ಯುದ್ಧ ಭೂಮಿಯಲ್ಲಿ ಮಕ್ಕಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಂಗಳ ಗ್ರಹ ಮನುಷ್ಯರು ಬದುಕುವುದಕ್ಕೆ ಯೋಗ್ಯವೇ ಎನ್ನುವ ಕುರಿತಂತೆ ಅಧ್ಯಯನ ನಾವು ನಡೆಸುತ್ತಿದ್ದೇವೆ. ಇದೇ ಹೊತ್ತಿನಲ್ಲಿ ಈ ಭೂಮಿ ಮನುಷ್ಯರು ಬದುಕುವುದಕ್ಕೆ ಅಯೋಗ್ಯವಾಗುತ್ತಿರುವುದನ್ನು ಮರೆತಿದ್ದೇವೆ. ಇತ್ತೀಚಿನ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಈ ಜಗತ್ತು ಮಕ್ಕಳ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿದೆ. ಜಗತ್ತಿನಾದ್ಯಂತ 100 ಕೋಟಿಗೂ ಅಧಿಕ ಮಂದಿ ಮಕ್ಕಳು ವಿವಿಧ ರೀತಿಯ ಹಿಂಸಾಚಾರಗಳಿಗೆ ತುತ್ತಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿ ಬಹಿರಂಗ ಪಡಿಸಿದೆ. ಮಕ್ಕಳ ಮೇಲೆ ಹಿಂಸಾಚಾರ, ಲೈಂಗಿಕ ದೌರ್ಜನ್ಯ, ಬೆದರಿಕೆ, ಮಾನಸಿಕ ದೌರ್ಜನ್ಯದಂತಹ ಕೃತ್ಯಗಳು ಹೆಚ್ಚುತ್ತಿರುವುದರ ಬಗ್ಗೆ ವರದಿ ಗಮನ ಸೆಳೆದಿದೆ. ಜಗತ್ತಿನಲ್ಲಿ ಪ್ರತೀ ಹದಿಮೂರು ನಿಮಿಷಗಳಿಗೊಮ್ಮೆ ಒಂದು ಮಗು ಅಥವಾ ಬಾಲಕ ಕೊಲೆಯಾಗುತ್ತಿದ್ದು, ಪ್ರತೀ ವರ್ಷ ತಪ್ಪಿಸಲು ಸಾಧ್ಯವಿರುವಂತಹ ಸುಮಾರು 40 ಸಾವಿರದಷ್ಟು ಸಾವುಗಳು ಸಂಭವಿಸುತ್ತಿರುವ ಆಘಾತಕಾರಿ ಅಂಶವನ್ನು ವರದಿ ಜಗತ್ತಿನ ಮುಂದಿಟ್ಟಿದೆ. ದೌರ್ಜನ್ಯಕ್ಕೊಳಗಾದ ಮಕ್ಕಳ ಪೈಕಿ ಅರ್ಧಾಂಶದಷ್ಟು ಮಂದಿ ಮಾತ್ರವೇ ತಮ್ಮ ಹಿಂಸಾಚಾರದ ಅನುಭವವನ್ನು ಹಂಚಿಕೊಳ್ಳುತ್ತಾರೆ ಮತ್ತು ಇವರ ಪೈಕಿ ಎಲ್ಲರಿಗೂ ನೆರವಿನ ಭಾಗ್ಯ ಸಿಗುವುದಿಲ್ಲ. ತಮ್ಮ ದೌರ್ಜನ್ಯಗಳನ್ನು ಹಂಚಿಕೊಂಡವರಲ್ಲೂ ಶೇ. 10 ರಷ್ಟು ಮಕ್ಕಳಿಗಷ್ಟೇ ತಕ್ಷಣದ ನೆರವು ಸಿಗುತ್ತದೆ. ಉಳಿದವರು ಈ ದೌರ್ಜನ್ಯಗಳ ಗಾಯಗಳೊಂದಿಗೇ ಬೆಳೆಯಬೇಕು. ವಿಪರ್ಯಾಸವೆಂದರೆ, ಇಂತಹ ದೌರ್ಜನ್ಯಗಳು ಬರೇ ಬೀದಿಬದಿಯ ಅಥವಾ ಯುದ್ಧ, ಗಲಭೆ ಪೀಡಿತ ಪ್ರದೇಶಗಳಲ್ಲಿರುವ ಮಕ್ಕಳ ಮೇಲೆ ಮಾತ್ರ ನಡೆಯುತ್ತಿರುವುದಲ್ಲ. ಪ್ರತೀ ಐದು ಮಕ್ಕಳ ಪೈಕಿ ಮೂವರು ತಮ್ಮ ಮನೆಗಳಲ್ಲೇ ದೈಹಿಕದೌರ್ಜನ್ಯಗಳನ್ನು ಅನುಭವಿಸುತ್ತಿರುತ್ತಾರೆ ಮತ್ತು ಶೇ. 25ರಿಂದ ಶೇ. 50ರಷ್ಟು ಮಕ್ಕಳು ಮನೆಗಳಲ್ಲೇ ಆತಂಕದ ಸ್ಥಿತಿಯನ್ನು ಎದುರಿಸುತ್ತಿರುತ್ತಾರೆ.
