ಈ ಅಂಬೇಡ್ಕರ್ ವಿರೂಪ ಎಷ್ಟು ಸರಿ?

Update: 2025-03-10 07:39 IST
ಈ ಅಂಬೇಡ್ಕರ್ ವಿರೂಪ ಎಷ್ಟು ಸರಿ?

PC: x.com/CultChron

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದೆರಡು ದಶಕಗಳಿಂದ ಭಾರತದಲ್ಲಿ ಅಂಬೇಡ್ಕರ್ ಚಿಂತನೆಗಳು ಮುನ್ನೆಲೆಗೆ ಬಂದಿವೆ. ಪ್ರಜಾಸತ್ತೆಯನ್ನು ಬುಡಮೇಲುಗೊಳಿಸುವ ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಎಲ್ಲ ಪ್ರಯತ್ನಗಳಿಗೆ ಈ ದೇಶದ ಜನತೆ ಅಂಬೇಡ್ಕರ್ ಅವರನ್ನು ಮುಂದಿಟ್ಟುಕೊಂಡು ಬಲವಾದ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ದೇಶವನ್ನು ಮತ್ತೆ ಮನುವಿನ ಕಾಲದ ‘ಸು-ವರ್ಣ ಯುಗ’ಕ್ಕೆ ಕೊಂಡೊಯ್ಯುವ ಯತ್ನಕ್ಕೆ ಈಗಲೂ ಅಂಬೇಡ್ಕರ್ ಚಿಂತನೆಗಳು ಬಹುದೊಡ್ಡ ಅಡ್ಡಿಯಾಗಿರುವುದನ್ನು ಗಮನಿಸಿ ಅಂಬೇಡ್ಕರ್ ಅವರನ್ನೇ ತಿರುಚುವ, ವಿರೂಪಗೊಳಿಸುವ ಸಂಚೊಂದು ನಡೆಯುತ್ತಿದೆ. ಅಲ್ಲಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ಒಡೆಯುವುದು, ಚಪ್ಪಲಿ ಹಾರಗಳನ್ನು ಹಾಕುವ ವರದಿಗಳು ಇಂದಿನ ದಿನಗಳಲ್ಲಿ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಅದರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ, ವಿವಿಧ ಸಂಘಟನೆಗಳು ಅಂತಹ ಕೃತ್ಯಗಳನ್ನು ವಿರೋಧಿಸಿ ದೊಡ್ಡ ಮಟ್ಟದಲ್ಲಿ ಗದ್ದಲಗಳನ್ನು ಎಬ್ಬಿಸುತ್ತವೆ. ಒಂದೆರಡು ದಿನಗಳಲ್ಲಿ ಅವುಗಳನ್ನು ಮರೆತೂ ಬಿಡುತ್ತವೆ. ಇದೇ ಸಂದರ್ಭದಲ್ಲಿ ಅಂಬೇಡ್ಕರ್‌ರ ವ್ಯಕ್ತಿತ್ವದ ಮೇಲೆ, ಆಶಯಗಳ ಮೇಲೆಯೇ ನಡೆಯುವ ದಾಳಿಗಳನ್ನು ಗುರುತಿಸುವುದಕ್ಕೆ ನಾವು ವಿಫಲರಾಗುತ್ತಿದ್ದೇವೆ. ಪ್ರತಿಮೆಗಳನ್ನು ವಿರೂಪಗೊಳಿಸಿದರೆ ಅದನ್ನು ಮತ್ತೆ ನಿರ್ಮಿಸಬಹುದು. ಆರೋಪಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಹುದು. ಆದರೆ ಒಳಗಿಂದೊಳಗೆ ಅಂಬೇಡ್ಕರ್ ಚಿಂತನೆಗಳು ವಿರೂಪಗೊಳ್ಳುತ್ತಿರುವುದು ನಮ್ಮ ಅರಿವಿಗೇ ಬಂದಿರುವುದಿಲ್ಲ. ಹಂತಹಂತವಾಗಿ ಅಂಬೇಡ್ಕರ್‌ರನ್ನು ತಮ್ಮ ಮೂಗಿನ ನೇರಕ್ಕೆ ಮರು ನಿರೂಪಿಸುತ್ತಾ, ತಮ್ಮ ವರ್ಣವಾದಿ, ಮನುವಾದಿ ಭಾರತವನ್ನು ಕಟ್ಟಲು ಅವರನ್ನು ಬಳಸಿಕೊಳ್ಳುವ ಪ್ರಯತ್ನವನ್ನು ವಿಫಲಗೊಳಿಸುವುದು ಇಂದಿನ ಅಗತ್ಯವಾಗಿದೆ.

