ನ್ಯಾಯ ವ್ಯವಸ್ಥೆಯೇ ವಿಶ್ವಾಸಾರ್ಹತೆ ಕಳೆದುಕೊಂಡರೆ?

Update: 2025-03-29 08:30 IST
ನ್ಯಾಯ ವ್ಯವಸ್ಥೆಯೇ ವಿಶ್ವಾಸಾರ್ಹತೆ ಕಳೆದುಕೊಂಡರೆ?

ಯಶವಂತ್ ವರ್ಮಾ PC: x.com/ArgusNews_in

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದು ಕಾಲದಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರು ನೀಡುವ ತೀರ್ಪುಗಳು ಚರ್ಚೆಗೊಳಗಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ತೀರ್ಪುಗಳಿಗಿಂತ ತೀರ್ಪುಗಳನ್ನು ನೀಡುವ ನ್ಯಾಯಾಧೀಶರೇ ಹೆಚ್ಚು ಚರ್ಚೆಯಲ್ಲಿದ್ದಾರೆ. ಹೆಚ್ಚಿನ ತೀರ್ಪುಗಳಲ್ಲಿ ಸಂವಿಧಾನದ ಹಿತಾಸಕ್ತಿಗಿಂತ ನ್ಯಾಯಾಧೀಶರ ವೈಯಕ್ತಿಕ ಹಿತಾಸಕ್ತಿಗಳೇ ಮುಂಚೂಣಿಯಲ್ಲಿರುತ್ತವೆ. ಪರಿಣಾಮವಾಗಿ ಸಣ್ಣ ಕೋರ್ಟ್‌ನಲ್ಲಿ ನ್ಯಾಯಾಧೀಶರು ನೀಡುವ ತೀರ್ಪನ್ನು ಆಕ್ಷೇಪಿಸಿ ಉನ್ನತ ನ್ಯಾಯಾಲಯಗಳು ಖಂಡಿಸುವುದು, ಕಳವಳ ವ್ಯಕ್ತಪಡಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದೀಗ, ಹೈಕೋರ್ಟ್ ನ್ಯಾಯಾಧೀಶರೊಬ್ಬರ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿರುವ ಆರೋಪ ನ್ಯಾಯ ವ್ಯವಸ್ಥೆಯನ್ನು ತಲ್ಲಣಕ್ಕೀಡು ಮಾಡಿದೆ.

ಮಾರ್ಚ್ 14ರಂದು ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಅದನ್ನು ನಂದಿಸಲು ಹೋಗಿತ್ತು. ಈ ಸಂದರ್ಭದಲ್ಲಿ ಸಿಬ್ಬಂದಿಗೆ ಭಾರೀ ಪ್ರಮಾಣದಲ್ಲಿ ನೋಟಿನ ಕಟ್ಟುಗಳು ಕಾಣಿಸಿಕೊಂಡಿದ್ದವು. ನಿವಾಸಕ್ಕೆ ಬಿದ್ದ ಬೆಂಕಿಯೇನೋ ಅಗ್ನಿಶಾಮಕ ದಳದವರು ನಂದಿಸಿದರು. ಆದರೆ ಅಲ್ಲಿ ಕಂಡ ನೋಟುಗಳ ಕಂತೆ, ಬೆಂಕಿಯ ರೂಪದಲ್ಲಿ ಇಡೀ ನ್ಯಾಯ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಸುಡತೊಡಗಿತು. ಸುದ್ದಿ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಒಳಗಾಗುತ್ತಿರುವಂತೆಯೇ ಕೆಲವರು ನ್ಯಾಯಾಧೀಶರ ಪರವಾಗಿ ವಕಾಲತ್ತು ಆರಂಭಿಸಿದರೆ, ಇನ್ನು ಕೆಲವರು ಯಶವಂತ್ ವರ್ಮಾ ಅವರ ನೋಟಿನ ಕಂತೆಯ ಹಿಂದಿರುವ ರಾಜಕಾರಣಿಗಳ ಹೆಸರುಗಳನ್ನು ಉಲ್ಲೇಖಿಸತೊಡಗಿದರು. ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಬಂದು ನಿಂತಿತು. ತನ್ನ ಮಾನ ಉಳಿಸಿಕೊಳ್ಳಲು ಸುಪ್ರೀಂಕೋರ್ಟ್ ಆಂತರಿಕ ತನಿಖೆ ನಡೆಸಲು ಮೂವರ ಸಮಿತಿಯೊಂದನ್ನು ನೇಮಕ ಮಾಡಿತು. ದಿಲ್ಲಿ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಈ ಸಂಬಂಧ ವರ್ಮಾ ಅವರನ್ನು ವಿಚಾರಣೆ ನಡೆಸಿ, ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿಗಳ ಮುಂದೆ ವರ್ಮಾ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಎರಡೇ ದಿನದಲ್ಲಿ ತನ್ನ ಹೇಳಿಕೆಯನ್ನು ಬದಲಿಸಿದರು. ಹಾಗಾಗಿ ಇಡೀ ಪ್ರಕರಣ ಗೊಂದಲದ ಗೂಡಾಗಿದೆ. ವರ್ಮಾರನ್ನು ದಿಲ್ಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು ಕೊಲಿಜಿಯಂ ಶಿಫಾರಸು ಮಾಡಿದ್ದು, ಕಾನೂನು ಸಚಿವಾಲಯವು ಶುಕ್ರವಾರ ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿದೆ.