ಜಗತ್ತಿನಲ್ಲಿ ಪ್ರತೀ 10 ಮಕ್ಕಳ ಪೈಕಿ 9 ಮಂದಿ ದೈಹಿಕ ದಂಡನೆ ಹಾಗೂ ಲೈಂಗಿಕ ಕಿರುಕುಳದೊಂದಿಗೆ ಬಾಲ್ಯವನ್ನು ಎದುರಿಸುವ ಅನಿವಾರ್ಯತೆಯಿದೆ. ಯಾಕೆಂದರೆ ಇವರು ಬದುಕುತ್ತಿರುವ ದೇಶದಲ್ಲಿ ಇಂತಹ ಹಿಂಸೆಗಳನ್ನು ಕಾನೂನಾತ್ಮಕವಾಗಿ ನಿಷೇಧಿಸುವ ಯಾವುದೇ ವ್ಯವಸ್ಥೆಗಳಿಲ್ಲ. ಇದು ಮಕ್ಕಳ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿವೆ. ಬಾಲ್ಯದಲ್ಲಿ ಸೂಕ್ತ ಆಹಾರಗಳು ಸಿಗದೇ ಅಪೌಷ್ಟಿಕತೆಯಿಂದ ಸೂಕ್ತ ಬೆಳವಣಿಗೆಗಳಿಲ್ಲದ ಮಕ್ಕಳು ಒಂದೆಡೆಯಾದರೆ, ಇಂತಹ ದೌರ್ಜನ್ಯಗಳಿಂದ ಮಾನಸಿಕ ಅನಾರೋಗ್ಯದ ಜೊತೆಗೇ ಬೆಳೆಯುವ ಮಕ್ಕಳ ಸಂಖ್ಯೆ ಜಗತ್ತಿನಲ್ಲಿ ಹೆಚ್ಚುತ್ತಿದೆ. ಬಾಲ್ಯ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ಮನುಷ್ಯನ ವ್ಯಕ್ತಿತ್ವ ನಿರ್ಮಾಣವಾಗುವುದು ಬಾಲ್ಯದ ತಳಹದಿಯಲ್ಲಿ. ಬಾಲ್ಯದಲ್ಲಿ ದೌರ್ಜನ್ಯಗಳನ್ನು ಎದುರಿಸುತ್ತಾ ಬೆಳೆದವರು ಹದಿ ಹರೆಯದಲ್ಲಿ ಆತಂಕ, ಖಿನ್ನತೆ, ಅಭದ್ರತೆ, ಮಾದಕ ವ್ಯಸನಗಳಂತಹ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಅನುಮತಿ ನೀಡುವ ಮೂಲಕ ಜಗತ್ತು ಎಂತಹ ಆತಂಕಕಾರಿ ಭವಿಷ್ಯವನ್ನು ಕಟ್ಟಲು ಮುಂದಾಗಿದೆ ಎನ್ನುವುದನ್ನು ನಾವು ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ಈ ಕಾರಣದಿಂದಲೇ, ನವೆಂಬರ್ ತಿಂಗಳ ಆರಂಭದಲ್ಲಿ ಕೊಲಂಬಿಯಾದ ಬೊಗೋಟಾದಲ್ಲಿ ನಡೆದ ಮಹತ್ವದ ಅಧಿವೇಶನದಲ್ಲಿ 100ಕ್ಕೂ ಅಧಿಕ ಸರಕಾರಗಳು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಐತಿಹಾಸಿಕ ನಿರ್ಣಯವೊಂದನ್ನು ಅಂಗೀಕರಿಸಿದ್ದವು.
