ಕನ್ನಡಿಯ ಗಂಟು ತೋರಿಸಿ ಅಲ್ಪಸಂಖ್ಯಾತರಿಗೆ ವಂಚನೆ

Update: 2025-03-06 08:30 IST
ಕನ್ನಡಿಯ ಗಂಟು ತೋರಿಸಿ ಅಲ್ಪಸಂಖ್ಯಾತರಿಗೆ ವಂಚನೆ

ಸಾಂದರ್ಭಿಕ ಚಿತ್ರ PC: PTI

  • whatsapp icon

ಮುಸ್ಲಿಮರನ್ನು ತುಷ್ಟೀಕರಿಸಲಾಗುತ್ತಿದೆ ಎನ್ನುವ ವದಂತಿಯನ್ನು ಹಬ್ಬಿಸುತ್ತಾ, ಅವರನ್ನು ಹೇಗೆ ಅಭಿವೃದ್ಧಿಯಿಂದ ಹೊರಗಿಡುತ್ತಾ ಬರಲಾಗುತ್ತಿದೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಮುಸ್ಲಿಮರಿಗಾಗಿ ಸರಕಾರ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರೂ, ಅದನ್ನು ಮುಸ್ಲಿಮರ ತುಷ್ಟೀಕರಣವೆಂದು ಕರೆಯಲಾಗುತ್ತದೆ. ಈ ನಾಡು ಸಮಗ್ರವಾಗಿ ಅಭಿವೃದ್ಧಿಯೆಡೆಗೆ ಸಾಗಬೇಕಾದರೆ ಮುಸ್ಲಿಮರು ಆ ಅಭಿವೃದ್ಧಿಯ ಕೊಂಡಿಯೊಳಗೆ ಸೇರ್ಪಡೆಗೊಳ್ಳಬೇಕು ಎನ್ನುವುದನ್ನು ಆಳುವವರು ಮರೆತಿದ್ದಾರೆ. ಯುಪಿ ಅಧಿಕಾರದಲ್ಲಿರುವಾಗ ಹೊರ ಬಿದ್ದ ಸಾಚಾರ್ ವರದಿಯು ಮುಸ್ಲಿಮರನ್ನು ‘ನವ ದಲಿತರು’ ಎಂದು ಕರೆದಿದೆ. ಆ ಪರಿಸ್ಥಿತಿ ಇಂದಿಗೂ ಭಿನ್ನವಾಗಿಯೇನೂ ಇಲ್ಲ. ಶೋಷಿತ ಸಮುದಾಯವಾಗಿ ಗುರುತಿಸಿಕೊಂಡಿರುವ ಮುಸ್ಲಿಮರ ಅಭಿವೃದ್ಧಿಗಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವುದು ಆಡಳಿತದ ಹೊಣೆಗಾರಿಕೆಯಾಗಿದೆಯೇ ಹೊರತು, ಅದು ‘ಉಪಕಾರ’ವಲ್ಲ. ಇದನ್ನು ಆಳುವವರು ಅರ್ಥ ಮಾಡಿಕೊಳ್ಳಬೇಕಾಗಿದೆ. ಇಂದು ಮುಸ್ಲಿಮರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಹೆಚ್ಚುವರಿ ಕೊಡುಗೆಗಳನ್ನು ನಿರೀಕ್ಷಿಸುತ್ತಿಲ್ಲ. ದುರ್ಬಲರಿಗೆ, ಶೋಷಿತ ಸಮುದಾಯಗಳಿಗೆ ಸರಕಾರ ನೀಡಬಹುದಾದ ಯೋಜನೆಗಳಲ್ಲಿ ತಮಗೂ ಪಾಲು ನೀಡಿ ಎಂದು ಕೇಳುತ್ತಿವೆ. ಆದರೆ ಅದನ್ನು ಕೊಡುವಾಗಲೂ ಕಾಂಗ್ರೆಸ್ ಸರಕಾರ ಎಲ್ಲಿ ‘ಬಿಜೆಪಿ ಮತ್ತು ಸಂಘಪರಿವಾರ’ದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆಯೇ ಎಂದು ಅಂಜುತ್ತಿದೆ.