ಇತ್ತೀಚೆಗೆ ಎಸೆಸೆಲ್ಸಿ ಪ್ರಶ್ನೆ ಪತ್ರಿಕೆಯೊಂದರಲ್ಲಿ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ‘‘ಅಂಬೇಡ್ಕರ್ ಅವರನ್ನು ಆಧುನಿಕ ಮನು ಎಂದು ಯಾಕೆ ಕರೆಯುತ್ತಾರೆ?’’ ಈ ಪ್ರಶ್ನೆಯ ಮೂಲಕ ವಿದ್ಯಾರ್ಥಿಗಳ ಮೇಲೆ ನೇರವಾಗಿ ‘ಅಂಬೇಡ್ಕರ್ ಆಧುನಿಕ ಮನು’ಎನ್ನುವುದನ್ನು ಹೇರಲಾಗಿತ್ತು ಮತ್ತು ಅದಕ್ಕೆ ವಿದ್ಯಾರ್ಥಿಗಳು ಕಾರಣಗಳನ್ನು ಬರೆಯಬೇಕಾಗಿತ್ತು. ನಿಜಕ್ಕೂ ಪ್ರಶ್ನೆ ಪತ್ರಿಕೆಗಳಲ್ಲಿ ಕೇಳಬೇಕಾದದ್ದು ‘‘ಡಿಸೆಂಬರ್ 25, 1927ರಂದು ಅಂಬೇಡ್ಕರ್ ಅವರು ಮನುಸ್ಮತಿಯನ್ನು ಯಾಕೆ ಸುಟ್ಟು ಹಾಕಿದರು?’’ ಎನ್ನುವ ಪ್ರಶ್ನೆಯನ್ನು. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆಯು ಅಂಬೇಡ್ಕರ್ ಅವರನ್ನೇ ಆಧುನಿಕ ಮನುವಾಗಿಸಿ, ಪರೋಕ್ಷವಾಗಿ ಮನುವನ್ನು ಸಮರ್ಥಿಸಲು ಮುಂದಾಗಿದೆ. ಅಂಬೇಡ್ಕರ್ ಅವರನ್ನು ಆಧುನಿಕ ಮನು ಎಂದು ಕರೆಯುವುದರ ವಿರುದ್ಧ ಈ ಹಿಂದೆಯೂ ಹಲವು ಬಾರಿ ಟೀಕೆ, ವಿರೋಧಗಳು ಕೇಳಿ ಬಂದಿದ್ದವು. ಅಂಬೇಡ್ಕರ್ ಮನುವಾದವನ್ನು, ಮನುಚಿಂತನೆಗಳನ್ನು ವಿರೋಧಿಸಿ ಅದಕ್ಕೆ ಪರ್ಯಾಯವಾಗಿ ಸಂವಿಧಾನವನ್ನು ಬರೆದರು. ಆದರೆ, ಡಾ. ಬಿ. ಆರ್. ಅಂಬೇಡ್ಕರ್ ಅವರು ಹಿಂದೂ ಮಸೂದೆ ಸಂಹಿತೆಗಳನ್ನು ರಚಿಸಿದ್ದನ್ನೇ ನೆಪವಾಗಿಟ್ಟುಕೊಂಡು ಒಂದು ಗುಂಪು ಅವರನ್ನು ಆಧುನಿಕ ಮನುವಾಗಿಸಲು ಹೊರಟಿತು. ಅಂಬೇಡ್ಕರ್ ಬರೆದ ಸಂವಿಧಾನ ಮನು ಪ್ರತಿಪಾದಿಸಿದ ಎಲ್ಲ ಕಾನೂನು ಸಂಹಿತೆಗಳನ್ನು ವಿರೋಧಿಸಿತು. ಮಹಿಳೆಯರಿಗೆ, ಶೂದ್ರರಿಗೆ ಶಿಕ್ಷಣದ ಹಕ್ಕನ್ನು ನೀಡಿತು. ಅಸ್ಪಶ್ಯತೆಯನ್ನು, ವರ್ಣ ವ್ಯವಸ್ಥೆಯನ್ನು ವಿರೋಧಿಸಿತು. ಮನು ಮತ್ತು ಅಂಬೇಡ್ಕರ್ ಎಣ್ಣೆ-ಸೀಗೆಯಂತೆ. ಶತಶತಮಾನಗಳಿಂದ ಈ ದೇಶದ ಶೂದ್ರರು, ದಲಿತ ವರ್ಗವನ್ನು ಶೋಷಣೆಗೈದ ಕಾರಣಕ್ಕಾಗಿಯೇ ಮನುಸ್ಮತಿಯನ್ನು ಅಂಬೇಡ್ಕರ್ ಸಾರ್ವಜನಿಕವಾಗಿ ಸುಟ್ಟು ಹಾಕಿದರು ಮತ್ತು ಆ ದಿನವನ್ನು ದಲಿತರು ಮತ್ತು ಶೂದ್ರರು ಬಿಡುಗಡೆಯ ದಿನವೋ ಎಂಬಂತೆ ಆಚರಿಸಿಕೊಂಡು ಬರುತ್ತಿದ್ದಾರೆ. ಹೀಗಿರುವಾಗ, ಅಂಬೇಡ್ಕರ್‌ರನ್ನು ‘ಆಧುನಿಕ ಮನು’ವೆಂದು ಕರೆಯುವುದು ನೇರವಾಗಿ ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಮಾಡುವ ಅವಮಾನವಲ್ಲವೆ? ಇಷ್ಟಕ್ಕೂ ಮನು ಈ ದೇಶದ ಒಂದು ನಿರ್ದಿಷ್ಟ ಜಾತಿ, ಧರ್ಮ, ಸಮೂಹಗಳನ್ನು ಪ್ರತಿನಿಧಿಸುತ್ತಾರೆ. ಆದರೆ ಅಂಬೇಡ್ಕರ್ ಎಲ್ಲ ಜಾತಿ, ಧರ್ಮ, ವರ್ಗಗಳನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಿರುವಾಗ ಅಂಬೇಡ್ಕರ್ ಮೇಲೆ ಮತ್ತೆ ಮನುವನ್ನು ಹೇರುವುದು ಎಷ್ಟು ಸರಿ?

‘ಆಧುನಿಕ ಮನು’ ಎಂದು ವಿದ್ಯಾರ್ಥಿಗಳಿಗೆ ಅಂಬೇಡ್ಕರ್‌ರನ್ನು ಕಟ್ಟಿಕೊಡುವುದರಿಂದ ಮನುಸ್ಮತಿಗೂ ಸಂವಿಧಾನಕ್ಕೂ ಅನಗತ್ಯ ಸಂಬಂಧವನ್ನು ಕಲ್ಪಿಸಿದಂತಾಗುತ್ತದೆ. ಈ ಮೂಲಕ ಮನುವನ್ನು ಅಂಬೇಡ್ಕರ್ ಎತ್ತರಕ್ಕೇರಿಸಲಾಯಿತೆ? ಅಥವಾ ಅಂಬೇಡ್ಕರ್‌ರನ್ನು ಮನುವಿನ ಮಟ್ಟಕ್ಕೆ ಇಳಿಸಲಾಯಿತೆ? ಎಂದು ವಿದ್ಯಾರ್ಥಿಗಳಲ್ಲೂ ಗೊಂದಲಗಳು ಸೃಷ್ಟಿಯಾಗಬಹುದು. ಅಂಬೇಡ್ಕರ್ ಅವರು ಆಧುನಿಕ ಮನುವೇ ಆಗಿದ್ದರೆ, ಅಂಬೇಡ್ಕರ್ ಸಂವಿಧಾನ ಬರೆದಾಗ ಅದನ್ನು ಮನುವಾದಿಗಳಾಗಿರುವ ಹಿಂದೂ ಮಹಾ ಸಭಾದ ನಾಯಕರು ಬೆಂಬಲಿಸಬೇಕಾಗಿತ್ತು. ಆದರೆ ಅವರೆಲ್ಲರೂ ಅಂದು ಒಕ್ಕೊರಲಿನಲ್ಲಿ, ಅಂಬೇಡ್ಕರ್ ಅವರ ಹಿಂದೂ ಕಾಯ್ದೆಗಳನ್ನು ವಿರೋಧಿಸಿದ್ದರು. ವಿಪರ್ಯಾಸವೆಂದರೆ, ಇದಾದ ಬಳಿಕ ರಾಜಸ್ಥಾನ ಹೈಕೋರ್ಟ್‌ನ ಮುಂದೆಯೇ ವಿರೋಧಗಳ ನಡುವೆ ಪ್ರಾಚೀನ ಮನುವಿನ ಮೂರ್ತಿಯನ್ನು ಸ್ಥಾಪಿಸಲಾಯಿತು. ಶೂದ್ರರಿಗೆ ವೇದಗಳನ್ನು ಕಲಿಸಬಾರದು, ಅವರು ಸಾರ್ವಜನಿಕ ಕೆರೆ ನೀರನ್ನು ಮುಟ್ಟಬಾರದು, ಮಹಿಳೆಯರಿಗೆ ಶಿಕ್ಷಣ ಕಲಿಯುವ ಹಕ್ಕಿಲ್ಲ, ದೇವಸ್ಥಾನಕ್ಕೆ ಪ್ರವೇಶವಿಲ್ಲ ಇತ್ಯಾದಿ ಇತ್ಯಾದಿಗಳನ್ನು ಬೋಧಿಸಿದ ಮನುವಿನ ಮೂರ್ತಿಯನ್ನು ಯಾವ ಕಾರಣಕ್ಕಾಗಿ ಹೈಕೋರ್ಟ್ ಮುಂದೆ ಸ್ಥಾಪಿಸಲಾಯಿತು? ಎಂಬ ಪ್ರಶ್ನೆಗಳಿಗೆ ಇಂದಿಗೂ ಉತ್ತರವಿಲ್ಲ. ಇತ್ತೀಚೆಗೆ, ರಾಷ್ಟ್ರೀಯ ಜನತಾ ದಳದ ವಕ್ತಾರೆ ಪ್ರಿಯಾಂಕಾ ಭಾರತಿಯ ಮೇಲೆ ಟಿವಿ ವಾಹಿನಿಯೊಂದರ ಚರ್ಚೆಯ ಸಂದರ್ಭದಲ್ಲಿ ಮನುಸ್ಮತಿಯ ಪುಟಗಳನ್ನು ಹರಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದರ ವಿರುದ್ಧ ಅವರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ದುರಂತವೆಂದರೆ, ಹೈಕೋರ್ಟ್ ಕೂಡ, ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿತು. ಪ್ರಿಯಾಂಕಾ ಭಾರತಿ ನಿಜಕ್ಕೂ ಮನುಸ್ಮತಿಯ ಪ್ರತಿಯನ್ನು ಉದ್ದೇಶಪೂರ್ವಕವಾಗಿ ಹರಿದಿದ್ದರೆ ಎನ್ನುವುದು ಒಂದು ಪ್ರಶ್ನೆಯಾದರೆ, ಹಾಗಾದರೆ ಡಿಸೆಂಬರ್ 25ರಂದು ಅಂಬೇಡ್ಕರ್ ಅವರು ಸಾವಿರಾರು ಜನರನ್ನು ಸೇರಿಸಿ ಮನುಸ್ಮತಿಯನ್ನು ಸುಟ್ಟಿರುವುದು ಮತ್ತು ಆ ದಿನವನ್ನು ಈ ದೇಶದ ಬಹುಸಂಖ್ಯಾತರು ಈಗಲೂ ಆಚರಿಸುತ್ತಿರುವುದನ್ನು ಹೈಕೋರ್ಟ್ ಹೇಗೆ ಸ್ವೀಕರಿಸುತ್ತದೆ?

ಯಾವುದೇ ಧರ್ಮಗ್ರಂಥವನ್ನು ಸುಡುವುದು, ಹರಿಯುವುದು ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅಂಬೇಡ್ಕರ್ ಅಂತಹದೊಂದು ಅನಿವಾರ್ಯ ಸ್ಥಿತಿಗೆ ತಳ್ಳಲ್ಪಟ್ಟರು. ತನ್ನ ಮತ್ತು ತನ್ನ ಸಮುದಾಯ ಅತ್ಯಂತ ಹೀನಾಯವಾದ ಬದುಕನ್ನು ಬದುಕುತ್ತಿರುವುದಕ್ಕೆ ಕಾರಣವಾಗಿರುವ ವಿಚಾರಗಳನ್ನು ಅವರು ಆ ಮೂಲಕ ಸುಟ್ಟು ಹಾಕಿದ್ದರು. ಅವರು ತನ್ನ ಕೃತ್ಯದ ಮೂಲಕ ವಿರೋಧಿಸಿದ್ದು ಅಸ್ಪಶ್ಯತೆಯನ್ನು, ಜಾತೀಯತೆಯನ್ನು, ಮೇಲು ಕೀಳು ಎನ್ನುವ ಅಸಮಾನತೆಯನ್ನು. ಮನುವಿನ ಜೊತೆಗಾಗಲಿ, ಸ್ಮತಿಯ ಜೊತೆಗಾಗಲಿ ಅವರಿಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿರಲಿಲ್ಲ. ಈ ದೇಶದಲ್ಲಿ ಇಂದಿಗೂ ಜಾತೀಯತೆ, ಅಸ್ಪಶ್ಯತೆ ಅಸ್ತಿತ್ವದಲ್ಲಿದೆ ಎನ್ನುವುದು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕು. ಇಂತಹ ಸಂದರ್ಭದಲ್ಲಿ ಮನುಸ್ಮತಿಯ ವಿರುದ್ಧದ ಆಕ್ರೋಶ ಯಾವುದೇ ಧರ್ಮಗ್ರಂಥದ ಮೇಲಿರುವು ಆಕ್ರೋಶವಲ್ಲ, ಈ ಸಮಾಜದಲ್ಲಿ ಜಾರಿಯಲ್ಲಿರುವ ಅಸ್ಪಶ್ಯತೆಯ ವಿರುದ್ಧದ ಆಕ್ರೋಶ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನ್ಯಾಯಾಲಯವೇ ವಿಫಲವಾದರೆ, ಅಂಬೇಡ್ಕರ್ ಬರೆದ ಸಂವಿಧಾನದ ಆಶಯವಾಗಿರುವ ಸಮಾನತೆಯನ್ನು ಅನುಷ್ಠಾನಗೊಳಿಸುವವರು ಯಾರು?

ಇತ್ತೀಚೆಗೆ ದಿಲ್ಲಿ ವಿಶ್ವವಿದ್ಯಾನಿಲಯವು ಇತಿಹಾಸದ ಪಠ್ಯಕ್ರಮಕ್ಕೆ ಮನುಸ್ಮತಿಯನ್ನು ಸೇರಿಸುವ ಪ್ರಸ್ತಾವವನ್ನು ಮುಂದಿಟ್ಟಿತು. ಆದರೆ ಇದರ ವಿರುದ್ಧ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆಗಳನ್ನು ನಡೆಸಿದರು. ಹಲವಾರು ಪ್ರಾಧ್ಯಾಪಕರು, ಇತಿಹಾಸ ತಜ್ಞರು ಇದನ್ನು ವಿರೋಧಿಸಿ ದಿಲ್ಲಿ ವಿವಿ ಕುಲಪತಿಗೆ ಪತ್ರಬರೆದ ಬಳಿಕ ಕೊನೆಗೂ ಮನುಸ್ಮತಿ ಸೇರ್ಪಡೆಯನ್ನು ಹಿಂದೆಗೆದುಕೊಂಡಿತು. ಇಂದು ವಿಶ್ವವಿದ್ಯಾನಿಲಯಗಳು ಎಲ್ಲ ಜಾತಿಯ ಜನರಿಗೂ ಸಮಾನ ವಾಗಿ ಶಿಕ್ಷಣವನ್ನು ನೀಡಲು ಕಾರಣವಾಗಿರುವುದು ಸಂವಿಧಾನ. ಮನುಸ್ಮತಿಯು ಶೂದ್ರರು ಮತ್ತು ದಲಿತರಿಗೆ ಶಿಕ್ಷಣ ನೀಡುವುದನ್ನು ವಿರೋಧಿಸುತ್ತದೆ. ದುರಂತವೆಂದರೆ, ಸಮಾನತೆಯನ್ನು ಎತ್ತಿ ಹಿಡಿಯಬೇಕಾದ ವಿಶ್ವವಿದ್ಯಾನಿಲಯವೇ ಮನುಸ್ಮತಿಯನ್ನು ಇತಿಹಾಸ ಪಠ್ಯವಾಗಿ ಕಲಿಸಲು ಮುಂದಾದರೆ, ಅಂಬೇಡ್ಕರ್ ಆಶಯಗಳು ಈ ದೇಶದಲ್ಲಿ ಉಳಿಯುವುದಾದರೂ ಹೇಗೆ? ಅಂಬೇಡ್ಕರ್‌ರ ವ್ಯಕ್ತಿತ್ವವನ್ನು ವಿರೂಪಗೊಳಿಸುವ ಈ ಸಂಚು, ಅಂತಿಮವಾಗಿ ಈ ದೇಶದ ಪ್ರಜಾಸತ್ತೆಯನ್ನೇ ಬುಡಮೇಲುಗೊಳಿಸುವುದರೊಂದಿಗೆ ಕೊನೆಯಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಂಡು ದೇಶದ ಜನತೆ ಇದನ್ನು ವಿರೋಧಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News