ತಮ್ಮ ಮೌನಕ್ಕೆ ರಾಜ್ಯಗಳು ಕಟ್ಟಬೇಕಾದ ಭಾರೀ ತೆರಿಗೆ!

Update: 2025-03-01 08:00 IST
ತಮ್ಮ ಮೌನಕ್ಕೆ ರಾಜ್ಯಗಳು ಕಟ್ಟಬೇಕಾದ ಭಾರೀ ತೆರಿಗೆ!

PC: PTI

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈಗಾಗಲೇ ಜಿಎಸ್‌ಟಿ ಪರಿಹಾರವನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿರುವ ಬಗ್ಗೆ ರಾಜ್ಯ ಸರಕಾರಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಕರ್ನಾಟಕ ಸರಕಾರವಂತೂ, ತನ್ನ ಪಾಲಿಗೆ ಹಣವನ್ನು ನೀಡಲು ಕೇಂದ್ರ ಸರಕಾರ ಸತಾಯಿಸುತ್ತಿದೆ ಎಂದು ಆರೋಪ ಮಾಡಿದೆ. ಮಾತ್ರವಲ್ಲ, ಇದರ ವಿರುದ್ಧ ನ್ಯಾಯಾಲಯದ ಕದವನ್ನೂ ತಟ್ಟಿದೆ. ಸಂಸತ್‌ನ ಮುಂದೆ ಹಲವು ಬಾರಿ ಧರಣಿ ಕೂತು, ಪ್ರಧಾನಿ ಮೋದಿಯ ವಿರುದ್ಧ ಘೋಷಣೆ ಕೂಗಿದೆ. ಕರ್ನಾಟಕ ಅತ್ಯಧಿಕ ತೆರಿಗೆಯನ್ನು ಪಾವತಿಸುವ ರಾಜ್ಯವಾದರೂ, ತನ್ನ ಪಾಲಿನ ಅನುದಾನಗಳನ್ನು ಪಡೆಯುವ ಸಂದರ್ಭದಲ್ಲಿ ಪಕ್ಷಪಾತವನ್ನು ಎದುರಿಸುತ್ತಾ ಬಂದಿದೆ. ಡಬಲ್ ಇಂಜಿನ್ ಸರಕಾರವಿದ್ದಾಗಲೂ ರಾಜ್ಯದ ಸ್ಥಿತಿ ಭಿನ್ನವಾಗಿಯೇನೂ ಇರಲಿಲ್ಲ.

ನಮ್ಮ ರಾಜ್ಯವು ಪ್ರತಿವರ್ಷ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರಕ್ಕೆ ಒಪ್ಪಿಸುತ್ತಿದೆ. ತಾನು ಸಲ್ಲಿಸಿದ ತೆರಿಗೆ ಪ್ರಮಾಣಕ್ಕೆ ಹೋಲಿಸಿದರೆ ಮರಳಿ ಸಿಗುವುದು ಪ್ರತಿ ರೂಪಾಯಿಗೆ 15 ಪೈಸೆ ಮಾತ್ರ. ಆದರೆ ಅದನ್ನು ಕೂಡ ರಾಜ್ಯಕ್ಕೆ ನೀಡಲು ಕೇಂದ್ರ ಸತಾಯಿಸುತ್ತಿದೆ. ಹದಿನೈದನೇ ಹಣಕಾಸು ಆಯೋಗ ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇ. 4.713ರಿಂದ ಶೇ. 