ಸಂಭಲ್ ಹಿಂಸಾಚಾರ: ನ್ಯಾಯ ವ್ಯವಸ್ಥೆಯ ಪಾತ್ರವೆಷ್ಟು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಶಾಂತವಾಗಿ ಮಲಗಿದ್ದ ಮಗುವಿನ ಪಾದಕ್ಕೆ ಚೂರಿಯಿಂದ ಚುಚ್ಚಿ, ಬಳಿಕ ಚೀರಾಡುತ್ತಿದ್ದ ಮಗುವಿನ ಗಾಯಕ್ಕೆ ತಾನೇ ಮುಲಾಮು ಹಚ್ಚಲು ಹೊರಟಂತಾಗಿದೆ ನ್ಯಾಯ ವ್ಯವಸ್ಥೆಯ ನಡೆಗಳು. ಉತ್ತರ ಪ್ರದೇಶದ ಸಂಭಲ್‌ನಲ್ಲಿ ಪುರಾತನ ಮಸೀದಿಯೊಂದಕ್ಕೆ ಸಂಬಂಧಿಸಿ ದುರುದ್ದೇಶದಿಂದ ಹಾಕಿದ ಅರ್ಜಿಗೆ ಸ್ಪಂದಿಸಿ ತರಾತುರಿಯಿಂದ ಸರ್ವೇ ನಡೆಸಲು ಆದೇಶ ನೀಡಿ ಇಡೀ ಪ್ರದೇಶವನ್ನು ಹಿಂಸೆಗೆ ತಳ್ಳಿದ ಹೆಗ್ಗಳಿಕೆ ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಬೇಕು. ‘ಸುಮಾರು 500 ವರ್ಷಗಳ ಹಿಂದಿನ ಮಸೀದಿಯ ಜಾಗದಲ್ಲಿ ದೇವಸ್ಥಾನವಿತ್ತು. ಬಾಬರ್ ಇಲ್ಲಿರುವ ದೇವಸ್ಥಾನವನ್ನು ಒಡೆದು ಮಸೀದಿಯನ್ನು ನಿರ್ಮಿಸಿದ’ ಎನ್ನುವ ಬೀಸು ಹೇಳಿಕೆಯ ಅರ್ಜಿಯನ್ನೇ ಗಂಭೀರವಾಗಿ ಸ್ವೀಕರಿಸಿ ತಕ್ಷಣವೇ ಸರ್ವೇ ನಡೆಸಲು ನ್ಯಾಯಾಲಯ ಆದೇಶ ನೀಡಿದೆ. 500 ವರ್ಷಗಳ ಹಿಂದೆ ನಡೆದಿದೆ ಎನ್ನುವ ಘಟನೆಯನ್ನು ಮುಂದಿಟ್ಟುಕೊಂಡು ನ್ಯಾಯಾಲಯ ಸರ್ವೇ ನಡೆಸಲು ನೀಡಿರುವ ಆದೇಶ ಸಂವಿಧಾನ ವಿರೋಧಿಯಾದದ್ದು ಮಾತ್ರವಲ್ಲ, ರಾಜಕೀಯ ದುರುದ್ದೇಶಗಳಿಂದ ಕೂಡಿದ್ದು ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗಿ ಬಿಡುತ್ತದೆ. 1991ರ ಧಾರ್ಮಿಕ ಆರಾಧನಾ ಕಾಯ್ದೆಯ ಪ್ರಕಾರ 1947ರಿಂದ ಅಸ್ತಿತ್ವದಲ್ಲಿರುವ ಆರಾಧನಾ ಸ್ಥಳಗಳಲ್ಲಿ ಯಾವುದೇ ಹಸ್ತಕ್ಷೇಪ ನಡೆಸುವಂತಿಲ್ಲ. ಹೀಗಿದ್ದರೂ, ಅಲ್ಲಿ ಆತುರಾತುರವಾಗಿ ಸಮೀಕ್ಷೆ ನಡೆಸಲು ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿದಾರರು ಸಲ್ಲಿಸಿದ ದಾಖಲೆಗಳಾದರೂ ಏನು ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರ ದೊರಕುವುದಿಲ್ಲ.