರಿಜನ ಹುಡುಗರ ಹೆಣಗಳು ಬೀಳತೊಡಗಿದಂತೆಯೇ, ಅಧಿಕಾರಿಗಳು ಆದಿವಾಸಿಗಳ ಅಳಲಿಗೆ ಕಿವಿಯಾದವರಂತೆ ನಟಿಸಿದರು. ಜೊತೆಗೆ ಗಿರಿಜನರ ಮೇಲೆ ನಡೆಯುತ್ತಿರುವ ಅರಣ್ಯಾಧಿಕಾರಿಗಳ ದೌರ್ಜನ್ಯಗಳಿಗೆ ಸಣ್ಣ ಮಟ್ಟಿನ ಕಡಿವಾಣ ಬಿತ್ತು ಎನ್ನುವುದೂ ಸುಳ್ಳಲ್ಲ. ಇತ್ತೀಚೆಗಷ್ಟೇ ವಿಕ್ರಮ್ ಗೌಡ ಎನ್ನುವ ಆದಿವಾಸಿ ತರುಣನ ಎನ್ಕೌಂಟರ್ ಮತ್ತೆ ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸಿಹಾಕಿತು. ಆತನನ್ನು ಬಂಧಿಸುವ ಅವಕಾಶ ಪೊಲೀಸರಿಗಿದ್ದರೂ, ಕಾರಣವೇ ಇಲ್ಲದೆ ಪೊಲೀಸರು ನೇರವಾಗಿ ಗುಂಡು ಹಾರಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. ಕಾಡಿನಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ಬೆರಳೆಣಿಕೆಯ ನಕ್ಸಲ್ ತರುಣರನ್ನೇ ಮುಂದಿಟ್ಟುಕೊಂಡು ಪಶ್ಚಿಮ ಘಟ್ಟವನ್ನು ರಣರಂಗವಾಗಿಸುವುದು ಎಷ್ಟು ಸರಿ? ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿತ್ತು. ಇದೀಗ ಆ ಆರು ನಕ್ಸಲರೂ ಮುಖ್ಯವಾಹಿನಿಗೆ ಕಾಲಿಡುವ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ, ರಾಜ್ಯ ನಕ್ಸಲ್ ಮುಕ್ತವಾಗಿದೆ. ಆದರೆ, ಆದಿವಾಸಿಗಳು, ಗಿರಿಜನರು, ತಳಸ್ತರದ ಬಡವರು ಇನ್ನಾದರೂ ಅರಣ್ಯ ಸಿಬ್ಬಂದಿಯಿಂದ, ಪೊಲೀಸ್ ಪಡೆಗಳಿಂದ ನೆಮ್ಮದಿಯಾಗಿ ಬದುಕುವ ವಾತಾವರಣ ನಿರ್ಮಾಣವಾಗಲಿದೆಯೇ? ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಬೇಕಷ್ಟೇ. ರಾಜ್ಯ ನಕ್ಸಲರಿಂದ ಮುಕ್ತವಾಗುವುದು ಎಷ್ಟು ಮುಖ್ಯವೋ, ಆದಿವಾಸಿ ಜನರು ವ್ಯವಸ್ಥೆಯ ಭಯದಿಂದ ಮುಕ್ತವಾಗಿ ಬದುಕುವ ವಾತಾವರಣ ನಿರ್ಮಾಣವಾಗುವುದು ಕೂಡ ಅಷ್ಟೇ ಮುಖ್ಯ.