3.64ಕ್ಕೆ ಇಳಿಸಿದ್ದ ಕಾರಣದಿಂದಾಗಿ ಕರ್ನಾಟಕ ಕಳೆದ ಐದು ವರ್ಷಗಳಲ್ಲಿ 68,775 ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ ಎಂದು ರಾಜ್ಯ ಆರೋಪಿಸುತ್ತಿದೆ. ಅಷ್ಟೇ ಅಲ್ಲ, 15ನೇ ಹಣಕಾಸು ಆಯೋಗದ ಅವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಆದರೆ ಈ ಆಯೋಗ ಶಿಫಾರಸು ಮಾಡಿರುವ ವಿಶೇಷ ಅನುದಾನ 5,495 ಕೋಟಿ ರೂಪಾಯಿ ಮತ್ತು ರಾಜ್ಯ ಕೇಂದ್ರಿತ 6,000 ಕೋಟಿ ರೂಪಾಯಿ ಮೊತ್ತದ ವಿಶೇಷ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಇದೇ ಸಂದರ್ಭದಲ್ಲಿ ಕಡಿಮೆ ತೆರಿಗೆ ಪಾವತಿಸುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಅನುದಾನಗಳು ಹರಿದು ಹೋಗುತ್ತಿವೆ. ಇದಕ್ಕೆ ಸ್ಪಷ್ಟೀಕರಣ ನೀಡಬೇಕಾಗಿದ್ದ ವಿತ್ತ ಸಚಿವರು, ‘‘ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಬೇಕು ಎನ್ನುವ ನಿಯಮವಿಲ್ಲ’’ ಎಂದು ಕೇಂದ್ರದ ಕೃತ್ಯವನ್ನು ಈಗಾಗಲೇ ಸಮರ್ಥಿಸಿಕೊಂಡಿದ್ದಾರೆ. ಜಿಎಸ್‌ಟಿಯಿಂದ ವ್ಯಾಪಾರ ಸುಲಭವಾಗುತ್ತದೆ, ಬೆಲೆ ಇಳಿಕೆಯಾಗುತ್ತದೆ ಎನ್ನುವ ಭರವಸೆ ಹುಸಿಯಾಗಿದೆ. ವ್ಯಾಪಾರ ಇನ್ನಷ್ಟು ಸಂಕಷ್ಟಕ್ಕೀಡಾಗಿದೆ. ಮೇಲಿಂದ ಮೇಲೆ ಬೀಳುತ್ತಿರುವ ತೆರಿಗೆಯಿಂದ ತತ್ತರಿಸಿ ಉದ್ದಿಮೆಗಳು ಒಂದೊಂದಾಗಿ ಮುಚ್ಚುವ ಹಂತಕ್ಕೆ ಬಂದಿವೆ. ಇದೇ ಸಂದರ್ಭದಲ್ಲಿ, ರಾಜ್ಯಗಳಿಗೆ ನೀಡುವ ಜಿಎಸ್‌ಟಿ ಪರಿಹಾರವನ್ನು ಆರಂಭದಲ್ಲಿ ‘ಕೊರೋನ ವಿಪತ್ತನ್ನು’ ಮುಂದಿಟ್ಟು ಕಡಿತ ಮಾಡಿತು. ತನ್ನ ವೈಫಲ್ಯವನ್ನು ವಿತ್ತ ಸಚಿವರು ದೇವರ ತಲೆಗೆ ಕಟ್ಟಿದರು. ರಾಜ್ಯ ಸರಕಾರ ತನ್ನ ಹಕ್ಕಿನ ಹಣವನ್ನು ಕೇಳಿದಾಗಲೆಲ್ಲ, ‘ಜನರಿಗೆ ಉಚಿತ ಯಾಕೆ ಕೊಟ್ಟಿರಿ?’ ಎಂದು ಕೇಂದ್ರ ಕೇಳಲು ಶುರು ಮಾಡಿತು. ಜನರ ಹಣವನ್ನು ಜನರ ಅಭಿವೃದ್ಧಿಗೆ ಅದರಲ್ಲೂ ತಳಸ್ತರದ ಜನರ ಏಳಿಗೆಗೆ ಬಳಸುವುದಕ್ಕೆ ರಾಜ್ಯಗಳು ಕೇಂದ್ರವನ್ನು ಕೇಳುವ ಅಗತ್ಯವೇನಿದೆ? ಕೇಂದ್ರದ ಎಲ್ಲ ಅಸಹಕಾರಗಳ ನಡುವೆಯೂ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇದು ಸಹಜವಾಗಿಯೇ ‘ಕಾರ್ಪೊರೇಟ್‌ಗಳ ಹಿತೈಷಿ’ ಮೋದಿ ನೇತೃತ್ವದ ಸರಕಾರವನ್ನು ಹತಾಶೆಗೆ ತಳ್ಳಿದೆ. ರಾಜ್ಯಗಳು ತನ್ನ ಅಭಿವೃದ್ಧಿ ಯೋಜನೆಗಳನ್ನು ತನ್ನ ಮೂಗಿನ ನೇರಕ್ಕೆ ಅನುಷ್ಠಾನಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ, ಕೇಂದ್ರ ಸರಕಾರ ಇದೀಗ ತೆರಿಗೆಯ ಪಾಲಿನಲ್ಲಿ ಇನ್ನಷ್ಟು ಕಡಿತಗೊಳಿಸಿ ರಾಜ್ಯಗಳ ಕೈಗಳನ್ನು ಕಟ್ಟಿ ಹಾಕಲು ಮುಂದಾಗಿದೆ. ಅದರ ಭಾಗವಾಗಿಯೇ ತೆರಿಗೆಯಲ್ಲಿ ರಾಜ್ಯಗಳಿಗೆ ನೀಡುವ ಪಾಲನ್ನು ಈಗಿನ ಶೇ. 41ರಿಂದ ಶೇ. 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಕೋರಿಕೆ ಸಲ್ಲಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ರಾಜ್ಯಗಳಿಗೆ ನೀಡುವ ತೆರಿಗೆ ಪಾಲಿನಲ್ಲಿ ಶೇ. 1ರಷ್ಟು ಕಡಿತಗೊಳಿಸಿದರೆ, ಸುಮಾರು 350 ಶತ ಕೋಟಿ ರೂಪಾಯಿ ಕೇಂದ್ರದ ಜೇಬಿನಲ್ಲೇ ಉಳಿಯಲಿದೆ. ಅನುದಾನ ಹಂಚಿಕೆಯ ಬಗ್ಗೆ ರಾಜ್ಯಗಳಲ್ಲಿರುವ ಅಸಮಾಧಾನಗಳನ್ನು ಇತ್ಯರ್ಥಗೊಳಿಸಲು ಮುಂದಾಗದ ಕೇಂದ್ರ ಸರಕಾರ, ತೆರಿಗೆಯ ಪಾಲಿನಲ್ಲಿ ಇನ್ನಷ್ಟು ಕಡಿತಕ್ಕೆ ಮುಂದಾಗಿರುವುದರ ಹಿಂದೆ , ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿ ರಾಜ್ಯಗಳ ಮೇಲೆ ತನ್ನ ಆರ್ಥಿಕ ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸುವ ದುರುದ್ದೇಶ ಎದ್ದು ಕಾಣುತ್ತಿದೆ.