ಯಾವುದೋ ಕಾಗಕ್ಕ ಗುಬ್ಬಕ್ಕ ಕತೆಯನ್ನು ಹಿಡಿದುಕೊಂಡು ಯಾವನೋ ಒಬ್ಬ ನ್ಯಾಯಾಲಯದ ಮೆಟ್ಟಿಲನ್ನೇರಿದರೆ, ಆ ಕತೆಗೆ ಬೇಕಾದ ಸಾಕ್ಷ್ಯಗಳು ಅಲ್ಲಿ ಸಿಗುತ್ತವೆಯೋ ಹುಡುಕಿ ಎಂದು ಆದೇಶ ನೀಡುವುದು ನ್ಯಾಯದ ಅಪಹಾಸ್ಯವಾಗಿದೆ. ನ್ಯಾಯಾಲಯ ಆದೇಶ ನೀಡಿದ ಬೆನ್ನಿಗೇ ಪೊಲೀಸರ ನೇತೃತ್ವದಲ್ಲಿ ಅಧಿಕಾರಿಗಳು ಎರಡೆರಡು ಬಾರಿ ಸಮೀಕ್ಷೆಗೆ ಮುಂದಾಗಿ ಸ್ಥಳೀಯರನ್ನು ಪ್ರಚೋದಿಸಲು ಗರಿಷ್ಠ ಪ್ರಯತ್ನವನ್ನು ನಡೆಸಿ ಯಶಸ್ವಿಯಾಗಿದ್ದಾರೆ. ನ್ಯಾಯ ವ್ಯವಸ್ಥೆ, ರಾಜಕಾರಣಿಗಳು ಮತ್ತು ಸ್ಥಳೀಯ ಪೊಲೀಸರ ಜಂಟಿ ಪ್ರಯತ್ನದಲ್ಲಿ ಸಂಭಲ್ ಪ್ರದೇಶ ಹಿಂಸಾಗ್ರಸ್ತವಾಯಿತು ಮಾತ್ರವಲ್ಲ ಏಳು ಮಂದಿ ಅಮಾಯಕರು ಗುಂಡಿಗೆ ಬಲಿಯಾಗಬೇಕಾಯಿತು. ಇದೀಗ ಸುಪ್ರೀಂಕೋರ್ಟ್ ಸ್ಥಳೀಯ ವಿಚಾರಣಾ ನ್ಯಾಯಾಲಯದ ಕಲಾಪಗಳಿಗೆ ತಡೆ ನೀಡಿದ್ದು, ಶಾಂತಿ ಕಾಪಾಡಲು ಉ. ಪ್ರದೇಶ ಸರಕಾರಕ್ಕೆ ನಿರ್ದೇಶನವನ್ನು ನೀಡಿದೆ. ಸುಪ್ರೀಂಕೋರ್ಟ್‌ನ ಆದೇಶ ಹೊರಬಿದ್ದ ಬೆನ್ನಿಗೇ ಉತ್ತರ ಪ್ರದೇಶ ಸರಕಾರ ಏಳು ಮಂದಿಯ ಸಾವಿಗೆ ಕಾರಣವಾದ ಹಿಂಸಾಚಾರದ ತನಿಖೆಗೆ ಆಯೋಗವೊಂದನ್ನು ರಚನೆ ಮಾಡಿದೆ.
ವಿಪರ್ಯಾಸವೆಂದರೆ, ವಿಚಾರಣೆಗೆ ತಡೆ ನೀಡಿದ ಇದೇ ಸುಪ್ರೀಂಕೋರ್ಟ್, ಈ ಹಿಂದೆ ವಾರಣಾಸಿಯ ಜ್ಞಾನವ್ಯಾಪಿ ಮಸೀದಿಗೆ ಸಂಬಂಧಿಸಿ ಸಮೀಕ್ಷೆಗೆ ಆದೇಶ ನೀಡಿತ್ತು. ಅಂದು ನೀಡಿದ ತೀರ್ಪೇ ಸಂಭಲ್‌ನಲ್ಲಿ ಇಂದು ನಡೆಯುತ್ತಿರುವ ಅವಾಂತರಗಳಿಗೆ ಪರೋಕ್ಷ ಕಾರಣವಾಗಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ, ಯಾವಾಗ ಜ್ಞಾನ ವ್ಯಾಪಿ ಮಸೀದಿಯ ಸಮೀಕ್ಷೆಗೆ ಅಂದಿನ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರು ಆದೇಶವನ್ನು ನೀಡಿದರೋ, ಮುಂದಿನ ದಿನಗಳಲ್ಲಿ ಕಂಡ ಕಂಡ ಮಸೀದಿಗಳಲ್ಲೆಲ್ಲ ಸಂಘಪರಿವಾರದ ಮುಖಂಡರಿಗೆ ತಮ್ಮ ದೇವಸ್ಥಾನಗಳು ಗೋಚರಿಸತೊಡಗಿ, ಸಮೀಕ್ಷೆ ನಡೆಸಲು ನ್ಯಾಯಾಲಯಕ್ಕೆ ಅರ್ಜಿ ಹಾಕತೊಡಗಿದರು. ಸುಪ್ರೀಂಕೋರ್ಟ್ ಅಂದು ನೀಡಿದ ತೀರ್ಪಿನ ಬಲದ ಮೇಲೆಯೇ ಸಂಭಲ್‌ನಲ್ಲೂ ಸ್ಥಳೀಯ ನ್ಯಾಯಾಲಯ ಅನ್ಯಾಯದ ತೀರ್ಪನ್ನು ನೀಡಿತು. ಯಾವುದೇ ಮಸೀದಿಯ ಮೇಲೆ ಯಾರೇ ಹಕ್ಕು ಸಾಧಿಸಲು ಯಾವುದೇ ಅಧಿಕೃತ ದಾಖಲೆಗಳ ಅಗತ್ಯವೇ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾದದ್ದು, ಚಂದ್ರಚೂಡ್ ಅವರು ನೀಡಿರುವ ಆದೇಶದ ಬಳಿಕ. ಇದೀಗ ಅದೇ ಸುಪ್ರೀಂಕೋರ್ಟ್ ಬಳಿ, ಸಂಭಲ್‌ನಲ್ಲಿ ಸ್ಥಳೀಯ ನ್ಯಾಯಾಲಯದ ಅನ್ಯಾಯದ ಬಗ್ಗೆ ತಮ್ಮ ಅಳಲನ್ನು ತೋಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಭಲ್ ಹಿಂಸಾಚಾರದ ಬೆನ್ನಿಗೇ, ದೇಶದ ಖ್ಯಾತ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸಮಾಧಿ ಸ್ಥಳ ಅಥವಾ ಅಜ್ಮೀರ್ ಶರೀಫ್ ದರ್ಗಾವನ್ನು ಶಿವದೇವಾಲಯ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ರಾಜಸ್ಥಾನದ ನ್ಯಾಯಾಲಯವೊಂದು ಸಮ್ಮಿತಿಸಿದೆ ಮಾತ್ರವಲ್ಲ, ದರ್ಗಾ ಸಮಿತಿಗೆ ನೋಟಿಸ್ ಜಾರಿ ಮಾಡಿದೆ. ಶತಮಾನಗಳಿಂದ ಸರ್ವ ಧರ್ಮೀಯರನ್ನು ತನ್ನೆಡೆಗೆ ಸೆಳೆಯುತ್ತಾ ಸೌಹಾರ್ದ ಕೇಂದ್ರವಾಗಿ ಗುರುತಿಸಲ್ಪಡುತ್ತಿರುವ ಅಜ್ಮೀರ್ ದರ್ಗಾಕ್ಕೂ ದ್ವೇಷದ ಕಿಡಿ ಹಚ್ಚಲು ಸ್ವತಃ ನ್ಯಾಯಾಲಯವೇ ತುದಿಗಾಲಲ್ಲಿ ನಿಂತಿರುವುದು ವರ್ತಮಾನದ ದುರಂತವಾಗಿದೆ. ‘ಅಜ್ಮೀರ್ ದರ್ಗಾ ಒಂದಾನೊಂದು ಕಾಲದಲ್ಲಿ ಶಿವದೇವಾಲಯವಾಗಿತ್ತು. ಆದುದರಿಂದ ಅದನ್ನು ಮತ್ತೆ ಶಿವದೇವಾಲಯ ಎಂದು ಘೋಷಿಸಿ ಹಿಂದೂಗಳ ಕೈಗೆ ಒಪ್ಪಿಸಬೇಕು’ ಎಂದು ಹಿಂದೂ ಸೇನಾದ ರಾಷ್ಟ್ರಾಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವ ವಿಷ್ಣುಗುಪ್ತಾ ಎಂಬಾತ ಸಲ್ಲಿಸಿದ ಅರ್ಜಿಗೆ ಸ್ಪಂದಿಸಿ ನ್ಯಾಯಾಲಯ ದರ್ಗಾ ಸಮಿತಿಗೆ ಸಮನ್ಸ್ ನೀಡಿದೆ. ಈ ಹಿಂದೆಲ್ಲ ರಾಜಕಾರಣಿಗಳು ಹಚ್ಚಿದ ಬೆಂಕಿ ಕಿಡಿಯನ್ನು ನಂದಿಸಲು ಜನರು ನೀರಿಗೆಂದು ನ್ಯಾಯಾಲಯಕ್ಕೆ ಕೊಡ ಹಿಡಿದು ಧಾವಿಸುತ್ತಿದ್ದರೆ, ಇಂದು ನ್ಯಾಯಾಲಯವೇ ಬೆಂಕಿ ಹಚ್ಚಲು ಬೆಂಕಿ ಪೊಟ್ಟಣ ಹಂಚುವ ಕೆಲಸಕ್ಕೆ ಮುಂದಾಗಿದೆಯೇ ಎನ್ನುವ ಕಳವಳವನ್ನು ಜನಸಾಮಾನ್ಯರು ವ್ಯಕ್ತಪಡಿಸುವಂತಾಗಿದೆ.
ಸಂಭಲ್‌ನಲ್ಲಿ ಹಿಂಸಾಚಾರ ನಡೆಯಲು ನ್ಯಾಯವ್ಯವಸ್ಥೆಯು ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟರೆ, ಇತ್ತ ಹಿಂಸಾಚಾರ ನಡೆಯದಂತೆ ತಡೆಯಬೇಕಾದ ಕಾನೂನು ವ್ಯವಸ್ಥೆಯೇ ಹಿಂಸೆಗೆ ಪ್ರಚೋದನೆ ನೀಡಿ ಏಳು ಜನರ ಸಾವಿಗೆ ಕಾರಣವಾಯಿತು. ಸ್ಥಳೀಯರು ಪ್ರತಿಭಟನೆಗಿಳಿದಾಗ, ಅವರನ್ನು ತಡೆಯಲು ಯದ್ವಾತದ್ವಾ ಗೋಲಿಬಾರ್ ನಡೆಸಿದ ಪರಿಣಾಮವಾಗಿ ಸುಮಾರು ಏಳು ಮಂದಿ ಮೃತಪಟ್ಟರು. ಇದೀಗ ಮಸೀದಿ ಸರ್ವೇಗೆ ಸುಪ್ರೀಂಕೋರ್ಟ್‌ನಿಂದ ತಡೆ ಬಿದ್ದಿದೆಯಾದರೂ, ಪೊಲೀಸರ ಮೂಲಕವೇ ನಡೆದ ಸಾವು ನೋವುಗಳ ಹೊಣೆಯನ್ನು ಯಾರು ಹೊರಬೇಕು ಎನ್ನುವುದರ ಬಗ್ಗೆ ಗೊಂದಲವಿದೆ. ಸಾವುಗಳಿಗೆ ಪ್ರತಿಭಟನಾಕಾರರೇ ಹೊಣೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಅಕ್ರಮ ಬಂದೂಕುಗಳಿಂದ ಗುಂಡುಗಳು ಹಾರಿವೆ ಎನ್ನುವುದು ಅವರ ಸ್ಪಷ್ಟನೆ. ಆದರೆ ಸತ್ಯಾಸತ್ಯತೆ ಬಹಿರಂಗವಾಗಬೇಕಾದರೆ, ಸ್ವತಂತ್ರ ತನಿಖಾ ತಂಡವು ಈ ಬಗ್ಗೆ ವಿಚಾರಣೆ ನಡೆಸಬೇಕು. ಸದ್ಯಕ್ಕೆ ಸರಕಾರ ನೇಮಿಸಿರುವ ಆಯೋಗವು ಪೊಲೀಸರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಮಾನವ ಹಕ್ಕು ಸಂಘಟನೆಗಳು ಆರೋಪಿಸುತ್ತಿವೆ. ವಿಪರ್ಯಾಸವೆಂದರೆ, ಸಂಭಲ್‌ನಲ್ಲಿ ನಿಜಕ್ಕೂ ನಡೆದಿರುವುದು ಏನು ಎನ್ನುವುದನ್ನು ಮುಚ್ಚಿಡುವುದಕ್ಕೆ ಸ್ಥಳೀಯ ಆಡಳಿತ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿಯೇ , ಸಂಭಲ್‌ಗೆ ‘ಹೊರಗಿನವರ’ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಈ ಹೊರಗಿನವರೆಂದರೆ ಯಾರು? ಹಿಂಸಾಚಾರದ ವಾಸ್ತವಗಳನ್ನು ವರದಿ ಮಾಡಲು ಹೊರಟಿರುವ ಪತ್ರಕರ್ತರು, ಸಂತ್ರಸ್ತರ ಅಳಲುಗಳಿಗೆ ಕಿವಿಯಾಗಲು ಮುಂದಾಗಿರುವ ಸಾಮಾಜಿಕ ಕಾರ್ಯಕರ್ತರು, ಮಾನವ ಹಕ್ಕು ಹೋರಾಟಗಾರರು, ವಿರೋಧ ಪಕ್ಷದ ನಾಯಕರೇ ಸ್ಥಳೀಯ ಜಿಲ್ಲಾಡಳಿತದ ಪಾಲಿಗೆ ಹೊರಗಿನವರಾಗಿದ್ದಾರೆ. ಅಂದರೆ, ನಡೆದದ್ದೇನು ಎನ್ನುವುದು ಹೊರಜಗತ್ತಿಗೆ ತಿಳಿಯಬಾರದು ಎನ್ನುವ ದುರುದ್ದೇಶದಿಂದ ಈ ನಿಷೇಧವನ್ನು ಹೇರಲಾಗಿದೆ.
ಇದು ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಈ ಹಿಂದೆ ನಡೆದ ದಲಿತ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣವನ್ನು ನೆನಪಿಸುತ್ತಿದೆ. ಈ ಸಂದರ್ಭದಲ್ಲೂ ಸಂತ್ರಸ್ತರ ನಿವಾಸಕ್ಕೆ ಯಾರೂ ಭೇಟಿ ನೀಡದಂತೆ ಜಿಲ್ಲಾಡಳಿತ ದಿಗ್ಬಂಧನ ಹೇರಿತ್ತು. ಪತ್ರಕರ್ತರು, ರಾಜಕಾರಣಿಗಳನ್ನು ಸಂತ್ರಸ್ತರಿಂದ ದೂರ ಇಡಲಾಯಿತು. ಘಟನೆಯ ಬಗ್ಗೆ ವರದಿ ಮಾಡಲು ಹೋದ ಪತ್ರಕರ್ತರನ್ನು ಬಂಧಿಸಿ ಅವರ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲಿಸಿ ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವಂತೆ ಅಲ್ಲಿನ ಸರಕಾರ ಮಾಡಿತು. ಯಾಕೆಂದರೆ, ಹಾಥರಸ್‌ನಲ್ಲಿ ನಡೆದದ್ದೇನು ಎನ್ನುವುದು ಇಡೀ ದೇಶಕ್ಕೆ ಬಹಿರಂಗವಾಗುವುದು ಅಲ್ಲಿನ ಸರಕಾರಕ್ಕೆ ಬೇಡವಾಗಿತ್ತು. ಇದೀಗ ಸಂಭಲ್‌ನಲ್ಲಿ ನಡೆದಿರುವುದನ್ನೂ ಮುಚ್ಚಿ ಹಾಕಲು ಅಲ್ಲಿನ ಸರಕಾರ ನಡೆಸುತ್ತಿರುವ ಯತ್ನ, ಹಿಂಸಾಚಾರದ ಹಿಂದಿರುವ ಕೈಗಳು ಯಾವುದು ಎನ್ನುವುದನ್ನು ಮೇಲ್ನೋಟಕ್ಕೆ ಸ್ಪಷ್ಟ ಪಡಿಸುತ್ತದೆ.