ಹರಿದು ಬಿದ್ದ ಅಮೆರಿಕದ ‘ರಕ್ಷಕ’ನ ಮುಖವಾಡ

Update: 2025-03-03 08:45 IST
ಹರಿದು ಬಿದ್ದ ಅಮೆರಿಕದ ‘ರಕ್ಷಕ’ನ ಮುಖವಾಡ
  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಉಕ್ರೇನ್‌ನ ಸ್ಥಿತಿ ಹೆಬ್ಬಾವಿಗೆ ಹೆದರಿ ನಾಗರ ಹಾವಿನ ಸ್ನೇಹ ಮಾಡಿದವನಂತಿದೆ. ಇದೀಗ ನಾಗರಹಾವು ಉಕ್ರೇನ್ ಕಡೆಗೆ ತಿರುಗಿ ಬುಸುಗುಡುತ್ತಿದೆ. ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್-ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ನಡುವೆ ಮಾತುಕತೆ ವೇಳೆ ನಡೆದ ನಾಟಕೀಯ ಬೆಳವಣಿಗೆಗಳನ್ನು ಇದರಾಚೆಗೆ ವ್ಯಾಖ್ಯಾನಿಸುವುದು ಕಷ್ಟ. ರಶ್ಯ-ಉಕ್ರೇನ್ ಯುದ್ಧಕ್ಕೆ ಮೂರು ವರ್ಷಗಳು ಸಂದಿವೆಯಾದರೂ, ಈ ಯುದ್ಧದಿಂದ ಉಭಯ ರಾಷ್ಟ್ರಗಳು ಗಳಿಸಿರುವ ಸಾವುನೋವು, ಆರ್ಥಿಕ ನಷ್ಟಗಳನ್ನು ತುಂಬಲು ಹಲವು ದಶಕಗಳು ಬೇಕಾಗಬಹುದು. ಈ ಯುದ್ಧ ಯಾರಿಗಾದರೂ ಲಾಭವನ್ನು ತಂದು ಕೊಟ್ಟಿದ್ದರೆ ಅದು ಅಮೆರಿಕ ಮತ್ತು ಯುರೋಪ್ ಯೂನಿಯನ್‌ಗೆ ಮಾತ್ರ. ಉಕ್ರೇನ್‌ನ ಹೆಗಲ ಮೇಲೆ ಬಂದೂಕಿಟ್ಟು ಯುರೋಪ್ ರಾಷ್ಟ್ರಗಳು ರಶ್ಯದ ಮೇಲೆ ಹೊಡೆದಿವೆ. ತಮ್ಮನ್ನು ತಾವು ಅಮಾಯಕ ಉಕ್ರೇನ್‌ನ ರಕ್ಷಕರಂತೆ ಬಿಂಬಿಸುತ್ತಾ ಯುರೋಪ್ ದೇಶಗಳು, ರಶ್ಯವನ್ನು ಯುದ್ಧಕ್ಕಿಳಿಯಲೇ ಬೇಕಾದ ಸ್ಥಿತಿಗೆ ತಂದು ನಿಲ್ಲಿಸಿದವು. ಇದೀಗ ಉಕ್ರೇನ್ ಯುರೋಪ್ ಒಕ್ಕೂಟದ ಮುಂದೆ ಮಂಡಿಯೂರಿ ನಿಂತಿದ್ದರೆ, ರಶ್ಯ ವಿಶ್ವದ ಮುಂದೆ ‘ವಿಲನ್’ ಆಗಿ ಬಿಂಬಿಸಲ್ಪಟ್ಟಿದೆ. ಅಮೆರಿಕ ಮತ್ತು ಯುರೋಪ್ ದೇಶಗಳು ಮಾತ್ರ ಏನನ್ನೂ ಕಳೆದುಕೊಳ್ಳದೆ ಬಹಳಷ್ಟು ಲಾಭಗಳನ್ನು ತನ್ನದಾಗಿಸಿಕೊಂಡಿವೆ. ಆ ಲಾಭಗಳ ಕೊಯ್ಲಿನ ಹೊತ್ತಿನಲ್ಲಿ ಹೊರಬಿದ್ದ ಭಿನ್ನಭಿಪ್ರಾಯಗಳೇ ಶನಿವಾರ ಶ್ವೇತ ಭವನದಲ್ಲಿ ಅಮೆರಿಕದ ಅಧ್ಯಕ್ಷರು ಉಕ್ರೇನ್ ಅಧ್ಯಕ್ಷರ ವಿರುದ್ಧ ಬುಸುಗುಟ್ಟುವುದಕ್ಕೆ ಕಾರಣವಾಯಿತು.

ಇಂತಹದೊಂದು ದಯನೀಯ ಸ್ಥಿತಿಯನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಅಮೆರಿಕದಿಂದ ಬೇಡಿ ಪಡೆದುಕೊಂಡಿದ್ದಾರೆ. 1991ರಲ್ಲಿ ಸೋವಿಯತ್ ಒಕ್ಕೂಟ ಛಿದ್ರವಾದಾಗ ಸ್ವತಂತ್ರವಾದ ಗಣರಾಜ್ಯಗಳಲ್ಲಿ ಉಕ್ರೇನ್ ಕೂಡ ಒಂದು. ಈ ಸಂದರ್ಭದಲ್ಲಿ ಉಕ್ರೇನ್ ಬಳಿ ಮೂರನೇ ಒಂದು ಭಾಗದಷ್ಟು ಪರಮಾಣು ಅಸ್ತ್ರವಿತ್ತಾದರೂ, ಬುಡಾಪೆಸ್ಟ್ ಒಪ್ಪಂದಂತೆ ಎಲ್ಲ ಅಣ್ವಸ್ತ್ರಗಳನ್ನು ನಿಷ್ಕ್ರಿಯಗೊಳಿಸಿತು. ಈ ಸಂದರ್ಭದಲ್ಲಿ ರಶ್ಯ, ಯುಎಸ್‌ಎ, ಫ್ರಾನ್ಸ್ ಮೊದಲಾದ ದೇಶಗಳು ಉಕ್ರೇನ್‌ಗೆ ರಕ್ಷಣೆಯ ಭರವಸೆಯನ್ನೂ ನೀಡಿದ್ದವು. ಆದರೆ ನಿಧಾನಕ್ಕೆ ಎಲ್ಲ ಭರವಸೆಗಳು ಹುಸಿಯಾದವು. ಉಕ್ರೇನ್‌ನಲ್ಲಿದ್ದ ಖನಿಜಗಳು ಮತ್ತು ಇತರ ಸಂಪನ್ಮೂಲಗಳ ಕುರಿತಂತೆ ಎಲ್ಲ ಶ್ರೀಮಂತ ದೇಶಗಳಿಗೂ ಕಣ್ಣಿದ್ದವು. ಇದೇ ಸಂದರ್ಭದಲ್ಲಿ ರಶ್ಯ ಉಕ್ರೇನ್‌ನಲ್ಲಿ ಹಸ್ತಕ್ಷೇವನ್ನು ನಿಲ್ಲಿಸಲಿಲ್ಲ. ಅಲ್ಲಿನ ಬಂಡುಕೋರರಿಗೆ ನೆರವನ್ನು ನೀಡುತ್ತಲೇ ಇತ್ತು. ರಶ್ಯ ಕುರಿತಂತೆ ಉಕ್ರೇನ್‌ನ ಆತಂಕ, ಯುರೋಪ್ ರಾಷ್ಟ್ರಗಳ ಜೊತೆಗಿನ ಸ್ನೇಹವನ್ನು ಅನಿವಾರ್ಯವಾಗಿಸಿತು. ಮಾತ್ರವಲ್ಲ, ರಶ್ಯದ ಭಯದಿಂದ ಉಕ್ರೇನ್ ನೇಟೊ ಸೇರ್ಪಡೆೆಗೆ ನಡೆಸಿದ ಪ್ರಯತ್ನ ಅಂತಿಮವಾಗಿ ರಶ್ಯ ನೇರ ಯುದ್ಧ ಘೋಷಿಸಲು ಕಾರಣವಾಯಿತು. ಯುರೋಪ್ ಮತ್ತು ಅಮೆರಿಕ ನೀಡಿದ ಭರವಸೆಗಳನ್ನು ನಂಬಿ ರಶ್ಯದ ವಿರುದ್ಧ ಉಕ್ರೇನ್ ನೇರ ಬಲಾಬಲ ಪ್ರದರ್ಶನಕ್ಕೆ ಇಳಿಯಿತು. ಆದರೆ ಅಧಿಕೃತ ಯುದ್ಧ ಘೋಷಣೆಯಾದಾಗ ಮಿತ್ರರಿಂದ ನಿರೀಕ್ಷಿಸಿದ ನೆರವು ಉಕ್ರೇನ್‌ಗೆ ಸಿಗಲಿಲ್ಲ. ಇದೀಗ ನೋಡಿದರೆ, ಅಮೆರಿಕವು ಉಕ್ರೇನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಖನಿಜ ಒಪ್ಪಂದಗಳಿಗೆ ಸಹಿ ಹಾಕಲು, ಉಕ್ರೇನನ್ನು ಬ್ಲ್ಯಾಕ್‌ಮೇಲ್ ಮಾಡುವ ಮಟ್ಟಕ್ಕೆ ಇಳಿದಿದೆ. ಉಕ್ರೇನ್‌ನ ಅಸಹಾಯಕತೆಯನ್ನು ತನ್ನ ಸ್ವಾರ್ಥಕ್ಕೆ ಬಳಸಲು ಮುಂದಾಗಿರುವ ಅಮೆರಿಕದ ಮುಖವಾಡ ಭಾಗಶಃ ಹರಿದಿದೆ. ಯುರೋಪ್ ಒಕ್ಕೂಟ ಈಗಾಗಲೇ ‘‘ಸ್ವತಂತ್ರ ಜಗತ್ತಿಗೆ ಹೊಸ ನಾಯಕನ ಅಗತ್ಯವಿದೆ ಎಂಬುದು ಇವತ್ತು ಸ್ಪಷ್ಟವಾಗಿದೆ’’ ಎಂದು ಘೋಷಿಸುವ ಮೂಲಕ, ಅಮೆರಿಕ ನಂಬಿಕೆಗೆ ಅರ್ಹ ದೇಶವಲ್ಲ ಎನ್ನುವುದನ್ನು ಬಹಿರಂಗವಾಗಿಯೇ ಘೋಷಿಸಿದಂತಾಗಿದೆ.

‘‘ಮೂರನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡಬಹುದಾದಂತಹ ಹೆಜ್ಜೆಗಳನ್ನು ಝೆಲೆನ್‌ಸ್ಕಿ ಇಟ್ಟಿದ್ದಾರೆ’’ ಎನ್ನುವ ಮಾತುಗಳನ್ನು ಆಡುವ ಯಾವ ನೈತಿಕತೆಯೂ ಅಮೆರಿಕಕ್ಕೆ ಇಲ್ಲ. ಯಾಕೆಂದರೆ, ಉಕ್ರೇನನ್ನು ಇಂತಹ ದಾರಿಯೆಡೆಗೆ ಮುನ್ನಡೆಸಿದ್ದೇ ಅಮೆರಿಕ. ಇಂದು, ತನ್ನ ಮೂಗಿನ ನೇರಕ್ಕೆ ತಕ್ಕಂತೆ ಒಪ್ಪಂದಕ್ಕೆ ಉಕ್ರೇನ್ ಸಿದ್ಧವಿಲ್ಲದಿರುವುದೇ ಅಮೆರಿಕದ ಸಿಟ್ಟಿಗೆ ಕಾರಣವಾಗಿದೆ. ಇತ್ತೀಚೆಗೆ ಭಾರತದ ಜೊತೆಗೂ ಟ್ರಂಪ್ ಇದೇ ಸಿಟ್ಟನ್ನು ವ್ಯಕ್ತಪಡಿಸಿದ್ದರು ಮಾತ್ರವಲ್ಲ, ಅಮೆರಿಕಕ್ಕೆ ಭೇಟಿ ನೀಡಿದ್ದ ಭಾರತದ ಪ್ರಧಾನಿ ಮೋದಿಯವರ ಜೊತೆಗೆ ಅತ್ಯಂತ ಅಗೌರವದಿಂದ ನಡೆದುಕೊಂಡಿದ್ದರು. ಮೋದಿ ಭೇಟಿ ಕೊಟ್ಟಾಗ ಅವರನ್ನು ಸ್ವಾಗತಿಸಲು ತನ್ನ ಕೆಳಗಿನ ಅಧಿಕಾರಿಗಳನ್ನಷ್ಟೇ ಅವರು ಕಳುಹಿಸಿದ್ದರು. ಜೊತೆಗೆ, ಭಾರತ ತಾನು ಕೊಟ್ಟ ಭಿಕ್ಷೆಯಿಂದ ಬದುಕುತ್ತಿದೆ ಎನ್ನುವಂತಹ ಮಾತುಗಳನ್ನು ಆಡಿದ್ದರು. ಅಮೆರಿಕದಿಂದ ಪ್ರಧಾನಿ ಮೋದಿಗೆ ಹಣ ಹೋಗಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಪ್ರಧಾನಿ ಮೋದಿ ಇವೆಲ್ಲವನ್ನು ತುಟಿ ಪಿಟಿಕ್ ಎನ್ನದೇ ಸಹಿಸಿದ್ದರು. ವಿಶೇಷವೆಂದರೆ, ಉಕ್ರೇನ್‌ನಂತಹ ಪುಟ್ಟ ದೇಶದ ಅಧ್ಯಕ್ಷರಾದರೂ, ಟ್ರಂಪ್‌ನ ಅವಮಾನಕಾರಿ ಮಾತುಗಳನ್ನು ಸಹಿಸಲು ಝೆಲೆನ್‌ಸ್ಕಿ ಸಿದ್ಧರಿರಲಿಲ್ಲ. ಅವರು ಪತ್ರಿಕಾಗೋಷ್ಠಿಯನ್ನೇ ರದ್ದುಗೊಳಿಸಿದರು.