ಇತ್ತೀಚೆಗೆ ಅಲ್ಪಸಂಖ್ಯಾತ ಸಮುದಾಯದ ಅದರಲ್ಲೂ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಸರಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜನಾಂಗಕ್ಕೆ ಹಾಗೂ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡಿದ ಮಾದರಿಯಲ್ಲಿ ಮುಸ್ಲಿಮ್ ಸಮುದಾಯದ ಗುತ್ತಿಗೆದಾರರಿಗೂ ಶೇ. 4ರಷ್ಟು ಮೀಸಲಾತಿ ನೀಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ನೀಡಿದ್ದರು. ಈ ಬೇಡಿಕೆ ಇಂದು ನಿನ್ನೆಯದಲ್ಲ. ಇಂತಹ ಬೇಡಿಕೆಯನ್ನು ಮಂಡಿಸಿದ್ದೇ ಮಹದಾಪರಾಧವೆಂಬಂತೆ ಕೆಲವು ಮಾಧ್ಯಮಗಳು ಅವುಗಳನ್ನೇ ಮುಂದಿಟ್ಟುಕೊಂಡು ‘‘ಮುಸ್ಲಿಮರಿಗೆ ಶೇ. 4 ಮೀಸಲು?’ ಎಂದು ಪ್ರಶ್ನಾರ್ಥಕ ಚಿಹ್ನೆಗಳನ್ನು ಹಾಕಿ ವಿಶೇಷ ವರದಿಗಳನ್ನು ಪ್ರಕಟಿಸಿದವು. ಹೀಗೆ ಪ್ರಕಟಿಸಿದ ಬೆನ್ನಿಗೇ ವಿರೋಧ ಪಕ್ಷದ ನಾಯಕರು, ಹಸಿಮಾಂಸವನ್ನು ಕಂಡು ಧಾವಿಸಿದ ರಣಹದ್ದುಗಳಂತೆ ಕೇಕೆ ಹಾಕ ತೊಡಗಿದವು. ‘ಇದು ಮುಸ್ಲಿಮರ ತುಷ್ಟೀಕರಣ’ ಒಂದು ನಾಯಕ ಹೇಳಿಕೆ ನೀಡಿದರೆ ‘ಅಲ್ಪಸಂಖ್ಯಾತರೆಂದರೆ ಮುಸ್ಲಿಮರು ಮಾತ್ರವೆ?’ ಎಂದು ಒಬ್ಬ ಇನ್ನೊಬ್ಬರು ಕೇಳಿದರು. ಸರಕಾರದ ಖಜಾನೆಯನ್ನು ಮುಸ್ಲಿಮರ ಅಭಿವೃದ್ಧಿಗಾಗಿ ತೆರೆದಿಡಲಾಗುತ್ತಿದೆ ಎನ್ನುವ ರೀತಿಯಲ್ಲಿ ಅವರು ಗದ್ದಲ ಎಬ್ಬಿಸುತ್ತಿದ್ದಾರೆ. ಸರಕಾರವಂತೂ ಅದೇನೋ ತಪ್ಪು ಮಾಡಿದವನಂತೆ ‘‘ಅಂತಹ ಯಾವ ಉದ್ದೇಶವೂ ಸರಕಾರದ ಬಳಿಯಿಲ್ಲ’’ ಎಂದು ತನ್ನನ್ನು ತಾನು ನಿರಪರಾಧಿ ಎಂದು ಘೋಷಿಸಿಕೊಳ್ಳುತ್ತದೆ. ಮುಖ್ಯವಾಗಿ, ಸರಕಾರಿ ಕಾಮಗಾರಿ ಗುತ್ತಿಗೆ ಸಂಬಂಧಿಸಿದಂತೆ ಸರಕಾರ ಬಳಿ ಯಾವುದೇ ತಿದ್ದು ಪಡಿ ಮಸೂದೆ ಸಿದ್ಧವಾಗಿಲ್ಲ. ಸಂಪುಟದಲ್ಲಿ ಪ್ರಸ್ತಾವವಾಗುವುದಂತೂ ದೂರದ ಮಾತು. ಆದರೆ ಮಾಧ್ಯಮಗಳು ಮೀಸಲಾತಿ ಆಧಾರದಲ್ಲಿ ಮುಸ್ಲಿಮರಿಗೆ ಕಾಮಗಾರಿ ಗುತ್ತಿಗೆಗಳನ್ನು ಹಂಚಿಯೂ ಆಗಿ ಬಿಟ್ಟಿತ್ತು. ತಾವು ತಿಂದ ಬೆಣ್ಣೆಯನ್ನು ಮುಸ್ಲಿಮರ ಮುಖಕ್ಕೆ ಹಚ್ಚಿ, ‘‘ನೋಡಿ ಹೇಗೆ ಎಲ್ಲ ಸವಲತ್ತನ್ನು ಮುಸ್ಲಿಮರು ಮೆದ್ದಿದ್ದಾರೆ’’ ಎಂದು ಬಿಜೆಪಿ ಮೊಸಳೆ ಕಣ್ಣೀರು ಸುರಿಸತೊಡಗಿತ್ತು. ಕನಿಷ್ಠ ಆಳುವ ಕಾಂಗ್ರೆಸ್ ಸರಕಾರಕ್ಕಾದರೂ ಒಂದಿಷ್ಟು ವಿವೇಕವಿದ್ದರೆ ‘‘ಮುಸ್ಲಿಮರ ಅಭಿವೃದ್ಧಿಯೂ ನಾಡಿನ ಅಭಿವೃದ್ಧಿಯ ಭಾಗವಾಗಿದೆ. ಅದರ ಬಗ್ಗೆ ಪರಿಶೀಲಿಸುತ್ತೇವೆ’’ ಎಂದು ಸ್ಪಷ್ಟೀಕರಣ ನೀಡಬಹುದಿತ್ತು. ಆದರೆ ಅಂತಹ ಮಸೂದೆ ಸಿದ್ಧಗೊಳ್ಳುವ ಮೊದಲೇ ‘‘ಅಂತಹ ಯಾವುದೇ ಉದ್ದೇಶ ಸರಕಾರದ ಬಳಿಯಿಲ್ಲ’’ ಎಂದು ಕೈತೊಳೆದುಕೊಳ್ಳುವುದು ಏನನ್ನು ಸೂಚಿಸುತ್ತದೆ? ಧರ್ಮಾಧಾರಿತ ಮೀಸಲಾತಿಯ ಮೂಲಕ ಸರಕಾರಿ ಕಾಮಗಾರಿ ಗುತ್ತಿಗೆಯನ್ನು ನೀಡಬಾರದು ಎನ್ನುವುದು ನಿಜವೇ ಆಗಿದ್ದರೂ, ಈ ನಾಡಿನಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ಹಂಚಿರುವುದು ಧರ್ಮಾಧಾರಿತವಾಗಿ ಅಲ್ಲ. ಅರಿವೂ ಸರಕಾರಕ್ಕಿರಬೇಕು. ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಆಧಾರದಲ್ಲಿ ಅವರನ್ನು ಮೇಲೆತ್ತುವ ಪ್ರಯತ್ನವನ್ನು ಸರಕಾರ ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಅವರ ಅಭಿವೃದ್ಧಿಗೆ ಸಂವಿಧಾನ ಬದ್ಧವಾಗಿ ಕ್ರಮ ತೆಗೆದುಕೊಳ್ಳುವುದಕ್ಕೆ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಯಾವ ಕೀಳರಿಮೆಯೂ ಇರಬಾರದು.

2023ರಲ್ಲಿ ಬೊಮ್ಮಾಯಿ ಸರಕಾರ ಮುಸ್ಲಿಮರಿಗೆ ನೀಡುತ್ತಿದ್ದ ಶೇ. 4 ಒಬಿಸಿ ಮೀಸಲಾತಿಯನ್ನು ರದ್ದು ಪಡಿಸಿ, ಮುಸ್ಲಿಮರನ್ನು ಏಕಾಏಕಿ ಯಾವ ಆರ್ಥಿಕ, ಸಾಮಾಜಿಕ ಮಾನದಂಡವಿಲ್ಲದೆಯೇ ಸಾಮಾನ್ಯ ವರ್ಗಕ್ಕೆ ಸೇರಿಸಿತು. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಆಕ್ಷೇಪಿಸಿ ಅಂದಿನ ಬಿಜೆಪಿ ಸರಕಾರ ಈ ನಿರ್ಧಾರಕ್ಕೆ ಬಂದಿತ್ತು. ಆದರೆ ಮುಸ್ಲಿಮರಿಗೆ ಈ ಮೀಸಲಾತಿಯನ್ನು ನೀಡಿರುವುದು ಅವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವುದನ್ನು ಆಧರಿಸಿ. ಒಂದು ವೇಳೆ ಮೀಸಲಾತಿಯನ್ನು ರದ್ದುಗೊಳಿಸಬೇಕಾದರೂ, ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ ನಡೆಸಿ ಅದರ ಆಧಾರದಲ್ಲಿ ರದ್ದುಗೊಳಿಸಬೇಕು. ವಿಪರ್ಯಾಸವೆಂದರೆ, ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಕ್ರಿಶ್ಚಿಯನ್, ಬೌದ್ಧ, ಜೈನ ಸಮುದಾಯಕ್ಕೆ ಈ ವರ್ಗದಲ್ಲಿ ಮೀಸಲಾತಿಯನ್ನು ಮುಂದುವರಿಸಿದೆ. ಮುಂದೆ ಸುಪ್ರೀಂಕೋರ್ಟ್‌ನಲ್ಲಿ ಯಥಾ ಸ್ಥಿತಿ ಕಾಪಾಡುವ ಆದೇಶ ಹೊರ ಬಿದ್ದುದರಿಂದ ಬಿಜೆಪಿ ಸರಕಾರಕ್ಕೆ ಹಿನ್ನಡೆಯಾಯಿತು. ನ್ಯಾಯವಾಗಿ ತನಗೆ ಸಿಗಬೇಕಾಗಿರುವ ಶೇ. 4 ಮೀಸಲಾತಿಯನ್ನೇ ಶೋಷಿತ ಮುಸ್ಲಿಮ್ ಸಮುದಾಯ ತಮ್ಮದಾಗಿಸಿಕೊಳ್ಳಲು ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸುವಂತಹ ಸ್ಥಿತಿಯಿದೆ. ಹೀಗಿರುವಾಗ ತುಷ್ಟೀಕರಣದ ಮಾತು ಎಲ್ಲಿ ಬಂತು?