ಹೈಕೋರ್ಟ್ ನ್ಯಾಯಾಧೀಶರೊಬ್ಬರ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ ಎನ್ನುವ ಆರೋಪ ಬಹಳ ಗಂಭೀರವಾದುದು. ಆದರೆ ಅದಕ್ಕೆ ಬೇಕಾದ ಸಾಕ್ಷ್ಯಗಳು ಎಷ್ಟರಮಟ್ಟಿಗೆ ಗಟ್ಟಿಯಾಗಿವೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕು. ಆದರೆ ಬರೇ ವದಂತಿಯನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂಕೋರ್ಟ್ ಆಂತರಿಕ ಸಮಿತಿಯೊಂದನ್ನು ರಚಿಸಿ ತನಿಖೆಗೆ ಆದೇಶಿಸುತ್ತಿರಲಿಲ್ಲ. ಆದುದರಿಂದ ಆರೋಪವನ್ನು ಸಮರ್ಥಿಸಲು ಬೇಕಾದ ಕೆಲವು ಸಾಕ್ಷ್ಯಗಳಾದರು ಸುಪ್ರೀಂಗೆ ಸಿಕ್ಕಿರಬೇಕು. ತನಿಖೆ ಮುಗಿದು ಸಮಿತಿ ಸತ್ಯಸತ್ಯಾತೆಯನ್ನು ಬಹಿರಂಗಪಡಿಸುವವರೆಗೂ ವರ್ಮಾ ಅವರ ವಿಶ್ವಾಸಾರ್ಹತೆ ಪ್ರಶ್ನೆಗೊಳಗಾಗುತ್ತಲೇ ಇರುತ್ತವೆ. ಇದೇ ಸಂದರ್ಭದಲ್ಲಿ ಅಲಹಾಬಾದ್, ಗುಜರಾತ್, ಕೇರಳ, ಕರ್ನಾಟಕ, ಲಕ್ನೋ ಹೈಕೋರ್ಟ್ ಬಾರ್ ಅಸೋಸಿಯೇಶನ್‌ಗಳು ಸುಪ್ರೀಂಕೋರ್ಟ್ ಗೆ ಮನವಿ ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿವೆ. ಈ ಸಂಬಂಧ ವರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿವೆ. ಅಲಹಾಬಾದ್ ಹೈಕೋರ್ಟ್ ನ್ಯಾಯವಾದಿಗಳಂತೂ, ‘‘ನಮ್ಮ ಕೋರ್ಟಿಗೆ ವರ್ಮಾ ಅವರನ್ನು ವರ್ಗಾಯಿಸಿರುವುದು ಎಷ್ಟು ಸರಿ?’’ ಎಂದು ಕೇಳಿ, ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ‘‘ದಿಲ್ಲಿ ಹೈಕೋರ್ಟ್‌ನಲ್ಲಿ ಕೆಲಸ ಮಾಡಲು ಅನರ್ಹವಾಗುವವರು, ಅಲಹಾಬಾದ್ ಹೈಕೋರ್ಟ್‌ನಲ್ಲಿ ಕೆಲಸ ಮಾಡಲು ಅರ್ಹರಾಗುವುದು ಹೇಗೆ?’’ ಎಂದು ಅವರು ಕೇಳುತ್ತಿದ್ದಾರೆ. ‘‘ದಿಲ್ಲಿ ಹೈಕೋರ್ಟ್‌ಗೆ ಬೇಡವಾದುದನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು, ನಮ್ಮ ಕೋರ್ಟ್ ಕಸದ ಬುಟ್ಟಿಯೇ?’’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯವಾದಿಗಳು ಮತ್ತು ನ್ಯಾಯಾಧೀಶರ ನಡುವಿನ ಸಂಘರ್ಷಕ್ಕೂ ಇದು ಕಾರಣವಾಗಿದೆ.

