ಇತಿಹಾಸದ ಗೋರಿ ಅಗೆದು ಭವಿಷ್ಯವನ್ನು ದಫನ ಮಾಡಲು ಹೊರಟವರು!

Update: 2025-03-19 08:14 IST
ಇತಿಹಾಸದ ಗೋರಿ ಅಗೆದು ಭವಿಷ್ಯವನ್ನು ದಫನ ಮಾಡಲು ಹೊರಟವರು!

ಛತ್ರಪತಿ ಸಂಭಾಜಿನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್‌ ಅವರ ಸಮಾಧಿ PC: PTI

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತಿಹಾಸದ ಗೋರಿಗಳನ್ನು ಅಗೆದು ಅದರಲ್ಲಿ ವರ್ತಮಾನದ ಶಾಂತಿ, ಸೌಹಾರ್ದ, ನೆಮ್ಮದಿಯನ್ನು ಕೊಂದು ದಫನ ಮಾಡುವುದಕ್ಕೆ ಮಹಾರಾಷ್ಟ್ರದ ನಾಗಪುರದಲ್ಲಿ ಕೆಲವು ದುಷ್ಕರ್ಮಿಗಳು ಸಂಚು ನಡೆಸುತ್ತಿದ್ದಾರೆ. ಮತ್ತು ಈ ಗೋರಿ ಅಗೆಯುವ ‘ಅಗೋರಿ’ಗಳ ನೇತೃತ್ವವನ್ನು ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ವಹಿಸಿರುವುದು ಇನ್ನೊಂದು ದುರಂತವಾಗಿದೆ. ಇತ್ತೀಚೆಗೆ ಸಾಲು ಸಾಲು ರೈತರ ಆತ್ಮಹತ್ಯೆಗಳಿಗಾಗಿ ಮಹಾರಾಷ್ಟ್ರ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ಮಹಾರಾಷ್ಟ್ರದಲ್ಲಿ ಕಳೆದ 56 ದಿನಗಳಲ್ಲಿ, ಸರಾಸರಿ ದಿನಕ್ಕೆ ಎಂಟು ರೈತರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಸ್ವತಃ ಅಲ್ಲಿನ ರಾಜ್ಯ ಸಚಿವ ಮಕರಂದ್ ಜಾದವ್ ಪಾಟೀಲ್ ಹೇಳುವಂತೆ, ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿ ನಗರ ಮತ್ತು ಅಮರಾವತಿ ವಿಭಾಗದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಪುಣ್ಯಕ್ಕೆ, ಈ ಆತ್ಮಹತ್ಯೆಗಳಿಗೆ ಔರಂಗಜೇಬ್ ಕಾರಣ ಎಂದು ಅಲ್ಲಿನ ಸರಕಾರ ಇನ್ನೂ ಹೇಳಿಕೆ ನೀಡಿಲ್ಲ. ಈ ಆತ್ಮಹತ್ಯೆಗಳಿಂದ ಹರಾಜಾಗುತ್ತಿರುವ ಮಾನವನ್ನು, ಅಲ್ಲಿನ ಮುಖ್ಯಮಂತ್ರಿ ಔರಂಗಜೇಬ್‌ನ ಗೋರಿಯೊಳಗೆ ಹುಡುಕಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಫಡ್ನವೀಸ್ ಪ್ರಕಾರ, ಈ ರೈತರ ಆತ್ಮಹತ್ಯೆಗಳಿಂದ ಮಹಾರಾಷ್ಟ್ರದ ವರ್ಚಸ್ಸಿಗೆ ಧಕ್ಕೆಯಾಗಿಲ್ಲ. ನೂರಾರು ವರ್ಷಗಳ ಹಿಂದೆ ಆಗಿ ಹೋದ ಔರಂಗಜೇಬ್‌ನ ಘೋರಿಯಿಂದ ಮಹಾರಾಷ್ಟ್ರಕ್ಕೆ ತೊಂದರೆಯಾಗಿದೆಯಂತೆ. ‘‘ಮಹಾರಾಷ್ಟ್ರ ಸರಕಾರ ಇದನ್ನು ರಕ್ಷಿಸಬೇಕಾಗಿರುವುದು ದುರದೃಷ್ಟಕರ’’ ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ. ಹೀಗೆ ಹೇಳಿಕೆ ನೀಡಿದ ಬೆನ್ನಿಗೇ, ಔರಂಗಜೇಬ್‌ನ ಗೋರಿಯನ್ನು ತೆರವುಗೊಳಿಸಬೇಕು ಎನ್ನುವ ಪ್ರತಿಭಟನೆಗೆ ಸಂಘಪರಿವಾರ ಗುಂಪುಗಳು ಇಳಿದಿವೆ. ಈ ಪ್ರತಿಭಟನೆ ಅಂತಿಮವಾಗಿ ಹಿಂಸಾಚಾರಗಳಿಗೆ ಕಾರಣವಾಗಿದೆೆ. ಹಲವರು ಗಾಯಗೊಂಡಿದ್ದು, ಮನೆ, ಅಂಗಡಿ ಮುಗ್ಗಟ್ಟುಗಳು ಧ್ವಂಸಗೊಂಡಿವೆ. ಇದೀಗ ಹಿಂಸಾಚಾರವನ್ನು ‘ಛಾವಾ’ ಸಿನಿಮಾದ ತಲೆಗೆ ಕಟ್ಟಿ ಮುಖ್ಯಮಂತ್ರಿ ಪಾರಾಗಲು ಯತ್ನಿಸಿದ್ದಾರೆ. ‘‘ಇತ್ತೀಚೆಗೆ ಬಿಡುಗಡೆಯಾಗಿರುವ ಛಾವಾ ಸಿನಿಮಾ ನೋಡಿ ಜನರು ಕೆರಳಿದ್ದಾರೆ. ಆದುದರಿಂದ ಅವರು ಔರಂಗಜೇಬ್‌ನ ಗೋರಿಯನ್ನು ತೆರವು ಗೊಳಿಸಲು ಒತ್ತಾಯಿಸುತ್ತಿದ್ದಾರೆ’’ ಎಂದು ಅವರು ಹೇಳಿಕೆ ನೀಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಇದೇ ಸಂಘಪರಿವಾರದ ದುಷ್ಕರ್ಮಿಗಳು ಕೋರೆಗಾಂವ್ ವಿಜಯ ದಿವಸವನ್ನು ಆಚರಿಸಲು ಕೋರೆಗಾಂವ್‌ನಲ್ಲಿ ಸೇರಿದ್ದ ದಲಿತರ ಮೇಲೆಯೂ ದಾಳಿ ನಡೆಸಿದ್ದರು. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಸಾಂಭಾಜಿ ಗೋರಿಯ ಪಕ್ಕದಲ್ಲಿರುವ ಮಹಾರ್ ದಲಿತನೊಬ್ಬನ ಗೋರಿಯನ್ನು ಧ್ವಂಸಗೊಳಿಸಿದ್ದರು. ಈ ಕೃತ್ಯ ಆಕಸ್ಮಿಕ ಏನೂ ಆಗಿರಲಿಲ್ಲ. ಸಾಂಭಾಜಿಯ ಗೋರಿಯ ಪಕ್ಕದಲ್ಲೇ ಮಹಾರ್ ದಲಿತನನ್ನು ಸಮಾಧಿ ಮಾಡಲು ಒಂದು ಕಾರಣವಿತ್ತು. ಔರಂಗಜೇಬನು ಶಿವಾಜಿಯ ಪುತ್ರ ಸಾಂಭಾಜಿಯನ್ನು ಕೊಂದು ಹಾಕಿದಾಗ ಆತನ ಮೃತದೇಹವನ್ನು