‘ಬೆೇಟಿ ಬಚಾವೋ-ಬೆೇಟಿ ಪಢಾವೋ’ ಕೇಂದ್ರ ಸರಕಾರದ ಘೋಷಣೆಯಾಗಿದೆ ಮಾತ್ರವಲ್ಲ, ಈ ಯೋಜನೆಗಾಗಿ ಈಗಾಗಲೇ ಕೋಟ್ಯಂತರ ಹಣವನ್ನು ಸುರಿಯುತ್ತಾ ಬಂದಿದೆ. ಮುಸ್ಲಿಮ್ ಹೆಣ್ಣು ಮಕ್ಕಳು ಓದಬೇಕು, ಮುಖ್ಯವಾಹಿನಿಗೆ ಬರಬೇಕು ಎನ್ನುವುದು ಸರಕಾರದ ಮಹದಾಸೆಯೂ ಆಗಿದೆ. ಆದರೆ ಬಿಜೆಪಿಯ ಅವಧಿಯಲ್ಲಿ ‘ಹಿಜಾಬ್’ ನೆಪ ಮುಂದಿಟ್ಟು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರ ಹಾಕಲಾಯಿತು. ರಾಜ್ಯ ಸರಕಾರದ ನಿರ್ಧಾರದಿಂದ ನೂರಾರು ವಿದ್ಯಾರ್ಥಿನಿಯರು ಶಾಲೆ ತೊರೆಯುವಂತಾಯಿತು. ಕನಿಷ್ಠ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಲಾದರೂ ಈ ಆದೇಶದಿಂದ ವಿದ್ಯಾರ್ಥಿನಿಯರಿಗೆ ಮುಕ್ತಿ ಸಿಗುತ್ತದೆ, ಮುಕ್ತವಾಗಿ ಶಾಲೆಗೆ ತೆರಳುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಹಿಜಾಬ್ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಈಗಲೂ ಸರಕಾರ ಹಿಂಜರಿಯುತ್ತಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ ಶಿಪ್‌ಗಳು, ಆರ್ಥಿಕ ನೆರವುಗಳನ್ನು ಹಂತ ಹಂತವಾಗಿ ಕಿತ್ತುಕೊಳ್ಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಕ್ಫ್ ಹೆಸರಿನಲ್ಲಿ ಕಾನೂನು ಜಾರಿಗೆ ತಂದು ಮುಸ್ಲಿಮರ ಧಾರ್ಮಿಕ ಸ್ಥಳಗಳ ಮೇಲೆ ಸರಕಾರ ಹಸ್ತಕ್ಷೇಪ ನಡೆಸಲು ಮುಂದಾಗಿದೆ. ಇವೆಲ್ಲ ಸಾಕಾಗುವುದಿಲ್ಲ ಎಂದು, ಇದೀಗ ಕನ್ನಡಿಯ ಗಂಟುಗಳನ್ನು ತೋರಿಸಿ ಅಲ್ಪಸಂಖ್ಯಾತರನ್ನು ಯಾಮಾರಿಸುವ ಕೆಲಸ ನಡೆಯುತ್ತಿದೆ.

