ಮಾಲಿನ್ಯ ನಿಯಂತ್ರಣ ಮಂಡಳಿಯೇ ರಾಜಕೀಯವಾಗಿ ಮಲಿನಗೊಂಡರೆ?

PC: x.com/abpmajhatv
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕುಂಭಮೇಳದ ಸಂದರ್ಭದಲ್ಲಿ ಗಂಗೆಯಲ್ಲಿ ಕೊಚ್ಚಿ ಹೋದ ತನ್ನ ಮಾನ ಮತ್ತು ಮರ್ಯಾದೆಯನ್ನು ಹೇಗಾದರೂ ಮತ್ತೆ ಗಳಿಸುವ ಪ್ರಯತ್ನದಲ್ಲಿ ಉತ್ತರ ಪ್ರದೇಶ ಸರಕಾರ ಇನ್ನಷ್ಟು ಮಲಿನಗೊಳ್ಳುತ್ತಿದೆ. ಗಂಗಾನದಿಯ ನೀರು ಕುಡಿಯುವುದಕ್ಕೆ ಮಾತ್ರವಲ್ಲ, ಸ್ನಾನಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ಫೆಬ್ರವರಿ ಮೊದಲ ವಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿತ್ತು. ಈ ವರದಿಯನ್ನು ಗಂಭೀರವಾಗಿ ತೆಗೆದುಕೊಂಡ ಹಸಿರು ಪೀಠವು, ಉತ್ತರ ಪ್ರದೇಶ ಸರಕಾರವನ್ನು ಕೂಡ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಗಂಗಾನದಿಯಲ್ಲಿ ಮಲದ ಅಂಶ ತೀವ್ರವಾಗಿರುವುದನ್ನು ವರದಿ ಹೇಳಿದ್ದು, ಇದು ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವ ಸಾಧ್ಯತೆಗಳಿತ್ತು. ಆದರೆ ಸರಕಾರ ಇದನ್ನು ಮುಚ್ಚಿಟ್ಟು, ಅಲ್ಲಿ ಸೇರಿದ್ದ ಕೋಟ್ಯಂತರ ಭಕ್ತರನ್ನು ವಂಚಿಸಿತ್ತು. ಗಂಗಾನದಿಯಲ್ಲಿ ಸ್ನಾನ ಮಾಡುವುದರ ಬಗ್ಗೆ ಜನರನ್ನು ಎಚ್ಚರಿಸಬೇಕಾಗಿದ್ದ ಸರಕಾರವೇ ‘ಗಂಗಾನದಿ ಶುದ್ಧವಾಗಿದೆ’ ಎಂದು ಬಹಿರಂಗ ಹೇಳಿಕೆಯನ್ನು ನೀಡಿ ಭಕ್ತರನ್ನು ಸ್ನಾನಕ್ಕೆ ಪ್ರೋತ್ಸಾಹಿಸಿತ್ತು. ಸರಕಾರದ ಬೇಜವಾಬ್ದಾರಿಯನ್ನು ಹಸಿರು ನ್ಯಾಯಾಧಿಕರಣ ತೀವ್ರವಾಗಿ ಟೀಕಿಸಿತ್ತು. ವಿಪರ್ಯಾಸವೆಂದರೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ವರದಿಯನ್ನು ಸರಕಾರ ಒಪ್ಪಿಕೊಳ್ಳಲಿಲ್ಲ ಮಾತ್ರವಲ್ಲ, ವರದಿ ನೀಡಿದ ಮಂಡಳಿಗೇ ನೇರ ಬೆದರಿಕೆಯನ್ನು ಒಡ್ಡಿತು. ‘‘ಕೆಲವರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಗಂಗಾ ನದಿಯ ನೀರು ಸ್ನಾನ ಮಾಡುವುದಕ್ಕೆ ಮಾತ್ರವಲ್ಲ, ಕುಡಿಯುವುದಕ್ಕೂ ಯೋಗ್ಯವಾಗಿದೆ’’ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿಕೆಯನ್ನೂ ನೀಡಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಗೆ ವ್ಯತಿರಿಕ್ತವಾದ ಮುಖ್ಯಮಂತ್ರಿ ಹೇಳಿಕೆಗೆ ಆಧಾರವೇನು ಎನ್ನುವುದನ್ನು ಮಾತ್ರ ಅವರು ಸ್ಪಷ್ಟಪಡಿಸಿರಲಿಲ್ಲ.