ಸಮಾಧಿ ಮಾಡಲು ಯಾವುದೇ ಪೇಶ್ವೆಗಳಾಗಲಿ, ಮರಾಠರಾಗಲಿ ಸಿದ್ಧರಿರಲಿಲ್ಲ. ಯಾಕೆಂದರೆ, ಮೊಗಲ್ ದೊರೆ ಔರಂಗಜೇಬ್‌ಗೆ ಸಾಂಭಾಜಿಯನ್ನು ಹಿಡಿದುಕೊಟ್ಟವರೇ ಈ ಪೇಶ್ವೆಗಳಾಗಿದ್ದರು. ಛಿದ್ರವಾಗಿದ್ದ ಸಾಂಭಾಜಿಯ ಮೃತದೇಹವನ್ನು ಒಟ್ಟು ಸೇರಿಸಿ, ಅದನ್ನು ಸಮಾಧಿ ಮಾಡಿರುವುದು ಮಹಾರ್ ದಲಿತ. ಮುಂದೆ ಆತ ಮೃತಪಟ್ಟಾಗ ಆತನ ದೇಹವನ್ನು ಕೂಡ ಸಾಂಭಾಜಿಯ ಗೋರಿಯ ಪಕ್ಕದಲ್ಲೇ ಸಮಾಧಿ ಮಾಡುತ್ತಾರೆ. ಜಾತಿವಾದಿ ಪೇಶ್ವೆಗಳ ವಿರುದ್ಧ 500 ಮಂದಿ ದಲಿತರು ಯುದ್ಧ ಮಾಡಿ ವಿಜಯಶಾಲಿಗಳಾದ ದಿನವನ್ನು ವಿಜಯದಿನವಾಗಿ ಆಚರಿಸುವ ಪರಂಪರೆಯನ್ನು ಆರಂಭಿಸಿದ್ದು ಅಂಬೇಡ್ಕರ್. ಕೆಲವು ವರ್ಷಗಳ ಹಿಂದೆ ಪೇಶ್ವೆಗಳ ವಿರುದ್ಧದ ಆ ಜಯವನ್ನು ಸ್ಮರಿಸಲು ಸೇರಿದ ದಲಿತ ನಾಯಕರನ್ನು ಪೊಲೀಸರು ಹಿಂಸಾಚಾರಗಳಿಗೆ ಪ್ರೇರಣೆ ನೀಡಿದ ಆರೋಪದಲ್ಲಿ ಬಂಧಿಸಿದರು. ಹಲವರು ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿದೆ. ಇತಿಹಾಸದಲ್ಲಿ ಶಿವಾಜಿ ಮತ್ತು ಆತನ ಪುತ್ರ ಸಾಂಭಾಜಿಗೆ ಪೇಶ್ವೆಗಳು, ಚಿತ್ಪಾವನ ಬ್ರಾಹ್ಮಣರು ಮಾಡಿದ ವಂಚನೆಯನ್ನು ಮುಚ್ಚಿ ಹಾಕುವುದಕ್ಕಾಗಿ ಇದೀಗ ಔರಂಗಜೇಬ್‌ನ ಗೋರಿಯ ಮುಂದೆ ಸಂಘಪರಿವಾರ ಹೊಸ ಪ್ರಹಸನವೊಂದನ್ನು ನಡೆಸುತ್ತಿದೆ. ಇತಿಹಾಸದೊಂದಿಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲ ‘ಛಾವಾ’ದಂತಹ ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಹಿಂದೆಯೂ ರಾಜಕೀಯ ಶಕ್ತಿಗಳ ಕೈವಾಡಗಳಿವೆ. ಸಮಾಜದ ಶಾಂತಿಯನ್ನು ಕೆಡಿಸಿ ರಾಜಕೀಯ ಲಾಭಗಳನ್ನು ತನ್ನದಾಗಿಸುವುದಕ್ಕಾಗಿ ಮತ್ತು ಇತಿಹಾಸದಲ್ಲಿ ಸತ್ಯ ಸಂಗತಿಗಳನ್ನು ಮುಚ್ಚಿ ಹಾಕಿ, ಜನರ ತಲೆಯೊಳಗೆ ಸುಳ್ಳು ಇತಿಹಾಸವನ್ನು ತುಂಬಿಸುವುದಕ್ಕಾಗಿಯೇ ಇಂತಹ ಸಿನಿಮಾಗಳನ್ನು ಉತ್ಪಾದಿಸಲಾಗುತ್ತಿದೆ.

ಶಿವಾಜಿಯು ಮುಸ್ಲಿಮರು ಮತ್ತು ಮಹಾರ್ ದಲಿತರ ನೆರವಿನಿಂದ ಮೊಗಲ್ ದೊರೆಗಳನ್ನು ಎದುರಿಸಿ ಗೆದ್ದಿದ್ದ. ಇಬ್ರಾಹಿಂ ಖಾನ್, ದೌಲತ್ ಖಾನ್, ದಾರ್ಯ ಸಾರಂಗ್ ಮೊದಲಾದವರು ಶಿವಾಜಿಯ ದಂಡನಾಯಕರಾಗಿದ್ದರು. ಶಿವಾಜಿಯ ನೌಕಾಪಡೆಯ ದಂಡನಾಯಕ ಕೂಡ ಮುಸ್ಲಿಮನಾಗಿದ್ದ. ಅಫಜಲ್‌ಖಾನ್‌ನನ್ನು ಭೇಟಿಯಾಗುವ ಸಂದರ್ಭದಲ್ಲಿ ಶಿವಾಜಿಯ ಎಡಬಲದಲ್ಲಿ ಅಂಗರಕ್ಷಕರಾಗಿದ್ದವರಲ್ಲಿ ಒಬ್ಬನ ಹೆಸರು ಇಬ್ರಾಹಿಂ ಖಾನ್ ಆಗಿದ್ದರೆ, ಇನ್ನೊಬ್ಬ ದಲಿತ ಮಹಾರ್. ಇದೇ ಸಂದರ್ಭದಲ್ಲಿ ಔರಂಗಜೇಬನ ಪರವಾಗಿ ಯುದ್ಧ ಮಾಡಿದ ಸೇನಾಪತಿಯ ಹೆಸರು ರಾಜ ಜಯಸಿಂಹ. ಈತ ರಜಪೂತ ಹಿಂದೂ ಆಗಿದ್ದ. ಅಷ್ಟೇ ಅಲ್ಲ, ಔರಂಗಜೇಬನ ಸೇನೆಯ ಬಹುತೇಕ ಯೋಧರು ರಜಪೂತರು, ಮರಾಠರು, ಜಾಟ್ ಸಮುದಾಯಕ್ಕೆ ಸೇರಿದವರಾಗಿದ್ದರು. ರಾಜರಾಯ ಸಿಂಗ್, ಸುಜನ್ ಸಿಂಗ್, ಹರಿಬಾನ್ ಸಿಂಗ್, ಉದಯಬಾನ್‌ಗೌರ, ಶೇರ್ ಸಿಂಹ್ ರಾಥೋಡ್, ಚತುರ್ಭುಜ ಚೌಹಾಣ್, ಬಾಜಿ ರಾವ್ ಚಂದ್ರರಾವ್ ಇವರೆಲ್ಲರೂ ಔರಂಗಜೇಬ್‌ನ ಸೇನಾನಿಗಳಾಗಿದ್ದರು. ಶಿವಾಜಿ ಮತ್ತು ಆತನ ಪುತ್ರ ಸಾಂಭಾಜಿಯ ವಿರುದ್ಧ ಯುದ್ಧ ಮಾಡಿದವರಲ್ಲಿ ಇವರೆಲ್ಲರೂ ಸೇರಿದ್ದಾರೆ. ಆದುದಿರಂದ ಔರಂಗಜೇಬ್‌ನ ಗೋರಿಯನ್ನು ಅಗೆಯುವ ಮುನ್ನ ಇವರೆಲ್ಲರ ಗೋರಿಯನ್ನು ಅಗೆಯಲು ಸಂಘಪರಿವಾರದ ದುಷ್ಕರ್ಮಿಗಳು ಸಿದ್ಧರಾಗಬೇಕಾಗುತ್ತದೆ. ತನ್ನ ಕೊನೆಯ ದಿನಗಳಲ್ಲಿ ಪುತ್ರ ಸಾಂಭಾಜಿಯನ್ನು ಶಿವಾಜಿಯೇ ಜೈಲಿಗೆ ತಳ್ಳಿದ್ದ. ಶಿವಾಜಿ ಮೃತಪಟ್ಟ ಬಳಿಕ ಸಾಂಭಾಜಿ ಜೈಲಿನಿಂದ ಹೊರ ಬಂದು ರಾಜ್ಯದ ಮೇಲೆ ಅಧಿಕಾರ ಚಲಾಯಿಸಿದ. ಆದರೆ ಪೇಶ್ವೆಗಳು ಮತ್ತು ಮರಾಠರೇ ಸಾಂಭಾಜಿಯನ್ನು ಬಳಿಕ ಔರಂಗಜೇಬ್‌ಗೆ ಹಿಡಿದುಕೊಟ್ಟರು. ನಿಜಕ್ಕೂ ಸಾಂಭಾಜಿಯ ಭೀಕರ ಸಾವಿಗೆ ಆತನ ಬಳಗವೇ ಕಾರಣ. ಔರಂಗಜೇಬ್‌ನ ಕೈಯಲ್ಲಿ ಸಾಂಭಾಜಿ ಸಾಯಲು ತನ್ನ ವಂಶಸ್ಥರ ಕೊಡುಗೆಗಳೆಷ್ಟು ಎನ್ನುವುದನ್ನು ಕೂಡ ಪೇಶ್ವೆ ಸಮುದಾಯಕ್ಕೆ ಸೇರಿದ ದೇವೇಂದ್ರ ಫಡ್ನವೀಸ್ ಆತ್ಮವಿಮರ್ಶೆ ಮಾಡಬೇಕಾಗುತ್ತದೆ. ಔರಂಗಜೇಬ್‌ನ ಗೋರಿಯನ್ನು ಅಗೆಯುವಾಗ, ಔರಂಗಜೇಬ್‌ನ ಜೊತೆಗೆ ಸೇರಿಕೊಂಡು ಶಿವಾಜಿ ಮತ್ತು ಆತನ ಕುಟುಂಬಕ್ಕೆ ವಂಚಿಸಿದ್ದ, ಅವರನ್ನು ಮೊಗಲರಿಗೆ ಬಲಿಕೊಟ್ಟ ಸಂಚುಕೋರರೆಲ್ಲರ ಗೋರಿಯನ್ನು ಅಗೆಯುವುದೂ ಅನಿವಾರ್ಯವಾಗುತ್ತದೆ.

