ಪತಂಜಲಿ ಶರಬತ್‌ನಲ್ಲಿ ದ್ವೇಷದ ವಿಷ!

Update: 2025-04-11 08:30 IST
ಪತಂಜಲಿ ಶರಬತ್‌ನಲ್ಲಿ ದ್ವೇಷದ ವಿಷ!

PC: Facebook/patanjaliayurvedharidwar

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನಕಲಿ ಮತ್ತು ಕಳಪೆ ಉತ್ಪನ್ನಗಳಿಗಾಗಿ ಹಲವು ಬಾರಿ ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಂಡಿದ್ದರೂ, ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಸಂಸ್ಥೆ ಅದರಿಂದ ಪಾಠ ಕಲಿತಂತಿಲ್ಲ. ಭಾರತದ ಆಧುನಿಕ ವೈದ್ಯ ಪದ್ಧತಿಯ ವಿರುದ್ಧವೇ ಸುಳ್ಳುಗಳನ್ನು ಹರಡಿ, ತನ್ನ ಔಷಧಿ ಉತ್ಪನ್ನಗಳನ್ನು ಅಡ್ಡ ದಾರಿಯಿಂದ ಜನರ ಮೇಲೆ ಹೇರಲು ಹೋಗಿ ರಾಮ್‌ದೇವ್ ಸುಪ್ರೀಂಕೋರ್ಟ್‌ನ ಮುಂದೆ ಕ್ಷಮೆ ಯಾಚಿಸಬೇಕಾದ ಸ್ಥಿತಿಯನ್ನು ತಂದುಕೊಂಡರು. ದೇಶದ ಹಲವೆಡೆ ಗುಣಮಟ್ಟವಿಲ್ಲದ ಕಾರಣಕ್ಕಾಗಿ ಪತಂಜಲಿ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಒಂದು ಕಾಲದಲ್ಲಿ ಸ್ವದೇಶಿ ಉತ್ಪನ್ನವೆಂದು ಪತಂಜಲಿಯ ಹಿಂದೆ ಬಿದ್ದ ಜನರು, ಇಂದು ಪತಂಜಲಿಯ ಹೆಸರು ಕೇಳಿದಾಕ್ಷಣ ಬೆಚ್ಚಿ ಬೀಳುತ್ತಿದ್ದಾರೆ. ಸ್ವತಃ ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಪತಂಜಲಿಯ ಉತ್ಪನ್ನಗಳ ಬಗ್ಗೆ ತನ್ನ ಅನುಮಾನವನ್ನು ವ್ಯಕ್ತಪಡಿಸಿದ್ದರು. ಇಂದು ಮಾರುಕಟ್ಟೆಯಲ್ಲಿ ಪತಂಜಲಿ ಉತ್ಪನ್ನಗಳು ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ತನ್ನ ಉತ್ಪನ್ನಗಳ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಲು ವಿಫಲರಾಗಿರುವ ರಾಮ್‌ದೇವ್ ಇದೀಗ, ಎದುರಾಳಿಯ ಉತ್ಪನ್ನಗಳನ್ನು ಟೀಕಿಸುವ ಮೂಲಕ ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಇಳಿಸುವ ಹತಾಶೆಯ ಪ್ರಯತ್ನವನ್ನು ಮಾಡಿದ್ದಾರೆ. ತನ್ನ ಮಾತುಗಳನ್ನು ಜನರು ನಂಬುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆಯೇ, ಉತ್ಪನ್ನಗಳಿಗೆ ಧರ್ಮದ ಬಣ್ಣವನ್ನು ಕಟ್ಟಿ ಮಾರುಕಟ್ಟೆಗೆ ಇಳಿಸಲು ಹೊರಟು ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.

ತನ್ನ ಕಂಪೆನಿಯ ಶರಬತ್‌ಗಳಿಗೆ ಗಿರಾಕಿಗಳು ಇಲ್ಲದೇ ಇರುವುದನ್ನು ಕಂಡು ಹತಾಶರಾಗಿರುವ ರಾಮ್‌ದೇವ್ ಇದೀಗ ಎದುರಾಳಿ ಕಂಪೆನಿಯ ತಂಪು ಪಾನೀಯವನ್ನು ಕೊಂಡುಕೊಂಡರೆ, ಅದರ ಹಣ ‘ಜಿಹಾದ್’ಗೆ ಬಳಕೆಯಾಗುತ್ತದೆ ಎಂದು ಹೇಳಿದ್ದಾರೆ. ‘ಆ ತಂಪು ಪಾನೀಯದಿಂದ ಬಂದ ಹಣದಿಂದ ಮಸೀದಿ ನಿರ್ಮಿಸಲಾಗುತ್ತದೆ. ಇದು ಲವ್ ಜಿಹಾದ್, ವೋಟ್ ಜಿಹಾದ್ ಇದ್ದಂತೆ ಶರಬತ್ ಜಿಹಾದ್’. ‘ನಮ್ಮ ಸಂಸ್ಥೆಯ ತಂಪು ಪಾನೀಯವನ್ನು ಕುಡಿದರೆ ಆ ಹಣದಿಂದ ಗುರುಕುಲ, ಪತಂಜಲಿ ವಿಶ್ವವಿದ್ಯಾನಿಲಯಗಳು ತಲೆಯೆತ್ತುತ್ತವೆ’ ಎಂದು ವೀಡಿಯೊ ಒಂದರಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆ, ಭಾರತದ ಆಧುನಿಕ ವೈದ್ಯ ಪದ್ಧತಿಯ ವಿರುದ್ಧವೂ ಇಂತಹದೇ ಜಾಹೀರಾತುಗಳನ್ನು ನೀಡಿ, ದೇಶವನ್ನು ತಪ್ಪುದಾರಿಗೆ ಎಳೆದಿದ್ದರು. ಮಾತ್ರವಲ್ಲ, ತನ್ನ ಔಷಧಿಯಿಂದ ಲೈಂಗಿಕ ದೌರ್ಬಲ್ಯಗಳನ್ನು ಸರಿಪಡಿಸಬಹುದು, ಸಕ್ಕರೆ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಸುಳ್ಳು ಮಾಹಿತಿಗಳನ್ನು ಹರಡಿದ್ದರು. ಮಾಂತ್ರಿಕ ಪರಿಹಾರಗಳನ್ನು ಕೂಡ ಸಮರ್ಥಿಸಿದ್ದರು. ಭಾರತೀಯ ವೈದ್ಯಕೀಯ ಸಂಘ ಇವುಗಳ ವಿರುದ್ಧ ಕೋರ್ಟ್ ಮೊರೆ ಹೋದ ಕಾರಣ, ಸುಪ್ರೀಂಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಸ್ವತಃ ರಾಮ್‌ದೇವ್ ಅವರೇ ಖುದ್ದಾಗಿ ಸುಪ್ರೀಂಕೋರ್ಟ್‌ಗೆ ಹಾಜರಾಗಿ ಕ್ಷಮೆ ಯಾಚಿಸಿದ್ದರು. ಕೊರೋನ ಕಾಲದಲ್ಲಿ ‘ಕೊರೋನಕ್ಕೆ ಔಷಧಿ ಕಂಡು ಹುಡುಕಿದ್ದೇನೆ’ ಎಂದು ವೈಜ್ಞಾನಿಕವಾಗಿ ಮಾನ್ಯತೆ ಪಡೆಯದ ತನ್ನ ಔಷಧಿಯನ್ನು ಮಾರುಕಟ್ಟೆಗೆ ಇಳಿಸಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಕುಂದುಂಟು ಮಾಡಿದ್ದರು. ಸಂದರ್ಭ ಸಿಕ್ಕಿದಾಗಲೆಲ್ಲ ಭಾರತೀಯ ಆಧುನಿಕ ವೈದ್ಯ ಪದ್ಧತಿಯನ್ನು ಟೀಕಿಸುತ್ತಾ, ಅದರ ಬಗ್ಗೆ ಅಪಪ್ರಚಾರ ಮಾಡುತ್ತಾ ಭಾರತದ ಆರೋಗ್ಯ ವ್ಯವಸ್ಥೆಯ ನೈತಿಕ ಶಕ್ತಿಯ ಮೇಲೆ ದಾಳಿ ನಡೆಸುತ್ತಾ ಬಂದವರು ಇದೇ ರಾಮ್‌ದೇವ್. ಈಗ ತನ್ನ ತಂಪುಪಾನೀಯವನ್ನು ‘ಧರ್ಮದ ಹೆಸರಿನಲ್ಲಿ’ ಮಾರಾಟ ಮಾಡಲು ಮುಂದಾಗಿದ್ದಾರೆ. ತನ್ನ ತಂಪುಪಾನೀಯದ ಹೆಗ್ಗಳಿಕೆಯನ್ನು ಮುಂದಿಡಲು ವಿಫಲರಾಗಿರುವ ಅವರು ‘ಎದುರಾಳಿಯ ತಂಪುಪಾನೀಯವನ್ನು ಕೊಂಡುಕೊಂಂಡರೆ ಆ ಹಣದಿಂದ ಅವರು ಮಸೀದಿಯನ್ನು ಕಟ್ಟುತ್ತಾರೆ’ ಎಂದು ಜನರನ್ನು ಬೆದರಿಸಲು ಮುಂದಾಗಿದ್ದಾರೆ. ಪತಂಜಲಿ ಎನ್ನುವ ಸಂಸ್ಥೆಯ ಉತ್ಪನ್ನಗಳನ್ನು ಜನಸಾಮಾನ್ಯರು ಯಾಕೆ ಕೊಂಡುಕೊಳ್ಳಬಾರದು ಎನ್ನುವುದಕ್ಕೆ ಅವರ ಮಾತುಗಳೇ ಪುಷ್ಟಿ ನೀಡುತ್ತವೆ.

ಬರೇ ತಂಪುಪಾನೀಯವೆಂದಲ್ಲ, ಅವರ ಹಲವು ಉತ್ಪನ್ನಗಳನ್ನು ಹಲವು ರಾಜ್ಯಗಳು ಈಗಾಗಲೇ ನಿಷೇಧಿಸಿ ಆದೇಶ ಹೊರಡಿಸಿವೆ. ಕಳೆದ ಜನವರಿಯಲ್ಲಿ ಆಹಾರ ಸುರಕ್ಷತಾ ಮಾನದಂಡಗಳ ಪಾಲನೆಯಲ್ಲಿ ವಿಫಲವಾದ ಕಾರಣ, ಪತಂಜಲಿ ಫುಡ್ ಲಿಮಿಟೆಡ್ಸ್‌ನ ಸುಮಾರು 4 ಟನ್ ಕೆಂಪು ಮೆಣಸಿನಕಾಯಿ ಪುಡಿಯನ್ನು ಮಾರುಕಟ್ಟೆಯಿಂದ ಹಿಂದೆಗೆಯಲು ಆಹಾರ ನಿಯಂತ್ರಣ ಪಾಧಿಕಾರವು ಸೂಚನೆ ನೀಡಿತ್ತು. ಉತ್ಪನ್ನಗಳನ್ನು ಪರೀಕ್ಷಿಸಿದಾಗ ಅದರಲ್ಲಿ ಅತ್ಯಧಿಕ ಕೀಟನಾಶ ಹುಡಿ ಪತ್ತೆಯಾಗಿರುವುದೇ ಸೂಚನೆಗೆ ಕಾರಣ. ಅಷ್ಟೂ ಮೆಣಸಿನ ಹುಡಿಯನ್ನು ಹಿಂದೆಗೆದಿರುವ ಬಗ್ಗೆ ಪತಂಜಲಿಯು ಪ್ರಕಟಣೆಯನ್ನೂ ನೀಡಿತ್ತು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ, ಪತಂಜಲಿ ಆಯುರ್ವೇದ ಟೂತ್‌ಪೌಡರ್ ದಿವ್ಯದಂತ ಮಂಜನ್‌ನಲ್ಲಿ ಮಾಂಸಾಹಾರದ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್ ನೋಟಿಸ್‌ಜಾರಿ ಮಾಡಿತ್ತು. ಟೂತ್‌ಪೇಸ್ಟ್ಟನ್ನು ಅಪ್ಪಟ ಸಸ್ಯಾಹಾರಿ ಎಂದು ಪತಂಜಲಿ ಸಂಸ್ಥೆ ಮಾರುಕಟ್ಟೆಗೆ ಇಳಿಸಿತ್ತು. ಉತ್ತರಾಖಂಡದಲ್ಲಿ ಪತಂಜಲಿಯ 14 ಉತ್ಪನ್ನಗಳನ್ನು ನಿಷೇಧಿಸಲಾಗಿದ್ದರೂ ಅದನ್ನು ಅಕ್ರಮವಾಗಿ ಮಾರುತ್ತಿರುವ ಆರೋಪವನ್ನು ಅದು ಹೊತ್ತಿತ್ತು. ಈ ಸಂಬಂಧ ಹೈಕೋರ್ಟ್ ಪತಂಜಲಿಗೆ ನೋಟಿಸ್ ಜಾರಿ ಮಾಡಿತ್ತು. ನಿಷೇಧಕ್ಕೆ ತಾನು ಬದ್ಧನಾಗಿದ್ದೇನೆ ಎಂದು ಪತಂಜಲಿ ಹೇಳಿಕೊಂಡಿದ್ದರೂ, ಮಾರುಕಟ್ಟೆಯಲ್ಲಿ ಅವುಗಳು ಅಕ್ರಮವಾಗಿ ಮಾರಾಟವಾಗುತ್ತಿವೆ ಎಂದು ತನಿಖಾ ವರದಿಯೊಂದು ಬಹಿರಂಗಪಡಿಸಿತ್ತು.

ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳು ಸೇರಿದಂತೆ ಶೇ. 40ರಷ್ಟು ಆಯುರ್ವೇದಿಕ್ ಉತ್ಪನ್ನಗಳು ಕೆಳದರ್ಜೆಯದ್ದು ಎಂದು ಹರಿದ್ವಾರದ ಆಯುರ್ವೇದ ಮತ್ತು ಯುನಾನಿ ಕಚೇರಿಯು ಕೆಲವು ವರ್ಷಗಳ ಹಿಂದೆ ತಿಳಿಸಿತ್ತು. 2013ರಿಂದ 2016ರವರೆಗಿನ ಅವಧಿಯಲ್ಲಿ ಸುಮಾರು 82 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಇವುಗಳಲ್ಲಿ ಪತಂಜಲಿಯ ‘ದಿವ್ಯ ಆಮ್ಲ ಜ್ಯೂಸ್, ಶಿವಲಿಂಗಿ ಬೀಜ’ ಸೇರಿದಂತೆ 32 ಉತ್ಪನ್ನಗಳು ಗುಣಮಟ್ಟದಲ್ಲಿ ವಿಫಲವಾಗಿವೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ಮಾಹಿತಿಯಿಂದ ತಿಳಿದು ಬಂದಿದೆ. ಹಾಗೆಯೇ ಇನ್ನೊಂದು ಕಂಪೆನಿಯ ಟ್ರೇಡ್ ಮಾರ್ಕ್‌ನ ಅಡಿಯಲ್ಲಿ ತನ್ನ ಕರ್ಪೂರದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಕ್ಕಾಗಿ ಬಾಂಬೆ ಹೈಕೋರ್ಟ್‌ನಿಂದ ಪತಂಜಲಿಯು ಕ್ರಮವನ್ನು ಎದುರಿಸಿತ್ತು. ಕೋರ್ಟ್ ತಡೆಯಾಜ್ಞೆ ನೀಡಿದ ಬಳಿಕವೂ ಪತಂಜಲಿ ತನ್ನ ಚಾಳಿಯನ್ನು ಮುಂದುವರಿಸಿದ್ದಕ್ಕಾಗಿ ಕೋರ್ಟ್ ಆ ಸಂಸ್ಥೆಯನ್ನು ಅತ್ಯಂತ ಕಟು ಭಾಷೆಯಲ್ಲಿ ಟೀಕಿಸಿತ್ತು. ಪತಂಜಲಿ ಬ್ರಾಂಡ್‌ನ ಸೋನ್ ಪಾಪ್ಡಿ ಆಹಾರ ಗುಣಮಟ್ಟ ಪರೀಕ್ಷೆಯಲ್ಲಿ ಕಳಪೆ ಎಂದು ದೃಢ ಪಟ್ಟ ಹಿನ್ನೆಲೆಯಲ್ಲಿ ಪತಂಜಲಿ ಆಯುರ್ವೇದ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿ ಅಧಿಕಾರಿಗಳಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿ, ಪಿತೋರ್‌ಗಢ ನ್ಯಾಯಲಯವೊಂದು ತೀರ್ಪು ನೀಡಿತ್ತು. ದಾರಿ ತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಆದೇಶದಂತೆ ರಾಮ್‌ದೇವ್ ಮಾಧ್ಯಮಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿ ಮುಖಪುಟದಲ್ಲಿ ಸುದ್ದಿಯಾಗಿದ್ದರು. ಇಷ್ಟೆಲ್ಲ ಹೆಗ್ಗಳಿಕೆಗಳನ್ನು ಹೊಂದಿರುವ ‘ಪತಂಜಲಿ ಉತ್ಪನ್ನ’ವನ್ನು ಇದೀಗ ಧರ್ಮದ ಹೆಸರಿನಲ್ಲಿ ದಾಟಿಸುವ ಪ್ರಯತ್ನವನ್ನು ನಡೆಸಿದ್ದಾರೆ.

