ಹಿಂದಿ ಹೇರಿಕೆಗೆ ಮರಾಠಿಗರ ಪ್ರತಿರೋಧ

ದೇವೇಂದ್ರ ಫಡ್ನವಿಸ್ | PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹಿಂದಿ ಹೇರಿಕೆಯ ವಿರುದ್ಧದ ಆಕ್ರೋಶದ ಕಿಡಿ ಇದೀಗ ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. ದೇಶದ ಭಾಷಾ ವೈವಿಧ್ಯಗಳನ್ನು ಅಳಿಸಿ, ಅವುಗಳ ಮೇಲೆ ಹಿಂದಿಯನ್ನು ಹೇರುವ ಕೇಂದ್ರ ಸರಕಾರದ ಪ್ರಯತ್ನದ ವಿರುದ್ಧ ಇದೀಗ ಮಹಾರಾಷ್ಟ್ರ ಸರಕಾರ ಧ್ವನಿಯೆತ್ತಿದೆ. ‘‘ಮರಾಠಿಯು ರಾಜ್ಯದ ಅಧಿಕೃತ ಭಾಷೆ. ರಾಜ್ಯದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಮರಾಠಿಯನ್ನು ಕಲಿಯಬೇಕು’’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಆರೆಸ್ಸೆಸ್ ನಾಯಕ ಭಯ್ಯಾಜಿ ಜೋಶಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘‘ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ವಾಸಿಸಲು ಮರಾಠಿ ಭಾಷೆ ತಿಳಿದಿರುವ ಅಥವಾ ಮಾತನಾಡುವ ಅಗತ್ಯವಿಲ್ಲ’’ ಎಂದಿದ್ದರು. ದೇಶಾದ್ಯಂತ ಹಿಂದಿ ಹೇರಿಕೆಯ ಸಂಚಿಗೆೆ ಆರೆಸ್ಸೆಸ್ ಕೂಡ ಕೈಜೋಡಿಸುತ್ತಲೇ ಬಂದಿದೆ. ಮುಂಬೈಯಲ್ಲಿ ಜನರು ಮರಾಠಿ ಮಾತನಾಡಬೇಕಾದ ಅವಶ್ಯಕತೆಯಿಲ್ಲ ಎನ್ನುವುದರ ಹಿಂದೆ ಮುಂಬೈಯಲ್ಲಿರುವ ಭಾಷಾ ವೈವಿಧ್ಯವನ್ನು ಎತ್ತಿ ಹಿಡಿಯುವ ಉದ್ದೇಶವೇನೂ ಆರೆಸ್ಸೆಸ್ ಮುಖಂಡ ಭಯ್ಯಾಜಿ ಅವರಿಗೆ ಇರಲಿಲ್ಲ. ಈಗಾಗಲೇ ‘ಮುಂಬೈ ಹಿಂದಿ’ಯೊಂದು ಮಹಾರಾಷ್ಟ್ರಾದ್ಯಂತ ಹರಡುತ್ತಿದೆ ಮಾತ್ರವಲ್ಲ ಮರಾಠಿಯ ಮೇಲೆ ತನ್ನ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಮಹಾರಾಷ್ಟ್ರದ ರಾಜಕೀಯ ನಾಯಕರು ಕರ್ನಾಟಕದ ಗಡಿ ಭಾಗದಲ್ಲಿ ಮರಾಠಿ ಹೆಸರಿನಲ್ಲಿ ತಗಾದೆ ತೆಗೆಯುತ್ತಿರುವ ಹೊತ್ತಿನಲ್ಲೇ, ತನ್ನದೇ ಜಿಲ್ಲೆಗಳಲ್ಲಿ ಹಿಂದಿ ಅನಿವಾರ್ಯವಾಗುತ್ತಿರುವುದನ್ನು ಮರೆತಿದೆ. ಇದೀಗ ಆರೆಸ್ಸೆಸ್ ಮುಖಂಡ ಭಯ್ಯಾಜಿ ಅವರು, ಮುಂಬೈಗರಿಗೆ ಮರಾಠಿ ತಿಳಿದಿರುವ ಅಗತ್ಯವಿಲ್ಲ ಎನ್ನುತ್ತಿದ್ದಂತೆಯೇ ಅನಿವಾರ್ಯವಾಗಿ ಬಿಜೆಪಿ ನಾಯಕರು ಪ್ರತಿಕ್ರಿಯಿಸುತ್ತಿದ್ದಾರೆ. ಆರೆಸ್ಸೆಸ್ ಮುಖಂಡರ ಹೇಳಿಕೆಯನ್ನು ಮುಂದಿಟ್ಟುಕೊಂಡು ಶಿವಸೇನೆ ದಾಳಿ ನಡೆಸುವ ಮೊದಲೇ ಬಿಜೆಪಿ ನಾಯಕರು ಮರಾಠಿಯ ಕುರಿತ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ‘‘ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಪ್ರಥಮ ಭಾಷೆ ಮರಾಠಿ ಎಂಬ ಬಗ್ಗೆ ರಾಜ್ಯ ಸರಕಾರದ ನಿಲುವು ಅಚಲವಾಗಿದೆ. ಈ ವಿಷಯದ ಕುರಿತಂತೆ ಯಾವುದೇ ರಾಜಿ ಇಲ್ಲ’’ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಮರಾಠಿಯ ವಿರುದ್ಧ ಮಾತನಾಡಿದ ಭಯ್ಯಾಜಿ ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸಬೇಕು ಎಂದು ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ತನ್ನ ಹಿಂದಿ ಪರ ಹೇಳಿಕೆಗೆ ಮಹಾರಾಷ್ಟ್ರ ಸಂಘಟಿತವಾಗಿ ಉತ್ತರಿಸುತ್ತಿದ್ದಂತೆಯೇ ಭಯ್ಯಾಜಿ ಮಾತಿನಿಂದ ಹಿಂದೆ ಸರಿದಿದ್ದಾರೆ. ‘‘ನನ್ನ ಮಾತಿನ ಉದ್ದೇಶ ಬೇರೆಯೇ ಆಗಿತ್ತು. ಮರಾಠಿಯು ಮಹಾರಾಷ್ಟ್ರದ ಭಾಷೆಯಾಗಿದೆ ಹಾಗೂ ಮಹಾರಾಷ್ಟ್ರ ಮುಂಬೈಯಲ್ಲಿದೆ. ಆದುದರಿಂದ ಸಹಜವಾಗಿ ಮರಾಠಿ ಮುಂಬೈಯ ಭಾಷೆಯಾಗಿದೆ. ಮುಂಬೈಯಲ್ಲಿ ವಿಭಿನ್ನ ಭಾಷೆಗಳ ಜನರು ವಾಸವಾಗಿದ್ದಾರೆ. ಅವರು ಕೂಡ ಮರಾಠಿಯನ್ನು ಕಲಿತುಕೊಳ್ಳಬೇಕು’’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಜಿರಳೆಗೆ ಮೀಸೆ ತೂರಿಸಲು ಜಾಗ ಸಿಕ್ಕಿದರೆ ಸಾಕಂತೆ, ಇಡೀ ದೇಹವನ್ನೇ ಒಳಗೆ ತೂರುತ್ತದೆ. ಸದ್ಯಕ್ಕೆ ಹಿಂದಿ ಎನ್ನುವ ಜಿರಳೆ ತನ್ನ ಮೀಸೆ ತುರುಕಿಸುವುದಕ್ಕಷ್ಟೇ ಒಂದಿಷ್ಟು ಜಾಗ ಕೊಡಿ, ಸಾಕು ಎಂದು ಪ್ರಾದೇಶಿಕ ಭಾಷೆಗಳ ಜೊತೆಗೆ ಕೇಳಿಕೊಳ್ಳುತ್ತಿದೆ. ಬ್ರಿಟಿಷರ ಕಾಲದಲ್ಲಿ ಮುಂಬೈ ಪ್ರಾಂತದ ಜೊತೆಗೆ ಕರ್ನಾಟಕ, ಗುಜರಾತ್‌ನ ಹಲವು ಭಾಗಗಳು ಗುರುತಿಸಿಕೊಂಡ ಕಾರಣದಿಂದ ಅದು