ಔರಂಬಜೇಬ್ ಈ ದೇಶವನ್ನು ಆಳಿದ ಪ್ರಮುಖ ಮೊಗಲ್ ಅರಸರಲ್ಲಿ ಒಬ್ಬ. ದೇವಸ್ಥಾನಗಳನ್ನು ಧ್ವಂಸ ಮಾಡಿದ ಆರೋಪ ಆತನ ಮೇಲಿದೆ. ಹಾಗೆಯೇ ದೇವಸ್ಥಾನಗಳನ್ನು ಕಟ್ಟಲು ನೆರವು ನೀಡಿದ ದಾಖಲೆಗಳನ್ನೂ ಇತಿಹಾಸ ತಜ್ಞರು ನೀಡುತ್ತಾರೆ. ಔರಂಗಜೇಬ್‌ನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯ ಅತ್ಯಂತ ಹೆಚ್ಚು ವಿಸ್ತಾರವನ್ನು ಹೊಂದಿತ್ತು. ಅಖಂಡ ಭಾರತದ ಕಲ್ಪನೆಗೆ ಸ್ಪಷ್ಟ ರೂಪ ಕೊಟ್ಟವನು ಔರಂಗಜೇಬ್. ಎಲ್ಲಕ್ಕಿಂತ ವಿಶೇಷವೆಂದರೆ, ಈತನ ಆಳ್ವಿಕೆಯ ಕಾಲದಲ್ಲಿ ಭಾರತದ ಜಿಡಿಪಿ ಶೇ. 25ರಷ್ಟಿತ್ತು ಎನ್ನುವುದನ್ನು ಇತಿಹಾಸ ಮತ್ತು ಆರ್ಥಿಕ ತಜ್ಞರು ತಮ್ಮ ಸಂಶೋಧನಾ ಗ್ರಂಥಗಳಲ್ಲಿ ಉಲ್ಲೇಖಿಸುತ್ತಾರೆ. ಅಕ್ಬರ್ ಚಕ್ರವರ್ತಿಯ ಕಾಲದ ಬಳಿಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಆರ್ಥಿಕವಾಗಿ ಸೂಪರ್‌ಪವರ್ ದೇಶವಾಗಿ ಹೊರ ಹೊಮ್ಮಿದ್ದು ಜೌರಂಗಜೇಬ್ ಕಾಲದಲ್ಲಿ. ಮೊಗಲ್ ಇತಿಹಾಸದಲ್ಲೇ ಅತ್ಯುನ್ನತ ಸ್ಥಾನದಲ್ಲಿ ಅತ್ಯಧಿಕ ಹಿಂದೂಗಳಿದ್ದದ್ದು ಔರಂಗಜೇಬ್ ಅವಧಿಯಲ್ಲಿ ಎಂದು ಇತಿಹಾಸ ಹೇಳುತ್ತದೆ. ಸ್ವತಃ ಕವಿಯೂ ಆಗಿರುವ ಔರಂಗಜೇಬ್, ತನ್ನ ಒಂದು ಕವಿತೆಯಲ್ಲಿ ವಿಷ್ಣು, ಶಿವ ಬ್ರಹ್ಮನ ಗುಣಗಾನವನ್ನು ಮಾಡುತ್ತಾನೆ. ಮೈನೇಜರ್ ಪಾಂಡೆ ಎಂಬವರು ಸಂಪಾದಿಸಿರುವ ‘ಮೊಗಲ್ ಬಾದ್‌ಶಾಂವೋ ಕಿ ಹಿಂದಿ ಕವಿತಾ’ದಲ್ಲಿ ಆತ ಬರೆದ ಕವಿತೆಯೂ ಸೇರಿಕೊಂಡಿದೆ. ಒಳಿತು ಮತ್ತು ಕೆಡುಕುಗಳ ಸಮ್ಮಿಶ್ರನಂತೆ ಕಾಣುವ ಔರಂಗಜೇಬ್‌ನನ್ನು ಭೀಮಸೇನ್, ಈಶ್ವರದಾಸ್‌ರಂತಹ ಪ್ರಕಾಂಡ ಹಿಂದೂ ವಿದ್ವಾಂಸರೇ ಕ್ರೂರಿ, ಮತಾಂಧ ಎಂದು ಕರೆದಿಲ್ಲ. 18ನೆ ಶತಮಾನದ ಉತ್ತರಾರ್ಧದಲ್ಲಿ ಇಂತಹದೊಂದು ಚಿತ್ರಣ ನಿರೂಪಣೆಗೊಳ್ಳತೊಡಗಿದವು. 20ನೇ ಶತಮಾನದ ಸಾಮ್ರಾಜ್ಯಶಾಹಿ ಮತ್ತು ರಾಷ್ಟ್ರೀಯವಾದಿ ಇತಿಹಾಸಗಳಲ್ಲಿ ಅದು ಗಟ್ಟಿಯಾಗುತ್ತಾ ಹೋಯಿತು.

