ವಿತ್ತ ಸಚಿವರೇ ‘ವಿಭಜನೆ’ಯ ಬೀಜ ಬಿತ್ತ ಹೊರಟರೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೋದಿ ನೇತೃತ್ವದ ಕೇಂದ್ರ ಸರಕಾರವು 2021ರಲ್ಲಿ ‘ಆಗಸ್ಟ್ 14’ನ್ನು ‘ವಿಭಜನೆಯ ಕರಾಳ ದಿನ’ವನ್ನಾಗಿ ಆಚರಿಸಲು ಕರೆ ನೀಡಿತ್ತು. ಈಗ ನೋಡಿದರೆ, ಸರಕಾರದ ಪ್ರತಿ ನಡೆಗಳೂ ವಿಭಜನಾ ದಿನದ ಆಚರಣೆಗೆ ನೀಡುತ್ತಿರುವ ಹೊಸ ಹೊಸ ಕೊಡುಗೆಗಳೇನೋ ಎಂದು ಜನರು ಭೀತಿ ಪಡುವಂತಾಗಿದೆ. ಉತ್ತರ ಭಾರತವನ್ನು ಪಿಡುಗಾಗಿ ಕಾಡುತ್ತಿರುವ ವಿಭಜನೆಯ ರೋಗವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಕ್ಷಿಣ ಭಾರತಕ್ಕೂ ಹಂಚಲು ಅತ್ಯಾತುರದಲ್ಲಿದ್ದಾರೆ. ಅದರ ಭಾಗವಾಗಿ ‘ತಮಿಳು ನಾಡು ಸರಕಾರದ ತಲೆಗೆ’ ಪ್ರತ್ಯೇಕತಾ ವಾದದ ಮುಳ್ಳಿನ ಕಿರೀಟವನ್ನು ಕಟ್ಟಲು ಮುಂದಾಗಿದ್ದಾರೆ. ಕೇಂದ್ರದ ಸರ್ವಾಧಿಕಾರಿ ನೀತಿಯ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ತಮಿಳುನಾಡು ಸರಕಾರದ ಬಾಯಿ ಮುಚ್ಚಿಸಲು ಕೇಂದ್ರ ಸರಕಾರ ಈ ಮೂಲಕ ಹೊಸ ತಂತ್ರದ ಮೊರೆ ಹೋಗಿದೆ. ತಮಿಳುನಾಡು ಸರಕಾರ ಬಜೆಟ್ ಮಂಡನೆ ಸಂದರ್ಭದಲ್ಲಿ ರೂಪಾಯಿ ಲಾಂಛನವನ್ನು ಬಳಸದೇ, ತನ್ನದೇ ‘ರೂ.’ ಲಾಂಛನವನ್ನು ಬಳಸಿರುವುದನ್ನು ಮಹದಾಪರಾಧವಾಗಿ ಪರಿಗಣಿಸಿರುವ ಕೇಂದ್ರ ಸಚಿವೆ, ‘‘ತಮಿಳು ನಾಡು ಸರಕಾರ ಈ ಮೂಲಕ ರಾಷ್ಟ್ರೀಯ ಚಿಹ್ನೆಯನ್ನು ತಿರಸ್ಕರಿಸಿದೆ. ತಮಿಳು ನಾಡಿನ ಈ ನಡೆಯು ಅಪಾಯಕಾರಿ ಮನಸ್ಥಿತಿಯ ಸಂಕೇತವಾಗಿದ್ದು, ಭಾರತದ ಏಕತೆಯನ್ನು ದುರ್ಬಲಗೊಳಿಸುತ್ತದೆ. ಹಾಗೂ ಪ್ರಾದೇಶಿಕ ಗೌರವದ ಹೆಸರಿನಲ್ಲಿ ಪ್ರತ್ಯೇಕತಾವಾದಿ ಭಾವನೆಗಳಿಗೆ ಕುಮ್ಮಕ್ಕು ನೀಡುತ್ತದೆ’’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿಯವರು, ಈ ದೇಶ ವಿಭಜನೆಗೊಂಡ ದಿನವನ್ನು ‘ಸ್ಮರಣೀಯ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿದಾಗ ಅದರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ದೇಶ ಸ್ವತಂತ್ರಗೊಂಡ ದಿನದಿಂದ, ಗಾಂಧಿ, ನೆಹರೂ, ಪಟೇಲ್, ಶಾಸ್ತ್ರಿ, ಇಂದಿರಾಗಾಂಧಿಯಂತಹ ನಾಯಕರು ಈ ದೇಶದ ಏಕತೆಯನ್ನು ಕಾಪಾಡಲು ಹರ ಸಾಹಸ ಪಟ್ಟಿದ್ದರೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಮೋದಿ ನೇತೃತ್ವದ ಸರಕಾರ ಏಕತೆಯನ್ನು ಬದಿಗೆ ಸರಿಸಿ, ‘ವಿಭಜನೆಯ ದಿನ’ವನ್ನು ಆಚರಿಸಲು ಮುಂದಾಯಿತು. ಹಿಂದೂ, ಮುಸ್ಲಿಮ್, ಮೇಲ್ ಜಾತಿ-ಕೆಳಜಾತಿ, ದಕ್ಷಿಣ ಭಾರತ-ಉತ್ತರ ಭಾರತ ಹೀಗೆ ಜನರನ್ನು ವಿಭಜಿಸುವ ಮೂಲಕವೇ ಅಧಿಕಾರವನ್ನು ಹಿಡಿದ ನಾಯಕರು ‘ವಿಭಜನೆ’ಯ ದಿನವನ್ನಲ್ಲದೆ ದೇಶಕ್ಕೆ ಇನ್ನೇನನ್ನು ಉಡುಗೊರೆಯಾಗಿ ನೀಡಲು ಸಾಧ್ಯ? ಕಳೆದ ಹತ್ತು ವರ್ಷಗಳಲ್ಲಿ ಸರಕಾರ ದೇಶವನ್ನು ವಿಭಜಿಸಲು ಹೊಸ ಹೊಸ ಪದಗಳನ್ನು ಹುಟ್ಟಿಸಿ ಹಾಕಿತು. ಸಿಎಎ, ಎನ್ಆರ್ಸಿಗಳೆಲ್ಲ ಅದ ಫಲವಾಗಿಯೇ ಹುಟ್ಟಿಕೊಂಡವುಗಳು. ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿದವರೆಲ್ಲ ದೇಶದ್ರೋಹಿಗಳಾದರು. ಸರಕಾರವನ್ನು ಟೀಕಿಸಿದರೆ ದೇಶವನ್ನು ಟೀಕಿಸಿದಂತೆ ಎನ್ನುವ ಅಲಿಖಿತ ನಿಯಮವೊಂದು ಜಾರಿಗೆ ಬಂತು. ನೋಟು ನಿಷೇಧ, ಲಾಕ್ಡೌನ್ ಅನಾಹುತಗಳ ವಿರುದ್ಧ ಧ್ವನಿಯೆತ್ತಿದವರನ್ನು ದೇಶದಿಂದ ಹೊರಗಿಡುವ ಪ್ರಯತ್ನ ನಡೆಯಿತು. ಕೇಂದ್ರದ ವಿರುದ್ಧ ಜನಾಂದೋಲನ ಸಂಘಟಿಸಿದ ರೈತರು ಖಾಲಿಸ್ತಾನಿ ಭಯೋತ್ಪಾದಕರಾದರು. ದಲಿತರ ಮೇಲಿನ ದೌರ್ಜನ್ಯವನ್ನು ವರದಿ ಮಾಡಲು ತೆರಳಿದ ಪತ್ರಕರ್ತರ ವಿರುದ್ಧ ದೇಶದ್ರೋಹ ಕಾನೂನನ್ನು ಜಡಿದು ಜೈಲಿಗೆ ತಳ್ಳಲಾಯಿತು. ಆದಿವಾಸಿಗಳ ಪರವಾಗಿ ಕೆಲಸ ಮಾಡಿದವರು, ದಲಿತರನ್ನು ಸಂಘಟಿಸಿದ ಮಾನವಹಕ್ಕು ಕಾರ್ಯಕರ್ತರು ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿ ಅಲ್ಲೇ ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಯಿತು. ಸರಕಾರದ ವಿಭಜನೆಯ ರಾಜಕಾರಣಕ್ಕೆ ಬಲಿಯಾಗಿ ಇಂದಿಗೂ ನೂರಾರು ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ವಿದ್ಯಾರ್ಥಿಗಳು, ಹೋರಾಟಗಾರರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.
ಇದೀಗ ಕೇಂದ್ರ ಸರಕಾರವು ಜನರ ನಡುವೆ ಮಾತ್ರವಲ್ಲ, ರಾಜ್ಯಗಳ ನಡುವೆ ತಂದಿಟ್ಟು ವಿಭಜನೆಗೆ ಇನ್ನಷ್ಟು ವಿಸ್ತಾರ ರೂಪವನ್ನು ಕೊಡಲು ಮುಂದಾಗಿದೆ. ಈಗಾಗಲೇ ದಕ್ಷಿಣ ಭಾರತದ ರಾಜ್ಯಗಳು ಸೇರಿದಂತೆ ಹಲವು ಬಿಜೆಪಿಯೇತರ ಆಳ್ವಿಕೆಯುಳ್ಳ ರಾಜ್ಯಗಳು ತೆರಿಗೆ ಹಂಚಿಕೆಯಲ್ಲಿ ತಮಗೆ ಅನ್ಯಾಯವಾಗಿದೆ ಎನ್ನುವ ಆಕ್ರೋಶವನ್ನು ವ್ಯಕ್ತಪಡಿಸಿವೆ ಮಾತ್ರವಲ್ಲ, ಸಂಘಟಿತವಾಗಿ ರಾಷ್ಟ್ರಮಟ್ಟದಲ್ಲಿ ಇದರ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ. ರಾಜ್ಯಪಾಲರನ್ನು ಬಳಸಿಕೊಂಡು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದು ಮಾತ್ರವಲ್ಲ, ಹಿಂದಿ ಹೇರಿಕೆಯ ಮೂಲಕ ಸ್ಥಳೀಯ ಭಾಷೆ, ಸಂಸ್ಕೃತಿಯ ಮೇಲೂ ಕೇಂದ್ರ ಸರಕಾರ ದಾಳಿ ನಡೆಸುತ್ತಿದೆ ಎನ್ನುವ ಆಕ್ರೋಶಗಳನ್ನು ರಾಜ್ಯಗಳು ವ್ಯಕ್ತಪಡಿಸುತ್ತಿವೆ. ಇದರ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಸಂಘಟಿತವಾಗಿ ಹೋರಾಟಗಳನ್ನು ನಡೆಸಲು ಮುಂದಾಗಿವೆ. ಇದೇ ಹೊತ್ತಿಗೆ, ಜನಸಂಖ್ಯಾಧಾರಿತ ಕ್ಷೇತ್ರ ಮರುವಿಂಗಡಣೆಯು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಂಪನವನ್ನು ಸೃಷ್ಟಿಸಿದೆ. ದೇಶವು ಕುಟುಂಬ ಯೋಜನೆ ವ್ಯವಸ್ಥೆಯನ್ನು ಜಾರಿಗೆ ತಂದಾಗ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದ, ಸಾಕ್ಷರತೆಯಲ್ಲಿ ಅಪಾರ ಸಾಧನೆಯನ್ನು ಮಾಡಿದ್ದ ದಕ್ಷಿಣ ಭಾರತದ ರಾಜ್ಯಗಳು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದವು. ಇದೇ ಸಂದರ್ಭದಲ್ಲಿ ಉತ್ತರ ಭಾರತ ಭಾವನಾತ್ಮಕ ರಾಜಕೀಯಕ್ಕೆ ಒತ್ತು ನೀಡಿ, ಅಭಿವೃದ್ಧಿಯ ರಾಜಕೀಯದಲ್ಲಿ ಹಿಂದಕ್ಕೆ ತಳ್ಳಲ್ಪಟ್ಟಿತು. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಉತ್ತರ ಭಾರತ ಹಿಂದಕ್ಕೆ ಚಲಿಸಲ್ಪಟ್ಟಿದೆ ಮಾತ್ರವಲ್ಲ, ಕುಟುಂಬ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಯಿತು. ಪರಿಣಾಮವಾಗಿ ಇಂದು ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದ ಜನಸಂಖ್ಯೆ ಹೆಚ್ಚಿದೆ. ಕುಟುಂಬ ಯೋಜನೆಯನ್ನು ಜಾರಿಗೊಳಿಸಿರುವುದಕ್ಕಾಗಿ ಶಿಕ್ಷೆಯ ರೂಪದಲ್ಲಿ, ದಕ್ಷಿಣ ಭಾರತದ ಚುನಾವಣಾ ಕ್ಷೇತ್ರಗಳನ್ನು ಕೇಂದ್ರ ಸರಕಾರ ಇಳಿಸಲು ಮುಂದಾಗಿದೆ ಮಾತ್ರವಲ್ಲ, ಉತ್ತರ ಭಾರತದಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ. ಇದರ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಜಂಟಿ ಸಭೆ ನಡೆಸಲು ಮುಂದಾಗಿದ್ದಾರೆ. ದಕ್ಷಿಣ ಭಾರತದ ಈ ಪ್ರತಿರೋಧ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಪ್ರತಿರೋಧವನ್ನು ಮಟ್ಟ ಹಾಕಲು ಇದೀಗ ಕೇಂದ್ರ ಸರಕಾರ ದಕ್ಷಿಣ ಭಾರತದ ರಾಜ್ಯಗಳನ್ನೇ ‘ದೇಶವಿರೋಧಿ’ಯಾಗಿ ಚಿತ್ರಿಸಲು ಮುಂದಾಗಿದೆ.
ತಮಿಳು ನಾಡು ಸರಕಾರ ತನ್ನ ಬಜೆಟ್ನ ಸಂದರ್ಭದಲ್ಲಿ ಪ್ರಾದೇಶಿಕ ಅಸ್ಮಿತೆಯನ್ನು ಎತ್ತಿ ಹಿಡಿಯುವ ಭಾಗವಾಗಿ, ತಮಿಳು ಭಾಷೆಯ ‘ರೂ.’