ನೀರಿನಲ್ಲಿ ಮಲದ ಪ್ರಮಾಣ ಅತ್ಯಧಿಕ ಇರುವುದು ಗೊತ್ತಿದ್ದೂ ಭಕ್ತರನ್ನು ಸ್ನಾನ ಮಾಡಲು ಪ್ರೋತ್ಸಾಹಿಸಿದ್ದಕ್ಕಾಗಿ ಹಸಿರು ನ್ಯಾಯಾಧಿಕರಣ ಉತ್ತರ ಪ್ರದೇಶ ಸರಕಾರಕ್ಕೆ ದಂಡವಿಧಿಸಬಹುದಿತ್ತು. ಅಷ್ಟೇ ಅಲ್ಲ, ಉತ್ತರ ಪ್ರದೇಶ ಸರಕಾರದ ಬೇಜವಾಬ್ದಾರಿಯಿಂದಾಗಿ ಗಂಗಾ ನದಿಯ ಮೇಲೆ ಮಹಾ ದೌರ್ಜನ್ಯವೇ ನಡೆದು ಹೋಯಿತು. ಇದರ ಶುಚೀಕರಣಕ್ಕಾಗಿ ಉತ್ತರ ಪ್ರದೇಶ ಸರಕಾರದಿಂದಲೇ ದಂಡ ವಸೂಲಿ ಮಾಡುವುದು ಅತ್ಯಗತ್ಯವಾಗಿತ್ತು. ಆದರೆ, ಇದೀಗ ಸರಕಾರ ಅದೇ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇನ್ನೊಂದು ವರದಿಯನ್ನು ಬಿಡುಗಡೆ ಮಾಡಿಸಿದೆ. ಫೆಬ್ರವರಿ 28 ಮತ್ತು ಮಾರ್ಚ್ 7ರಂದು ನ್ಯಾಯಾಧಿಕರಣದ ವೆಬ್ ಸೈಟ್‌ನಲ್ಲಿ ಹೊಸದಾಗಿ ಅಪ್‌ಲೋಡ್ ಮಾಡಲಾದ ವರದಿಯಲ್ಲಿ, ಕುಂಭಮೇಳದ ತ್ರಿವೇಣಿ ಸಂಗಮದ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು ಎಂದು ಹೇಳಲಾಗಿದೆ. ತಾನೇ ನೀಡಿದ ವರದಿಗೆ ವ್ಯತಿರಿಕ್ತವಾದ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವುದು ವಿಪರ್ಯಾಸವಾಗಿದೆ. ತನ್ನ ಹೊಸ ವರದಿಯನ್ನು ಸಮರ್ಥಿಸುವುದಕ್ಕಾಗಿ, ಜನವರಿ 12ರಿಂದ ವಾರದಲ್ಲಿ ಎರಡು ಬಾರಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗಿದೆ ಎಂದು ಅದು ಸ್ಪಷ್ಟೀಕರಣವನ್ನು ನೀಡಿದೆ. ಹಾಗಾದರೆ ಫೆಬ್ರವರಿ 17ರಂದು ಮೊದಲ ಬಾರಿ ನೀಡಿದ ವರದಿಯಲ್ಲಿ ಹೇಳಿರುವುದು ಸುಳ್ಳೆ? ಮುಖ್ಯಮಂತ್ರಿ ಆದಿತ್ಯನಾಥ್ ಅವರು ಆರೋಪಿಸಿದಂತೆ, ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತರುವುದಕ್ಕಾಗಿ ಆ ವರದಿಯನ್ನು ಮಾಲಿನ್ಯ ಮಂಡಳಿ ನೀಡಿತೆ? ಒಂದು ವೇಳೆ ಅಂದಿನ ವರದಿಯಲ್ಲಿ ಸತ್ಯವಿದೆ ಎಂದಾದರೆ, ಕೋಟ್ಯಂತರ ಜನರು ಸೇರಿದಾಗ ನೀರಿನ ಗುಣಮಟ್ಟ ಏಕಾಏಕಿ ಉತ್ತಮಗೊಂಡದ್ದು ಹೇಗೆ?
ಮಾಲಿನ್ಯ ನಿಯಂತ್ರಣ ಮಂಡಳಿ ಹೊಸ ವರದಿಯಲ್ಲಿ ಪ್ರಯಾಗ ರಾಜ್‌ನ ಗಂಗೆಯ ನೀರಿಗೆ ಕ್ಲೀನ್‌ಚಿಟ್ ನೀಡಿರುವ ಹೊತ್ತಿಗೇ ಅತ್ತ 2024-25ರ ಬಿಹಾರ ಆರ್ಥಿಕ ಸರ್ವೇಕ್ಷಣ ವರದಿಯು ಭಾರೀ ಬ್ಯಾಕ್ಟೀರಿಯಾಗಳಿಂದಾಗಿ ಗಂಗಾ ನದಿಯ ನೀರು ಸ್ನಾನಕ್ಕೆ ಕೂಡ ಯೋಗ್ಯವಲ್ಲ ಎಂದು ಹೇಳಿದೆ. ಬಿಹಾರದಲ್ಲಿ ಹರಿಯುವ ಗಂಗಾನದಿಯಲ್ಲೂ ಮಲದ ಅಂಶಗಳು ಭಾರೀ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಅಲ್ಲಿಯೂ ಗಂಗಾನದಿ ಸ್ನಾನಕ್ಕೆ ಅರ್ಹವಲ್ಲ ಎನ್ನುವ ವರದಿ ಹೊರ ಬಿದ್ದಿದೆ. ನಗರಗಳಿಂದ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದು ಗಂಗೆಯನ್ನು ಸೇರುತ್ತಿರುವುದೇ ಈ ಮಾಲಿನ್ಯಕ್ಕೆ ಕಾರಣ ಎಂದು ಬಿಹಾರದ ವರದಿ ಹೇಳುತ್ತಿದೆ. ಹಾಗಾದರೆ, ಬಿಹಾರದ ಆರ್ಥಿಕ ಸರ್ವೇಕ್ಷಣಾ ಇಲಾಖೆಯ ವರದಿಯ ಕುರಿತಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಏನು ಹೇಳುತ್ತದೆ? ಸರಕಾರವೊಂದು, ತನ್ನ ಭಾವನಾತ್ಮಕ ರಾಜಕೀಯಕ್ಕಾಗಿ ನದಿ ಮತ್ತು ಪರಿಸರದ ವಿಷಯದಲ್ಲಿ ಹಸ್ತಕ್ಷೇಪ ನಡೆಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಈ ಮೂಲಕ ಉದ್ಭವವಾಗಿದೆ. ಗಂಗಾನದಿಯ ಶುಚೀಕರಣಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ ಪ್ರತ್ಯೇಕ ಯೋಜನೆಯನ್ನೇ ಘೋಷಿಸಲಾಗಿತ್ತು. ನಮಾಮಿ ಗಂಗೆಯ ಮೂಲಕ ಸುಮಾರು 30,000 ಕೋಟಿ ರೂಪಾಯಿಯನ್ನು ಗಂಗಾನದಿ ಶುಚೀಕರಣಕ್ಕಾಗಿ ಸುರಿಯಲಾಗಿತ್ತು. ಇವೆಲ್ಲವೂ ಈ ದೇಶದ ಜನರ ತೆರಿಗೆಯ ಹಣ. ಇಷ್ಟಾದರೂ ಗಂಗಾ ನದಿ ಕುಡಿಯುವುದಕ್ಕಾಗಲಿ, ಸ್ನಾನಕ್ಕಾಗಲಿ ಯೋಗ್ಯವಲ್ಲ ಎನ್ನುವುದು ಸರಕಾರದ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ. ಇದೀಗ ತನ್ನ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಲ್ಲೇ ಸರಕಾರ ಹಸ್ತಕ್ಷೇಪ ನಡೆಸಲು ಮುಂದಾಗಿರುವುದು ಆತಂಕಕಾರಿಯಾಗಿದೆ. ನಿಜಕ್ಕೂ ಗಂಗಾನದಿಯ ಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ಈ ದೇಶದ ಜನಸಾಮಾನ್ಯರಿಗಿದೆ. ಆದುದರಿಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಗಾನದಿಯ ಮಾಲಿನ್ಯ ಕುರಿತಂತೆ ಇರುವ ಗೊಂದಲಗಳ ಬಗ್ಗೆ ಸ್ಪಷ್ಟೀಕರಣ ನೀಡುವುದು ಅತ್ಯಗತ್ಯವಾಗಿದೆ.