ಸಾಂಭಾಜಿಯನ್ನು ಮುಸ್ಲಿಮ್ ದೊರೆ ಔರಂಗಜೇಬ್ ಕೊಂದು ಹಾಕಿದ ಎನ್ನುವುದು ಎಷ್ಟು ಸತ್ಯವೋ, ಸಾಂಭಾಜಿಯನ್ನು ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪೇಶ್ವೆಗಳು, ಸಾಂಭಾಜಿಯ ಮರಾಠಿ ಬಂಧುಗಳು, ರಜಪೂತ ಸೇನಾಪತಿಗಳು ಸೇರಿ ಆತನನ್ನು ಔರಂಗಜೇಬ್‌ಗೆ ಬಲಿಕೊಟ್ಟರು ಎನುವುದು ಅಷ್ಟೇ ಸತ್ಯ. ಸಾಂಭಾಜಿಯ ಸಾವು ಔರಂಗಜೇಬ್‌ಗಿಂತಲೂ ಇವರಿಗೆ ಅತ್ಯಗತ್ಯವಾಗಿತ್ತು. ಔರಂಗಜೇಬನ ಗೋರಿಯನ್ನು ಕೆದಕುವುದೆಂದರೆ, ಪರೋಕ್ಷವಾಗಿ ಸಂಘಪರಿವಾರ ಸ್ವತಃ ತನ್ನದೇ ಹಿರಿಯರ ಗೋರಿಗಳನ್ನು ಕೆದಕಿದಂತೆ ಎನ್ನುವ ಕಟು ವಾಸ್ತವವನ್ನು ಆ ಸಂಘಟನೆಯ ನಾಯಕರಿಗೆ ನೆನಪಿಸಿ ಕೊಡುವುದು ಅತ್ಯಗತ್ಯವಾಗಿದೆ. ಸಾಂಭಾಜಿಯ ವ್ಯಕ್ತಿತ್ವವನ್ನು ಅತ್ಯಂತ ಕೆಟ್ಟದಾಗಿ ಚಿತ್ರಿಸಿ, ಅತ್ಯಂತ ನಿಂದನೀಯವಾಗಿ ಹಿಂದೂ ಮಹಾಸಭಾದ ನಾಯಕ ಗೋಳ್ವಾಲ್ಕರ್, ಸಾವರ್ಕರ್ ಕೂಡ ಯಾಕೆ ಬರೆದಿದ್ದಾರೆ ಎನ್ನುವುದು ಕೂಡ ಈ ಸಂದರ್ಭದಲ್ಲಿ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಇತಿಹಾಸವಿರುವುದು ಅಲ್ಲಿ ನಡೆದಿರುವ ತಪ್ಪುಗಳನ್ನು ತಿದ್ದಿಕೊಂಡು ಸುಂದರ ವರ್ತಮಾನವನ್ನು ಕಟ್ಟುವುದಕ್ಕಾಗಿಯೇ ಹೊರತು, ವರ್ತಮಾನವನ್ನು ಇನ್ನಷ್ಟು ರಾಡಿ ಮಾಡಿಕೊಳ್ಳುವುದಕ್ಕಲ್ಲ ಎನ್ನುವುದನ್ನು ಅರ್ಥಮಾಡಿಕೊಂಡರೆ ಮಾತ್ರ ಈ ದೇಶಕ್ಕೆ ಭವಿಷ್ಯವಿದೆ. ಇಲ್ಲವಾದರೆ, ಈ ದುಷ್ಕರ್ಮಿಗಳು ಭಾರತದ ಭವಿಷ್ಯವನ್ನು ಇತಿಹಾಸದ ಗೋರಿ ಅಗೆದು ಅದರಲ್ಲಿ ದಫನ ಮಾಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News