ಸದ್ಯಕ್ಕೆ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟಿಗೆ ಸರಕಾರ ವರ್ಗಾಯಿಸಿದೆಯಾದರೂ, ಅವರು ನ್ಯಾಯ ಕಲಾಪಗಳಲ್ಲಿ ಭಾಗವಹಿಸಿದರೆ ಅದರಿಂದ ತೀರ್ಪಿನ ಮೇಲೆ ಪರಿಣಾಮಗಳಾಗುವುದಿಲ್ಲವೆ ಎನ್ನುವ ಪ್ರಶ್ನೆಗಳನ್ನು ನ್ಯಾಯವಾದಿಗಳೇ ಕೇಳುತ್ತಿರುವುದರಿಂದ, ಸುಪ್ರೀಂಕೋರ್ಟ್ ಗೊಂದಲವನ್ನು ನಿವಾರಿಸಬೇಕಾಗಿದೆ. ನ್ಯಾಯವಾದಿಗಳೇ ಕೇಳಿಕೊಳ್ಳುವಂತೆ, ಕೋಟ್ಯಂತರ ರೂಪಾಯಿ ಹೈಕೋರ್ಟ್ ನ್ಯಾಯಾಧೀಶರ ನಿವಾಸದಲ್ಲಿ ಹೇಗೆ ಬಂತು ಎನ್ನುವುದು ಇತ್ಯರ್ಥವಾಗುವವರೆಗೆ, ಅವರನ್ನು ನ್ಯಾಯ ಕಲಾಪದಲ್ಲಿ ಮುಂದುವರಿಸಿದರೆ ಅದು ತಪ್ಪು ಸಂದೇಶವನ್ನು ನೀಡುತ್ತದೆ. ಮಾತ್ರವಲ್ಲ, ಒಂದು ವೇಳೆ ತನಿಖೆಯಿಂದ ಹಣ ಅಲ್ಲಿ ಇದ್ದುದು ನಿಜ ಎನ್ನುವುದು ಬೆಳಕಿಗೆ ಬಂದದ್ದೇ ಆದರೆ, ಅವರು ಈವರೆಗೆ ಕೊಟ್ಟಿರುವ ತೀರ್ಪುಗಳು ಪ್ರಶ್ನೆಗೊಳಪಡುತ್ತವೆ. ತನಿಖೆ ಪೂರ್ಣವಾಗಿ ಮುಗಿದು ಅವರು ನಿರಪರಾಧಿ ಎನ್ನುವುದು ಘೋಷಣೆಯಾಗುವವರೆಗೂ ಅವರನ್ನು ರಜೆಯಲ್ಲಿ ಕಳುಹಿಸುವುದು ಸೂಕ್ತವಾದುದು. ಸ್ವತಃ ಭ್ರಷ್ಟತೆಯ ಆರೋಪವನ್ನು ಹೊತ್ತ ನ್ಯಾಯಾಧೀಶನೊಬ್ಬ ತನ್ನ ಮುಂದೆ ಬಂದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಯಾವ ನೈತಿಕತೆಯ ತಳಹದಿಯ ಮೇಲೆ ತೀರ್ಪು ನೀಡಬಲ್ಲ? ಆರೋಪ ಸಾಬೀತಾಗಿಲ್ಲ ಎನ್ನುವುದು ನಿಜವೇ ಆಗಿದ್ದರೂ, ನಾಳೆ ಆರೋಪ ಸಾಬೀತಾದರೆ ನೀಡಿದ ತೀರ್ಪುಗಳ ಸ್ಥಿತಿ ಏನಾಗಬೇಕು?