ತೆಲಂಗಾಣದಲ್ಲಿ ಇತ್ತೀಚೆಗೆ ಅಲ್ಲಿನ ಸರಕಾರ ರಮಝಾನ್ ಉಪವಾಸದ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಒಂದು ಗಂಟೆ ಕಡಿಮೆ ಕೆಲಸದ ಉಡುಗೊರೆಯನ್ನು ನೀಡಿತು. ಇದೂ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಯಿತು. ಆದರೆ ಈ ಒಂದು ಗಂಟೆ ಕಡಿಮೆ ಕೆಲಸ ಮುಸ್ಲಿಮರ ಅತ್ಯಗತ್ಯ ಬೇಡಿಕೆಯೇನೂ ಆಗಿರಲಿಲ್ಲ. ಇದರಿಂದ ಮುಸ್ಲಿಮರ ಸಾಮಾಜಿಕ, ಆರ್ಥಿಕ ಬದುಕಿನ ಮೇಲೆ ವಿಶೇಷ ಪ್ರಯೋಜನವೇನೂ ಆಗುವುದಿಲ್ಲ. ಇದರ ಬದಲಿಗೆ ತೆಲಂಗಾಣ ಸರಕಾರದಲ್ಲಿ ಮುಸ್ಲಿಮರ ಪ್ರಾತಿನಿಧ್ಯವನ್ನು ಹೆಚ್ಚಿಸಿದ್ದರೆ ಅದರಿಂದ ಅಲ್ಲಿನ ಮುಸ್ಲಿಮರಿಗೆ ಬಹಳಷ್ಟು ಲಾಭವಾಗುತ್ತಿತ್ತು. ಮುಸ್ಲಿಮರಿಗೆ ಒಂದು ಗಂಟೆ ಕಡಿಮೆ ಕೆಲಸ ಉಳಿದ ಧರ್ಮೀಯರಲ್ಲಿ ಅನಗತ್ಯ ಅಸೂಯೆಯನ್ನು, ಅಸಹನೆಯನ್ನು ಬಿತ್ತುವ ಸಾಧ್ಯತೆಗಳಿವೆ. ನಾಳೆ ಬಿಜೆಪಿ ಮತ್ತು ಸಂಘಪರಿವಾರ ಇದನ್ನೇ ಮುಂದಿಟ್ಟುಕೊಂಡು ಗದ್ದಲ ಎಬ್ಬಿಸಿ ಆ ಕೊಡುಗೆಯನ್ನು ಹಿಂದಕ್ಕೆ ತೆಗೆದುಕೊಂಡು ಅದನ್ನೇ ತಮ್ಮ ಸಾಧನೆಯಾಗಿ ಬಿಂಬಿಸುವ ಸಾಧ್ಯತೆಗಳಿವೆ. ಅಲ್ಪಸಂಖ್ಯಾತರನ್ನು ಹಿಂದೂಗಳ ಮೇಲೆ ಎತ್ತಿಕಟ್ಟಲು, ಸಮಾಜವನ್ನು ವಿಭಜಿಸಲು ಬಳಸುವ ಸಾಧ್ಯತೆಗಳೂ ಇವೆ. ಇಂದು ಈ ದೇಶದಲ್ಲಿ ಮುಸ್ಲಿಮರು ಎನ್ನುವ ಕಾರಣಕ್ಕಾಗಿ ಸರಕಾರದಿಂದ ಯಾವುದೇ ಅನುಕಂಪವನ್ನು ಅವರು ಸರಕಾರದಿಂದ ನಿರೀಕ್ಷಿಸುತ್ತಿಲ್ಲ. ಸಂವಿಧಾನ ತನಗೆ ನೀಡಿರುವ ಹಕ್ಕುಗಳನ್ನಷ್ಟೇ ಅವರು ಅಪೇಕ್ಷಿಸುತ್ತಿದ್ದಾರೆ. ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ಗುರುತಿಸಿ ಅವರನ್ನು ಅಭಿವೃದ್ಧಿಯ ದಿಕ್ಕಿಗೆ ಮುನ್ನಡೆಸುವುದು ತನ್ನ ಜವಾಬ್ದಾರಿ ಎನ್ನುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿ. ಅವರಿಗೆ ಅರ್ಹವಾಗಿ, ನ್ಯಾಯವಾಗಿ ಸಿಗಬೇಕಾಗಿರುವ ಸವಲತ್ತುಗಳನ್ನಷ್ಟೇ ನೀಡಿದರೆ ಸಾಕು. ಕನ್ನಡಿಯ ಗಂಟು ತೋರಿಸಿ ಅವರನ್ನು ವಂಚಿಸುವುದನ್ನು ಇನ್ನಾದರೂ ನಿಲ್ಲಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News