ರಶ್ಯದ ವಿರುದ್ಧ ಯುದ್ಧದಲ್ಲಿ ಅಮೆರಿಕವು ಉಕ್ರೇನ್‌ಗೆ ಶಸ್ತ್ರಾಸ್ತ್ರ ರೂಪದಲ್ಲಿ ಸುಮ್ಮನೆ ನೆರವು ನೀಡಿಲ್ಲ. ವಾಸ್ತವದಲ್ಲಿ ಉಕ್ರೇನ್ ಅದಕ್ಕೆ ಕೃತಜ್ಞವಾಗುವ ಅಗತ್ಯವೂ ಇಲ್ಲ. ಯಾಕೆಂದರೆ, ಅಮೆರಿಕಕ್ಕೆ ಉಕ್ರೇನ್‌ನಲ್ಲಿರುವ ಖನಿಜಗಳ ಮೇಲೆ ಕಣ್ಣಿದೆ. ಉಕ್ರೇನನ್ನು ಯುದ್ಧಂದತಹ ಸನ್ನಿವೇಶದಲ್ಲಿ ಸಿಲುಕಿಸಿ ಅದನ್ನು ಅಸಹಾಯಕಗೊಳಿಸಿ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವುದು ಅಮೆರಿಕದ ಗುರಿಯಾಗಿದೆ. ಈ ಒಪ್ಪಂದದಲ್ಲಿ ಉಕ್ರೇನ್‌ನ ಭದ್ರತೆಗೆ ಸಂಬಂಧಿಸಿದ ಯಾವುದೇ ಖಾತರಿಗಳನ್ನು ನೀಡಲು ಅಮೆರಿಕ ಸಿದ್ಧವಾಗಿಲ್ಲ. ಈ ಹಿಂದೆ ನೀಡಿದ ನೆರವಿಗೆ ಮೊದಲು ನೀವು ಕೃತಜ್ಞರಾಗಿ ಎಂದು ಅದು ಆದೇಶಿಸುತ್ತಿದೆ.

ಗ್ಯಾಲಿಯಮ್‌ನಂತಹ ಅಪರೂಪದ ಖನಿಜಗಳು ಆಧುನಿಕ ರಕ್ಷಣಾ ತಂತ್ರಜ್ಞಾನಗಳಿಗೆ ನಿರ್ಣಾಯಕವಾಗಿವೆ. ಆದರೆ ಅವು ದೇಶೀಯವಾಗಿ ಅಮೆರಿಕದಲ್ಲಿ ಸಿದ್ಧರೂಪದಲ್ಲಿ ಲಭ್ಯವಿಲ್ಲ. ಗ್ಯಾಲಿಯಮ್‌ನ ಪ್ರಮುಖ ಪೂರೈಕೆದಾರ ದೇಶವಾಗಿರುವ ಚೀನಾ ಈ ಖನಿಜಗಳ ಮೇಲಿನ ತನ್ನ ನಿಯಂತ್ರಣವನ್ನು ಅಮೆರಿಕದ ವಿರುದ್ಧ ಕಡಿವಾಣವಾಗಿ ಬಳಸಿಕೊಂಡಿದೆ. ತನ್ನ ಸರಕುಗಳ ಮೇಲೆ ಅಮೆರಿಕದ ಸುಂಕಗಳ ಹೆಚ್ಚಳಕ್ಕೆ ಪ್ರತಿಕಾರವಾಗಿ ಚೀನಾ ಅದಕ್ಕೆ ಅಪರೂಪದ ಖನಿಜಗಳ ರಫ್ತನ್ನು ನಿಷೇಧಿಸಿದೆ. ಕ್ಷಿಪಣಿ ವ್ಯವಸ್ಥೆ,ಇಲೆಕ್ಟ್ರಾನಿಕ್ಸ್ ಮತ್ತು ವಿದ್ಯುತ್ ವಾಹನಗಳಂತಹ ಮಿಲಿಟರಿ ತಂತ್ರಜ್ಞಾನಕ್ಕೆ ಈ ಖನಿಜಗಳು ಮಹತ್ವದ್ದಾಗಿವೆ. ಐರೋಪ್ಯ ಒಕ್ಕೂಟವು ನಿರ್ಣಾಯಕವೆಂದು ಗುರುತಿಸಿರುವ 34 ಖನಿಜಗಳ ಪೈಕಿ 22 ಖನಿಜಗಳ ನಿಕ್ಷೇಪಗಳು ಉಕ್ರೇನ್‌ನಲ್ಲಿವೆ.