ಸಹಜವಾಗಿಯೇ ವೈವಿಧ್ಯಮಯ ಭಾಷೆ, ಸಂಸ್ಕೃತಿಗಳ ಕೇಂದ್ರವಾಯಿತು. ಹಿಂದಿಯೊಂದಿಗೆ ಮುಂಬೈ ಮಾತ್ರವಲ್ಲ, ಮಹಾರಾಷ್ಟ್ರ ಕೂಡ ಸಣ್ಣ ಹೊಂದಾಣಿಕೆಯನ್ನು ಮಾಡಿಕೊಂಡಿತು. ಆದರೆ ದಕ್ಷಿಣದಿಂದ ವಲಸೆ ಹೋದವರನ್ನು ಮಾತ್ರ ಮಹಾರಾಷ್ಟ್ರ ಅಸಹನೆಯ ಕಣ್ಣಿನಿಂದಲೇ ನೋಡುತ್ತಾ ಬಂದಿದೆ. ‘ಪುಂಗಿ ಬಜಾವೋ, ಲುಂಗಿ ಹಠಾವೋ’ ಎನ್ನುವ ಚಳವಳಿಯನ್ನು ಅಲ್ಲಿರುವ ತಮಿಳರು, ಕನ್ನಡಿಗರು ಮತ್ತು ತುಳುವರ ವಿರುದ್ಧ ಹಮ್ಮಿಕೊಳ್ಳಲಾಯಿತು. ಆದರೆ ಹಿಂದಿ ಹೇಗೆ ಮಹಾರಾಷ್ಟ್ರದ ಅಸ್ಮಿತೆಯನ್ನು ಹಂತ ಹಂತವಾಗಿ ನುಂಗುತ್ತಾ ಬಂದಿದೆ ಎನ್ನುವುದನ್ನು ಅಷ್ಟೇ ಸ್ಪಷ್ಟವಾಗಿ ಗುರುತಿಸುವಲ್ಲಿ ಮರಾಠಿಗರು ಸೋತರು. ಹಿಂದಿಯ ಭರಾಟೆ ಎಷ್ಟು ಜೋರಾಯಿತು ಎಂದರೆ, ಮರಾಠಿಗರೇ ಇಂದು ಮುಂಬೈಯಲ್ಲಿ ಅನ್ಯರಾಗಿದ್ದಾರೆ. ಮರಾಠಿಗರ ವೇಷಭೂಷಣ, ಭಾಷೆ ಇತ್ಯಾದಿಗಳನ್ನು ತಮಾಷೆ ಮಾಡುವ, ವ್ಯಂಗ್ಯ ಮಾಡುವ ವಾತಾವರಣವಿದೆ. ಹಿಂದುತ್ವವಾದಿ ಸಿದ್ಧಾಂತದ ತಳಹದಿಯ ಮೇಲೆ ನಿಂತ ಬಿಜೆಪಿ, ಶಿವಸೇನೆಯಂತಹ ಪಕ್ಷಗಳು ಹಿಂದಿಯು ತಮ್ಮ ಮೇಲೆ ಹೇಗೆ ಹಂತಹಂತವಾಗಿ ನಿಯಂತ್ರಣಗಳನ್ನು ಸಾಧಿಸತೊಡಗಿದೆ, ಆರೆಸ್ಸೆಸ್‌ನಂತಹ ಸಂಘಟನೆಗಳು ಹೇಗೆ ತಮ್ಮ ರಾಷ್ಟ್ರೀಯವಾದಕ್ಕೆ ಪೂರಕವಾಗಿ ಹಿಂದಿಯನ್ನು ಬಳಸಿಕೊಳ್ಳಲು ಮುಂದಾಗಿವೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ವಿಫಲವಾದವು. ಮಹಾರಾಷ್ಟ್ರದ ಅಸ್ಮಿತೆಗಳಾಗಿರುವ ಶಿವಾಜಿ, ಪೇಶ್ವೆಗಳನ್ನು, ಜೈ ಭವಾನಿ ಘೋಷಣೆಗಳನ್ನು ಆರೆಸ್ಸೆಸ್ ತಮ್ಮ ರಾಷ್ಟ್ರೀಯವಾದಕ್ಕೆ ಬಳಸಿಕೊಂಡವಾದರೂ, ಮರಾಠಿಯ ಪ್ರಾದೇಶಿಕ ಸಂಸ್ಕೃತಿ, ಭಾಷೆಯನ್ನು ಸ್ವೀಕರಿಸಲು ಅದು ಹಿಂದೇಟು ಹಾಕುತ್ತಾ ಬಂದಿದೆ. ಇದೀಗ ತಮಿಳುನಾಡು, ಕರ್ನಾಟಕ, ಕೇರಳದಂತಹ ರಾಜ್ಯಗಳು ತಮ್ಮ ತಮ್ಮ ಭಾಷೆಗಳ ಮೇಲೆ ನಡೆಯುತ್ತಿರುವ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿರುವಾಗಲೇ, ಮಹಾರಾಷ್ಟ್ರದಲ್ಲೂ ಮರಾಠಿ ಪ್ರಜ್ಞೆ ಜಾಗೃತವಾಗಿದೆ.
ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಮುಂಬೈಯಲ್ಲೂ ಮರಾಠಿ ಕಡ್ಡಾಯವಾಗಿ ಕಲಿಯಬೇಕು ಎಂದು ಹೇಳುವ ಎಲ್ಲ ಅಧಿಕಾರ ಅಲ್ಲಿನ ಸರಕಾರಕ್ಕಿದೆ. ಕರ್ನಾಟಕ, ಗುಜರಾತ್ ಸೇರಿದಂತೆ ದೇಶದ ಹಲವು ರಾಜ್ಯಗಳ ಜನರ ಬದುಕನ್ನು ಮುಂಬೈ ಪೊರೆದಿದೆ. ತಮ್ಮ ತಮ್ಮ ಭಾಷೆ, ಸಂಸ್ಕೃತಿಯೊಂದಿಗೆ ಬದುಕುವುದರ ಜೊತೆಗೇ ಮರಾಠಿ ಭಾಷೆಗೆ ಗೌರವವನ್ನು ನೀಡಿ ಆ ಭಾಷೆಯನ್ನು ಕಲಿಯಬೇಕು. ಉಳಿಸಿ, ಬೆಳೆಸಬೇಕು. ಇದು ಅಲ್ಲಿ ನೆಲೆಸಿರುವ ಇತರ ರಾಜ್ಯಗಳ ಜನರ ಹೊಣೆಗಾರಿಕೆಯಾಗಿದೆ. ಹಿಂದಿ ಕಲಿಯಬೇಕೋ ಬೇಡವೋ ಎನ್ನುವುದು ಮರಾಠಿಗರಿಗೆ ಬಿಡಬೇಕು. ಅವರ ದೈನಂದಿನ ಬದುಕಿಗೆ ಅಗತ್ಯವಿದೆ ಎಂದಾದರೆ ಅವರೂ ಹಿಂದಿಯನ್ನು ಕಲಿಯುತ್ತಾರೆ. ಇದೇ ಸಂದರ್ಭದಲ್ಲಿ, ಹೇಗೆ ಮುಂಬೈಯಲ್ಲಿ ಬದುಕುವವರು ಮರಾಠಿ ಕಡ್ಡಾಯವಾಗಿ ಕಲಿಯಬೇಕೋ ಹಾಗೆಯೇ ಬೆಳಗಾವಿಯಲ್ಲಿ ಬದುಕುತ್ತಿರುವವರು ಕನ್ನಡ ಕಲಿಯುವುದು ಕೂಡ ಕಡ್ಡಾಯ ಎನ್ನುವುದನ್ನು ಮಹಾರಾಷ್ಟ್ರ ಸರಕಾರ ಮರೆಯಬಾರದು. ಮಹಾರಾಷ್ಟ್ರದಲ್ಲಿ ಮರಾಠಿ ಕಡ್ಡಾಯ ಎನ್ನುತ್ತಿರುವ ಅಲ್ಲಿನ ನಾಯಕರು, ಕರ್ನಾಟಕದ ಭಾಗವಾಗಿರುವ ಬೆಳಗಾವಿಯಲ್ಲಿ ಕನ್ನಡವನ್ನು ಗೌರವಿಸಿ ಎಂದು ಮರಾಠಿಗರಿಗೆ ಕರೆ ನೀಡಬೇಕು. ಇದರ ಅರ್ಥ, ಬೆಳಗಾವಿಯಲ್ಲಿ ಮರಾಠಿ ಭಾಷೆಯನ್ನೇ ಬಳಸಬಾರದು ಎಂದಲ್ಲ. ಉಭಯ ಭಾಷೆಗಳ ನಡುವೆ ಕೊಡುಕೊಳ್ಳುವಿಕೆ ಹೆಚ್ಚಬೇಕು. ಭಾಷೆಗಳು ಜನರ ನಡುವೆ ಗೋಡೆಯಾಗದೆ, ಅವರ ನಡುವೆ ಸೇತುವೆಯಾಗಬೇಕು. ಈ ನಿಟ್ಟಿನಲ್ಲಿ, ಪ್ರಾದೇಶಿಕ ಭಾಷೆಗಳು ಪರಸ್ಪರ ಗೌರವವನ್ನು ಕೊಟ್ಟು ಪಡೆದುಕೊಳ್ಳಬೇಕು.
