ಉರಿವ ಗಾಯಕ್ಕೆ ಉಪ್ಪು ಸವರಿದ ಮೊಯ್ಲಿ

PC: facebook.com/veerappamoily
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯ ಕಾಂಗ್ರೆಸ್‌ನ ಉರಿಯುವ ಗಾಯಕ್ಕೆ ಉಪ್ಪು ಸವರಿದ್ದಾರೆ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿಯವರು. ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ನಿರುದ್ಯೋಗಿಯಾಗಿರುವ ಈ ಹಿರಿಯ ನಾಯಕ, ತನ್ನ ಅಸ್ತಿತ್ವವನ್ನು ಪ್ರದರ್ಶಿಸುವ ಒಂದೇ ಉದ್ದೇಶದಿಂದ, ಕದಡಿರುವ ರಾಜ್ಯ ಕಾಂಗ್ರೆಸ್‌ನ ನೀರಿನಲ್ಲಿ ಮೀನು ಹಿಡಿಯಲು ಹೊರಟಿದ್ದಾರೆ. ಈಗಾಗಲೇ ತಣ್ಣಗಾಗಿದ್ದ ಪೂರ್ಣಾವಧಿ ಮುಖ್ಯಮಂತ್ರಿ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡುತ್ತಾ, ‘‘ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಈಗಾಗಲೇ ತೀರ್ಮಾನವಾಗಿರುವ ವಿಷಯ. ಅವರು ರಾಜ್ಯದ ಮುಖ್ಯಮಂತ್ರಿಯಾಗುವುದು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’’ ಎಂದು ಡಿಕೆಶಿ ಬಣವನ್ನು ಅವರು ಹುರಿದುಂಬಿಸಿದ್ದಾರೆ. ಆ ಮೂಲಕ, ಸರಕಾರ ರಚನೆಯಾಗುವ ಸಂದರ್ಭದಲ್ಲೇ ‘‘ಮುಖ್ಯಮಂತ್ರಿ ಹುದ್ದೆ ಹಂಚಿಕೆಯ ಬಗ್ಗೆ ನಿರ್ಧಾರವಾಗಿದೆ’’ ಎನ್ನುವ ವದಂತಿಗೆ ಜೀವ ತುಂಬಿದ್ದಾರೆ. ಜೊತೆಗೆ ‘‘ಕಾಂಗ್ರೆಸ್‌ನಲ್ಲಿ ನಡೆಯುವ ಸಿಎಂ ಚರ್ಚೆಗೆ ನೀವು ಯಾವತ್ತೂ ಪ್ರತಿಕ್ರಿಯೆ ನೀಡಬೇಡಿ. ನಿಮ್ಮ ವಿರುದ್ಧ ಹೇಳಿಕೆಗಳು ಬರುತ್ತೆ ಹೋಗುತ್ತೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’’ ಎಂದು ಡಿಕೆಶಿಯವರಿಗೆ ಕಿವಿಮಾತನ್ನೂ ನುಡಿದಿದ್ದಾರೆ. ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆಯ ಚರ್ಚೆ ರಾಜ್ಯಕ್ಕಷ್ಟೇ ಸೀಮಿತವಾಗಿತ್ತು. ದಿಲ್ಲಿಯಲ್ಲಿ ಕುಳಿತ ನಾಯಕರಾರೂ ಈ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡಿರಲಿಲ್ಲ. ಕಾಂಗ್ರೆಸ್‌ನೊಳಗೆ ನಡೆಯುತ್ತಿರುವ ಶೀತಲ ಸಮರದ ಹಿನ್ನೆಲೆಯಲ್ಲಿ ದಿಲ್ಲಿಯಿಂದ ಮಧ್ಯಸ್ಥಿಕೆಗೆ ಬಂದ ವರಿಷ್ಠರೂ, ಮುಖ್ಯಮಂತ್ರಿ ಹುದ್ದೆಯ ಹಂಚಿಕೆಯ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ ಮಾತ್ರವಲ್ಲ, ‘‘ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ’’ ಎಂದು ಎಲ್ಲರೂ ಸ್ಪಷ್ಟಪಡಿಸಿದ್ದರು. ಸಾರ್ವಜನಿಕವಾಗಿ ಹೇಳಿಕೆ ನೀಡುವವರಿಗೆ ಮಲ್ಲಿಕಾರ್ಜುನ ಖರ್ಗೆಯವರು ಕಟುವಾದ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಡಿಕೆಶಿ ವರಿಷ್ಠರ ಬಳಿ ಚರ್ಚಿಸಿರಬಹುದಾದರೂ ಸಾರ್ವಜನಿಕವಾಗಿ ಯಾವತ್ತೂ ಸಿದ್ದರಾಮಯ್ಯರ ವಿರುದ್ಧವಾಗಲಿ, ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಬಗ್ಗೆಯಾಗಲಿ ಹೇಳಿಕೆಯನ್ನು ನೀಡಿರಲಿಲ್ಲ.
ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಬೇಡಿ ಎಂದು ವರಿಷ್ಠರು ಎಚ್ಚರಿಸಿರುವಾಗಲೇ ವೀರಪ್ಪ ಮೊಯ್ಲಿ ಈ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದು ಎಷ್ಟು ಸರಿ? ಎನ್ನುವ ಪ್ರಶ್ನೆಯನ್ನು ರಾಜ್ಯದ ಕಾಂಗ್ರೆಸ್ ಮುಖಂಡರು ಕೇಳುತ್ತಿದ್ದಾರೆ. ‘ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾಗಬೇಕು? ಹೇಗಾಗಬೇಕು?’ ಎನ್ನುವ ಮಾತುಗಳನ್ನು ಸಾರ್ವಜನಿಕವಾಗಿ ಆಡಲು ವೀರಪ್ಪ ಮೊಯ್ಲಿ ಎಷ್ಟರಮಟ್ಟಿಗೆ ನೈತಿಕ ಅರ್ಹತೆಯನ್ನು ಪಡೆದಿದ್ದಾರೆ ಎಂದು ಅವರು ಒಳಗೊಳಗೆ ಬುಸುಗುಟ್ಟುವಂತಾಗಿದೆ. ಯಾಕೆಂದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ, ರಾಜ್ಯ ರಾಜಕೀಯದಿಂದ ಮೊಯ್ಲಿ ಸಂಪೂರ್ಣ ದೂರ ಸರಿದಿದ್ದರು. ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಪುನರ್ ಸಂಘಟಿಸುವ ವಿಷಯದಲ್ಲಿ ಅವರ ಪಾತ್ರ ಸೊನ್ನೆ. ಕರಾವಳಿಯನ್ನು ಹಂತ ಹಂತವಾಗಿ ಬಿಜೆಪಿಗೆ ಮತ್ತು ಸಂಘಪರಿವಾರಕ್ಕೆ ಒಪ್ಪಿಸುವಲ್ಲಿ ವೀರಪ್ಪಮೊಯ್ಲಿಯವರ ಪಾತ್ರ ಬಹುದೊಡ್ಡದಿದೆ. ಕಾಂಗ್ರೆಸ್‌ನಲ್ಲಿ ಯುವ ನಾಯಕರು ಕರಾವಳಿಯಲ್ಲಿ ಬೆಳೆಯದಂತೆ ಅವರನ್ನು ಪ್ರಾಥಮಿಕವಾಗಿ ಚಿವುಟಿ ಹಾಕಿದ ಆರೋಪಗಳು ಅವರ ಮೇಲಿವೆ. ಅಷ್ಟೇ ಅಲ್ಲ, ಕರಾವಳಿ ಕಾಂಗ್ರೆಸ್‌ಗೆ ಎಳ್ಳಷ್ಟು ಕೊಡುಗೆಯನ್ನು ನೀಡದ ತನ್ನ ಪುತ್ರನನ್ನೇ ಅಭ್ಯರ್ಥಿಯಾಗಿಸಲು ಹಟ ಹಿಡಿದು ಅಳಿದುಳಿದ ಕಾಂಗ್ರೆಸನ್ನು ಮುಗಿಸಿದರು. ಅವರದೇ ಊರಾಗಿರುವ ಕಾರ್ಕಳದಲ್ಲೇ ಇಂದು ಕಾಂಗ್ರೆಸ್ ತಲೆಎತ್ತಿ ನಿಲ್ಲಲು ಹೆಣಗಾಡುತ್ತಿದೆ. ಕರಾವಳಿಯಲ್ಲಿ ಸಂಘಪರಿವಾರ ನಡೆಸುತ್ತಿರುವ ದಾಂಧಲೆಗಳು ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆಸಿದ ಅವಾಂತರಗಳ ವಿರುದ್ಧ ಮಾತನಾಡಲು ಇವರಲ್ಲಿ ಧ್ವ ನಿಯಿರಲಿಲ್ಲ. ಇತ್ತೀಚೆಗೆ ಬಿಜೆಪಿಯು ವಕ್ಫ್ ಹೆಸರಿನಲ್ಲಿ, ಮುಡಾ ಹಗರಣದ ಹೆಸರಿನಲ್ಲಿ ಕಾಂಗ್ರೆಸ್ ವಿರುದ್ಧ ಬೀದಿ ಆಂದೋಲನ ಶುರು ಹಚ್ಚಿದಾಗಲೂ ವೀರಪ್ಪ ಮೊಯ್ಲಿಯವರ ಪತ್ತೆಯಿರಲಿಲ್ಲ. ಇದೀಗ ಮುಖ್ಯಮಂತ್ರಿ ಹುದ್ದೆಯ ಹಂಚಿಕೆಯ ವಿಷಯದಲ್ಲಿ ಮಾತ್ರ ಅವರು ಅತ್ಯಾಸಕ್ತಿಯನ್ನು ತೋರಿಸುತ್ತಿರುವುದು ಮತ್ತು ಒಂದು ಬಣಕ್ಕೆ ಕುಮ್ಮಕ್ಕು ನೀಡಲು ಮುಂದಾಗಿರುವುದು ಅವರ ಹಿರಿತನದ ಘನತೆಗೆ ಕುಂದು ತಂದಿದೆ.
ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರಕಾರ ಒಂದರ ಹಿಂದೆ ಒಂದರಂತೆ ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ರಾಜ್ಯದ ಮೇಲೆ ಹಿಂದಿ ಹೇರಿಕೆಗೆ ಭಾರೀ ಪ್ರಯತ್ನಗಳು ನಡೆಯುತ್ತಿವೆ. ಒಂದು ದೇಶ-ಒಂದು ಚುನಾವಣೆ, ಕ್ಷೇತ್ರ ಪುನರ್ ವಿಂಗಡಣೆ ಮೊದಲಾದ ಕ್ರಮಗಳ ಮೂಲಕ ರಾಜ್ಯದ ಅಧಿಕಾರವನ್ನು ಹಂತಹಂತವಾಗಿ ಕಿತ್ತುಕೊಳ್ಳಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಇದರ ವಿರುದ್ಧ ಒಂದು ಪತ್ರಿಕಾಗೋಷ್ಠಿ ನಡೆಸಿ ಅದನ್ನು ವಿರೋಧಿಸುವ ಧೈರ್ಯವನ್ನು ವೀರಪ್ಪಮೊಯ್ಲಿ ಈವರೆಗೆ ಪ್ರದರ್ಶಿಸಿಲ್ಲ. ಇಂದು ಆರೆಸ್ಸೆಸ್ ಮತ್ತು ಸಂಘಪರಿವಾರದ ದಾಂಧಲೆಯ ವಿರುದ್ಧ ರಾಹುಲ್ ಗಾಂಧಿ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಅವರ ಧ್ವನಿಗೆ ಧ್ವನಿಯಾಗುವ ಪ್ರಯತ್ನವನ್ನು ವೀರಪ್ಪಮೊಯ್ಲಿಯಂತಹ ಹಿರಿಯರು ಪ್ರಾಮಾಣಿಕವಾಗಿ ಮಾಡಿದ್ದಿದ್ದರೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲವೇನೋ. ಭೂಸುಧಾರಣೆಯ ಕಾಲದಲ್ಲಿ ಒಕ್ಕಲು ಮಸೂದೆಯ ಪ್ರಯೋಜನವನ್ನು ಜನರಿಗೆ ತಲುಪಿಸುವಲ್ಲಿ ವೀರಪ್ಪ ಮೊಯ್ಲಿಯವರ ಪಾತ್ರವನ್ನು ನಿರಾಕರಿಸುವಂತಿಲ್ಲ. ಮುಖ್ಯಮಂತ್ರಿಯಾಗಿಯೂ ಕೆಲಕಾಲ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಆದರೆ ತನಗೆ ಸಿಕ್ಕಿದ ಅಧಿಕಾರವನ್ನು ಬಳಸಿಕೊಂಡು ತಳಮಟ್ಟದಲ್ಲಿ ಕಾಂಗ್ರೆಸ್ ಕಟ್ಟುವ ಕೆಲಸದಲ್ಲಿ ಮಾತ್ರ ಇವರ ಕೊಡುಗೆ ಏನೇನೂ ಇಲ್ಲ. ಮಂಗಳೂರು ಲೋಕಸಭೆಯಲ್ಲಿ ಸರಣಿ ಸೋಲಿನ ಬಳಿಕ ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಪುನರ್‌ಜನ್ಮ ಪಡೆದ ಮೊಯ್ಲಿ ಇದೀಗ ಆ ಕ್ಷೇತ್ರದಿಂದಲೂ ದೂರವಾಗಿದ್ದಾರೆ.