ರಾಜ್ಯಗಳು ತಮ್ಮ ಹಕ್ಕಿನ ತೆರಿಗೆ ಹಣದ ಬದಲಿಗೆ ಕೇಂದ್ರ ನೀಡುವ ಅನುದಾನವನ್ನೇ ನೆಚ್ಚಿಕೊಳ್ಳಲು ಆರಂಭಿಸಿದರೆ, ಜನಪರ ಯೋಜನೆಗಳನ್ನು ಘೋಷಣೆ ಮಾಡಬೇಕಾದಾಗಲೆಲ್ಲ ಕೇಂದ್ರದ ಮುಂದೆ ಹಲ್ಲು ಗಿಂಜಬೇಕಾಗುತ್ತದೆ. ಮುಂದಕ್ಕೆ ಗ್ಯಾರಂಟಿಗಳಂತಹ ಯೋಜನೆಗಳನ್ನು ಜಾರಿಗೊಳಿಸಬೇಕಾದರೆ ಕೇಂದ್ರದ ಅನುಮತಿ ಪಡೆಯಬೇಕಾಗಬಹುದು. ದೇಶಕ್ಕೆ ಸಾಲ ನೀಡುವ ಸಂದರ್ಭದಲ್ಲಿ ವಿಶ್ವಬ್ಯಾಂಕ್ ನಿಬಂಧನೆಗಳನ್ನು ಹಾಕುವಂತೆಯೇ ಕೇಂದ್ರ ಸರಕಾರವೂ ರಾಜ್ಯಗಳಿಗೆ ನಿಬಂಧನೆಗಳನ್ನು ವಿಧಿಸಬಹುದು. ಕಳೆದ ಬಜೆಟ್‌ನಲ್ಲಿ ಬಿಹಾರ ದೊಡ್ಡ ಪಾಲಿನ ಅನುದಾನವನ್ನು ತನ್ನದಾಗಿಸಿಕೊಂಡಿತು. ಕರ್ನಾಟಕಕ್ಕೆ ಬಜೆಟ್‌ನಲ್ಲಿ ಏನೇನೂ ಇದ್ದಿರಲಿಲ್ಲ. ಆರ್ಥಿಕವಾಗಿ ರಾಜ್ಯವನ್ನು ದುರ್ಬಲಗೊಳಿಸಿ, ಗ್ಯಾರಂಟಿ ಯೋಜನೆಗಳನ್ನು ಹಿಂದೆಗೆದುಕೊಳ್ಳುವಂತೆ ಪರೋಕ್ಷ ಒತ್ತಡ ಹೇರುವುದು ಕೇಂದ್ರ ಸರಕಾರದ ಉದ್ದೇಶವೆನ್ನುವುದು ಸ್ಪಷ್ಟ. ರಾಜ್ಯ ತನ್ನ ಹಣಕ್ಕೆ ಬೇಡಿಕೆ ಇಟ್ಟಾಗಲೆಲ್ಲ, ‘ಗ್ಯಾರಂಟಿ ಯೋಜನೆ’ಗಳ ಕಡೆಗೆ ಕೇಂದ್ರ ಸರಕಾರ ಕೈ ತೋರಿಸಿದ್ದು, ಇದೀಗ ತೆರಿಗೆ ಹಂಚಿಕೆಯಲ್ಲಿ ಪಾಲು ಕಡಿತವಾದರೆ ಬಿಜೆಪಿಯೇತರ ಸರಕಾರವಿರುವ ರಾಜ್ಯಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ.

ಒಂದೆಡೆ ರಾಜಕೀಯವಾಗಿ ಕೇಂದ್ರದಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯವನ್ನು ಹಂತಹಂತವಾಗಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ತಂತ್ರಗಳನ್ನು ಹೆಣೆಯುತ್ತಿದೆ. ಅದರ ಭಾಗವಾಗಿಯೇ ಒಂದು ದೇಶ ಒಂದು ಚುನಾವಣೆ ಜಾರಿ ಮಾಡಲು ಮುಂದಾಗಿದೆ. ಈ ಮೂಲಕ ಚುನಾವಣೆಗಳನ್ನು ‘ರಾಷ್ಟ್ರ ಕೇಂದ್ರಿತ ವಿಷಯ’ವನ್ನಾಗಿಸುವುದು ಕೇಂದ್ರದ ಉದ್ದೇಶ. ಚುನಾವಣೆಯ ವಿಷಯ ದೇಶದ ಹಿತಾಸಕ್ತಿಯಾಗಬೇಕೇ ಹೊರತು, ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ಚುನಾವಣೆ ನಡೆಯುವಂತಾಗಬಾರದು ಎನ್ನುವ ಕೇಂದ್ರದ ಉದ್ದೇಶಕ್ಕೆ ‘ಒಂದು ದೇಶ ಒಂದು ಚುನಾವಣೆ’ ಸಹಕರಿಸುತ್ತದೆ. ಅದಕ್ಕೆ ಪೂರಕವಾಗಿ ಇದೀಗ ಜನಸಂಖ್ಯಾಧಾರಿತವಾಗಿ ಕ್ಷೇತ್ರ ಪುನರ್ ವಿಂಗಡಣೆಗೆ ಕೇಂದ್ರ ಸಿದ್ಧತೆ ನಡೆಸುತ್ತಿದೆ. ಇದರಿಂದಾಗಿ ದಕ್ಷಿಣ ರಾಜ್ಯಗಳ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಗಣನೀಯ ಇಳಿಕೆಯಾಗುತ್ತದೆ ಮಾತ್ರವಲ್ಲ ಉತ್ತರ ಭಾರತದ ಕ್ಷೇತ್ರಗಳಲ್ಲಿ ಗಣನೀಯ ಹೆಚ್ಚಳವಾಗುತ್ತದೆ.ಕೇಂದ್ರದಲ್ಲಿ ಸರಕಾರ ರಚನೆಯ ಸಂದರ್ಭದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಅಗತ್ಯ ಕಡಿಮೆಯಾಗುತ್ತದೆ. ಉತ್ತರ ಭಾರತದ ರಾಜ್ಯಗಳೇ ನಿರ್ಣಾಯಕವಾಗುತ್ತದೆ. ಕೇಂದ್ರ ಸರಕಾರಕ್ಕೆ ಸವಾಲು ಹಾಕುತ್ತಿರುವ ದಕ್ಷಿಣದರಾಜ್ಯಗಳ ಬಾಯಿ ಮುಚ್ಚಿಸುವುದೇ ಇವೆಲ್ಲದರ ಉದ್ದೇಶ. ಹಾಗೆಯೇ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಹಣ ಬೇಕಾದರೂ ಕೇಂದ್ರದ ಮುಂದೆ ಕೈಯೊಡ್ಡ ಬೇಕಾದ ಅನಿವಾರ್ಯ ಸ್ಥಿತಿಯನ್ನು ರಾಜ್ಯಗಳಿಗೆ ತಂದಿಟ್ಟು, ಒಕ್ಕೂಟ ವ್ಯವಸ್ಥೆಯನ್ನು ನಾಮಕಾವಾಸ್ಥೆಗಷ್ಟೇ ಉಳಿಸಿ ರಾಜ್ಯಗಳನ್ನು ಕೇಂದ್ರದ ಮುಂದೆ ಮಂಡಿಯೂರುವಂತೆ ಮಾಡುವುದು ತೆರಿಗೆ ಕಡಿತದ ಹಿಂದಿರುವ ಉದ್ದೇಶ. ಆದುದರಿಂದ ಎಲ್ಲ ರಾಜ್ಯಗಳು ಇದರ ವಿರುದ್ಧ ಪಕ್ಷಭೇದ ಮರೆತು ಒಂದಾಗಿ ಪ್ರಾದೇಶಿಕ ಹಿತಾಸಕ್ತಿಯನ್ನು ಎತ್ತಿ ಹಿಡಿಯಬೇಕಾಗಿದೆ. ರಾಜ್ಯದ ಜನತೆ ಕಟ್ಟಿದ ತೆರಿಗೆಯನ್ನು ಮನಬಂದಂತೆ ಪೋಲು ಮಾಡಲು ಕೇಂದ್ರ ಸರಕಾರಕ್ಕೆ ಯಾವ ರೀತಿಯಲ್ಲೂ ಅವಕಾಶ ನೀಡಬಾರದು. ಇದರ ವಿರುದ್ಧ ಇಂದು ಮೌನವಾಗಿ ಕೂತರೆ, ಆ ಮೌನಕ್ಕೆ ಭವಿಷ್ಯದಲ್ಲಿ ರಾಜ್ಯಗಳು ಭಾರೀ ತೆರಿಗೆಯನ್ನು ಪಾವತಿಸಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News