ಇಂತಹ ಪ್ರಶ್ನೆ ಹಲವು ನ್ಯಾಯಾಧೀಶರ ಬಗ್ಗೆ ತಲೆಯೆತ್ತಿದೆ. ಇತ್ತೀಚೆಗೆ ನ್ಯಾಯಾಧೀಶರು ವಿಶ್ವಹಿಂದೂ ಪರಿಷತ್ ಆಯೋಜಿಸಿದ ಸಮಾವೇಶದಲ್ಲಿ ಭಾಗವಹಿಸಿರುವುದು ಇದೇ ಕಾರಣಕ್ಕೆ ಚರ್ಚೆಗೊಳಗಾಗಿತ್ತು. ಹತ್ತು ಹಲವು ಗಲಭೆಗಳಲ್ಲಿ ಗುರುತಿಸಿಕೊಂಡಿರುವ ವಿಎಚ್‌ಪಿ ನಾಯಕರ ಜೊತೆಗೆ ವೇದಿಕೆಯನ್ನು ಹಂಚಿಕೊಳ್ಳುವ ನ್ಯಾಯಾಧೀಶರು, ಕೋಮುಗಲಭೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯವನ್ನು ಎತ್ತಿ ಹಿಡಿಯಬಲ್ಲರೆ? ಸಂತ್ರಸ್ತರು ಇವರು ನೀಡುವ ನ್ಯಾಯದ ಬಗ್ಗೆ ಸಂತೃಪ್ತರಾಗಲು ಸಾಧ್ಯವೆ? ಇತ್ತೀಚೆಗೆ ಅತ್ಯಾಚಾರದ ಬಗ್ಗೆ ನ್ಯಾಯಾಧೀಶರೊಬ್ಬರು ನೀಡಿದ ತೀರ್ಪನ್ನು, ಸುಪ್ರೀಂಕೋರ್ಟ್ ಸೂಕ್ಷ್ಮತೆಯ ಕೊರತೆಯಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಅತ್ಯಾಚಾರದಂತಹ ವಿಷಯಗಳಲ್ಲಿ ಸೂಕ್ಷ್ಮತೆಯ ಕೊರತೆಯಿರುವ ನ್ಯಾಯಾಧೀಶನನ್ನು ಆ ಸ್ಥಾನದಲ್ಲಿ ಮುಂದುವರಿಸುವುದು ಎಷ್ಟು ಸರಿ? ಪ್ರಶ್ನೆಗಳಿಗೆ ಉತ್ತರಗಳೇ ಇಲ್ಲ.

ಒಬ್ಬ ಪೊಲೀಸ್ ಅಧಿಕಾರಿ ತನ್ನ ಕರ್ತವ್ಯದಲ್ಲಿ ತಪ್ಪೆಸಗಿದರೆ ಆತನನ್ನು ಆಮಾನತು ಗೊಳಿಸಲಾಗುತ್ತದೆ. ಭ್ರಷ್ಟ ಅಧಿಕಾರಿ ಲೋಕಾಯುಕ್ತಕ್ಕೆ ಸಿಕ್ಕಿ ಹಾಕಿಕೊಂಡರೆ ಆತನನ್ನು ರಜೆಯ ಮೇಲೆ ಕಳುಹಿಸಲಾಗುತ್ತದೆ. ನ್ಯಾಯಾಲಯದ ಅತ್ಯುನ್ನತ ಕುರ್ಚಿಯಲ್ಲಿ ಕೂತು ಸಂವಿಧಾನಕ್ಕೆ ಬದ್ಧರಾಗಿ ತೀರ್ಪು ನೀಡಲು ವಿಫಲರಾಗುವ, ರಾಜಕಾರಣಿಗಳೊಂದಿಗೆ, ಕ್ರಿಮಿನಲ್‌ಗಳೊಂದಿಗೆ ಬಹಿರಂಗವಾಗಿ ಗುರುತಿಸಿಕೊಳ್ಳುವ ನ್ಯಾಯಾಧೀಶರ ವಿರುದ್ಧ ಮಾತ್ರ ಯಾಕೆ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ? ಎನ್ನುವ ಪ್ರಶ್ನೆಗೂ ಉತ್ತರ ಕಂಡುಕೊಳ್ಳುವ ಅಗತ್ಯವಿದೆ. ಅಷ್ಟೇ ಅಲ್ಲ, ನ್ಯಾಯಾಧೀಶರು ನಿವೃತ್ತರಾದ ಬಳಿಕ ಯಾವುದೇ ರಾಜಕೀಯ ಲಾಭಗಳನ್ನು ತನ್ನದಾಗಿಸಿಕೊಳ್ಳದಂತೆ ಕಾನೂನನ್ನು ರೂಪಿಸುವ ಅಗತ್ಯವಿದೆ. ದಾರಿ ತಪ್ಪಿರುವ ಶಾಸಕಾಂಗ, ಕಾರ್ಯಾಂಗಗಳಿಗೆ ದಾರಿ ತೋರಿಸಬೇಕಾದ ನ್ಯಾಯಾಂಗ ತನ್ನ ದಾರಿಯ ಮುಂದಿರುವ ಎಡರು ತೊಡರುಗಳನ್ನು ಸರಿಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News