ಇದೇ ಸಂದರ್ಭದಲ್ಲಿ ಕುಂಭಮೇಳದಲ್ಲಿ ನಡೆದಿರುವ ಕಾಲ್ತುಳಿತದ ಬಗ್ಗೆಯೂ ಅಲ್ಲಿನ ಸರಕಾರ ಪೂರ್ತಿ ಸತ್ಯವನ್ನು ಬಹಿರಂಗಪಡಿಸಿಲ್ಲ. ‘ಘಟನೆಯ ಗಂಭೀರತೆ’ಯನ್ನು ಮುಚ್ಚಿಟ್ಟಿರುವುದು ಹೌದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಒಪ್ಪಿಕೊಂಡಿದ್ದಾರೆ. ‘‘ಜನರು ಆತಂಕ, ಗಾಬರಿಗೊಳ್ಳುವುದು ಬೇಡವೆಂದು ಗಂಭೀರತೆಯನ್ನು ಮುಚ್ಚಿಡಲಾಗಿತ್ತು’’ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆದರೆ ಇದೀಗ ಕುಂಭಮೇಳ ಮುಗಿದಿದೆ. ಇನ್ನೂ ಗಂಭೀರತೆಯನ್ನು ಮುಚ್ಚಿಡುವುದು ಎಷ್ಟು ಸರಿ?. ಈಗಲಾದರೂ ಸತ್ತವರ ಸಂಖ್ಯೆ ಎಷ್ಟು ಎನ್ನುವುದನ್ನು ಸರಕಾರ ಅಧಿಕೃತವಾಗಿ ಬಹಿರಂಗಪಡಿಸ ಬೇಕಾಗಿದೆ. ಸರಕಾರ ಕಾಲ್ತುಳಿತದಲ್ಲಿ ಸತ್ತವರ ಸಂಖ್ಯೆಯನ್ನು 30 ಎಂದು ಹೇಳಿದರೆ, ವಿರೋಧ ಪಕ್ಷಗಳ ನಾಯಕರು ನೂರಾರು ಜನರು ಸತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದೀಗ ನೋಡಿದರೆ, ಕುಂಭಮೇಳದಲ್ಲಿ 869 ಮಂದಿ ನಾಪತ್ತೆಯಾಗಿದ್ದಾರೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ಹೀಗೆ ನಾಪತ್ತೆಯಾದವರಲ್ಲಿ ಮಹಿಳೆಯರು ಮಕ್ಕಳು ಕೂಡ ಸೇರಿದ್ದಾರೆ. ಇವರೆಲ್ಲ ಏನಾದರು? ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ಕಾಲ್ತುಳಿತದ ಬಗ್ಗೆ ಪ್ರತಿಕ್ರಿಯಿಸುತ್ತಾ ‘‘ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಸತ್ತವರ ಸಂಖ್ಯೆಯನ್ನು ಮುಚ್ಚಿಡುವುದಕ್ಕಾಗಿ ನೂರಾರು ಮೃತದೇಹಗಳನ್ನು ಗಂಗಾನದಿಗೆ ಎಸೆಯಲಾಗಿದೆ’’ ಎಂದು ಆರೋಪಿಸಿದ್ದರು. ಇದೀಗ ನಾಪತ್ತೆಯಾಗಿರುವವರ ಸಂಖ್ಯೆಗಳು ಬಹಿರಂಗವಾಗುತ್ತಿರುವಂತೆಯೇ, ಈ ಆರೋಪ ನಿಜವಿರಬಹುದೇ ಎಂದು ಜನರು ಶಂಕಿಸುವಂತಾಗಿದೆ. ಗಂಗಾನದಿಯ ಮಾಲಿನ್ಯ ಮತ್ತು ಕಾಲ್ತುಳಿತ ದುರಂತಗಳೆರಡೂ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವುದಕ್ಕೆ ಅರ್ಹವಾದ ಪ್ರಕರಣಗಳಾಗಿವೆ.