ಇದೇ ಸಂದರ್ಭದಲ್ಲಿ, ಪ್ರಾದೇಶಿಕ ಭಾಷೆಗಳ ಮೇಲೆ ಬೇರೆ ಬೇರೆ ವೇಷದಲ್ಲಿ ಹಿಂದಿಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಆರೆಸ್ಸೆಸ್ ನಾಯಕರು ಕಟ್ಟಿ ನಿಲ್ಲಿಸಿರುವ ಹಿಂದುತ್ವವಾದಿ ಸಿದ್ಧಾಂತಕ್ಕೆ ಮಹಾರಾಷ್ಟ್ರ ಭಾಗಶಃ ಬಲಿಯಾಗಿದೆ. ಆ ಸಿದ್ಧಾಂತ ಏಕ ಭಾಷೆಯ ಮೇಲೆ ನಂಬಿಕೆಯನ್ನು ಹೊಂದಿದೆ. ಆದುದರಿಂದ, ಹಿಂದಿ ಹೇರಿಕೆಯ ವಿರುದ್ಧ ಪ್ರಾದೇಶಿಕ ಭಾಷೆಗಳು ನಡೆಸುತ್ತಿರುವ ಹೋರಾಟದಲ್ಲಿ ಮಹಾರಾಷ್ಟ್ರವು ಕೈ ಜೋಡಿಸಬೇಕು. ಮುಂಬೈಗರು ಮರಾಠಿ ತಿಳಿದಿರುವ ಅಗತ್ಯವಿಲ್ಲ ಎನ್ನುವ ಆರೆಸ್ಸೆಸ್ ನಾಯಕನ ಹೇಳಿಕೆ ಆಕಸ್ಮಿಕವಲ್ಲ. ಅದರ ಹಿಂದೆ, ಈ ದೇಶದ ಭಾಷಾ ವೈವಿಧ್ಯವನ್ನು ಅಳಿಸಿ ಅಲ್ಲಿ ಹಂತ ಹಂತವಾಗಿ ಹಿಂದಿಯನ್ನು ಸ್ಥಾಪಿಸುವ ದುರುದ್ದೇಶವಿದೆ. ಆ ದುರುದ್ದೇಶವನ್ನು ವಿಫಲಗೊಳಿಸುವ ದಕ್ಷಿಣ ಭಾರತದ ರಾಜ್ಯಗಳ ಹೋರಾಟದೊಂದಿಗೆ ಕೈ ಜೋಡಿಸಿದಾಗ ಮಾತ್ರ, ಮಹಾರಾಷ್ಟ್ರದಲ್ಲಿ ಮರಾಠಿಯನ್ನು ಉಳಿಸುವ ಅಲ್ಲಿನ ಸರಕಾರದ ಉದ್ದೇಶ ಈಡೇರಬಹುದು. ಇಲ್ಲವಾದರೆ, ಮುಂಬೈಗೆ ಒದಗಿದ ಗತಿ, ನಿಧಾನಕ್ಕೆ ಇಡೀ ಮಹಾರಾಷ್ಟ್ರಕ್ಕೇ ಒದಗಬಹುದು. ಮರಾಠಿ ಕೇವಲ ಬೆಳಗಾವಿಯಂತಹ ಗಡಿಭಾಗಗಳಿಗಷ್ಟೇ ಸೀಮಿತವಾಗಿ ಉಳಿದು ಬಿಡಬಹುದು.