ಶರಣಾಗತರಾಗಿರುವ ಆರೂ ಜನರ ಹಿನ್ನೆಲೆಯನ್ನು ನಾವು ಗಮನಿಸಬೇಕಾಗಿದೆ. ಮುಂಡಗಾರು ಲತಾ, ಸುಂದರಿ ಕುತ್ಲೂರು ಸೇರಿದಂತೆ ಅಷ್ಟೂ ಜನರು ಅತ್ಯಂತ ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಸೇರಿದವರು. ಬಹುತೇಕ ತರುಣ, ತರುಣಿಯರು ಕೂಲಿ ಕೆಲಸವನ್ನು ಮಾಡುತ್ತಾ ಬದುಕು ಸವೆಸುತ್ತಿದ್ದವರು. ತಮ್ಮ ಕುಟುಂಬದ ಮೇಲೆ, ಮನೆಗಳ ಮೇಲೆ ಅಧಿಕಾರಿಗಳು, ಸರಕಾರ ಎಸಗಿದ ದೌರ್ಜನ್ಯಗಳನ್ನು ಪ್ರಶ್ನಿಸುತ್ತಾ, ಪ್ರತಿಭಟಿಸುತ್ತಾ ಅವರು ಹೋರಾಟದ ಕಣಕ್ಕೆ ಇಳಿದರು. ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತಿದ್ದ ಅವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ಜಡಿದು ಅವರು ತಲೆಮರೆಸಿಕೊಳ್ಳುವ ಸ್ಥಿತಿ ನಿರ್ಮಾಣ ಮಾಡಿರುವುದು ಕೂಡ ಅಧಿಕಾರಿಗಳೇ. ಅವರು ಮತ್ತು ಅವರ ಕುಟುಂಬದ ಮೇಲೆ ಅಧಿಕಾರಿಗಳು ಎಸಗಿದ ದೌರ್ಜನ್ಯದ ಮುಂದೆ, ಕೋವಿ ಹಿಡಿದು ಈ ತರುಣರು ಎಸಗಿದ ಹಿಂಸೆ ತೀರಾ ಅಲ್ಪ. ಇವರ್ಯಾರೂ ರಾಜಕೀಯ ದುರುದ್ದೇಶಗಳಿಗಾಗಿ ಅಥವಾ ಸ್ವಾರ್ಥ ಸಾಧನೆಗೆ, ಜನರನ್ನು ಲೂಟಿ ಮಾಡಲು ಕಾಡು ಸೇರಿಕೊಂಡವರಲ್ಲ. ಅವರು ಹಾದಿ ತಪ್ಪಲು ಸರಕಾರದ ಕೊಡುಗೆ ಬಹಳಷ್ಟಿದೆ. ಇದೀಗ ನಾಡಿಗೆ ಬಂದ ಅವರು ನೆಮ್ಮದಿಯಿಂದ ಬದುಕುವುದಕ್ಕೆ ಅವಕಾಶ ನೀಡಬೇಕು. ಈ ಮೂಲಕ, ಪಶ್ಚಿಮಘಟ್ಟದಲ್ಲಿ ಬದುಕುತ್ತಿರುವ ಉಳಿದ ಮಲೆಕುಡಿಯ ಯುವಕರಲ್ಲಿ ಸರಕಾರ ವಿಶ್ವಾಸವನ್ನು ತುಂಬಬೇಕು. ಮುಖ್ಯವಾಹಿನಿಗೆ ಸೇರಬಂದವರನ್ನು ನಾಡು ಅಷ್ಟೇ ಹೃದಯ ವೈಶಾಲ್ಯದಿಂದ ಸ್ವೀಕರಿಸದೇ ಇದ್ದರೆ, ಅವರು ನಾಡಿನಲ್ಲಿದ್ದೂ ಪ್ರತ್ಯೇಕವಾಗಿಯೇ ಉಳಿಯುತ್ತಾರೆ. ಈ ನಿಟ್ಟಿನಲ್ಲಿ ಸಮಾಜ ಅವರ ಜೊತೆಗೆ ನಿಲ್ಲಬೇಕು. ಮುಂದಿನ ದಿನಗಳಲ್ಲಿ ಯಾವ ಯುವಕರೂ ಹಿಂಸೆಯ ಕಡೆಗೆ ಮುಖ ಮಾಡಬಾರದು. ಪ್ರಜಾಸತ್ತಾತ್ಮಕ ಹೋರಾಟಗಳು ಬಲಪಡೆಯಬೇಕು.