ಕಳೆದ ವಿಧಾನಸಭೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ಹಿಂದೆ ಸಿದ್ದರಾಮಯ್ಯ ಅವರ ಪಾತ್ರ ದೊಡ್ಡದಿದೆ. ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಕೂಡ ಸಿದ್ದರಾಮಯ್ಯ ಜೊತೆಗೆ ಬಲವಾಗಿ ಕೈ ಜೋಡಿಸಿದ್ದರು. ವೇದಿಕೆಯಲ್ಲಿ ಇವರು ಪ್ರದರ್ಶಿಸಿದ ಒಗ್ಗಟ್ಟು ಅಂತಿಮವಾಗಿ ಕಾಂಗ್ರೆಸ್‌ಗೆ ಭರ್ಜರಿ ಜಯವನ್ನು ತಂದುಕೊಟ್ಟಿತು. ಇದಾದನಂತರ ಅದೇನು ಒಪ್ಪಂದ ನಡೆಯಿತೋ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಎಲ್ಲೂ ವಿಫಲರಾಗಲಿಲ್ಲ. ಅವರ ಮುತ್ಸದ್ದಿತನದ ಬಲದಿಂದಲೇ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಅವರ ಜಾಗದಲ್ಲಿ ಬೇರೆ ಯಾರೇ ಇದ್ದರೂ, ಈ ಗ್ಯಾರಂಟಿ ಯೋಜನೆಗಳ ಹುಲಿ ಸವಾರಿ ಸರಕಾರವನ್ನು ತಿಂದು ಹಾಕಿ ಬಿಡುತ್ತಿತ್ತು. ಗ್ಯಾರಂಟಿ ಯೋಜನೆಗಳ ವಿರುದ್ಧ ವಿರೋಧ ಪಕ್ಷಗಳು ಭಾರೀ ದಾಳಿಗಳನ್ನು ಮಾಡುತ್ತಾ ಬರುತ್ತಿವೆಯಾದರೂ, ಸಿದ್ದರಾಮಯ್ಯ ಅವರ ಮುತ್ಸದ್ದಿತನದ ಬಲದಿಂದ ಅದು ಯಶಸ್ವಿಯಾಗಿ ಮುಂದುವರಿದಿದೆ. ಇಂದು ಅವರನ್ನು ಬದಲಿಸುವ ಯಾವ ಕಾರಣಗಳೂ ಕಾಂಗ್ರೆಸ್‌ನ ಮುಂದಿಲ್ಲ. ಹೀಗಿರುವಾಗ, ಯಾವ ನೆಪವನ್ನು ಮುಂದೊಡ್ಡಿ ವೀರಪ್ಪ ಮೊಯ್ಲಿಯವರು ‘ಮುಖ್ಯಮಂತ್ರಿ ಬದಲಾವಣೆ’ಯನ್ನು ಬಯಸುತ್ತಿದ್ದಾರೆ? ಅವರ ಹೇಳಿಕೆ ರಾಜಕೀಯ ಅಸೂಯೆಯಿಂದ ಕೂಡಿದೆಯೆನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ಕಾಂಗ್ರೆಸ್‌ನಿಂದ ಸಕಲ ಲಾಭಗಳನ್ನು ಅನುಭವಿಸಿದ ಹಿರಿಯರೇ ಇಂದು ಅದರ ಬೆಳವಣಿಗೆಗೆ ಮುಳುವಾಗುತ್ತಿರುವುದು ಪಕ್ಷದ ಅತಿದೊಡ್ಡ ದುರಂತವಾಗಿದೆ. ಗುಲಾಂ ನಬಿ ಆಝಾದ್, ಎಸ್. ಎಂ. ಕೃಷ್ಣ, ಪ್ರಣವ್ ಮುಖರ್ಜಿಯಂತಹ ನಿವೃತ್ತರು ಉಂಡಮನೆಗೆ ಎರಡು ಬಗೆದರು. ಇದೀಗ ಇವರ ಸಾಲಿಗೆ ಸೇರಲು ಮೊಯ್ಲಿ ಕೂಡ ಸಿದ್ಧತೆ ನಡೆಸುತ್ತಿದ್ದಾರೆಯೇ ಎಂದು ಕಾರ್ಯಕರ್ತರು ಶಂಕಿಸುವಂತಾಗಿದೆ. ರಾಜ್ಯ ಕಾಂಗ್ರೆಸ್‌ನೊಳಗೆ ಅನಗತ್ಯ ಹೇಳಿಕೆಗಳನ್ನು ನೀಡಿ, ಭಿನ್ನಮತದ ಗಾಯಕ್ಕೆ ಇನ್ನಷ್ಟು ನಂಜು ತುಂಬಲು ಹೊರಟಿರುವ ವೀರಪ್ಪ ಮೊಯ್ಲಿಯವರ ಬಾಯಿ ಮುಚ್ಚಿಸಲು ವರಿಷ್ಠರು ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿದೆ.