ತನಿಖಾ ಪತ್ರಿಕೋದ್ಯಮ ಸತ್ತಿಲ್ಲ, ಅದನ್ನು ಕೊಂದು ಹಾಕಲಾಗಿದೆ!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ನಾಡಿನ ಶಾಂತಿ ಸುವ್ಯವಸ್ಥೆಯ ಬಗ್ಗೆ ಕೆಲವೊಮ್ಮೆ ಪೊಲೀಸರಿಗೆ ಕಾಳಜಿ ಉಕ್ಕಿ ಬಂದು ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತ ದೂರನ್ನು ದಾಖಲಿಸುವುದಿದೆ. ಸಾರ್ವಜನಿಕವಾಗಿ ಸಾವಿರಾರು ಜನರನ್ನು ಸೇರಿಸಿ, ಮೈಕ್ ಕಟ್ಟಿ ಸಂಘಪರಿವಾರದ ನಾಯಕನೊಬ್ಬ ಒಂದು ಸಮುದಾಯದ ಮಹಿಳೆಯರ ವಿರುದ್ಧ ಅವಾಚ್ಯ ಮಾತುಗಳನ್ನಾಡಿ ಜನರನ್ನು ಪ್ರಚೋದಿಸಿದಾಗ, ಇದೇ ಕಿವಿ ಕಿವುಡಾಗಿರುತ್ತದೆ. ಅಂದರೆ, ಅದನ್ನು ಈ ನಾಡಿನ ಶಾಂತಿಸೌಹಾರ್ದಗಳಿಗೆ ನೀಡಿದ ಕೊಡುಗೆಯೋ ಎಂಬಂತೆ ಸ್ವೀಕರಿಸುತ್ತಾರೆ. ಪೊಲೀಸರು ಸ್ವಯಂಪ್ರೇರಿತವಾಗಿ ದೂರುದಾಖಲಿಸಬೇಕಾದರೆ, ಅದಕ್ಕೆ ಕೆಲವು ಅರ್ಹತೆಗಳಿರಬೇಕು. ಮುಖ್ಯವಾಗಿ ಅವರು ಅನ್ಯಾಯಗಳ ವಿರುದ್ಧ ಮಾತನಾಡಬೇಕಾಗುತ್ತದೆ. ಪತ್ರಕರ್ತರಾಗಿದ್ದು ಒಂದು ನಿರ್ದಿಷ್ಟ ಸಮುದಾಯಕ್ಕೆ, ಜಾತಿಗೆ ಸೇರಿದರೆ ಸುಮೋಟೋ ದಾಖಲಿಸಲು ಪ್ರಕರಣ ಇನ್ನಷ್ಟು ಯೋಗ್ಯವಾಗಿ ಬಿಡುತ್ತದೆ. ಒಬ್ಬ ಡಿಜಿಟಲ್ ಪತ್ರಕರ್ತ, ತನ್ನ ಯೂಟ್ಯೂಬ್‌ನಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಮಾತನಾಡುತ್ತಿದ್ದಂತೆಯೇ ಪೊಲೀಸರಿಗೆ ನಾಡಿನ ಶಾಂತಿ ಸುವ್ಯವಸ್ಥೆ ನೆನಪಾಗಿದ್ದು ಇದೇ ಕಾರಣಕ್ಕೆ. ಯಾರೂ ದೂರು ಸಲ್ಲಿಸದೇ ಇದ್ದರೂ, ಯಾವುದೇ ಉದ್ವಿಗ್ನ ವಾತಾವರಣ ಸೃಷ್ಟಿಯಾಗದೇ ಇದ್ದರೂ, ಸಾರ್ವಜನಿಕರು ಆ ವಿಶೇಷ ವರದಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದರೂ ಪೊಲೀಸರು ಸ್ವಯಂ ಪ್ರೇರಿತವಾಗಿ ಯೂಟ್ಯೂಬರ್‌ನ ಮೇಲೆ ಎಫ್‌ಐಆರ್ ದಾಖಲಿಸಿ ಬಂಧನಕ್ಕೆ ಮುಂದಾಗುತ್ತಾರೆ. ರಾಜ್ಯದಲ್ಲಿ ಆದಿತ್ಯನಾಥ್ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದೆ ಎಂದಿದ್ದರೆ ಇದೆಲ್ಲ ಸಾಮಾನ್ಯ ಎಂದು ಭಾವಿಸಿ ಜನಸಾಮಾನ್ಯರು ಸುಮ್ಮನಾಗುತ್ತಿದ್ದರು. ಆದರೆ ರಾಜ್ಯದಲ್ಲಿರುವುದು ಸಮಾಜವಾದಿ ಹಿನ್ನೆಲೆಯ, ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುವ ಸಿದ್ದರಾಮಯ್ಯ ನೇತೃತ್ವದ ಸರಕಾರ. ಇದೇ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವರು ಶೋಷಿತ ದಲಿತ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಪರಮೇಶ್ವರ್ ಅವರು. ಈ ಕಾರಣಕ್ಕಾಗಿ ನಾಡಿನ ಜನತೆ ಈ ಬೆಳವಣಿಗೆಯ ಬಗ್ಗೆ ಆತಂಕಗೊಂಡಿದ್ದಾರೆ.
ದ್ವೇಷವನ್ನು ಹರಡುವುದಕ್ಕೆ ಡಿಜಿಟಲ್ ಮಾಧ್ಯಮಗಳನ್ನು ಬಳಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ, ಅದಕ್ಕಾಗಿ ವಿಶೇಷ ತಂಡಗಳನ್ನು ರಚಿಸುತ್ತೇವೆ ಎಂದು ಸರಕಾರ ಹೇಳುತ್ತಲೇ ಬರುತ್ತಿದೆಯಾದರೂ, ಈವರೆಗೆ ಡಿಜಿಟಲ್ ದ್ವೇಷಿಗಳ ವಿರುದ್ಧ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವ ಸರಕಾರದ ಪ್ರಯತ್ನವೆಲ್ಲ ಸಂಪೂರ್ಣ ವಿಫಲವಾಗಿದೆ. ಕಾನೂನು ಚಾಪೆಯಡಿ ತೂರಿದರೆ, ಈ ಡಿಜಿಟಲ್ ಹೇಟರ್‌ಗಳು ರಂಗೋಲಿಯಡಿ ತೂರುತ್ತಿದ್ದಾರೆ. ಕೋಮುದ್ವೇಷದ ಹೇಳಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಪಕ್ಕಕ್ಕಿರಲಿ, ಸ್ವತಃ ಮುಖ್ಯಮಂತ್ರಿ ಮತ್ತು ಇತರ ಸಚಿವರ ವಿರುದ್ಧ ಅತ್ಯಂತ ಅಶ್ಲೀಲ ಸ್ಟೇಟಸ್‌ಗಳನ್ನು ಹಾಕಿದರೂ ಅವುಗಳ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಲು ವಿಫಲರಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಯಾರಾದರೂ ವೈಯಕ್ತಿಕವಾಗಿ ದೂರು ನೀಡಿದಾಗ ಮಾತ್ರ, ಪೊಲೀಸರು ಒಲ್ಲದ ಮನಸ್ಸಿನಿಂದ ಅದನ್ನು ಸ್ವೀಕರಿಸುತ್ತಾರೆ. ಆದರೆ ಆರೋಪಿಗಳನ್ನು ಬಂಧಿಸಲು ಮೀನಾಮೇಷ ಎಣಿಸುತ್ತಾರೆ. ಇಂಥ ಕಾನೂನು ವ್ಯವಸ್ಥೆ, ರಾತ್ರೋರಾತ್ರಿ ಒಬ್ಬ ಬಡಪಾಯಿ ಯ್ಯೂಟ್ಯೂಬರ್‌ವಿರುದ್ಧ ಎಫ್‌ಐಆರ್ ದಾಖಲಿಸಿ ಆತನನ್ನು ಬಂಧಿಸಲು ಅತ್ಯಾಸಕ್ತಿ ತೋರಿಸುತ್ತದೆ ಎನ್ನುವುದು ಸಹಜವಾಗಿಯೇ ಜನರನ್ನು ಗಾಬರಿಗೊಳಿಸುತ್ತದೆ.
ಸಮೀರ್ ಎನ್ನುವ ಯೂಟ್ಯೂಬರ್ ತನ್ನ ದೂತ ಎನ್ನುವ ಚಾನೆಲ್ ಮೂಲಕ ದಕ್ಷಿಣ ಕನ್ನಡದ ಸೌಜನ್ಯಾ ಎನ್ನುವ ಹೆಣ್ಣು ಮಗಳ ಮೇಲೆ ನಡೆದ ಅತ್ಯಾಚಾರ, ಕೊಲೆಯ ವಿರುದ್ಧ ಧ್ವನಿಯೆತ್ತಿದ್ದಾನೆ. ಪ್ರಕರಣದ ತನಿಖೆಯಲ್ಲಿ ಪೊಲೀಸರ ನಿಷ್ಕ್ರಿಯತೆಯನ್ನು ಪ್ರಶ್ನಿಸಿದ್ದಾನೆ. ಸೌಜನ್ಯಾ ಹತ್ಯೆ ನಾಡನ್ನೇ ಬೆಚ್ಚಿ ಬೀಳಿಸಿದ ಪ್ರಕರಣ. ಕಳೆದ ಒಂದು ದಶಕಗಳಿಂದ ಅದು ಬೇರೆ ಬೇರೆ ಕಾರಣಗಳಿಗಾಗಿ ಚರ್ಚೆಯಲ್ಲಿದೆ. ಈ ಪ್ರಕರಣದ ಬಗ್ಗೆ ಹಲವು ಪತ್ರಕರ್ತರು ಈಗಾಗಲೇ ತನಿಖಾ ವರದಿಗಳನ್ನು ಪ್ರಕಟಿಸಿದ್ದಾರೆ. ಹಲವರು ಇದರ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ ಮಾತ್ರವಲ್ಲ, ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸೌಜನ್ಯಾಳಿಗೆ ಸಂಬಂಧಿಸಿ ನಿಜವಾದ ಅಪರಾಧಿಗಳನ್ನು ಬಂಧಿಸಬೇಕು ಎಂದು ಹಲವು ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿವೆ. ಇವೆಲ್ಲವುಗಳನ್ನು ಆಧರಿಸಿ ಯೂಟ್ಯೂಬರ್ ಸಮೀರ್ ಎಂಬಾತ ಸೌಜನ್ಯಾ ಹತ್ಯೆ ಪ್ರಕರಣವನ್ನು ಮತ್ತೊಮ್ಮೆ ನಿರೂಪಿಸಿದ್ದಾನೆ. ಈ ಸಂದರ್ಭದಲ್ಲಿ ಯಾವುದೇ ದ್ವೇಷವನ್ನು ಬಿತ್ತುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮಾತುಗಳನ್ನು ಆಡಿಲ್ಲ. ಅನ್ಯಾಯಕ್ಕೊಳಗಾಗಿ ಸತ್ತು ಹೋದ ಹೆಣ್ಣು ಮಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ಹೇಳುವುದು ಯಾರದಾದರೂ ಧಾರ್ಮಿಕಭಾವನೆಗಳಿಗೆ ಯಾಕೆ ಧಕ್ಕೆ ತರುತ್ತದೆ? ಕೋಮುದ್ವೇಷಗಳನ್ನು ಹಂಚಿದಾಗ, ಸಿದ್ದರಾಮಯ್ಯ ಅವರ ಜನಪರವಾದ ಗ್ಯಾರಂಟಿ ಯೋಜನೆಗಳನ್ನು ನಿಂದಿಸಿದಾಗ, ಸಚಿವರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದಾಗ, ರಾಹುಲ್ ಗಾಂಧಿಯೂ ಸೇರಿದಂತೆ ದೇಶದ ನಾಯಕರ ಅರೆಬೆತ್ತಲೆ ಚಿತ್ರಗಳ ಮೇಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸಾಲುಗಳನ್ನು ಬರೆದಾಗ ಧಕ್ಕೆಯಾಗದ ಭಾವನೆಗಳು, ಯೂಟ್ಯೂಬರ್ ಒಬ್ಬ ಅಮಾಯಕ ಹೆಣ್ಣು ಮಗಳ ಹತ್ಯೆಯ ಬಗ್ಗೆ ತನ್ನ ಶಂಕೆಗಳನ್ನು ವ್ಯಕ್ತಪಡಿಸಿದಾಗ ಧಕ್ಕೆಗೀಡಾಯಿತು ಎಂದು ಪೊಲೀಸರಿಗೆ ಯಾಕೆ ಅನ್ನಿಸಿತು? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಸೌಜನ್ಯಾ ಕೊಲೆಗೆ ಸಂಬಂಧಿಸಿ ಪೊಲೀಸರು ಬಂಧಿಸಿದ ಆರೋಪಿಯನ್ನು ನ್ಯಾಯಾಲಯವೇ ನಿರಪರಾಧಿ ಎಂದು ಕರೆದಿದೆ. ಹಾಗಾದರೆ ಸೌಜನ್ಯಾಳನ್ನು ಅತ್ಯಾಚಾರಗೈದು, ಕೊಂದವರು ಯಾರು? ಎನ್ನುವ ಪ್ರಶ್ನೆಗಳಿಗೆ ಉತ್ತರಿಸಲು ಪೊಲೀಸರು ವಿಫಲರಾಗಿದ್ದಾರೆ. ಹಾಗಾದರೆ ಸೌಜನ್ಯಾಳ ಅತ್ಯಾಚಾರ, ಹತ್ಯೆಯಾಗಿರುವುದು ಸುಳ್ಳು ಎಂದು ಪೊಲೀಸರು ಪ್ರತಿಪಾದಿಸಲು ಮುಂದಾಗಿದ್ದಾರೆಯೆ?
ಸಮೀರ್ ಎಂಬಾತ ಮುಂದಿಟ್ಟ ವೀಡಿಯೋವನ್ನು ಈ ನಾಡಿನ ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎನ್ನುವುದು ಪೊಲೀಸರಿಗೆ ಗೊತ್ತಿಲ್ಲವೆ? ಕರ್ನಾಟಕದ ಮಟ್ಟಿಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಕ್ಷಣೆ ಒಂದು ದಾಖಲೆಯೇ ಆಗಿದೆ. ಜನರು ಆ ಯೂಟ್ಯೂಬರ್‌ನ ಜೊತೆಗೆ ಸಮ್ಮತಿಯನ್ನು ಹೊಂದಿದ್ದಾರೆ ಎನ್ನುವುದನ್ನೂ ಇದು ಪರೋಕ್ಷವಾಗಿ ಹೇಳುತ್ತದೆ. ಸೌಜನ್ಯಾ ಹತ್ಯೆಯ ಕುರಿತಂತೆ ಅವರಿಗಿರುವ ಆತಂಕ, ಕಾಳಜಿಗಳನ್ನು ಇದು ಎತ್ತಿ ಹಿಡಿದಿದೆ. ಅವರೆಲ್ಲರೂ ಆ ವೀಡಿಯೊವನ್ನು ಬೆಂಬಲಿಸುತ್ತಿದ್ದಾರೆ. ಇದೀಗ ಆ ಯೂಟ್ಯೂಬರ್‌ನ ಮೇಲೆ ಎಫ್‌ಐಆರ್ ದಾಖಲಿಸುವ ಮೂಲಕ ಜನರ ಅಭಿಪ್ರಾಯವನ್ನೇ ಪರೋಕ್ಷವಾಗಿ ದಮನಿಸಲು ಪೊಲೀಸ್ ಇಲಾಖೆ ಮುಂದಾಗಿದೆ ಎನ್ನುವುದು ಅನುಮಾನಿಸಬೇಕಾಗುತ್ತದೆ. ಪೊಲೀಸರ ಈ ನಿರ್ಧಾರದ ಹಿಂದೆ ಸರಕಾರದ ಪಾತ್ರವಿದೆಯೇ ಎನ್ನುವುದು ಸ್ಪಷ್ಟವಾಗಬೇಕಾಗಿದೆ.
ಇತ್ತೀಚೆಗೆ ಸಮಾವೇಶವೊಂದರಲ್ಲಿ ‘ತನಿಖಾ ಪತ್ರಿಕೋದ್ಯಮ ಸತ್ತು ಹೋಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತಂಕ, ಕಳವಳ ವ್ಯಕ್ತಪಡಿಸಿದ್ದರು. ತನಿಖಾ ಪತ್ರಿಕೋದ್ಯಮ ಸತ್ತು ಹೋಗಿರುವುದಲ್ಲ, ರಾಜಕಾರಣಿಗಳು, ಗೂಂಡಾಗಳು, ಪೊಲೀಸರು ಜಂಟಿಯಾಗಿ ಅದನ್ನು ಕೊಂದು ಹಾಕಿದ್ದಾರೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸಿ, ಸರಕಾರದೊಳಗಿರುವ ಮಾಹಿತಿಗಳು ಪತ್ರಕರ್ತರ ಕೈ ಸೇರದಂತೆ ಕೇಂದ್ರ ಸರಕಾರವೇ ಗರಿಷ್ಠ ಮಟ್ಟದಲ್ಲಿ ನೋಡಿಕೊಳ್ಳುತ್ತಿದೆ. ಇಲಾಖೆಗಳಿಂದ ಮಾಹಿತಿಗಳನ್ನು ತಮ್ಮದಾಗಿಸಿಕೊಂಡು ವರದಿಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ರೌಡಿಗಳು, ಗೂಂಡಾಗಳ ಭಯ. ಆ ಆತಂಕಗಳನ್ನು ದಾಟಿ ವರದಿ ಪ್ರಕಟಿಸಿದರೆ, ಪೊಲೀಸರ ಭಯ. ಇಂದು ಮಾಧ್ಯಮಗಳ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ ಅವರನ್ನು ಪೊಲೀಸ್ ಠಾಣೆ, ನ್ಯಾಯಾಲಯ ಎಂದು ಅಲೆದಾಡಿಸಿಯೇ ವ್ಯವಸ್ಥೆ ನೂರಾರು ಪತ್ರಕರ್ತರನ್ನು ಜೀವಂತ ಕೊಂದು ಹಾಕಿದೆ. ಪತ್ರಕರ್ತರು ಒಂದು ಅಕ್ಷರವನ್ನೂ ಸರಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಬರೆಯದಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಿರುವಾಗ, ತನಿಖಾ ಪತ್ರಿಕೋದ್ಯಮದ ಸಾವನ್ನು ಸಹಜ ಸಾವು ಎಂದು ಕರೆಯುವುದು ಸರಿಯಲ್ಲ. ಅದೊಂದು ಕೊಲೆ. ಸೌಜನ್ಯ ಎನ್ನುವ ಹೆಣ್ಣು ಮಗಳಂತೆಯೇ ತನಿಖಾ ಪತ್ರಿಕೋದ್ಯಮವೂ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದೆ. ಕೊಲೆಗಾರರು ಹಾಡಹಗಲೇ ಖಾವಿ, ಖಾಕಿ, ಖಾದಿ, ಬಿಳಿ ಬಟ್ಟೆಗಳನ್ನು ಧರಿಸಿ, ಟೋಪಿ, ಮುಂಡಾಸುಗಳ ಜೊತೆಗೆ ಓಡಾಡುತ್ತಿದ್ದಾರೆ. ಸಮಾಜದಲ್ಲಿ ಮೆರೆದಾಡುತ್ತಿದ್ದಾರೆ. ದೂತ ಎನ್ನುವ ಯೂಟ್ಯೂಬರ್‌ನ ಮೇಲೆ ಪೊಲೀಸರು ದಾಖಲಿಸಿದ ಎಫ್‌ಐಆರ್ ಇದನ್ನೇ ಕೂಗಿ ಕೂಗಿ ಹೇಳುತ್ತಿದೆ.