ರಾಮ್‌ದೇವ್ ಸನ್ಯಾಸಿ ವೇಷದಲ್ಲಿರುವ ಉದ್ಯಮಿ ಎನ್ನುವುದು ಎಂದೋ ಬಟಾ ಬಯಲಾಗಿದೆ. ಆರೋಗ್ಯ, ಸ್ವದೇಶಿ ಉತ್ಪನ್ನ, ಯೋಗ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ಸರಕಾರದಿಂದ ಹಲವು ಸಬ್ಸಿಡಿಗಳನ್ನು ತನ್ನದಾಗಿಸಿಕೊಂಡಿರುವುದು ಮಾತ್ರವಲ್ಲ, ಕೋಟ್ಯಂತರ ಬೆಲೆಬಾಳುವ ಸರಕಾರಿ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆದು ರಿಯಲ್ ಎಸ್ಟೇಟ್ ದಂಧೆಗೆ ಬಳಸುವ ಆರೋಪ ಇವರ ಮೇಲಿದೆ. ಈತ ಹರ್ಯಾಣದ ಮಂಗರ್ ಗ್ರಾಮದಲ್ಲಿ ಈ ಕೋಟ್ಯಂತರ ರೂಪಾಯಿಯ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವುದನ್ನು ರಿಪೋರ್ಟರ್ಸ್‌ ಕಲೆಕ್ಟಿವ್ ತನಿಖಾ ವರದಿಯು ಬಹಿರಂಗಗೊಳಿಸಿತ್ತು. ಹಲವಾರು ಕಂಪೆನಿಗಳು ಇಲ್ಲಿ ಭೂಮಿಯನ್ನು ಖರೀದಿಸಿದ್ದು ಅವೆಲ್ಲವೂ ಬಾಬಾ ರಾಮ್‌ದೇವ್ ಅವರ ಪತಂಜಲಿ ಕಂಪೆನಿಗಳೊಂದಿಗೆ ಸಂಬಂಧವನ್ನು ಹೊಂದಿದೆ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಈ ಶೆಲ್ ಕಂಪೆನಿಗಳು ಬಾಬಾ ರಾಮ್‌ದೇವ್ ಅವರ ಸಂಬಂಧಿಗಳು ಮತ್ತು ಸಹವರ್ತಿಗಳ ನಿಯಂತ್ರಣದಲ್ಲಿರುವುದನ್ನು ದಾಖಲೆ ಸಮೇತ ವಿವರಗಳನ್ನು ಹೊರ ಹಾಕಿತ್ತು.

ರಾಮದೇವ್ ಅವರ ಉತ್ಪನ್ನಗಳಷ್ಟೇ ಅಲ್ಲ, ಆತನ ವ್ಯಕ್ತಿತ್ವವೂ ನಕಲಿ ಮತ್ತು ದೇಶದ ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ತನ್ನ ‘ಶರಬತ್ ಜಿಹಾದ್’ ಹೇಳಿಕೆಯ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ತನ್ನ ಕಳಪೆ ಮತ್ತು ನಕಲಿ ಉತ್ಪನ್ನಗಳನ್ನು ಮಾರಿ ಬಂದ ಹಣದಲ್ಲಿ ಈತ ಕಟ್ಟುವ ಗುರುಕುಲಗಳು, ವಿಶ್ವವಿದ್ಯಾನಿಲಯಗಳು, ಆಶ್ರಮಗಳು ಈ ದೇಶಕ್ಕೆ ಯಾವ ರೀತಿಯ ಕೊಡುಗೆಯನ್ನು ನೀಡಬಹುದು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಯುಪಿಎ ಅಧಿಕಾರದಲ್ಲಿದ್ದ ಕಾಲದಲ್ಲಿ ‘ದೇಶದ ವಿರುದ್ಧ ಪರ್ಯಾಯ ಸೈನ್ಯ’ ಕಟ್ಟುವ ಬೆದರಿಕೆಯನ್ನು ಒಡ್ಡಿದ್ದ ಈ ರಾಮ್‌ದೇವ್ ಉತ್ಪನ್ನಗಳಷ್ಟೇ ಅಲ್ಲ, ಈತನ ಚಿಂತನೆಗಳು ಈ ದೇಶದ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News