ವನ್ನು ಬಳಸುವುದನ್ನು ‘ವಿಭಜನೆಗೆ ಕುಮ್ಮಕ್ಕು ನೀಡಿದಂತಾಗಿದೆ’ ಎಂದು ವಿತ್ತ ಸಚಿವೆ ವ್ಯಾಖ್ಯಾನಿಸಿರುವುದು ಎಷ್ಟು ಸರಿ? ಎಂದು ಜನರು ಕೇಳುತ್ತಿದ್ದಾರೆ. ಯಾಕೆಂದರೆ, ಈ ಹಿಂದೆ ಸ್ವತಃ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ‘ಕೇಂದ್ರ ಸರಕಾರದ ರೂ. ಲಾಂಛನಕ್ಕೆ ಬದಲಾಗಿ ತಮಿಳಿನ ರೂ.’ವನ್ನು ಬಳಸಿರುವುದನ್ನು ಮಾಧ್ಯಮಗಳು ಬೆಳಕಿಗೆ ತಂದಿವೆ. 2017ರಲ್ಲಿ ಜಿಎಸ್ಟಿಗೆ ಸಂಬಂಧಿಸಿದ ತನ್ನ ಟ್ವೀಟ್ನಲ್ಲಿ ವಿತ್ತ ಸಚಿವರು ತಮಿಳು ಲಾಂಛನವನ್ನು ಬಳಸಿದ್ದರು. ಆಗ ವಿಭಜನೆಗೆ ಕುಮ್ಮಕ್ಕು ನೀಡದೇ ಇದ್ದ ತಮಿಳು ಲಾಂಛನ, ತಮಿಳು ಸರಕಾರ ಬಜೆಟ್ ಸಂದರ್ಭದಲ್ಲಿ ಬಳಸಿದಾಗ ಮಾತ್ರ ವಿಭಜನೆಗೆ ಕುಮ್ಮಕ್ಕು ನೀಡುವುದು ಹೇಗೆ? ಇಂದು, ವಿಭಜನವಾದಗಳಿಗಾಗಿ ಕುಖ್ಯಾತಿಯಲ್ಲಿರುವುದು ಉತ್ತರ ಭಾರತವೇ ಹೊರತು, ದಕ್ಷಿಣ ಭಾರತವಲ್ಲ. ಪಂಜಾಬ್, ಕಾಶ್ಮೀರ, ಈಶಾನ್ಯ ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ಮೇಲೆ ಕೇಂದ್ರ ನಡೆಸಿದ ಹಸ್ತಕ್ಷೇಪವೇ ಇಂದು ಅಲ್ಲೆಲ್ಲ ವಿಭಜನೆಯ ಕೂಗನ್ನು ಬಡಿದೆಬ್ಬಿಸಿದೆ. ಇದೀಗ ವಿತ್ತ ಸಚಿವರು, ಆ ವಿಭಜನೆಯ ವೈರಸ್ನ್ನು ದಕ್ಷಿಣ ಭಾರತದಲ್ಲಿ ತಂದು ಬಿತ್ತಿ ಬೆಳೆಯುವ ಹುನ್ನಾರದಲ್ಲಿದ್ದಾರೆ. ತನ್ನ ರಾಜಕೀಯ ದುರುದ್ದೇಶಕ್ಕಾಗಿ ದಕ್ಷಿಣದ ರಾಜ್ಯಗಳ ತಲೆಯ ಮೇಲೆ ವಿಭಜನಾವಾದದ ಮುಳ್ಳಿನ ಕಿರೀಟವನ್ನು ಇಟ್ಟು ದೇಶದ ಏಕತೆಯ ಜೊತೆಗೆ ಚೆಲ್ಲಾಟವಾಡುವುದು ಕಳವಳಕಾರಿ ನಡೆಯಾಗಿದೆ. ಒಕ್ಕೂಟ ವ್ಯವಸ್ಥೆಗೆ ಇದು ಭಾರೀ ಧಕ್ಕೆಯನ್ನು ತರುವ ಸಾಧ್ಯತೆಗಳಿವೆ. ಆದುದರಿಂದ ವಿತ್ತ ಸಚಿವರು ತಕ್ಷಣ ತನ್ನ ಹೇಳಿಕೆಗಳನ್ನು ಹಿಂದೆಗೆದುಕೊಂಡು, ತಮಿಳುನಾಡಿನ ಕ್ಷಮೆಯಾಚಿಸಬೇಕು. ರೂಪಾಯಿ ಲಾಂಛನದ ಬಗ್ಗೆ ಅನಗತ್ಯ ತಲೆಕೆಡಿಸಿಕೊಳ್ಳದೆ, ಇಳಿಯುತ್ತಿರುವ ರೂಪಾಯಿ ಮೌಲ್ಯದ ಬಗ್ಗೆ ತಲೆಕೆಡಿಸಿಕೊಂಡರೆ ಅದರಿಂದ ಈ ದೇಶದ ಆರ್ಥಿಕತೆಗಾದರೂ ಒಂದಿಷ್ಟು ಪ್ರಯೋಜನವಾಗಬಹುದು.