ನಕ್ಸಲರ ಶರಣಾಗತಿಯನ್ನು ವ್ಯಂಗ್ಯವಾಡುತ್ತಿರುವ ಸಿ.ಟಿ. ರವಿ, ಸುನೀಲ್ ಕುಮಾರ್ರಂತಹ ಬಿಜೆಪಿ ನಾಯಕರು ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ನಕ್ಸಲರು ಕೋವಿ ಹಿಡಿದು ಸಂಘಪರಿವಾರದ ಕಾರ್ಯಕರ್ತರಂತೆ ಬಡ ಗೋವು ವ್ಯಾಪಾರಿಗಳನ್ನು, ಗೋವು ಸಾಕುವ ರೈತರನ್ನು ಕೊಂದ, ದೋಚಿದ ಉದಾಹರಣೆಗಳಿಲ್ಲ. ನಾಡಿನಲ್ಲಿದ್ದುಕೊಂಡೇ ಸಂಘಪರಿವಾರದ ಕಾರ್ಯಕರ್ತರೆಂದು ಗುರುತಿಸಲ್ಪಟ್ಟಿರುವ ಕೆಲವು ದುಷ್ಕರ್ಮಿಗಳು ನಾಡಿಗೆ ಮಾಡಿರುವ ನಾಶನಷ್ಟಕ್ಕೆ ಹೋಲಿಸಿದರೆ ಈ ದಾರಿ ತಪ್ಪಿದ ಗಿರಿಜನ ತರುಣರು ಅಷ್ಟು ಅಪಾಯಕಾರಿಯಾಗಿ ಗುರುತಿಸಿಕೊಂಡಿಲ್ಲ. ನಾಡಿನಲ್ಲಿದ್ದುಕೊಂಡೇ ದ್ವೇಷಕ್ಕೆ, ಕೋಮುಗಲಭೆಗಳಿಗೆ ಕರೆ ನೀಡುವ ದುಷ್ಕರ್ಮಿಗಳಿಗಿಂತ ಈ ತರುಣರು ಎಷ್ಟೋ ವಾಸಿ. ಕನಿಷ್ಠ ಹಿಂಸೆ ತಪ್ಪು ಎನ್ನುವುದು ಅವರಿಗೆ ಕೊನೆಯಘಳಿಗೆಯಲ್ಲಾದರೂ ಮನವರಿಕೆಯಾಗಿದೆ. ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶರಣಾಗಿದ್ದಾರೆ. ಆದರೆ ಹಿಂದುತ್ವದ ಹೆಸರು ಹೇಳುತ್ತಾ ಶ್ರೀಸಾಮಾನ್ಯರ ಮೇಲೆ ದಾಳಿ ನಡೆಸುವ ಸಂಘಪರಿವಾರದ ದುಷ್ಕರ್ಮಿಗಳನ್ನು ಶರಣಾಗುವಂತೆ ಮಾಡುವ ಎದೆಗಾರಿಕೆ ಬಿಜೆಪಿ ನಾಯಕರಿಗಿದೆಯೆ? ಬಾಗಲಕೋಟೆಯಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಶಸ್ತ್ರಾಸ್ತ್ರ ತರಬೇತಿ ಪಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿವೆ. ಇವರ ಬಗ್ಗೆ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದ ಬಿಜೆಪಿ ಮುಖಂಡರಿಗೆ ಈ ದಾರಿ ತಪ್ಪಿದ ಅಮಾಯಕ ಗಿರಿಜನ ಹುಡುಗರು ಹಿಂಸೆ ತೊರೆದು ಮುಖ್ಯವಾಹಿನಿಗೆ ಕಾಲಿಡುತ್ತಿರುವುದರ ಬಗ್ಗೆ ಯಾಕೆ ಅಸಹನೆ? ನಿಜಕ್ಕೂ ಹಿಂಸೆಯನ್ನು ಬೆಂಬಲಿಸುತ್ತಿರುವವರು ಯಾರು?

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News