ಒಂದೆಡೆ ಮಕ್ಕಳ ಮೇಲೆ ದೌರ್ಜನ್ಯಗಳು ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ, ಇಸ್ರೇಲ್ ಕಳೆದ ಎರಡು ವರ್ಷಗಳಿಂದ ಫೆಲೆಸ್ತೀನ್‌ನ ಸಹಸ್ರಾರು ಮಕ್ಕಳನ್ನು ಕೊಂದು ಹಾಕಿದೆ. ಅಸಹಾಯಕ ಮಹಿಳೆಯರೂ ಈ ಯುದ್ಧದ ಪರಿಣಾಮವನ್ನು ಅನುಭವಿಸಿದ್ದಾರೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಪರೋಕ್ಷವಾಗಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಭಾಗವೇ ಆಗಿರುತ್ತದೆ. ಬಾಲ್ಯದಲ್ಲಿ ಮಕ್ಕಳ ಪಾಲಿಗೆ ತಾಯಂದಿರೇ ಆಸರೆಯಾಗಿರುತ್ತಾರೆ. ಗರ್ಭಿಣಿಯರು ಅನಾರೋಗ್ಯಕ್ಕೀಡಾದರೆ ಅದರಿಂದ ಮಹಿಳೆಯಷ್ಟೇ ಅಲ್ಲ, ಮಗುವಿನ ಆರೋಗ್ಯದ ಮೇಲೂ ದುಷ್ಪರಿಣಾಮವಾಗುತ್ತದೆ. ಗರ್ಭದಿಂದಲೇ ತಾಯಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಮಕ್ಕಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ತಾಯಂದಿರ ಅಪೌಷ್ಟಿಕತೆ, ರಕ್ತಹೀನತೆಗೆ ನೇರವಾಗಿ ಬಲಿಯಾಗುವುದು ಹುಟ್ಟುವ ಶಿಶು. ಭಾರತದಲ್ಲಿ ಹೆಚ್ಚುತ್ತಿರುವ ಐದು ವರ್ಷದೊಳಗಿನ ಮಕ್ಕಳ ಸಾವು, ಮಕ್ಕಳ ಕುಂಠಿತ ಬೆಳವಣಿಗೆಯ ಹಿಂದೆ ತಾಯಂದಿರ ಅಪೌಷ್ಟಿಕತೆ ಮಹತ್ತರ ಪಾತ್ರವಹಿಸಿದೆ ಎಂದು ವರದಿಗಳು ಹೇಳುತ್ತವೆ. ಹೀಗಿರುವಾಗ, ಯುದ್ಧ ಪೀಡಿತ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ನೇರವಾಗಿ ಮಕ್ಕಳ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಅಂಶವನ್ನು ಜಗತ್ತು ಗಮನಿಸಬೇಕು. ಒಂದೆಡೆ ಮಕ್ಕಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುತ್ತಲೇ ಇಸ್ರೇಲ್‌ನಂತಹ ಪುಂಡ ದೇಶಗಳು ದುರ್ಬಲ ದೇಶಗಳ ಮೇಲೆ ಎಸಗುವ ದೌರ್ಜನ್ಯಗಳಿಗೆ ಮೌನ ಸಮ್ಮತಿ ವ್ಯಕ್ತಪಡಿಸಿದರೆ, ಜಗತ್ತು ಮಕ್ಕಳ ಪರವಾಗಿ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳು ವ್ಯರ್ಥವಾಗಿ ಬಿಡುತ್ತವೆ.
ಭಾರತವೂ ಮಕ್ಕಳು ಮತ್ತು ಮಹಿಳೆಯರ ಪಾಲಿಗೆ ಅಪಾಯಕಾರಿ ದೇಶವಾಗಿಯೇ ಗುರುತಿಸಲ್ಪಡುತ್ತಿದೆ. ಭಾರತದಲ್ಲಿ ಹೆಚ್ಚುತ್ತಿರುವ ಗಲಭೆಗಳು, ಹಿಂಸಾಚಾರಗಳ ನೇರ ಬಲಿಪಶುಗಳು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸೆ, ದೌರ್ಜನ್ಯಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅವರ ಮೇಲೆ ಸಾಮೂಹಿಕ ಅತ್ಯಾಚಾರಗಳು ಎಸಗಿದ ಪ್ರಕರಣಗಳು ದೇಶದ ಮಾನವನ್ನು ವಿಶ್ವದ ಮುಂದೆ ಹರಾಜಿಗಿಟ್ಟವು. ಮಹಿಳೆಯರಿಗೆ ದೇವತೆಯ ಸ್ಥಾನ ಕಲ್ಪಿಸಿದ ಭಾರತದಲ್ಲೇ ಮಹಿಳೆಯರ ಮೇಲೆ ಇಂತಹ ಅಮಾನವೀಯ ಅತ್ಯಾಚಾರಗಳು ನಡೆಯುತ್ತಿರುವುದು ವಿಪರ್ಯಾಸವಾಗಿದೆ. ಮಣಿಪುರದಲ್ಲಿ ಸಾವಿರಾರು ಮಕ್ಕಳು ನಿರಾಶ್ರಿತ ಶಿಬಿರಗಳಲ್ಲಿ ವಾಸ ಮಾಡುತ್ತಿದ್ದಾರೆ. ಶಿಬಿರಗಳಲ್ಲಿ ಅವರ ಮೇಲೆ ನಡೆಯುತ್ತಿರುವ ಬೇರೆ ಬೇರೆ ಹಿಂಸೆಗಳು, ಲೈಂಗಿಕ ದೌರ್ಜನ್ಯಗಳು ವರದಿಯಾಗುವುದೇ ಇಲ್ಲ. ಇಂತಹ ಸ್ಥಿತಿಯನ್ನು ಅನುಭವಿಸಿದ ಮಕ್ಕಳು ಬೆಳೆದು ಭವಿಷ್ಯದಲ್ಲಿ ಮಣಿಪುರವನ್ನು ಯಾವ ದಿಕ್ಕಿಗೆ ಮುನ್ನಡೆಸಬಹುದು? ಸೇನೆಯ ಕೋವಿಯ ತುದಿಯಲ್ಲಿ ನಲುಗುತ್ತಿರುವ ಕಾಶ್ಮೀರದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಹಸಿವು, ಬಡತನದ ಸಂತ್ರಸ್ತರಾಗಿ ಮಕ್ಕಳೇ ಮುಂಚೂಣಿಯಲ್ಲಿದ್ದಾರೆ. ಅನಾರೋಗ್ಯದ ಜೊತೆ ಜೊತೆಗೆ ಬೆಳೆಯುವ ಮಕ್ಕಳು ರೋಗ ಪೀಡಿತ ಭವಿಷ್ಯವನ್ನಷ್ಟೇ ಜಗತ್ತಿಗೆ ಉಡುಗೊರೆಯಾಗಿ ನೀಡಬಲ್ಲರು. ನಮ್ಮ ಮಕ್ಕಳನ್ನು ನಾವು ಕಾಪಾಡಲು ವಿಫಲವಾದರೆ ಜಗತ್ತಿನ ಭವಿಷ್ಯವನ್ನು ಕಾಪಾಡಲು ವಿಫಲವಾದಂತೆಯೇ ಸರಿ. ಈ ನಿಟ್ಟಿನಲ್ಲಿ ಮಕ್ಕಳು ಬದುಕಲು ಯೋಗ್ಯವಾದ ಜಗತ್ತನ್ನು ನಿರ್ಮಾಣ ಮಾಡುವಲ್ಲಿ ನಾವು ಇನ್ನಾದರೂ ಪ್ರಾಮಾಣಿಕ ಹೆಜ್ಜೆಗಳನ್ನು ಇಡಬೇಕಾಗಿದೆ.