ಬೆಲೆಯೇರಿಕೆ: ಪಕ್ಷಾತೀತ ಪ್ರತಿಭಟನೆಯೊಂದೇ ದಾರಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯ ಸರಕಾರದ ಬೆಲೆಯೇರಿಕೆ ನೀತಿಯ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಅಹೋರಾತ್ರಿ ಹೋರಾಟ, ಜನಾಕ್ರೋಶ ಯಾತ್ರೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಭಾರೀ ಆಘಾತವನ್ನು ನೀಡಿದ್ದಾರೆ. ರಾಜ್ಯದಲ್ಲಿ ಡೀಸೆಲ್ ಮೇಲೆ ತೆರಿಗೆ, ಹಾಲಿನ ಬೆಲೆಯೇರಿಕೆ, ವಿದ್ಯುತ್, ನೀರಿನ ದರ ಏರಿಕೆ ಇತ್ಯಾದಿಗಳನ್ನು ವಿರೋಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ, ರ್ಯಾಲಿಗೆ ಚಾಲನೆ ನೀಡಲಾಗಿತ್ತು. ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು ಇದನ್ನು ತುಂಬುವುದಕ್ಕಾಗಿ ಈ ಬೆಲೆಯೇರಿಕೆಯನ್ನು ಮಾಡಲಾಗುತ್ತಿದೆ ಎಂದು ಆರೋಪಿಸುತ್ತಾ ಗ್ಯಾರಂಟಿ ಯೋಜನೆಗಳ ಮೇಲೂ ಬಿಜೆಪಿಯು ಪರೋಕ್ಷ ದಾಳಿಯನ್ನು ನಡೆಸುತ್ತಿದೆ. ಇದೇ ಹೊತ್ತಿನಲ್ಲಿ, ಕೇಂದ್ರ ಸರಕಾರವು ಮನೆಬಳಕೆ ಎಲ್ಪಿಜಿಗೆ 50 ರೂ. ಏರಿಕೆ ಮಾಡಿದ್ದು, ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕವನ್ನು 2 ರೂಪಾಯಿಗೆ ಹೆಚ್ಚಳ ಮಾಡಿದೆ. ಬೆಲೆಯೇರಿಕೆಗಾಗಿ ರಾಜ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರು, ಗೃಹ ಬಳಕೆಯ ಎಲ್ಪಿಜಿಯ ಬೆಲೆಯೇರಿಕೆಗಾಗಿ ಕೇಂದ್ರದ ವಿರುದ್ಧವೂ ಪ್ರತಿಭಟನೆ ನಡೆಸಲಿದ್ದಾರೆಯೇ ಎಂದು ರಾಜ್ಯದ ಜನತೆ ಕೇಳುತ್ತಿದ್ದಾರೆ. ಬಿಜೆಪಿ ನಾಯಕರ ಮೌನ, ಬೆಲೆಯೇರಿಕೆಯ ಕುರಿತ ಅವರ ಆತಂಕ, ಆಕ್ರೋಶಗಳನ್ನು ನಗೆಪಾಟಲಿಗೀಡು ಮಾಡಿದೆ.
ಮನೆ ಬಳಕೆಯ ಅನಿಲ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರಕಾರವು 50 ರೂ.ಗೆ ಹೆಚ್ಚಿಸಿದ್ದು, ಪರಿಷ್ಕೃತ ದರವು ಮಂಗಳವಾರದಿಂದಲೇ ಅನ್ವಯವಾಗಿದೆ. ಅಡುಗೆ ಅನಿಲ ಬೆಲೆಯಲ್ಲಿನ ಹೆಚ್ಚಳವು ಉಜ್ವಲಾ ಯೋಜನೆಯ ಫಲಾನುಭವಿಗಳು ಮತ್ತು ಸಾಮಾನ್ಯ ಬಳಕೆದಾರರಿಗೆ ಅನ್ವಯಿಸಲಿದೆ. ಸಚಿವರ ಪ್ರಕಾರ ಬಡ ಮಹಿಳೆಯರಿಗಾಗಿರುವ ಉಜ್ವಲಾ ಬಳಕೆದಾರರಿಗೆ 14.2 ಕೆ. ಜಿ.ಯ ಪ್ರತೀ ಸಿಲಿಂಡರ್ ದರವು 500ರಿಂದ 550 ರೂ. ಆಗಲಿದ್ದು, ಇತರರಿಗೆ 853 ರೂ. ಆಗಲಿದೆ ಎಂದು ಸಚಿವಾಲಯ ತಿಳಿಸಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿದ್ದಂತೆಯೇ ‘ದೇಶಕ್ಕಾಗಿ ಸಬ್ಸಿಡಿಯನ್ನು ತ್ಯಾಗ ಮಾಡಿ’ ಎಂದು ಜನತೆಗೆ ಕರೆ ಕೊಟ್ಟರು. ಹಾಗೆ ತ್ಯಾಗ ಮಾಡಿದ ಸಬ್ಸಿಡಿಯ ಹಣದಿಂದ ಉಚಿತವಾಗಿ ಬಡವರಿಗೆ ಸಿಲಿಂಡರ್ ಹಂಚುವುದಾಗಿ ಭರವಸೆ ನೀಡಿದರು. ಇದನ್ನು ನಂಬಿದ ದೇಶದ ಕೋಟ್ಯಂತರ ಜನರು ತಮ್ಮ ಸಬ್ಸಿಡಿಯನ್ನು ತ್ಯಾಗ ಮಾಡಿ, ಬಡವರ ಮನೆ ಬೆಳಗಲು ಮುಂದಾದರು. ಆದರೆ ಇಂದು ನೋಡಿದರೆ, ಉಜ್ವಲಾ ಯೋಜನೆ ಸಂಪೂರ್ಣ ವಿಫಲವಾಗಿದೆ. ಒಂದೆಡೆ ಉಜ್ವಲಾ ಯೋಜನೆಯಲ್ಲಿ ಭಾರೀ ಅಕ್ರಮಗಳು ಕಂಡುಬಂದಿದ್ದರೆ, ಇನ್ನೊಂದೆಡೆ ಉಜ್ವಲಾ ಯೋಜನೆಯಡಿಯಲ್ಲಿಯೂ ಬಡವರು ದುಬಾರಿ ಬೆಲೆ ಕೊಟ್ಟು ಸಿಲಿಂಡರ್ ಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. 2010ಕ್ಕೆ ಮೊದಲು ಇಡೀ ದೇಶದ ಜನರೇ ಸಬ್ಸಿಡಿಯನ್ನು ಅನುಭವಿಸುತ್ತಿದ್ದರು. ಆಧಾರ್ ಲಿಂಕ್ ಮಾಡುವ ಮೂಲಕ ಸಬ್ಸಿಡಿಯನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಹಾಕುತ್ತೇವೆ ಎಂದು ನಂಬಿಸಿ ಹಂತಹಂತವಾಗಿ ಎಲ್ಲರ ಸಬ್ಸಿಡಿಗಳಿಗೂ ಕತ್ತರಿ ಹಾಕಲಾಯಿತು. ಇಂದು ಉಜ್ವಲಾ ಯೋಜನೆಯಲ್ಲಿ ಸಿಲಿಂಡರ್ ಪಡೆದವರು ದುಬಾರಿ ಬೆಲೆ ಕೊಟ್ಟು ಸಿಲಿಂಡರ್ ಕೊಳ್ಳಲಾಗದೆ ಮತ್ತೆ ಸೌದೆ ಒಲೆಯ ಮೊರೆ ಹೋಗುತ್ತಿದ್ದಾರೆ. ಸಬ್ಸಿಡಿ ಕಳೆದುಕೊಂಡ ಮಧ್ಯಮವರ್ಗದ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ.
ಇತ್ತ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯ ಕುರಿತಂತೆಯೂ ಕೇಂದ್ರ ಸರಕಾರ ನ್ಯಾಯಯುತವಾಗಿ ನಡೆದುಕೊಂಡು ಬಂದಿಲ್ಲ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಇಳಿಕೆಗನುಗುಣವಾಗಿ ದೇಶದಲ್ಲಿ ಪೆಟ್ರೋಲ್ ಬೆಲೆಯೇರಿಕೆ, ಇಳಿಕೆ ಆಗುತ್ತಿರುತ್ತದೆ. ಸರಕಾರ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳುತ್ತಲೇ ಲಾಕ್ಡೌನ್ ಹೊತ್ತಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾದಾಗ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿ ದೇಶದಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗದಂತೆ ನೋಡಿಕೊಂಡಿತು. ಅಂತರ್ರಾಷ್ಟ್ರೀಯ ಮಟ್ಟದ ಕಚ್ಚಾತೈಲದ ಬೆಲೆಗೆ ಹೋಲಿಸಿದರೆ, ಭಾರತದಲ್ಲಿ ಪೆಟ್ರೋಲ್ ಬೆಲೆಯನ್ನು ಈಗಲೂ ಇಳಿಕೆ ಮಾಡುವ ಅವಕಾಶ ಸರಕಾರಕ್ಕಿದೆ. ಆದರೆ ಅದಕ್ಕೆ ಪ್ರಯತ್ನಿಸದೆ, ಅಬಕಾರಿ ಸುಂಕವನ್ನು ಇನ್ನಷ್ಟು ಏರಿಕೆ ಮಾಡಿದೆ. ಕೇಂದ್ರ ಸರಕಾರದ ಮಟ್ಟಿಗೆ ಈ ಏರಿಕೆ ಒಂದು ಆರಂಭ ಮಾತ್ರ. ಈಗಾಗಲೇ ಅಮೆರಿಕ ಪ್ರತಿಸುಂಕವನ್ನು ಹಾಕಿರುವುದರಿಂದ ದೇಶದಲ್ಲಿ ಇನ್ನಷ್ಟು ಆರ್ಥಿಕ ಬಿಕ್ಕಟ್ಟುಗಳು ಎದುರಾಗುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಬೆಲೆ ಏರಿಕೆಗೆ ಕೇಂದ್ರ ಸರಕಾರ ಅಮೆರಿಕದ ಕಡೆಗೆ ಕೈತೋರಿಸಿ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಸಾಧ್ಯತೆಗಳಿವೆ.
ವಿಪರ್ಯಾಸವೆಂದರೆ, ಕೇಂದ್ರ ಸರಕಾರ ಯರ್ರಾಬಿರ್ರಿಯಾಗಿ ಬೆಲೆಯೇರಿಕೆ ಮಾಡುತ್ತಿದ್ದರೂ ಇದರ ವಿರುದ್ಧ ಜನಾಂದೋಲನ ರೂಪುಗೊಳ್ಳದೇ ಇರುವುದು. ಕೆಲವು ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದರೂ ಅವು ಪಕ್ಕಾ ರಾಜಕೀಯ ದುರುದ್ದೇಶವನ್ನು ಹೊಂದಿರುತ್ತದೆಯೇ ಹೊರತು, ಜನರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವುದಿಲ್ಲ. ಕೇಂದ್ರ ಸರಕಾರ ಬೆಲೆಯೇರಿಕೆ ಮಾಡಿದಾಗ ಮೌನವಾಗಿದ್ದುಕೊಂಡು ರಾಜ್ಯ ಸರಕಾರದ ಬೆಲೆಯೇರಿಕೆಯ ವಿರುದ್ಧ ಮಾತ್ರ ಬೀದಿಗಿಳಿದರೆ ಆ ಪ್ರತಿಭಟನೆಯನ್ನು ಜನರಾದರೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆಯೆ? ಈ ಹಿಂದೆಲ್ಲ ಜನರ ಆಕ್ರೋಶಗಳಿಗೆ ಎಡಪಂಥೀಯ ಒಲವುಳ್ಳ ಸಂಘಟನೆಗಳು ಧ್ವನಿಯಾಗುತ್ತಿದ್ದವು. ಆದರೆ ಇಂದು ಎಡಪಂಥೀಯ ಚಳವಳಿಗಳೂ ಧ್ವನಿ ಕಳೆದುಕೊಂಡಿವೆ. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಕಾನೂನಿನ ದುರುಪಯೋಗದ ಮೂಲಕ ಬಗ್ಗು ಬಡಿಯಲು ಸರಕಾರ ಭಾಗಶಃ ಯಶಸ್ವಿಯಾಗಿದೆ. ಮಧ್ಯಮವರ್ಗದ ಜನರು ಸರಕಾರದ ವಿರುದ್ಧ ಪ್ರತಿಭಟನೆಗಿಳಿದು ‘ದೇಶದ್ರೋಹಿ’ಗಳಾಗಿ ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಬುಲ್ಡೋಜರ್ಗಳು ಎಂದು ನಮ್ಮ ಮನೆಯನ್ನು ಧ್ವಂಸಗೊಳಿಸಲಿದೆಯೋ ಎನ್ನುವ ಆತಂಕ ಅವರನ್ನು ಕಾಡುತ್ತಿದೆ. ಒಂದೆಡೆ ಜನಧ್ವನಿಯನ್ನು ಬಗ್ಗು ಬಡಿಯುತ್ತಾ, ಇನ್ನೊಂದೆಡೆ ಜನವಿರೋಧಿ ನೀತಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ಹಾಗೆಯೇ
ವಕ್ಫ್ ಮಸೂದೆ, ಸಮಾನ ನಾಗರಿಕ ಸಂಹಿತೆ ಮೊದಲಾದವುಗಳನ್ನು ಮುಂದಿಟ್ಟು ಜನರನ್ನು ವಿಸ್ಮತಿಗೆ ತಳ್ಳುತ್ತಿದೆ. ನಾವಿಂದು ನಿಜಕ್ಕೂ ಚರ್ಚಿಸಬೇಕಾದ ವಿಷಯ ಬೆಲೆಯೇರಿಕೆ, ನಿರುದ್ಯೋಗ, ಹಣದುಬ್ಬರ, ಹೆಚ್ಚುತ್ತಿರುವ ಬಡತನ ಇತ್ಯಾದಿಗಳು. ಆದರೆ ಚರ್ಚೆಯಾಗುತ್ತಿರುವುದು ಬೇರೆಯದೇ ವಿಷಯಗಳು.
ದೇಶದಲ್ಲಿ ಹೆಚ್ಚುತ್ತಿರುವ ಬೆಲೆಯೇರಿಕೆ ಮತ್ತು ನಿರುದ್ಯೋಗಗಳನ್ನು ಮುಂದಿಟ್ಟುಕೊಂಡು ಜನರೇ ಆಂದೋಲನಗಳನ್ನು, ಪ್ರತಿಭಟನೆಗಳನ್ನು ನಡೆಸುವ ದಿನ ಹತ್ತಿರವಾಗಿದೆ. ಮೂಲಭೂತ ಅಗತ್ಯಗಳಿಗೆ ಸಂಬಂಧಿಸಿದ ವಿಷಯಗಳಿಗಾಗಿ ನಡೆಯುವ ಪ್ರತಿಭಟನೆಗಳಲ್ಲಿ ಜನರು ಪಕ್ಷ ಭೇದ ಮರೆತು ಒಂದಾಗಬೇಕಾಗಿದೆ. ಮುಖ್ಯ ಮಾಧ್ಯಮಗಳನ್ನು ನೆಚ್ಚಿಕೊಳ್ಳದೇ ಸಾಮಾಜಿಕ ಜಾಲತಾಣಗಳನ್ನು, ಯೂಟ್ಯೂಬ್ ಚಾನೆಲ್ಗಳನ್ನು ಜನರನ್ನು ಜಾಗೃತಿಗೊಳಿಸಲು ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು. ಹೀಗೆ ಜನರು ರಾಜಕೀಯೇತರವಾಗಿ ಸಂಘಟಿತರಾಗಿ ಬೆಲೆಯೇರಿಕೆಗಳ ವಿರುದ್ಧ ಧ್ವನಿಯೆತ್ತಿದಾಗ ಮಾತ್ರ ಸರಕಾರ ಅದಕ್ಕೆ ತಲೆಬಾಗಬಹುದು. ಇಲ್ಲವಾದರೆ, ಒಂದೆಡೆ ರಾಜಕೀಯ ಪಕ್ಷಗಳು ಪ್ರತಿಭಟನೆಯ ಅಣಕವಾಡುತ್ತಿದ್ದಂತೆಯೇ ಇನ್ನೊಂದೆಡೆ ಸರಕಾರ ಬೆಲೆಗಳನ್ನು ಹೆಚ್ಚಿಸುತ್ತಾ ಹೋಗುತ್ತದೆ.