ಪ್ರಸ್ತುತ ಕೆಲವು ಮಹತ್ವದ ಖನಿಜಗಳ ಆಮದುಗಳಲ್ಲಿ ಚೀನಾ ದೊಡ್ಡ ಪಾಲನ್ನು ಹೊಂದಿರುವುದು ಅಮೆರಿಕದ ಸಮಸ್ಯೆಯಾಗಿದೆ. ರಶ್ಯ-ಉಕ್ರೇನ್ ಯುದ್ಧದಲ್ಲಿ ಇದೀಗ ಟ್ರಂಪ್ ಮೀನು ಹಿಡಿಯಲು ಮುಂದಾಗಿದ್ದಾರೆ. ತನ್ನ ಮೂಗಿನ ನೇರಕ್ಕೆ ಉಕ್ರೇನ್ ಒಪ್ಪಂದಕ್ಕೆ ಸಹಿಹಾಕಬೇಕು ಎಂದು ಅಮೆರಿಕ ಬಯಸುತ್ತಿದೆ. ಉಕ್ರೇನ್ ತಗಾದೆ ತೆಗೆದಾಕ್ಷಣ ನಾಗರಹಾವು ತಿರುಗಿ ನಿಂತು ಬುಸುಗುಟ್ಟಿದೆ

ಶ್ವೇತಭವನದಲ್ಲಿ ಎಲ್ಲ ಔಪಚಾರಿಕ ರಾಜತಾಂತ್ರಿಕ ನಡೆಗಳನ್ನು ಮೀರಿ, ಒಬ್ಬ ಗಲ್ಲಿ ಗೂಂಡಾನಂತೆ ಟ್ರಂಪ್ ವರ್ತಿಸಿರುವುದು, ಒಂದು ದೇಶದ ಸಾರ್ವಭೌಮತೆಯನ್ನು ಗೌರವಿಸದೆ, ಅದರ ಅಧ್ಯಕ್ಷನ ಮೇಲೆ ಒತ್ತಡವನ್ನು ಹೇರಲು ಯತ್ನಿಸಿದ್ದು ಹಲವು ದಶಕಗಳಿಂದ ಅಮೆರಿಕ ಕಾಪಾಡಿಕೊಂಡು ಬಂದಿರುವ ‘ರಕ್ಷಕ’ನ ಇಮೇಜಿಗೆ ಭಾರೀ ಧಕ್ಕೆ ತಂದಿದೆ. ಒಂದು ರೀತಿಯಲ್ಲಿ, ಅಮೆರಿಕದ ಮುಖವಾಡ ಟ್ರಂಪ್‌ರ ವರ್ತನೆಯಿಂದ ಹರಿದು ಬಿದ್ದಿದೆ. ಅಮೆರಿಕದ ಸ್ನೇಹಕ್ಕಾಗಿ ಕಾದಿರುವ ಭಾರತದಂತಹ ಅಭಿವೃದ್ಧಿ ಶೀಲ ದೇಶಗಳಿಗೆ ಈ ಘಟನೆ ಒಂದು ಪಾಠವಾಗಲಿದೆ. ಅಮೆರಿಕದ ಜೊತೆಗಿನ ತನ್ನ ಭವಿಷ್ಯದ ಒಪ್ಪಂದಗಳ ಬಗ್ಗೆ ಮತ್ತೊಮ್ಮೆ ಅವಲೋಕಿಸುವಂತಹ ಸ್ಥಿತಿಯನ್ನು ಸ್ವತಃ ಅಮೆರಿಕವೇ ಸೃಷ್ಟಿಸಿದೆ. ಒಟ್ಟಿನಲ್ಲಿ, ವಿಶ್ವದ ಮುಂದೆ ಅಮೆರಿಕ ಹಂತಹಂತವಾಗಿ ಬೆತ್ತಲೆಯಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News